ಆರ್ಥಿಕ ಪುನಶ್ಚೇತನಕ್ಕೆ ಇದು ಸರಿಯಾದ ಕಾಲ

– ಕಿರಣ್‌ಕುಮಾರ್ ಡಿ.ಕೆ.
ಹದಗೆಟ್ಟ ಅರ್ಥವ್ಯವಸ್ಥೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಹರಸಾಹಸಪಡುತ್ತಿದ್ದ ಕೇಂದ್ರ ಸರಕಾರಕ್ಕೆ ಮತ್ತೆ ಪುಟಿದೇಳಲು ಕೊರೊನಾ ಲಾಕ್‌ಡೌನ್ ಅವಕಾಶ ನೀಡಿದೆ! ಕೊರೊನಾ ವೈರಸ್ ನಿಯಂತ್ರಣ ಹಾಗೂ ಆರ್ಥಿಕ ಪುನಶ್ಚೇತನ ಈ ಎರಡೂ ಸವಾಲುಗಳನ್ನು ಮೆಟ್ಟಿನಿಲ್ಲುವುದು ಸುಲಭವಲ್ಲವಾದರೂ ದೇಶಾದ್ಯಂತ ಸೋಂಕಿನ ಪ್ರಮಾಣ ಸಂಪೂರ್ಣ ನಿಯಂತ್ರಣಕ್ಕೆ ಬರುವ ಮೊದಲೇ ಆರ್ಥಿಕತೆಗೆ ಚೇತರಿಕೆ ನೀಡುವತ್ತ ಗಂಭೀರವಾಗಿ ಹೆಜ್ಜೆ ಇರಿಸಲು ಕೇಂದ್ರ ಸರಕಾರ ಮುಂದಡಿ ಇಡಲಾರಂಭಿಸಿದೆ.
ದೇಶಾದ್ಯಂತ ಉತ್ಪಾದಕತೆಗೇ ಬ್ರೇಕ್ ಬಿದ್ದಿದೆ. ಹಣಕಾಸಿನ ಹರಿವು ಸಂಪೂರ್ಣ ಸ್ತಬ್ಧ ಎನ್ನುವಂತಾಗಿದೆ. ಹೀಗಿರುವಾಗ ಕೊರೊನಾ ಬಾಧಿಸುವಿಕೆಯನ್ನು 3 ವಲಯಗಳಾಗಿ ವಿಂಗಡಿಸಿ, ಕಡಿಮೆ ಬಾಧಿತ ಪ್ರದೇಶಗಳಲ್ಲಿ ಏ.20ರಿಂದ ಲಾಕ್‌ಡೌನ್ ನಿಯಮಗಳನ್ನು ಅಲ್ಪಪ್ರಮಾಣದಲ್ಲಿ ಸಡಿಲಿಸಲು ಮಾರ್ಗಸೂಚಿ ನಿಯಮಗಳನ್ನು ಈಗಾಗಲೇ ಪ್ರಕಟಿಸಿದೆ. ಬಳಿಕ ಆರ್‌ಬಿಐ ಮುಖಾಂತರ 2ನೇ ಕೊರೊನಾ ಪ್ಯಾಕೇಜ್ ಪ್ರಕಟಿಸಿದ್ದ ಸರಕಾರ, ಇದರ ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣ ಕಾಮಗಾರಿಗಳು, ಗಣಿಗಾರಿಕೆ ಹಾಗೂ ವಾಣಿಜ್ಯ ವಹಿವಾಟುಗಳಿಗೆ ಉತ್ತೇಜನ ನೀಡುವುದು ಹಾಗೂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ರೂಪುರೇಷೆ ಸಿದ್ಧಪಡಿಸಿದೆ. ಲಾಕ್‌ಡೌನ್ ಸಡಿಲಿಕೆ ರಾಜ್ಯ ಸರಕಾರಗಳ ನಿರ್ಧಾರದ ಮೇಲೆ ಅವಲಂಬಿತವಾಗಿದ್ದರೂ ಕೊರೊನಾ ಪ್ರಕರಣಗಳು ಇಲ್ಲದಿರುವ ಜಿಲ್ಲೆಗಳಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸಿಕೊಂಡೇ ನಿಧಾನವಾಗಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಿ ಜನ ಜೀವನವನ್ನು ಸರಿದಾರಿಗೆ ತರುವುದು ಕೇಂದ್ರ ಸರಕಾರದ ಗುರಿ.
ಪ್ರಮುಖ ಇಲಾಖೆಗಳನ್ನು ನಿಭಾಯಿಸುವ ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ, ಪಿಯೂಷ್ ಗೋಯಲ್ ಮತ್ತಿತರ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಉದ್ಯಮಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಈಗಾಗಲೇ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಹಂತ ಹಂತವಾಗಿ ದೇಶದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಬಿರುಸು ನೀಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚಿಸಿದ್ದಾರೆ. ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ವಾಣಿಜ್ಯೋದ್ಯಮ ಹಾಗೂ ಕೈಗಾರಿಕೆಗಳು ಬಹುತೇಕ ಬಂದ್ ಆಗಿವೆ. ಹಾಗಾಗಿ ನಿರುದ್ಯೋಗ ಪ್ರಮಾಣ ಕಡಿಮೆ ಮಾಡುವುದು ಹಾಗೂ ಉತ್ಪಾದಕತೆ ಹೆಚ್ಚಿಸುವುದು ಅನಿವಾರ್ಯವಾಗಿದೆ.

ಅಪಾಯದಲ್ಲಿ ಎಂಎಸ್‌ಎಂಇ
ದೇಶದ ಜಿಡಿಪಿಯ 3ನೇ 1 ಭಾಗ ಅಥವಾ 200 ಲಕ್ಷ ಕೋಟಿ ರೂ. ಆರ್ಥಿಕತೆಯ ಕಾಲು ಭಾಗವನ್ನು ಸಣ್ಣ, ಮಧ್ಯಮ ಹಾಗೂ ಅತಿಸಣ್ಣ ಉದ್ದಿಮೆ(ಎಂಎಸ್‌ಎಂಇ) ಕ್ಷೇತ್ರ ಒಳಗೊಂಡಿದೆ. ದೇಶಾದ್ಯಂತ 7 ಕೋಟಿಗೂ ಹೆಚ್ಚು ಎಂಎಸ್‌ಎಂಇ ಘಟಕಗಳಿದ್ದು, 8000 ಮಾದರಿಯ ಉತ್ಪನ್ನಗಳ ಮೂಲಕ 40 ಕೋಟಿಗೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಿವೆ. ಆದರೆ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಣಕಾಸಿನ ಹರಿವು ಬಹುತೇಕ ಸ್ಥಗಿತಗೊಂಡಿದ್ದು, ಕೆಲಸಗಾರರಿಗೆ ವೇತನ ನೀಡಲು ಮತ್ತು ಕಚ್ಚಾವಸ್ತು ಪೂರೈಕೆದಾರರಿಗೆ ಮೊತ್ತ ಪಾವತಿಸಲು ಉದ್ದಿಮೆದಾರರಿಗೆ ಸಾಧ್ಯವಾಗುತ್ತಿಲ್ಲ. ಸಾರಿಗೆ ಮತ್ತು ಪ್ರವಾಸೋದ್ಯಮ, ಆತಿಥ್ಯ ಕ್ಷೇತ್ರ, ಜವಳಿ, ವಿಮಾನಯಾನ ಕ್ಷೇತ್ರಗಳಂಥ ನೂರಾರು ಕ್ಷೇತ್ರಗಳು ಸಂಪೂರ್ಣ ನೆಲಕಚ್ಚಿವೆ. ಇವುಗಳ ಜತೆಗೆ ಕಟ್ಟಡ ಬಾಡಿಗೆ, ವಿದ್ಯುತ್ ಶುಲ್ಕಗಳಂಥ ಇತರ ವೆಚ್ಚಗಳನ್ನೂ ನಿಭಾಯಿಸಬೇಕಾಗಿದೆ. ಈಗಾಗಲೇ ವೆಚ್ಚ ನಿರ್ವಹಣೆ ಮಾಡಲಾಗಿದೆ ಬಹಳಷ್ಟು ಉದ್ದಿಮೆದಾರರು ಲಾಕ್‌ಡೌನ್ ಬಳಿಕ ಉತ್ಪಾದನೆ ಆರಂಭಿಸದೆ, ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಇದರಿಂದ ದೇಶಾದ್ಯಂತ ಕೋಟ್ಯಂತರ ಜನ ಕೆಲಸ ಕಳೆದುಕೊಳ್ಳುವ ಜತೆಗೆ ಉತ್ಪಾದನಾ ಕ್ಷೇತ್ರದಲ್ಲಿನ ಅಲ್ಲೋಲಕಲ್ಲೋಲವಾಗಲಿದ್ದು, ಇತರ ಕೈಗಾರಿಕೆಗಳ ಮೇಲೂ ನಕಾರಾತ್ಮಕ ಪರಿಣಾಮ ಉಂಟುಮಾಡಲಿದೆ.

ವಾಸ್ತವವೇನು?
ಏ.20ಕ್ಕೆ ಕೇಸರಿ ಹಾಗೂ ಹಸಿರು ವಲಯಕ್ಕೆ ಸೇರಿದ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಉತ್ಪಾದನೆ, ವ್ಯಾಪಾರ ವಹಿವಾಟು ಅಲ್ಪಮಟ್ಟದಲ್ಲಿ ಸಹಜ ಸ್ಥಿತಿಗೆ ಬರುವ ನಿರೀಕ್ಷೆಯಿದೆ. ಆದರೆ, ಲಾಕ್‌ಡೌನ್ ಪರಿಣಾಮವಾಗಿ ನಗರ ಪ್ರದೇಶಗಳಿಂದ ಹಳ್ಳಿಯನ್ನು ಸೇರಿರುವ ಲಕ್ಷಾಂತರ ಜನರಿಗೆ ಯಾವಾಗ ಕೊರೊನಾ ಕೊನೆಯಾಗುತ್ತದೆ ಎಂಬ ಅರಿವಿಲ್ಲ. ಆದ್ದರಿಂದ ಹಳ್ಳಿಗಳನ್ನು ಸೇರಿಕೊಂಡಿರುವ ಬಹಳಷ್ಟು ಜನ ನಗರ ಪ್ರದೇಶಗಳಲ್ಲಿರುವ ಕೈಗಾರಿಕಾ ಘಟಕಗಳತ್ತ ಮುಖಮಾಡುವ ಬದಲಿಗೆ ಊರುಗಳಲ್ಲಿಯೇ ಕೃಷಿ ಅಥವಾ ಸಣ್ಣಪುಟ್ಟ ಕೆಲಸಗಳ ಮೂಲಕ ಜೀವನಕ್ಕಿರುವ ಆದಾಯ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಈಗಾಗಲೇ ಮತ್ತೆ ಉತ್ಪಾದನೆ ಹಾಗೂ ವಹಿವಾಟು ಆರಂಭಿಸಲು ಉದ್ದೇಶಿಸಿರುವ ಹಲವು ಎಂಎಸ್‌ಎಂಇ ಘಕಟಗಳಿಗೆ ಕಾರ್ಮಿಕರ ಕೊರತೆ ಉಂಟಾಗುವುದು ಖಚಿತ. ಇನ್ನೊಂದೆಡೆ, ಬೆಂಗಳೂರು ಸೇರಿ ಮಹಾನಗರ ಹಾಗೂ ನಗರ ಪ್ರದೇಶಗಳಲ್ಲಿ ಎಂಎಸ್‌ಎಂಇ ಘಟಕಗಳು ಹೆಚ್ಚಾಗಿದ್ದು, ಇವುಗಳು ಕಾರ್ಯಾರಂಭ ಮಾಡುವುದು ವಿಳಂಬವಾಗಲಿದೆ. ಹಾಗಾಗಿ ತಮ್ಮಲ್ಲಿನ ಕಾರ್ಮಿಕರಿಗೆ ವೇತನ ಪಾವತಿ ಕಷ್ಟಸಾಧ್ಯವಾಗುವುದರಿಂದ ಕೆಲಸದಿಂದಲೇ ತೆಗೆದುಹಾಕುವ ಸಾಧ್ಯತೆಯಿದೆ.

ರಾಜ್ಯದ 2 ಕೋಟಿ ಜನರ ಅವಲಂಬನೆ
ಕರ್ನಾಟಕದಲ್ಲಿ 6.5 ಲಕ್ಷ ಸಣ್ಣ, ಮಧ್ಯಮ ಹಾಗೂ ಅತಿಸಣ್ಣ ಕೈಗಾರಿಕಾ ಘಟಕಗಳಿವೆ. 65 ಲಕ್ಷಕ್ಕೂ ಹೆಚ್ಚು ಜನ ಕರ್ನಾಟಕದಲ್ಲಿ ನೇರವಾಗಿ ಎಂಎಸ್‌ಎಂಇ ಅಡಿಯಲ್ಲಿ ಉದ್ಯೋಗ ಹೊಂದಿದ್ದಾರೆ ಹಾಗೂ ಸುಮಾರು 2 ಕೋಟಿ ಜನರ ಜೀವನ ಎಂಎಸ್‌ಎಂಇ ಮೇಲೆ ಅವಲಂಬಿತವಾಗಿದೆ. ದೇಶಾದ್ಯಂತ ವ್ಯಾಪಿಸಿರುವ ಸುಮಾರು 7 ಕೋಟಿ ಎಂಎಸ್‌ಎಂಇಗಳಲ್ಲಿ ನಾಲ್ಕನೇ ಒಂದು ಭಾಗ ಅಥವಾ 1.75 ಕೋಟಿ ಘಟಕಗಳಿಗೆ ಬೀಗಮುದ್ರೆ ಬೀಳುವ ಅಪಾಯವಿದೆಯೆಂದು ಅಂದಾಜಿಸಲಾಗಿದ್ದು, ಇವುಗಳಲ್ಲಿ ರಾಜ್ಯದ ಘಟಕಗಳೂ ಸೇರಿವೆ. ಅಲ್ಲದೆ, ಲಾಕ್‌ಡೌನ್‌ಗೂ ಮೊದಲು ಮಾಡಲಾಗಿದ್ದ ಶೇ.50ರಷ್ಟು ತುರ್ತು ಆದೇಶಗಳು ರದ್ದಾಗುವ ಅಪಾಯವಿದ್ದು, ತುರ್ತು ಘಟಕಗಳ 1.5 ಕೋಟಿ ಜನ ಉದ್ಯೋಗ ಕಳೆದುಕೊಳ್ಳುವ ಆತಂಕವಿದೆ ಎಂದು ಫೆಡರೇಷನ್ ಆಫ್ ಇಂಡಿಯನ್ ಎಕ್ಸ್‌ಪೋರ್ಟ್ ಆರ್ಗನೈಜೇಷನ್ ಅಂದಾಜಿಸಿದೆ. ಈ ಮಧ್ಯೆ, ರಾಜ್ಯ ಸರಕಾರ ಎಂಎಸ್‌ಎಂಇ ಘಕಟಗಳು ವಿದ್ಯುತ್ ಬಿಲ್‌ಗಳನ್ನು 3 ತಿಂಗಳು ಪಾವತಿಸದಿದ್ದರೂ ಸಂಪರ್ಕ ಕಡಿತಗೊಳಿಸಬಾರದು. ಘಟಕಗಳ ಉತ್ಪಾದನೆ ಆರಂಭವಾದ ಬಳಿಕ ಬಾಕಿ ಬಿಲ್ ಪಾವತಿ ಮಾಡುತ್ತೇವೆ. 15 ಸಾವಿರ ರೂ.ವರೆಗೆ ವೇತನ ಪಡೆಯುವವರಿಗೆ ಪೂರ್ಣ ವೇತನವನ್ನು ಪಾವತಿ ಮಾಡುತ್ತೇವೆ. 15 ಸಾವಿರ ಮೇಲ್ಪಟ್ಟವರಿಗೆ ವೇತನದ ಅರ್ಧದಷ್ಟನ್ನು ಪಾವತಿಸುತ್ತೇವೆ. 50 ಸಾವಿರ ಮೇಲಿನ ವೇತನ ಮಾಡುವವರಿಗೆ ಸಂಬಳ ನೀಡಲು ಸಾಧ್ಯವಾಗುವುದಿಲ್ಲವಾದರೂ ಅವರು ತಡೆದುಕೊಳ್ಳುವ ಶಕ್ತಿ ಹೊಂದಿರುವುದರಿಂದ ಇದಕ್ಕೆ ಅವಕಾಶ ಮಾಡಿಕೊಡಬೇಕು ಎನ್ನುತ್ತಾರೆ ಎಫ್‌ಕೆಸಿಸಿಐ ಅಧ್ಯಕ್ಷ ಜನಾರ್ದನ್.

ಸಿಗಲಿದೆ ಹೆಚ್ಚಿನ ಸಾಲ
ಈಗಾಗಲೇ ಎಂಎಸ್‌ಎಂಇ ಕ್ಷೇತ್ರದ ಬಹುತೇಕ ಉದ್ದಿಮೆದಾರರು ಹೂಡಿಕೆ ಹಾಗೂ ದಾಸ್ತಾನಿಗೆ ಅನುಸಾರ ಸಾಲ ಪಡೆದುಕೊಂಡಿದ್ದಾರೆ. ಉತ್ಪಾದನೆ ಸ್ಥಗಿತಗೊಳ್ಳುವ ಜತೆಗೆ ಈಗಾಗಲೇ ಉತ್ಪಾದನೆಯಾಗಿರುವ ದಾಸ್ತಾನು ಮಾರಾಟವಾಗದೆ ಅಥವಾ ನಿಗದಿತ ಖರೀದಿದಾರರನ್ನು ತಲುಪದೆ ಗೋದಾಮುಗಳಲ್ಲಿ ಉಳಿದುಕೊಂಡಿರುತ್ತವೆ. ಹೀಗಾದಾಗ ನೌಕರರಿಗೆ ವೇತನ ನೀಡುವಿಕೆ, ಬಾಡಿಗೆ ಮತ್ತಿತರ ಖರ್ಚುಗಳನ್ನು ನಿಭಾಯಿಸಲು ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಹಾಗಾಗಿ ಬ್ಯಾಂಕುಗಳಿಗೆ ಸಾಲದ ಮೊತ್ತವನ್ನು ಹೆಚ್ಚಿಸಲು ಕೇಂದ್ರ ಸರಕಾರ ಅವಕಾಶ ಕಲ್ಪಿಸಬೇಕು ಎಂಬುದು ಉದ್ದಿಮೆದಾರರ ಒತ್ತಾಯ. ಆದರೆ, ಆರ್‌ಬಿಐ ದಾಖಲೆಗಳ ಪ್ರಕಾರ 4.78 ಲಕ್ಷ ಕೋಟಿ ರೂ. ಸಾಲವನ್ನು ಈಗಾಗಲೇ ಎಂಎಸ್‌ಎಂಇ ಕ್ಷೇತ್ರಕ್ಕೆ ವಿವಿಧ ಬ್ಯಾಂಕುಗಳ ಮೂಲಕ ನೀಡಲಾಗಿದ್ದರೂ ಇನ್ನೂ ಹೆಚ್ಚಿನ ಸಾಲ ನೀಡಲು ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಸಂಸ್ಥೆಗಳಿಗೆ ಆರ್ಥಿಕ ಪ್ಯಾಕೇಜ್ ನೀಡಲಾಗಿದೆ.

ಸರಕಾರದ ಮೇಲಿರುವ ನಿರೀಕ್ಷೆಗಳೇನು?
– ಸಾಮೂಹಿಕ ನಿರುದ್ಯೋಗ ತಡೆಯಲು ಕ್ರಮ
– ಹೂಡಿಕೆಗೆ ಉತ್ತೇಜನ
– ಅಗತ್ಯ ಸರಕುಗಳನ್ನು ಸಾಗಿಸುವವರನ್ನು ವಿಮೆ ವ್ಯಾಪ್ತಿಗೆ ತರುವುದು
– ಮುದ್ರಾ ಸಾಲದ ಮಿತಿಯನ್ನು 10 ಲಕ್ಷ ರೂ.ನಿಂದ 25ಲಕ್ಷ ರೂ.ಗೆ ಹೆಚ್ಚಳ ಮಾಡುವುದು
– ಒಡಿ ಖಾತೆಯ ಸಾಲದ ಮಿತಿಯನ್ನು ಹೆಚ್ಚಿಸುವುದು
– ಪಾವತಿ ಬಾಕಿಯನ್ನು ಲಾಕ್‌ಡೌನ್ ಮುಗಿದ ತಕ್ಷಣ ಪಾವತಿಸುವಂತೆ ಒತ್ತಡ ಹೇರದಂತೆ ಬ್ಯಾಂಕ್‌ಗಳಿಗೆ ಸೂಚನೆ
– ಆಯ್ದ ಉದ್ಯಮಗಳಿಗೆ ಬಡ್ಡಿ ರಹಿತ ಅಥವಾ ಅಲ್ಪ ಬಡ್ಡಿ ಸಾಲ
– ಉತ್ಪನ್ನಗಳ ಸಾಗಾಟ ಹಾಗೂ ಸಪೂರೈಕೆಗೆ ಯಾವುದೇ ಅಡ್ಡಿಯಾಗದಂತೆ ಕ್ರಮ

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ ಬೇಡಿಕೆಯೇನು?
– ಎಂಎಸ್‌ಎಂಇಗಳಿಗೆ 6 ತಿಂಗಳವರೆಗಿನ ಕಾರ್ಮಿಕರ ವೇತನಕ್ಕೆ ಶೇ.50 ಸಹಾಯಧನ
– 6 ತಿಂಗಳುಗಳವರೆಗೆ ಎಂಎಸ್‌ಎಂಇ ನೌಕರರ ಇಎಸ್‌ಐ, ಪಿಎಫ್‌ ಪಾವತಿಗಳನ್ನು ಸರಕಾರದಿಂದ ಭರಿಸವುದು
– ಗುಜರಾತ್ ಮತ್ತಿತರ ರಾಜ್ಯಗಳಲ್ಲಿ ಘೋಷಿಸಿರುವಂತೆ ಎಂಎಸ್‌ಎಂಇಗಳ ವಿದ್ಯುತ್ ಬಿಲ್ಲುಗಳ ಮೇಲಿನ ಮಾಸಿಕ ನಿಗದಿತ ಶುಲ್ಕದ ಬದಲಿಗೆ ವಿದ್ಯುತ್ ಬಳಸಿದ್ದಕ್ಕಷ್ಟೇ ಪಾವತಿ ಮಾಡಿಸಿಕೊಳ್ಳುವುದು.

ಬ್ಯಾಂಕಿಂಗ್ ತಜ್ಞರ ಸಲಹೆ

– ದಾಸ್ತಾನಿನ ಆಧಾರದಲ್ಲಿ ಸಾಲ ಕೊಡಬಹುದು
– ವರ್ಕಿಂಗ್ ಕ್ಯಾಪಿಟಲ್ ಹೆಚ್ಚಳ ಮಾಡಬೇಕು. ಉದಾಹರಣೆಗೆ 20 ಲಕ್ಷ ವಾರ್ಷಿಕ ವಹಿವಾಟು ಇದ್ದರೆ ಸದ್ಯ ಶೇ.20ರಷ್ಟು ಸಾಲ ನೀಡಬಹುದು, ಅಂದರೆ 4 ಲಕ್ಷ. ಅದು ಸಾಕಾಗುವುದಿಲ್ಲ, ಮಾರುಕಟ್ಟೆ ಯಥಾಸ್ಥಿತಿಗೆ ಬರುವವರೆಗೆ ವರ್ಕಿಂಗ್ ಕ್ಯಾಪಿಟಲ್ ಪ್ರಮಾಣವನ್ನು ಶೇ.80ರಷ್ಟಾದರೂ ಹೆಚ್ಚಿಸಬೇಕು. ಅಥವಾ ಈಗಾಗಲೇ ನೀಡಿರುವ ಸಾಲದ ಅರ್ಧದಷ್ಟು ಹೆಚ್ಚಳ ಮಾಡಿ. ಉದಾಹರಣೆಗೆ 5 ಲಕ್ಷ ರೂ. ಸಾಲ ತೆಗೆದುಕೊಳ್ಳಲಾಗಿದ್ದರೆ ಹೆಚ್ಚುವರಿಯಾಗಿ 2.5 ಲಕ್ಷ ಸಾಲ ನೀಡಿ.
– ಕೇಂದ್ರ ಸರಕಾರ ಈ ಬಗ್ಗೆ ನೀತಿ ರೂಪಿಸಿ ಅಧಿಕೃತ ಆದೇಶ ಹೊರಡಿಸಿದರಷ್ಟೇ ಬ್ಯಾಂಕುಗಳು ಈ ನಿಯಮಗಳನ್ನು ಪಾಲಿಸಲು ಹಾಗೂ ಯೋಜನೆಯನ್ನು ಎಂಎಸ್‌ಎಂಇಗಳಿಗೆ ಹಸ್ತಾಂತರಿಸಲು ಸಾಧ್ಯವಾಗುತ್ತದೆ.
– ಎ.ವಿಶ್ವನಾಥ ನಾಯಕ್, ಬ್ಯಾಂಕಿಂಗ್ ಸಂಪನ್ಮೂಲ ವ್ಯಕ್ತಿ

ರಾಜ್ಯದಲ್ಲಿ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಅವರಿಗೆ ಉದ್ಯೋಗದಾತರಾಗಿರುವ ಸಂಸ್ಥೆಗಳು ವೇತನ ಪಾವತಿ ಮಾಡಬೇಕು ಹಾಗೂ ಕೆಲಸದಿಂದ ತೆಗೆಯಬಾರದು. ಇದಕ್ಕೆ ಪೂರಕವಾಗಿ ಉದ್ಯೋಗದಾತ ಸಂಸ್ಥೆಗಳಿಗೆ ಅಗತ್ಯ ನೆರವನ್ನು ಸರಕಾರ ಘೋಷಿಸಬೇಕು.
-ವರಲಕ್ಷ್ಮೀ, ಅಧ್ಯಕ್ಷರು, ಕರ್ನಾಟಕ ಆಶಾ ಕಾರ್ಯಕರ್ತೆಯರ ಸಂಘ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top