ಆಹಾರ ಭದ್ರತೆ ಖಾತರಿ – ಆರ್ಥಿಕ ಪುನಶ್ಚೇತನ ಮುಂದುವರಿಕೆ

ಕೊರೊನಾ ವಿರುದ್ಧದ ಹೋರಾಟದಲ್ಲಿ ಸರಕಾರದ ಮಹತ್ವದ ನಿರ್ಧಾರಗಳನ್ನು ಜನತೆಯ ಮುಂದೆ ಆಗಾಗ ಬಂದು ಪ್ರಕಟಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಇನ್ನೊಂದು ಪ್ರಮುಖ ಉಪಕ್ರಮವನ್ನು ಘೋಷಿಸಿದ್ದಾರೆ. ಗರೀಬ್‌ ಕಲ್ಯಾಣ್‌ ಯೋಜನೆಯ ಅಡಿಯಲ್ಲಿ ಇನ್ನೂ 5 ತಿಂಗಳವರೆಗೆ ಬಡವರಿಗೆ ಉಚಿತ ಪಡಿತರ ನೀಡಲಾಗುವುದು ಎಂದು ಅವರು ತಿಳಿಸಿದ್ದು, ನಿರುದ್ಯೋಗಿಗಳು, ಹಸಿವಿನಿಂದ ನರಳುತ್ತಿರುವ ಬಡ ಜನರಿಗೆ ಇದು ಶುಭ ಸುದ್ದಿಯಾಗಿದೆ. ಹಾಗೇ ಕೆಲಸ ಅರಸಿ ವಲಸೆ ಹೋಗುವ ಕಾರ್ಮಿಕರಿಗೆ, ಬಡವರಿಗೆ ಅನುಕೂಲವಾಗುವ ರೀತಿ ದೇಶಾದ್ಯಂತ ಏಕರೂಪ ದಿನಸಿ ವಿತರಣೆ ಕಾರ್ಡ್‌ ಶೀಘ್ರವೇ ಜಾರಿಗೆ ಬರಲಿದೆ ಎಂದು ಪ್ರಧಾನಿ ಸುಳಿವು ನೀಡಿದ್ದಾರೆ.
ದೇಶದ 80 ಕೋಟಿ ಬಡಜನರಿಗೆ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ) ಮೂಲಕ ಉಚಿತ ದಿನಸಿ ನೀಡಲಾಗುತ್ತಿದೆ. ಇದನ್ನು ನವೆಂಬರ್‌ ಅಂತ್ಯದವರೆಗೂ ಮುಂದುವರಿಸಲಾಗುತ್ತದೆ. ಕೆಲವೇ ದಿನಗಳಲ್ಲಿ ದೇಶದಲ್ಲಿ ಹಬ್ಬಗಳ ಸೀಜನ್‌ ಶುರುವಾಗಲಿದ್ದು, ಈ ಸಂದರ್ಭ ಜನರು ಸಂಕಷ್ಟ ಎದುರಿಸಬಾರದೆಂಬ ದೃಷ್ಟಿಯಿಂದ ಯೋಜನೆ ವಿಸ್ತರಿಸಲಾಗಿದೆ. ಇದರ ಅಡಿಯಲ್ಲಿ 80 ಕೋಟಿ ಜನರಿಗೆ ಪ್ರತಿ ತಿಂಗಳು 5 ಕಿಲೋ ಅಕ್ಕಿ, 1 ಕಿಲೋ ಬೇಳೆ ಉಚಿತವಾಗಿ ದೊರೆಯಲಿದೆ. ಈ ಯೋಜನೆ ವಿಸ್ತರಣೆಗಾಗಿ ಸರಕಾರ 90,000 ಕೋಟಿ ರೂ. ವ್ಯಯಿಸಲಿದೆ. ಪಿಎಂಜಿಕೆಎವೈ ಅಡಿಯಲ್ಲಿ ಕಳೆದ ಮೂರು ತಿಂಗಳಲ್ಲಿ 20 ಕೋಟಿ ಬಡ ಕುಟುಂಬಗಳ ಬ್ಯಾಂಕ್‌ ಖಾತೆಗೆ 31,000 ಕೋಟಿ ರೂ. ಹಾಗೂ 9 ಕೋಟಿ ರೈತರ ಬ್ಯಾಂಕ್‌ ಖಾತೆಗಳಿಗೆ 18 ಸಾವಿರ ಕೋಟಿ ರೂ. ಜಮೆ ಮಾಡಲಾಗಿದೆ.
ಆಹಾರ ಭದ್ರತೆ ಹಾಗೂ ಮಾರುಕಟ್ಟೆಗೆ ಹಣ ಬರುವಂತೆ ಮಾಡುವುದು- ಇವೆರಡೂ ದೇಶದ ಆರ್ಥಿಕ ಪುನಶ್ಚೇತನದ ದೃಷ್ಟಿಯಿಂದ ಅಗತ್ಯವಾಗಿವೆ. ಬಡವರಿಗೆ, ಕೆಳ ಮಧ್ಯಮ ವರ್ಗದವರಿಗೆ ನೀಡುವ ಆಹಾರ ಹಾಗೂ ಹಣ ಎರಡೂ ದುರ್ಬಳಕೆಯಾಗುವುದಿಲ್ಲ. ಆಹಾರ ಪಡಿತರ ಉಚಿತ ಹಂಚಿಕೆಯ ಹಿನ್ನೆಲೆಯಲ್ಲಿ ಸರಕಾರಕ್ಕೆ ಇರುವ ಆತ್ಮವಿಶ್ವಾಸ ಎಂದರೆ, ದೇಶದ ಎಲ್ಲ ಪ್ರಜೆಗಳಿಗೆ ಮುಂದಿನ ಆರು ತಿಂಗಳ ಕಾಲ ಸಾಕಷ್ಟು ಆಹಾರ ಧಾನ್ಯದ ಲಭ್ಯತೆ ಇರುವುದು. ದೇಶದ ಕನಿಷ್ಠ ಆಹಾರ ಧಾನ್ಯ ಸಂಗ್ರಹದ ಅಗತ್ಯತೆ 21 ಲಕ್ಷ ಟನ್‌ಗಳು; ಆದರೆ ಏಪ್ರಿಲ್‌ನ ಹೊತ್ತಿಗೆ ನಮ್ಮ ಆಹಾರಧಾನ್ಯ ಸಂಗ್ರಹ 73.85 ಲಕ್ಷ ಟನ್‌ಗಳಾಗಿತ್ತು. ಇದನ್ನು ಸಾಕಷ್ಟು ಬೆಂಬಲ ಬೆಲೆ ಖರೀದಿ, ಸಂಗ್ರಹಾಗಾರಗಳ ಮೂಲಕ ಸರಕಾರ ಖಾತ್ರಿಪಡಿಸಿಕೊಂಡಿದೆ. ಈ ಮಳೆಗಾಲದಲ್ಲಿ ಸಾಕಷ್ಟು ಮಳೆಯಾಗಿದೆ; ಬಿತ್ತನೆ ಕಾರ್ಯ, ಕೃಷಿ ಚಟುವಟಿಕೆಗಳು ಸಮಾಧಾನಕರವಾಗಿ ನಡೆದಿವೆ. ಹೀಗಾಗಿ ಮುಂದಿನ ಸೀಸನ್‌ನಲ್ಲಿ ಕೂಡ ಸಾಕಷ್ಟು ಆಹಾರಧಾನ್ಯದ ಸಂಗ್ರಹ ನಮ್ಮಲ್ಲಿರಲಿದೆ. ಇದು ಪಡಿತರ ಉಚಿತ ಹಂಚಿಕೆಯನ್ನು ಖಾತ್ರಿಪಡಿಸಿದೆ. ದೇಶಾದ್ಯಂತ ಏಕರೂಪ ದಿನಸಿ ವಿತರಣೆ ಕಾರ್ಡ್‌ ಇರುವುದು ಕೂಡ ಇಂಥ ಸಂಕಷ್ಟದ ಸನ್ನಿವೇಶದಲ್ಲಿ ಅಪೇಕ್ಷಣೀಯ.
ಹಾಗೆಯೇ ಬಡವರ ಖಾತೆಗಳಿಗೆ ಹಣ ಹಾಕುವ ಮೂಲಕ ಮಾರುಕಟ್ಟೆಗೆ ಹಣದ ಹರಿವು ಬರುವಂತೆ ಮಾಡಿರುವ ಕ್ರಮ ಕೂಡ ಶ್ಲಾಘನೀಯ. ಈಗ ಕೈಗೊಂಡಿರುವ ಈ ಕ್ರಮಗಳು ಮುಂದಿನ ಮೂರು ತಿಂಗಳಲ್ಲಿ ಕಣ್ಣಿಗೆ ಕಾಣುವಂತೆ ಸಕಾರಾತ್ಮಕ ಫಲಗಳನ್ನು ನೀಡಬಹುದು. ಈ ಉಪಕ್ರಮಗಳ ಸಮರ್ಪಕ, ಪಾರದರ್ಶಕ ಅನುಷ್ಠಾನ ಅಗತ್ಯವಿದೆ. ಇದರ ಜೊತೆಗೆ ಪ್ರಧಾನಿಯವರು ಲಾಕ್‌ಡೌನ್‌ನ ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವಿಕೆ, ಕೈಗಳನ್ನು ಆಗಾಗ ತೊಳೆದುಕೊಳ್ಳುವಿಕೆ, ಕಂಟೇನ್‌ಮೆಂಟ್‌ ಜೋನ್‌ಗಳ ನಿರ್ಬಂಧ ಪಾಲನೆ ಮುಂತಾದ ಸುರಕ್ಷತಾ ಮುನ್ನೆಚ್ಚರಿಕೆಗಳ ಕಟ್ಟುನಿಟ್ಟಿನ ಅನುಷ್ಠಾನದ ಬಗ್ಗೆಯೂ ಗಮನ ಸೆಳೆದಿದ್ದಾರೆ. ಆತ್ಮನಿರ್ಭರ ಭಾರತದ ಸ್ವಾವಲಂಬಿ ಉಪಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವನ್ನೂ ಒತ್ತಿ ಹೇಳಿದ್ದಾರೆ. ಅದನ್ನು ಪಾಲಿಸಲೂ ನಾವೆಲ್ಲರೂ ಮುಂದಾಗಬೇಕಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top