ನವೋದ್ಯಮಿಗಳ e-ಲೋಕ – ಎನ್‌. ರವಿಶಂಕರ್‌

ರವಿ ಕಾಣದ್ದನ್ನು ಕವಿ ಕಾಣುತ್ತಾನೆ! ತನ್ನ ಕಲ್ಪನಾಶಕ್ತಿಯಿಂದ. ಹಾಗೆಯೇ ಕವಿ ಕಾಣದ್ದನ್ನು ನಮ್ಮ ದೇಶದ ನವೋದ್ಯಮಿಗಳು ಕಂಡಿದ್ದಾರೆ. ಕಳೆದ 15 ವರ್ಷಗಳಲ್ಲಿ ಅವರು ಹುಟ್ಟಿಹಾಕಿರುವ ಸಾವಿರಾರು ಉದ್ಯಮಗಳು ಈ ಕೊರೊನಾ ಕಾಲದಲ್ಲಿ ನಮ್ಮನ್ನು ಕಾಯುತ್ತಿವೆ. ಕವಿಗೆ ಕಲ್ಪನೆ ಹೇಗೋ, ನವೋದ್ಯಮಿ / ಆಂತ್ರಪ್ರನರ್‌ಗೆ ‘ವಿಷನ್‌’ ಅಂದರೆ ಹಾಗೆ! ಸಣ್ಣ ಕಿಚ್ಚಿನ ಕಿಡಿಯಿಂದ ಆರಂಭಗೊಂಡು ಇಂದು ಬೃಹತ್‌ ಉದ್ಯಮಗಳಾಗಿ ಬೆಳೆದಿರುವ ಅದೆಷ್ಟೋ ನವೋದ್ಯಮಗಳೊಂದಿಗೆ ಅವುಗಳ ಆರಂಭಾವಸ್ಥೆಯಿಂದಲೇ ಸಲಹೆಗಾರನಾಗಿ ಕೆಲಸ ಮಾಡುವ ಸೌಭಾಗ್ಯ ನನಗೂ ನನ್ನ ಸಂವಹನ ಸಲಹಾ ಸಂಸ್ಥೆಗೂ ಒದಗಿಬಂದಿದೆ. ಇದು ತೀರಾ ಉದ್ದದ ಕಥೆಯಾದ್ದರಿಂದ, ವಿವರಗಳನ್ನು ಬದಿಗಿಟ್ಟು, ಚುಟುಕಾಗಿ, ಕಾಲಗಣನಾ ಕ್ರಮದಲ್ಲಿ ಹೇಳುತ್ತೇನೆ. ಸಂವಹನ ಸಲಹೆಗಾರನಾಗಿ ನಾನು ಮೊದಲ ಬಾರಿಗೆ ಕೆಲವು ಪ್ರಮುಖ ನವೋದ್ಯಮಗಳ ಸಂಸ್ಥಾಪಕರನ್ನು ಭೇಟಿ ಮಾಡಿದಾಗ ಅವರ ಮಾತಿನಲ್ಲಿ ಮತ್ತು ಬಿಸ್‌ನೆಸ್‌ ಪ್ಲಾನ್‌ಗಳಲ್ಲಿ ಕಂಡ ಅವರ ದಾರ್ಶನಿಕತೆಯನ್ನೂ, ಅದು ಈ ಹೊತ್ತು ಪಡೆದಿರುವ ಸಾಕಾರರೂಪವನ್ನೂ (ಸ್ವಲ್ಪ ನೆನಪಿನಾಳದಿಂದಲೂ, ಮತ್ತಷ್ಟನ್ನು ನನ್ನ ಹಳೆಯ ಟಿಪ್ಪಣಿ ಮತ್ತು ಮೀಟಿಂಗ್‌ಗಳ ಪ್ರಮುಖ ಅಂಶಗಳಿಂದಲೂ ಹೆಕ್ಕಿ ತೆಗೆದು) ಸ್ಥೂಲವಾದ ಘಟನಾವಳಿಗಳ ಟೈಮ್‌ಲೈನ್‌ಗೆ ಅಳವಡಿಸಿದ್ದೇನೆ:

ಆನ್‌ಲೈನ್‌ ಕಾನ್ಫರೆನ್ಸಿಂಗ್‌: 2005ರ ಜೂನ್‌ ತಿಂಗಳಲ್ಲಿ ವೆಬೆಕ್ಸ್‌ /WebExನ ಭಾರತದ ಎಂಡಿ ಕರಣ್‌ ದಾತರ್‌ ಅವರ ನಕ್ಷತ್ರಗಳನ್ನೆಣಿಸುತ್ತಿದ್ದ ಕಣ್ಣುಗಳನ್ನು ನೋಡುತ್ತಾ ಈ ಮಾತುಗಳನ್ನು ಕೇಳಿದ ನೆನಪು? ‘ಮುಂದೊಂದು ದಿನ ಜಗತ್ತಿನ ಮೂಲೆಮೂಲೆಗಳಲ್ಲಿರುವ ಜನರು ಪರಸ್ಪರರನ್ನು ಭೇಟಿ ಮಾಡಲು ವಿಮಾನಗಳಿಗೆ ಚೆಕ್‌-ಇನ್‌ ಆಗುವುದಿಲ್ಲ! ಬದಲಿಗೆ ನಮ್ಮ ವಿಡಿಯೋ ಕಾನ್ಫರೆನ್ಸಿಂಗ್‌ ಪ್ಲಾಟ್‌ಫಾರ್ಮ್‌ಗೆ ಲಾಗಿನ್‌ ಆಗುತ್ತಾರೆ. ಸೆಮಿನಾರ್‌ಗಳಿಗೆ ಹೋಗಲು ಹಣ, ಸಮಯ ವ್ಯರ್ಥ ಮಾಡುವುದಿಲ್ಲ. ಮನೆಯಲ್ಲೇ ಕುಳಿತು ವೆಬಿನಾರ್‌ಗಳಲ್ಲಿ ಭಾಗವಹಿಸುತ್ತಾರೆ!’ ಭಾರತದಲ್ಲಿ ಆ ದಿನಗಳಲ್ಲಿ ಲಭ್ಯವಿದ್ದ ಬ್ಯಾಂಡ್‌ವಿಡ್ತ್‌, ‘ಈ ಮನುಷ್ಯ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ’ ಎನಿಸುವಂತಿತ್ತು. ಇನ್ನೆರಡೇ ವರ್ಷ, ಭಾರತೀಯರಾದ ಸುಬ್ರಾ ಐಯರ್‌ ಸ್ಥಾಪಿಸಿದ ವೆಬೆಕ್ಸ್‌ಅನ್ನು ತಂತ್ರಜ್ಞಾನ ಜಗತ್ತಿನ ಅತಿದೊಡ್ಡ ಸಂಸ್ಥೆಗಳಲ್ಲೊಂದಾದ ಸಿಸ್ಕೊ 2007ರಲ್ಲಿ ಮೂರು ಬಿಲಿಯನ್‌ ಡಾಲರ್‌ಗೂ ಅಧಿಕ ಮೊತ್ತಕ್ಕೆ ಖರೀದಿಸಿತು.

ಪರಿಣಾಮ: ಈ ಹೊತ್ತು ವಿಡಿಯೋ ಕಾಲ್‌ / ಕಾನ್ಫರೆನ್ಸಿಂಗ್‌ ಬಳಸಿ ಕೆಲಸ ಮಾಡಲು ವರ್ಕ್-ಫ್ರಮ್‌-ಹೋಮ್‌, ಪಾಠ ಕಲಿಯಲು ಲರ್ನ್‌-ಫ್ರಮ್‌-ಹೋಮ್‌, ಸ್ನೇಹಿತರು ಮತ್ತು ಸಂಬಂಧಿಕರೊಡನೆ ಒಡನಾಡಲು ಲಿವ್‌-ಫ್ರಮ್‌-ಹೋಮ್‌ ಸಾಧ್ಯವಾಗಿದೆಯೆಂದರೆ, ಅದು ವೆಬೆಕ್ಸ್‌ ಹಾಕಿಕೊಟ್ಟ ಮೇಲ್ಪಂಕ್ತಿಯಿಂದ.

ಇ-ಕಾಮರ್ಸ್‌: 2009ರ ನವೆಂಬರ್‌ ತಿಂಗಳಲ್ಲಿ ಬೆಂಗಳೂರಿನ ಕೋರಮಂಗಲದ ಸಣ್ಣ ಮನೆಯೊಂದರಲ್ಲಿ, ಅಬ್ಬಬ್ಬಾ ಎಂದರೆ ಕಾಲೇಜು ಹುಡುಗನಂತೆ ಕಾಣುತ್ತಿದ್ದ ಫ್ಲಿಪ್‌ಕಾರ್ಟ್‌ನ ಸ್ಥಾಪಕರಾದ ಸಚಿನ್‌ ಬನ್ಸಲ್‌ರನ್ನು ಭೇಟಿ ಮಾಡಿದಾಗ, ಈ ವ್ಯಕ್ತಿ ಭಾರತದ ಅತಿದೊಡ್ಡ ಇ-ಕಾಮರ್ಸ್‌ ಸಂಸ್ಥೆ ಕಟ್ಟುತ್ತಾರೆ ಎಂದು ಯೋಚಿಸಲು ಸಾಧ್ಯವಿರಲಿಲ್ಲ. ‘ನಿಮಗೆ ಬೇಕಾದ ಯಾವ ವಸ್ತುವನ್ನಾದರೂ ನಿಮ್ಮ ಮನೆಯ ಬಾಗಿಲಿಗೆ ತಲುಪಿಸುವ ಸಂಸ್ಥೆಯಾಗಿ ಬೆಳೆಯುತ್ತೇವೆ. ನಮ್ಮ ಮೂಲಮಂತ್ರ ಲಭ್ಯತೆ!’ ಎಂದಾಗ ನಾವು ಎಷ್ಟರಮಟ್ಟಿಗೆ ನಂಬಿರಲಿಲ್ಲ ಎಂದರೆ, ನಮ್ಮ ಮುಂದಿನ ಭೇಟಿಗೆ ಮುನ್ನ ಕೆಲವು ಪುಸ್ತಕಗಳನ್ನು ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್‌ ಮಾಡಿ ನಿಜಕ್ಕೂ ಇವರು ಮನೆಗೆ ತಲುಪಿಸುತ್ತಾರೋ ಇಲ್ಲವೋ ಎಂದು ಪರೀಕ್ಷಿಸಿದ್ದೆವು!

ಪರಿಣಾಮ: ಇಂದು, ಮನೆ ಬಾಗಿಲಿಗೆ ಬೇಳೆಯಿಂದ ಹಿಡಿದು ಹಾಳೆಯವರೆಗೆ, ಹೂಕೋಸಿನಿಂದ ಆಪೂಸಿನವರೆಗೆ ಎಲ್ಲವೂ ಬಿಗ್‌ಬಾಸ್ಕೆಟ್‌, ಗ್ರೋಫರ್ಸ್‌ ಆದಿಯಾಗಿ ಹತ್ತಾರು ಆಪ್‌ಗಳ ಮೂಲಕ ಬಂದು ಬೀಳುತ್ತಿದ್ದರೆ, ಅದರ ಶ್ರೇಯ ಭಾರತದಲ್ಲಿ ಇದು ಸಾಧ್ಯವಿಲ್ಲ ಎಂದುಕೊಂಡಿದ್ದ ಕಾಲದಲ್ಲಿ ಆ ಸವಾಲನ್ನು ಯಶಸ್ವಿಯಾಗಿ ಸ್ವೀಕರಿಸಿದ ಹಿರಿಯಣ್ಣನಾದ ಫ್ಲಿಪ್‌ಕಾರ್ಟ್‌ಗೆ ಸಲ್ಲಬೇಕಿದೆ.

ಸಾರಿಗೆ / ಲಾಜಿಸ್ಟಿಕ್ಸ್‌ : 2011ರ ಫೆಬ್ರವರಿಯಲ್ಲಿ ನಮ್ಮ ಆಫೀಸಿನ ಮುಂದೆ ಆಟೋದಲ್ಲಿ(ಆಗಿನ್ನೂ ಓಲಾ ಇರಲಿಲ್ಲವಲ್ಲ!) ಬಂದಿಳಿದ ಓಲಾ ಸಂಸ್ಥಾಪಕ ಭಾವಿಷ್‌ ಅಗರ್‌ವಾಲ್‌, ‘ನಮ್ಮದು ಭಾರತದ ಅತಿದೊಡ್ಡ ಟ್ರಾವಲ್‌ ಕಂಪನಿ ಆಗಲಿದೆ. (ಆಗಿನ್ನೂ ಬಾಲ್ಯಾವಸ್ಥೆಯಲ್ಲಿದ್ದ) ಗೂಗಲ್‌ ಮ್ಯಾಫ್ಸ್‌ ಬಳಸಿ ಎಷ್ಟು ದೊಡ್ಡ ಲಾಜಿಸ್ಟಿಕ್ಸ್‌ / ಸಾರಿಗೆ / ಸಾಗಣೆ ಉದ್ಯಮ ಸ್ಥಾಪಿಸಲು ಸಾಧ್ಯ ಎಂದು ತೋರಿಸಿಕೊಡುವುದು ನಮ್ಮ ಉದ್ದೇಶ. ನಾವು ಹೇಗೆ ಒಂದೂ ಕ್ಯಾಬಿನ ಮಾಲಿಕರಾಗದೆ ಅತಿದೊಡ್ಡ ಟ್ಯಾಕ್ಸಿ ಕಂಪನಿ ಕಟ್ಟುತ್ತೇವೆಯೋ ಹಾಗೆಯೇ ಜಿಪಿಎಸ್‌ ತಂತ್ರಜ್ಞಾನದ ಮಂತ್ರದಂಡ ಬಳಸಿ ಸಾವಿರಾರು ಉದ್ಯಮಗಳು ಸೃಷ್ಟಿಯಾಗಲಿವೆ.’

ಪರಿಣಾಮ: ದೇಶದಲ್ಲಿ ಲಾಕ್‌ಡೌನ್‌ ಇದ್ದರೂ, ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿಲ್ಲವೆಂದರೆ, ಅದರ ಹಿಂದೆ ಓಲಾದ ಭಾವಿಷ್‌ರನ್ನು ಅನುಸರಿಸಿ ಗೂಗಲ್‌ ಮ್ಯಾಪಿನ ಮೇಲೆ ತಮ್ಮ ತಂತ್ರಜ್ಞಾನ ಜೋಡಿಸಿ ಲಾಜಿಸ್ಟಿಕ್ಸ್‌ ಉದ್ಯಮಗಳನ್ನು ಕಟ್ಟಿದ ನೂರಾರು ನವೋದ್ಯಮಿಗಳ ಜಾಣ್ಮೆಯಿದೆ.

ಪೂರೈಕೆ: 2015ರ ಜುಲೈನಷ್ಟು ಈಚೆಗೆ ಸ್ವಿಗ್ಗಿಯ ಸ್ಥಾಪಕರಲ್ಲೊಬ್ಬರಾದ ನಂದನ್‌ ರೆಡ್ಡಿ, ‘ನಮ್ಮದು ಆಹಾರದ ಉದ್ಯಮವಲ್ಲ. ಬದಲಿಗೆ, ಹೋಮ್‌-ಡೆಲಿವರಿ ಉದ್ಯಮ. ಒಂದೂ ರೆಸ್ಟೊರೆಂಟ್‌ ನಡೆಸದೆ, ಸ್ವಂತದ ಡೆಲಿವರಿ-ಬಾಯ್‌ಗಳನ್ನೂ ಇಟ್ಟುಕೊಳ್ಳದೆ, ನಾವು ಭಾರತದ ಅತಿದೊಡ್ಡ ಆಹಾರ ಸರಬರಾಜು ಸಂಸ್ಥೆಯಾಗುತ್ತೇವೆ!’ ಎಂದು ‘ನೀವು ಎಂದಾದರೂ ಸ್ವಂತ ರೆಸ್ಟೊರೆಂಟ್‌ಗಳನ್ನು ಆರಂಭಿಸುತ್ತೀರಾ?’ ಎನ್ನುವ ನನ್ನ ಪ್ರಶ್ನೆಗೆ ಉತ್ತರಿಸಿದ್ದರು.

ಪರಿಣಾಮ: ಲಾಕ್‌ಡೌನ್‌ ಸಮಯದಲ್ಲಿ ರೆಸ್ಟೊರೆಂಟ್‌ ತೆರೆಯಲು ಅವಕಾಶವಿಲ್ಲದಿದ್ದರೂ ಅವುಗಳೊಳಗಿನ ಅಡುಗೆ ಮನೆಗಳು ಕೆಲಸ ಮಾಡುತ್ತಿವೆ. ಅಲ್ಲಿ ತಯಾರಾದ ಬಗೆಬಗೆ ಭಕ್ಷ್ಯಗಳು ಸ್ವಿಗ್ಗಿ, ಝೊಮ್ಯಾಟೋಗಳ ಮೂಲಕ ಜನರನ್ನು ತಲುಪುತ್ತಿವೆ. ಅಷ್ಟೇಕೆ, ಅನೇಕ ರಾಜ್ಯ ಸರ್ಕಾರಗಳು ತಮ್ಮ ಆಹಾರದ ಬೇಡಿಕೆ-ಪೂರೈಕೆಯನ್ನು ನಿರ್ವಹಿಸಲೂ ಸ್ವಿಗ್ಗಿಯ ಆ್ಯಪ್‌ ಅನ್ನೇ ಅವಲಂಬಿಸಿವೆ! ಇದು ತಂತ್ರಜ್ಞಾನ ಅವಲಂಬಿತ ಪೂರೈಕೆ ಉದ್ಯಮಗಳ ಶಕ್ತಿ!

ಕಲಿಕೆ: 2016ರ ಏಪ್ರಿಲ್‌ನಲ್ಲಿ ‘ಒಬ್ಬೊಬ್ಬರ ಕಲಿಕೆಯ ವೇಗ ಒಂದೊಂದು ತರಹ ಇರುತ್ತದೆ. ಆದ್ದರಿಂದಲೇ ಶಾಲೆಯಲ್ಲಿ ಹೇಳಿಕೊಡುವ ಪಾಠ ಅನೇಕರಿಗೆ ಅರ್ಥವಾಗುವುದಿಲ್ಲ ಅಥವಾ ಬೋರ್‌ ಆಗುತ್ತದೆ. ಶಿಕ್ಷಣವನ್ನು ಆಸಕ್ತಿದಾಯಕವಾಗಿಸುವುದು ಮತ್ತು ಅವರವರ ವೇಗಕ್ಕೂ ಅನುಕೂಲಕ್ಕೂ ತಕ್ಕಂತೆ ಕಲಿಯುವಂತೆ ಮಾಡಲಿದೆ ಬೈಜೂಸ್‌’ ಎಂದಿದ್ದರು ಅಪ್ರತಿಮ ಶಿಕ್ಷಕ / ಕೋಚ್‌ ಮತ್ತು ತಮ್ಮದೇ ಹೆಸರಿನ ಬೈಜೂಸ್‌ನ ಸ್ಥಾಪಕ ಬೈಜು ರವೀಂದ್ರನ್‌.

ಪರಿಣಾಮ: ‘ಮಕ್ಕಳಿಸ್ಕೂಲ್‌ ಮನೇಲಲ್ವೇ’ ಎಂದ ಕೈಲಾಸಂ ತತ್ವವನ್ನೂ ‘ಮನೆಯಲ್ಲಿಯೇ ಕಲಿಯಿರಿ’ ಎಂಬ ಬೈಜು ಸಿದ್ಧಾಂತವನ್ನೂ ಇಂದಿನ ಮಕ್ಕಳು ಹಲವಾರು ಕಲಿಕೆಯ ಆಪ್‌ಗಳ ಮೂಲಕ ಮಾಡುತ್ತಿದ್ದಾರೆ, ಲಾಕ್‌ಡೌನ್‌ನಿಂದ ಮನೆಪಾಲಾಗಿರುವ ಅಪ್ಪ-ಅಮ್ಮಂದಿರಿಗೂ ಇ-ಲರ್ನಿಂಗ್‌ನ ಹೊಸ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ.

ಇವೆಲ್ಲವೂ ನಿದರ್ಶನಗಳು ಮಾತ್ರ, ನಾನು ಹತ್ತಿರದಿಂದ ಬಲ್ಲ, ಕಳೆದ ಹದಿನೈದು ವರ್ಷಗಳಲ್ಲಿ ಸೃಷ್ಟಿಯಾದ ಇಂಥ ಇನ್ನೂ ನೂರಾರು ಕಂಪನಿಗಳು ಈ ಕೊರೊನಾ ಕಾಲದಲ್ಲಿನಮ್ಮನ್ನು ಕಾಯುತ್ತಿವೆ! ಉದಾಹರಣೆಗೆ, ಗಪ್‌ಷಪ್‌ನ ಓಟಿಪಿಗಳು ನಮ್ಮ ಆನ್‌ಲೈನ್‌ ಬ್ಯಾಂಕಿಂಗ್‌ ಅನ್ನು ಸುರಕ್ಷಿತವಾಗಿಸಿವೆ. ಎಮ್‌ಸ್ವೆತ್ರೖಪ್‌ ಕಿರಾಣಿ ಅಂಗಡಿಗಳನ್ನು ಡಿಜಿಟಲೀಕರಣಗೊಳಿಸಿದೆ. ಬ್ಲ್ಯಾಕ್‌ಬಕ್‌ ಊರಿಂದೂರಿಗೆ ಹೋಗುವ ಟ್ರಕ್‌ಗಳ ಪಾಲಿಗೆ ಓಲಾದಂತಿದೆ. ಸ್ಟೋರ್‌ ಕಿಂಗ್‌ ಕಿರಾಣಿ ಅಂಗಡಿಗಳಿಗೆ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದೆ. ಹೆಲ್ತಿಫೈಮಿ ಮನೆಯಲ್ಲೇ ಕುಳಿತಿರುವ ನಿಮ್ಮ ಕ್ಯಾಲೊರಿ ಎಣಿಸಲು ಪೌಷ್ಟಿಕತೆ ಮಾಪಿಸಲು ಸಹಾಯ ಮಾಡಿ ನಿಮ್ಮ ಆರೋಗ್ಯ ಕಾಯುತ್ತಿದೆ. ಗ್ರೇಟ್‌ ಲರ್ನಿಂಗ್‌ ‘ಒಮ್ಮೆ ಕಲಿತು ಜೀವನವೆಲ್ಲ ದುಡಿಯುವ ಕಾಲ ಹೋಯಿತು’ ಎಂದು ತಿಳಿಹೇಳಿ ಈಗ ಮನೆಯಲ್ಲೇ ಕುಳಿತು ವರ್ಕ್-ಫ್ರಮ್‌-ಹೋಮ್‌ ಮಾಡುತ್ತಲೇ ಹೊಸ ಕೋರ್ಸ್‌ಗಳನ್ನು ಕಲಿಸುತ್ತಿದೆ.

ಇವೆಲ್ಲವುಗಳ ದೆಸೆಯಿಂದಾಗಿ ಲಾಕ್‌ಡೌನ್‌ನಲ್ಲಿಯೂ ಗಳಿಕೆ-ಕಲಿಕೆ-ಬಳಕೆಗಳು ಸ್ತಬ್ಧವಾಗಿಲ್ಲ. ಅಂದು ಭಾರತದ ನವೋದ್ಯಮಿಗಳು ಕಂಡ ಕನಸು, ಪಟ್ಟ ಪರಿಶ್ರಮ ಇಂದು ಫಲ ನೀಡುತ್ತಿದೆ. ನಾವೆಲ್ಲರೂ ಅವರ ಧೈರ್ಯ, ಜಾಣ್ಮೆ, ತಂತ್ರಜ್ಞಾನಗಳ ಫಲಾನುಭವಿಗಳಾಗಿದ್ದೇವೆ. ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಆಗಬಹುದಾಗಿದ್ದಷ್ಟು ಡಿಜಿಟಲೀಕರಣ, ಐದೇ ವಾರಗಳಲ್ಲಿ ಆಗಿಹೋಗಿದೆ. ಈ ಮಟ್ಟದ ಡಿಜಿಟಲ್‌ ಒಗ್ಗಿಕೊಳ್ಳುವಿಕೆ ಒಳ್ಳೆಯದೋ ಕೆಟ್ಟದ್ದೋ ಈಗಲೇ ನಿರ್ಧರಿಸಲಾಗದು! ನಾವು ಜಗತ್ತಿನೊಡನೆ ವ್ಯವಹರಿಸುವ ಕ್ರಮ ಬದಲಾಗಿದೆ ಎಂಬುದಷ್ಟೇ ಸತ್ಯ.

(ಲೇಖಕರು ಸಂವಹನ ಸಲಹೆಗಾರರು. ಸ್ಟಾರ್ಟ್‌ಅಪ್‌ಗಳು ಮತ್ತು ತಂತ್ರಜ್ಞಾನ ಸಂಸ್ಥೆಗಳಿಗೆ ಸಂವಹನ ಸಲಹೆ ನೀಡುವ ‘ಏಮ್‌ ಹೈ ಕನ್ಸಲ್ಟಿಂಗ್‌’ ಸಂಸ್ಥೆಯ ಸಿಇಓ. ಭಾರತದ ಅತಿಶ್ರೇಷ್ಠ ನವೋದ್ಯಮಗಳನ್ನು ಹತ್ತಿರದಿಂದ ಕಂಡಿದ್ದಾರೆ. )

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top