ಯೂರಿಯಾಗೆ ಹಾಹಾಕಾರ

ಹಲವು ಜಿಲ್ಲೆಗಳಲ್ಲಿ ರಸಗೊಬ್ಬರ ಸಿಗದೆ ರೈತರು ಕಂಗಾಲು
ಅಗತ್ಯಕ್ಕಿಂತ ಹೆಚ್ಚು ಪೂರೈಕೆ ಎನ್ನುವ ಸರಕಾರ | ಅಂಗಡಿಗಳಲ್ಲಿನೋ ಸ್ಟಾಕ್.‌

ಮಲ್ಲಪ್ಪ ಸಂಕೀನ್‌, ಯಾದಗಿರಿ.

ಜಗನ್ನಾಥ್‌ ದೇಸಾಯಿ, ರಾಯಚೂರು.

ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಯೂರಿಯಾ ರಸಗೊಬ್ಬರ ಸಿಗದೆ ರೈತರು ಕಂಗಾಲಾಗಿದ್ದಾರೆ.

ಉತ್ತಮ ಮಳೆಯಾಗಿದ್ದರಿಂದ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ಅನ್ನದಾತರಿಗೆ ಗೊಬ್ಬರದ ಅಲಭ್ಯತೆ ಆತಂಕ ಮೂಡಿಸಿದೆ. ಜಿಲ್ಲೆಗಳಿಗೆ ಹಂಚಿಕೆ ಕಡಿತ, ನಿಧಾನಗತಿಯ ಪೂರೈಕೆಯಿಂದ ತೊಂದರೆಯಾಗಿದೆ ಎನ್ನುವುದು ರೈತರ ಆರೋಪ. ಆದರೆ, ಸರಕಾರ ಮಾತ್ರ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ರಸಗೊಬ್ಬರ ಪೂರೈಸಲಾಗಿದೆ ಎನ್ನುತ್ತಿದೆ. ಅಷ್ಟಾದರೂ ಅಂಗಡಿಗಳಲ್ಲಿ ‘ನೋ ಸ್ಟಾಕ್‌’ ಬೋರ್ಡ್‌ಗಳೇ ರಾರಾಜಿಸುತ್ತಿವೆ.

ಮೆಕ್ಕೆಜೋಳ, ಹತ್ತಿ, ತೊಗರಿ, ಭತ್ತ, ಶೇಂಗಾ ಸೇರಿದಂತೆ ಹಲವು ಬೆಳೆಗಳು ಬಿತ್ತನೆಯಾಗಿ ಫಸಲು ನಳನಳಿಸುತ್ತಿದೆ. ಈ ಹಂತದಲ್ಲಿ ಅವು ಚೆನ್ನಾಗಿ ಬೆಳೆಯಲು ಯೂರಿಯಾದ ಅಗತ್ಯವಿದೆ.

ಜತೆಗೆ ವಿಪರೀತ ಮಳೆಯಿಂದ ಉಂಟಾಗಿರುವ ಶೀತದಿಂದ ಬೆಳೆಗಳಿಗೆ ರಕ್ಷಣೆ ನೀಡುವುದಕ್ಕೂ ಯೂರಿಯಾದ ಅಗತ್ಯವಿದೆ. ಆದರೆ, ಇದೇ ಸಮಯದಲ್ಲಿ ರಸಗೊಬ್ಬರ ಕೈಗೆ ಸಿಗುತ್ತಿಲ್ಲ. ಎರಡು ವಾರದಿಂದಲೇ ಯೂರಿಯಾ ಸಮಸ್ಯೆ ತಲೆದೋರಿದೆ. ಇನ್ನು ಕೆಲವೇ ದಿನ ಬೆಳೆ ಕುಂಠಿತಗೊಂಡು ಇಳುವರಿ ಕಡಿಮೆಯಾಗುವ ಅಪಾಯವಿದೆ.

ಅಲೆದಾಡಿದರೂ ಸಿಗುತ್ತಿಲ್ಲ: ಆರಂಭಿಕ ಹಂತದಲ್ಲಿ ಯೂರಿಯಾದ ಕಾಳಸಂತೆ ಮಾರಾಟ ಸದ್ದು ಮಾಡಿತ್ತು. ಆದರೆ, ಬಳಿಕ ಹೆಚ್ಚು ದುಡ್ಡು ಕೊಡುತ್ತೇವೆ ಎಂದರೂ ರಸಗೊಬ್ಬರ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ಕಡೆಗಳಲ್ಲಿ ಅಂಗಡಿಗಳಿಗೆ ಬರುವ ರಸಗೊಬ್ಬರ ಕೆಲವೇ ಗಂಟೆಗಳಲ್ಲಿ ಖಾಲಿಯಾಗುತ್ತಿದೆ. ಜನ ಕ್ಯೂನಲ್ಲಿ ನಿಂತು ನಿಂತು ಬೇಸತ್ತಿದ್ದಾರೆ. ಹಲವೆಡೆ ಪ್ರತಿಭಟನೆಗಳು ನಡೆದಿವೆ.

ಹೆಚ್ಚುವರಿ ಗೊಬ್ಬರ ಬಂದಿದೆ: ಕೃಷಿ ಇಲಾಖೆಯ ಅಧಿಕಾರಿಗಳ ಪ್ರಕಾರ, 2020-21ರ ಮುಂಗಾರು ಹಂಗಾಮಿಗೆ 22.10 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ಅಗತ್ಯ ಇದೆ. ಈ ವರ್ಷ ಹೆಚ್ಚುವರಿಯಾಗಿ 1.20 ಲಕ್ಷ ಟನ್‌ ಯೂರಿಯಾ ರಾಜ್ಯಕ್ಕೆ ಬಂದಿದೆ.
——————–
ಕೊರತೆಗೆ ಕಾರಣಗಳೇನು?

-ಹಂಚಿಕೆಯಲ್ಲಿ ಕಡಿತ ಮತ್ತು ನಿಧಾನಗತಿಯ ಪೂರೈಕೆ ಎಂಬ ದೂರು
-ಮಂಗಳೂರಿನ ಎಂಸಿಎಫ್‌ನಲ್ಲಿ ಯೂರಿಯಾ ಇದ್ದರೂ ಉಡುಪಿಗೇ ಸಪ್ಲೈ ಸಮಸ್ಯೆ
– 265 ರೂ.ನ 1 ಚೀಲ ಯೂರಿಯಾ ಕಾಳಸಂತೆಯಲ್ಲಿ 350-550 ರೂ.ಗೆ ಸೇಲ್‌
-ಎಕರೆಗೆ 3 ಚೀಲ ಸಾಕು ಎಂದು ಹೇಳಿದ್ದರೂ ಕೆಲವು ರೈತರಿಂದ ವಿಪರೀತ ಬಳಕೆ
——————–

ಬೇಡಿಕೆಯೂ ತೀವ್ರ ಹೆಚ್ಚಳ
ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚಿನವರು ಹಳ್ಳಿಗಳಿಗೆ ಮರಳಿರುವುದರಿಂದ ಕೃಷಿ ಚಟುವಟಿಕೆ ಹೆಚ್ಚಿದೆ. ಬೆಳೆ ಬೆಳೆಯುವ ಪ್ರದೇಶ ವಿಸ್ತಾರಗೊಂಡಿರುವುದರಿಂದ ಯೂರಿಯಾಗೆ ಬೇಡಿಕೆ ಹೆಚ್ಚಿದೆ. ಜತೆಗೆ ಉತ್ತಮ ಮಳೆಯಿಂದ ಫಸಲೂ ಚೆನ್ನಾಗಿದೆ.
——————–

ಅಗತ್ಯಕ್ಕಿಂತ ಹೆಚ್ಚು ಯೂರಿಯಾ ಬಳಕೆ
ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಬಿತ್ತನೆಯೂ ಹೆಚ್ಚಾಗಿದೆ. ರೈತರು ಅಗತ್ಯಕ್ಕಿಂತ ಹೆಚ್ಚು ಯೂರಿಯಾ ಬಳಸುತ್ತಿರುವುದರಿಂದ ಬೇಡಿಕೆ ಹೆಚ್ಚಾಗುತ್ತಿದೆ. ಈಗಾಗಲೇ ಅಗತ್ಯಕ್ಕಿಂತ ಹೆಚ್ಚು ಪೂರೈಸಲಾಗಿದೆ. ಆದರೂ ಬೇಡಿಕೆ ಕಾರಣಕ್ಕೆ ಇನ್ನೂ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಧಾನಿ ಮೋದಿ ಮನವಿ ಮಾಡಿದಂತೆ ಮೂರು ಚೀಲಕ್ಕಿಂತ ಹೆಚ್ಚು ಬಳಸಬೇಡಿ. ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿರುವೆ.
-ಬಿ.ಸಿ.ಪಾಟೀಲ್‌, ಕೃಷಿ ಸಚಿವ
+++++++++++++++++++

ರಸಗೊಬ್ಬರ ಕೊರತೆ ಇಲ್ಲ
ದೇಶದ ಪ್ರತಿ ರಾಜ್ಯಗಳಿಗೆ ಬೇಡಿಕೆಗಿಂತ ಹೆಚ್ಚೇ ರಸಗೊಬ್ಬರವನ್ನು ಪೂರೈಸಲಾಗಿದೆ. ಪೂರೈಕೆಯಲ್ಲಿ ಯಾವುದೇ ಕೊರತೆ ಆಗಿಲ್ಲ. ಆದರೆ ಕೆಲವೊಂದು ಕಡೆಗಳಲ್ಲಿ ದಾಸ್ತಾನು ಇಟ್ಟು ಕೃತಕ ಅಭಾವ ಸೃಷ್ಟಿ ಮಾಡಿರುವ ಸಾಧ್ಯತೆ ಇರುವುದರಿಂದ ಈ ರೀತಿಯ ಕೊರತೆ ಕಂಡು ಬಂದಿರಬಹುದು. ಇದರ ಬಗ್ಗೆ ರಾಜ್ಯ ಸರಕಾರದ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು.
-ಡಿ.ವಿ.ಸದಾನಂದ ಗೌಡ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top