ಸಂಯಮ ಅರಿಯುವ ಕಾಲ: ಕೊರೊನಾ ವಿರುದ್ಧ ಒಗ್ಗೂಡಿ ಹೋರಾಡೋಣ

ಕೊರೊನಾ ವೈರಸ್‌ನಿಂದಾಗಿ ನಾವೀಗ ಒಂದು ರೀತಿಯ ಯುದ್ಧದ ಪರಿಸ್ಥಿತಿಯಲ್ಲಿದ್ದೇವೆ. ಕಣ್ಣಿಗೆ ಕಾಣುವ ವೈರಿಯ ವಿರುದ್ಧದ ಹೋರಾಟ ಸುಲಭ. ಆದರೆ, ಅದೃಶ್ಯ ವೈರಿ ವಿರುದ್ಧದ ಹೋರಾಟ ಕಷ್ಟ. ಹಾಗಂತ, ಮೈಮರೆತು ಕೂರುವಂತಿಲ್ಲ. ಇಡೀ ಮನುಕುಲಕ್ಕೆ ಕಂಟಕವಾಗುತ್ತಿರುವ ಈ ಕೊರೊನಾ ವಿರುದ್ಧ ಸರಕಾರಗಳ ಜೊತೆಗೆ ಕೈಜೋಡಿಸುತ್ತಲೇ ನಮ್ಮ ನೆಲೆಯಲ್ಲಿನಾವು ಮಾಡಬೇಕಾದ ಕರ್ತವ್ಯಗಳನ್ನು ಚಾಚೂ ತಪ್ಪದೆ ನೆರವೇರಿಸಬೇಕಿದೆ.

ಸೋಂಕು ಮತ್ತಷ್ಟು ವಿಸ್ತರಿಸದಂತೆ ನೋಡಿಕೊಳ್ಳಬೇಕಿದೆ. ಕೊರೊನಾ ವೈರಾಣು ಸೃಷ್ಟಿಸಿರುವ ಈ ಸಂದಿಗ್ಧ ಪರಿಸ್ಥಿತಿಯು ನಮ್ಮ ಶಿಸ್ತು, ಸಂಯಮ, ಸ್ವಯಂ ನಿಯಂತ್ರಣ, ಸಾಮಾಜಿಕ ಕಾಳಜಿ, ತಿಳಿವಳಿಕೆ ಅರಿಯುವ ಪರೀಕ್ಷೆಯನ್ನು ತಂದುಕೊಂಡಿದ್ದೇವೆ. ಈ ಪರೀಕ್ಷೆಯಲ್ಲಿನಾವು ಗೆಲ್ಲಬೇಕಿದೆ ಮತ್ತು ನಮ್ಮೊಂದಿಗಿರುವವರನ್ನು, ನಾವು ಇರುವ ಸಮಾಜವನ್ನೂ ಗೆಲ್ಲಿಸಬೇಕಿದೆ. ಇದಕ್ಕೆ ಇರುವ ಏಕೈಕ ಪರಿಹಾರ ಅಂದರೆ, ನಾವು ಇದ್ದಲ್ಲೇ ಇರುವ ಮೂಲಕ ರೋಗ ಹರಡುವುದನ್ನು ತಡೆಯುವುದು.

ಇದು ತುಂಬ ಸರಳವಾದ ಮಾರ್ಗ ಮತ್ತು ಸದ್ಯಕ್ಕೆ ಇಡೀ ಜಗತ್ತು ಕಂಡುಕೊಂಡಿರುವ ಪರಿಣಾಮಕಾರಿಯಾದ ಮಾರ್ಗವೂ ಹೌದು. ಸೋಂಕುಪೀಡಿತ ಬಹುತೇಕ ಎಲ್ಲರಾಷ್ಟ್ರಗಳು ಈ ಸಾಮಾಜಿಕ ಅಂತರ, ಲಾಕ್‌ಡೌನ್‌ನಂಥ ಉಪಕ್ರಮಗಳ ಮೂಲಕವೇ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಪಡುತ್ತಿವೆ. ನಾವು ಕೂಡ ಈ ಹಾದಿಯಲ್ಲಿಸಾಗಬೇಕಾದ ಅನಿವಾರ್ಯತೆ ಇದೆ. ಇದೊಂದು ಸಾರ್ವಜನಿಕ ಆರೋಗ್ಯ ತುರ್ತು ಸ್ಥಿತಿ ಎಂಬುದನ್ನು ಮರೆಯಬಾರದು.

ದೇಶದ ಮೇಲೆ ವೈರಿಗಳು ದಾಳಿ ಮಾಡಿದಾಗ ಹೇಗೆ ಎಲ್ಲರೂ ಜಾತಿ ಮತಭೇದ ಮರೆತು ಒಟ್ಟಾಗಿ ನಿಲ್ಲುತ್ತೇವೋ ಅದೇ ರೀತಿ, ಹಿಡಿತ ತಪ್ಪಿ ಮಾರಕವಾಗುವ ಹಂತಕ್ಕೆ ಹೋಗುತ್ತಿರುವ ಈ ವೈರಾಣುವನ್ನು ಮಣಿಸಲು ಏಕಚಿತ್ತರಾಗಿ ನಿಲ್ಲುವುದು ಈ ಕ್ಷಣದ ಅಗತ್ಯವಾಗಿದೆ. ಇಷ್ಟಾಗಿಯೂ ನಮ್ಮ ವರ್ತನೆಯಲ್ಲಿ ಬದಲಾವಣೆಯಾಗದಿದ್ದರೆ, ನಮ್ಮನ್ನು ನಾವು ನಿಯಂತ್ರಣ ಮಾಡಿಕೊಳ್ಳದೇ ಹೋದರೆ ಪೊಲೀಸ್‌, ಮಿಲಿಟರಿ ಬಲಪ್ರಯೋಗದಂಥ ಉಗ್ರ ಕ್ರಮಗಳು ಸರಕಾರದ ಆದ್ಯತೆಗಳಾಗಿ ಬದಲಾಗಬಹುದು. ಅದಕ್ಕೆ ಪ್ರಜ್ಞಾವಂತ ನಾಗರಿಕರಾದ ನಾವು ಅವಕಾಶ ಮಾಡಿಕೊಡುವುದು ಬೇಡ. ಈಗ ನಾವು ಕೆಲವೇ ಕೆಲವು ದಿನಗಳ ಕಾಲ ನಮ್ಮೆಲ್ಲ ಆಸಕ್ತಿ, ಹಿತಾಸಕ್ತಿಗಳನ್ನು ತ್ಯಾಗ ಮಾಡಿದರೆ ಮುಂದಿನ ದಿನಗಳು ಸದವಕಾಶದಿಂದ ಕೂಡಿರಲಿವೆ.

ಇಲ್ಲಿ ನಾವು ಗಮನಿಸಬೇಕಿರುವ ಮತ್ತೊಂದು ಸಂಗತಿ ಇದೆ. ಕೊರೊನಾ ನಿಯಂತ್ರಣಕ್ಕೆ ಇಡೀ ದೇಶ ಲಾಕ್‌ಡೌನ್‌ ಒಳಗಾದ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರ ಮಹಾ ವಲಸೆ ಆರಂಭವಾಗಿದೆ. ಮಹಾ ನಗರಗಳಿಂದ ತಮ್ಮ ಹಳ್ಳಿಗಳಿಗೆ, ಅನ್ಯ ರಾಜ್ಯಗಳಿಂದ ತಮ್ಮ ರಾಜ್ಯಗಳಿಗೆ ಸಾಮೂಹಿಕ ವಲಸೆಯನ್ನು ನಾವು ಕಾಣುತ್ತಿದ್ದೇವೆ. ಅದು ಸಹಜವೂ ಹೌದು. ಕುಟುಂಬದ ನಿರ್ವಹಣೆಗೆ ಉದ್ಯೋಗ ಅರಸಿ ಬಂದವರಿಗೆ ತುತ್ತು ಊಟವೂ ಸಿಗದಿದ್ದಾಗ ಅವರು ತಮ್ಮ ಮೂಲ ಸ್ಥಳಗಳಿಗೆ ತೆರಳುತ್ತಾರೆ. ಆದರೆ, ಹೀಗೆ ವಲಸೆ ಹೋಗುವಾಗ ಕೊರೊನಾ ವೈರಾಣು ಹರಡುವ ಸಾಧ್ಯತೆಗಳು ಇನ್ನೂ ಹೆಚ್ಚಾಗಿರುತ್ತದೆ. ಆದ್ದರಿಂದ ಕೂಲಿ ಕಾರ್ಮಿಕರು ಯಾವ ರಾಜ್ಯದಲ್ಲಿದ್ದಾರೋ ಆ ರಾಜ್ಯಗಳೇ ಈ ಕಠಿಣ ಪರಿಸ್ಥಿತಿ ಮುಗಿಯೋವರೆಗೂ ನೋಡಿಕೊಳ್ಳುವ ವ್ಯವಸ್ಥೆ ಮಾಡಬೇಕು.

ಜೊತೆಗೆ, ಇಂಥವರ ನೆರವಿಗಾಗಿಯೇ ಸರಕಾರಗಳೂ ಅನೇಕ ಸವಲತ್ತುಗಳನ್ನು ಘೋಷಣೆ ಮಾಡುತ್ತಿವೆ. ಅದರ ಪ್ರಯೋಜನ ಅವರಿಗೆ ದಕ್ಕುವಂತೆ ಮಾಡುವ ವ್ಯವಸ್ಥೆಯಾಗಬೇಕು. ಹಾಗಾದಾಗ, ಸಾಮೂಹಿಕ ವಲಸೆಯೂ ತಪ್ಪುತ್ತದೆ ಮತ್ತು ಅದರ ಜೊತೆಗೆ ವೈರಾಣು ಹರಡುವುದನ್ನು ಪರಿಣಾಮಕಾರಿಯಾಗಿ ತಡೆಯಬಹುದು. ನಾವೆಲ್ಲರೂ ಅನಗತ್ಯವಾಗಿ ಆತಂಕಕ್ಕೆ ಒಳಗಾಗುವುದು ಬೇಡ. ಈಗಾಗಲೇ ಬೇಕಾದಷ್ಟು ಕಷ್ಟಗಳ ಬಂದಿವೆ ಮತ್ತು ಅವುಗಳನ್ನು ಎದುರಿಸಿಯೂ ಆಗಿದೆ. ಹಾಗಾಗಿ, ಇದಕ್ಕಿಂತ ಹೆಚ್ಚು ಕಷ್ಟ ಬರಲಾರದು. ಜೀವವೊಂದು ಉಳಿದರೆ ಮುಂದಿನ ದಿನಗಳನ್ನು ನಾವು ನಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬಹುದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top