ಕೃಷಿಯ ಮೇಲೆ ನಿರೀಕ್ಷೆ – ಎಲ್ಲ ವಲಯ ಸೋತಿರುವಾಗ ಕೃಷಿಗೆ ಅವಕಾಶ

ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟಿಗೆ ನಮ್ಮ ದೇಶದ ಎಲ್ಲ ವಲಯಗಳೂ ಸ್ತಬ್ಧವಾಗಿವೆ. ಕೈಗಾರಿಕೆ, ಆಟೊಮೊಬೈಲ್‌, ಸಾರಿಗೆ, ರಿಯಲ್‌ ಎಸ್ಟೇಟ್‌ ವಲಯಗಳು ಮತ್ತು ಸೇವಾ ಕ್ಷೇತ್ರಗಳು ತತ್ತರಿಸಿದ್ದರೆ; ಉತ್ಪಾದನೆ, ಬೇಡಿಕೆ, ಪೂರೈಕೆ, ಅನುಭೋಗ, ಉಪಭೋಗ, ಹಣದುಬ್ಬರ… ಹೀಗೆ ಅರ್ಥಶಾಸ್ತ್ರದ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಭಾರತದ ಜಿಡಿಪಿ ಕೂಡ ಋುಣಾತ್ಮಕವಾಗಿ ಸಾಗಲಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳು ಎಚ್ಚರಿಸಿವೆ. ಹೀಗಿದ್ದೂ ಭಾರತೀಯರಾದ ನಾವು ಸ್ವಲ್ಪ ಮಟ್ಟಿಗೆ ಖುಷಿ ಕೊಡುವ ಸಂಗತಿಯೊಂದಿದೆ. ಅದರಲ್ಲೂ ವಿಶೇಷವಾಗಿ ಕರ್ನಾಟಕದ ಮಟ್ಟಿಗೆ ಇದು ಧನಾತ್ಮಕವಾದ ವಿಚಾರ. ಯಾಕೆಂದರೆ, ಕರ್ನಾಟಕದಲ್ಲಿ ಹದವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ವಲಯ ಉತ್ತೇಜನಗೊಂಡಿದೆ. ರೈತರು ಹರ್ಷಚಿತ್ತರಾಗಿದ್ದಾರೆ; ಬಿತ್ತನೆ ಮಾಡುತ್ತಿದ್ದಾರೆ. ಸರಕಾರ ಕೃಷಿ ಇಲಾಖೆಯ ಅಂಕಿ ಸಂಖ್ಯೆಗಳ ಪ್ರಕಾರ, ಜುಲೈ ಮಧ್ಯ ಭಾಗದಲ್ಲೇ ದಾಖಲೆ ಪ್ರಮಾಣದ ಬಿತ್ತನೆಯಾಗಿದೆ.
ಪ್ರಸಕ್ತ ಸಾಲಿನ ಮುಂಗಾರು ಅವಧಿಯಲ್ಲಿ 73 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ವಾಡಿಕೆಯಂತೆ ಈ ಅವಧಿಯಲ್ಲಿ ಶೇ.40ರಷ್ಟು ಬಿತ್ತನೆಯಾಗಬೇಕಿತ್ತು. ಇದಕ್ಕೆ ಪ್ರತಿಯಾಗಿ ಶೇ.60ರಷ್ಟು ಬಿತ್ತನೆಯಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲೇ ಶೇ.64ರಷ್ಟು ಬಿತ್ತನೆಯಾಗಿದೆ ಎಂದರೆ ರೈತರು ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿರುವುದು ಸಾಬೀತಾಗುತ್ತದೆ. ಒಂದೊಮ್ಮೆ ಸರಿಯಾದ ಸಮಯಕ್ಕೆ ಬೆಳೆಗಳಿಗೆ ಬೇಕಿರುವಷ್ಟೇ ಮಳೆಯಾದರೆ ಈ ವರ್ಷದ ಋುತುಮಾನ ಹಿಂದೆಂದಿಗಿಂತಲೂ ಹೆಚ್ಚು ಫಲಪ್ರದವಾಗಿರುವುದರಲ್ಲಿ ಸಂಶಯೇ ಇಲ್ಲ. ಒಂದೊಮ್ಮೆ ಈ ಮಳೆಗಾಲ ಪೂರ್ತಿ ಹದವಾದ ಮಳೆ, ಅನುಕೂಲಕರ ವಾತಾವರಣ ಸೃಷ್ಟಿಯಾದರೆ ರಾಜ್ಯದ ಆರ್ಥಿಕ ಚೇತರಿಕೆಗೆ ಕೃಷ್ಟಿ ವಲಯ ಸಾಕಷ್ಟು ಕೊಡುಗೆ ನೀಡಲಿದೆ. ದೇಶದ ಜಿಡಿಪಿ ಬೆಳವಣಿಗೆಯಲ್ಲಿ ಶೇ.13ರಷ್ಟು ಕೃಷಿ ವಲಯದ ಕಾಣಿಕೆ ಇರುತ್ತದೆ. ಒಂದೊಮ್ಮೆ ಇಡೀ ದೇಶದಲ್ಲೂ ಕೃಷಿ ವಲಯವು ಕರ್ನಾಟಕದ ರೀತಿಯಲ್ಲೇ ಉತ್ತೇಜಿತಗೊಂಡರೆ ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟನ್ನು ಸಾಕಷ್ಟು ಕಡಿಮೆ ಮಾಡಲು ಸಾಧ್ಯವಿದೆ. ಹಾಗಾಗಿ, ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಗಳು ಈ ಬಾರಿ ರೈತರು ಹಾಗೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮುತವರ್ಜಿ ವಹಿಸಬೇಕಾದ ಅಗತ್ಯವಿದೆ.
ರಾಜ್ಯದ ಮಟ್ಟಿಗೆ ಹೇಳುವುದಾದರೆ ಕೃಷಿ ಕ್ಷೇತ್ರ ಸರಿಯಾದ ದಾರಿಯಲ್ಲಿ ಸಾಗುತ್ತಿದೆಯಾದರೂ ಅದಕ್ಕೆ ಸಂಬಂಧಿಸಿದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ(ಎಪಿಎಂಸಿ) ಸಮಸ್ಯೆ ಮಾತ್ರ ಬಗೆ ಹರಿಯುತ್ತಿಲ್ಲ. ಇದು ಮುಂಬರುವ ದಿನಗಳಲ್ಲಿ ರೈತರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿವೆ. ಎಪಿಎಂಸಿಗಳಲ್ಲಿ ಶೇ.1.5ರಷ್ಟು ಮಾರುಕಟ್ಟೆ ಶುಲ್ಕ ಸಂಗ್ರಹಿಸಲಾಗುತ್ತಿದೆ. ಇದನ್ನು ಶೇ.0.20ಗೆ ಇಳಿಸುವಂತೆ ಎಪಿಎಂಸಿ ವರ್ತಕರು ಸರಕಾರಕ್ಕೆ ಬೇಡಿಕೆ ಸಲ್ಲಿಸಿದ್ದರು. ಸರಕಾರ ಶೇ.1ಕ್ಕೆ ಇಳಿಸಿರುವುದಾಗಿ ಪ್ರಕಟಿಸಿತ್ತು. ಆದರೆ ಈವರೆಗೂ ಶುಲ್ಕ ಸಂಗ್ರಹದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಿಂದಿನಂತೆಯೇ ಶೇ.1.5ರಷ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದು ಎಪಿಎಂಸಿ ವರ್ತಕರನ್ನು ಕೆರಳಿಸಿದ್ದು, ಆಗಸ್ಟ್‌ ಮೊದಲ ವಾರದಿಂದ ರಾಜ್ಯಾದ್ಯಂತ ಎಲ್ಲ ಎಪಿಎಂಸಿ ಮಾರುಕಟ್ಟೆಗಳು, ಬೇಳೆಕಾಳು ಮತ್ತು ಅಕ್ಕಿ ಮಿಲ್‌ಗಳ ವಹಿವಾಟು ಬಂದ್‌ ಆಗಲಿವೆ. ಇದರಿಂದಾಗಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ. ಎಪಿಎಂಸಿಗಳನ್ನು ಕಾರ್ಪೊರೇಟ್‌ ಕಂಪನಿಗಳ ಪರವಾಗಿ ರೂಪಿಸಲಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತದೆ. ಇಲ್ಲಿ ಎಂಪಿಎಂಸಿ ವರ್ತಕರ ಸಮಸ್ಯೆ ಇದ್ದರೂ ಅದು ಪರೋಕ್ಷವಾಗಿ ರೈತರ ಮೇಲೂ ಪರಿಣಾಮ ಬೀರುವುದರಿಂದ ಸರಕಾರ ಕೂಡಲೇ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸಬೇಕು.
ಕೊರೊನಾ ಕಾಲಘಟ್ಟದಲ್ಲಿ ಕೃಷಿ ಕ್ಷೇತ್ರ ಮಾತ್ರವೇ ನಮ್ಮ ಮುಂದಿರುವ ಏಕೈಕ ಭರವಸೆದಾಯಕ ಕ್ಷೇತ್ರವಾಗಿ ಗೋಚರಿಸುತ್ತಿದೆ. ಲಾಕ್‌ಡೌನ್‌ ವೇಳೆ ನಗರಗಳನ್ನು ತೊರೆದು ಹಳ್ಳಿಗಳನ್ನು ಸೇರಿರುವ ಯುವ ಸಮೂಹ ಕೂಡ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಇದೆಲ್ಲವೂ ಸಕಾರಾತ್ಮಕ ಬೆಳವಣಿಗೆಗಳು. ಕೊರೊನಾ ಪೂರ್ವ ಸ್ಥಿತಿಗೆ ಮರಳಲು ನಮಗೆ ಸಾಕಷ್ಟು ಸಮಯ ಹಿಡಿಯಲಿದೆ. ಅಲ್ಲಿಯವರೆಗೂ ನಮ್ಮನ್ನೆಲ್ಲ ಸಲಹುವ ಸಾಮರ್ಥ್ಯ ಇರುವುದು ಕೃಷಿಗೆ ಮಾತ್ರ. ಹಾಗಾಗಿ, ಈ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ನೀಡಿ, ಎದುರಾಗಿರುವ ಬಿಕ್ಕಟ್ಟನ್ನು ತಕ್ಕಮಟ್ಟಿಗೆಯಾದರೂ ಶಮನ ಮಾಡಬಹುದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top