ಮೌನ ಮುರಿದ ಕುಮಾರಸ್ವಾಮಿ – ಮುಂದಿನ ಚುನಾವಣೆಗಾಗಿ ಅಸ್ತಿತ್ವದ ಹುಡುಕಾಟಕ್ಕಿಳಿದ ಮಾಜಿ ಸಿಎಂ

– ಶಶಿಧರ ಹೆಗಡೆ.

ಮೌನಕ್ಕೆ ಅಪೂರ್ವವಾದ ಶಕ್ತಿಯಿದೆ. ಮೌನ ವ್ರತಧಾರಣೆ ಮಾಡಿದವ ದಿವ್ಯಾನುಭೂತಿಗೆ ಒಳಗಾಗುತ್ತಾನೆ. ಮೌನ ಹೃದಯದ ಭಾಷೆ. ಅದು ಮರ್ಕಟ ಮನಸ್ಸನ್ನು ನಿಯಂತ್ರಿಸುತ್ತದೆ ಎನ್ನುವ ಹಾಗೆ ವ್ಯಾಖ್ಯಾನಗಳಿವೆ. ಮೌನವಾಗಿದ್ದು ಆತ್ಮಾವಲೋಕನ ಮಾಡಿಕೊಂಡವರ ಎದುರು ಹೊಸ ದಾರಿಗಳು ತೆರೆದುಕೊಳ್ಳುತ್ತವೆ. ಹಿಂದಿನ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ದೊರಕುತ್ತದೆ. ಮೌನದ ಗವಿಯಿಂದ ಹೊರಬಂದು ಆಡುವ ಮಾತುಗಳಿಗೂ ಅಷ್ಟೇ ಮಹತ್ವವಿರುತ್ತದೆ. ಚತುರರಾದವರು ಮೌನ ಮತ್ತು ಮೌನೋತ್ತರ ಸಂದರ್ಭವನ್ನು ಭವಿಷ್ಯದ ದಾರಿ ಸುಗಮಗೊಳಿಸಲು ಬಳಸುತ್ತಾರೆ. ಅದರಲ್ಲೂ ರಾಜಕಾರಣಿಗಳಿಗೆ ತಂತ್ರಗಾರಿಕೆಯೇ ಜೀವದ್ರವ್ಯ. ರಾಜಕೀಯದ ಜಂಜಾಟದಲ್ಲಿ ಮುಳುಗೆದ್ದು ಸುಸ್ತು ಹೊಡೆದವರು ಪಂಚಕರ್ಮ ಚಿಕಿತ್ಸೆಗೆ ಒಳಗಾದವರಂತೆ ಫ್ರೆಶ್‌ ಆಗುತ್ತಾರೆ. ಮಂತ್ರಾಲೋಚನೆಯಲ್ಲಿರುವಾಗಲೇ ಅಸ್ತ್ರ-ಶಸ್ತ್ರ ವಿದ್ಯೆಗಳ ಪುನರ್ಮನನ ಮಾಡಿಕೊಂಡಿರುತ್ತಾರೆ. ಅಂಥವರು ಮುಖ್ಯವಾಹಿನಿಗೆ ಬಂದು ನೀಡುವ ಹೇಳಿಕೆ ಹಲವು ಅರ್ಥ ಹೊಮ್ಮಿಸುತ್ತದೆ.

ಎಚ್‌ಡಿಕೆ ಕುತೂಹಲದ ನಡೆ
ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಪತನದ ಬಳಿಕ ನೇಪಥ್ಯದಲ್ಲಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೀಗ ಜನತೆಯ ಮುಂದೆ ಮನದಾಳದ ಮಾತುಗಳನ್ನು ನಿವೇದಿಸಿಕೊಂಡಿದ್ದಾರೆ. ಒಂದೆಡೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರಕ್ಕೆ ಒಂದು ವರ್ಷ ತುಂಬಿದೆ. ಮತ್ತೊಂದೆಡೆ ಕುಮಾರಸ್ವಾಮಿಯವರು ಆ ಪಟ್ಟದಿಂದ ಇಳಿದೂ ವರ್ಷವಾಗಿದೆ. ಅಧಿಕಾರದ ನೆಲೆಯಲ್ಲಿ ನೋಡಿದಾಗ ಇಲ್ಲಿ ಒಬ್ಬರಿಗೆ ಸಿಹಿಯಾದರೆ ಮತ್ತೊಬ್ಬರಿಗೆ ಕಹಿ. ಈ ಹಂತದಲ್ಲಿ ತಮ್ಮನ್ನು ನೋವು ನುಂಗಿದ ವಿಷಕಂಠನಿಗೆ ಹೋಲಿಸಿಕೊಂಡಿರುವ ಕುಮಾರಸ್ವಾಮಿ, ಸಮ್ಮಿಶ್ರ ಸರಕಾರದ ದಿನಗಳ ಒಳಗುದಿಯನ್ನು ಸವಿಸ್ತಾರವಾಗಿ ತೋಡಿಕೊಂಡಿದ್ದಾರೆ. ಅದನ್ನು ಒಂದೇ ವಾಕ್ಯದಲ್ಲಿ ವ್ಯಾಖ್ಯಾನಿಸಿದರೆ, ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ ಸರಕಾರ ರಚಿಸಿದ್ದ ಕುಮಾರಸ್ವಾಮಿ ಅವರಿಗೆ ಒಂದು ದಿನವೂ ನೆಮ್ಮದಿ ಇರಲಿಲ್ಲ.
ತಮ್ಮ ಪರಿಸ್ಥಿತಿ ಗುಮಾಸ್ತನಂತಾಗಿತ್ತು ಎಂದು ಅಧಿಕಾರದಲ್ಲಿದ್ದಾಗಲೂ ಹೇಳಿಕೊಂಡಿದ್ದರು. ವರ್ಷದ ಬಳಿಕವೂ ಅದನ್ನು ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್‌ ಋುಣದಲ್ಲಿ ಬಿದ್ದ ಜೆಡಿಎಸ್‌ ತನ್ನ ಅಸ್ತಿತ್ವಕ್ಕಾಗಿ ಎಲ್ಲ ಅಪಮಾನವನ್ನೂ ನುಂಗಿಕೊಂಡಿತ್ತು. ಬಹಳ ಮುಖ್ಯವಾಗಿ ಕಾಂಗ್ರೆಸ್‌ ವರಿಷ್ಠರು ಮುಖ್ಯಮಂತ್ರಿ ಪದವಿಯನ್ನು ಬಂಗಾರದ ಹರಿವಾಣದಲ್ಲಿಟ್ಟು ಜೆಡಿಎಸ್‌ಗೆ ದಾನ ಮಾಡಿದ್ದರು. ಅದಕ್ಕಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರಿಗೆ ಪರಮಾಪ್ತರಾದ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ದಿಲ್ಲಿಯಿಂದ ಧಾವಿಸಿ ಬಂದಿದ್ದರು. ಕಾಂಗ್ರೆಸ್‌ ಹೈಕಮಾಂಡ್‌ ಭರವಸೆ ನೀಡಿದ್ದ ರೀತಿಯಲ್ಲೆ ಆಡಳಿತ ನಡೆಸಲು ಸಾಧ್ಯವಾಗಿದ್ದರೆ ಜೆಡಿಎಸ್‌ಗೆ ಸಮಸ್ಯೆಯೇ ಇರುತ್ತಿರಲಿಲ್ಲ. ಬಹುಶಃ ಕುಮಾರಸ್ವಾಮಿಯವರೂ ಸಲೀಸಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದರು. ಜೆಡಿಎಸ್‌ ಕಾರ್ಯಕರ್ತರೂ ಸ್ವರ್ಗಕ್ಕೆ ಮೂರೇ ಗೇಣು ಎಂದುಕೊಂಡು ಕುಣಿದಾಡಬಹುದಿತ್ತು. ಆದರೆ, ದೋಸ್ತಿ ಸರಕಾರದಲ್ಲಿ ಜೆಡಿಎಸ್‌ ಸುಪ್ರೀಂ ಆಗಿಬಿಟ್ಟರೆ ತಮ್ಮ ಅಸ್ತಿತ್ವವೇ ಅಲುಗಾಡುತ್ತದೆ ಎಂಬ ಅಸುರಕ್ಷತೆ ಭಾವ ಕಾಂಗ್ರೆಸಿಗರಿಗೆ ಕಾಡತೊಡಗಿತು. ಹಾಗಾಗಿ ಅವರು ಸರಕಾರವನ್ನು ಅಂಕೆಯಲ್ಲಿಟ್ಟುಕೊಳ್ಳಲು ಹಲವಾರು ವ್ಯೂಹ ರಚಿಸಿದರು. ವ್ಯೂಹ ಭೇದನ ಕಲೆಯನ್ನು ಕುಮಾರಸ್ವಾಮಿ ಅವರೂ ಪ್ರದರ್ಶಿಸಿದರು. ಅದು ಸಮ್ಮಿಶ್ರ ಸರಕಾರದ ಅಧಿಕಾರದ ಸರಹದ್ದಿನ ಹೊರಗಿರುವ ಪ್ರದೇಶ ಕಾಂಗ್ರೆಸ್‌ ಪ್ರಮುಖರನ್ನು ಕೆರಳಿಸಿತು. ಅಲ್ಲಿಗೆ ಕುಮಾರಸ್ವಾಮಿಯವರ ನೆಮ್ಮದಿ ಸಂಪೂರ್ಣ ಹಾಳಾದದ್ದಲ್ಲದೆ ಸರಕಾರದ ಅವಸ್ಥೆಯೂ ಧರೆಯಂಚಿನ ಮರದಂತಾಗಿ ಹೋಯಿತು. ಈ ಹಿನ್ನೆಲೆಯಲ್ಲಿ ‘ಮನದಾಳದ ಮಾತು’ಗಳ ಮೂಲಕ ಮೈತ್ರಿ ಸರಕಾರದ ಈ ಹೊಯ್ದಾಟಗಳ ಬಗ್ಗೆ ಕುಮಾರಸ್ವಾಮಿಯವರು ಹಂಚಿಕೊಂಡಿದ್ದಾರೆ. ಹೀಗೆ ಹೊರೆ ಇಳಿಸಿಕೊಂಡ ಅವರು ಹೊಸ ಲೆಕ್ಕಾಚಾರಕ್ಕೆ ಅಣಿಯಾದಂತಿದ್ದಾರೆ. ಜತೆಗೆ ರಾಜಕೀಯದಲ್ಲಿ ತಮ್ಮ ಕುಟುಂಬದ ಕುಡುವೈರಿ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಸುತ್ತಿನ ಜಿದ್ದಿನ ಹೋರಾಟ ನಡೆಸುವ ಮುನ್ಸೂಚನೆ ನೀಡಿದ್ದಾರೆ.

ಟಾರ್ಗೆಟ್‌ ಸಿದ್ದರಾಮಯ್ಯ!
ಮೈತ್ರಿ ಸರಕಾರ ಕೆಡವಲು ಕಾಂಗ್ರೆಸ್‌ ರಹಸ್ಯ ಕಾರ್ಯಾಚರಣೆ ನಡೆಸಿತು ಎನ್ನುವುದು ಎಚ್‌ಡಿಕೆ ನೇರ ಆರೋಪ. ಈ ವಿಷಯದಲ್ಲಿ ಅವರು ಯಾರತ್ತ ಬೆರಳು ತೋರುತ್ತಿದ್ದಾರೆ ಎನ್ನುವುದೂ ಸ್ಪಷ್ಟವಿದೆ. ಆರೋಪ ಕಾಂಗ್ರೆಸ್‌ ಮೇಲಾದರೂ ಗುರಿ ಸಿದ್ದರಾಮಯ್ಯ ಎನ್ನುವುದು ಸ್ಪಷ್ಟ. ಸಿದ್ದರಾಮಯ್ಯರನ್ನು ಎದುರು ಹಾಕಿಕೊಂಡರೆ ಜೆಡಿಎಸ್‌ ಅಸ್ತಿತ್ವಕ್ಕೆ ಮತ್ತೆ ರಹದಾರಿ ನಿರ್ಮಿಸಬಹುದೆಂದು ಕುಮಾರಸ್ವಾಮಿ ಯೋಚಿಸಿದಂತಿದೆ. ಲೋಕಸಭೆ ಚುನಾವಣೆಯಲ್ಲಿ ದೋಸ್ತಿಗಳ ದಯನೀಯ ಸೋಲು, ಅದರ ಬೆನ್ನಿಗೇ ಸರಕಾರ ಉರುಳಿ ಬಿದ್ದ ಬಳಿಕ ಕುಮಾರಸ್ವಾಮಿ ಒಂದು ಬಗೆಯ ಮೌನಕ್ಕೆ ಜಾರಿದ್ದರು. ಸಾಂದರ್ಭಿಕವಾಗಿ ಕಾಂಗ್ರೆಸ್‌- ಬಿಜೆಪಿ ನಾಯಕರ ನಡವಳಿಕೆಯನ್ನು ಪ್ರಶ್ನಿಸಿದ್ದಾರಾದರೂ ಗಂಭೀರ ನೆಲೆಯಲ್ಲಿ ಫೀಲ್ಡಿಗೆ ಇಳಿದಿರಲಿಲ್ಲ. ಇದೀಗ ತಮ್ಮ ಸರಕಾರ ಪತನವಾಗಿ ವರ್ಷವಾದ್ದರಿಂದ ನ್ಯಾಯ ಕೇಳಲು ಮುಂದಾಗಿದ್ದಾರೆ. ಈ ನ್ಯಾಯ ನಿರ್ಣಯ ಮಾಡುವವರು ಜನರು. ಅದಕ್ಕಾಗಿ ಎರಡೂವರೆ ವರ್ಷ ಕಾಯಬೇಕು. ಈ ಅವಧಿಯಲ್ಲಿ ಅನ್ಯಾಯವನ್ನು ಜನತಾ ನ್ಯಾಯಾಲಯದ ಮುಂದಿಟ್ಟು ವಾದಿಸುವುದು ಅವರ ವರಸೆಯಿದ್ದಂತಿದೆ. ಪ್ರತಿವಾದಿಯಾಗಲು ಸಿದ್ದರಾಮಯ್ಯರಿಗೆ ಪಂಥಾಹ್ವಾನ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಜತೆಗಿನ ವೈಷಮ್ಯ ಮುಂದುವರಿದರೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಪುನಃ ಜೆಡಿಎಸ್‌ ನೆಲೆ ಭದ್ರಪಡಿಸಬಹುದು ಎಂಬ ಲೆಕ್ಕಾಚಾರ ಎಚ್‌ಡಿಕೆ ಅವರದ್ದು. ರಾಜಕೀಯ ತಂತ್ರಗಾರಿಕೆ ಮತ್ತು ಜೆಡಿಎಸ್‌ ಅಸ್ತಿತ್ವದ ದೃಷ್ಟಿಯಿಂದ ಇದು ಸರಿಯಾದ ಮಾರ್ಗ ಎಂದು ಅವರಿಗೆ ಎನಿಸಿರಬಹುದು. ಒಕ್ಕಲಿಗರ ಬಾಹುಳ್ಯದ ಮೈಸೂರು ಪ್ರಾಂತ್ಯದಲ್ಲಿ ಸಿದ್ದರಾಮಯ್ಯರನ್ನು ಎದುರು ಹಾಕಿಕೊಂಡರೆ ಸ್ವಜಾತಿ ಬಾಂಧವರ ಸಹಾನುಭೂತಿ ಗಿಟ್ಟಿಸಬಹುದು. ಮೈತ್ರಿ ಸರಕಾರದ ಅವಧಿಯಲ್ಲಿ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್‌ ಜೀವದ ಗೆಳೆಯರಂತಿದ್ದರು. ಈಗ ಡಿ.ಕೆ.ಶಿವಕುಮಾರ ಕೆಪಿಸಿಸಿ ಅಧ್ಯಕ್ಷರು. ಆಷ್ಟಾದರೂ ಅವರ ವಿಷಯದಲ್ಲಿ ಮೃಧು ಧೋರಣೆ ತಳೆದರೆ ಉತ್ತಮ ಎಂಬ ಮುಂದಾಲೋಚನೆಯೂ ಜೆಡಿಎಸ್‌ನಾಗಿದೆ.

ಕಾಂಗ್ರೆಸ್‌ನೊಂದಿಗೆ ಭೇದೋಪಾಯ ತಂತ್ರ
ಜೆಡಿಎಸ್‌ಗೆ ರಾಜ್ಯದಲ್ಲಿ ಸ್ವತಂತ್ರವಾಗಿ ಸರಕಾರ ರಚಿಸುವ ಶಕ್ತಿಯಿಲ್ಲ. ಹಾಗಾಗಿ ಕಾಂಗ್ರೆಸ್‌ ಅಥವಾ ಬಿಜೆಪಿಯ ಅವಲಂಬನೆ ಅನಿವಾರ್ಯ. ದೇವೇಗೌಡರ ಸೆಕ್ಯೂಲರ್‌ ಚರಿಷ್ಮಾಕ್ಕೆ ಸಾಸಿವೆ ಕಾಳಿನ ಗಾತ್ರದಷ್ಟೂ ಚುಕ್ಕೆ ತಗುಲಬಾರದು ಎಂದಿದ್ದರೆ ಬಿಜೆಪಿಯಿಂದ ಅಂತರ ಕಾಯಲೇಬೇಕು. ಈ ಕಾರಣದಿಂದ ಕಾಂಗ್ರೆಸ್‌ ವರಿಷ್ಠರೊಂದಿಗೆ ಜೆಡಿಎಸ್‌ನ ಬಾಂಧವ್ಯ ಅವಿಚ್ಛಿನ್ನವಾಗಿ ಮುಂದುವರಿಯಲೂಬಹುದು. ಅದಕ್ಕಿಂತ ಮುಖ್ಯವಾಗಿ ಲೋಕಲ್‌ ರಾಜಕೀಯವನ್ನು ಸೆಟ್ಲ್‌ ಮಾಡಿಕೊಳ್ಳಬೇಕಾಗುತ್ತದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಒಂದು ಶಕ್ತಿ ಕೇಂದ್ರವಾಗಿದ್ದರೆ ಡಿ.ಕೆ.ಶಿವಕುಮಾರ್‌ ಮತ್ತೊಂದು. ಈ ಎರಡೂ ಧ್ರುವಗಳು ದೂರ ದೂರವೇ ಇರಲಿ ಎನ್ನುವುದು ಜೆಡಿಎಸ್‌ನ ಮನದಾಳದ ಹಾರೈಕೆಯಾಗಿದೆ. ಸಿದ್ದರಾಮಯ್ಯ ಅವರನ್ನು ಪಕ್ಕಕ್ಕೆ ಸರಿಸಿ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆಯಲ್ಲಿದ್ದರೆ ಯಾವತ್ತಾದರೂ ಉಪಯೋಗಕ್ಕೆ ಬರುತ್ತದೆ ಎಂದು ಖಂಡಿತ ಜೆಡಿಎಸ್‌ ನಿರೀಕ್ಷಿಸಿರುತ್ತದೆ. ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷ ರೇ ಆಗಿರುವಾಗ ಅವರ ವಿರುದ್ಧ ಮುಗಿಬೀಳುವುದರಿಂದ ಒಕ್ಕಲಿಗ ಸಮುದಾಯದ ನಡುವೆ ತಪ್ಪು ಸಂದೇಶ ಹೋಗುತ್ತದೆ. ಈ ದೃಷ್ಟಿಯಿಂದ ಶಿವಕುಮಾರ್‌ ವಿಷಯದಲ್ಲಿ ಸಹನೆಯ ತಂತ್ರ ಜೆಡಿಎಸ್‌ನದ್ದು. ಈ ನೆಲೆಯಲ್ಲಿ ಭೇದೋಪಾಯದ ಅಸ್ತ್ರ ಹಿಡಿದು ಕಾಂಗ್ರೆಸ್‌ನ ಒಳಜಗಳದ ಲಾಭ ಪಡೆಯಲು ಯೋಚಿಸಿದಂತಿದೆ.

ಬಿಜೆಪಿಯೂ ಅಪಥ್ಯವಲ್ಲ
ಯಾರೂ ಶಾಶ್ವತ ಸ್ನೇಹಿತರಲ್ಲ; ಶತ್ರುಗಳೂ ಅಲ್ಲ ಎನ್ನುವುದೇ ಜೆಡಿಎಸ್‌ನ ನೀತಿ. ಕಾಂಗ್ರೆಸ್‌, ಬಿಜೆಪಿ ಬಿಟ್ಟರೆ ಜೆಡಿಎಸ್‌ಗೆ ಅನ್ಯ ಆಯ್ಕೆಯಿಲ್ಲ. ಸಂದರ್ಭ ಬಂದರೆ ಒಂದನ್ನು ಆಂತುಕೊಳ್ಳಬಹುದು ಎಂಬ ಜೆಡಿಎಸ್‌ನ ಪಾಲಿಸಿ ಅಗತ್ಯ ಬಿದ್ದಾಗ ಕಾರ್ಯಗತಗೊಳ್ಳುತ್ತದೆ. ಅದರಿಂದ ಜಾತ್ಯತೀತ ಸಿದ್ಧಾಂತಕ್ಕೆ ಭಂಗ ಬರುವುದೆಂದಾದರೆ ಅದನ್ನು ಮರೆಮಾಚಲು ಜನರ ಮುಂದೆ ಹೊಸ ‘ರಂಗ ಪ್ರದರ್ಶನ’ ಏರ್ಪಡಿಸಲಾಗುತ್ತದೆ. ಅದಕ್ಕೆ ಬೇಕಾದಂತೆ ಚಿತ್ರಕಥೆ ಹೆಣೆದು ಸಮರ್ಥ ನಿರ್ದೇಶನ ಮಾಡಲಾಗುತ್ತದೆ. ಇದೂ ಕೂಡ ಜೆಡಿಎಸ್‌ನ ಅತಿ ವಿಶಿಷ್ಟ ಗುಣಗಳಲ್ಲಿ ಒಂದು. ಹಾಗಾಗಿ ಬಿಜೆಪಿಯೂ ಜೆಡಿಎಸ್‌ಗೆ ಅಪಥ್ಯವಲ್ಲ. ‘ಜನ ಕಲ್ಯಾಣ’ಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಆಯ್ಕೆಯೂ ಮುಕ್ತವಾಗಿರುತ್ತದೆ. ಉಪ ಚುನಾವಣೆಯ ಅಬ್ಬರದಲ್ಲಿ ಆಡಳಿತಾರೂಢ ಬಿಜೆಪಿ ಮಂಡ್ಯ ಜಿಲ್ಲೆಯಲ್ಲಿ ಖಾತೆ ತೆರೆದಿರಬಹುದಾದರೂ ಸಾರ್ವತ್ರಿಕ ಚುನಾವಣೆಯಲ್ಲಿ ಇದೇ ಫಲಿತಾಂಶ ಮರುಕಳಿಸುವ ವಿಶ್ವಾಸವಿರಿಸಿಕೊಳ್ಳುವಂತಿಲ್ಲ. ಹಾಗಾಗಿ ಮುಂದಿನ ಚುನಾವಣೆ ಬಳಿಕ ಸರಕಾರ ರಚಿಸಲು ಬಿಜೆಪಿಗೆ ಬಹುಮತದ ಕೊರತೆಯಾದರೆ ಜೆಡಿಎಸ್‌ ಬೆಂಬಲಿಸುವ ಮನಸ್ಸು ಮಾಡಬಹುದು. ತನಗೂ ಅಧಿಕಾರ ಸಿಗುವಾಗ ಇಂತಹ ಸದವಕಾಶವನ್ನು ಜೆಡಿಎಸ್‌ ಕೈಚೆಲ್ಲುವುದುಂಟೇ?

ಸ್ವಂತ ಅಸ್ತಿತ್ವವೇ ಮುಖ್ಯ
ಮೈತ್ರಿ ಸರಕಾರ ಪತನದ ಬಳಿಕ ಜೆಡಿಎಸ್‌ ಸಂಘಟನೆಯೇ ಸೊರಗಿ ಹೋಗಿದೆ. ಅಧಿಕಾರದ ರುಚಿ ಕಂಡರಷ್ಟೇ ಕಾರ್ಯಕರ್ತರಲ್ಲೂಉತ್ಸಾಹವಿರುತ್ತದೆ. ಅಧಿಕಾರಕ್ಕೆ ಬರುವಂತಾಗಲು ಮೊದಲು ಪಕ್ಷ ಅಸ್ತಿತ್ವದಲ್ಲಿರಬೇಕು, ಗಟ್ಟಿಯಾಗಬೇಕು. ಅದಕ್ಕಾಗಿ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಂಡೇ ಕಾರ್ಯಸಾಧನೆ ಮಾಡುವುದು ಜೆಡಿಎಸ್‌ ಉದ್ದೇಶ. ಚುನಾವಣಾ ಪೂರ್ವ ಮೈತ್ರಿಗಿಂತ ಫಲಿಧಿತಾಂಶೋಧಿತ್ತರ ಮೈತ್ರಿಯಲ್ಲಿಅವಕಾಶದ ಹೆಬ್ಬಾಗಿಲು ತೆರೆದುಕೊಳ್ಳುವುದು ಹೆಚ್ಚು ಎನ್ನುವುದು ಜೆಡಿಎಸ್‌ ನಂಬಿಕೆ. ಕುಮಾರಸ್ವಾಮಿ ಎರಡು ಬಾರಿ ಇಂಥ ಸನ್ನಿವೇಶದ ಲಾಭ ಪಡೆದವರೇ. ಮುಂಬರುವ ದಿನಗಳಲ್ಲೂ ಇದೇ ತೆರನಾದ ರಾಜಕೀಯದಾಟ ಆಡಲು ಜೆಡಿಎಸ್‌ ಪುನಃ ಸಜ್ಜುಗೊಳ್ಳುತ್ತಿರುವಂತಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top