ಗಣಿ ದುಡ್ಡು ಮತ್ತು ರೆಸಾರ್ಟ್ ರಾಜಕಾರಣ ಜನರಲ್ಲಿ ಅಸಹ್ಯ ಹುಟ್ಟಿಸಿದ್ದರಿಂದಲೇ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಸರ್ಕಾರ ಸ್ಥಾಪನೆ ಆಗಿರುವುದು. ಈಗ ಅದೇ ರೆಸಾರ್ಟ್ ರಾಜಕಾರಣ ಪಾಲಿಕೆ ಅ ಧಿಕಾರ ಹಿಡಿಯುವುದಕ್ಕೂ ಬಳಕೆಯಾಗುತ್ತಿರುವುದು ಸೋಜಿಗದ ಸಂಗತಿ.
ರಾಜಕೀಯ ವ್ಯವಸ್ಥೆಯ ಬಗೆಗೇ ವಾಕರಿಗೆ ಹುಟ್ಟುತ್ತಿರುವ ಕಾಲ ಇದು. ಅಂಥದ್ದರಲ್ಲಿ ಬಿಬಿಎಂಪಿ ಎಂಬ ಸಂಪತ್ತಿನ ಕೋಟೆಗೆ ಲಗ್ಗೆ ಹಾಕಲು ಮೂರೂ ಪಕ್ಷಗಳಲ್ಲಿ ಅದಿನ್ನೆಂತಹ ಅಸಹ್ಯಕರ ಪೈಪೋಟಿ ಶುರುವಾಗಿದೆ ನೋಡಿ. ದೂರ ನಿಂತು ನೋಡುವ ಜನರು ಹಾದಿಬೀದಿಯಲ್ಲಿ ಹಿಡಿಶಾಪ ಹಾಕತೊಡಗಿದ್ದಾರೆ. ಆದರೆ ಲಜ್ಜೆಗೆಟ್ಟು ನಿಂತವರಿಗೆ ಮಾತ್ರ ಅದ್ಯಾವುದರ ಪರಿವೆಯೇ ಇರುವಂತೆ ತೋರುತ್ತಿಲ್ಲ. ಅಸಲಿ ಭಂಡತನ ಅಂದರೆ ಇದೇ ಅಲ್ಲವೇ?
ಬಿಎಂಪಿ ಹೋಗಿ ಬಿಬಿಎಂಪಿ ಆದ ಹೊಸತರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಹಠಕ್ಕೆ ಬಿದ್ದು ಬಿಜೆಪಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅ ಧಿಕಾರದ ಗದ್ದುಗೆ ಮೇಲೆ ಕುಳ್ಳಿರಿಸಿ ಹೋದರು ನಿಜ. ಆದರೆ ಅದರಿಂದ ಆ ಪಕ್ಷದ ತತ್ತ್ವ ಸಿದ್ಧಾಂತಗಳನ್ನು ಪಾಲಿಸುವ, ಮಾನ, ಮರ್ಯಾದೆಯನ್ನು ಹೆಚ್ಚಿಸುವ ಕೆಲಸವನ್ನೇನೂ ಬಿಜೆಪಿಯ ಬಹುತೇಕ ಕಾರ್ಪೋರೇಟರುಗಳು, ಮೇಯರುಗಳು ಮಾಡಲಿಲ್ಲ ಎಂಬುದು ಹಗಲಿನಷ್ಟೇ ಸತ್ಯ. ಬಿಬಿಎಂಪಿಯನ್ನು ಐದು ವರ್ಷ ಬಿಜೆಪಿ ಆಳಿದ್ದರಿಂದ ಬೆಂಗಳೂರಿಗರ ಬವಣೆ ಒಂದಿಷ್ಟೂ ದೂರವಾಗಲಿಲ್ಲ.
ಬಿಜೆಪಿ ಮೇಯರ್ ಒಬ್ಬರ ಮೇಲೇ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದ ಆರೋಪ ಬಂದು ತನಿಖೆ ಶುರುವಾಯಿತು. ಇಂಥ ಇನ್ನೂ ಎಷ್ಟೋ ಆರೋಪದ ಪ್ರಕರಣಗಳಿವೆ. ಒಟ್ಟಿನಲ್ಲಿ ಇತರೆಲ್ಲ ಪಕ್ಷಗಳಿಗಿಂತ ಭಿನ್ನ ಮತ್ತು ಸಂಭಾವಿತ ಪಕ್ಷ ಎಂಬ ಹೆಗ್ಗಳಿಕೆಗೆ ತಕ್ಕ ಹಾಗೆ ಬಿಜೆಪಿಯ ಪಾಲಿಕೆ ಸದಸ್ಯರು ಕಾರ್ಯನಿರ್ವಹಿಸಲಿಲ್ಲ. ಇದೆಲ್ಲದರ ಒಟ್ಟು ಪರಿಣಾಮ ಎನ್ನುವ ಹಾಗೆ ಅವಧಿ ಮುಗಿದು ಚುನಾವಣೆ ಎದುರಾಗುವ ಹೊತ್ತಿಗೆ ಅಖಾಡಕ್ಕೆ ಧುಮುಕಿ ಜಯಿಸುವ ಆತ್ಮವಿಶ್ವಾಸವೇ ಬಿಜೆಪಿ ಪಾಳಯದಲ್ಲಿ ಉಳಿದಿರಲಿಲ್ಲ.
ಚುನಾವಣೆ ವೇಳೆಗೆ ಕಾಂಗ್ರೆಸ್ ಬಿಡುಗಡೆ ಮಾಡಿದ ಚಾರ್ಜ್‌ಶೀಟಿಗೆ ಉತ್ತರ ಕೊಡುವುದೇ ಬಿಜೆಪಿ ನಾಯಕರಿಗೆ ದೊಡ್ಡ ಕೆಲಸವಾಯಿತು. ಅಧಿಕಾರಾವ ಧಿಯಲ್ಲಿ ತಾವೇನು ಮಾಡಿದ್ದೇವೆ ಎಂಬುದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ಸರ್ಕಾರ ಬೆಂಗಳೂರಿಗೆ ಏನೂ ಮಾಡಿಲ್ಲ, ಅದಕ್ಕಾಗಿ ತಮ್ಮ ಪಕ್ಷಕ್ಕೇ ವೋಟು ಕೊಡಿ ಎಂದಷ್ಟೇ ಬಿಜೆಪಿ ನಾಯಕರು ಹೇಳಿಕೊಂಡು ಬಂದರು. ಅದೆಲ್ಲಕ್ಕಿಂತ ತಮಾಷೆ ಸಂಗತಿ ಎಂದರೆ ಪಾಲಿಕೆ ಚುನಾವಣೆಯಲ್ಲೂ ನರೇಂದ್ರ ಮೋದಿ ಮತ್ತು ಅಮಿತ್ ಷಾ ಫೋಟೊ ತೋರಿಸಿ ಮತ ಕೊಡಿ ಎಂದರೇ ಹೊರತು, ಸ್ಥಳೀಯ ನಾಯಕರ ನಾಮಬಲದ ಮೇಲೆ ಮತ ಕೇಳುವ ಧೈರ್ಯ ತೋರಲಿಲ್ಲ. ಇಷ್ಟಾದರೂ ಬೆಂಗಳೂರಿನ ಜನರು ಮೋದಿ ಮುಖವನ್ನು ನೋಡಿಕೊಂರು ಬಿಜೆಪಿಗೆ ಬರೋಬ್ಬರಿ ನೂರು ಸ್ಥಾನ ಕೊಟ್ಟರು. ಅದು ಆ ಪಕ್ಷಕ್ಕೇ ಅಚ್ಚರಿಯ ಫಲಿತಾಂಶವಾಗಿತ್ತು. ಅಂತೂಇಂತೂ ಪಕ್ಷದ ಮಾನವನ್ನು ಬೆಂಗಳೂರಿನ ಜನರು ಉಳಿಸಿಕೊಟ್ಟರು.
ಆದರೇನು ಬಂತು. ಅಂಗೈ ತೋರಿಸಿ ಅವಲಕ್ಷಣ ಎನ್ನಿಸಿಕೊಂಡರು ಎನ್ನುವ ಹಾಗೆ ಅ ಧಿಕಾರಕ್ಕಾಗಿ ಅವರಿವರ ಮನೆ ಬಾಗಿಲಿಗೆ ಎಡತಾಕಿ ಒಂದು ರಾಷ್ಟ್ರೀಯ ಪಕ್ಷದ ಮಾನಮರ್ಯಾದೆಯನ್ನು ಹೇಗೆ ಹರಾಜು ಹಾಕುತ್ತಿದ್ದಾರೆ ನೋಡಿ. ನೂರು ಸ್ಥಾನಗಳನ್ನು ಗೆದ್ದೂ ಜೆಡಿಎಸ್ ನಾಯಕರೆದುದು ಪೆದ್ದುತನ ಪ್ರದರ್ಶನ ಮಾಡುತ್ತಿರುವ ಬಿಜೆಪಿ ನಾಯಕರ ಬಗ್ಗೆ ಏನು ಹೇಳುವುದು ಹೇಳಿ?
ತಂತ್ರಗಾರಿಕೆಯಲ್ಲಿ ಗೆದ್ದ ಜೆಡಿಎಸ್: ಇಲ್ಲಿ ಜೆಡಿಎಸ್ ನಾಯಕರು ಪಕ್ಕಾ ಲೆಕ್ಕಾಚಾರದ ದಾಳ ಉರುಳಿಸಿದರು ಎಂದರೆ ತಪ್ಪಲ್ಲ. ಬಿಬಿಎಂಪಿ ಚುನಾವಣೆಯ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಗ್ಗಿಸಲೇಬೇಕೆಂಬ ಒಂದಂಶದ ಕಾರ್ಯಕ್ರಮದಲ್ಲಿ ಜೆಡಿಎಸ್ ನಾಯಕರು ಸಂಪೂರ್ಣ ಯಶಸ್ಸು ಸಾ ಧಿಸಿದ್ದಾರೆಂಬುದು ಚುನಾವಣಾ ಫಲಿತಾಂಶದಿಂದ ಸಾಬೀತಾಗಿದೆ. ಸ್ಥಾನ ಗಳಿಕೆ ದೃಷ್ಟಿಯಿಂದ ಕಳೆದ ಚುನಾವಣೆಗೆ ಹೋಲಿಸಿದರೆ ಜೆಡಿಎಸ್ ತುಸು ಹಿನ್ನಡೆ ಅನುಭವಿದ್ದು ನಿಜವಾದರೂ, ಕಾಂಗ್ರೆಸ್‌ಗೆ ಅಧಿಕಾರ ದಕ್ಕದ ಹಾಗೆ ನೋಡಿಕೊಂಡು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹಾದಿಗೆ ಬರುವಂತೆ ಮಾಡಿದ್ದು ದೇವೇಗೌಡರ ಚತುರ ತಂತ್ರಗಾರಿಕೆಯ ಫಲವೇ. ದಳಪತಿಗಳು ತಮ್ಮ ಸಂಕಲ್ಪಸಿದ್ಧಿಗೆ ಬಿಜೆಪಿ ನಾಯಕರನ್ನು ಬಳಸಿಕೊಳ್ಳುವಲ್ಲೂ ಸಫಲರಾದರು.
ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಹಂತದಲ್ಲೇ ಬಿಜೆಪಿ ಮತ್ತು ದಳದ ನಾಯಕರು ಹೊಂದಾಣಿಕೆ ಮಾಡಿಕೊಂಡರು ಎಂಬ ಮಾತೂ ಇದೆ. ಅದರ ಒಟ್ಟಾರೆ ನೇರ ಲಾಭ ಬಿಜೆಪಿಗೆ ಆದರೆ, ಪರೋಕ್ಷ ಲಾಭದ ಖುಷಿಯಲ್ಲಿ ದಳದ ನಾಯಕರಿದ್ದಾರೆ. ಚುನಾವಣೆಯಲ್ಲಿ ಸೋತು ಗೆದ್ದ ದಳದ ನಾಯಕರು ಈಗ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಆಟ ಆಡಿಸುತ್ತಿರುವುದನ್ನು ಗಮನಿಸಿದರೆ ಈ ಮಾತು ಮನದಟ್ಟಾದೀತು.
ಮೈತ್ರಿ ರಾಜಕಾರಣ ತಪ್ಪೇ?: ಒಂದು ವಿಷಯ ಗೊತ್ತಿರಲಿ. ಈ ದೇಶದಲ್ಲಿ ಮೈತ್ರಿ ರಾಜಕಾರಣ ಹೊಸದೂ ಅಲ್ಲ, ಪ್ರಮಾದವೂ ಅಲ್ಲ. ಚುನಾವಣಾಪೂರ್ವದಲ್ಲಿ ಅ ಧಿಕೃತ ಹೊಂದಾಣಿಕೆ, ಒಡಂಬಡಿಕೆ ಮಾಡಿಕೊಂಡರೆ ಅದಕ್ಕೆ ಮಾನ್ಯತೆ ಹೆಚ್ಚು. ಚುನಾವಣಾ ನಂತರದಲ್ಲಿ ಯಾವ ಪಕ್ಷಕ್ಕೂ ಬಹುಮತ ಲಭಿಸದಿದ್ದಲ್ಲಿ ಎರಡು ಅಥವಾ ಹೆಚ್ಚು ಪಕ್ಷಗಳು ಕೂಡಿ ಆಡಳಿತ ನಡೆಸುವ ಪದ್ಧತಿಗೂ ಒಂದು ವ್ಯಾವಹಾರಿಕ ಮಾನ್ಯತೆ ಇದೆ. ಆ ರೀತಿ ಮೈತ್ರಿ ವ್ಯವಸ್ಥೆಯಲ್ಲಿ ಉತ್ತಮ ಆಡಳಿತ ನೀಡಿದ ನಿದರ್ಶನಗಳೂ ಇವೆ. ಆದರೆ ಅಧಿಕಾರಕ್ಕೋಸ್ಕರ ಸದಸ್ಯರನ್ನು ಖರೀದಿ ಮಾಡುವ, ಒತ್ತೆ ಇಟ್ಟುಕೊಳ್ಳುವ ರೀತಿಗೆ ಹಿಂದೆಯೂ ಮಾನ್ಯತೆ ಇರಲಿಲ್ಲ, ಮುಂದೆಯೂ ಒಪ್ಪಿಗೆ ಮುದ್ರೆ ಸಿಗಲು ಸಾಧ್ಯವಿಲ್ಲ. ಈಗ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯುವ ವಿಚಾರದಲ್ಲಿ ನಡೆಯುತ್ತಿರುವುದು ಮೈತ್ರಿ ಅಲ್ಲ, ಶುದ್ಧ ಕುದುರೆ ವ್ಯಾಪಾರ. ಅದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಅದಿನ್ನೆಂಥದ್ದೇ ವ್ಯಾಖ್ಯಾನ ಮಾಡಿದರೂ ಸತ್ಯವನ್ನು ಮರೆಮಾಚಲಾಗದು.
ರಾಜ್ಯಸಭೆ, ವಿಧಾನಪರಿಷತ್ತು ಮಾತ್ರವಲ್ಲ ಈಗ ಇಡೀ ರಾಜಕಾರಣವೇ ಉದ್ಯಮಪತಿಗಳು, ಶ್ರೀಮಂತರ ಜಹಗೀರು ಆಗುತ್ತಿದೆ ಎಂಬ ಅಪವಾದ ಇದೆ. ಬರಬರುತ್ತ ಚುನಾವಣೆಗಳು ನಡೆಯುತ್ತಿರುವ ರೀತಿ, ಅದಕ್ಕಿಂತ ಹೆಚ್ಚಾಗಿ ರಾಜ್ಯಸಭೆ ಮತ್ತು ವಿಧಾನಪರಿಷತ್ತಿಗೆ ಆಯ್ಕೆಯಾಗುತ್ತಿರುವವರು ಹಾಗೂ ನಾಮಕರಣಗೊಳ್ಳುತ್ತಿರುವವರ ಹೆಸರಿನ ಮೇಲೆ ಕಣ್ಣು ಹಾಯಿಸಿದರೆ ಅದು ಎಂಥವನಿಗಾದರೂ ಮನದಟ್ಟಾಗುತ್ತದೆ. ದುರ್ದೈವದ ಸಂಗತಿ ಅಂದರೆ ಅದೇ ಸಂಸ್ಕೃತಿ ಈಗ ಪಾಲಿಕೆ ಚುನಾವಣೆವರೆಗೂ ಬಂದು ತಲುಪಿದೆ.
ರಿಯಲ್ ಎಸ್ಟೇಟ್ ಕುಳಗಳು: ನಂಬಿದರೆ ನಂಬಿ ಬಿಟ್ಟರೆ ಬಿಡಿ. ಈ ಸಾರಿ ಬೆಂಗಳೂರು ಪಾಲಿಕೆ ಚುನಾವಣೆಯಲ್ಲಿ ಗೆದ್ದವರಲ್ಲಿ ಶೇ.60ರಷ್ಟು ಮಂದಿ ರಿಯಲ್ ಎಸ್ಟೇಟ್ ಹಿನ್ನೆಲೆಯವರು. ಇದರ ಅರ್ಥ ರಿಯಲ್ ಎಸ್ಟೇಟ್‌ನವರು ಚುನಾವಣಾ ರಾಜಕೀಯಕ್ಕೆ ಬರಬಾರದು ಅಂತಲ್ಲ. ಆ ಲಾಬಿಯಿಂದ ಬೆಂಗಳೂರು ಮತ್ತು ರಾಜ್ಯ ರಾಜಕಾರಣ ಎತ್ತ ಸಾಗುತ್ತಿದೆ ಎಂದು ಬಿಂಬಿಸಲು ಮಾತ್ರ ಇದನ್ನು ಹೇಳುತ್ತಿದ್ದೇನೆ ಅಷ್ಟೆ. ಈಗ ನಡೆಯುತ್ತಿರುವ ರೆಸಾರ್ಟ್ ರಾಜಕಾರಣ ಕೂಡ ಇದೇ ಲಾಬಿಯ ಒಂದು ಭಾಗ ಎಂಬುದು ಸುಳ್ಳಲ್ಲ.
ಅಸಹ್ಯ ಬೆಳವಣಿಗೆ: ರೆಸಾರ್ಟ್ ರಾಜಕಾರಣದ ಪರಿಣಾಮ ಏನೆಂಬುದು ರಾಜ್ಯದ ರಾಜಕಾರಣಿಗಳಿಗೆ ಮತ್ತು ಜನತೆಗೆ ಚೆನ್ನಾಗಿ ಗೊತ್ತಿದೆ. ಹಾಗೆ ನೋಡಿದರೆ ಗಣಿ ದುಡ್ಡು ಮತ್ತು ರೆಸಾರ್ಟ್ ರಾಜಕಾರಣ ಜನರಲ್ಲಿ ಅಸಹ್ಯ ಹುಟ್ಟಿಸಿದ್ದರಿಂದಲೇ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಸರ್ಕಾರ ಸ್ಥಾಪನೆ ಆಗಿರುವುದು. ಈಗ ಅದೇ ರೆಸಾರ್ಟ್ ರಾಜಕಾರಣ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪಾಲಿಕೆ ಅ ಧಿಕಾರ ಹಿಡಿಯುವುದಕ್ಕೂ ಬಳಕೆಯಾಗುತ್ತಿರುವುದು ಸೋಜಿಗದ ಸಂಗತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಏನೆನ್ನುತ್ತಾರೋ ಗೊತ್ತಿಲ್ಲ.
ಪಾಲಿಕೆ ಎಂಬ ಬಡಪಾಯಿ: ಬೆಂಗಳೂರು ಪಾಲಿಕೆ ಎಂಬುದು ವಾಸ್ತವದಲ್ಲಿ ಒಂದು ದಿವಾಳಿ ಕಂಪನಿಗಿಂತ ಕಡಿಮೆಯೇನಿಲ್ಲ. ಲೆಕ್ಕ ಹಾಕಿದರೆ ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಪಾವತಿಸಬೇಕಿರುವ ಬಿಲ್ಲಿನ ಮೊತ್ತವೇ ಅಂದಾಜು ಮೂರ‍್ನಾಲ್ಕು ಸಾವಿರ ಕೋಟಿ ರೂಪಾಯಿ ಆಗುತ್ತದೆ. ಅದರ ನೇರ ಪರಿಣಾಮವೋ ಎನ್ನುವ ಹಾಗೆ ಬಡ್ಡಿಗೆ ಸಾಲ ತಂದು ಕಾಮಗಾರಿ ಮಾಡಿದ ಗುತ್ತಿಗೆದಾರರು ಒಬ್ಬರಾದ ಮೇಲೆ ಒಬ್ಬರು ನೇಣಿಗೆ ಶರಣಾಗುತ್ತಿದ್ದಾರೆ. ಅದರ ಜೊತೆಗೇ ಸಾಲಕ್ಕೆ ಅಡವಿಟ್ಟ ಸುಮಾರು 9 ಸಾವಿರ ಕೋಟಿ ರೂಪಾಯಿ ಮೌಲ್ಯದ ಪಾಲಿಕೆ ಆಸ್ತಿ ಹಿಂದಿರುಗಿ ಬರುತ್ತದೆಯೋ ಇಲ್ಲವೋ ಎಂಬ ಅನುಮಾನ ದಟ್ಟವಾಗುತ್ತಿದೆ. ಇಂಥದ್ದರಲ್ಲಿ ಹತ್ತಾರು ಕಾರ್ಪೋರೇಟರುಗಳಿಗೆ ಕೋಟಿ ಕೋಟಿ ಎಣಿಸಿ ದೂರದ ರೆಸಾರ್ಟ್‌ನಲ್ಲಿ ಇಟ್ಟಿದ್ದಾರೆಂದ ಮೇಲೆ ಭವಿಷ್ಯವನ್ನು ಎಂಥವರಾದರೂ ಊಹಿಸಬಹುದಲ್ಲವೇ?
ಶಾಶ್ವತ ವೈರಿಗಳಿಲ್ಲ, ವೈರುಧ್ಯವೇ ಎಲ್ಲ: ಇನ್ನು ಆಡಿದ ಮಾತು ಮತ್ತು ಮಾಡಿದ ದ್ವೇಷಕ್ಕೆ ಲೆಕ್ಕವೇ ಇಲ್ಲ ಬಿಡಿ. ಚುನಾವಣೆಗೆ ಮೂರು ದಿನ ಮೊದಲು ಎಚ್.ಡಿ.ಕುಮಾರಸ್ವಾಮಿ ಅವರು, ‘ಸಿದ್ದರಾಮಯ್ಯ ಅವರು ಇರುವವರೆಗೂ ಕಾಂಗ್ರೆಸ್‌ನೊಂದಿಗೆ ಮೈತ್ರಿ ಸಾಧ್ಯವೇ ಇಲ್ಲ’ ಎಂದು ಕಡ್ಡಿ ಮುರಿದ ಹಾಗೆ ಹೇಳಿದ್ದರು. ಆ ಹೇಳಿಕೆಯ ಶಾಯಿ ಆರುವ ಮೊದಲೇ ಕಾಂಗ್ರೆಸ್-ದಳದ ಮೈತ್ರಿಗೆ ಭೂಮಿಕೆ ಬಹುತೇಕ ಸಿದ್ಧವಾಗಿಬಿಟ್ಟಿದೆ. ವಾಗ್ಬಾಣ ಬಿಡುವುದರಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಕಡಿಮೆಯೇನಿರಲಿಲ್ಲ. ದಳದ ನಾಯಕರು ಅವಕಾಶವಾದಿಗಳು, ಜಾತಿವಾದಿಗಳು ಎಂದೆಲ್ಲ ಜರಿದಿದ್ದರು. ಈಗ ಅವರೇ, ‘ಜೆಡಿಎಸ್-ಬಿಜೆಪಿ ಮೈತ್ರಿ ಓಕೆ ಆಗುವುದಾದರೆ, ಕಾಂಗ್ರೆಸ್-ದಳದ ಮೈತ್ರಿ ಯಾಕಾಗಬಾರದು?’ ಎಂದು ಕೇಳುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಆಪರೇಷನ್ ಕಮಲ, ರೆಸಾರ್ಟ್ ರಾಜಕಾರಣವನ್ನು ಕಟುವಾಗಿ ಟೀಕಿಸುತ್ತಿದ್ದ ಮುಖ್ಯಮಂತ್ರಿ ಆದಿಯಾಗಿ ಕಾಂಗ್ರೆಸ್ಸಿಗರು ಈಗ ಅದೇ ಕೆಲಸಕ್ಕೆ ಮುಂದಾಗಿದ್ದಾರೆ. ಇದಕ್ಕೇನೆನ್ನೋಣ ಹೇಳಿ.
ರಾಜ್ಯದ ರಾಜಕಾರಣ ಅದೇಕೋ ನಾಚಿಕೆಗೇಡಿನ ಪರಿಸ್ಥಿತಿಗೆ ಸಾಕ್ಷಿಯಾಗುತ್ತಿದೆ. ರಾಜಕೀಯ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದು ಯಾರಾದರೂ ಹೇಳಿದರೆ ಇದೆಂಥ ಸಿನಿಕತನ ಅಂತ ಅನ್ನಿಸುತ್ತಿದ್ದುದು ನಿಜ. ಆದರೆ ಈಗ ಅದು ನಿಜವಾಗುವ ಲಕ್ಷಣ ಕಾಣಿಸುತ್ತಿರುವುದು ದುರಂತವೇ ಸರಿ.
ಚುರುಕ್ ಚಾಟಿ
ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಮೂರೂ ಪಕ್ಷಗಳಲ್ಲಿರುವ ಸಾಮ್ಯತೆ ಏನು ಗುರು?
-ವಂಶಪಾರಂಪರ್ಯ ಅಧಿಕಾರದ ಚಪಲ.
ಅದ್ಹೇಗೆ?
-ಬಿಜೆಪಿ ಮಾಜಿ ಕಾರ್ಪೋರೇಟರುಗಳೆಲ್ಲ ತಮ್ಮ ಹೆಂಡತಿಯರಿಗೇ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡು ಬಂದಿದ್ದಾರಲ್ಲ!
ಹಾಗಾದರೆ ಕೇಡರ್ ಬೇಸ್ಡ್ ಪಾರ್ಟಿ ಹಣೆಪಟ್ಟಿ ಕತೆ ಏನು?
-ವೇದಾಂತ ಹೇಳುವುದಕ್ಕೆ-ಬದನೆಕಾಯಿ ತಿನ್ನುವುದಕ್ಕೆ, ಗೊತ್ತಿಲ್ಲವೆ?!.