ಕೃಷಿಕರಿಗೆ ಬೇಡ ಆತಂಕ – ಉಳ್ಳವರಿಗಲ್ಲ, ಉಳುವವರಿಗೆ ಭೂಮಿ


ಕೃಷಿಕರಿಗೆ ಬೇಡ ಆತಂಕ – ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭರವಸೆ.

– ರಾಘವೇಂದ್ರ ಭಟ್, ಬೆಂಗಳೂರು.
‘‘ನೆರೆಯ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಇಂಥ ಕಾಯಿದೆ ಅಸ್ತಿತ್ವದಲ್ಲೇ ಇಲ್ಲ. ಆದರೆ ಅಲ್ಲಿ ಕೃಷಿ ಭೂಮಿ ಹಾಗೂ ಕೃಷಿಕರು ಇದ್ದಾರೆ. ಮಿತಿ ಸಡಿಲಿಕೆಯಿಂದ ಕೃಷಿ ಭೂಮಿ ಕಾರ್ಪೋರೇಟ್ ಕುಳಗಳ ಪಾಲಾಗುತ್ತದೆ ಎಂಬ ವಾದದಲ್ಲಿ ಅರ್ಥವೇ ಇಲ್ಲ. ನಾವು ಕೃಷಿ ಭೂಮಿ ಖರೀದಿಸುವುದಕ್ಕೆ ಇದ್ದ ಆರ್ಥಿಕ ಮಿತಿ ರದ್ದುಗೊಳಿಸಿದ್ದೇವೆಯೇ ಹೊರತು ಮಿತಿ ಮೀರಿ ಖರೀದಿಸುವುದಕ್ಕೆ ಅವಕಾಶ ನೀಡಿಲ್ಲ. ಒಂದು ಕುಟುಂಬ 108 ಎಕರೆ ಮೇಲ್ಪಟ್ಟು ಕೃಷಿ ಭೂಮಿ ಖರೀದಿಗೆ ಅವಕಾಶವಿಲ್ಲ. ಹೀಗಾಗಿ ಬಿಜೆಪಿ ಸರಕಾರ ರೈತರಿಗೆ ಅನ್ಯಾಯ ಮಾಡಲು ಹೊರಟಿದೆ ಎಂಬ ವಾದದಲ್ಲಿ ಹುರುಳಿಲ್ಲ….’’ ಭೂ ಸುಧಾರಣಾ ಕಾಯಿದೆ ತಿದ್ದುಪಡಿ ವಿಚಾರಕ್ಕೆ ಸಂಬಂಧಪಟ್ಟಂತೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ವ್ಯಾಖ್ಯಾನವಿದು.
‘ವಿಜಯ ಕರ್ನಾಟಕ’ಕ್ಕೆ ನೀಡಿದ ಸಂದರ್ಶನದಲ್ಲಿ ಎಲ್ಲ ವಿವಾದಗಳಿಗೆ ಸ್ಪಷ್ಟನೆ ನೀಡಿರುವ ಅವರು, ಕಪೋಲ ಕಲ್ಪಿತ ವಿಶ್ಲೇಷಣೆಗಳಿಗೆ ರೈತರು ವಿಚಲಿತರಾಗಬಾರದು. ಇದರಿಂದ ಕೃಷಿ ಭೂಮಿ ರಿಯಲ್ ಎಸ್ಟೇಟ್ ಪಾಲಾಗುತ್ತದೆ ಎಂಬ ತರ್ಕದಲ್ಲಿ ಹುರುಳಿಲ್ಲ ಎಂದು ಹೇಳಿದ್ದಾರೆ.

– ಭೂ ತಿದ್ದುಪಡಿಯನ್ನು ಯಾವ ಉದ್ದೇಶಕ್ಕೆ ಜಾರಿಗೆ ತರುತ್ತಿದ್ದೀರಿ?
– ಇದು ಐತಿಹಾಸಿಕ ಹಾಗೂ ಕ್ರಾಂತಿಕಾರಕ ನಿರ್ಧಾರ. ದೃಢಶಕ್ತಿ ಇದ್ದರೆ ಮಾತ್ರ ಇಂಥ ಕ್ರಮ ತೆಗೆದುಕೊಳ್ಳುವುದಕ್ಕೆ ಸಾಧ್ಯ. ಕೈಗಾರಿಕಾ ಸಚಿವನಾಗಿ ನಾನು ಸ್ವಾಗತಿಸುತ್ತೇನೆ. ದಾವೋಸ್ ಶೃಂಗಕ್ಕೆ ರಾಜ್ಯದ ನಿಯೋಗ ತೆರಳಿದ್ದಾಗ ಪ್ರತಿಯೊಬ್ಬ ಕೈಗಾರಿಕೋದ್ಯಮಿಯೂ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್‌ಗೆ ಈ ಮಿತಿ ಅಡ್ಡಿಯಾಗುತ್ತಿತ್ತು. ಸೆಕ್ಷನ್ 109ರ ಪ್ರಕಾರ ರಾಜ್ಯಮಟ್ಟದ ಸಮಿತಿಯ ಒಪ್ಪಿಗೆ ಪಡೆಯಬೇಕಿತ್ತು. ಕೆಐಎಡಿಬಿ ಮೂಲಕ ಅರ್ಜಿ ಸಲ್ಲಿಸಿದರೆ ಬೇಗ ಜಾಗ ಲಭ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಭೂಸುಧಾರಣಾ ಕಾಯಿದೆ ಸೆಕ್ಷನ್ 79 ಎ, ಬಿ, ಸಿ ಹಾಗೂ 80ಕ್ಕೆ ತಿದ್ದುಪಡಿ ತಂದಿದೆ. ಕೃಷಿಕರಿಗೆ ಯಾವುದೇ ತೊಂದರೆ ಇಲ್ಲ. ಕೃಷಿ ಭೂಮಿ ಕಸಿದುಕೊಳ್ಳುವ ಪ್ರಶ್ನೆ ಇಲ್ಲ.

– ಭೂ ಸುಧಾರಣಾ ಕಾಯಿದೆ ಆಶಯಕ್ಕೆ ಧಕ್ಕೆಯಾಗುತ್ತದೆ ಎಂಬ ಆತಂಕ ಎದುರಾಗಿದೆಯಲ್ಲ?
– ದೇವರಾಜ ಅರಸು ಜಾರಿಗೆ ತಂದ ಭೂ ಸುಧಾರಣಾ ಕಾಯಿದೆ ಆಶಯ ಈಗಾಗಲೇ ಈಡೇರಿದೆ. ಉಳುವವನೇ ಹೊಲದೊಡೆಯ ಕಾಯಿದೆ ಅನ್ವಯ 6 ಲಕ್ಷ ರೈತರು ರಾಜ್ಯದಲ್ಲಿಭೂ ಒಡೆಯರಾಗಿದ್ದಾರೆ. ಆದರೆ ಸೆಕ್ಷನ್ 79 ಎ, ಬಿ, ಸಿ ವಿಚಾರ ಬೇರೆ ಇದೆ. ಈ ಕಾಯಿದೆ ಅಸ್ತಿತ್ವದಲ್ಲಿದ್ದರೂ ಉಲ್ಲಂಘನೆ ತಡೆಯುವುದಕ್ಕೆ ಸಾಧ್ಯವಾಗಿಲ್ಲ. ಇದು ಜಾರಿಗೆ ಬಂದ ದಿನದಿಂದ ಸುಮಾರು 1. 80 ಲಕ್ಷ ಎಕರೆಯಷ್ಟು ಭೂ ಖರೀದಿಯಲ್ಲಿ ಶಾಸನ ವಿಧಿಸಿದ ಮಿತಿ ಮೀರಲಾಗಿದೆ. ನಿಯಮ ಮೀರಿ ಕೃಷಿ ಭೂಮಿ ಖರೀದಿ ಮಾಡಲಾಗಿದೆ ಎಂದು ಕಂದಾಯ ಇಲಾಖೆ ನೋಟಿಸ್ ನೀಡಿದ್ದರೂ ಪ್ರಯೋಜನವಾಗಿಲ್ಲ. ಕೇವಲ 53 ಎಕರೆ ವಿಚಾರದಲ್ಲಿ ಮಾತ್ರ ಕಾನೂನು ಕ್ರಮ ತೆಗೆದುಕೊಳ್ಳಲಾಗಿತ್ತು. ಆದರೆ, ಆ ಪ್ರಕರಣಗಳೂ ನ್ಯಾಯಾಲಯದಲ್ಲಿ ಬಿದ್ದು ಹೋಗಿವೆ. 1 ಎಕರೆಯಷ್ಟು ಜಾಗವನ್ನೂ ವಶಕ್ಕೆ ತೆಗೆದುಕೊಳ್ಳುವುದಕ್ಕೆ ಸರಕಾರಕ್ಕೆ ಸಾಧ್ಯವಾಗಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ಕಾಯಿದೆಯ ಈ ಅಂಶವನ್ನು ಕಿರುಕುಳಕ್ಕೆ ಬಳಸಿಕೊಂಡಿದ್ದಾರೆ. ನಗರ ಪ್ರದೇಶದಲ್ಲಿ ಪರಿವರ್ತನೆಯಾದ 14 ಗುಂಟೆಯಷ್ಟು ಭೂಮಿ ಖರೀದಿಗೆ ಮಾತ್ರ ಹಿಂದೆ ಅವಕಾಶವಿತ್ತು. ಈಗ ಆ ನಿಯಮ ತಿದ್ದುಪಡಿಯಾಗಿದೆ. ಆದರೆ ಹಣವಂತರು ಸಾವಿರಾರು ಎಕರೆ ಖರೀದಿ ಮಾಡಬಹುದೆಂಬ ಆತಂಕ ನಿಜವಾಗಿಲ್ಲ.

– ಕೃಷಿ ಭೂಮಿ ರಿಯಲ್ ಎಸ್ಟೇಟ್‌ಗೆ ಬಳಕೆಯಾಗಬಹುದಲ್ಲವೇ?
– ಇದೊಂದು ಹುಸಿ ಆತಂಕ. ಕಾನೂನು ತಿದ್ದುಪಡಿಯಾದರೂ ಖರೀದಿ ಪ್ರಮಾಣಕ್ಕೆ ಮಿತಿ ಇದೆ. 108 ಎಕರೆಯಷ್ಟು ಭೂಮಿಯನ್ನು ಮಾತ್ರ ಒಂದು ಕುಟುಂಬ ಖರೀದಿ ಮಾಡಬಹುದು. ಬಂಡವಾಳಶಾಹಿಗಳು, ಕಾರ್ಪೊರೇಟ್ ಸಂಸ್ಥೆಗಳ ಬಳಿ ಹಣ ಇದೆ ಎಂಬ ಕಾರಣಕ್ಕೆ ಸಾವಿರಾರು ಎಕರೆ ಖರೀದಿ ಮಾಡುವುದಕ್ಕೆ ಸಾಧ್ಯವಿಲ್ಲ. ಅಷ್ಟಕ್ಕೂ ಭೂಮಿ ಮಾರಾಟ ಮಾಡುವುದು ರೈತನಿಗೆ ಸಂಬಂಧಪಟ್ಟಿದ್ದು. ಯಾರೂ ಮಾರಾಟಕ್ಕೆ ಬಲವಂತ ಮಾಡುವುದಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಕೃಷಿ ಕ್ಷೇತ್ರದತ್ತ ಹಲವಾರು ಜನರು ದೃಷ್ಟಿ ಹರಿಸುತ್ತಾರೆ. ಅನೇಕ ವೃತ್ತಿಪರರು ಆಧುನಿಕ ವಿಧಾನದಲ್ಲಿ ಕೃಷಿ ನಡೆಸಲು ಮುಂದೆ ಬರುತ್ತಿದ್ದಾರೆ. ಆದರೆ 25 ಲಕ್ಷ ರೂ. ಆದಾಯ ಮಿತಿ ಇದ್ದುದರಿಂದ ಭೂಮಿ ಖರೀದಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ.

– ಕೆಐಎಡಿಬಿ, ಲ್ಯಾಂಡ್ ಬ್ಯಾಂಕ್‌ಗಳಲ್ಲಿ ಸಾಕಷ್ಟು ಭೂಮಿ ಲಭ್ಯವಿದೆ. ಅದು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಆದಾಗಿಯೂ ನೇರ ಖರೀದಿ ಔಚಿತ್ಯವೇನು ?
– ರಾಜ್ಯದಲ್ಲಿ ಕೆಐಎಡಿಬಿ ಕಾಯಿದೆ ಜಾರಿಗೆ ಬಂದ ನಂತರ ಇದುವರೆಗೆ ಸ್ವಾಧೀನ ಪಡಿಸಿಕೊಂಡ ಜಾಗದ ಪ್ರಮಾಣ ಒಟ್ಟು ಕೃಷಿ ಭೂಮಿಯ ಶೇ.2ರಷ್ಟು ಇಲ್ಲ. 178 ಕೈಗಾರಿಕಾ ಪ್ರದೇಶಾಭಿವೃದ್ಧಿ ಕ್ಷೇತ್ರಗಳಿಗೆ 64420 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದರಲ್ಲಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶ 14392 ಎಕರೆ ಸೇರಿದೆ. ಅದೇ ರೀತಿ ಭೂ ಸ್ವಾಧೀನ ಹಾಗೂ ಹಂಚಿಕೆ ಏಕಗವಾಕ್ಷಿ ಯೋಜನೆ ಪ್ರಕಾರ 483 ಕೈಗಾರಿಕಾ ಯುನಿಟ್‌ಗಳಿಗಾಗಿ 50,500 ಎಕರೆ ವಶಪಡಿಸಿಕೊಳ್ಳಲಾಗಿದೆ. ಕೈಗಾರಿಕಾ ಉದ್ದೇಶಕ್ಕೆ ಕೃಷಿ ಭೂಮಿ ದುರ್ಬಳಕೆಯಾಗುತ್ತದೆ ಎಂಬ ಆತಂಕದಲ್ಲಿ ಹುರುಳಿಲ್ಲ.

– ಕೈಗಾರಿಕೆಗೆ ಯಾವ ರೀತಿ ಅನುಕೂಲವಾಗುತ್ತದೆ?
– ಎಂಎಸ್ಎಂಇಗಳಿಗೆ ಇದರಿಂದ ಹೆಚ್ಚು ಅನುಕೂಲವಾಗುತ್ತದೆ. ಕೆಐಎಡಿಬಿ ಮೂಲಕ ಭೂಮಿ ಪಡೆಯಲು ಅವಕಾಶವಿದೆಯಾದರೂ ರೈತರಿಂದ ನೇರವಾಗಿ ಖರೀದಿಸಿದರೆ ಪ್ರಕ್ರಿಯೆ ಬೇಗ ಮುಕ್ತಾಯವಾಗುತ್ತದೆ. 5ರಿಂದ 100 ಎಕರೆ ವರೆಗಿನ ಅಗತ್ಯತೆಯನ್ನು ಬೇಗ ಪೂರೈಸುವುದಕ್ಕೆ ಅವಕಾಶವಿದೆ.

ಉಳ್ಳವರಿಗಲ್ಲ, ಉಳುವವರಿಗೆ ಭೂಮಿ – ರಾಜ್ಯದ ರೈತರಿಗೆ ಅಭಯ ನೀಡಿದ ಕಂದಾಯ ಸಚಿವ ಆರ್.ಅಶೋಕ್.

ಎಂ.ಎನ್. ಗುರುಮೂರ್ತಿ, ಬೆಂಗಳೂರು
ಹತ್ತು ಹಲವು ಕಾರಣಗಳಿಂದ ಕೃಷಿ ಕಡೆಗೆ ಮುಖ ಮಾಡುತ್ತಿರುವ ಹಾಗೂ ಆಧುನಿಕ ಕೃಷಿಯಲ್ಲಿ ಆಸಕ್ತಿ ತೋರುತ್ತಿರುವ ವಿದ್ಯಾವಂತ ಯುವ ಜನಾಂಗಕ್ಕೆ ಕೃಷಿ ಭೂಮಿ ಲಭ್ಯವಾಗಬೇಕು, ಕೃಷಿ ಭೂಮಿಗೆ ಸೂಕ್ತ ಬೆಲೆ ಸಿಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕೃಷಿ ಮತ್ತು ಕೃಷಿ ಸಂಬಂಧಿತ ಕೈಗಾರಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಭೂ ಸುಧಾರಣಾ ಕಾಯಿದೆ ತಿದ್ದುಪಡಿಗೆ ರಾಜ್ಯ ಸರಕಾರ ನಿರ್ಧರಿಸಿದೆ. ಇದು ಉಳ್ಳವರಿಗಲ್ಲ, ಉಳುವವರಿಗೆ ಭೂಮಿ ಸಿಗಬೇಕು ಎಂಬುದೇ ಮೂಲ ಆಶಯ’ ಎಂದು ಕಂದಾಯ ಸಚಿವ ಆರ್.ಅಶೋಕ್ ಅಭಿಪ್ರಾಯಪಟ್ಟಿದ್ದಾರೆ. ಸಚಿವರ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

– ಕೃಷಿ ಭೂಮಿ ಖರೀದಿಗೆ ಇದ್ದ ಕೆಲವು ಷರತ್ತುಗಳನ್ನು ದಿಢೀರನೇ ರದ್ದುಪಡಿಸಲು ಮುಂದಾಗಿದ್ದೇಕೆ?
– ಕಾಲ ಬದಲಾದಂತೆ ಕಾಯಿದೆ, ಕಾನೂನುಗಳು ಬದಲಾಗಬೇಕಿದೆ. 45 ವರ್ಷಗಳ ಹಿಂದಿನ ಕಾಯಿದೆಗೆ 2 ಸಲ ತಿದ್ದುಪಡಿ ತರಲಾಗಿದೆ. ಇಂದಿನ ಅಗತ್ಯಕ್ಕೆ ತಕ್ಕಂತೆ ಸರಕಾರ ತೀರ್ಮಾನ ಕೈಗೊಂಡಿದೆ. ಇದು ದಿಢೀರ್ ತೀರ್ಮಾನವಲ್ಲ. ಕೃಷಿ-ಕೈಗಾರಿಕೆಗಳು ಎರಡು ಒಟ್ಟೊಟ್ಟಿಗೆ ಹೋದರೆ ರಾಜ್ಯದ ಅಭಿವೃದ್ಧಿ ಸಾಧ್ಯ. ಕೃಷಿ ಮತ್ತು ಕೃಷಿ ಸಂಸ್ಕೃರಣಾ ಘಟಕಗಳು ಗ್ರಾಮೀಣ ಪ್ರದೇಶದಲ್ಲೂ ಬರಬೇಕು, ಇದರಿಂದ ಕೃಷಿ ಭೂಮಿ ಹಾಗೂ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯುತ್ತದೆ. ಕೃಷಿ ಉತ್ಪನ್ನಗಳ ರಫ್ತು ಪ್ರಮಾಣವೂ ಹೆಚ್ಚಾಗುತ್ತದೆ, ಇದರಿಂದ ರೈತರಿಗೆ ಅನುಕೂಲ ಆಗಲಿದೆ. ಕೃಷಿಗೆ ತಂತ್ರಜ್ಞಾನ, ಬಂಡವಾಳ, ವಿದ್ಯಾವಂತರು ಬರಬೇಕಿದೆ. ಅಂದಾಜು 22 ಲಕ್ಷ ಎಕರೆ ಕೃಷಿ ಭೂಮಿ ಉಳುಮೆ ಮಾಡದೇ ಪಾಳು ಬಿದ್ದಿದೆ. ಈ ಭೂಮಿಗೆ ಯೋಗ್ಯ ಬೆಲೆ ಸಿಗಬಹುದು.

– ಕೃಷಿ ಭೂಮಿ ಬೇಡಿಕೆ ಸಂಬಂಧ ಸಮೀಕ್ಷೆ ನಡೆದಿದೆಯಾ?
– ಸಮೀಕ್ಷೆ ನಡೆಸಿಲ್ಲ. ಮಾಹಿತಿ ಸಂಗ್ರಹಿಸಿದ್ದೇವೆ. ಕೆಲವು ಐಟಿ ಉದ್ಯೋಗಿಗಳಲ್ಲಿ ವ್ಯವಸಾಯದ ಕ್ರೇಜ್ ಇದೆ. ಬಹಳಷ್ಟು ಜನ ಇಸ್ರೇಲ್, ತೈವಾನ್ ಮಾದರಿ ಕೃಷಿ ಜತೆಗೆ ಪಶುಸಂಗೋಪನೆಗೆ ಆಕರ್ಷಿತರಾಗಿದ್ದಾರೆ. ವಾರ್ಷಿಕ 3-4 ಲಕ್ಷ ಕೃಷಿ ಪದವೀಧರರು ಹೊರ ಬರುತ್ತಿದ್ದಾರೆ. ಅವರಲ್ಲಿಶೇ. 5ರಷ್ಟು ಮಂದಿಗೂ ಸರಕಾರಿ ಕೆಲಸ ಸಿಗುವುದಿಲ್ಲ. ಉಳಿದವರು ಸಹಜವಾಗಿಯೇ ಕೃಷಿ ಕಡೆ ಬರುತ್ತಿದ್ದಾರೆ.

– ಇದು ‘ರೈತ ವಿರೋಧಿ’ ತಿದ್ದುಪಡಿ ಎಂದು ಪ್ರತಿಪಕ್ಷಗಳು, ರೈತ ಸಂಘಟನೆಗಳು ಟೀಕಿಸುತ್ತಿರುವುದು ಏಕೆ?
– ಈಗ ಇದು ರೈತ ವಿರೋಧಿ ಎಂದು ಟೀಕಿಸುವವರು 2 ಸಲ ತಿದ್ದುಪಡಿ ಏಕೆ ತಂದರು? ಅವರ ತಿದ್ದುಪಡಿ ರೈತರ ಪರವೇ? ಪ್ರತಿಪಕ್ಷ ಗಳು ವಿರೋಧಕ್ಕಾಗಿಯೇ ವಿರೋಧಿಸಬಾರದು. ಕೆಲವು ಕಾಂಗ್ರೆಸ್ ನಾಯಕರೂ ಸ್ವಾಗತಿಸಿದ್ದಾರೆ, ರೈತ ಮುಖಂಡರ ಜತೆಗೂ ಮಾತನಾಡುತ್ತಿದ್ದೇನೆ. ಕೃಷಿಗೆ ಬಳಸುವ ಟ್ರ್ಯಾಕ್ಟರ್, ಫಸಲು ಕಟಾವು ಯಂತ್ರಗಳು, ಆಹಾರ ಸಂಸ್ಕರಣ ಘಟಕಗಳು, ಕೋಲ್ಡ್ ಸ್ಟೊರೇಜ್, ಗೋದಾಮುಗಳು ಇವೆಲ್ಲಾ ಒಂದು ರೀತಿ ಕೈಗಾರಿಕೆಗಳೇ.

– ಸಣ್ಣ ಮತ್ತು ಅತಿ ಸಣ್ಣ ರೈತರು ಹಣದ ಆಸೆ ಮತ್ತಿತರ ಕಾರಣಗಳಿಗೆ ಕೃಷಿ ಭೂಮಿ ಮಾರಾಟ ಮಾಡಿದರೆ ಭೂ ರಹಿತರಾಗುವುದಿಲ್ಲವೇ?
– ಕಾಯಿದೆ ಇದ್ದರೂ ರಾಜ್ಯದಲ್ಲಿ ಪ್ರತಿ ವರ್ಷ ಲಕ್ಷಾಂತರ ಎಕರೆ ಕೃಷಿ ಭೂಮಿ ಮಾರಾಟ ಆಗುತ್ತಿಲ್ಲವೇ? ಇದನ್ನು ತಡೆಯಲು ಆಗಿದೆಯಾ? ಕಾಯಿದೆ ಉಲ್ಲಂಘಿಸಿ ಖರೀದಿ ಆಗಿರುವ 1.83 ಲಕ್ಷ ಎಕರೆ ಪ್ರಕರಣಗಳಲ್ಲಿ ನೋಟಿಸ್ ಕೊಡಲಾಗಿದೆ. ಹತ್ತಾರು ವರ್ಷ ವಿಚಾರಣೆ ನಡೆದರೂ ಫಲಿತಾಂಶ ಶೂನ್ಯ. ಈ ಕಾಯಿದೆ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ; ಉಪಯೋಗವೂ ಆಗಿಲ್ಲ. ಇದುವರೆಗೆ ಎಷ್ಟು ಭೂಮಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ? ಎಸಿ ಕಚೇರಿಗಳಲ್ಲಿ ಹಣ ಲೂಟಿಗೆ ಮಾತ್ರ ಈ ಕಾಯಿದೆ ಬಳಕೆಯಾಗಿದೆ. ಜನರಿಗೆ ಕಿರುಕುಳ ಕೊಡಲು ಈ ಕಾಯಿದೆ ಬೇಕಾ? ಹೈಕೋರ್ಟ್ ಸಹ 4 ಸಲ ಈ ಕಾಯಿದೆ ಸರಳೀಕರಣ ಮಾಡುವಂತೆ ಸರಕಾರಕ್ಕೆ ನಿರ್ದೇಶನ ನೀಡಿದೆ.

– ಈ ರೀತಿ ಮುಕ್ತ ಅವಕಾಶದಿಂದ ಕೃಷಿ ಭೂಮಿ ಒಂದೇ ಕಡೆ ಹೋಲ್ಡಿಂಗ್ ಆಗುವುದಿಲ್ಲವೇ?
– ಎಲ್ಲರಿಗೂ ಭೂಮಿ ಖರೀದಿಸುವ ಶಕ್ತಿ ಇರುವುದಿಲ್ಲ. ಕೃಷಿ ಆಸಕ್ತಿ/ ಶಕ್ತಿ ಉಳ್ಳವರು ಕೃಷಿ ಭೂಮಿ ಖರೀದಿಸುತ್ತಾರೆ, ಯಾರೂ ಇಂದಿನ ಬೆಲೆಧಿಯಲ್ಲಿನೂರಾರು ಎಕರೆ ಕೃಷಿ ಭೂಮಿ ಖರೀದಿಸಿ, ಪಾಳು ಬಿಡುವುದಿಲ್ಲ. ಅಗತ್ಯವಿದ್ದವರು ಮಾತ್ರ ಖರೀದಿಸುವ ಸಾಧ್ಯತೆ ಇದೆ. ಕೃಷಿ ಭೂಮಿ ಖರೀದಿಗೆ 108 ಎಕರೆ ಮಿತಿ ಇರುವುದರಿಂದ ಹೋಲ್ಡಿಂಗ್ ಸಾಧ್ಯವಿಲ್ಲ.

– ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದಂತೆ ಈ ಕಾಯಿದೆಗೂ ತಿದ್ದುಪಡಿಗೂ ಕೇಂದ್ರದ ಒತ್ತಡವಿದೆಯೇ?
– ಕೃಷಿ ಕ್ಷೇತ್ರಕ್ಕೆ ವಿದ್ಯಾವಂತರು, ಹೂಡಿಕೆದಾರರು, ಕೃಷಿ ಭೂಮಿ ಉಳುಮೆ ಮಾಡುವವರು ಬರಬೇಕು, ಕೃಷಿ ಭೂಮಿ ಸದ್ಭಳಕೆ ಆಗಬೇಕೆಂಬ ಉದ್ದೇಶವಿದೆಯೇ ಹೊರತು ಯಾವುದೇ ಒತ್ತಡದಿಂದ ತಿದ್ದುಪಡಿ ತರುತ್ತಿಲ್ಲ.

– ಉದ್ಯಮಿಗಳಿಗೆ ಭೂಮಿ ಖರೀದಿಸಲು ಅವಕಾಶ ಮಾಡಿಕೊಡಲು ಹೊರಟಿದೆ ಎಂಬ ಅಪವಾದ ಕೇಳಿ ಬರುತ್ತಿದೆ.
– ಜಗತ್ತಿನ ಎಲ್ಲ ದೇಶಗಳಲ್ಲಿ ಕೃಷಿ ಮತ್ತು ಕೈಗಾರಿಕೆಗಳು ಸಮನಾಗಿ ಬೆಳೆಯುತ್ತಿವೆ. ಉದ್ಯಮಿಗಳಿಗೆ ಅನುಕೂಲ ಎಂಬ ಪ್ರಶ್ನೆಯೇ ಉದ್ಭವಿಸಲ್ಲ. ಕೃಷಿ ಭೂಮಿ ಹಸಿರು ವಲಯದಲ್ಲಿ ಇರುವುದರಿಂದ ರಿಯಲ್ ಎಸ್ಟೇಟ್ಗೆ ಅವಕಾಶವಿಲ್ಲ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top