ಜಪಾನ್ನ ನೀತಿ, ಕಟ್ಟುಪಾಡುಗಳು ಭಾರತಕ್ಕೆ ಅಥವಾ ಇನ್ನಾವುದೇ ದೇಶಕ್ಕೆ ಅನ್ವಯವಾಗಲು ಸಾಧ್ಯವಿಲ್ಲ. ಆದರೆ, ಸತತವಾಗಿ ಭಯೋತ್ಪಾದನೆಯಿಂದ ನರಳುವ ನಮ್ಮ ದೇಶದಲ್ಲಿ ನಾವು ಮತ್ತು ಸರ್ಕಾರ ಕೆಲವೊಂದು ಸಂಗತಿಗಳನ್ನು ಗಂಭೀರವಾಗಿ ಆಲೋಚಿಸಿ ಅನುಸರಿಸಬಹುದು ಅನ್ನಿಸುತ್ತದೆ.
ಸರ್ಕಾರಗಳು ಖಡಕ್ತನ ತೋರಿದರೆ ಎಂತಹ ಬದಲಾವಣೆ ಸಾಧ್ಯ ಎಂಬುದನ್ನು ನೀವೇ ನೋಡಿ. ಭಯೋತ್ಪಾದನೆ ದಮನಕ್ಕೆಂದೇ ಸ್ಥಾಪನೆಯಾದ ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ಖದರಿಗೆ ಹೆದರಿ ಐಸಿಸ್ ಉಗ್ರರು ಸದ್ಯ ಭಾರತದ ಸಹವಾಸದಿಂದ ದೂರ ಇರಲು ತೀರ್ವನಿಸಿಬಿಟ್ಟಿದ್ದಾರಂತೆ!
ಒಂದು ವಾರದ ಅವಧಿಯಲ್ಲಿ ಎರಡು ತದ್ವಿರುದ್ಧ ಬೆಳವಣಿಗೆಗಳು. ಐಎಸ್ಐ ಏಜೆಂಟಳಾಗಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲೆಂದೇ ಹೊರಟಿದ್ದ ಇಶ್ರತ್ ಜಹಾನ್ಳನ್ನು ಎನ್ಕೌಂಟರ್ ಮಾಡಿದ ಪ್ರಕರಣದ ಅಫಿಡವಿಟ್ಟನ್ನು ಈ ದೇಶದ ಗೃಹಮಂತ್ರಿ ಚಿದಂಬರಂ ಅವರು ಸೋನಿಯಾ ಒತ್ತಡದಿಂದ ತಿದ್ದಿದರು ಎಂಬ ಮಾಹಿತಿ ಸ್ಪೋಟಗೊಂಡ ಒಂದು ವಾರದೊಳಗೆ, ಐಸಿಸ್ ವಿಚಾರವಾಗಿ ಎಲ್ಲರೂ ನಿಟ್ಟುಸಿರು ಬಿಡುವಂತಹ ಸಮಾಚಾರ ಸಿಕ್ಕಿದಂತಾಗಿದೆ. ಈ ವಿಷಯದಲ್ಲಿ ಸರ್ಕಾರ ಮುಂದೆ ಅಗಾಧ ದೂರ ಕ್ರಮಿಸುವುದು ಬಾಕಿಯಿದೆ. ಹೀಗಾಗಿ ಈಗಲೇ ಮೈಮರೆಯುವುದು ಬೇಡ.
ಜನಸಾಮಾನ್ಯರಲ್ಲಿ ಒಂದು ಸ್ಥಾಪಿತ ಅಭಿಪ್ರಾಯವಿದೆ. ಅದು ಭಯೋತ್ಪಾದನೆ ಜಗತ್ತಿನ ಯಾವ ದೇಶವನ್ನೂ ಬಿಟ್ಟಿಲ್ಲ ಎಂಬುದು. ಅದಕ್ಕೆ ಕಾರಣ 2000ರ ಸೆಪ್ಟೆಂಬರ್ 11ರಂದು ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಅಲ್ಕೈದಾ ಉಗ್ರರು ನಡೆಸಿದ ದಾಳಿ. ಅಂಥ ಬಲಾಢ್ಯ ಅಮೆರಿಕವನ್ನೇ ಬಿಟ್ಟಿಲ್ಲ ಎಂದ ಮೇಲೆ ಜಗತ್ತಿನ ಇನ್ನಾವ ದೇಶವೂ ಭಯೋತ್ಪಾದಕರ ಹಾವಳಿಗೆ ಸಿಲುಕದೇ ಇರಲಾರದು ಎಂಬುದು ಈ ಅನಿಸಿಕೆಗೆ ಕಾರಣ.
ಆದರೆ ಸಾಮಾನ್ಯ ಅಭಿಪ್ರಾಯಕ್ಕೆ ಹೊರತಾದ ಮತ್ತು ತೀರಾ ಅಚ್ಚರಿ ಹುಟ್ಟಿಸುವಂತಹ ಸಂಗತಿಯೊಂದಿದೆ. ಅದೇನೆಂದರೆ ಜಪಾನ್ ಇದುವರೆಗೂ ಭಯೋತ್ಪಾದಕ ಪೀಡೆಯನ್ನು ಅಂಟಿಸಿಕೊಂಡಿಲ್ಲ. ಮುಂದೆ ಹೇಗಾಗುತ್ತದೆಯೋ ಗೊತ್ತಿಲ್ಲ. ಜಪಾನ್ ಹಾಗಿರಲು ಅಲ್ಲಿನವರ ದೇಶಾಭಿಮಾನ ಹಾಗೂ ತನ್ನ ಪ್ರಜೆಗಳ ನೆಮ್ಮದಿ, ಸುರಕ್ಷೆಯ ದೃಷ್ಟಿಯಿಂದ ಆ ದೇಶ ರೂಪಿಸಿಕೊಂಡಿರುವ ಬಿಗಿ ಕಾನೂನುಗಳೇ ಕಾರಣವಂತೆ.
ಮುಖ್ಯವಾಗಿ ಆ ದೇಶ ತನ್ನ ಆಂತರಿಕ ಸುರಕ್ಷೆ, ಜನರ ನೆಮ್ಮದಿಯ ಮುಂದೆ ಕಣ್ತೋರಿಕೆಯ ಪ್ರೀತಿ, ಸಹಬಾಳ್ವೆ, ಶಾಂತಿ, ಜಾತ್ಯತೀತತೆ ಇತ್ಯಾದಿ ಯಾವುದೇ ಬೂಟಾಟಿಕೆಗಳಿಗೆ ಮಣೆ ಹಾಕಲಿಲ್ಲ. ಅದರ ಪರಿಣಾಮವೋ ಎಂಬಂತೆ ಪಾಕಿಸ್ತಾನದಿಂದ ಹಿಡಿದು ಸಿರಿಯಾ, ಅರಬ್ ದೇಶಗಳವರೆಗೆ ಬಹುತೇಕ ಮುಸ್ಲಿಂ ದೇಶಗಳ ಸರ್ಕಾರಗಳ ಮುಖ್ಯಸ್ಥರು, ರಾಜತಾಂತ್ರಿಕ ಪ್ರಮುಖರು ಜಪಾನ್ ಪ್ರವಾಸ ಕೈಗೊಳ್ಳಲು ಮನಸ್ಸು ಮಾಡುವುದಿಲ್ಲ. ಜಪಾನ್ ಕೂಡ ಅಂತಹ ದೇಶಗಳೊಂದಿಗೆ ಸುಖಾಸುಮ್ಮನೆ ಭಾಯಿಭಾಯಿ ಎನ್ನಲು ಹೋಗುವುದಿಲ್ಲ. ಸ್ನೇಹಹಸ್ತ ಚಾಚುವುದಿಲ್ಲ. ಜಪಾನ್ ಪ್ರಧಾನಿ ಅಥವಾ ಇತರ ನಾಯಕರು, ಅಧಿಕಾರಿಗಳು ಪಾಕಿಸ್ತಾನ, ಇರಾನ್, ಸಿರಿಯಾ, ಈಜಿಪ್ತ್ ಮುಂತಾದ ದೇಶಗಳಿಗೆ ಹೆಚ್ಚಾಗಿ ಪ್ರವಾಸ ಕೈಗೊಳ್ಳುವುದಿಲ್ಲ. ಹೀಗಾಗಿ ಜಗತ್ತಿನ ಆರು ಮುಸ್ಲಿಂ ದೇಶಗಳಿಗಷ್ಟೇ ಜಪಾನ್ನಲ್ಲಿ ದೂತಾವಾಸ ತೆರೆಯುವುದಕ್ಕೆ ಅವಕಾಶ ನೀಡಲಾಗಿದೆ. ಇನ್ನೂ ಕೆಲ ವಿಚಿತ್ರ ಕಟ್ಟುಪಾಡುಗಳು ಜಪಾನ್ನಲ್ಲಿವೆ. ಅವೆಲ್ಲ ಸರಿಯೋ ತಪ್ಪೋ ಎಂಬುದು ಬೇರೆ ವಿಚಾರ. ಜಪಾನ್ ಕಟ್ಟಾ ಬೌದ್ಧಧರ್ಮದ ದೇಶ. ಅದನ್ನು ‘ಮೌನ ದೇಶ’ ಅಂತಲೂ ಕರೀತಾರೆ. ಕಾರಣ ಇಷ್ಟೆ, ಅಲ್ಲಿನ ಜನರು ತಮ್ಮ ರಾಷ್ಟ್ರದ ಪ್ರಗತಿ, ಶ್ರೇಯಸ್ಸಿಗೆ ಹೊರತಾಗಿ ಬೇರೇನನ್ನೂ ಯೋಚನೆ ಮಾಡುವುದಿಲ್ಲ. ಮಾತನಾಡುವುದಿಲ್ಲ. ಅವಾಕ್ಕಾಗುವ ಸಂಗತಿ ಎಂದರೆ ಯಾವೊಬ್ಬ ಮುಸಲ್ಮಾನನಿಗೂ ಆ ದೇಶದ ಪೌರತ್ವವನ್ನೇ ನೀಡಲಾಗಿಲ್ಲ. ಪರದೇಶಗಳಿಂದ ಬರುವ ಮುಸಲ್ಮಾನರಿಗೆ ದೀರ್ಘಾವಧಿ ವಾಸ್ತವ್ಯಕ್ಕೆ ಅವಕಾಶ ಕೊಡುವುದಿಲ್ಲ. ಅಲ್ಲಿ ಇಸ್ಲಾಂನ ಪ್ರಚಾರ ಮತ್ತು ಪ್ರಸಾರಕ್ಕೆ ನಿಷೇಧವಿದೆ. ಜಪಾನಿನ ವಿಶ್ವವಿದ್ಯಾಲಯಗಳಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರವೇಶ ನಿಷಿದ್ಧ. ಕ್ಲಬ್ಗಳಲ್ಲಿ ಸದಸ್ಯತ್ವ ನೀಡುವುದಿಲ್ಲ. ಮನೆ, ಆಸ್ತಿಪಾಸ್ತಿಗಳನ್ನು ಕ್ರಯಕ್ಕೆ ಕೊಡುವುದಿಲ್ಲ. ಬಾಡಿಗೆ ಕೊಡಬೇಕೆಂದರೂ ಎಂದು, ಯಾವಾಗ ವಾಪಸ್ ಹೋಗುತ್ತೀರೆಂದು ಮುಲಾಜಿಲ್ಲದೆ ಕೇಳುತ್ತಾರೆ. ಅರೇಬಿಕ್ ಮತ್ತು ಇತರ ಇಸ್ಲಾಮಿಕ್ ಭಾಷೆಗಳ ಕಲಿಕೆಗೆ ನಿಷೇಧವಿದೆ. ಯಾವ ಜಾತಿ, ಪಂಥ, ದೇಶಗಳಿಗೆ ಸೇರಿದ ಜನರೇ ಇದ್ದರೂ ಅವರು ಜಪಾನಿ ಭಾಷೆಯಲ್ಲೇ ಮಾತನಾಡಬೇಕು, ವ್ಯವಹರಿಸಬೇಕು. ಹೀಗಾಗಿ ಅಲ್ಲಿ ಅಬ್ಬಬ್ಬಾ ಅಂದರೆ ಎರಡರಿಂದ ಎರಡೂವರೆ ಲಕ್ಷ ಮಾತ್ರ ಮುಸ್ಲಿಂ ಜನಸಂಖ್ಯೆಯಿದೆ. ಹೀಗಾಗಿ ಆ ದೇಶದಲ್ಲಿ ಆ ಸಮುದಾಯದವರು ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರು. ಇಂಥ ಜಾಗತೀಕರಣದ ಯುಗದಲ್ಲೂ ಸಂಪ್ರದಾಯ, ಕಾಯ್ದೆ ಕಟ್ಟಳೆಗೆ ಕಟ್ಟುಬಿದ್ದಿರುವ ಜಪಾನ್ ತನ್ನ ನೀತಿಯಲ್ಲಿ ಸಡಿಲತೆ ತೋರಲು ಸುತಾರಾಂ ತಯಾರಿಲ್ಲ.
ಜಪಾನ್ನ ಕಟ್ಟುಪಾಡುಗಳು ಭಾರತಕ್ಕೆ ಅಥವಾ ಇನ್ನಾವುದೇ ದೇಶಕ್ಕೆ ಅನ್ವಯವಾಗಲು ಸಾಧ್ಯವಿಲ್ಲ. ನಾವು ಅದಕ್ಕೆ ಅವಕಾಶ ಕೊಡುವವರೂ ಅಲ್ಲ. ಮುಖ್ಯವಾಗಿ ಭಯೋತ್ಪಾದನೆಯನ್ನು ಇಸ್ಲಾಂನೊಂದಿಗೆ ತಳುಕು ಹಾಕುವುದನ್ನು ನಾವು ಒಪ್ಪುವುದೂ ಇಲ್ಲ ಅನ್ನಿ. ಜಪಾನ್ ಪದ್ಧತಿ, ನೀತಿ ಹೇಗೂ ಇರಲಿ, ಸತತವಾಗಿ ಭಯೋತ್ಪಾದನೆಯಿಂದ ನರಳುವ ನಾವು ಮತ್ತು ನಮ್ಮ ಸರ್ಕಾರ ಕೆಳಗಿನ ಕೆಲವೊಂದು ಸಂಗತಿಗಳನ್ನು ಗಂಭೀರವಾಗಿ ಆಲೋಚಿಸಿ ಅನುಸರಿಸಬಹುದು ಅನ್ನಿಸುತ್ತದೆ.
ಶಾಲೆಗಳಲ್ಲಿ: ಸುಂದರ ಮನಸ್ಸುಗಳು ಅರಳುವುದೇ ಇಲ್ಲಿಂದ. ಭಯೋತ್ಪಾದನೆ, ಮತಾಂಧತೆ, ಹಿಂಸಾಚಾರದ ತೊಂದರೆ, ಶಾಂತಿ-ಸಹಬಾಳ್ವೆಯ ಮಹತ್ವ ಇವುಗಳ ಕುರಿತು ಪಠ್ಯಕ್ರಮದಲ್ಲೇ ಅಳವಡಿಸಬಹುದೇ?
ಧಾರ್ವಿುಕ ನಾಯಕರು: ಇಸ್ಲಾಂನಿಂದ ಹಿಡಿದು ಜಗತ್ತಿನ ಎಲ್ಲ ಮತಧರ್ಮಗಳ ಸಾರವೂ ಶಾಂತಿ, ಸಹಬಾಳ್ವೆ, ನೆಮ್ಮದಿ ಜೀವನವೇ ಆಗಿರುವುದರಿಂದ ಭಯೋತ್ಪಾದನೆ ಮೂಲೋತ್ಪಾಟನೆಗೆ ಧಾರ್ವಿುಕ ನಾಯಕರೇ ನೇತೃತ್ವ ವಹಿಸಿದರೆ ಉತ್ತಮ. ಆಯಾಯ ಧರ್ಮಗಳು ದಾರಿ ತಪ್ಪಿದ ತಮ್ಮ ಅನುಯಾಯಿಗಳನ್ನು ಕಿವಿ ಹಿಂಡಿದರೆ, ದಂಡಿಸಿದರೆ, ಬಹಿಷ್ಕರಿಸಿದರೆ ಈ ಉಪಟಳ ಅರ್ಧಕ್ಕರ್ಧ ಕಡಿಮೆ ಆಗುವುದರಲ್ಲಿ ಯಾವ ಅನುಮಾನವೂ ಇರದು.
ಸಾಮಾಜಿಕ ಮುಖಂಡರು: ಸುತ್ತಿ ಬಳಸಿ ಮಾತನಾಡುವ ಬದಲು ಮೈಚಳಿ ಬಿಟ್ಟು ಕಟುಸತ್ಯವನ್ನು ಹೇಳುವ, ಭಯೋತ್ಪಾದನೆಯನ್ನು ಖಂಡಿಸುವ, ತಡೆಯುವ ಎದೆಗಾರಿಕೆ ತೋರಿಸುವರೇ?
ರಾಜಕೀಯ ನಾಯಕರು: ಮುಕ್ಕಾಲು ಭಾಗ ಸಮಸ್ಯೆಗೆ ರಾಜಕೀಯ ಇಚ್ಛಾಶಕ್ತಿ, ನ್ಯಾಯ ನಿಷ್ಠುರತೆ, ಕಠಿಣ ನಿಲುವಿನ ಅಭಾವವೇ ಪ್ರಮುಖ ಕಾರಣ ಎಂಬುದು ಸಾರ್ವತ್ರಿಕ ಅಭಿಪ್ರಾಯ. ಕ್ಷಣಿಕ ರಾಜಕೀಯ ಲಾಭಕ್ಕೆ ಆಸೆಪಡದೆ, ಭವಿಷ್ಯದ ಹಿತದೃಷ್ಟಿಯಿಂದ ನಿಷ್ಠುರವಾಗಿ ವರ್ತಿಸುವರೇ ರಾಜಕೀಯ ನಾಯಕರು? ಭಯೋತ್ಪಾದನೆಯನ್ನು ಧರ್ಮದ ಹಿನ್ನೆಲೆಯಿಂದ ನೋಡದೆ, ವೋಟಿಗಾಗಿ ಆತ್ಮವಂಚನೆ ಮಾಡಿಕೊಳ್ಳದೆ, ಅನುಮಾನಾಸ್ಪದರನ್ನು ವಶಕ್ಕೆ ಪಡೆದಾಗ ಅಮಾಯಕರನ್ನು ಬಿಟ್ಟುಬಿಡಿ ಎಂಬ ಗೊಂದಲಕ್ಕೆ ಆಸ್ಪದ ಕೊಡದೇ ಇರುವ ಸಂಕಲ್ಪ ಮಾಡಿದರೆ ಎಷ್ಟು ಚೆನ್ನ ಅಲ್ಲವೇ? ಆಂತರಿಕ ಸುರಕ್ಷೆ ಕಾಪಾಡುವುದು ಮತ್ತು ಭಯೋತ್ಪಾದನೆ ಹತ್ತಿಕ್ಕುವ ವಿಚಾರದಲ್ಲಿ ರಾಜಕೀಯ ಪಕ್ಷಗಳಲ್ಲಿ ಇನ್ನೂ ಹೆಚ್ಚಿನ ಸಹಮತ ಮತ್ತು ಸಹಕಾರ ಏರ್ಪಡಬೇಕಿದೆ.
ಸರ್ಕಾರ ತುರ್ತಾಗಿ ಏನು ಮಾಡಬಹುದು?: ಭಯೋತ್ಪಾದನೆ ವಿಷಯದಲ್ಲಿ ನಿಜಕ್ಕೂ ಭಾರತ ದೌರ್ಭಾಗ್ಯಪೂರ್ಣ ದೇಶ ಎನ್ನದೇ ವಿಧಿಯಿಲ್ಲ. ಭಯೋತ್ಪಾದನೆ ಹುಲುಸಾಗಿ ಬೆಳೆಯಲು ಅವಕಾಶ ಕೊಡುತ್ತಿರುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳೊಂದಿಗೆ ಗಡಿ ಹಂಚಿಕೊಂಡಿರುವುದು ಇದಕ್ಕೆ ಕಾರಣ. ಹೀಗಾಗಿ ಜಮ್ಮು-ಕಾಶ್ಮೀರ ಗಡಿ ಮಾತ್ರವಲ್ಲದೇ ಒಟ್ಟಾರೆ ಆಯಕಟ್ಟಿನ ಪ್ರದೇಶಗಳ ಗಡಿ ಬೇಲಿಯನ್ನು ಒಂದು ಕ್ರಿಮಿಯೂ ನುಸುಳದಂತೆ ಬಿಗಿ ಮಾಡಬೇಕು. ಆ ನಿಟ್ಟಿನಲ್ಲಿ ಹಾಲಿ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ತರುವಾಯ ಕಾಶ್ಮೀರದ ಗಡಿಯಲ್ಲಿ ಲೇಸರ್ ಬೇಲಿ ಅಳವಡಿಸಲಾಗುತ್ತಿದೆ. ಅದನ್ನು ಮೇಲೆ ಹೇಳಿದ ಇತರ ರಾಷ್ಟ್ರಗಳ ಗಡಿಗೂ ವಿಸ್ತರಿಸುವುದು ಒಳಿತು.
ನಿರ್ದಾಕ್ಷಿಣ್ಯ ಕ್ರಮ ಆಗಬೇಕು: ದೇಶದಲ್ಲಿ ಐಸಿಸ್ ಉಗ್ರರ ಎದೆಯಲ್ಲಿ ನಡುಕ ಉಂಟಾಗಲು ಎನ್ಐಎ ಖಡಕ್ ಕ್ರಮ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಎನ್ಐಎ ಮುಕ್ತವಾಗಿ ಕೆಲಸ ಮಾಡುವುದಕ್ಕೆ ಆಸ್ಪದ ನೀಡಿದ ಕೇಂದ್ರದ ಕ್ರಮ ಕೂಡ ಗಮನಾರ್ಹ. ಎಲ್ಲ ರೀತಿಯ ಭಯೋತ್ಪಾದಕರ ಮೇಲೂ ಇದೇ ನೀತಿ ಅನುಸರಿಸಿದರೆ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಯನ್ನು ತಹಬಂದಿಗೆ ತರುವುದು ಅಸಾಧ್ಯದ ಮಾತಲ್ಲ. ಈ ನಿಟ್ಟಿನಲ್ಲಿ ಆಲೋಚಿಸುವುದಾದರೆ ಇತ್ತೀಚೆಗೆ ಪಠಾಣ್ಕೋಟ್ನ ವಾಯುನೆಲೆ ಮೇಲೆ ಪಾಕ್ ಪ್ರೇರಿತ ಉಗ್ರರು ದಾಳಿ ಮಾಡಿದಾಗ ರಕ್ಷಣಾಪಡೆಗಳು ಕಾರ್ಯಾಚರಣೆ ನಡೆಸಿದ ರೀತಿ ವಿಶೇಷವಾದದ್ದು. ಆರಂಭದಲ್ಲಿ ಗುಪ್ತಚರ ವೈಫಲ್ಯವನ್ನು ಒಪ್ಪಬಹುದಾದರೂ ದಾಳಿಯ ನಂತರ ಉಗ್ರರ ಮೇಲೆ ನಡೆಸಿದ ದಾಳಿ, ದಾಳಿಗೆ ಪ್ರೇರಣೆ ನೀಡಿದ ಪಾಕಿಸ್ತಾನಕ್ಕೆ ನೀಡಿದ ಎಚ್ಚರಿಕೆ ಇವೆಲ್ಲವನ್ನು ಮೆಚ್ಚಲೇಬೇಕಿದೆ.
ಅನುಕೂಲ ಏನು?: ಇಲ್ಲಿ ಒಂದು ಸಂಗತಿಯನ್ನು ನಾವು ಗಮನಿಸಬೇಕಿದೆ. ಪ್ರಪಂಚದಲ್ಲಿ ಎರಡನೇ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶ ಭಾರತ. ಅಲ್ಕೈದಾ, ಐಸಿಸ್, ಬೋಕೋ ಹರಾಮ್ಂತಹ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳು ಇಲ್ಲಿ ನೇರವಾಗಿ ನೆಲೆಯೂರಲು ಯತ್ನಿಸುತ್ತಿದ್ದರೂ ಅದು ಸಾಧ್ಯವಾಗದಿರುವುದು ನಮ್ಮ ಹೆಚ್ಚುಗಾರಿಕೆ ಅಂತಲೇ ಹೇಳಬೇಕು. ಪಾಕಿಸ್ತಾನ, ಸಿರಿಯಾ ಅಥವಾ ಬೇರಾವುದೇ ದೇಶದ ಭಯೋತ್ಪಾದಕ ಸಂಘಟನೆಗಳು ಇಲ್ಲಿನ ಕೆಲವರನ್ನು ನೇಮಕ ಮಾಡಿಕೊಂಡು, ತರಬೇತಿ ನೀಡಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿರುವುದು ಹೌದಾದರೂ ಅಂದುಕೊಂಡಷ್ಟು ಬೇರುಬಿಡಲು ಸಾಧ್ಯವಾಗಿಲ್ಲ.
ಸಮನ್ವಯ ಅಗತ್ಯ: ಭಯೋತ್ಪಾದನೆ ದಮನಕ್ಕೆ ಸಂಬಂಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇನ್ನೂ ಹೆಚ್ಚು ಸಮನ್ವಯದಿಂದ ಕೆಲಸ ಮಾಡಬೇಕಿದೆ. ಕೇಂದ್ರ ಮತ್ತು ರಾಜ್ಯದ ರಕ್ಷಣಾ ಪಡೆಗಳು, ಗುಪ್ತಚರ ವಿಭಾಗಗಳು ಇನ್ನಷ್ಟು ಹೊಂದಾಣಿಕೆಯಿಂದ, ಸಹಕಾರದಿಂದ ಮುಂದುವರಿಯಬೇಕಿದೆ. ಭಯೋತ್ಪಾದನೆ ದಮನ ವಿಚಾರದಲ್ಲಿ ಕೇಂದ್ರ-ರಾಜ್ಯಗಳ ನಡುವೆ ಪಕ್ಷಭೇದ ಅಡ್ಡಿಯಾಗದಂತೆ ನೋಡಿಕೊಳ್ಳುವುದು ತುಂಬಾ ಅಗತ್ಯವಾಗಿದೆ.
2008ರಲ್ಲಿ ಮುಂಬೈ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರವೂ ನ್ಯಾಷನಲ್ ಇಂಟೆಲಿಜನ್ಸ್ ಗ್ರಿಡ್ ಸ್ಥಾಪಿಸುವ ಪ್ರಸ್ತಾವನೆಗೆ ಸರ್ಕಾರದ ಅನುಮೋದನೆ ದೊರೆಯಲು ಮೂರು ವರ್ಷ ಹಿಡಿಯಿತು. ಇಂತಹ ವಿಳಂಬ ಧೋರಣೆ ಸಹ್ಯವಲ್ಲ. ಆಂತರಿಕ ಸುರಕ್ಷೆಯನ್ನು ಬಿಗಿಗೊಳಿಸಲು ನ್ಯಾಷನಲ್ ಇಂಟೆಲಿಜನ್ಸ್ ಗ್ರಿಡ್ ಅತ್ಯಂತ ಉಪಯುಕ್ತ ಎಂಬುದು ಗೊತ್ತಿದ್ದೂ ಅದರ ಸಾಕಾರಕ್ಕೆ ಈ ಹಿಂದಿನ ಯುಪಿಎ ಸರ್ಕಾರ ಮೀನಮೇಷ ಎಣಿಸಿತು. ಅದಕ್ಕಿಂತ ಮುಖ್ಯವಾಗಿ ಭಯೋತ್ಪಾದಕ ದಾಳಿಗಳನ್ನು ಸಮರ್ಥವಾಗಿ ಹತ್ತಿಕ್ಕುವ ದೃಷ್ಟಿಯಿಂದ ಸಲಹೆ ಮಾಡಿದ್ದ ನ್ಯಾಷನಲ್ ಕೌಂಟರ್ ಟೆರರಿಸಮ್ ಸೆಂಟರ್(ಎನ್ಸಿಟಿಸಿ) ಸ್ಥಾಪನೆ ಪ್ರಸ್ತಾವನೆಗೆ ಯುಪಿಎ ಸರ್ಕಾರ ಕೊನೆಗೂ ಒಪ್ಪಿಗೆ ಕೊಡಲಿಲ್ಲ. ಗುಪ್ತಚರ ಮಾಹಿತಿ ನಿರ್ವಹಣೆ ಮತ್ತು ಭಯೋತ್ಪಾದಕ ದಾಳಿ ತಡೆ, ತನಿಖೆ ಇತ್ಯಾದಿಗಳನ್ನು ಸಮರ್ಥವಾಗಿ ನಿರ್ವಹಿಸುವ ಉದ್ದೇಶದಿಂದ ರಾಷ್ಟ್ರೀಯ ತನಿಖಾ ದಳವನ್ನು ಸ್ಥಾಪನೆ ಮಾಡಲಾಯಿತಾದರೂ ಅದಕ್ಕೆ ಹಣಕಾಸಿನ ಪೂರ್ಣ ನೆರವನ್ನು ನೀಡಲು ಹಿಂದೆಮುಂದೆ ನೋಡಲಾಯಿತು. ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಮಾದರಿಯಲ್ಲಿ ಎನ್ಐಎಯನ್ನು ಸ್ಥಾಪಿಸಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಎಫ್ಬಿಐ ರೀತಿಯಲ್ಲಿ ಒಂದೇ ಒಂದು ಪ್ರಕರಣವನ್ನು ರ್ತಾಕ ಅಂತ್ಯಕ್ಕೆ ತೆಗೆದುಕೊಂಡುಹೋದ ಉದಾಹರಣೆಯಿಲ್ಲ. ಅದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಾರಣವಲ್ಲದೆ ಬೇರೇನೂ ಅಲ್ಲ.
ಭಯೋತ್ಪಾದಕ ದಾಳಿಗಳು ನಡೆದ ಸಂದರ್ಭದಲ್ಲಿ ಎನ್ಐಎ, ಎನ್ಸಿಟಿಸಿಯಂತಹ ಸಂಸ್ಥೆಗಳನ್ನು ಸ್ಥಾಪಿಸುವ ಮಾತನ್ನು ಸರ್ಕಾರ ಆಡುತ್ತದೆ ಬಿಟ್ಟರೆ ವಾಸ್ತವದಲ್ಲಿ ಭಯೋತ್ಪಾದಕ ಸವಾಲುಗಳನ್ನು ಎದುರಿಸುವ ಪೊಲೀಸ್ ವ್ಯವಸ್ಥೆ ಆಧುನೀಕರಣಗೊಳಿಸುವ, ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ಪೊಲೀಸರಿಗೆ ಮತ್ತು ಇತರ ರಕ್ಷಣಾ ಸಿಬ್ಬಂದಿಗೆ ಆಧುನಿಕ ಶಸ್ತ್ರಾಸ್ತ್ರ ಪೂರೈಸುವ ಕಡೆಗೆ ಗಮನ ಕೊಡುತ್ತಿಲ್ಲ. ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಕಾರ್ಯಾಚರಣೆಗಿಳಿಯುವ ಪೊಲೀಸರಿಗೆ ಸೂಕ್ತ ತರಬೇತಿ ನೀಡುವ ಕಡೆಗೂ ಸರ್ಕಾರಗಳು ಆಸಕ್ತಿ ತೋರಿಸುತ್ತಿಲ್ಲ, ಅಗತ್ಯ ಹಣಕಾಸಿನ ನೆರವನ್ನು ಒದಗಿಸುತ್ತಿಲ್ಲ.
ಇಷ್ಟು ವರ್ಷಗಳ ಅನುಭವದ ಆಧಾರದಲ್ಲಿ ಭಯೋತ್ಪಾದಕ ದಾಳಿಗಳಿಂದ ರಕ್ಷಿಸುವ ಸಂಪೂರ್ಣ ಭರವಸೆಯನ್ನು ನೀಡಲು ಸರ್ಕಾರಗಳು ಸಮರ್ಥವಾಗಿರಬೇಕಿತ್ತು. ಆದರೆ ದುರ್ದೈವ ಎಂದರೆ ಅಂದಾಜಿನ ಪ್ರಕಾರ ಈಗಲೂ ವಾರ್ಷಿಕವಾಗಿ ದೇಶದ ನಾನಾ ಕಡೆಗಳಲ್ಲಿ ನೂರೈವತ್ತಕ್ಕೂ ಹೆಚ್ಚು ಭಯೋತ್ಪಾದಕ ದಾಳಿಗಳು ನಡೆಯುತ್ತಿವೆ.
ಕೊನೇ ಮಾತು: ಎಲ್ಲವನ್ನೂ ಸರ್ಕಾರವೇ ಮಾಡಬೇಕೆಂದು ಜನರು ನಿರೀಕ್ಷೆ ಮಾಡುವುದು ಸರಿಯಲ್ಲ. ಭಯೋತ್ಪಾದನೆ ದಮನದ ವಿಚಾರದಲ್ಲಿ ಜನತೆಯ ಸಹಕಾರ, ಸಹಭಾಗಿತ್ವದ ಪಾತ್ರವೂ ಬಹಳ ಮುಖ್ಯವಾಗಿದೆ. ದೇಶದ ಎಲ್ಲ ಪ್ರಜೆಗಳಿಗೆ, ಜನವಸತಿಗಳಿಗೆ ಸರ್ಕಾರ,ಪೊಲೀಸರು ರಕ್ಷಣೆ ಕೊಡುವುದು ಅಸಾಧ್ಯದ ಮಾತೇ ಸರಿ. ಹೀಗಾಗಿ ತಮ್ಮ ಸುತ್ತಮುತ್ತಲಿನವರ ಮೇಲೆ ನಿಗಾ ಇಟ್ಟು, ಅನುಮಾನ ಕಂಡು ಬಂದಾಗ ತಕ್ಷಣ ಪೊಲೀಸರಿಗೆ, ಮಾಧ್ಯಮಗಳಿಗೆ ಮಾಹಿತಿ ನೀಡುವ ಅಭ್ಯಾಸವನ್ನು ಜಾತಿ, ಮತ, ಧರ್ಮದ ಭೇದವಿಲ್ಲದೆ ನಾಗರಿಕರು ಮಾಡಿಕೊಂಡರೆ ಭಯೋತ್ಪಾದನೆಯನ್ನು ದೇಶದಿಂದ ಸಂಪೂರ್ಣವಾಗಿ ತೊಡೆದುಹಾಕಲು ಹೆಚ್ಚು ಸಮಯ ಹಿಡಿಯಲಿಕ್ಕಿಲ್ಲ. ಐಸಿಸ್ ಚಟುವಟಿಕೆಗೆ ಕಡಿವಾಣ ಹಾಕುವಲ್ಲಿ ಎನ್ಐಎ ಸಾಧಿಸಿದ ಯಶೋಗಾಥೆ ನಿರಾತಂಕವಾಗಿ ಮುನ್ನಡೆಯಲಿ, ಅಲ್ಲವೇ?