ಈ ನಿಗೂಢ ಭೇದಿಸುವವರು ಯಾರು?

ಮುಖರ್ಜಿ ಬೆಂಕಿಯ ಉಂಡೆ ಅಂತಿಟ್ಟುಕೊಳ್ಳೋಣ, ದೀನದಯಾಳ್ ಉಪಾಧ್ಯಾಯರಂಥ ಸೌಮ್ಯವಾದಿಯ ಹತ್ಯೆಗೆ ಏನು ಕಾರಣ? ರಾಜೀವ್ ದೀಕ್ಷಿತ್ ಸಾವಿನ ಹಿಂದಿನ ನಿಗೂಢ ಏನು? ಬಾಬಾ ರಾಮದೇವ್, ನರೇಂದ್ರ ಮೋದಿ ಅವರ ವಿಷಯದಲ್ಲಿ ದೇಶದ ಒಳಗೂ-ಹೊರಗೂ ವಿರೋಧಿಗಳು ಹಲ್ಲು ಕಡಿಯುತ್ತಿದ್ದಾರಲ್ಲ ಏಕೆ?

DEEN-DAYALJI

 

t4IYVDBMLz

 

1968, ಫೆಬ್ರವರಿ 10ರ ಮುಂಜಾನೆ ಏಳಕ್ಕೆ ಸರಿಯಾಗಿ ಲಖನೌ ರೈಲು ನಿಲ್ದಾಣದಲ್ಲಿ ಸೆಲ್ಡಾ-ಪಟನಾ  ಎಕ್ಸ್ ಪ್ರೆಸ್ಕ್ಸ್‍ ರೈಲು ಹತ್ತಿ ಹೊರಟ ಪಂಡಿತ್ ದೀನದಯಾಳ್ ಉಪಾಧ್ಯಾಯರು ಮರುದಿನ ಮುಂಜಾನೆ ಹೆಚ್ಚು ಕಡಿಮೆ ಅದೇ ಸಮಯಕ್ಕೆ ಪಟನಾ ರೈಲು ನಿಲ್ದಾಣಕ್ಕೆ ಬಂದು ಇಳಿಯಬೇಕಿತ್ತು. ಲಖನೌದಿಂದ ಹೊರಟ ರೈಲು ಪಟನಾ ನಿಲ್ದಾಣ ತಲುಪಿತು ನಿಜ, ಆದರೆ ಅದರಲ್ಲಿ ಉಪಾಧ್ಯಾಯರು ಬಂದಿಳಿಯಲೇ ಇಲ್ಲ!

ಶ್ಯಾಮಪ್ರಸಾದ್ ಮುಖರ್ಜಿಯವರ ಅಕಾಲಿಕ ಮತ್ತು ಅನುಮಾನಾಸ್ಪದ ಸಾವಿನ ನಂತರ ಸುಮಾರು ಹದಿನಾರು ವರ್ಷಗಳ ಕಾಲ ಉಪಾಧ್ಯಾಯರು ಜನಸಂಘದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾಗಿ ಅತ್ಯಂತ ಸಮರ್ಥವಾಗಿ ಕೆಲಸ ನಿರ್ವಹಿಸಿದರು. ಆ ಅವಧಿಯಲ್ಲೇ ಅವರು ರಾಷ್ಟ್ರ ರಾಜಕಾರಣದಲ್ಲಿ ಓರ್ವ ಪ್ರಮುಖ ನಾಯಕರಾಗಿ ಗುರುತಿಸಿಕೊಳ್ಳುತ್ತಾರೆ ಕೂಡ. ಹೀಗಾಗಿ ಮುಂದೆ 1967ರ ಡಿಸೆಂಬರ್ 26ರಂದು ಉಪಾಧ್ಯಾಯರು ಜನಸಂಘದ ಅಧ್ಯಕ್ಷರಾಗಿ ನೇಮಕಗೊಳ್ಳುತ್ತಾರೆ. ಅವರು ಜನಸಂಘದ ಅಧ್ಯಕ್ಷರಾಗಿ ಕೇವಲ ನಲವತ್ಮೂರು ದಿನಗಳು ಕಳೆದಿದ್ದವು. ಅಷ್ಟರಲ್ಲಾಗಲೇ ಅವರು ಉತ್ತರಪ್ರದೇಶದಿಂದ ಪಕ್ಷ ಸಂಘಟನೆಯ ಪ್ರವಾಸ ಆರಂಭಿಸಿದ್ದರು. ಜನಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಅವರು ಲಖನೌದಿಂದ ಪಟನಾಕ್ಕೆ ಹೊರಟಿದ್ದರು. ದೀನದಯಾಳ್ ಜನಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರೂ ರೈಲಿನ ಮೂರನೇ ದರ್ಜೆ ಬೋಗಿಯಲ್ಲೇ ಪ್ರಯಾಣಿಸುತ್ತಾರೆ. ರಾತ್ರಿ ಸುಮಾರು ಒಂದೂ ಮುಕ್ಕಾಲು ಅಥವಾ ಎರಡು ಗಂಟೆ ಸಮಯ ಇರಬಹುದು. ಅವರು ಪ್ರಯಾಣಿಸುತ್ತಿದ್ದ ರೈಲು ಹೌರಾ ನಿಲ್ದಾಣಕ್ಕೆ ಬಂದು ತಲುಪುತ್ತದೆ. ವಿಚಿತ್ರ ಅಂದರೆ ದೀನದಯಾಳ್ ಪ್ರಯಾಣಿಸುತ್ತಿದ್ದ ರೈಲುಬೋಗಿಯನ್ನು ಕಳಚಿ ಹೌರಾ ನಿಲ್ದಾಣದಲ್ಲಿ ದೆಹಲಿ-ಹೌರಾ ಎಕ್ಸ್‍ಪ್ರೆಸ್ ರೈಲಿಗೆ ಜೋಡಿಸಲಾಗುತ್ತದೆ. ಬಳಿಕ ಸೆಲ್ಡಾ-ಪಟನಾ ಎಕ್ಸ್‍ಪ್ರೆಸ್ ರೈಲು ಹೌರಾ ನಿಲ್ದಾಣದಿಂದ ಮುಂದಕ್ಕೆ ಚಲಿಸುತ್ತದೆ. ಪಟನಾ ಎಕ್ಸ್‍ಪ್ರೆಸ್ ರೈಲು ನಿಲ್ದಾಣದಿಂದ ಹೊರಟ ಕೆಲವೇ ಹೊತ್ತಿನಲ್ಲಿ ಬರ್ಬರ ಕೃತ್ಯವೊಂದು ನಡೆದುಹೋಗಿದ್ದಿರಬೇಕು. ಬೆಳಕು ಹರಿಯುವ ಹೊತ್ತಿಗೆ ಹೌರಾ ನಿಲ್ದಾಣದ ರೈಲ್ವೆ ಯಾರ್ಡ್ ಸಮೀಪದಲ್ಲಿ ಒಂದು ಅನಾಥ ಶವ ಪತ್ತೆಯಾಗುತ್ತದೆ. ಅದು ಬೇರೆ ಯಾರದ್ದೂ ಅಲ್ಲ, ದೀನದಯಾಳ ಉಪಾಧ್ಯಾಯರದ್ದು! ಜನಜಂಗುಳಿ ಸೇರುತ್ತದೆ. ಅದರ ಮಧ್ಯೆ ಯಾರೋ ಒಬ್ಬ ಉಪಾಧ್ಯಾಯರ ಮುಖವನ್ನು ಗುರುತಿಸಿ ಕಿರುಚಿಕೊಳ್ಳುತ್ತಾನೆ. ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತದೆ!

ಭಾರತ ಸುಜಲ-ಸುಫಲದಿಂದ ಸಂಪದ್ಭರಿತವಾಗಬೇಕು. ಲಕ್ಷ್ಮೀ, ದುರ್ಗೆ, ಸರಸ್ವತಿಯರ ತಾಣವಾಗಬೇಕೆಂಬ ಜಪ ಮಾಡುತ್ತ ದೇಶದ ಉಜ್ವಲ ಭವಿಷ್ಯವನ್ನೇ ಕಣ್ಣು, ಮನಸ್ಸು, ನರನಾಡಿಗಳಲ್ಲಿ ತುಂಬಿಕೊಂಡ ನಿಸ್ವಾರ್ಥ ರಾಜಕೀಯ ನಾಯಕ ಪಂಡಿತ ದೀನದಯಾಳ್ ಉಪಾಧ್ಯಾಯರನ್ನು ಯಾರೋ ಹಂತಕರು ಬರ್ಬರವಾಗಿ ಹತ್ಯೆ ಮಾಡಿದ್ದರು. ಅಲ್ಲಿಗೆ ದೇಶಭಕ್ತಿಯನ್ನೇ ಉಸಿರಾಗಿಸಿಕೊಂಡ ಮತ್ತೊಬ್ಬ ಮೇರುನಾಯಕನ ಅಧ್ಯಾಯ ಮುಕ್ತಾಯವಾಗುತ್ತದೆ.

ಶ್ಯಾಮಪ್ರಸಾದ್ ಮುಖರ್ಜಿಯವರಾದರೋ ದೇಶ-ಧರ್ಮದ ವಿಚಾರ ಬಂದರೆ ಬೆಂಕಿಯ ಉಂಡೆಯಾಗುತ್ತಿದ್ದರು. ಆ ವಿಷಯದಲ್ಲಿ ಅವರು ನೆಹರುಗೇ ಪಂಥಾಹ್ವಾನ ನೀಡಿದ್ದರು. ಆದರೆ ಉಪಾಧ್ಯಾಯರು ಹಾಗಲ್ಲ, ಸ್ವಭಾವದಲ್ಲಿ ಬಹಳ ಸೌಮ್ಯ. ಆದರೂ ಅವರು ಯಾಕೆ ಹತ್ಯೆಯಾದರು, ಅವರು ಪ್ರಯಾಣಿಸುತ್ತಿದ್ದ ಬೋಗಿಯನ್ನು ಸೆಲ್ಡಾ-ಪಟನಾ ಎಕ್ಸ್‍ಪ್ರೆಸ್ ರೈಲಿಂದ ಬೇರ್ಪಡಿಸಿ ದೆಹಲಿ-ಹೌರಾ ಎಕ್ಸ್‍ಪ್ರೆಸ್ ರೈಲಿಗೆ ಜೋಡಿಸಿದವರು ಯಾರು? ಈ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ.

ನೆಹರು ನೀತಿಯನ್ನು ಧಿಕ್ಕರಿಸಿ ಕಾಶ್ಮೀರ ಉಳಿಸಿ ಹೋರಾಟಕ್ಕೆ ಧುಮುಕಿದ ಶ್ಯಾಮಪ್ರಸಾದ್ ಮುಖರ್ಜಿ ಪೊಲೀಸ್ ಲಾಕಪ್ಪಿನಿಂದ ಜೀವಂತವಾಗಿ ಆಚೆ ಬರಲಿಲ್ಲ. ಅವರ ಉತ್ತರಾಧಿಕಾರಿ ಉಪಾಧ್ಯಾಯರು ಕಗ್ಗತ್ತಲ ರಾತ್ರಿಯಲ್ಲಿ ಯಕಃಶ್ಚಿತ್ತಾಗಿ ಹತ್ಯೆಯಾದರು. ದುರ್ದೈವ ಅಂದರೆ ಮತ್ತೆ ಜನಸಂಘದಲ್ಲಾಗಲಿ, ಈಗಿನ ಬಿಜೆಪಿಯಲ್ಲೇ ಆಗಲಿ ಆ ಇಬ್ಬರು ಮಹಾನ್ ನಾಯಕರ ಕೊರತೆಯನ್ನು ತುಂಬಬಲ್ಲ ಬೇರೆ ನಾಯಕ ಹುಟ್ಟಿ ಬರಲಿಲ್ಲ.

ಆನಂತರ ವಾಜಪೇಯಿ, ಆಡ್ವಾಣಿ ಮುಂತಾದವರೆಲ್ಲ ರಾಷ್ಟ್ರ ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ಬಂದರು ನಿಜ. ಆದರೆ ಅವರಿಬ್ಬರೂ ನೆಹರು ಮತ್ತು ನೆಹರು ಮನೆತನದ ನಾಯಕರು ಹಾಗೂ ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ನಿಲುವುಗಳನ್ನು ರಿಸ್ಕ್ ತೆಗೆದುಕೊಂಡು ವಿರೋಧಿಸುವ ಗೋಜಿಗೆ ಹೋಗುವುದಿಲ್ಲ. ನಿಜ ಹೇಳಬೇಕೆಂದರೆ ಸಂಸತ್ತಿನ ಒಳಗೆ ಮತ್ತು ಹೊರಗೆ ಇವರು ರಾಜಕೀಯ ಹೋರಾಟ ಮಾಡಿದ್ದಕ್ಕಿಂತ ಹೊಂದಾಣಿಕೆ ಮಾಡಿಕೊಂಡದ್ದೇ ಜಾಸ್ತಿ ಎಂದು ಹಲವರು ಅಭಿಪ್ರಾಯಪಡುವುದಿದೆ.

ಇಲ್ಲಿ ಒಂದು ಸಾಮಾನ್ಯ ಸಂಗತಿಯನ್ನು ಗಮನಿಸಲೇಬೇಕು. ಅದೇನಪ್ಪಾ ಅಂದರೆ ಈ ದೇಶ ರಾಜಕೀಯವಾಗಿ, ಆರ್ಥಿಕವಾಗಿ, ವೈಜ್ಞಾನಿಕವಾಗಿ, ಸಾಮಾಜಿಕವಾಗಿ ಬಲಗೊಳ್ಳಬೇಕು, ಸಾಂಸ್ಕೃತಿಕವಾಗಿ ಸ್ವಾಭಿಮಾನಿಯಾಗಬೇಕೆಂಬ ಪ್ರತಿಪಾದನೆಗೂ ಮತ್ತು ಹಾಗೆ ಪ್ರತಿಪಾದನೆ ಮಾಡುವ ನಾಯಕರ ಹತ್ಯೆಗಳಿಗೂ ಒಂದಕ್ಕೊಂದು ಸಂಬಂಧವಿದೆ. ಮುಖರ್ಜಿ, ಉಪಾಧ್ಯಾಯರ ಹತ್ಯೆ, ಶಾಸ್ತ್ರಿ ಹತ್ಯೆ, ಹೋಮಿ ಜಹಾಂಗೀರ್ ಭಾಭಾ ದುರಂತ ಅಂತ್ಯ, ಇಂದಿರಾ ಹತ್ಯೆ, ವಿಕ್ರಂ ಸಾರಾಭಾಯ್ ಸಾವು, ರಾಜೀವ್ ಗಾಂಧಿ ಕೊನೆಗೆ ಆಜಾದಿ ಬಚಾವೋ ಆಂದೋಲನದ ರಾಜೀವ್ ದೀಕ್ಷಿತ್ ಅವರ ಸಾವಿನವರೆಗೂ ಆ ಅನುಮಾನದ ಎಳೆಯನ್ನು ಸುಲಭವಾಗಿ ನಾವು ಗುರತಿಸಬಹುದು.

ಸ್ವದೇಶಿ, ಸ್ವಾಭಿಮಾನದ ಕಿಚ್ಚು ಹೊತ್ತಿಸಲು ಹೊರಟ ರಾಜೀವ್ ದೀಕ್ಷಿತ್ ಸಾವೂ ಒಂದು ಯೋಜಿತ ಸಂಚಿನ ಫಲ ಎಂದು ಈಗಲೂ ಲಕ್ಷಾಂತರ ಜನರು ಹೇಳುತ್ತಾರೆ. ರಾಜೀವ್ ದೀಕ್ಷಿತರದ್ದು ಸಾಯುವ ವಯಸ್ಸಾ? ಅಲ್ಲ. 2010ರ ನವೆಂಬರ್ 30ಕ್ಕೆ ಅವರಿಗೆ ತುಂಬಿದ್ದು ನಲ್ವತ್ಮೂರು ವರ್ಷ ಮಾತ್ರ. ಅವರಿಗೆ ಯಾವುದಾದರೊಂದು ಸಣ್ಣ ಕಾಯಿಲೆಯಾದರೂ ಇತ್ತಾ? ಕೇಳಲೇಬಾರದು. ಔಷಧ, ಗುಳಿಗೆ ಮತ್ತೊಂದು ಮಗದೊಂದರ ಹೆಸರು ಕೇಳಿದರೇ ಅವರಿಗೆ ಆಗಿ ಬರುತ್ತಿರಲಿಲ್ಲ. ಮನುಷ್ಯನಿಗೆ ಕಾಡುವ ಸಕಲ ವಿಧದ ಕಾಯಿಲೆಗಳಿಗೂ ಅವರವರ ಮನೆಯ ಅಡುಗೆ ಮನೆಯಲ್ಲೇ ಮದ್ದಿದೆ ಅಂತ ಅವರು ನಂಬಿದ್ದರು, ಅದನ್ನೇ ಅವರು ಬೇರೆಯವರಿಗೆ ಹೇಳುತ್ತಿದ್ದರು. ಪ್ರವಾಸ ವೇಳೆ ಅವರುಳಿದುಕೊಂಡ ಮನೆಗಳಲ್ಲಿ ಅದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸುತ್ತಿದ್ದರು ಕೂಡ. ಎಂಥಾ ಗಟ್ಟಿಗ ಆಳು ಅಂದರೆ ಒಂದು ಕಡೆ ಭಾಷಣಕ್ಕೆ ನಿಂತರೆ ಅವರು ಕನಿಷ್ಠ ಮೂರು ತಾಸು ಹಾಗೇ ನಿಂತೇ ಇರುತ್ತಿದ್ದರು. ಎದುರು ಕುಳಿತ ಸಹಸ್ರಾರು ಕೇಳುಗರಿಗೆ ಸಮಯ ಕಳೆದದ್ದೇ ಗೊತ್ತಾಗದೆ ಮೂಗಿನ ಮೇಲೆ ಬೆರಳಿಟ್ಟು ಉದ್ಗಾರ ತೆಗೆಯುತ್ತಿದ್ದರು.

ಅಂಥ ರಾಜೀವ್ ದೀಕ್ಷಿತ್ ಹೃದಯಾಘಾತದಿಂದ ಸಾಯುತ್ತಾರೆಂದರೆ ನಂಬಲಾದೀತೇ! ಹಾಗಿದ್ದರೆ ತೀರಿಕೊಂಡಾಗ ಅವರ ದೇಹ ಸಂಪೂರ್ಣ ನೀಲಿ ಆಗಿಹೋಗಿತ್ತಲ್ಲ, ಅದಕ್ಕೇನು ಕಾರಣ? ರಾಜೀವ್ ದೀಕ್ಷಿತರ ಮೃತದೇಹವನ್ನು ಪ್ರತ್ಯಕ್ಷ ಕಂಡವರು ಈಗಲೂ ಆ ಪ್ರಶ್ನೆ ಕೇಳುತ್ತಾರೆ. ಹೋಗಲಿ ಅವರ ದೇಹದ ಪೋಸ್ಟ್ ಮಾರ್ಟಂ ಕೂಡ ಮಾಡುವುದಿಲ್ಲ ಯಾಕೆ? ಅವರು ವಾರ್ಧಾ ಆಶ್ರಮದ ವಿಳಾಸದಲ್ಲಿ ಬದುಕುತ್ತಿದ್ದ ಭಿಕಾರಿ ಅಂತಲೇ?!

ರಾಜೀವ್ ದೀಕ್ಷಿತ್ ಜಾಲಾಡಿದ್ದು ಎಂತೆಂಥವರನ್ನು? ನೆಹರು ಸಾವಿಗೆ ಏನು ಕಾರಣ, ಯಾವ ಕಾಯಿಲೆ ಕಾರಣ, ಮದರ್ ತೆರೆಸಾ ಸೇವೆಯ ಹಿನ್ನೆಲೆ ಏನು? ಉಗಾಂಡಾ, ಆಫ್ರಿಕಾ, ತಾಂಜೇನಿಯಾ, ಬಾಂಗ್ಲಾದೇಶ, ಪಾಕಿಸ್ತಾನದಂತಹ ಬಡ ರಾಷ್ಟ್ರಗಳನ್ನೆಲ್ಲ ಬಿಟ್ಟು ತೆರೆಸಾ ಭಾರತದಲ್ಲೇ ಬಡವರ ಉದ್ಧಾರಕ್ಕೆ ಮುಂದಾಗಲು ಕಾರಣ ಏನು ಎಂಬುದನ್ನು ಎಳೆಎಳೆಯಾಗಿ ಹೇಳುತ್ತಿದ್ದರು. 2001ರ ಸೆಪ್ಟೆಂಬರ್ 11 ವಲ್ರ್ಡ್ ಟ್ರೇಡ್ ಸೆಂಟರ್ ಮೇಲಿನ ದಾಳಿ ಅಮೆರಿಕದ `ಸ್ಟೇಜ್ ಮ್ಯಾನೇಜ್ಡ್’ ಕಾರ್ಯಕ್ರಮ ಎಂಬುದು ದೀಕ್ಷಿತರ ಬಲವಾದ ವಾದವಾಗಿತ್ತು. ಅದಕ್ಕಿಂತ ಹೆಚ್ಚಾಗಿ ರಾಜೀವ್ ದೀಕ್ಷಿತ್ ಕಾರ್ಗಿಲ್, ಡ್ಯು  ಪೊಂಟ್  , ಕೊಕಾಕೋಲಾ, ಕೋಲ್ಗೇಟ್, ಹಿಂದುಸ್ತಾನ್ ಯುನಿಲಿವರ್, ಮ್ಯಾನ್‍ಫೋರ್ಸ್ ಇತ್ಯಾದಿ ಇತ್ಯಾದಿ ಬಹುರಾಷ್ಟ್ರೀಯ ಕಂಪೆನಿಗಳ ವಿರುದ್ಧ ಬಹಿರಂಗ ಯುದ್ಧವನ್ನೇ ಸಾರಿದ್ದರು. ಈ ಕಂಪನಿಗಳು ಶ್ರೀಮಂತವಾಗುತ್ತಿವೆ, ಭಾರತ ಬಡವಾಗುತ್ತಿದೆ ಎಂದು ಚಡಪಡಿಸುತ್ತಿದ್ದರು ದೀಕ್ಷಿತ್. ದೇಶದ ಬಡತನ ನೀಗಬೇಕೆಂದರೆ ಸ್ವಿಸ್ ಬ್ಯಾಂಕ್‍ನಲ್ಲಿಟ್ಟಿರುವ ಕಾಳಧನವನ್ನು ದೇಶದ ಸಂಪತ್ತೆಂದು ಸುಪ್ರೀಂ ಕೋರ್ಟ್ ಘೋಷಣೆ ಮಾಡಬೇಕು ಅಂತ ದೀಕ್ಷಿತ್ ಹೋದಲ್ಲಿ ಬಂದಲ್ಲಿ ಆಗ್ರಹ ಮಾಡುತ್ತಿದ್ದರು. ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಈ ಮೂರು ಭಾರತದ ಪಾಲಿಗೆ ತೊಳೆದುಕೊಳ್ಳಲಾಗದ ಶಾಪ ಎನ್ನುತ್ತಿದ್ದರು. ನಮ್ಮ ತೆರಿಗೆ ನೀತಿ ವಿಕೇಂದ್ರೀಕರಣ ಆಗಬೇಕು, ತೆರಿಗೆ ಹಣದಲ್ಲಿ ಎಂಭತ್ತು ಪರ್ಸೆಂಟ್ ರಾಜಕಾರಣಿಗಳ ಜೇಬು ಸೇರುತ್ತದೆ, ಉಳಿದ ಇಪ್ಪತ್ತು ಪರ್ಸೆಂಟ್ ಜನೋಪಯೋಗಿ ಕೆಲಸಕ್ಕೆ ಸಿಕ್ಕಿದರೆ ಅದೇ ಹೆಚ್ಚು. ಇದರ ವಿರುದ್ಧ ಸಿಡಿದೇಳಿ ಅಂತ ಅವರು ಯಾವ ಮುಲಾಜೂ ಇಲ್ಲದೆ ಗುಡುಗುತ್ತಿದ್ದರು. ಒಬ್ಬ ರಾಜೀವ ದೀಕ್ಷಿತರನ್ನು ಮುಗಿಸಲು ಇಷ್ಟು ವೈರಿಗಳು ಸಾಕಲ್ಲವೇ?

ಅದಷ್ಟೇ ಅಲ್ಲ, ಅಪಾಯ, ಆತಂಕದ ಮುಖಗಳು ಬೇರೆ ಅನ್ನುವುದನ್ನು ಬಿಟ್ಟರೆ ಆಗಿನ ಪರಿಸ್ಥಿತಿಗಿಂತ ಈಗಿನ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ತಂತ್ರ ಪ್ರತಿತಂತ್ರಗಳು ಬೇರೆ ಅಷ್ಟೆ. ಹಾಗೇ ಕೆಲವು ಉದಾಹರಣೆಗಳಿವೆ ನೋಡಿ. ಬಾಬಾ ರಾಮದೇವ್ ಭ್ರಷ್ಟಾಚಾರ, ಕಪ್ಪುಹಣದ ವಿರುದ್ಧ ಹೋರಾಟ ಶುರು ಮಾಡಿದರಲ್ಲವೇ? ಒಂದೆಡೆ ಕೇಂದ್ರ ಸರ್ಕಾರ ಪೊಲೀಸ್ ಇಲಾಖೆ, ತೆರಿಗೆ ಇಲಾಖೆ, ಪಾಸ್‍ಪೋರ್ಟ್ ಕಚೇರಿ, ಮಣ್ಣ-ಮಸಿ ಎಲ್ಲವನ್ನೂ ಬಳಸಿ ರಾಮದೇವ್ ಬಾಯಿಮುಚ್ಚಿಸುವ ಯತ್ನ ನಡೆಯಿತು. ಅದೇ ವೇಳೆ ಮತ್ತೊಂದೆಡೆ `ಇಂಡಿಯಾ ಅಗೆನೆಸ್ಟ್ ಕರಪ್ಷನ್’ಎಂಬ ಚಳವಳಿ ಹುಟ್ಟಿಕೊಂಡಿತು. ಭ್ರಷ್ಟಾಚಾರದಿಂದ ಬೇಸತ್ತ ಜನರು ಅಣ್ಣಾ ಹಜಾರೆ ನೇತೃತ್ವದ ಐಎಸಿ ಹಿಂದೆ ಹೆಜ್ಜೆ ಹಾಕಿದರು. ರಾಮದೇವ್ ಆರಂಭಿಸಿದ ಹೋರಾಟ ಹೈಜಾಕ್ ಆಯಿತು. ಐಎಸಿ ಮುಂದೆ ಅಣ್ಣಾ ಹಜಾರೆಗೆ ಕೊಕ್ ನೀಡಿ ಎಎಪಿ ಎಂಬ ರಾಜಕೀಯ ಪಕ್ಷದ ಸ್ವರೂಪ ಪಡೆದುಕೊಂಡಿತು. ಅದೆಲ್ಲ ಸರಿ, ಎಎಪಿ ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳಲಿಲ್ಲ. ವಿಶ್ವಾಸಾರ್ಹತೆಯನ್ನು ಗಳಿಸಲಿಲ್ಲ. ಹಾಗಿದ್ದರೆ ಭ್ರಷ್ಟಾಚಾರದ ವಿರುದ್ಧ ಹುಟ್ಟಿಕೊಂಡ `ಆಪ್’ ಮತ್ತು ಅದರಿಂದಲೇ ಹೀರೋ ಆದ ಕೇಜ್ರಿವಾಲ್‍ಗೆ ಕಾಂಗ್ರೆಸ್ ಪಕ್ಷವೇ ಮೊದಲ ಟಾರ್ಗೆಟ್ ಆಗಬೇಕಿತ್ತಲ್ಲವೇ? ಅದನ್ನೆಲ್ಲ ಬಿಟ್ಟು ಇದೀಗ ಮೋದಿ ವಿರುದ್ಧ `ಆಪ್’ ಯುದ್ಧ ಸಾರಿರುವುದರ ಮರ್ಮವೇನು? ಒಂದಕ್ಕೊಂದು ಏನಾದರೂ ಸಂಬಂಧವಿದೆಯೇ? ಭ್ರಷ್ಟಾಚಾರಕ್ಕಿಂತ ಕೋಮುವಾದ ಹೆಚ್ಚು ಅಪಾಯಕಾರಿ ಎಂದು ಕೇಜ್ರಿವಾಲ್ ಹೇಳುತ್ತಿರುವುದರ ಹಿನ್ನೆಲೆ ಏನು? ಹಾಗಿದ್ದರೆ ರಾಮದೇವ್ ಹೋರಾಟ, ಮೋದಿ ರಾಷ್ಟ್ರ ರಾಜಕಾರಣ ಪ್ರವೇಶ, ಐಎಸಿ, `ಆಪ್’ಗಳ ಹುಟ್ಟು ಒಂದಕ್ಕೊಂದು ಸಂಬಂಧ ಇಲ್ಲದ ಬೆಳವಣಿಗೆ ಅಂತ ಹೇಗೆ ಹೇಳುವುದು? ರಾಮದೇವ್ ಕಟ್ಟಿದ ಭಾರತ ಸ್ವಾಭಿಮಾನ ಟ್ರಸ್ಟ್, ಹರಿದ್ವಾರದ ಪತಂಜಲಿ ಯೋಗ ಮತ್ತು ಆಯುರ್ವೇದ ಸಾಮ್ರಾಜ್ಯ ಏನು ಸಣ್ಣದೇ? ಅದರಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ನಡುಕ ಹುಟ್ಟಿರಲಿಕ್ಕಿಲ್ಲ ಅಂತೀರಾ? ನರೇಂದ್ರ ಮೋದಿ ರಾಷ್ಟ್ರ ರಾಜಕಾರಣ ಪ್ರವೇಶಿಸಿದ ನಂತರದಲ್ಲಿ ಅಂಥಾ ಅಮೆರಿಕವೇ ಆಗೊಂದು-ಈಗೊಂದು ಮಾತು ಹೊರಳಿಸುತ್ತಿರುವಾಗ ಚೀನಾ, ಪಾಕಿಸ್ತಾನ, ತಾಲಿಬಾನ್‍ಗಳಿಗೆ ಹೇಗಾಗಿರಬಾರದು? ಹಾಗಿದ್ದರೆ ಮೋದಿ ಮತ್ತು ಬಾಬಾ ರಾಮದೇವ್ ಇವರಿಗೆಲ್ಲ ಯಾವ ಪ್ರಮಾಣದ ಭದ್ರತೆ ಕೊಡಬೇಕು. ಎಕ್ಸ್.. ವೈ… ಝಡ್….ಯಾವುದೂ ಅಂದುಕೊಂಡಷ್ಟು ಸರಳ ಇಲ್ಲ…

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top