ಆನೆ ಬಂತೊಂದಾನೆ, ಭಾರತೀಯರ ಪ್ರೀತಿಯ ಆನೆ

– ಅಪಾರ ಬಲವಿದ್ದರೂ ಸ್ವಭಾವತಃ ಸೌಮ್ಯವಾದ ಆನೆ ದೇವರಿಗೆ ಭಾರತೀಯರ ಹೃದಯದಲ್ಲಿ ಅನನ್ಯ ಸ್ಥಾನ.

– ಡಾ. ವಿ.ಬಿ. ಆರತೀ.
ಕೇರಳದಲ್ಲಿ ಇತ್ತೀಚೆಗೆ, ಗರ್ಭಿಣಿ ಆನೆಗೆ ಬಾಂಬ್ ಹೊಂದಿದ ಹಣ್ಣನ್ನು ತಿನ್ನಿಸಿ, ಸಾಯಿಸಿದ ದುಷ್ಕೃತ್ಯವನ್ನು ದೇಶಕ್ಕೆ ದೇಶವೇ ಖಂಡಿಸಿತು. ಯಾವುದೇ ಪ್ರಾಣಿಯನ್ನು ಇಷ್ಟು ಕ್ರೂರವಾಗಿ ಕೊಂದರೆ ಸಜ್ಜನ ಮನಸ್ಸು ನೊಂದುಕೊಳ್ಳುತ್ತದೆ. ಕಾಡುಗಳ್ಳರ ಪೈಕಿ ವೀರಪ್ಪನ್ ಬಗ್ಗೆ ಹೆಚ್ಚು ಆಕ್ರೋಶವಿದ್ದದ್ದೂ ಆತ ಹಂತಕನೆಂದೇ ಅಲ್ಲವೆ? ಭಾರತೀಯ ಮನದಲ್ಲಿ, ಧರ್ಮ- ಸಂಸ್ಕೃತಿ- ರಾಜಪರಂಪರೆಗಳಲ್ಲಿ ಆನೆಗೆ ಇರುವ ಸ್ನೇಹಾದರಗಳೂ ಪ್ರಾಶಸ್ತ್ಯವೂ ಅಂತಹದ್ದು! ಆನೆಯನ್ನು ಮುಟ್ಟಿ ನಮಸ್ಕರಿಸಿಯೇ ಅದನ್ನು ಏರುವುದು. ಅದರ ದೊಡ್ಡ ಹೊಟ್ಟೆ, ಮಧುರ- ಗಂಭೀರವಾಗಿ ತೂರಾಡುವ ದೊಡ್ಡ ಮೈ, ಮೊರದಗಲದ ಕಿವಿಗಳೂ, ಚಲಿಸುವ ಉದ್ದನೆಯ ಸೊಂಡಿಲು, ಚಿಣ್ಣರನ್ನೇನು ವೃದ್ಧರ ಕಣ್ಮನಗಳನ್ನೂ ಸೆಳೆಯುತ್ತವೆ. ಬಾಲ್ಯದಲ್ಲಿ ಅಪ್ಪನ ಬೆನ್ನ ಮೇಲಿನ ‘ಜಂಬೂಸವಾರಿ’ ಚಿಣ್ಣರ ಪಾಲಿನ ಜೀವನದ ಮೊದಲ ಮೆರವಣಿಗೆ! ಗಜೇಂದ್ರ, ಗಜಾನನ, ಕರೀಂದ್ರ, ಮದಕರಿ ಎನ್ನುವ ಹೆಸರುಗಳನ್ನೂ ಭಾರತೀಯರು ಇಟ್ಟುಕೊಳ್ಳುತ್ತಾರೆ.
ಆನೆ ಸಾಕಿದಂತೆ!: ಆನೆ ಸಾಕಲು ಪ್ರೀತಿಯಷ್ಟೇ ಅಲ್ಲ, ತಾಳ್ಮೆ, ಜಾಣ್ಮೆ, ಧೈರ್ಯ, ತರಬೇತಿಗಳೂ ಬೇಕಾಗುತ್ತವೆ. ಆನೆ ಸಾಕುವುದು ಸಾಮಾನ್ಯರಿಂದಾಗದು – ‘ಬಡವನಿಗೆ ಆನೆ ಕೊಟ್ಟಂತೆ’ ಎನ್ನುವ ಗಾದೆಯಿದೆ! ಸಸ್ಯಾಹಾರಿಯಾಗಿದ್ದರೂ ಆನೆಗೆ ಆಹಾರವೊದಗಿಸುವುದು ಸಾಮಾನ್ಯದ ಮಾತಲ್ಲ. ಭಾರತದ ಆನೆಯು ದಿನಕ್ಕೆ ಸುಮಾರು 150 ಕೆಜಿಯಷ್ಟು ಆಹಾರವನ್ನು ಸೇವಿಸುತ್ತದಂತೆ! ಆಹಾರವಿತ್ತರೂ, ಆನೆಯು ಗಬಗಬನೆ ತಿನ್ನುವುದಿಲ್ಲ. ಮಾವುತನು ಅದೆಷ್ಟೋ ಪುಸಲಾಯಿಸಿದ ಮೇಲೆಯೇ ತಿನ್ನಲಾರಂಭಿಸುವುದು! ‘‘ಗಜಪುಂಗವಸ್ತು ಧೀರಂ ವಿಲೋಕಯತಿಚಾಟುಶತೈಶ್ಚಭುಂಕ್ತೇ’’ ಎನ್ನುತ್ತಾನೆ ಭರ್ತೃಹರಿ.
ಆನೆಗೆ ಸ್ನಾನ ಮಾಡಿಸುವುದೂ ಶ್ರಮದಾಯಕ. ನೀರಿಗಿಳಿಯುತ್ತಲೇ ಮಕ್ಕಳಂತೆ ತುಂಟಾಟವಾಡುತ್ತ, ಅತ್ತಿತ್ತ ಹೊರಳುತ್ತವೆ. ಮರಿಯಾನೆಗಳ ಸಂಭ್ರಮವಂತೂ ಹೇಳತೀರದು. ಮಾವುತನು ಮೈ ತಿಕ್ಕಿ ಸ್ನಾನ ಮಾಡಿಸುವಾಗ, ಅವುಗಳು ಆನಂದಿಸುವ ಪರಿಯನ್ನು ಕಂಡೇ ತಿಳಿಯಬೇಕು! ಇಷ್ಟೆಲ್ಲ ಶ್ರಮಪಟ್ಟು ಸ್ನಾನ ಮಾಡಿಸಿದ ಮೇಲೆ, ಆನೆಗಳು ದಡಕ್ಕೆ ತೆರಳುತ್ತಲೇ ತಲೆ- ಬೆನ್ನುಗಳ ಮೇಲೆ ಮಣ್ಣೆರಚಿಕೊಳ್ಳುತ್ತವೆ!
ತನ್ನನ್ನು ಸಾಕಿದವರ ರಕ್ಷಿಸಿದವರ ವಿಷ್ಯದಲ್ಲಿ ಆನೆಗಳಿಗೆ ಅಪಾರ ಸ್ನೇಹವಿರುತ್ತದೆ. ತಮ್ಮ ತಂಡದ ಆನೆಗಳಾಗಲಿ, ಸಾಕಿದವರಾಗಲಿ ಸತ್ತಾಗ ಆನೆಗಳು ಅನ್ನ ನೀರು ಬಿಟ್ಟು ಶೋಕಿಸುವುದುಂಟು. Elephant Whisperer ಎಂದೇ ಪ್ರಸಿದ್ಧನಾಗಿದ್ದ ಪ್ರಾಣಿವಿಜ್ಞಾನಿ ಲಾರೆನ್ಸ್ ಆಂಥೋನಿಯು 2012ನಲ್ಲಿ ಸತ್ತಾಗ, ಎಲ್ಲೋ ಕಾಡಲ್ಲಿದ್ದ ಅವನು ರಕ್ಷಿಸಿದ್ದ ಆನೆಗಳ ದೊಡ್ಡ ಗುಂಪು ಮೈಲಿಗಟ್ಟಲೆ ದೂರ ನಡೆದು ಬಂದು, ಆತನ ಮನೆಯ ಸುತ್ತ ಎರಡು ದಿನ ನಿಂತು ಶೋಕಾಚರಣೆ ಮಾಡಿದ್ದನ್ನು ಜಗತ್ತೇ ಬೆರಗಾಗಿ ನೋಡಿತು!
ಭಾರತೀಯ ಸಂಸ್ಕೃತಿಯಲ್ಲಿ: ಸಹಸ್ರಮಾನಗಳಿಂದಲೂ ಭಾರತೀಯರ ಪಾಲಿಗೆ ಆನೆಯು ದಿವ್ಯ ಸಂಕೇತಗಳ ಆಗರ; ಬಲ- ರಾಜವೈಭವಗಳ ದ್ಯೋತಕ! ಅತಿವಿರಳ ಶ್ವೇತಗಜವಂತೂ ಪ್ರಶಸ್ತ. ವಿಶೇಷ ದಿನಗಳಲ್ಲಿ ರಾಜವಂಶದವರೂ ಜನಸಾಮಾನ್ಯರೂ ಆನೆಗಳಿಗೆ ಹಣ್ಣುಹಂಪಲನ್ನಿತ್ತು ಆಶೀರ್ವಾದವನ್ನು ಪಡೆಯುವುದು ಪದ್ಧತಿ. ಮಠಮಂದಿರಗಳಲ್ಲಿಯೂ ರಾಜಾಂಗಣಗಳಲ್ಲಿಯೂ ಪುರದ ಹೆಬ್ಬಾಗಿಲಲ್ಲಿಯೂ ಆನೆಗಳನ್ನು ಜನತಾ ದರ್ಶನಕ್ಕಾಗಿ ನಿಲ್ಲಿ ಮೈಸೂರು ದಸರೆಯ ಶೋಭಾಯಾತ್ರೆಯಲ್ಲಿ ಆನೆಗಳದ್ದೇ ಕೇಂದ್ರಾಕರ್ಷಣೆ. ವಿಜಯನಗರ ಹಾಗೂ ಇತರ ಭವ್ಯ ಸಾಮ್ರಾಜ್ಯಗಳಲ್ಲಿ ನಡೆಯುತ್ತಿದ್ದ ಅದ್ದೂರಿಯ ಜಂಬೂಸವಾರಿಗಳ ಗತವೈಭವದ ಅಭಿನವರೂಪವದು. ಕೇರಳದ ಹಬ್ಬ ಹರಿದಿನ- ಉತ್ಸವಳಲ್ಲಿ, ಹಣೆ- ಸೊಂಡಿಲುಗಳ ಮೇಲೆ ಚಿನ್ನ/ತಾಮ್ರದ ‘ನೆತ್ತಿಪೊಟ್ಟಂ’ ಆಭಾರಣವನ್ನು ಧರಿಸಿದ ಸಾಲಂಕೃತ ಆನೆಗಳನ್ನು ಕಾಣಬಹುದು.
ಭಾರತೀಯರ ಸಾಂಪ್ರದಾಯಿಕ ವಸ್ತ್ರಗಳ ಹಾಸು- ಹೊದಿಕೆಗಳ ಕಸೂತಿ- ಚಿತ್ತಾರಗಳಲ್ಲಿ, ಆಭರಣ ವಿನ್ಯಾಸಗಳಲ್ಲಿ,ಕಲಾಕೃತಿಗಳಲ್ಲಿ ರಂಗೋಲಿ- ಧ್ವಜ- ಪತಾಕೆಗಳಲ್ಲಿ ಆನೆ ಚಿತ್ರಗಳು ಸರ್ವೇಸಾಮಾನ್ಯ. ದಂತ ಕೆತ್ತನೆಗಳ ಕಲೆಯಲ್ಲಂತೂ ಭಾರತವು ಅದ್ಭುತದ ಸೀಮೆಗಳನ್ನೇ ಮುಟ್ಟಿದೆ. ಶುಭಸಮಾರಂಭಗಳಲ್ಲಿ ಸಭಾಭವನದಲ್ಲಿ, ಬಾಗಿಲಲ್ಲಿ, ಅಂಗಳದಲ್ಲಿ ಆನೆಯ ಮೂರ್ತಿಗಳನ್ನು ನಿಲ್ಲಿಸುವುದುಂಟು. ದಕ್ಷಿಣ ಭಾರತದ ಕೆಲವು ಮದುವೆಗಳಲ್ಲಿ ವಧೂವರರಿಗೆ ‘ಉಪ್ಪಾನೆ’- ‘ಬೇಳೆಯಾನೆ’ಗಳ ಸ್ವಾರಸ್ಯಕರ ವಿಧಿಯನ್ನೂ ಮಾಡಿಸುವುದುಂಟು. ಜನ್ಮಜಾತವಾದ ದೇಹಮನೋದೌರ್ಬಲ್ಯವಿರುವ ಮಕ್ಕಳನ್ನು ಆನೆಯ ಬಿಸಿಲದ್ದಿಯಲ್ಲಿ ನಿಲ್ಲಿಸಿ, ಬಲವರ್ಧನೆಗೊಳಿಸುವ ನೀಡುವ ನಾಟಿ ಚಿಕಿತ್ಸೆಯೂ ಇದೆ.
ಧಾರ್ಮಿಕ ಪರಂಪರೆಯಲ್ಲಿ: ಭಾರತ ಮೂಲದ ವೈದಿಕ, ಆಗಮ, ಜಾನಪದೀಯ, ಬೌದ್ಧ ಜೈನಾದಿಗಳಲ್ಲಿ ಆನೆಗೆ ಪ್ರಾಶಸ್ತ್ಯ. ಜನಪ್ರಿಯ ದೇವತೆ ಗಣೇಶನು ಗಜಮುಖವನ್ನು ಹೊಂದಿರುತ್ತಾನೆ. ಶಿವನ ಆಗ್ರಹದಿಂದಾಗಿ ತಲೆ ಕಳೆದುಕೊಂಡು, ಗಣೇಶನು ಆನೆಮೊಗವನ್ನು ಪಡೆದ ಕತೆಯಿದ್ದರೂ, ಯೋಗಶಾಸ್ತ್ರದ ಪ್ರಕಾರ ‘ಗಜಮುಖ’ವು ಮೂಲಾಧಾರ ಪದ್ಮದಲ್ಲಿ ಯೋಗಿಗೆ ಆಗುವ ಗಜಕುಂಡ ದರ್ಶನದ ಪ್ರತೀಕವಾಗಿದೆ. ಸಮುದ್ರಮಥನದಲ್ಲಿ ಉದ್ಭವಿಸಿದ ‘ಐರಾವತ’ ವೆಂಬ ಶ್ವೇತಗಜವು ದೇವತೆಗಳ ಒಡೆಯನಾದ ಇಂದ್ರನ ವಾಹನ. ಐರಾವತಕ್ಕೆ ಮೂರು ಸೊಂಡಿಲುಗಳು. ಐರಾವತ, ಪುಂಡರೀಕ, ವಾಮನ, ಕುಮುದ, ಅಂಜನ, ಪುಷ್ಪದಂತ, ಸಾರ್ವಭೌಮ ಮತ್ತು ಸುಪ್ರತೀಕ ಎಂಬ ಅಷ್ಟದಿಗ್ಗಜಗಳೂ, ಆಭ್ರ, ಕಪಿಲಾ, ಪಿಂಗಲಾ, ಅನುಪಮಾ, ತಾಮ್ರಪಾಣಿ, ಶುಭ್ರದಂತೀ, ಅಂಗನಾ ಮತ್ತು ಅಂಜನಾವತಿಯರೆಂಬ ಅವರ ಪತ್ನಿಯರು ಪುರಾಣಪೂಜ್ಯ. ಅಷ್ಟದಿ ಕ್ಪಾಲಕರು ದಿಗ್ಗಜಗಳನ್ನೇರಿ ಅಷ್ಟದಿಕ್ಕುಗಳಲ್ಲೂ ರಕ್ಷಿಸುತ್ತಾರೆ. ಪೂಜೆಯಲ್ಲಿ ಭಗವಂತನಿಗೆ ನಿವೇದಿಸುವ ಹಲವು ರಾಜೋಪಚಾರಗಳಲ್ಲಿ ‘ಗಜಾರೋಹಣಂ ಸಮರ್ಪಯಾಮಿ’ ಎನ್ನುವುದೂ ಒಂದು.
ಸಂಕೇತಗಳು: ಆನೆಯು ಸೊಂಡಿಲೆತ್ತಿದರೆ, ಇಳಿಸಿದರೆ, ಮಂಡಿಯೂರಿದರೆ, ಓಡುತ್ತಿದ್ದರೆ, ಮೀಯುತ್ತಿದ್ದರೆ, ಮಣಿದರೆ, ಮರಿ ಹಾಕುತ್ತಿದ್ದರೆ- ಎಲ್ಲಕ್ಕೂ ಸಂಕೇತಗಳನ್ನು ಜೋಡಿಸುತ್ತದೆ ಆಸ್ತಿಕ ಲೋಕ! ಹೆಣ್ಣಾನೆಗೂ ಗಂಡಾನೆಗೂ ಮರಿಯಾನೆಗೂ ಪ್ರತ್ಯೇಕ ಪ್ರಾಶಸ್ತ್ಯಗಳಿವೆ. ಆನೆಯು ಕನಸಿನಲ್ಲಿ ಬರುವುದು ಆಂತರಿಕ ಸತ್ವಸಾಮರ್ಥ್ಯಗಳನ್ನು ಜಾಗೃತಗೊಳಿಸಲೆಂದೇ ಎನ್ನುತ್ತಾರೆ. ಕನಸಿನಲ್ಲಿ ಆನೆ ಕಂಡರೆ ಐಶ್ವರ್ಯ ಪ್ರಾಪ್ತಿ, ಗಜಪಡೆ ಕಂಡರೆ ಅಧಿಕಾರ ಪ್ರಾಪ್ತಿ, ಆನೆಯನ್ನೇರಿದಂತೆ ಕಂಡರೆ ಸಮಸ್ಯಾ ಪರಿಹಾರವೆಂದೂ, ರಂಪಾಟವಾಡುವ ಆನೆಯು ‘ಕಾಮಮೋಹಗಳ ಹತ್ತಿಕ್ಕು’ ಎನ್ನುವ ಎಚ್ಚರಿಕೆಯೆಂದೂ, ಸ್ನಾನ ಮಾಡುವ ಆನೆಯು ಮನಃಶುದ್ಧಿಯ ಉಪದೇಶವೆಂದೂ, ಸಾಯುತ್ತಿರುವ ಆನೆಯು ಐಶ್ವರ್ಯನಾಶದ ಸೂಚನೆಯೆಂದೂ, ಮರಿ ಹಾಕುತ್ತಿರುವ ಆನೆಯು ದೊಡ್ಡ ಕಾರ್ಯಸಾಧನೆಯ ಸೂಚನೆಯೆಂದೂ ವಿಶೇಷಾರ್ಥಗಳನ್ನು ಹೇಳಲಾಗುತ್ತದೆ. ಬುದ್ಧನ ತಾಯಿ ಗರ್ಭಿಣಿಯಾಗಿದ್ದಾಗ, ಅವಳ ಕನಸಿನಲ್ಲಿ ಶ್ವೇತಗಜವು ಕಾಣಿಸಿಕೊಂಡು, ಆಕೆಗೆ ಕಮಲವನ್ನಿತ್ತು ಮೂರು ಬಾರಿ ಸುತ್ತಿ ಬಂದು ನಮಿಸಿತೆಂದು ಪ್ರಸಿದ್ಧ. ಜಿನರ ಮಹಾಗುರುವೆನಿಸಿದ ಅಜಿತನಾಥನ ಲಾಂಛನ ಆನೆ.
ದೇಗುಲ- ಕಲೆಗಳಲ್ಲಿ ಆನೆ: ಆಧುನಿಕ ಸಲಕರಣೆಗಳಿಲ್ಲದಿದ್ದ ಕಾಲದಲ್ಲಿ, ದೇಗುಲ- ರಾಜಭವನಗಳ ನಿರ್ಮಾಣ ಕಾರ್ಯದಲ್ಲಿ ಆನೆಗಳ ಯೋಗದಾನ ಮಹತ್ವದ್ದಾಗಿತ್ತು. ಪಳಗಿಸಿದ ಆನೆಗಳು ಮೈಲಿಗಟ್ಟಲೆ ದೂರದಿಂದ ದಿಮ್ಮಿಗಳನ್ನೂ ಕಲ್ಲುಬಂಡೆಗಳನ್ನೂ ಹೊತ್ತು ತಂದು ಕಟ್ಟಡದಲ್ಲಿ ಜೋಡಿಸುವುದರಲ್ಲೂ ನಿಪುಣವಾಗಿದ್ದವು.
ಪ್ರಾಚೀನ ಮತ್ತು ಮಧ್ಯಯುಗದ ಹಿಂದು, ಬೌದ್ಧ- ಜೈನ ದೇವಾಗಾರಗಳ ಶಿಲ್ಪಕಲೆಯಲ್ಲಿ ಆನೆಗಳನ್ನು ಹೇರಳವಾಗಿ ಚಿತ್ರಿಸಲಾಗಿದೆ. ಗಣಪತಿ ಮೂರ್ತಿಗಳು, ಶ್ವೇತಗಜಗಳಿಂದ ಕಮಲಾರ್ಚನೆಗೊಳ್ಳುವ ಗಜಲಕ್ಷ್ಮೀ, ಐರಾವತವನ್ನೇರಿದ ದೇವೇಂದ್ರ, ಲಿಂಗಾರ್ಚನೆ- ಅಭಿಷೇಕಗಳನ್ನು ಮಾಡುವ ಆನೆ, ಮೊಸಳೆಯಿಂದ ಗಜೇಂದ್ರನನ್ನು ರಕ್ಷಿಸಿದ ವಿಷ್ಣು, ಶಿವನ ಗಜಾಸುರ ಸಂಹಾರ, ಸಮುದ್ರಮಥನದಲ್ಲಿ ಉದ್ಭವಿಸಿದ ಐರಾವತ, ದಿಗ್ಗಜಗಳನ್ನೇರಿ ಕುಳಿತ ಅಷ್ಟದಿಕ್ಪಾಲಕರು, ಕುವಲಯಾಪೀಡನೆಂಬ ಮದಗಜವನ್ನು ಪಳಗಿಸಿದ ಕೃಷ್ಣ, ಮದವೇರಿ ನುಗ್ಗಿ ಬರುತ್ತಿರುವ ಗಜವನ್ನು ಸ್ಪರ್ಶಮಾತ್ರದಿಂದ ಶಾಂತವಾಗಿಸಿದ ಬುದ್ಧ, ಸೊಂಡಿಲೆತ್ತಿ ನಮಿಸುತ್ತಿರುವ ಗಜ, ಹಸೆಮಣೆಯತ್ತ ಆನೆಯೇರಿ ಬರುತ್ತಿರುವ ರಾಜವಧು, ಜನಸಾಮಾನ್ಯರೂ ಮಕ್ಕಳೂ ಆನೆಯನ್ನು ನಮಿಸಿ ಹಣ್ಣುಹಂಪಲನ್ನು ತಿನ್ನಿಸುತ್ತಿರುವುದು, ಸೈನ್ಯದ ಗಜಪಡೆ, ಗೀತ- ನೃತ್ಯ- ವಾದ್ಯ- ವಿನೋದಗಳ ನಡುವೆ ಮೆರವಣಿಗೆ ಬರುವ ಸಾಲಂಕೃತ ಆನೆಗಳು..ಇತ್ಯಾದಿ. ನಮ್ಮ ಹೊಯ್ಸಳರ ದೇಗುಲಗಳಲ್ಲಂತೂ ಸಾವಿರಾರು ಆನೆಗಳ ಸಾಲುಗಳಲ್ಲಿ ಒಂದರಂತೆ ಮತ್ತೊಂದಿರದು! ದಿಲ್ಲಿಯ ಆಧುನಿಕ ಸ್ವಾಮಿ ನಾರಾಯಣ ಮಂದಿರದಲ್ಲೂ ಸುಮಾರು 5000 ಆನೆಗಳ ಇಂತಹ ಅನ್ಯಾದೃಶ ಕೆತ್ತನೆಗಳ ಮರುನಿರ್ಮಾಣವಾಗಿರುವುದನ್ನು ಕಾಣಬಹುದು. ಆನೆ ಹಾಗೂ ಸಿಂಹಗಳ ಮಿಶ್ರರೂಪದ ಶರಭ/ವ್ಯಾಳ ಎನ್ನುವ ಪ್ರಾಣಿಯನ್ನು ದಕ್ಷಿಣ ಭಾರತದ ದೇಗುಲಗಳಲ್ಲಿ ಕಾಣಬಹುದು.
ರಾಜ ಪರಂಪರೆಯಲ್ಲಿ: ಕಾಡಾನೆಗಳನ್ನು ಪಳಗಿಸಿ, ಯುದ್ಧ ಮತ್ತು ನಿರ್ಮಾಣ ಕಾರ್ಯಗಳಲ್ಲಿ ಬಳಸುವ ಪದ್ಧತಿ/ಗಜಶಾಸ್ತ್ರ ಸಹಸ್ರಮಾನಗಳಿಂದ ಬಳಕೆಯಲ್ಲಿದೆ. ಕ್ಷತ್ರಿಯ ವಂಶಗಳು ಇದಕ್ಕಾಗಿ ತನುಮನಧನಗಳನ್ನು ಹರಿಯಿಸಿದ್ದಾರೆ. ಗಜಪಡೆಯು ರಾಜ್ಯದ ಬಲದ ಸಂಕೇತ. ಪಟ್ಟದಾನೆಗಂತೂ ವಿಶೇಷ ಆದರ, ತರಬೇತಿ ಮತ್ತು ರಕ್ಷ ಣೆ. ಧಾರ್ಮಿಕ- ರಾಜಕೀಯ ಸಮಾರಂಭಗಳಲ್ಲಿ ಪಟ್ಟದಾನೆಯ ಮೇಲೆ ದೇವರನ್ನೋ ರಾಜರಾಣಿಯರನ್ನೋ ಮೆರವಣಿಗೆ ಮಾಡುವುದಿತ್ತು.
ಭಾರತೀಯರ ಸೈನ್ಯಗಳು ತಮ್ಮ ಗಜಪಡೆಗಳಿಗಾಗಿಯೇ ಪ್ರಾಚೀನ ಕಾಲದಿಂದಲೂ ವಿಶ್ವವಿಖ್ಯಾತ. ಭಾರತೀಯ ಸೈನ್ಯಗಳ ಗಜಪಡೆಯ ತಾಕತ್ತನ್ನು ಎದುರಿಸಲಾಗದ, ಅಶ್ವಪಡೆಯ ಆರಬ್ಬೀ ಆಕ್ರಮಣಕಾರರು ಶತಮಾನಗಳ ಕಾಲ ಮತ್ತೆ ಮತ್ತೆ ಸೋಲನ್ನುಣ್ಣ ಬೇಕಾಯಿತು. ಆನೆಯ ಎತ್ತರಕ್ಕೆ ಏರುವ ಕುದುರೆಯ ಹಲ್ಲಣವನ್ನು ಆವಿಷ್ಕರಿಸಿದ ಮೇಲೆಯೇ ಭಾರತೀಯರನ್ನು ಸಮರದಲ್ಲಿ ಎದುರಿಸುವ ಧೈರ್ಯ ಮಾಡಿದರಂತೆ.
ಗಂಗರಸ, ಎರಡನೆಯ ಲಾಂಗೂಲ ನರಸಿಂಹ ದೇವನು, ಅಸಾಧಾರಣ ಗಜಪಡೆಯನ್ನು ಹೊಂದಿದ್ದು, ‘ಗಜಪತಿ’ಯೆಂದೇ ಪ್ರಸಿದ್ಧನಾಗಿದ್ದನು. ಆನೆಗಳಲ್ಲಿ ಅವನ ಪ್ರೀತಿ- ತಜ್ಞತೆ ಅಸಾಮಾನ್ಯವಾಗಿತ್ತಂತೆ. ರಣರಂಗದಲ್ಲಿ ಆತ ಮೂರ್ಛೆ ತಪ್ಪಿದ್ದಾಗ, ‘ಸುದೇಹಿ’ ಎನ್ನುವ ಪಟ್ಟದಾನೆಯು ಅವನನ್ನು ಸೊಂಡಿಲಿಂದೆತ್ತಿಕೊಂಡು ಸುರಕ್ಷಿತ ಸ್ಥಳಕ್ಕೊಯ್ದು ಪ್ರಾಣವನ್ನುಳಿಸಿತಂತೆ! ಅಂತಹ ಬಾಂಧವ್ಯ! ‘ಸುದೇಹಿ’ಯ ಗೌರವಾರ್ಥವಾಗಿ ನರಸಿಂಗದೇವನು ತಾನು ಕಟ್ಟಿಸಿದ ಓಡಿಸ್ಸಾದ ಕೋಣಾರ್ಕ ದೇಗುಲದಲ್ಲಿ ‘ತನ್ನನ್ನು ಹೊತ್ತು ರಕ್ಷಿಸಿದ ಆನೆಯ ಮೂರ್ತಿ’ಯನ್ನೂ ಸ್ಥಾಪಿಸಿದ್ದಾನೆ. ಇದರ ಅಂಚೆಚೀಟಿಯನ್ನೂ ಕೇಂದ್ರ ಸರಕಾರ ಬಿಡುಗಡೆ ಮಾಡಿತ್ತು.
ನಮ್ಮ ಮೈಸೂರು ಸಂಸ್ಥಾನವೂ ಗಜಪಡೆಯನ್ನು ಆಸ್ಥೆಯಿಂದ ಬೆಳೆಸಿದೆ. ಮೈಸೂರು ಮಹಾರಾಜರು ಆನೆಗಳ ಸಂರಕ್ಷ ಣೆಗಾಗಿ 1931ರಲ್ಲಿ, 90 ಕಿಮೀಗಳ ‘ವೇಣುಗೋಪಾಲ’ ಎನ್ನುವ ಗಜವನವನ್ನೇ ನಿರ್ಮಿಸಿದ್ದರು. ಕೇರಳ ರಾಜ್ಯದ ರಾಜಲಾಂಛನವೇ ಉತ್ಸವದ ಆನೆಗಳ ಹಣೆಯ ಸಿಂಗಾರವಾದ ‘ನೆತ್ತಿಪೊಟ್ಟಂ.’
ಸಾಹಿತ್ಯದಲ್ಲಿ: ವೇದ, ಆಗಮ, ಕಾವ್ಯ, ಶಾಸ್ತ್ರ, ಜಾನಪದ..ಎಲ್ಲಸಾಹಿತ್ಯ ಪ್ರಕಾರಗಳಲ್ಲೂ ಗಜದ ಉಲ್ಲೇಖಗಳಿವೆ. ಕಾಳಿದಾಸನ ರಘುವಂಶ ಕಾವ್ಯದಲ್ಲಿ ಅಜಮಹಾರಾಜನು ಮದವೇರಿದ ಆನೆಯನ್ನು ಪಳಗಿಸುವ ಪ್ರಸಂಗವಿದೆ. ಭಾಸನ ನಾಟಕಗಳಲ್ಲಿ ಉದಯನನು ವೀಣಾವಾದನದ ಮೂಲಕ ಕಾಡಾನೆಗಳನ್ನು ವಶಪಡಿಸಿಕೊಳ್ಳುತ್ತಿದ್ದ ಕಥನಗಳಿವೆ. ಘನತೆವೆತ್ತ ಸ್ತ್ರೀ ಪುರುಷರ ನಡುಗೆಯನ್ನು ‘ಗಜಗಮನ’ವೆಂದೇ ಉಪಮಿಸುವುದುಂಟು. ಕವಿಗಳು ಬೆಟ್ಟಗಳನ್ನೂಮೋಡಗಳನ್ನೂ ಆನೆಗೆ ಹೋಲಿಸುವುದುಂಟು. ಭೀಮನು ಜನ್ಮಜಾತವಾಗಿ ‘ಆನೆಯ ಬಲ’ದವನಾಗಿದ್ದು, ವಾಸುಕಿಯ ಆಶೀರ್ವಾದದಿಂದ ‘ಹತ್ತು ಸಾವಿರ ಗಜಬಲ’ದವನೂ ಆದ ಎನ್ನುತ್ತದೆ ಮಹಾಭಾರತ. ಭಗದತ್ತನ ‘ಸುಪ್ರತೀಕ’ ಎಂಬ ಆನೆಯ ದಿವ್ಯಶಕ್ತಿಯ ಮುಂದೆ ಭೀಮನು ನಿಸ್ತೇಜನಾದನಂತೆ! ‘ನಾಯಿ ಬೊಗಳಿದರೆ ಆನೆಗೇನು?’, ‘ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಸಿಗದು’ ಇತ್ಯಾದಿ ಗಾದೆಗಳೂ, ‘ಆನೆ ಬಂತೊಂದಾನೆ, ಯಾವೂರಾನೆ, ಚೆನ್ನಪಟ್ನದಾನೆ?’, ‘ಆನೆ ಬಂತು ಆನೆ ಬಂತು ಬನ್ನಿ ಎಲ್ಲರೂ, ಹೊಟ್ಟೆ ತುಂಬ ಕಾಯಿಬೆಲ್ಲತನ್ನಿ ಎಲ್ಲರೂ’ ಇತ್ಯಾದಿ ಶಿಶುಗೀತೆಗಳು ಪ್ರಸಿದ್ಧ.
ರಾವಣನ ಕೋಟೆಯನ್ನು ರಕ್ಷಿಸುತ್ತಿದ್ದ ‘ನಾಲ್ಕು ದಂತಗಳ ಆನೆಗಳ’ ಉಲ್ಲೇಖ ರಾಮಾಯಣದಲ್ಲಿದೆ. ನಾಲ್ಕು ದಂತಗಳ Gomphothere ಎಂಬ ಆನೆಯಂತಹ ಪ್ರಾಣಿ ಸಹಸ್ರಮಾನಗಳ ಹಿಂದೆ ಜೀವಿಸುತ್ತಿದ್ದವು. ದ್ವಾರದಲ್ಲಿದ್ದ ಬಲಶಾಲಿ ಗಜವನ್ನು ಸದೆಬಡಿದೇ ಹನುಮಂತನು ರಾವಣನ ಅರಮನೆಯನ್ನು ಪ್ರವೇಶಿಸಿದ್ದು ಎಂದು ಥಾಯ್ ರಾಮಾಯಣ ವರ್ಣಿಸುತ್ತದೆ. ಮದವೇರಿದ ಆನೆ ಊರಲ್ಲಿ ನುಗ್ಗಿದ ಭಯಂಕರ ದೃಶ್ಯಗಳು ಹಲವು ಸಂಸ್ಕೃತ- ದೇಶಭಾಷೆಗಳ ಸಾಹಿತ್ಯದಲ್ಲಿವೆ. ಕಾವ್ಯಗಳಲ್ಲೂ ಭಾವಗೀತೆ ಭಕ್ತಿಗೀತೆ ಚಿತ್ರಗೀತೆ ಜಾನಪದ ಗೀತೆಗಳಲ್ಲಿನ ಆನೆ ಉಲ್ಲೇಖಗಳ ಪಟ್ಟಿ ಮಾಡಹತ್ತಿದರಂತೂ ಮುಗಿಯುವುದೇ ಇಲ್ಲ! ಒಟ್ಟಿನಲ್ಲಿ, ಅಪಾರ ಬಲವಿದ್ದರೂ ಸ್ವಭಾವತಃ ಸೌಮ್ಯವಾದ ಆನೆದೇವರಿಗೆ ಭಾರತೀಯರ ಹೃದಯದಲ್ಲಿ ಅನನ್ಯ ಸ್ಥಾನ!

(ಲೇಖಕರು ಆಧ್ಯಾತ್ಮ ಚಿಂತಕರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top