– ಮುಂದುವರಿದ ಕೊರೊನಾ ಸೋಂಕು, ಸಾವಿನ ಸರಣಿ ಅರ್ಥ ವ್ಯವಸ್ಥೆಗೇ ಆಪತ್ತು – ಉದ್ಯೋಗ ನಷ್ಟ ಇಲ್ಲವೇ ಸಂಬಳ ಕಡಿತ ಸಾಧ್ಯತೆ – ಬಡ ಮತ್ತು ಮಧ್ಯಮ ವರ್ಗದ ಜನರ ಜೀವನ ನಿರ್ವಹಣೆಗೆ ಎದುರಾಗಲಿದೆ ಸವಾಲು – ಕಠಿಣ ಬಜೆಟ್ ಸೂತ್ರವೇ ಸದ್ಯಕ್ಕಿರುವ ದಾರಿ
– ಎ ಕೃಷ್ಣ ಭಟ್, ಬೆಂಗಳೂರು
ಮಹಾಮಾರಿ ಕೊರೊನಾದ ಹೊಡೆತಕ್ಕೆ ಇಡೀ ಜಗತ್ತೇ ತತ್ತರಿಸಿದೆ. ಕೊರೊನಾ ಕೇವಲ ಆರೋಗ್ಯ ಸಮಸ್ಯೆಯಲ್ಲ. ಅರ್ಥ ವ್ಯವಸ್ಥೆಯನ್ನು ಬುಡಮೇಲುಗೊಳಿಸಿರುವ ಈ ರೋಗ ಸಾಮಾಜಿಕವಾಗಿಯೂ ಹಲವು ಸವಾಲುಗಳನ್ನು ಸೃಷ್ಟಿಸಿದೆ. ಕೊರೊನಾವನ್ನು ನಿಯಂತ್ರಿಸುವುದಕ್ಕಾಗಿ ವಿಸಿಕೊಂಡಿರುವ ಲಾಕ್‌ಡೌನ್ ಅದೆಷ್ಟೋ ಕಾರ್ಮಿಕರ ಬದುಕಿನ ಬಾಗಿಲಿಗೂ ಬೀಗ ಜಡಿದಿದೆ. ಕೈಗಾರಿಕೆಗಳು ಕೆಲಸ ನಿಲ್ಲಿಸಿವೆ, ಹೆಚ್ಚಿನ ಸೇವಾ ಕ್ಷೇತ್ರಗಳು ಸ್ತಬ್ಧಗೊಂಡಿವೆ. ದೊಡ್ಡ ಆರ್ಥಿಕ ಹಿಂಜರಿತ ಕಣ್ಣೆದುರು ನಿಂತಿದೆ.
ಕೊರೊನಾ ಸೋಂಕು ಮತ್ತು ಸಾವಿನ ಸರಣಿ ದಾಪುಗಾಲಿಡುತ್ತಿರುವ ರೀತಿ ನೋಡಿದರೆ ಇದೆಲ್ಲ ನಿಯಂತ್ರಣಕ್ಕೆ ಬರಲು ಸಾಕಷ್ಟು ಕಾಲಾವ ಬೇಕಾದೀತು. ಅಷ್ಟರ ನಡುವೆ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಳ್ಳುವ ಇಲ್ಲವೇ ವೇತನ ಕಡಿತಕ್ಕೆ ಒಳಗಾಗುವ ಸಾಧ್ಯತೆಗಳು ಎದ್ದು ಕಾಣುತ್ತಿವೆ. ಲಾಕ್‌ಡೌನ್ ಬಳಿಕ ಆರ್ಥಿಕತೆ ನಿರ್ಧಾರಕ್ಕೆ ಚೇತರಿಕೆ ಕಾಣುವ ಆಶಾವಾದವಿದೆಯಾದರೂ ಎಲ್ಲರೂ ಖರ್ಚು ವೆಚ್ಚ ನಿಯಂತ್ರಣ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ಹೊಸ ಉದ್ಯೋಗ ಸೃಷ್ಟಿ ಮತ್ತು ವೇತನ ಹೆಚ್ಚಳ ಆಗುವ ಸಾಧ್ಯತೆಗಳು ಕಡಿಮೆ.
ಹೀಗಾಗಿ, ದಿನದ ಕೂಲಿ, ತಿಂಗಳ ವೇತನದಿಂದಲೇ ಬದುಕು ಕಟ್ಟಿಕೊಳ್ಳುವ ಬಡ ಮತ್ತು ಮಧ್ಯಮ ವರ್ಗದ ಜನರು ಮುಂದೆ ಎದುರಿಸಬೇಕಾದ ಸವಾಲುಗಳಿಗೆ ಲಾಕ್‌ಡೌನ್‌ನ ಅವಯಲ್ಲಿ ಮನೆಯಲ್ಲಿ ಕುಳಿತೇ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ಇದರ ಜತೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಕುಶಲಕರ್ಮಿಗಳು ಕೂಡಾ ತಮ್ಮ ಬದುಕಿನ ಮುಂದಿನ ನಡೆಗಳು ಹೇಗಿರಬೇಕು ಎಂಬ ಬಗ್ಗೆ ಯೋಚಿಸುವ ಕಾಲ ಸನ್ನಿಹಿತವಾಗಿದೆ.ಬೇಕಿದೆ ಸಂಕಷ್ಟ ಸೂತ್ರ: ಜಗತ್ತಿನಲ್ಲಿ ಆತ್ಯಂತ ಆಪತ್ತಿನ ಪರಿಸ್ಥಿತಿ ಎದುರಾದಾಗ ಸಂಕಷ್ಟ ಸೂತ್ರವನ್ನು ಪಾಲಿಸಬೇಕು ಎಂಬ ಅಲಿಖಿತ ನಿಯಮವಿದೆ. ಸಂಕಷ್ಟ ಸೂತ್ರವೆಂದರೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಜೀವನ ನಡೆಸುವುದು. ಈಗಾಗಲೇ ಲಾಕ್‌ಡೌನ್‌ನ ಈ ಸ್ಥಿತಿಯಲ್ಲಿ ಮಿತವ್ಯಯದ ಪಾಠಗಳನ್ನು ಅರ್ಥ ಮಾಡಿಕೊಂಡಿರುವ ಜನರು ಮುಂದಿನ ಕೆಲವು ತಿಂಗಳ ಕಾಲ ಇದನ್ನೇ ಮುಂದುವರಿಸಿದರೆ ಮಾತ್ರ ಜೀವನ ಸುಸೂತ್ರವಾಗಿ ನಡೆಯಬಹುದು. ಉದ್ಯೋಗ ಕಳೆದುಕೊಳ್ಳುವ, ಇಲ್ಲವೇ ವೇತನ ಕಡಿತದ ಅಪಾಯ ಎದುರಿಸುತ್ತಿರುವವರು ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ಕೌಟುಂಬಿಕ ಬಜೆಟ್‌ನ್ನು ಅತ್ಯಂತ ಜಾಣತನದಿಂದ ನಿಭಾಯಿಸಬೇಕಾಗಿದೆ. ಉದ್ಯೋಗಿಗಳು ಮಾತ್ರವಲ್ಲ, ಉದ್ಯೋಗದಾತ ಕಂಪನಿಗಳು ಕೂಡಾ ಮಿತವ್ಯಯದ ಪಾಲನೆ ಮಾಡಿದರೆ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು.
ಸಂಕಷ್ಟದ ಸ್ಥಿತಿಯಿಂದ ಪಾರಾಗಲು ಯಾರಿಗೆ ಯಾವ ಮಾರ್ಗ?
ಬಡವರು, ಕಾರ್ಮಿಕರು 1. ಈಗಿನಿಂದಲೇ ದಿನವಹಿ ಖರ್ಚುಗಳನ್ನು ಮಿತಗೊಳಿಸುವುದು. 2. ಸರಕಾರದ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳುವುದು. 3. ದುರಭ್ಯಾಸಗಳಿಗೆ ಹಣ ಪೋಲು ಮಾಡಿದರೆ ಕಾದಿದೆ ಅಪಾಯ 4. ಸರಕಾರ ನೀಡುವ ಆಹಾರ ವಸ್ತುಗಳ ಸದ್ಬಳಕೆ ಮಾಡಿ, ಮಾರಿಕೊಳ್ಳಬೇಡಿ 5. ಕೈಗೆ ಸಿಗುವ ಯಾವುದೇ ಕೆಲಸವನ್ನೂ ಬಿಡಬೇಡಿ 6. ಉಳಿತಾಯದ ಹಣವಿದ್ದರೆ ಅತ್ಯಂತ ಜಾಗರೂಕವಾಗಿ ಬಳಸಿ.
ಖಾಸಗಿ ಉದ್ಯೋಗಿಗಳು 1. ದಿನವಹಿ ಖರ್ಚನ್ನು ಅರ್ಧಕ್ಕೆ ಇಳಿಸಿಕೊಳ್ಳಲೇಬೇಕು 2. ಈಗ ಬದುಕುವುದಕ್ಕಾಗಿ ಊಟ ಎನ್ನುವುದೇ ಸೂತ್ರ! 3. ಹಬ್ಬದೂಟ, ದುಬಾರಿ ಖಾದ್ಯಗಳ ಆಸೆ ಸದ್ಯಕ್ಕೆ ಬೇಡ 4. ಐಷಾರಾಮಿ ವಸ್ತುಗಳ ಖರೀದಿ, ಪ್ರವಾಸ ಮುಂದೂಡಿ 5. ಸರಕಾರ ನೀಡಿದ ಇಎಂಐ ಮತ್ತಿತರ ವಿನಾಯಿತಿ ಬಳಸಿ 6. ತುಂಬ ಕಷ್ಟವಾದರೆ ಉಳಿತಾಯದ ಹಣ ಜಾಣ್ಮೆಯಿಂದ ಬಳಸಿ.
ಕೈಗಾರಿಕೋದ್ಯಮಗಳು 1. ಯಾವ ಕಾರಣಕ್ಕೂ ಸಂಸ್ಥೆಗಳನ್ನು ಮುಚ್ಚುವ ಆತುರ ಬೇಡ 2. ಕಾಯುವ ತಾಳ್ಮೆಯನ್ನು ಯಾವತ್ತೂ ಕಳೆದುಕೊಳ್ಳಬೇಡಿ 3. ಸ್ಥಗಿತಗೊಂಡ ವ್ಯವಹಾರ ಮರುಚಾಲನೆಗೆ ಸಮಯ ಬೇಕು 4. ನೌಕರರಿಗೆ ವೇತನ ಕಡಿಮೆ ಮಾಡಿ ಲಾಭಾಂಶ ಹೆಚ್ಚಿಸಿಕೊಳ್ಳಬಹುದು 5. ಸದ್ಯಕ್ಕೆ ಕಡಿಮೆ ನೌಕರರ ಬಳಸಿ ಹೆಚ್ಚಿನ ಉತ್ಪಾದನೆ ಮಾಡಿದರೂ ಓಕೆ 6. ಉತ್ಪಾದನೆ, ಮಾರಾಟ ವಿಚಾರದಲ್ಲಿ ಕ್ರಿಯಾಶೀಲತೆ ಮೆರೆಯಿರಿ 7. ಲಾಭದ ಆತುರ ಬೇಡ, ಸೇವೆಯ ಔದಾರ್ಯವೂ ಇರಲಿ.
ಕಾಯುವಿಕೆಗಿಂತನ್ಯ ತಪವು ಇಲ್ಲಕೊರೊನಾ ಸೃಷ್ಟಿಸಿದ ಸಂಕಷ್ಟ ಸ್ಥಿತಿಯಲ್ಲಿ ತಾಳ್ಮೆಯೊಂದೇ ಆಯುಧ. ಪರಿಸ್ಥಿತಿ ಸುಧಾರಣೆಗೆ ಸಮಯ ಬೇಕು. ಅಲ್ಲಿವರೆಗೆ ಕಬಡ್ಡಿ ಆಟಗಾರರಂತೆ, ದೀರ್ಘ ಓಟದ ಅಥ್ಲೀಟ್‌ನಂತೆ ಉಸಿರನ್ನು ಕಾಪಾಡಿಕೊಳ್ಳುವ ತಪಸ್ಸೊಂದು ನಮ್ಮಲ್ಲಿರಬೇಕು ಅಷ್ಟೆ. ಖಂಡಿತವಾಗಿಯೂ ಈ ಕಷ್ಟದ ಸಮಯ ಕಳೆದುಹೋಗುತ್ತದೆ. ಕಾಯೋಣ.
ಉದ್ಯೋಗ ನಷ್ಟ ಸಾಧ್ಯತೆ ಭಾರತ 45 ಕೋಟಿ. ಅಮೆರಿಕ 4.7 ಕೋಟಿ. ಚೀನಾ 50 ಲಕ್ಷ. ಇಂಗ್ಲೆಂಡ್ 10 ಲಕ್ಷ. ಸ್ಪೇನ್ 10 ಲಕ್ಷ. ಟರ್ಕಿ 02 ಲಕ್ಷ (ಇದು ಈಗಿನ ಅಂದಾಜು)
ಯಾವ ವಲಯದಲ್ಲಿ ನಷ್ಟ ಅಪಾಯ? ಹಾಸ್ಪಿಟಾಲಿಟಿ-ಆತಿಥ್ಯ, ಹೋಟೆಲ್ ಉದ್ಯಮ, ಪ್ರವಾಸೋದ್ಯಮ, ಸಣ್ಣ ಮತ್ತು ಮಧ್ಯಮ ವಲಯದ ಕೈಗಾರಿಕೆಗಳು, ಚಿಲ್ಲರೆ ವ್ಯಾಪಾರ ವಲಯ ಮತ್ತಿತರ
ತಜ್ಞರ ಅಭಿಪ್ರಾಯಗಳು
ವೇತನ ಕಡಿತದ ಸಂದರ್ಭ ಉದ್ಯೋಗಿಗಳು ಪಿಎಫ್ ಮುಂಗಡದ ಶೇ.75ರಷ್ಟು ಪಾಲನ್ನು ಪಡೆಯಬಹುದು. ಆದರೆ ಅದಕ್ಕಿಂತಲೂ ಮೊದಲು ಇತರ ಆಯ್ಕೆಗಳನ್ನು ಬಳಸುವುದು ಸೂಕ್ತ. ಚಿನ್ನದ ಆಧಾರದಲ್ಲಿ ಸಾಲ, ಎಫ್‌ಡಿ ಹಿಂತೆಗೆತ ಸೂಕ್ತ. ಎಲ್‌ಐಸಿ ವಿಮೆಯ ಅಧಾರದಲ್ಲಿ ಸಾಲ ಪಡೆಯಬಹುದು. ಆದರೆ ವೈಯಕ್ತಿಕ ಸಾಲ, ಕ್ರೆಡಿಟ್‌ಕಾರ್ಡ್ ಸಾಲದಿಂದ ದೂರವಿರುವುದು ಹಿತ. ಕೊರೊನಾ ಸಂಬಂತ ಆರ್ಥಿಕ ಬಿಕ್ಕಟ್ಟು ಇನ್ನೊಂದು ವರ್ಷ ಇರುವ ಸಾಧ್ಯ್ಯತೆ ಇದೆ.-ವಿಜಯ್ ಸಾಗರ ಶೆಣೈ , ಹಣಕಾಸು ಸಲಹೆಗಾರರು
ಸರಕಾರಿ ಉದ್ಯೋಗಿಗಳಿಗೆ ವೇತನ ಕಡಿತದ ಆತಂಕ ಅಷ್ಟಾಗಿ ಇಲ್ಲ. ಆದರೆ ಖಾಸಗಿ ವಲಯದ ಕೆಲ ಕಂಪನಿಗಳಲ್ಲಿ ವೇತನ ತೊಂದರೆ ಆಗುವ ಸಾಧ್ಯತೆ ಇದೆ. ಅಮೆರಿಕದಲ್ಲಿ ವಿಮೆ ಕಂಪನಿಗಳಿಂದ ವಿಮೆ ಪರಿಹಾರ ಸಿಗುತ್ತದೆ. ನಮ್ಮಲ್ಲೂ ಅಂಥ ವ್ಯವಸ್ಥೆ ಬರಬೇಕು. ಪಿಪಿಎಫ್‌ನಿಂದ ಹಣ ಹಿಂತೆಗೆದುಕೊಳ್ಳಬಹುದು.- ಟಿ.ಬಿ ರಾಜಶೇಖರ್, ಹಣಕಾಸು ತಜ್ಞರು
ವೇತನ ಕಡಿತದ ಪರಿಣಾಮ ದೊಡ್ಡ ಮೊತ್ತದ ವೇತನದಾರರಿಗೆ ಅಂಥ ಸಮಸ್ಯೆಯಾಗುವುದಿಲ್ಲ. ಈ ಹಿಂದಿನ ಉಳಿತಾಯ, ಹೆಚ್ಚುವರಿ ವೆಚ್ಚಗಳಿಗೆ ಕಡಿವಾಣ ಹಾಕುವ ಮೂಲಕ ಅವರು ಪರಿಸ್ಥಿತಿಯನ್ನು ನಿರ್ವಹಿಸಬಹುದು. ಆದರೆ ಕಡಿಮೆ ವೇತನ ಪಡೆಯುವವರಿಗೆ ಕಷ್ಟವಾಗುತ್ತದೆ. ಅವರು ಕುಟುಂಬದ ವೆಚ್ಚದಲ್ಲಿ ಮತ್ತಷ್ಟು ಮಿತವ್ಯಯ ಮಾಡಬೇಕಾಗುತ್ತದೆ. ಚಿನ್ನದ ದರ ತೀವ್ರ ಏರುಪೇರಾಗಿರುವುದರಿಂದ ಸದ್ಯಕ್ಕೆ ಅದನ್ನು ಮಾರದಿರುವುದು ಸೂಕ್ತ. – ಕೆ.ಎಂ ದಿವಾಕರ್ , ಚಾರ್ಟರ್ಡ್ ಅಕೌಂಟೆಂಟ್
ಸಾವಧಾನ, ಸಮಾಧಾನವೇ ಮದ್ದು – ಸಾವಧಾನ, ಸಮಾಧಾನ ಮಾನಸಿಕ ತಂತ್ರವನ್ನು ಪ್ರತಿಕ್ಷಣ ಹಾಗೂ ಪ್ರತಿಯೊಂದರಲ್ಲಿ ಅಳವಡಿಸಿಕೊಂಡರೆ ಒತ್ತಡಮುಕ್ತಿ.- ನಮ್ಮಲ್ಲಿರುವ ನಿಜ ಆತ್ಮಶಕ್ತಿ, ಮಾನಸಿಕ ಬಲವನ್ನು ಉಳಿಸಿಕೊಳ್ಳಬೇಕು. ಸಂಕಷ್ಟ ಎದುರಿಸುವ ಛಲ ಮೈಗೂಡಿಸಬೇಕು- ಈ ಪರಿಸ್ಥಿತಿ ಕೇವಲ ತಾತ್ಕಾಲಿಕ. ಇಂದಲ್ಲ ನಾಳೆ ಎಲ್ಲವೂ ಸರಿಯಾಗಲಿದೆ ಎನ್ನುವ ಭರವಸೆ ಇರಲಿ- ಅನಗತ್ಯ ಸಂದೇಹ, ಸಂಶಯ, ಆತಂಕಗಳನ್ನು ವ್ಯಕ್ತಪಡಿಸಲು ಹೋಗಬೇಡಿ.- ನಮ್ಮ ಕೌಶಲಗಳ ಬಗ್ಗೆ ನಂಬಿಕೆ ಇರಲಿ, ಯಾವುದೇ ಕಸುಬಾದರೂ ಮಾಡಬಲ್ಲೆ ಎಂಬ ಧೈರ್ಯವಿರಲಿ- ವಾಸ್ತವವನ್ನು ಒಪ್ಪಿಕೊಳ್ಳೋಣ, ಯಾರನ್ನೂ ದೂಷಿಸಲು ಹೋಗುವುದು ಬೇಡ.ಮಾನಸಿಕ ಸ್ಥಿತಿಯ ಏರುಪೇರಿನ ಬಗ್ಗೆ ಸೂಚನೆಗಳು ದೊರೆತರೆ ಕೂಡಲೇ ತಜ್ಞರನ್ನು ಭೇಟಿ ಮಾಡಿ. – ಡಾ. ಅ. ಶ್ರೀಧರ ಮನಶಾಸ್ತ್ರಜ್ಞರು