ಆರ್ಥಿಕತೆಯಲ್ಲಿ ಚೇತರಿಕೆ ಲಕ್ಷಣ – ಸಹಜ ಬದುಕಿನತ್ತ ಹೆಜ್ಜೆಯಿಡುತ್ತಿದೆ ಜನಜೀವನ

ಕೊರೊನಾ ಕಾರಣದಿಂದ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಮಂಕಾಗಿದ್ದ ದೇಶದ ಆರ್ಥಿಕತೆ, ಚೇತರಿಕೆ ಹಾಗೂ ಉತ್ಸಾಹದ ಎಲ್ಲ ಸುಳಿವುಗಳನ್ನೂ ತೋರಿಸುತ್ತಿದೆ. ಉದಾಹರಣೆಗೆ, ಕಳೆದ ಒಂದು ವಾರದಿಂದ ಷೇರು ಮಾರುಕಟ್ಟೆಯಲ್ಲಿ ತುಂಬು ಉತ್ಸಾಹ ಕಾಣಿಸುತ್ತಿದ್ದು, ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕಗಳು ಸತತ ಏರಿಕೆ ತೋರಿಸುತ್ತಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ದೇಶದಲ್ಲಿ ಜೂನ್ ಮೊದಲ ವಾರದಲ್ಲಿ 22,000 ಕೋಟಿ ರೂ.ಗಳಷ್ಟು ಹೂಡಿಕೆ ಮಾಡಿದ್ದಾರೆ. ಏಪ್ರಿಲ್‌ನಲ್ಲಿ ಸಂಪೂರ್ಣ ಕುಸಿದಿದ್ದ ಉದ್ಯೋಗ ಮಾರುಕಟ್ಟೆಯಲ್ಲಿ, ಮೇ ತಿಂಗಳ ಮೊದಲ ವಾರದಲ್ಲಿ 21 ದಶಲಕ್ಷ ಉದ್ಯೋಗಗಳು ಕಾಣಿಸಿಕೊಂಡಿವೆ. ಲಾಕ್‌ಡೌನ್‌ ಸಡಿಲಿಕೆ ಬಳಿಕ ಚಿನ್ನಾಭರಣಗಳ ಉದ್ಯಮ ನಿರೀಕ್ಷೆಗೂ ಮೀರಿದ ಚೇತರಿಕೆ ಕಂಡಿದ್ದು, ಹಿಂದಿಗಿಂತ ಶೇ.45ರಷ್ಟು ಏರುವಿಕೆ ದಾಖಲಿಸಿದೆ. ಲಾಕ್‌ಡೌನ್‌ ಬಳಿಕ ಚಿನ್ನದ ದರ ಹೆಚ್ಚಾಗಿದ್ದರೂ ಜನ ಇದರಿಂದ ವಿಚಲಿತರಾಗಿಲ್ಲದಿರುವುದು, ಚಿನ್ನದಲ್ಲಿ ಹೂಡಿಕೆ ಮಾಡಲು ಮುಂದಾಗಿರುವುದು ಗಮನಾರ್ಹ.
ಲಾಕ್‌ಡೌನ್‌ ಸಂದರ್ಭದಲ್ಲಿ ಜೀರೋ ಆಗಿದ್ದ ರಾಜ್ಯದ ವಾಹನ ನೋಂದಣಿ ಪ್ರಮಾಣ, ತೆರವು ಮಾಡಿದ ಬಳಿಕ ಪ್ರತಿದಿನ ಸುಮಾರು ಒಂದೂವರೆ ಸಾವಿರ ವಾಹನಗಳಿಗೆ ಏರಿದೆ. ಏಪ್ರಿಲ್‌ನಲ್ಲಿ 2700 ದಶಲಕ್ಷ ಯುನಿಟ್‌ಗೆ ಇಳಿದಿದ್ದ ವಿದ್ಯುತ್ ಬಳಕೆಯ ಪ್ರಮಾಣ, ಮೇ 26ರ ನಂತರ 3700 ದಶಲಕ್ಷ ಯುನಿಟ್‌ಗೆ ಏರಿದೆ. ಏಪ್ರಿಲ್‌ಗೆ ಹೋಲಿಸಿದರೆ ಮೇಯಲ್ಲಿ ಪೆಟ್ರೋಲ್ ಬಳಕೆ 83%ದಷ್ಟು ಹಾಗೂ ರೇಲ್ವೆ ಸಾಗಣೆ ಪ್ರಮಾಣ 25%ದಷ್ಟು ಹೆಚ್ಚಿದೆ. ಧಾರ್ಮಿಕ ಕೇಂದ್ರಗಳು, ಮಾಲ್‌ಗಳು, ಹೋಟೆಲ್‌ಗಳು ಸೇರಿದಂತೆ ಆತಿಥ್ಯ ಉದ್ಯಮ ಬಾಗಿಲು ತೆರೆದಿದ್ದು, ನಿಧಾನವಾಗಿ ಹಳಿಗೆ ಮರಳುತ್ತಿವೆ. ಸ್ತಬ್ದಗೊಂಡಿದ್ದ ಸಾರಿಗೆ ವಲಯ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು ಸೀಮಿತ ಸಂಖ್ಯೆಯಲ್ಲಿದ್ದರೂ ಸರಕಾರಿ ಹಾಗೂ ಖಾಸಗಿ ಬಸ್ ಸೇವೆಗಳು ಭರ್ತಿ ಪ್ರಯಾಣ ದಾಖಲಿಸುತ್ತಿವೆ. ವಾಣಿಜ್ಯ ಚಟುವಟಿಕೆಯ ಆಗರವಾದ ರಾಜಧಾನಿಗೆ ಜನರ ಪ್ರಯಾಣ ಹೆಚ್ಚಿದೆ.
ಚೇತರಿಕೆಯಲ್ಲಿ ಗ್ರಾಮಾಂತರ ಪ್ರದೇಶ ಹಿಂದೆ ಬಿದ್ದಿಲ್ಲ. ಕೇಂದ್ರ ಸರಕಾರ ಘೋಷಿಸಿರುವ ನೆರವಿನ ಪ್ಯಾಕೇಜ್, ವಾಡಿಕೆಯ ಮುಂಗಾರು, ವಲಸಿಗರ ಮಹಾ ವಲಸೆಯ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ಮಾರುಕಟ್ಟೆ ಚಟುವಟಿಕೆಗಳು ಗಣನೀಯ ಪ್ರಮಾಣದಲ್ಲಿ ಏರಲಿವೆ ಎಂದು ಬ್ರೋಕಿಂಗ್ ಕಂಪನಿಗಳು ತರ್ಕಿಸಿವೆ. ನರೇಗಾ ಅಡಿಯಲ್ಲಿ ಕಳೆದ ಮೇ ತಿಂಗಳಲ್ಲಿ ನಡೆದ ಮಾನವ ಕೆಲಸದ ದಿನಗಳ ಅವಧಿ ದಾಖಲೆಯ ಮಟ್ಟಕ್ಕೆ ಏರಿದ್ದು, ಶೇ.13ರಷ್ಟು ಹೆಚ್ಚಳವಾಗಿದೆ ಹಾಗೂ ಇದು ಯೋಜನೆ ಆರಂಭವಾದಂದಿನಿಂದ ಗರಿಷ್ಠ ಬೇಡಿಕೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಡಿಪಿ ಕುಸಿತಕ್ಕೀಡಾದರೂ 2021-22ರಲ್ಲಿ, ದೇಶದ ಆರ್ಥಿಕ ಆರೋಗ್ಯ ಶೇ.9.5ಕ್ಕೆ ಚೇತರಿಸಲಿದೆ ಎಂದು ಅಮೆರಿಕದ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಫಿಚ್‌ನ ವರದಿ ತಿಳಿಸಿದೆ.
ಕಳೆದ ಎರಡು ತಿಂಗಳಿಂದ ಋುಣಾತ್ಮಕವಾದ ಸುದ್ದಿಗಳನ್ನು ನೋಡಿ ಬೇಸತ್ತಿರುವ ಪ್ರಜೆಗಳಿಗೆ ಇದೆಲ್ಲ ಉತ್ಸಾಹ ತುಂಬಬಲ್ಲ ವರ್ತಮಾನಗಳಾಗಿವೆ. ಎರಡು ತಿಂಗಳು ಸ್ತಬ್ದವಾಗಿದ್ದ ಬದುಕು ಮತ್ತೆ ಹಳಿಗೆ ಮರಳುತ್ತಿದೆ. ನಿಜ, ಕೊರೊನಾ ಪೀಡಿತರ ಸಂಖ್ಯೆ ಏರುತ್ತಿದೆ. ಈ ಬಗ್ಗೆ ನಾವು ಖಂಡಿತವಾಗಿಯೂ ಮೈ ಮರೆಯಬಾರದು. ಆದರೆ ಅದರಿಂದ ಗುಣವಾಗುತ್ತಿರುವವರ ಪ್ರಮಾಣದಲ್ಲೂ ಏರಿಕೆಯಾಗಿದೆ. ಸೋಂಕನ್ನು ಎದುರಿಸಬಲ್ಲೆವು ಎಂಬ ಉತ್ಸಾಹ ಮೊದಲಿಗಿಂತಲೂ ಜನಜೀವನದಲ್ಲಿ ಹೆಚ್ಚಾಗಿರುವ ಲಕ್ಷಣಗಳು ಕಾಣಿಸುತ್ತಿವೆ. ಇದು ಜನತೆಯ ಮನೋಧರ್ಮದಲ್ಲೇ ಆಗಿರುವ ಧನಾತ್ಮಕ ಬದಲಾವಣೆ. ಎದುರಿಸಲೇಬೇಕಾದ, ಸೋಂಕಿನ ಜೊತೆಗೇ ಬಾಳಬೇಕಾದ ಅನಿವಾರ್ಯತೆಯೂ ಮುಂದಿದೆ. ಮಾರುಕಟ್ಟೆಯ ಧನಾತ್ಮಕ ಸೂಚನೆಗಳನ್ನು ಅರ್ಥ ಮಾಡಿಕೊಂಡು, ಸಹಜ ಬದುಕಿನತ್ತ ನಡೆಯಬೇಕಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top