ಮೊದಲು ಸೋಂಕು ತಂದವರು ಯಾರು?

– ಮಂಜುನಾಥ ಅಜ್ಜಂಪುರ.

ಅಂಕಣ: ಮರೆಯಲಾಗದ ಇತಿಹಾಸ
ಕೊರೊನಾ ಸಾಂಕ್ರಾಮಿಕ ರೋಗದ ಎದುರು ಅಮೆರಿಕ ಜರ್ಝರಿತವಾಗಿದೆ. ಅಲ್ಲಿನ ಅಧ್ಯಕ್ಷರು ರೋಗ ಹರಡಿದ ಚೀನಾವನ್ನು ದೂಷಿಸಿದ್ದಾರೆ. ಇತಿಹಾಸದ ಪುಟಗಳೇ ವಿಚಿತ್ರ. ಅದರ ಪುಟಪುಟಗಳಲ್ಲಿ ನಿರಪರಾಧಿಗಳ- ಮುಗ್ಧರ ರಕ್ತವೇ ಹರಿದಿದೆ. ಇಂದಿನ ಅಮೆರಿಕ ಎಂಬ ದೇಶದಲ್ಲಿರುವ ಬಹುಸಂಖ್ಯಾತರು ಯೂರೋಪ್‌ ಮೂಲದ ಶ್ವೇತವರ್ಣೀಯ ಕ್ರೈಸ್ತರು. ಕೆಲವು ಶತಮಾನಗಳ ಹಿಂದೆ, ಇದೇ ಯೂರೋಪಿಯನ್ನರೇ ಉತ್ತರ-ದಕ್ಷಿಣ ಅಮೆರಿಕ ಖಂಡಗಳಲ್ಲಿದ್ದ ಕೋಟಿಕೋಟಿ ಮೂಲನಿವಾಸಿಗಳನ್ನು ಚಿನ್ನದ ಆಸೆಗಾಗಿ ಕೊಂದು ಹಾಕಿದರು. ಈ ಹಂತಕ ಪಡೆ ತಮ್ಮೊಂದಿಗೆ ಕೊಂಡೊಯ್ದ ಸಾಂಕ್ರಾಮಿಕ ರೋಗಗಳೂ ಲಕ್ಷಲಕ್ಷ ಜನರ ದಾರುಣ ಸಾವಿಗೆ ಕಾರಣವಾದುದು ಇನ್ನಷ್ಟು ನೋವಿನ ಸಂಗತಿ. ಹೀಗಿದ್ದೂ ಪ್ರಸ್ತುತ ಅಮೆರಿಕನ್ನರ ಮತ್ತು ಅಲ್ಲಿನ ನಾಯಕತ್ವದ ಮನೋಭಾವ, ದುರ್ವರ್ತನೆಗಳು ಹೇಸಿಗೆ ಉಂಟುಮಾಡುತ್ತವೆ. ಇವರಿಗೆ ಕೆಲವೇ ಶತಮಾನಗಳ ಹಿಂದಿನ ಇವರ ಪೂರ್ವಜರ ರಾಕ್ಷಸೀ ಕೃತ್ಯಗಳ ನೆನಪೇ ಇದ್ದಂತಿಲ್ಲ.

ಪ್ರಜಾಪ್ರಭುತ್ವದ ಪರ ಎಂದು ನಾಟಕವಾಡುವ ಈ ಅಮೆರಿಕೆಯು ಪಾಕಿಸ್ತಾನದಂತಹ ಭಯೋತ್ಪಾದಕ ದೇಶಕ್ಕೆ ಬೆಂಬಲ ನೀಡುತ್ತಿರುವುದಾದರೂ ಏಕೆ? ವಿಯೆಟ್ನಾಮಿನಲ್ಲಿ- ಕೊರಿಯಾದಲ್ಲಿ- ಕುವೈತ್‌ನಲ್ಲಿ- ಇರಾಕ್‌ನಲ್ಲಿ ಮೂಗು ತೂರಿಸುತ್ತಿರುವುದಾದರೂ ಏಕೆ? ಉತ್ತರ ಸರಳ. ಆರು ಶತಮಾನ ಹಿಂದೆ ಅಮೆರಿಕಕ್ಕೆ ಹೋದವರು ಯೂರೋಪಿನ ಕಡಲ್ಗಳ್ಳರು, ಲೂಟಿಕೋರರು. ಅವರ ಸಂತತಿಯೇ ಅಲ್ಲಿ ವಿಷವೃಕ್ಷದಂತೆ, ಪಾಪಾಸುಕಳ್ಳಿಯಂತೆ ಬೆಳೆದಿದೆ. ಅವರಿಗೆ ಅದೇ ಲೂಟಿ ಮಾಡುವ ದೋಚುವ ಬುದ್ಧಿ.

ವಾಸ್ಕೋಡಗಾಮಾ, ಕೊಲಂಬಸ್‌ರಂತಹವರ ಬಗೆಗೆ ಪಾಶ್ಚಾತ್ಯರೇ ತುಂಬ ದಾಖಲೆಗಳನ್ನು ನೀಡಿದ್ದಾರೆ, ಗ್ರಂಥರಚನೆ ಮಾಡಿದ್ದಾರೆ. ಚರ್ಚ್‌ಗಳಿರುವುದೇ ಶಾಂತಿಪ್ರಸಾರಕ್ಕೆ, ಪೋಪ್‌ ಇರುವುದೇ ಕರುಣೆಯ ಸಂಕೇತವಾಗಿ ಎನ್ನುವ ಅಜ್ಞರು, ದಯವಿಟ್ಟು ಈ ಗ್ರಂಥಗಳನ್ನು ಓದಬೇಕು. ಆ ಕಾಲಘಟ್ಟದಲ್ಲಿ ಕ್ರೈಸ್ತರ ಪರಮತ ದ್ವೇಷ ಮಿತಿಮೀರಿತ್ತು. ಇನ್‌ಕ್ವಿಸಿಷನ್‌ ಎಂಬುದು ಪರಮತೀಯರನ್ನು ದಂಡನೆಗೆ ಗುರಿ ಮಾಡುವ, ಹಿಂಸಾವಿಚಾರಣೆಗೆ ಗುರಿಪಡಿಸುವ ಕ್ರೂರವಿಧಾನವಾಗಿತ್ತು. ನಾವು ಕ್ರೂರಿ ಹಿಟ್ಲರನ ಬಗೆಗೆ ಕೇಳಿರುತ್ತೇವೆ. ಆದರೆ, ಕೊಲಂಬಸ್‌ನ ಬಗೆಗೆ, ಇನ್‌ಕ್ವಿಸಿಷನ್‌ ಬಗೆಗೆ ಏನೂ ಓದಿಕೊಂಡಿಲ್ಲ.

ಕೊಲಂಬಸ್‌ ತನ್ನ ಮೊದಲ ಸಮುದ್ರಸಾಹಸದ ಬಗೆಗೆ ತನ್ನ ‘ಕಿಂಗ್‌’ಗೆ (1493ರಲ್ಲಿ) ಬರೆದ ಪತ್ರವನ್ನು ಉಳಿದ ದಾಖಲೆಗಳೊಂದಿಗೆ ನ್ಯೂಯಾರ್ಕ್‌ನ ‘ದ ಹೆರಿಟೇಜ್‌ ಪ್ರೆಸ್‌’ ಸಂಸ್ಥೆಯು 1963ರಲ್ಲಿ ಪ್ರಕಟಿಸಿದೆ:

”ಜುವಾನಾ ಮತ್ತು ಇತರ ಎಲ್ಲ ದ್ವೀಪಗಳು ತುಂಬ ಸಮೃದ್ಧವಾಗಿದ್ದವು. ಎತ್ತರವಾದ ಮರಗಳು, ಬೆಟ್ಟಗುಡ್ಡಗಳು, ವೈವಿಧ್ಯದ ಹಣ್ಣುಗಳು, ಹೂವುಗಳು, ಇತ್ಯಾದಿ ಅಲ್ಲಿ ನೋಡಿದೆ. ನವೆಂಬರ್‌ 1492ರಲ್ಲಿ ನಾನು ಅಲ್ಲಿಗೆ ಭೇಟಿ ನೀಡಿದಾಗ ಸಾವಿರಾರು ಬಗೆಯ ಪಕ್ಷಿಗಳ ಕಲರವ ಕೇಳಿದೆ. ತುಂಬಿ ಹರಿಯುವ ನದಿಗಳ ದಡದಲ್ಲಿ ಚಿನ್ನ ನೋಡಿದೆ. ಅನೇಕ ಬಗೆಯ ಜಾನುವಾರುಗಳು, ಜನ, ಪಟ್ಟಣಗಳು, ಹಳ್ಳಿಗಳು. ಅಲ್ಲಿನ ಬಂದರುಗಳು ಹೇಗಿದ್ದವು ಎಂದು ವರ್ಣಿಸಿದರೆ, ನೋಡದೆಯೇ ನೀವು ನಂಬಲಾರಿರಿ. ಇಲ್ಲಿನ ಮೂಲನಿವಾಸಿಗಳು ನಗ್ನರಾಗಿದ್ದರು. ಕೆಲವರು ಹೆಂಗಸರು ಮಾತ್ರ, ತಮ್ಮ ಗುಪ್ತಾಂಗವನ್ನು ಎಲೆಗಳಿಂದ ಮುಚ್ಚಿಕೊಂಡಿದ್ದರು. ಎಲ್ಲರೂ ದೃಢಕಾಯರಾಗಿದ್ದರು, ಸುಂದರವಾಗಿದ್ದರು. ಅವರಲ್ಲಿ ಯಾರಿಗೂ ಆಯುಧಗಳ, ಶಸ್ತ್ರಾಸ್ತ್ರಗಳ, ಉಕ್ಕಿನ ಪರಿಚಯವೇ ಇರಲಿಲ್ಲ. ಅವರ ಬಳಿಯಿದ್ದುದನ್ನು ನಾವು ಯಾರು ಏನು ಕೇಳಿದರೂ ಕೊಟ್ಟು ಬಿಡುತ್ತಿದ್ದರು. ಅವರಿಗೆ ಇಲ್ಲ ಎಂದು ಹೇಳಿಯೇ ಗೊತ್ತಿಲ್ಲ. ಬದಲಿಗೆ ಅವರೇ ಕರೆದು ಕರೆದು ತಮ್ಮ ಬಳಿ ಇರುವುದನ್ನು ಹಂಚುವಂತಹವರು. ಪ್ರೀತಿಪೂರ್ವಕವಾದ ನಡವಳಿಕೆಯ ಈ ಜನರಲ್ಲಿ ಸಂತೃಪ್ತಿಯ ಭಾವ ಸೂಸುತ್ತಿತ್ತು” (ಪುಟ 182-183). 

ಕೊಲಂಬಸ್‌ನ ಈ ದೀರ್ಘ ಪತ್ರವು ಮುದ್ರಿತವಾಯಿತು, ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿತು. ತೀರ ಕೆಟ್ಟ ಸ್ಥಿತಿಯಲ್ಲಿದ್ದ ಯೂರೋಪಿಯನ್ನರಿಗೆ ಮೇಲಿನ ಈ ದ್ವೀಪಗಳು ಸ್ವರ್ಗದಂತೆ ಕಂಡವು. ಮುಂದೆ ಆದ ದಾಳಿಗಳಿಗೆ, ಲೂಟಿಗಳಿಗೆ ಇತಿಮಿತಿಯಿಲ್ಲ. ಸ್ಪಾನಿಶ್‌ ಸೈನಿಕರು ಕ್ರೂರವಾದ ಬೇಟೆ ನಾಯಿಗಳನ್ನೂ ಸಾಕಿದ್ದರು (ಈ ಎಲ್ಲ ಯೂರೋಪಿಯನ್‌ ಕಡಲ್ಗಳ್ಳರು-ಲೂಟಿಕೋರರು, ಸಮೃದ್ಧವಾದ ಭಾರತವನ್ನು ಗುರಿಮಾಡಿಕೊಂಡು ಹೊರಟಿದ್ದುದರಿಂದ ಕ್ಯೂಬಾ, ಜಮೈಕಾ ಮುಂತಾದ ಅನೇಕ ದ್ವೀಪಗಳಲ್ಲಿನ ಮೂಲನಿವಾಸಿಗಳನ್ನು ಇಂಡಿಯನ್ನರೆಂದೇ ಕರೆದಿದ್ದಾರೆ. ಇಂದಿಗೂ ಬಹುತೇಕ ಗ್ರಂಥಗಳಲ್ಲಿ, ದಾಖಲೆಗಳಲ್ಲಿ ಹಾಗೆಯೇ ಕರೆಯಲಾಗುತ್ತಿದೆ. ಗೊಂದಲ ತಪ್ಪಿಸಲು, ನಾನಿಲ್ಲಿ ಇಂಡಿಯನ್‌ ಪದದ ಬದಲು ಮೂಲನಿವಾಸಿಗಳು ಎಂದೇ ಸಂಬೋಧಿಸಿದ್ದೇನೆ). ಬೇಟೆನಾಯಿಗಳನ್ನು ಛೂ ಬಿಟ್ಟು ಈ ಸೈನಿಕರು ಆ ಮೂಲನಿವಾಸಿಗಳಿಂದ ಆಹಾರವನ್ನು, ಹೆಂಗಸರನ್ನು ಕಿತ್ತುಕೊಂಡರು. ಮೂಲನಿವಾಸಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡರು. ಕೊಲಂಬಸ್‌ನ ಸೈನಿಕರು ಕೊಂದು ಹಾಕಿದ ಮೂಲನಿವಾಸಿಗಳಿಗೆ ಲೆಕ್ಕವೇ ಇಲ್ಲ. ಅವರಿಗೆ ಕೊಲ್ಲುವುದೇ ಒಂದು ಆಟವಾಗಿತ್ತು. ಪಶು ಪಕ್ಷಿ ಪ್ರಾಣಿಗಳನ್ನೂ ಹೀಗೆಯೇ ಕೊಂದುಹಾಕಿದರು.

ಹಿಸ್ಪಾನಿಯೋಲಾದಲ್ಲಿ ಕೊಲಂಬಸ್‌ ಅನಾರೋಗ್ಯದಿಂದ ಸ್ವಲ್ಪ ದಿನ ಮಲಗಿದ್ದಾಗ, ಅವನ ತಂಡದವರು ಈ ‘ಕಲ್ಯಾಣಕಾರ್ಯ’ವನ್ನು ಮುಂದುವರಿಸಿದರು. ಆ ಅವಧಿಯಲ್ಲಿ ಕೊಲ್ಲಲ್ಪಟ್ಟ ಮೂಲನಿವಾಸಿಗಳ ಸಂಖ್ಯೆಯು 50 ಸಾವಿರಕ್ಕಿಂತ ಹೆಚ್ಚೆಂದು ಅವರೇ ದಾಖಲಿಸಿದ್ದಾರೆ. ಭಾರತದ ಹೆಸರಿನಲ್ಲಿಯೇ ‘ವೆಸ್ಟ್‌ ಇಂಡೀಸ್‌’ ಎಂಬ ಹೆಸರು ಪಡೆದ ಈ ದ್ವೀಪ ಸಮೂಹಗಳ ಮೂಲನಿವಾಸಿಗಳ ಓರ್ವ ನಾಯಕ ಹ್ಯಾಚುಯೇ ಎಂಬವನು ಒಂದಿಷ್ಟು ಜನರೊಂದಿಗೆ ತಪ್ಪಿಸಿಕೊಂಡು ಕ್ಯೂಬಾ ದ್ವೀಪಕ್ಕೆ ಓಡಿ ಹೋದ. ಪುಂಟಾ ಮೈಸಿ ಎಂಬ ಸ್ಥಳದಲ್ಲಿ, ತನ್ನ ಅನುವರ್ತಿಗಳನ್ನು ಒಟ್ಟುಗೂಡಿಸಿ, ತಾನು ತಂದಿದ್ದ ಒಂದಿಷ್ಟು ಚಿನ್ನವನ್ನು ತೋರಿಸಿ, ಇದಕ್ಕಾಗಿಯೇ (ಸ್ಪೇನಿನ) ಈ ಸೈನಿಕರು ನಮ್ಮನ್ನೆಲ್ಲಾ ಬೇಟೆಯಾಡುತ್ತಿದ್ದಾರೆ ಎಂದು ವಿವರಿಸಿದ. ಅನಂತರ ತೊಂದರೆ ನೀಗಿಕೊಳ್ಳಲು, ಹತ್ತಿರದ ನದಿಯೊಂದಕ್ಕೆ ಆ ಚಿನ್ನವನ್ನು ಎಸೆದ. ಆದರೇನು, ಸ್ಪೇನ್‌ನ ಸೈನಿಕರು ನುಗ್ಗಿ ಬಂದು ಈ ಗುಂಪಿನ ಹಲವರನ್ನು ಕೊಂದುಹಾಕಿದರು, ಉಳಿದವರನ್ನು ಗುಲಾಮರನ್ನಾಗಿ ಮಾಡಿಕೊಂಡರು. ಹ್ಯಾಚುಯೇನನ್ನು ಜೀವಂತ ಸುಟ್ಟುಹಾಕಿದರು. ಸುಡುವ ಮುನ್ನ ಈ ಸೈನಿಕರ ತಂಡದಲ್ಲಿದ್ದ, (ಫ್ರಾನ್ಸಿಸ್‌ ಎಂಬ) ಕ್ರೈಸ್ತ ಸಂತನ ಅನುಯಾಯಿಯೊಬ್ಬ ‘ಸಾಯುವ ಮೊದಲು ಯೇಸುವನ್ನು ಹೃದಯಪೂರ್ವಕವಾಗಿ ಪ್ರಾರ್ಥಿಸು, ನರಕದ ಬದಲು ಸ್ವರ್ಗಕ್ಕೆ ಹೋಗುವೆ’ ಎಂದ. ಸ್ವಾಭಿಮಾನಿಯಾದ ಹ್ಯಾಚುಯೇ, ”ನಿಮ್ಮಂತಹ ಕ್ರೈಸ್ತರು ತುಂಬಿರುವ ಸ್ವರ್ಗದ ಬದಲು ನಾನು ನರಕಕ್ಕೆ ಹೋಗುವುದು ಉತ್ತಮವೆಂದು ಭಾವಿಸುತ್ತೇನೆ,” ಎಂದ. (ಬಾರ್ತೋಲೋಮ್‌ ಡಿ ಲಾಸ್‌ ಕ್ಯಾಸಾಸ್‌ ಎಂಬ ಲೇಖಕನ ‘ದ ಡೆವಸ್ಟೇಶನ್‌ ಆಫ್‌ ದಿ ಇಂಡೀಸ್‌’ ಗ್ರಂಥ. 54-55. ಸೀಬರಿ ಪ್ರೆಸ್‌, ನ್ಯೂಯಾರ್ಕ್, 1974).

ಸ್ಪೇನ್‌ನ ಸೈನಿಕರು, ಸಿಕ್ಕಸಿಕ್ಕಲ್ಲಿ ಮೂಲನಿವಾಸಿಗಳನ್ನು ಹಿಂಸಿಸಿ ಕೊಲ್ಲುತ್ತಿದ್ದರು. ಅತಿಯಾದ ಕ್ರೌರ್ಯದಿಂದ ಕೊಲ್ಲುವ ಆಟವಾಡುವ ಹಿಂಸಾರತಿ ಅವರದ್ದಾಗಿತ್ತು. ಅವರ ಕೈಗಳನ್ನು ನೇತಾಡುವಂತೆ ಅರ್ಧಂಬರ್ಧ ಕತ್ತರಿಸಿ ‘ನಿಮ್ಮ ನಾಯಕನಿಗೆ ಹೋಗಿ ಹೇಳು’ ಎಂದು ಓಡಿಸುತ್ತಿದ್ದರು. ಮೂಲನಿವಾಸಿಗಳ ಅಂಗಾಂಗಗಳನ್ನು ಒಂದೇ ಏಟಿಗೆ ಕತ್ತರಿಸುವ, ಅರ್ಧರ್ಧ ಕತ್ತರಿಸುವ ಅತಿಕ್ರೂರ ಆಟಗಳನ್ನು ಆಡುತ್ತಿದ್ದರು. ಮೂಲನಿವಾಸಿಗಳ ಇನ್ನೊಬ್ಬ ನಾಯಕನನ್ನು ಬಂಧಿಸಿ, ಸರಪಳಿ ಬಿಗಿದು, ಹಡಗಿನಲ್ಲಿ ಕಟ್ಟಿಹಾಕಿ ಪ್ರದರ್ಶಿಸುತ್ತ, ಉಳಿದ ಗುಲಾಮರೊಂದಿಗೆ ಸ್ಪೇನ್‌ ದೇಶಕ್ಕೆ ತೆಗೆದುಕೊಂಡು ಹೋಗಿ ತಮ್ಮ ದೇಶವಾಸಿಗಳಿಗೆ ತೋರಿಸಲೂ ಪ್ರಯತ್ನಿಸಿದರು. ಆದರೆ, ಆ ನಾಯಕ ಹಾದಿಯಲ್ಲಿಯೇ ಸತ್ತುಹೋದ. ಉಳಿದ ಅನೇಕ ನಾಯಕರನ್ನು ನೇಣು ಹಾಕಲಾಯಿತು, ಸುಟ್ಟು ಕೊಲ್ಲಲಾಯಿತು (ಪುಟ 94).

ಝುಕಾಯೋ ಎಂಬ ಹಳ್ಳಿಯ ಜನರು ಒಮ್ಮೆ ಈ ಸೈನಿಕರಿಗೆ ಹಣ್ಣುಗಳನ್ನು, ಮೀನುಗಳನ್ನು, ಮರಗೆಣಸಿನ ಹಿಟ್ಟಿನ ರೊಟ್ಟಿಗಳನ್ನು ಕೊಟ್ಟಿದ್ದರು. ಆದರೂ ನರಹತ್ಯಾ ಕ್ರೀಡೆಯು ಅಲ್ಲಿಯೂ ಮುಂದುವರಿಯಿತು. ಲ್ಯಾಸ್‌ ಕ್ಯಾಸಾಸ್‌ನು, ಈ ಸೈನಿಕರ ಕೊಲ್ಲುವ ಆಟಕ್ಕೆ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮೂಲನಿವಾಸಿಗಳು ಬಲಿಯಾದರು ಎಂದು ಅಂದಾಜು ಮಾಡಿದ್ದಾನೆ.

ಕ್ರೈಸ್ತ ಸಂತ ಡಾಮಿನಿಕನ್‌ ಎಂಬವನ ಪಂಥದ ಸೈನಿಕರ ಒಂದು ತಂಡಕ್ಕೆ ಮೂಲನಿವಾಸಿ ಬಾಣಂತಿ ಹೆಂಗಸೊಬ್ಬಳು ಸಿಕ್ಕಳು. ಮಗು ಅವಳ ಎದೆ ಹಾಲು ಇನ್ನೂ ಕುಡಿಯುತ್ತಿತ್ತು. ಹಾಗೆಯೇ ಅದನ್ನು ಕಿತ್ತುಕೊಂಡು ಹಸಿದ ತಮ್ಮ ನಾಯಿಗೆ ತಿನ್ನಲು ಜೀವಂತವಾಗಿಯೇ, ಆ ತಾಯಿಯ ಕಣ್ಣೆದುರಿಗೇ ಹಾಕಿದರು. ತಮ್ಮ ಗುಲಾಮ ಪಡೆಯ ಮಕ್ಕಳಲ್ಲಿ ಯಾವುದಾದರೂ ಮಗು ಅತ್ತರೆ, ತಕ್ಷಣವೇ ಅದನ್ನು ಕಲ್ಲುಬಂಡೆಗೆ ಬೀಸಿ ಅಪ್ಪಳಿಸಿ ಕೊಲ್ಲುತ್ತಿದ್ದರು. ಕಠಾರಿಯಿಂದ ಕಂದಮ್ಮಗಳ ಗಂಟಲನ್ನು ಸೀಳಿ ಕೊಲ್ಲುತ್ತಿದ್ದರು.

1492ರಲ್ಲಿ ಕೊಲಂಬಸ್‌ ಹಿಸ್ಪಾನಿಯೋಲ ದ್ವೀಪಕ್ಕೆ ಕಾಲಿಡುವಾಗ ಅಲ್ಲಿದ್ದ ಮೂಲನಿವಾಸಿಗಳ ಸಂಖ್ಯೆ ಸುಮಾರು ಎಂಬತ್ತು ಲಕ್ಷ. 1496ರ ಹೊತ್ತಿಗೆ ಅರ್ಧಕ್ಕರ್ಧ ಜನರು ಸತ್ತು ಹೋಗಿದ್ದರು. ಹತ್ಯಾಕಾಂಡದ ಜೊತೆಗೆ, ಈ ಕಡಲ್ಗಳ್ಳರು, ಆಕ್ರಮಣಕಾರಿಗಳು ತಮ್ಮೊಂದಿಗೆ ತಂದಿದ್ದ ಭಯಾನಕ ಅಂಟುಜಾಡ್ಯಗಳಿಂದ ಸತ್ತವರಿಗೂ ಲೆಕ್ಕವೇ ಇಲ್ಲ. ಅಂತಹ ರೋಗಗಳನ್ನೇ ಕೇಳಿರದ, ರೋಗ ಪ್ರತಿರೋಧ ಶಕ್ತಿಯೂ ಇಲ್ಲದಿದ್ದ ಆ ಮೂಲನಿವಾಸಿಗಳು ದಾರುಣ ನೋವು ಅನುಭವಿಸಿದರು, ಸಾಮೂಹಿಕವಾಗಿಯೇ ಸತ್ತುಹೋದರು.

ಡೇವಿಡ್‌ ಇ. ಸ್ಟ್ಯಾನಾರ್ಡನೆಂಬ ಲೇಖಕ ‘ಅಮೆರಿಕನ್‌ ಹೋಲೋಕಾಸ್ಟ್‌’ (ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌, 1992ರ ಪ್ರಕಟಣೆ) ಎಂಬ ಗ್ರಂಥದಲ್ಲಿ ಈ ಎಲ್ಲದರ ದಾಖಲೆ ನೀಡಿದ್ದಾನೆ. ಭಾರತದಂತಹ ದೇಶಗಳನ್ನು ಲೂಟಿ ಮಾಡಿದ, ಹಾಳು ಮಾಡಿದ ಈ ಯೂರೋಪಿಯನ್‌ ದಾಳಿಕೋರರ ಬಗ್ಗೆ ನಾವು ಒಂದಿಷ್ಟು ತಿಳಿದುಕೊಂಡಿರಬೇಕು ಎಂಬ ಕಾರಣಕ್ಕೆ ಈ ಎಲ್ಲ ಭೀಭತ್ಸ ವಿವರಗಳನ್ನು ತಿಳಿಸಬೇಕಾಯಿತು. ಬರೀ ಅಸತ್ಯ, ಅನೃತಗಳೇ ಐತಿಹಾಸಿಕ ಪಠ್ಯಗಳಾಗಿ ನಮ್ಮನ್ನು ಈವರೆಗೆ ಪ್ರಭಾವಿಸಿವೆ. ಇನ್ನಾದರೂ, ಸತ್ಯದ ಸಾಕ್ಷ್ಯಾಧಾರಗಳು ಓದುಗರಿಗೆ ದೊರೆಯಲಿ.

(ಲೇಖಕರು ಹಿರಿಯ ಸಂಪಾದಕರು, ಅಂಕಣಕಾರರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top