ಶಿಕ್ಷಣ ನೀತಿಯ ನೂರೆಂಟು ಮುಖ

ನೂತನ ಶಿಕ್ಷಣ ನೀತಿಯನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಯಾವ ದೇಶಗಳಲ್ಲಿ ಪರಿಣಾಮಕಾರಿ ಶಿಕ್ಷಣ ನೀತಿಯಿದೆ? ಭಾರತಕ್ಕೂ ಅವುಗಳಿಗೂ ಇರುವ ವ್ಯತ್ಯಾಸವೇನು? ಒಂದು ನೋಟ ಇಲ್ಲಿದೆ.

ತಾಯಿನುಡಿಗೆ ಯುನೆಸ್ಕೊ ಒತ್ತು
ನೂತನ ಶಿಕ್ಷಣ ನೀತಿಯಲ್ಲಿ ಕೇಂದ್ರ ಸರಕಾರ ಮಾತೃಭಾಷೆಗೆ ನೀಡಿರುವ ಒತ್ತನ್ನು, ವಿಶ್ವ ಸಂಸ್ಥೆಯ ಶಿಕ್ಷಣ, ವಿಜ್ಞಾನ ಮತ್ತು ಸಾಂಸ್ಕೃತಿಕ ಘಟಕ (ಯುನೆಸ್ಕೊ) ಕೂಡ ಒತ್ತಿ ಹೇಳಿದೆ. ಮಗುವಿಗೆ ಚಿಕ್ಕ ವಯಸ್ಸಿನಿಂದಲೇ ಬಹುಭಾಷಾ ಶಿಕ್ಷಣವನ್ನು ಒದಗಿಸಬೇಕು. ಇದರಿಂದ ಮಗುವಿನ ಕಲ್ಪನೆ, ವೈವಿಧ್ಯತೆಯ ಪರಿಕಲ್ಪನೆ ಹಾಗೂ ಸೃಜನಶೀಲತೆಗೆ ಇಂಬು ಸಿಗುತ್ತದೆ ಎಂದು ಯುನೆಸ್ಕೊ ಹೇಳಿದೆ. ಹೀಗಾಗಿ, ಪ್ರತಿಯೊಂದು ದೇಶವೂ ‘ತ್ರಿಭಾಷಾ ಶಿಕ್ಷಣ’ದ ಸೂತ್ರವನ್ನು ಅನುಸರಿಸಬೇಕು ಎಂದು ಯುನೆಸ್ಕೊ ಹೇಳಿತ್ತು. ಅವುಗಳೆಂದರೆ- ಮಾತೃಭಾಷೆ, ಸ್ಥಳೀಯ ಭಾಷೆ ಅಥವಾ ರಾಷ್ಟ್ರೀಯ ಭಾಷೆ, ಅಂತಾರಾಷ್ಟ್ರೀಯ ಭಾಷೆ. 1999ರಲ್ಲಿ ಈ ತ್ರಿಭಾಷಾ ಸೂತ್ರವನ್ನು ನೀಡಿದ ಯುನೆಸ್ಕೊ, ಆ ವರ್ಷವೇ, ಫೆಬ್ರವರಿ 21ನ್ನು ‘ಅಂತಾರಾಷ್ಟ್ರೀಯ ಮಾತೃಭಾಷೆ ದಿನ’ವಾಗಿ ಆಚರಿಸುವಂತೆ ಕರೆ ನೀಡಿತು. ಭಾರತದಲ್ಲಿ ಮಾತೃಭಾಷೆ ಮಾಧ್ಯಮವಾಗಲಿ ಎಂದು ನೂತನ ಶಿಕ್ಷಣ ನೀತಿ ಹೇಳಿದೆ. ಆದರೆ ‘ಸಾಧ್ಯವಿದ್ದಲ್ಲಿ’ ಎಂದೂ ಸೇರಿಸಿದೆ.

ಫಿನ್ಲೆಂಡ್‌ನ ಶ್ರೇಷ್ಠ ಪಾಲಿಸಿ
ಫಿನ್ಲೆಂಡ್‌ನ ಶಿಕ್ಷಣ ವ್ಯವಸ್ಥೆ ಜಗತ್ತಿನಲ್ಲೇ ಅತ್ಯುತ್ತಮವಾದದ್ದು ಎಂದು ಅಂತಾರಾಷ್ಟ್ರೀಯ ಮಾನದಂಡಗಳು ಹಾಗೂ ಅಧ್ಯಯನಗಳ ಮೂಲಕ ವ್ಯಕ್ತವಾಗುತ್ತ ಬಂದಿದೆ. ಇಲ್ಲಿ ಮಗುವಿಗೆ 6 ವರ್ಷದವರೆಗೆ ಕಲಿಕೆಯಿಲ್ಲ, ಆಟ ಮಾತ್ರ. 7ನೇ ವರ್ಷದಿಂದ ಸಾಂಪ್ರದಾಯಿಕ ಕಲಿಕೆ ಆರಂಭ. ಎಲ್ಲರಿಗೂ ಉಚಿತ ಶಿಕ್ಷಣ. ಶಾಲೆಯಲ್ಲಿ ಉಚಿತ ಊಟ ನೀಡಲಾಗುತ್ತದೆ. ಸರಕಾರಿ- ಖಾಸಗಿ ಶಾಲೆಗಳ ಗುಣಮಟ್ಟ ಹಾಗೂ ಪಠ್ಯಕ್ರಮದಲ್ಲಿ ವ್ಯತ್ಯಾಸವಿಲ್ಲ. ಪರೀಕ್ಷೆಗಳಿಲ್ಲ . 16ನೇ ವಯಸ್ಸಿನಲ್ಲಿ ಒಂದು ಸಾರ್ವತ್ರಿಕ ಪರೀಕ್ಷೆ ನಡೆಸಲಾಗುತ್ತದೆ. ಶಾಲಾ ದಿನಗಳು ವರ್ಷಕ್ಕೆ 190 ಮಾತ್ರ. ಇಲ್ಲಿ ವಿದ್ಯಾರ್ಥಿ- ಶಿಕ್ಷಕ ಅನುಪಾತ ತುಂಬಾ ಕಡಿಮೆಯಿದೆ. ಅಂದರೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರತ್ಯೇಕ ಗಮನ ನೀಡಲಾಗುತ್ತದೆ. ವಿದ್ಯಾರ್ಥಿಯ ಮಾನಸಿಕ ಬೆಳವಣಿಗೆಯನ್ನು ಗಮನಿಸಿಕೊಂಡು ಪಠ್ಯವನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನು ಶಿಕ್ಷಕನಿಗೇ ನೀಡಲಾಗಿದೆ. ಪ್ರೌಢಶಾಲೆಯಿಂದ ವೃತ್ತಿಪರ ಹಾಗೂ ಜನರಲ್‌ ಶಿಕ್ಷಣ ಎಂಬ ಭೇದವಿದ್ದು, ಯಾವುದನ್ನಾದರೂ ಮಗು ಆಯ್ಕೆ ಮಾಡಿಕೊಳ್ಳಬಹುದು. ವಿಶ್ವವಿದ್ಯಾಲಯ ವ್ಯವಸ್ಥೆಯಲ್ಲಿ ಆನ್ವಯಿಕ ವಿಜ್ಞಾನ ಪ್ರಮುಖವಾಗಿದ್ದು, ಅದಕ್ಕೆ ಒತ್ತು ನೀಡಲಾಗುತ್ತದೆ.

ಜಪಾನ್‌ನ ತಾಂತ್ರಿಕ ಬೆಳವಣಿಗೆ
ಜಪಾನ್‌ನ ಶಿಕ್ಷಣ ಕ್ಷೇತ್ರ ಹೆಚ್ಚಿನ ಮಟ್ಟಿಗೆ ನಮ್ಮಂತೆಯೇ ಇದೆ. ಮಗುವಿನ ಮೇಲೆ ಹೇರುವ ಒತ್ತಡಕ್ಕೂ ಹೆಸರಾಗಿದೆ. ಜಪಾನ್‌ನಲ್ಲಿ ಆರು ವರ್ಷದಿಂದ ಶಿಕ್ಷಣ ನೀಡಲಾಗುತ್ತದೆ. ಅಕ್ಷರ ಕಲಿಕೆ, ವಿಜ್ಞಾನ ಮತ್ತು ಗಣಿತಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಆರು ವರ್ಷಗಳ ಪ್ರಾಥಮಿಕ ಶಿಕ್ಷಣ, ಮೂರು ವರ್ಷಗಳ ಜೂನಿಯರ್‌ ಹೈಸ್ಕೂಲ್‌, ಮೂರು ವರ್ಷ ಹೈಸ್ಕೂಲ್‌. ಆಡಂಬರದ ಒಂಬತ್ತು ವರ್ಷಗಳ ಕಡ್ಡಾಯ ಶಿಕ್ಷಣ. ಹೈಸ್ಕೂಲು ಕಡ್ಡಾಯವಲ್ಲವಾದರೂ ನೋಂದಣಿ ಪ್ರಮಾಣ 98% ಇದೆ. ಇಲ್ಲಿ ಅಂತಿಮ ಪರೀಕ್ಷೆ ನಡೆದು ವಿಶ್ವವಿದ್ಯಾಲಯಗಳಿಗೆ ನಾಲ್ಕು ವರ್ಷದ ಪದವಿಗೆ ಪ್ರವೇಶ ನೀಡಲಾಗುತ್ತದೆ. ಪ್ರಾಥಮಿಕ ಶಿಕ್ಷಣ ಸಂಪೂರ್ಣ ಗಣಿತ, ವಿಜ್ಞಾನ ಹಾಗೂ ಭಾಷೆಗೆ ಮೀಸಲು. ಬಣ್ಣಗಳು, ರೇಖೆಗಳು ಹಾಗೂ ಮುಕ್ತ ಮಾತುಕತೆಗಳ ಮೂಲಕ ಕಲಿಕೆ. ಕರಿಹಲಗೆಯ ಮೇಲೆ ಬರೆಯುವುದಕ್ಕಿಂತಲೂ, ಮಗುವಿನ ಹತ್ತಿರ ಹೋಗಿ ಕಲಿಸುವುದು ರೂಢಿ. ಎರಡನೇ ಮಹಾಯುದ್ಧದ ಬಳಿಕ ದೇಶದ ಮರುನಿರ್ಮಾಣದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ಪ್ರತಿಭೆಗಳ ಕೊಡುಗೆ ಮಹತ್ತರವಾಗಿದ್ದು, ಈಗಲೂ ಈ ಎರಡು ಕ್ಷೇತ್ರಗಳೇ ಇಲ್ಲಿನ ಉನ್ನತ ಶಿಕ್ಷಣದಲ್ಲಿ ಪ್ರಧಾನ. ದೇಶದ ಜಿಡಿಪಿಯ ಶೇ.4.1ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡುತ್ತದೆ.

ನೀತಿ ಜಾರಿ ಹೇಗೆ?
ಭಾರತದ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲು ರಾಜ್ಯ ಸರಕಾರಗಳಿಗೆ ಕೇಂದ್ರ 2040ರ ಗಡುವು ನೀಡಿದೆ. ಶಿಕ್ಷಣ ನೀತಿಯು ವಿಶಾಲವಾದ ಒಂದು ಚೌಕಟ್ಟನ್ನು ಹಾಕಿಕೊಡುತ್ತದೆ ಅಷ್ಟೇ. ಆದರೆ ಇದು ಕಡ್ಡಾಯವಲ್ಲ. ಯಾಕೆಂದರೆ ಶಿಕ್ಷಣವು ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡಕ್ಕೂ ಸೇರಿದ ಸಮವರ್ತಿ ಪಟ್ಟಿಯಲ್ಲಿರುವುದರಿಂದ, ಇಬ್ಬರೂ ಅದರ ಬಗ್ಗೆ ಕಾಯಿದೆಗಳನ್ನು ಮಾಡಬಹುದು. ಆದರೆ ಜಾರಿಯ ಹೊಣೆ ರಾಜ್ಯ ಸರಕಾರದ್ದು.

ಎಂ-ಫಿಲ್‌ಗಳ ಅವಸಾನ
ಜಗತ್ತಿನಾದ್ಯಂತ ಎಂ-ಫಿಲ್‌ ಕೋರ್ಸ್‌ಗಳು ಅವಸಾನದ ಹಾದಿಯಲ್ಲಿವೆ. ಇದು ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌.ಡಿಗಳ ನಡುವಿನ ಒಂದು ಅಧ್ಯಯನ ಶಿಸ್ತಾಗಿ ಜಾರಿಯಲ್ಲಿತ್ತು. ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌, ಕೇಂಬ್ರಿಡ್ಜ್‌ನಂಥ ಸಂಸ್ಥೆಗಳೂ ಈಗ ಅದನ್ನು ಕೈಬಿಟ್ಟಿವೆ.

ಬಹು ಎಕ್ಸಿಟ್‌ನ ಉಪಯೋಗ
ನಾಲ್ಕು ವರ್ಷಗಳ ಪದವಿ ಕಲಿಕೆಯಲ್ಲಿ ಯಾವ ವರ್ಷ ಬೇಕಿದ್ದರೂ ಕಲಿಕೆಯನ್ನು ಮುಗಿಸಿ ಪ್ರಮಾಣಪತ್ರ ಪಡೆಯುವ ಪದ್ಧತಿ ಕ್ರಾಂತಿಕಾರಿ. ಜರ್ಮನಿ, ಫ್ರಾನ್ಸ್‌, ಇಂಗ್ಲೆಂಡ್‌ ಮುಂತಾದ ದೇಶಗಳಲ್ಲಿ ಒಂದು ಹಾಗೂ ಎರಡು ವರ್ಷದ ಪದವಿ, ಮ್ಯಾನೇಜ್‌ಮೆಂಟ್‌ ಹಾಗೂ ಇಂಜಿನಿಯರಿಂಗ್‌ ಕಲಿಕೆಗಳಿವೆ. ಭಾರತದಲ್ಲಿ ಇದನ್ನು ಸರಿಗಟ್ಟಬೇಕಿದ್ದರೆ ನಾಲ್ಕು ವರ್ಷದ ಕಡ್ಡಾಯ ಕಲಿಕೆ ಬೇಕಿತ್ತು. ಇನ್ನು ಮುಂದೆ ಯಾವುದೇ ವರ್ಷದಲ್ಲಿ ಪ್ರಮಾಣಪತ್ರ ಪಡೆಯಬಹುದು. ಅಂದರೆ ಇದು ಯುರೋಪ್‌ನ ಮಾರುಕಟ್ಟೆಯಲ್ಲಿ ಭಾರತೀಯ ಪದವಿಧರರ ಅವಕಾಶ ಹೆಚ್ಚಿಸಲಿದೆ.

ಬೆಲ್ಜಿಯಂನ ಹೈಸ್ಕೂಲ್‌ ವಿಂಗಡಣೆ
ಬೆಲ್ಜಿಯಂನಲ್ಲಿ 4ರಿಂದ 18ನೇ ವರ್ಷದವರೆಗೂ ಶಿಕ್ಷಣ ಉಚಿತ ಹಾಗೂ ಕಡ್ಡಾಯ. ಇಲ್ಲಿ ಪ್ರೌಢಶಾಲೆಗಳನ್ನು ನಾಲ್ಕು ವಿಭಾಗಗಳಾಗಿ ಮಾಡಲಾಗಿದೆ- ಜನರಲ್‌ ಹೈಸ್ಕೂಲ್‌, ತಾಂತ್ರಿಕ ಹೈಸ್ಕೂಲು, ವೃತ್ತಿಪರ ಹೈಸ್ಕೂಲು ಹಾಗೂ ಕಲಾ ಹೈಸ್ಕೂಲುಗಳು. ಅಂದರೆ ಹನ್ನೆರಡನೇ ವಯಸ್ಸಿನಲ್ಲೇ ವಿದ್ಯಾರ್ಥಿ ತನ್ನ ಕೆರಿಯರ್‌ ಜೀವನದ ಚಿತ್ರಣವನ್ನು ಸ್ಪಷ್ಟಪಡಿಸಿಕೊಳ್ಳಬಹುದಾಗಿದೆ. ಮಧ್ಯದಲ್ಲೇ ತನ್ನ ಆಯ್ಕೆಯನ್ನು ಬದಲಾಯಿಸಿಕೊಳ್ಳಲೂ ಅವಕಾಶವಿದೆ.

ನೆದರ್‌ಲ್ಯಾಂಡ್ಸ್‌ನ ಸಂತಸ
ಇಲ್ಲಿನ ಮಕ್ಕಳು ‘ಅತ್ಯಂತ ಸಂತೋಷದ ಮಕ್ಕಳು’ ಎಂದು ಯುನಿಸೆಫ್‌ ಅಧ್ಯಯನ ಹೇಳುತ್ತದೆ. ಹೈಸ್ಕೂಲಿನವರೆಗೂ ಈ ಮಕ್ಕಳಿಗೆ ಹೋಮ್‌ವರ್ಕ್‌ ಇರುವುದಿಲ್ಲ. ಮಕ್ಕಳಿಗೆ ಕಲಿಕೆಯ ಒತ್ತಡವೇ ಇಲ್ಲ. ಇಲ್ಲಿ ಖಾಸಗಿ ಶಾಲೆಗಳು ಅತ್ಯಂತ ಕಡಿಮೆ. ಸರಕಾರದಿಂದ ನಡೆಸಲ್ಪಡುವ ಶಾಲೆಗಳಲ್ಲಿ ಎರಡು ವರ್ಗ- ಧಾರ್ಮಿಕ ಕಲಿಕೆಯ ಶಾಲೆಗಳು ಹಾಗೂ ನ್ಯೂಟ್ರಲ್‌ ಶಾಲೆಗಳು. ವಿಜ್ಞಾನ, ಗಣಿತ ಹಾಗೂ ಓದುವಿಕೆಗಳಲ್ಲಿ ಒಟ್ಟಾರೆ ದೇಶದ ಶಿಕ್ಷಣ ವ್ಯವಸ್ಥೆಯ ಸ್ಥಿತಿಗತಿ ಹಿಂದುಳಿದಿದೆ.

ಚೀನಾದ ಬಿಗಿ ವ್ಯವಸ್ಥೆ
ಚೀನಾದಲ್ಲೂ ಶಿಕ್ಷಣ ಕಡ್ಡಾಯ. ಮೂರು ವರ್ಷಗಳ ಪ್ರಿಸ್ಕೂಲ್‌ ಶಿಕ್ಷಣ, ಆರು ವರ್ಷಗಳ ಪ್ರಾಥಮಿಕ ಶಾಲಾ ವ್ಯವಸ್ಥೆ ಹಾಗೂ ನಂತರ ಆರು ವರ್ಷದ ಸೆಕೆಂಡರಿ ಶಿಕ್ಷಣ. ಸೆಕೆಂಡರಿ ಶಿಕ್ಷಣದಲ್ಲಿ ಎರಡು ಬಗೆ- ಒಂದು ಅಕಾಡೆಮಿಕ್‌ ಕಲಿಕೆ; ಇನ್ನೊಂದು ವೃತ್ತಿಪರ, ತಾಂತ್ರಿಕ ಅಥವಾ ವಿಶೇಷ ಸೆಕೆಂಡರಿ ಸ್ಕೂಲು. ಪ್ರಾಥಮಿಕ ಶಾಲೆಗಳು ಎಂಟು ಗಂಟೆ ಹಾಗೂ ಸೆಕೆಂಡರಿ ಸ್ಕೂಲುಗಳು ಹನ್ನೆರಡು ಗಂಟೆ ಕಲಿಕೆ ನಡೆಸುತ್ತವೆ. ವಿಶ್ವವಿದ್ಯಾಲಯಗಳಿಗೆ ಸೇರಲು ಅತ್ಯಂತ ಸ್ಪರ್ಧೆ ಇರುವುದರಿಂದ ಕಲಿಕೆಯ ಒತ್ತಡವೂ ಹೆಚ್ಚೇ ಇರುತ್ತದೆ. ಪ್ರಾಥಮಿಕ ಶಿಕ್ಷಣದಲ್ಲಿ ಗಣಿತ ಮತ್ತು ಭಾಷೆಗೆ ಮಾತ್ರ ಪರೀಕ್ಷೆಗಳಿರುತ್ತವೆ. ಯೂನಿವರ್ಸಿಟಿಗಳಿಗೆ ಸೇರಲು ಒತ್ತಡಯುಕ್ತ ಕಲಿಕೆ, ಪರೀಕ್ಷಾ ವ್ಯವಸ್ಥೆಯಿದ್ದು, ಚೈನೀಸ್‌, ಗಣಿತ ಮತ್ತು ಇಂಗ್ಲಿಷ್‌ ಪರೀಕ್ಷೆ ಕಡ್ಡಾಯ. ಮತ್ತೊಂದು ಐಚ್ಛಿಕ ವಿಷಯ ಇರುತ್ತದೆ. ಇಲ್ಲಿನ ಶಿಕ್ಷಕ- ವಿದ್ಯಾರ್ಥಿ ಅನುಪಾತ ಸರಾಸರಿ 1:19ರಷ್ಟಿದೆ. ಶಿಕ್ಷಕರ ಗುಣಮಟ್ಟ, ಸಾಧನೆಯನ್ನು ಅನುಸರಿಸಿ ಅವರಿಗೆ ವೇತನ ನಿಗದಿಯಾಗುತ್ತದೆ. ಸೆಮಿಸ್ಟರ್‌ ಪದ್ಧತಿಯಿದೆ.

ಅಮೆರಿಕದ ಅತ್ಯಂತ ಹೆಚ್ಚಿನ ವೆಚ್ಚ
ಅಮೆರಿಕದ ಶಾಲೆಗಳು ಪ್ರತಿಯೊಬ್ಬ ಮಗುವಿನ ಕಲಿಕೆಗೆ ಇತರ ಯಾವುದೇ ದೇಶಕ್ಕಿಂತ ಹೆಚ್ಚಿನ ವೆಚ್ಚ ಮಾಡುತ್ತವೆ. ಪ್ರತಿವರ್ಷ ತನ್ನ ಜಿಡಿಪಿಯ ಸರಾಸರಿ ಶೇ.6.2ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡುತ್ತದೆ. ಇಲ್ಲಿಯ ಶಿಕ್ಷಣ ವ್ಯವಸ್ಥೆ ನಮ್ಮಂತೆಯೇ ವೈವಿಧ್ಯಮಯವಾಗಿದ್ದು, ಸರಕಾರಿ, ಅರೆಸರಕಾರಿ, ಖಾಸಗಿ, ದತ್ತಿ, ಹೋಂಸ್ಕೂಲಿಂಗ್‌ ಎಂದೆಲ್ಲ ಹಂಚಿಹೋಗಿದೆ. ಉನ್ನತ ಶಿಕ್ಷಣ ಇಲ್ಲಿ ಅತ್ಯಂತ ವೆಚ್ಚದಾಯಕ. ಕಳೆದ ವರ್ಷ ಇಲ್ಲಿನ ವಿದ್ಯಾರ್ಥಿಗಳ ಶಿಕ್ಷಣ ಸಾಲದ ಮೊತ್ತ 1.5 ಲಕ್ಷ ಕೋಟಿ ಡಾಲರ್‌ಗಳಷ್ಟಿತ್ತು.

ಮುಂದುವರಿದ ದೇಶಗಳ ಮಾದರಿ
– ಇಂಗ್ಲೆಂಡ್‌, ಅಮೆರಿಕ, ಜಪಾನ್‌ಗಳಂಥ ದೇಶಗಳಲ್ಲಿ ಕಳೆದ ಹದಿನೈದು ವರ್ಷಗಳಿಂದ ತಾಂತ್ರಿಕ, ವೃತ್ತಿಪರ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
– ಎಲ್ಲ ದೇಶಗಳಲ್ಲೂ ಅಕಾಡೆಮಿಕ್‌ ಹಾಗೂ ವೃತ್ತಿಪರ ಎಂಬ ಎರಡು ಭೇದವಿದೆ. ಚೀನಾದಲ್ಲಿ ಈ ಭೇದ ಅಳಿಸಿಹೋಗಿದೆ.
– ಬಾಂಗ್ಲಾ, ಮ್ಯಾನ್ಮಾರ್‌, ಪಾಕಿಸ್ತಾನದಂಥ ದೇಶಗಳಲ್ಲಿ ಕಲಿಕೆ ಹಿಂದುಳಿದಿದೆ. ಅಲ್ಲಿ ಪ್ರಾಥಮಿಕ ಶಿಕ್ಷಣದ ಮೇಲೆ ಸರಕಾರದ ವೆಚ್ಚ ಅತಿ ಕಡಿಮೆ ಹಾಗೂ ಖಾಸಗಿ ವ್ಯವಸ್ಥೆ ಆರ್ಭಟ ಹೆಚ್ಚು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top