ಇಂಗ್ಲಿಷ್ ಸುಂಟರಗಾಳಿಯಿಂದ ಬಚಾವಾಗುವುದು ಹೇಗೆ?

ಕಳೆದ ಐವತ್ತು ವರ್ಷಗಳ ಈಚೆಗೆ ಪ್ರಪಂಚದಲ್ಲಿ ಸುಮಾರು ಏಳು ಸಾವಿರ ಭಾಷೆಗಳು ಅವುಗಳ ಬಳಕೆ ಕಡಿಮೆಯಾಗಿ ಅವಸಾನಗೊಂಡಿವೆ ಇನ್ನು ಅಷ್ಟೇ ಪ್ರಮಾಣದಲ್ಲಿ ಸ್ಥಳಿಯ ಭಾಷೆಗಳು ಆಗಲೋಈಗಲೋ ಅದೇ ಸ್ಥಿತಿಯನ್ನು ತಲುಪುವುದರಲ್ಲಿವೆ.

123
ಸಾಂಧರ್ಬಿಕ ಚಿತ್ರ

ಖುಷಿಯ ಬೆನ್ನಲ್ಲೇ ಕಳವಳವೂ ಆವರಿಸಿಕೊಳ್ಳುವಂಥ ವಿಷಯ ಇದು. ನಮ್ಮಲ್ಲಿ ಕನ್ನಡಕ್ಕಾಗಿ ಕೆಲಸ ಮಾಡುವ ಕೈಗಳಿಗೆ ಮತ್ತು ಮನಸ್ಸುಗಳಿಗೇನೂ ಕಡಿಮೆಯಿಲ್ಲ. ಸಾಲುಸಾಲು ಕನ್ನಡ ಸಂಘಗಳು, ಸಂಘಟನೆಗಳ ಹೆಸರಿನ ಮೆರವಣಿಗೆ ಕಣ್ಣಮುಂದೆ ಹೊಂಟಾಗ ಎಷ್ಟೊಂದು ಸಂತಸ, ಸಮಾಧಾನವಾಗುತ್ತದೆ ನೋಡಿ. ಕನ್ನಡ ಸಾರಸ್ವತ ಲೋಕದ ಆಶಯಗಳ ಸಾಕ್ಷಿಪ್ರಜ್ಞೆಯಂತಿರುವ ಕನ್ನಡ ಸಾಹಿತ್ಯ ಪರಿಷತ್ತು ಜನ್ಮತಾಳಿ ಭರ್ತಿ ನೂರು ವರ್ಷಗಳಾಗಿವೆ. ಕನ್ನಡ ನಾಡು-ನುಡಿಯ ಉಳಿವಿನ ಘೋಷಣೆ ಮಾಡಿ, ಸಂಕಲ್ಪ ತೊಡಲೋಸುಗವೇ ಕಸಾಪ ಕಳೆದ ಎಂಭತ್ತು ವರ್ಷಗಳಿಂದ ವಾರ್ಷಿಕ ಸಮ್ಮೇಳನವೆಂಬ ಸಾಹಿತ್ಯಾಸಕ್ತರ ಜಾತ್ರೆಯನ್ನು ಅನೂಚಾನವಾಗಿ ನಡೆಸಿಕೊಂಡು ಬರುತ್ತಿದೆ. ಕಸಾಪಕ್ಕೆ ಹೊರತಾಗಿ ಹೇಳುವುದಾದರೆ ಕನ್ನಡತನ ಬೆಳೆಸುವುದಕ್ಕಾಗಿ, ಕನ್ನಡಪರ ಜಾಗೃತಿಯ ಕೆಲಸ ಮಾಡಲೆಂದೇ ಶುರುವಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಗಡಿ ಅಭಿವೃದ್ಧಿ ಸಮಿತಿ, ಕನ್ನಡ ಸಂಸ್ಕøತಿ ಇಲಾಖೆ ಇತ್ಯಾದಿ ಸರ್ಕಾರಿ ಸಂಸ್ಥೆಗಳು ಕನ್ನಡಪರ ಕೆಲಸಗಳನ್ನು ಮಾಡಿಕೊಂಡು ಬರುತ್ತಿವೆ. ಹಾಗೇ ದೆಹಲಿ ಕನ್ನಡ ಸಂಘ, ಹೊರನಾಡ ಕನ್ನಡಿಗರ ಕೂಟ, ದುಬೈ ಕನ್ನಡ ಸಂಘ, ಅಮೆರಿಕ, ಇಂಗ್ಲೆಂಡ್‍ನಂಥ ದೇಶಗಳಲ್ಲೂ ಕನ್ನಡ ಕಲರವ ಕೇಳಿಸುವುದಕ್ಕಾಗಿ ತರಹೇವಾರಿ ಸಂಘಗಳು. ನಮ್ಮ ರಾಜ್ಯದ ವಿಷಯಕ್ಕೇ ಬರುವುದಾದರೆ ಕರ್ನಾಟಕ ರಕ್ಷಣಾ ವೇದಿಕೆಗಳು, ಜಯ ಕರ್ನಾಟಕ ಸಂಘಟನೆ, ಊರೂರಲ್ಲಿ ಕನ್ನಡ ಕಿಡಿ ಹೊತ್ತಿಸುವ ಸಣ್ಣಪುಟ್ಟ ನೂರಾರು ಸಂಘಟನೆಗಳು ಕನ್ನಡ ನಾಡು ನುಡಿಯ ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಇಷ್ಟೆಲ್ಲ ಇದ್ದರೂ ಮಾತೃಭಾಷೆಗೆ ಎದುರಾಗಿರುವ ಆತಂಕದ ಕಾರ್ಮೋಡ ಬದಿಗೆ ಸರಿದು ಕನ್ನಡಸೂರ್ಯ ಪ್ರಖರವಾಗಿ ಬೆಳಗುವ ಲಕ್ಷಣ ಕಿಂಚಿತ್ತಾದರೂ ಕಾಣಿಸುತ್ತಿದೆಯೇ? ಹೌದು ಅಂತ ಹೇಳುವುದಾದರೂ ಹೇಗೆ?

ಈ ಅನುಮಾನಕ್ಕೆ ಈ ಸಲದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗೀಕರಿಸಿದ ಒಂದು ಸಾಲಿನ ನಿರ್ಣಯ ಮತ್ತು ಕನ್ನಡ ಭಾಷೆಯ ಉಳಿವಿಗಾಗಿ ಮುಂದೆ ಆಮರಣ ಸತ್ಯಾಗ್ರಹ ಕೂರುತ್ತೇನೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಮಾಡಿರುವ ಘೋಷಣೆಯೇ ಪುರಾವೆ ಎಂದು ಪರಿಗಣಿಸಬಹುದು.

ಇಂಥ ನಿರ್ಣಯಗಳನ್ನು ಕೈಗೊಳ್ಳುವುದರಿಂದ, ಘೋಷಣೆ ಮೊಳಗಿಸುವುದರಿಂದ ಮತ್ತು ಭಾಷಣದಿಂದ, ಅನ್ನ ನಿರಶನ ಮಾಡುವುದರಿಂದ ಕನ್ನಡ ಭಾಷೆಯನ್ನು ಅದು ಈಗ ಎದುರಿಸುತ್ತಿರುವ ಸಂಕಷ್ಟದಿಂದ ಪಾರುಮಾಡಲು ಸಾಧ್ಯವೇ ಎಂಬುದು ಮೂಲಭೂತ ಪ್ರಶ್ನೆ.

ಒಮ್ಮೆ ಹಿಂತಿರುಗಿ ನೋಡಿ, ಈಗಷ್ಟೇ ಶ್ರವಣಬೆಳಗೊಳದಲ್ಲಿ ಮುಕ್ತಾಯವಾದ ಸಾಹಿತ್ಯ ಸಮ್ಮೇಳನದ ನಿರ್ಣಯಕ್ಕೂ, ಹಿಂದಿನ ಸಮ್ಮೇಳನಗಳಲ್ಲಿ ತೆಗೆದುಕೊಂಡ ನಿರ್ಣಯಗಳಿಗೂ ಏನಾದರೂ ವ್ಯತ್ಯಾಸ ಉಂಟೇ ಎಂದು. ಆಗ ನಿಮಗೇ ಗೊತ್ತಾಗುತ್ತದೆ ಮೊದಲ ಸಮ್ಮೇಳನದಿಂದ ಈ ಸಮ್ಮೇಳನದವರೆಗೆ ತೆಗೆದುಕೊಂಡ ನಿರ್ಣಯಗಳ ಭಾಷೆ, ಭಾವನೆ ಮತ್ತು ಆವೇಶದಲ್ಲಿ ಯಾವುದೇ ಭಿನ್ನತೆ ಇಲ್ಲ ಎಂದು. ಯಾಕೆ ಹೀಗೆ?

ಕಾರಣ ಇಷ್ಟೆ, ಕನ್ನಡ ಭಾಷೆ ಎದುರಿಸುತ್ತಿರುವ ಸಂಕಷ್ಟದ ಮೂಲ ಹುಡುಕುವುದರಲ್ಲೇ ನಾವು ಪದೇಪದೆ ಎಡವುತ್ತಿದ್ದೇವೆ. ತಪ್ಪಿದ ಕೊಂಡಿಯ ಬುಡವನ್ನು ಹುಡುಕಿ ತೆಗೆಯುವವರೆಗೆ ಕನ್ನಡತನದ ಕೊರಗಿಗೆ ಪರಿಹಾರ ಕಾಣುವುದು ಎಲ್ಲಿಂದ? ಅಷ್ಟಕ್ಕೂ ಕನ್ನಡ ಭಾಷೆಗೆ ಮಾತ್ರವೇ ಅಸ್ತಿತ್ವದ ಪ್ರಶ್ನೆ, ಅಳಿವು ಉಳಿವಿನ ಸಂಕಷ್ಟ ಕಾಡುತ್ತಿದೆಯೇ? ಈ ಸಂಗತಿಗಳನ್ನು ಆಲೋಚನೆ ಮಾಡದ ಹೊರತು ಕನ್ನಡಕ್ಕೆ ಎದುರಾಗಿರುವ ಸವಾಲಿಗೆ ಸರಿಯಾದ ಉತ್ತರ ಕಂಡುಕೊಳ್ಳಲು ಸಾಧ್ಯವೇ ಇಲ್ಲ ಎಂದು ತೋರುತ್ತದೆ.

ಭಾರತದ ನೂರಾರು, ಜಗತ್ತಿನ ಸಾವಿರಾರು ಭಾಷೆಗಳು ಹಾಲಿ ಕನ್ನಡ ಭಾಷೆ ಎದುರಿಸುತ್ತಿರುವ ಅಥವಾ ಇದಕ್ಕಿಂತಲೂ ಗಂಭೀರವಾದ ಸಂಕಷ್ಟವನ್ನು ಎದುರಿಸುತ್ತಿವೆ. ಅದಕ್ಕಿಂತಲೂ ಮುಖ್ಯವಾಗಿ ಭಾರತದ ಸಂದರ್ಭದಲ್ಲೇ ಇರಲಿ, ಅಥವಾ ಪ್ರಪಂಚದ ಇತರ ದೇಶಗಳ ಸ್ಥಳೀಯ ಭಾಷೆಗಳು ಎದುರಿಸುತ್ತಿರುವ ಸಂಕಷ್ಟದ ಸನ್ನಿವೇಶವೇ ಇರಲಿ, ಆ ಎಲ್ಲ ಭಾಷೆಗಳ ಸಮಸ್ಯೆಗಳ ಮೂಲ ಕಾರಣ ಮತ್ತು ಪರಿಣಾಮ ಎರಡೂ ಒಂದೇ ತೆರನಾದದ್ದು ಎಂಬುದನ್ನು ನಾವಿಲ್ಲಿ ಗಮನಿಸಬೇಕಿದೆ.

ಹೌದೋ ಅಲ್ಲವೋ ನೋಡಿ. ಕಳೆದ ಐವತ್ತು ವರ್ಷಗಳ ಈಚೆಗೆ ಪ್ರಪಂಚದಲ್ಲಿ ಸುಮಾರು ಏಳು ಸಾವಿರ ಭಾಷೆಗಳು ಅವುಗಳ ಬಳಕೆ ಕಡಿಮೆಯಾಗಿ ಅವಸಾನಗೊಂಡಿವೆ. ಇನ್ನು ಅಷ್ಟೇ ಪ್ರಮಾಣದಲ್ಲಿ ಸ್ಥಳಿಯ ಭಾಷೆಗಳು ಈಗಲೋ ಆಗಲೋ ಅದೇ ಸ್ಥಿತಿಯನ್ನು ತಲುಪುವುದರಲ್ಲಿವೆ. ಇದು ಅಂದಾಜಿನ ಲೆಕ್ಕಾಚಾರವಲ್ಲ. ನಾನಾ ದೇಶಗಳ ಭಾಷೆಗಳನ್ನು ಕರಾರುವಾಕ್ಕಾಗಿ ಅಧ್ಯಯನ ಮಾಡಿದ ಪರಿಣತರೇ ಹೇಳುವ ಮಾತು. ಭಾಷಾ ಸಂಕಷ್ಟಕ್ಕೆ ಸಿಲುಕಿರುವುದರಲ್ಲಿ ಬ್ರಿಟನ್ ಕೂಡ ಹೊರತಲ್ಲ. ಅಲ್ಲಿ ಅನಾದಿ ಎಂದೆನಿಸಿಕೊಂಡಿರುವ `ಓಲ್ಡ್ ಕೆಂಟಿಶ್ ಸೈನ್’ ಭಾಷೆಯೂ ಸೇರಿ ಸುಮಾರು ಇಪ್ಪತ್ತು ಪ್ರಾದೇಶಿಕ ಭಾಷೆಗಳಿದ್ದವು. ಈಗ ಅವೆಲ್ಲವೂ ಸರ್ಕಾರಿ ದಾಖಲೆಗಳಲ್ಲಿ ಮಾತ್ರ ಉಳಿದುಕೊಂಡಿವೆ. ಮೂಲ ಭಾಷೆಗಳೆಲ್ಲ ಈಗ ವ್ಯಾವಹಾರಿಕ ದೃಷ್ಟಿಯಿಂದ ಸಂಪೂರ್ಣ ಮರೆಯಾಗಿ ಅಲ್ಲಿನ ಜನರ ಮನಸ್ಸಿನಿಂದಲೂ ಎಷ್ಟೋ ದೂರ ಹೋಗಿವೆ. ಬ್ರಿಟನ್‍ನಲ್ಲಿ ಈಗ ಏನಿದ್ದರೂ ಸ್ಕಾಟ್‍ಲ್ಯಾಂಡ್‍ನಲ್ಲಿ ಹುಟ್ಟಿ, ಪ್ರಪಂಚದ ಮುಂದುವರಿದ ದೇಶಗಳಲ್ಲಿ ಏಕಚಕ್ರಾಧಿಪತ್ಯ ಸ್ಥಾಪಿಸಿರುವ ಇಂಗ್ಲಿಷ್ ಭಾಷೆಯದ್ದೇ ಪಾರುಪತ್ಯ. ಗ್ರೀನ್‍ಲ್ಯಾಂಡ್ ಮತ್ತು ಫಿಲಿಪ್ಪೀನ್ಸ್, ಆಫ್ರಿಕಾ ಖಂಡದ ದೇಶಗಳ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ.

ಕೇವಲ ಇವಿಷ್ಟೇ ದೇಶಗಳ ಕತೆಯಿದು ಅಂದುಕೊಳ್ಳುವುದಕ್ಕೂ ಕಾರಣವಿಲ್ಲ. ಭಾಷೆ, ಸಂಪ್ರದಾಯ, ಧಾರ್ಮಿಕ ಕಟ್ಟುಪಾಡುಗಳನ್ನು ಕಠೋರವಾಗಿ ಪಾಲಿಸುವ ಮುಸ್ಲಿಂ ಬಾಹುಳ್ಯದ ಅರಬ್ ದೇಶಗಳಲ್ಲಿ ಹಾಗೂ ಇತರ ಮುಸ್ಲಿಂ ರಾಷ್ಟ್ರಗಳಲ್ಲಿ ಅವರ ಸಾಂಪ್ರದಾಯಿಕ ಭಾಷೆ ಮತ್ತು ಸಂಸ್ಕೃತಿಗಳು ಸುರಕ್ಷಿತವಾಗಿವೆ ಎಂಬುದು ಹೊರಜಗತ್ತಿನಲ್ಲಿರುವ ಸಾಮಾನ್ಯ ಭಾವನೆ. ಆದರೆ ಅದೂ ಕೂಡ ಸುಳ್ಳು ಎಂಬುದನ್ನು ಅಂತಾರಾಷ್ಟ್ರೀಯ ಭಾಷಾ ಅಧ್ಯಯನ ಕೇಂದ್ರ ನಡೆಸಿರುವ ಸಮೀಕ್ಷೆಯಿಂದ ದೃಢಪಟ್ಟಿದೆ. ಇರಾನ್, ಇರಾಕ್, ಜೋರ್ಡಾನ್, ಸಿರಿಯಾ, ಅಫ್ಘಾನಿಸ್ತಾನದಿಂದ ಹಿಡಿದು ನೆರೆಯ ಇಂಡೋನೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶದವರೆಗೆ ಬಹುತೇಕ ಮುಸ್ಲಿಂ ದೇಶಗಳಲ್ಲೂ ಇದೇ ತೆರನಾದ ಭಾಷೆ ಮತ್ತು ಸಂಸ್ಕೃತಿಯ ಅಳಿವು ಉಳಿವಿನ ಆತಂಕ ಕಾಡುತ್ತಿದೆ. ಮುಸ್ಲಿಂ ದೇಶಗಳಲ್ಲೂ ದಿನೇದಿನೆ ಇಂಗ್ಲಿಷ್ ಭಾಷೆ ಮೇಲುಗೈ ಸಾಧಿಸುತ್ತಿದೆ. ಸ್ಥಳೀಯ ಮತ್ತು ಸಾಂಪ್ರದಾಯಿಕ ಭಾಷೆ, ಸಂಸ್ಕೃತಿಗಳ ಅಸ್ತಿತ್ವದ ಹರವು ಕ್ಷೀಣಿಸುತ್ತ ಬರುತ್ತಿದೆ. ಈ ಮಾತಿಗೆ ಒಂದು ಉತ್ತಮ ಉದಾಹರಣೆ ಇಂಡೋನೇಷ್ಯಾ ಎಂದರೆ ತಪ್ಪಾಗಲಾರದು. ಒಂದು ಕಾಲಕ್ಕೆ ಮುಸ್ಲಿಂ ದೇಶಗಳ ಪೈಕಿ ಅತಿ ಹೆಚ್ಚು ವೈವಿಧ್ಯ ಭಾಷೆಗಳ ಸಂಪತ್ತು ಇದ್ದದ್ದು ಇಂಡೋನೇಷ್ಯಾದಲ್ಲಿ. ಕೇವಲ ನಲ್ವತ್ತು ವರ್ಷಗಳ ಹಿಂದೆ ಆ ದೇಶದಲ್ಲಿ ಸುಮಾರು ಎಂಟು ನೂರಕ್ಕೂ ಹೆಚ್ಚು ದೇಶೀಯ ಭಾಷೆಗಳಿದ್ದವು. ಸ್ಥಳೀಯ ಸಂಪ್ರದಾಯ, ಆಚರಣೆ, ಹಾಡು, ನೃತ್ಯ ಹೀಗೆ ನಾನಾ ಸಾಂಸ್ಕøತಿಕ ಪ್ರಕಾರಗಳ ಮೂಲಕ ಅಲ್ಲಿನ ಭಾಷಾ ವೈವಿಧ್ಯ ಜೀವಂತಿಕೆ ಉಳಿಸಿಕೊಂಡಿತ್ತು. ಆದರೆ ಕುರುಡಾಗಿ ಇಂಗ್ಲಿಷ್ ಭಾಷೆಯನ್ನು ಅನುಸರಿಸುವವರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪರಿಣಾಮ ಅಲ್ಲೀಗ ಇನ್ನೂರೈವತ್ತಕ್ಕೂ ಹೆಚ್ಚು ಸ್ಥಳೀಯ ಭಾಷೆಗಳು ಜನರ ಬಳಕೆಯಿಂದ ಮರೆಯಾಗಿ ಹೋಗಿವೆ. ಹಾಗೂ ಹೀಗೂ ಉಳಿದುಕೊಂಡಿರುವ ಭಾಷೆಗಳು ಕೇವಲ ನಾಮ್‍ಕಾವಾಸ್ತೆ ಎಂಬಂತಾಗಿವೆ ಎನ್ನುತ್ತಾರೆ ಅಂತಾರಾಷ್ಟ್ರೀಯ ಭಾಷಾ ಆಧ್ಯಯನಕಾರ ಮಾರ್ಟಿನ್ ಸ್ಟೆನ್‍ಹೆರ್. ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಇಂಡೋನೇಷ್ಯಾದಲ್ಲಿ ಸ್ಥಳೀಯ ಭಾಷೆಗಳು ಸಂಪೂರ್ಣವಾಗಿ ಕಣ್ಮರೆಯಾಗುತ್ತವೆ ಎಂಬುದು ಸ್ಟೆನ್‍ಹೆರ್ ಅವರ ಖಚಿತ ಅಭಿಪ್ರಾಯ. ಭಾಷೆಗಳೆಲ್ಲವೂ ಹೋದಮೇಲೆ ಅಲ್ಲಿನ ಸಂಸ್ಕೃತಿ, ವೈವಿಧ್ಯ ಉಳಿದುಕೊಳ್ಳಲು ಹೇಗೆ ಸಾಧ್ಯ?

ಪಪುವ, ನ್ಯೂ ಗಿನಿಯ ದೇಶಗಳಲ್ಲೂ ಅಷ್ಟೇ. ಅಲ್ಲಿ ಈ ಹಿಂದೆ ಸುಮಾರು ಸಾವಿರದ ನೂರೈವತ್ತು ಭಾಷೆಗಳಿದ್ದವು ಎನ್ನಲಾಗುತ್ತದೆ. ನೈಜೀರಿಯಾದಲ್ಲಿ ನಾಲ್ಕು ನೂರು ಭಾಷೆಗಳಿದ್ದವು. ಆಫ್ರಿಕಾದಲ್ಲಿ ಐನೂರಕ್ಕೂ ಹೆಚ್ಚು ಬುಡಕಟ್ಟು ಭಾಷೆಗಳಿದ್ದವು. ಆದರೆ ಈಗ ಇಡೀ ಆಫ್ರಿಕಾ ಖಂಡದ ದೇಶಗಳ ಬಹುತೇಕ ಸ್ಥಳೀಯ ಭಾಷೆಗಳು ಅವಸಾನದತ್ತ ತಲುಪಿ ಆ ಜಾಗದಲ್ಲಿ ಇಂಗ್ಲಿಷ್ ಬಂದು ಕುಳಿತುಕೊಂಡಿದೆ.

ಪ್ರಪಂಚದಾದ್ಯಂತ ಆಯಾ ದೇಶಗಳ ಸ್ಥಳೀಯ ಭಾಷೆಗಳು ಹೇಗೆ ಸತ್ತುಹೋಗುತ್ತಿವೆ ಎಂಬುದನ್ನು ಅಂತಾರಾಷ್ಟ್ರೀಯ ಭಾಷಾ ಅಧ್ಯಯನಕಾರ ಡಾ. ಮಾರ್ಕ್ ತುರಿನ್ ಹೀಗೆ ಹೇಳಿದ್ದಾರೆ: “ಜಗತ್ತಿನ ದೇಶಗಳಲ್ಲಿ ಸಾವಿರಾರು ಭಾಷೆ ಮತ್ತು ಭಾಷೆಗೆ ಅನುಗುಣವಾಗಿ ಸಂಸ್ಕøತಿಗಳು ವಿಕಾಸಗೊಂಡವು. ಆದರೆ ಈಗ ಅವೆಲ್ಲವೂ ಇಂದು ಒಂದು ತಲೆಮಾರಿನ ಅವಧಿಯಲ್ಲೇ ಸತ್ತು ಸಮಾಧಿ ಸೇರುತ್ತಿವೆ”. ಯೋಚನೆ ಮಾಡಿ ನೋಡಿ, ತುರಿನ್ ಮಾತು ಮನದಟ್ಟಾಗದೇ ಹೋದರೆ ಹೇಳಿ.

ಬೇರೆಲ್ಲ ಏಕೆ, ಭಾರತದ ಸಂದರ್ಭಕ್ಕೆ ಬರೋಣ. ಭಾರತದಲ್ಲಿ ಸುಮಾರು 900 ಪ್ರಾದೇಶಿಕ ಮತ್ತು ಜನಾಂಗೀಯ ಭಾಷೆಗಳು ರೂಢಿಯಲ್ಲಿದ್ದವು ಎಂದು ಭಾರತದ ಜನಭಾಷಾ ಸರ್ವೆಯ ಉಸ್ತುವಾರಿ ಗಣೇಶ್ ದೇವಿ ಅವರು ಹೇಳುತ್ತಾರೆ. ಆ ಪೈಕಿ 780 ಭಾಷೆಗಳನ್ನು ಅಧಿಕೃತವಾಗಿ ದಾಖಲಿಸಲಾಗಿದೆ. ಖ್ಯಾತ ಚಿಂತಕ, ಭಾರತದ ಎರಡನೇ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ 125ನೇ ಜನ್ಮ ದಿನಾಚರಣೆ ವೇಳೆ 2014ರಲ್ಲಿ ಹೊರತಂದ 35 ಸಾವಿರ ಪುಟಗಳ, 50 ಸಂಪುಟಗಳ ಗ್ರಂಥದಲ್ಲಿ ಅದನ್ನು ಸ್ಪಷ್ಟವಾಗಿ ದಾಖಲಿಸಲಾಗಿದೆ. ಅದರಲ್ಲಿ ಅರ್ಧದಷ್ಟು ಭಾಷೆಗಳು ಕಳೆದ ಐವತ್ತು ವರ್ಷಗಳಿಂದೀಚೆಗೆ ಅವಸಾನಗೊಂಡಿವೆ. ಉಳಿದವುಗಳಲ್ಲಿ ಮುಕ್ಕಾಲು ಭಾಗ ಹೆಸರಿಗೆ ಮಾತ್ರ ಉಳಿದುಕೊಂಡಿವೆ. ಬಳಕೆ ದೃಷ್ಟಿಯಿಂದ ಬಹುಪಾಲು ಭಾಷೆಗಳು ಆಗಲೇ ಅಳಿದುಹೋಗಿವೆ. ಮುಂದಿನ ಐವತ್ತು ವರ್ಷಗಳಲ್ಲಿ ಅಳಿದುಳಿದ ಭಾಷೆಗಳೂ ಸಂಪೂರ್ಣವಾಗಿ ಕಣ್ಮರೆಯಾಗುತ್ತವೆ ಎಂದು ದೇಶ ಭಾಷೆಗಳ ಸರ್ವೆ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಭಾಷಾ ತಜ್ಞ ಜಾರ್ಜ್ ಗ್ರಿಸನ್ ಖಚಿತವಾಗಿ ಭವಿಷ್ಯ ನುಡಿಯುತ್ತಾರೆ. ಇದೆಲ್ಲದಕ್ಕೂ ಕಾರಣ ಇಂಗ್ಲಿಷ್ ಭಾಷೆ. ಅದರ ಆಗಮನದ ಪರಿಣಾಮ ಕಳೆದ ಇನ್ನೂರು ವರ್ಷಗಳಲ್ಲಿ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ಬಹುತೇಕ ದೇಶಗಳಲ್ಲಿ ದೇಶೀ ಭಾಷೆಗಳು ಅವಸಾನ ಕಂಡಿವೆ ಎಂದು ಅಧ್ಯಯನ ಮುಖೇನ ಕಂಡುಕೊಂಡ ಸತ್ಯವನ್ನು ಗ್ರಿಸನ್ ಹೊರಹಾಕಿದ್ದಾರೆ. ಆದರೆ ದುರಂತ ನೋಡಿ, ಇದನ್ನು ಗುರುತಿಸುವಲ್ಲಿ ನಾವು ಈಗಲೂ ಎಡವುತ್ತಿದ್ದೇವೆ. ಗುರುತಿಸಿದರೂ ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದೇವೆ.

ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವ ಕುರಿತು ಮಾತನಾಡುವವರಲ್ಲಿ ಎರಡು ಗುಂಪಿದೆ. ಒಂದು ಗುಂಪಿನವರು ಕನ್ನಡ ಉಳಿಯಬೇಕಾದರೆ ಇಂಗ್ಲಿಷನ್ನು ಹೊಡೆದು ಹೊರಗಟ್ಟಬೇಕು ಎಂಬ ವಾದ ಮುಂದಿಡುತ್ತಾರೆ. ಇನ್ನೊಂದು ವರ್ಗವಿದೆ. ಆ ಗುಂಪಿನ ವಾದ ಇದಕ್ಕಿಂತಲೂ ತೀರಾ ವಿಚಿತ್ರ ಮತ್ತು ಅಸಂಬದ್ಧ. ಕನ್ನಡವೂ ಸೇರಿದಂತೆ ದೇಶೀ ಭಾಷೆಗಳು ಉಳಿಯಬೇಕಾದರೆ ಅವು ಮೊದಲು ಸಂಸ್ಕøತ ಭಾಷೆಯ ಹಂಗಿನಿಂದ ಹೊರಬರಬೇಕು ಎಂಬ ಹೇಳುತ್ತಾರೆ. ಅಬ್ಬರಿಸುತ್ತಾರೆ.

ಇದು ನಿಜವೇ? ಭಾರತೀಯ ಭಾಷೆಗಳು ಸಂಸ್ಕøತದ ಸಂಬಂಧವನ್ನು ಕಡಿದುಕೊಂಡು ಬದುಕುಳಿಯಬಲ್ಲವೇ? ಪ್ರಪಂಚದಾದ್ಯಂತ ಸ್ಥಳೀಯ ಭಾಷೆಗಳು ಇಂಗ್ಲಿಷ್ ಸುಂಟರಗಾಳಿಗೆ ಸಿಲುಕಿ ಕೊಚ್ಚಿಕೊಂಡು ಹೋಗಿರುವುದರ ನಡುವೆಯೂ ಕೆಲವಾದರೂ ಭಾರತೀಯ ಭಾಷೆಗಳು ಅಲ್ಪಸ್ವಲ್ಪವಾದರೂ ಅಸ್ತಿತ್ವ ಉಳಿಸಿಕೊಂಡದ್ದಿದ್ದರೆ ಅದಕ್ಕೆ ಸಂಸ್ಕøತ, ಪ್ರಾಕೃತ, ಪರ್ಶಿಯನ್ ಭಾಷೆಗಳ ಕೊಡುಗೆಗಳೇನಾದರೂ ಕಾರಣವೇ? ಒಟ್ಟಾರೆ ದೇಶಭಾಷೆಗಳನ್ನು ಉಳಿಸಿಕೊಳ್ಳಬೇಕೆನ್ನುವ ನೈಜ ಕಳಕಳಿ ಇರುವವರು ಹೇಗೆ ಆಲೋಚನೆ ಮಾಡಬೇಕು, ಯಾವ ರೀತಿ ಕನ್ನಡವನ್ನು ವರ್ತಮಾನಕ್ಕೆ ಮತ್ತು ಭವಿಷ್ಯತ್ತಿಗೆ ಅಣಿಗೊಳಿಸಬೇಕು…. ಇವನ್ನೆಲ್ಲ ಮುಂದೆ ನೋಡೋಣ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top