ಕೊರೊನಾ ಲಸಿಕೆಯತ್ತ ಮೊದಲ ಹೆಜ್ಜೆ

– ಮಾನವರ ಮೇಲೆ ಪ್ರಯೋಗಕ್ಕೆ ಏಮ್ಸ್ ಸಜ್ಜು | ಆಕ್ಸ್‌ಫರ್ಡ್‌ ಮೊದಲ ಟ್ರಯಲ್ ಸಕ್ಸಸ್

ಹೊಸದಿಲ್ಲಿ: ಕೊರೊನಾ ಪ್ರಕರಣಗಳು ಸತತ ಏರುಗತಿಯಲ್ಲಿರುವ ಸಂದರ್ಭದಲ್ಲಿಯೇ ಸೋಂಕು ನಿಯಂತ್ರಿಸುವ ‘ಲಸಿಕೆ’ಯ ಆಶಾಕಿರಣ ಸೋಮವಾರ ಗೋಚರಿಸಿದೆ. ದಿಲ್ಲಿಯ ಏಮ್ಸ್‌ನಲ್ಲಿ ಸ್ವದೇಶಿ ಲಸಿಕೆ ‘ಕೊವ್ಯಾಕ್ಸಿನ್’ ಅನ್ನು ಮಾನವರ ಮೇಲೆ ಪ್ರಯೋಗಿಸುವ ಪ್ರಕ್ರಿಯೆ ಆರಂಭವಾಗಿದ್ದರೆ, ಬ್ರಿಟನ್‌ನಲ್ಲಿ ಮೊದಲ ಹಂತದಲ್ಲಿ ನಡೆದ ಕ್ಲಿನಿಕಲ್ ಟ್ರಯಲ್ಸ್ ಪರಿಣಾಮಕಾರಿಯಾಗಿದೆ ಎಂಬ ವರದಿ ಹೊರಬಿದ್ದಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಮತ್ತು ನ್ಯಾಷನಲ್ ಇನ್ಸ್‌ಟಿಟ್ಯೂಟ್‌ ಆಫ್ ವೈರಾಲಜಿ ಅಭಿವೃದ್ಧಿಪಡಿಸುತ್ತಿರುವ ‘ಕೊವ್ಯಾಕ್ಸಿನ್’ ಕ್ಲಿನಿಕಲ್ ಟ್ರಯಲ್‌ಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಏಮ್ಸ್, ಬೆಳಗಾವಿ ಆಸ್ಪತ್ರೆ ಸೇರಿ 12 ಆಸ್ಪತ್ರೆಗಳನ್ನು ಆಯ್ಕೆ ಮಾಡಿದೆ. ಆ ಪೈಕಿ ಸದ್ಯ ದಿಲ್ಲಿಯ ಪ್ರತಿಷ್ಠಿತ
ಏಮ್ಸ್‌ನಲ್ಲಿ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಿಸಲು ಸಿದ್ಧತೆ ಆರಂಭವಾಗಿದೆ. ಮಾನವರ ಮೇಲೆ ಪ್ರಯೋಗಿಸಲು ಸ್ವಯಂಸೇವಕರ ನೇಮಕ ಪ್ರಕ್ರಿಯೆಗೆ ಏಮ್ಸ್‌ನಲ್ಲಿ ಸೋಮವಾರ ಚಾಲನೆ ನೀಡಲಾಗಿದೆ.
‘‘ಕೊವ್ಯಾಕ್ಸಿನ್ ಲಸಿಕೆ ಪ್ರಯೋಗಕ್ಕೆ ಒಳಪಡಲು 1800 ಮಂದಿ ನೋಂದಣಿ ಮಾಡಿಸಿದ್ದಾರೆ. ಅವರ ಪೈಕಿ 1,125 ಜನರನ್ನು ಆಯ್ಕೆ ಮಾಡಲಾಗಿದೆ. ಮೂರು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ,’’ ಎಂದು ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.
‘‘ಮೊದಲ ಹಂತದಲ್ಲಿ 18-55 ವರ್ಷದ 375 ಮಂದಿಗೆ ಲಸಿಕೆ ನೀಡಲಾಗುವುದು. ಅವರಲ್ಲಿ 100 ಮಂದಿ ಏಮ್ಸ್ ಸಿಬ್ಬಂದಿಯೇ ಇರಲಿದ್ದಾರೆ. ಗರ್ಭಿಣಿಯರನ್ನು ಹೊರತುಪಡಿಸಿ ಆರೋಗ್ಯವಂತ ಮಹಿಳೆಯರನ್ನು ಮೊದಲ ಹಂತಕ್ಕೆ ಆಯ್ಕೆ ಮಾಡಲಾಗುವುದು. ಎರಡನೇ ಹಂತದಲ್ಲಿ 12-65 ವರ್ಷದವರನ್ನು ಆಯ್ಕೆ ಮಾಡಿ 750 ಜನರಿಗೆ ಲಸಿಕೆ ನೀಡಿ ಪ್ರಯೋಗ ಮುಂದುವರಿಸಲಾಗುವುದು. ಮೂರನೇ ಹಂತದ ಪ್ರಯೋಗದಲ್ಲಿ ಸಾವಿರಾರು ಮಂದಿಗೆ ಒಟ್ಟಿಗೆ ಲಸಿಕೆ ನೀಡಿದರೆ ಅದರ ಅಡ್ಡ ಪರಿಣಾಮ, ಚಿಕಿತ್ಸೆಯ ಸಾಧ್ಯಾಸಾಧ್ಯತೆಗಳನ್ನು ಅಧ್ಯಯನ ನಡೆಸಲಿದ್ದೇವೆ,’’ ಎಂದು ಡಾ. ಗುಲೇರಿಯಾ ಅವರು ಮಾಹಿತಿ ನೀಡಿದರು.

ಆಕ್ಸ್‌ಫರ್ಡ್‌ ಯಶಸ್ಸು
ಬ್ರಿಟನ್ನ ಆಕ್ಸ್‌ಫರ್ಡ್‌ ವಿವಿ ಮತ್ತು ಆಸ್ಟ್ರಾ ಝನೆಕಾ ಕಂಪನಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೊನಾ ವಿರುದ್ಧದ ಚುಚ್ಚುಮದ್ದು ಆಶಾದಾಯಕ ಫಲಿತಾಂಶ ನೀಡಿದೆ. ‘‘ಒಟ್ಟು 1,077 ಜನರ ಮೇಲೆ ಪ್ರಯೋಗ ನಡೆಸಲಾಗಿತ್ತು. ಅವರಲ್ಲಿ ಪ್ರತಿಕಾಯಗಳು (ಆ್ಯಂಟಿಬಾಡಿ) ಸೃಷ್ಟಿಯಾಗಿವೆ ಮತ್ತು ಬಿಳಿ ರಕ್ತಕಣಗಳು ಕೊರೊನಾ ವೈರಾಣು ವಿರುದ್ಧ ಹೋರಾಡುವ ಸಾಮರ್ಥ್ಯ ಬೆಳೆಸಿಕೊಂಡಿರುವುದು ಕಂಡುಧಿಬಂದಿದೆ. ಮತ್ತಷ್ಟು ಕ್ಲಿನಿಕಲ್ ಟ್ರಯಲ್ ನಡೆಯಬೇಕಿದೆ. ವಿಶೇಷವಾಗಿ ವೃದ್ಧರ ಮೇಲೆ ಪ್ರಯೋಗಿಸಬೇಕಿದೆ,’’ ಎಂದು ವೈದ್ಯಕೀಯ ಜರ್ನಲ್ ‘ದಿ ಲ್ಯಾನ್ಸೆಟ್’ ವರದಿ ಮಾಡಿದೆ. ಭಾರತದಲ್ಲಿ ಸೆರಮ್ ಇನ್ಸ್‌ಟಿಟ್ಯೂಟ್‌ ಆಫ್ ಇಂಡಿಯಾವು ಆಸ್ಟ್ರಾ ಝನೆಕಾ ಪಾಲುದಾರನಾಗಿದೆ. ‘‘ಭಾರತದಲ್ಲಿಯೇ ಜಾಗತಿಕ ಬೇಡಿಕೆಯ 60-70% ಲಸಿಕೆ ಉತ್ಪಾದಿಸುವ ಗುರಿ ಹೊಂದಲಾಗಿದೆ. ಪ್ರತಿ ಡೋಸ್ ಬೆಲೆ ಗರಿಷ್ಠ 1000 ರೂಪಾಯಿ ಇರಲಿದೆ,’’ ಎಂದು ಸೆರಮ್ ಮುಖ್ಯಸ್ಥ ಆದರ್ ಪೂನಾವಾಲಾ ತಿಳಿಸಿದ್ದಾರೆ.

ವರ್ಷಾಂತ್ಯದಲ್ಲಿ ಲಭ್ಯವಾಗಲಿದೆ ಲಸಿಕೆ?
ಮೊದಲ ಹಂತದ ಪ್ರಯೋಗದ ವರದಿ ಅಕ್ಟೋಬರ್‌ನಲ್ಲಿ ಕೈ ಸೇರಲಿದೆ. ಲಸಿಕೆ ಎಂದು ಮಾರುಕಟ್ಟೆಗೆ ಬರಲಿದೆ ಎಂಬುದನ್ನು ಈಗ ಹಂತದಲ್ಲಿಯೇ ಹೇಳಲು ಸಾಧ್ಯವಿಲ್ಲ. ಯಾವುದೇ ಅಡೆತಡೆ ಎದುರಾಗದೇ ಇದ್ದರೆ ಈ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಲಸಿಕೆಯ ವಾಣಿಜ್ಯ ಉತ್ಪಾದನೆ ಆರಂಭವಾಗಬಹುದು. ಲಸಿಕೆ ಲಭ್ಯವಾಗುತ್ತಿದ್ದಂತೆಯೇ ಗಂಭೀರ ಸ್ಥಿತಿಯಲ್ಲಿರುವವರಿಗೆ ಹಾಗೂ ಕೊರೊನಾ ವಾರಿಯರ್ಸ್‌ಗೆ ಆದ್ಯತೆ ಮೇಲೆ ನೀಡಲಾಗುವುದು ಎಂದು ಡಾ.ಗುಲೇರಿಯಾ ತಿಳಿಸಿದರು.

ಯಾವ ಹಂತದಲ್ಲಿಏನು ಪರೀಕ್ಷೆ?
ಹಂತ-1: ಲಸಿಕೆಯ ಸುರಕ್ಷತೆ ಮತ್ತು ಡೊಸೇಜ್ ಲೆಕ್ಕಾಚಾರ
ಹಂತ-2: ರೋಗ ನಿರೋಧಕ ಶಕ್ತಿ ಯಾವ ಪ್ರಮಾಣದಲ್ಲಿದೆ ಎಂಬುದರ ನಿರ್ಧಾರ
ಹಂತ-3: ಲಸಿಕೆಯ ಅಡ್ಡಪರಿಣಾಮ ಮತ್ತು ಚಿಕಿತ್ಸೆಯಲ್ಲಿ ಅದರ ಪ್ರಯೋಜನ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top