ದ್ವಂದ್ವಗಳಲ್ಲಿ ಸಿಲುಕಿರುವ ದೇಶಕ್ಕೆ ದಾರಿ ಯಾವುದಯ್ಯಾ..

 

ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ದಾಳಿಯ ಬಳಿಕ ಉಗ್ರರ ಸಮೂಲ ನಾಶದ ಪಣತೊಟ್ಟು ಅಬ್ಬರಿಸಿದ ಅಮೆರಿಕ ಸರ್ಕಾರ 9/11ರ ಸ್ಮಾರಕ ನಿರ್ಮಾಣಕ್ಕೆ ಏಕೆ ಹಣಕಾಸು ನೆರವು ನೀಡಲಿಲ್ಲ? ಆ ದೇಶ ಎದುರಿಸುತ್ತಿರುವ ಸವಾಲುಗಳ ಮೂಲ ಎಲ್ಲಿದೆ?

ಅಮೆರಿಕ ಅಂದರೇನೇ ಹಾಗೆ. ಅಲ್ಲಿನ ಕಷ್ಟನಷ್ಟ, ಸುಖದುಃಖದ ವಿಚಾರ ಏನೇ ಇರಲಿ, ನಾವು ಮಾತ್ರವಲ್ಲ ಇವತ್ತು ಇಡೀ ಜಗತ್ತಿನ ನೂರಾರು ದೇಶಗಳ ಕೋಟ್ಯಂತರ ಜನರು ಆ ದೇಶದ ಕಡೆಗೆ ಆಸೆಗಣ್ಣಿನಿಂದ ನೋಡುತ್ತಿದ್ದಾರೆ. ಕೆಲವರಂತೂ ಅಲ್ಲೊಂದು ಸಣ್ಣ ಚಾಕರಿಯಾದರೂ ಸಿಗುತ್ತದಾ ಅಂತ ಎಷ್ಟೋ ವರ್ಷಗಳವರೆಗೆ ಲೆಕ್ಕ ಹಾಕುತ್ತಿರುತ್ತಾರೆ. ಇನ್ನು ಹಲವರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಅಮೆರಿಕವನ್ನು ಖುದ್ದಾಗಿ ನೋಡಿ ಕಣ್ತುಂಬಿಕೊಳ್ಳಬೇಕೆಂದು ಹಂಬಲಿಸುತ್ತಿರುತ್ತಾರೆ. ಅದಕ್ಕೆ ಕಾರಣ ಅಮೆರಿಕದ ಸಿರಿವಂತಿಕೆ ಮತ್ತು ಜಗತ್ತಿನ ಇತರ ದೇಶಗಳ ಮೇಲೆ ಆ ದೇಶ ಸಾಧಿಸಿರುವ ರಾಜಕೀಯ, ಆರ್ಥಿಕ ಮತ್ತು ಮಿಲಿಟರಿ ಪ್ರಭಾವ. ಇವಿಷ್ಟನ್ನು ಬಿಟ್ಟರೆ ಬೇರೆ ಕಾರಣಗಳು ಖಂಡಿತವಾಗಿ ಯಾರಿಗೂ ಅಷ್ಟು ಮುಖ್ಯ ಅನ್ನಿಸುವುದಿಲ್ಲ.

22112014

ಇಷ್ಟು ವರ್ಷಗಳ ಪರ್ಯಂತ ಅಮೆರಿಕ ಸತತವಾಗಿ ಪಟ್ಟಿರುವ ಪರಿಶ್ರಮ ಮತ್ತು ತಂತ್ರಗಾರಿಕೆ ಫಲ ಅದು. ಹಾಗೆ ಆ ದೇಶ ಬೆಳೆಸಿಕೊಂಡಿರುವ ಗಟ್ಟಿ ಪ್ರಭಾವ, ಗಾಢ ಪರಿಣಾಮ ಮತ್ತು ಬಲವಾದ ಸೆಳೆತ ಎಂಥದ್ದು ನೋಡಿ. ಅಮೆರಿಕದ ಬೀದಿಗಳಲ್ಲಿ ಓಡಾಡುವಾಗ ನೀವು ಮೂರು ಜನರನ್ನು ಮಾತಾಡಿಸಿ ನೋಡಿ. ಅವರಲ್ಲಿ ಕನಿಷ್ಠ ಇಬ್ಬರು ಬೇರೆ ಕಡೆಯಿಂದ ಅಲ್ಲಿಗೆ ವಲಸೆ ಬಂದವರೇ ಆಗಿರುತ್ತಾರೆ. ಹಾಲಿ ಬಂದವರು ಇರಬಹುದು ಅಥವಾ ಒಂದೆರಡು ತಲೆಮಾರಿನ ಹಿಂದೆ ಬಂದು ನೆಲೆಸಿದವರೂ ಇರಬಹುದು. ಯಾವುದೇ ದೊಡ್ಡ ಕಂಪೆನಿಗಳು, ಹೋಟೆಲುಗಳು, ಪಿಜ್ಜಾಹಟ್, ಸ್ಟಾರ್ ಬಕ್ಸ್ ಕಾಫಿ ಷಾಪ್, ಡಂಕಿನ್ ಡೋನಟ್ಸ್, ಸಬ್ ವೇ ಇತ್ಯಾದಿ ಈಟ್‍ಔಟ್‍ಗಳನ್ನೋ, ಬರ್ಗರ್ ಸ್ಟಾಲ್‍ಗಳನ್ನೋ ಹೊಕ್ಕು ನೋಡಿ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಚೀನಾ, ಇರಾನ್, ಇರಾಕ್, ಸ್ಪೇನ್, ಆಫ್ರಿಕಾ, ಮೆಕ್ಸಿಕೋ, ಕೆನಡಾ ಇತ್ಯಾದಿ ಯಾವುದಾದರೂ ಒಂದು ದೇಶದ ಪ್ರಜೆ ಅಲ್ಲಿ ಸಿಗದೇ ಹೋದರೆ ಹೇಳಿ. ಪಕ್ಕಾ ವಲಸಿಗರ ದೇಶವಾದ ಅಮೆರಿಕದಲ್ಲಿ ಅದು ಸಹಜ. ಅದಕ್ಕಿಂತ ಹೆಚ್ಚಾಗಿ ಆ ದೇಶಕ್ಕೆ ಅದು ಅನಿವಾರ್ಯ. ಅಮೆರಿಕಕ್ಕೆ ವಲಸೆ ಬಂದವರಲ್ಲಿ ಎರಡು ವಿಧ. ಹಲವರು ಸಕ್ರಮವಾಗಿ ಬಂದವರು. ಕೆಲವರು ಅಕ್ರಮವಾಗಿ ಬಂದು ನೆಲೆಸಿದವರು. ಇತ್ತೀಚಿನ ಒಂದು ಅಂದಾಜಿನ ಪ್ರಕಾರ ಸದ್ಯ ಅಮೆರಿಕದಲ್ಲಿ 11 ಮಿಲಿಯನ್‍ಗೂ ಹೆಚ್ಚು ಮಂದಿ ಅಕ್ರಮ ವಲಸಿಗರು ಅಮೆರಿಕದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಹೀಗಾಗಿ ಅಕ್ರಮ ವಲಸಿಗರನ್ನು ಸಕ್ರಮಗೊಳಿಸಬೇಕೇ ಬೇಡವೇ ಎಂಬುದೇ ಈಗ ಅಲ್ಲಿನ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಪ್ರಮುಖವಾದ ಚರ್ಚೆಯ ವಿಷಯ. ಅಕ್ರಮ ವಲಸಿಗರನ್ನು ಸಕ್ರಮಗೊಳಿಸುವ ಅಧ್ಯಕ್ಷ ಬರಾಕ್ ಒಬಾಮಾ ಬಯಕೆ ಈಗ ಅಲ್ಲಿ ರಾಜಕೀಯ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಅಕ್ರಮ ವಲಸಿಗರಿಗೆ ಅಧಿಕೃತ ಮಾನ್ಯತೆ ಸಿಕ್ಕರೆ ಹೆಚ್ಚು ಖುಷಿಪಡುವವರು ಮೆಕ್ಸಿಕೋ, ಕೆನಡಾ, ಆಫ್ರಿಕಾ ದೇಶಗಳ ಕೋಟ್ಯಂತರ ಜನರು ಎಂಬುದು ಒಂದು ಸಂಗತಿಯಾದರೆ, ಅಧ್ಯಕ್ಷ ಒಬಾಮಾರ ಉದ್ದೇಶಿತ ಹೊಸ `ಅಕ್ರಮ ವಲಸೆ ಕಾಯ್ದೆ’ಯ ಲಾಭ ಪಡೆಯುವ ಕಾತರದಲ್ಲಿ ಭಾರತ, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಮತ್ತು ಇತರ ದೇಶಗಳ ನಾಗರಿಕರು ದೊಡ್ಡ ಪ್ರಮಾಣದಲ್ಲಿದ್ದಾರೆಂಬುದೂ ನಮಗೆ ಮುಖ್ಯವಾಗುವ ಸಂಗತಿ.
ನಾನಾ ಚಾಕರಿ ಕೊಡಿಸುವ ನೆಪದಲ್ಲಿ ಪ್ರಪಂಚದ ವಿವಿಧ ದೇಶಗಳಿಂದ ಕೆಳಮಧ್ಯಮ ವರ್ಗದ ಜನರನ್ನು ಕರೆತರುವ ಬಲಾಢ್ಯ ಜಾಲವೇ ಅಮೆರಿಕದಲ್ಲಿ ಕೆಲಸ ಮಾಡುತ್ತಿದೆ. ಅದನ್ನು ಬಿಟ್ಟರೆ ಅಮೆರಿಕಕ್ಕೆ ಮೆಕ್ಸಿಕೋದಂತಹ ನೆರೆ ದೇಶದ ನುಸುಳುಕೋರರದ್ದೇ ದೊಡ್ಡ ಸವಾಲು. ಬಡತನದಿಂದ ಬಳಲಿ ಬೆಂಡಾದ ಮೆಕ್ಸಿಕೋದ ನೂರಾರು ಜನರು ದಿನಂಪ್ರತಿ ಅಕ್ರಮವಾಗಿ ಅಮೆರಿಕದ ಗಡಿಯೊಳಗೆ ನುಸುಳುತ್ತಾರೆ. ಹೀಗೆ ಒಳನುಸುಳುವವರಿಗೆ ಅರಿಜೋನಾ ಪ್ರಾಂತದ ನೊಗಾಲಿಸ್‍ನ ನಿರ್ಜನ ಗುಡ್ಡಗಾಡು, ಕಾಡುಮೇಡು, ಟೂಸಾನ್‍ನ ಸುತ್ತ ಹತ್ತಾರು ಮೈಲಿ ಹರಡಿಕೊಂಡಿರುವ ಪಾಪಾಸುಕಳ್ಳಿ ಮುಳ್ಳಿನ ಭಣಭಣ ಮರುಭೂಮಿಯೇ ರಹದಾರಿ. ಇಂಥ ನುಸುಳುಕೋರರನ್ನು ಪತ್ತೆ ಮಾಡಿ ತಡೆಯುವುದಕ್ಕೋಸ್ಕರವೇ ಅಮೆರಿಕ ಸರ್ಕಾರ ಪ್ರತ್ಯೇಕ Border Patroling Forceನ್ನು ಸ್ಥಾಪಿಸಿದೆ; ಈ ಕಾರ್ಯಕ್ಕಾಗಿ ಪ್ರತಿವರ್ಷ ಬಜೆಟ್‍ನಲ್ಲಿ ಲಕ್ಷ ಕೋಟಿ ಡಾಲರ್ ಲೆಕ್ಕದಲ್ಲಿ ಹಣವನ್ನು ಎತ್ತಿಡುತ್ತದೆ. ಅತ್ಯಾಧುನಿಕ ಹೆಲಿಕಾಪ್ಟರುಗಳು ದಿನದ ಇಪ್ಪತ್ತನಾಲ್ಕು ಗಂಟೆ ಗಸ್ತು ತಿರುಗುತ್ತಿರುತ್ತವೆ. ಗಡಿಗುಂಟ ಶಕ್ತಿಶಾಲಿ ಕ್ಯಾಮರಾ ಕಣ್ಗಾವಲು ಹಾಕಲಾಗಿದೆ. ಒಂದು ನರಪಿಳ್ಳೆ ಅನುಮಾನಾಸ್ಪದವಾಗಿ ಸುಳಿದಾಡುವುದು ಕಂಡರೂ ಗುಂಡಿಕ್ಕಲು ಬಾರ್ಡರ್ ಪ್ಯಾಟ್ರೋಲಿಂಗ್‍ನವರಿಗೆ ಸರ್ಕಾರ ಪೂರ್ಣ ಸ್ವಾತಂತ್ರೃ ನೀಡಿದೆ. ಅದರ ಪರಿಣಾಮ ವರ್ಷಕ್ಕೆ ನೂರಾರು ಮಂದಿ ನುಸುಳುಕೋರರು ಬಾರ್ಡರ್ ಪ್ಯಾಟ್ರೋಲಿಂಗ್‍ನ ಸೈನಿಕರ ಗುಂಡಿಗೆ ಬಲಿಯಾಗುತ್ತಾರೆ. ಅಷ್ಟೇ ಅಲ್ಲ, ನೂರಾರು ಮೈಲಿ ಕಾಡುಮೇಡು, ದುರ್ಗಮ ಗುಡ್ಡಗಾಡು, ಮರುಭೂಮಿಯಲ್ಲಿ ಬರುವಾಗ ಬಾಯಾರಿದರೆ ಕುಡಿಯಲು ಹನಿ ನೀರು ಸಿಗದೆ, ಅನ್ನಾಹಾರವಿಲ್ಲದೆ ಬಳಲಿ ವರ್ಷಕ್ಕೆ ನೂರಾರು ನುಸುಳುಕೋರರು ಹಾದಿಯಲ್ಲೇ ಸಾವನ್ನಪ್ಪುತ್ತಾರೆ. ಇಷ್ಟೆಲ್ಲ ಕಷ್ಟನಷ್ಟ ಅನುಭವಿಸಿ, ಪ್ರಾಣಾಪಾಯವನ್ನೂ ಲೆಕ್ಕಿಸದೆ ಅಮೆರಿಕಕ್ಕೆ ಬಂದು ಸೇರಿಕೊಳ್ಳಲು ಪರದೇಶಗಳ ಪ್ರಜೆಗಳು ಹಪಹಪಿಸುತ್ತಾರೆ. ಹಾತೊರೆಯುತ್ತಾರೆ. ಹಾಗಿದ್ದರೆ ಅಮೆರಿಕದಲ್ಲಿ ಸುಂದರ ಬದುಕನ್ನು ಕಟ್ಟಿಕೊಳ್ಳುವ ಅವರ ಕನಸು ನನಸಾಗುತ್ತಾ? ಅಲ್ಲಿ ಅವರಿಗೆ ಸುಖದ ಸುಪ್ಪತ್ತಿಗೆ ಸಿಗುತ್ತಾ? ಇದು ಆಲೋಚಿಸಬೇಕಾದ ವಿಚಾರ.

ಅಮೆರಿಕದಲ್ಲಿ ಎಲ್ಲಿ ಹೋದರಲ್ಲಿ ಹೇಮಾಮಾಲಿನಿ ಕೆನ್ನೆಯಂಥ ನುಣುಪಾದ ರಸ್ತೆಗಳಿವೆ. ಸುಂದರ ಮಹಲುಗಳ ನಗರಗಳಿವೆ. ತರಹೇವಾರಿ ಕಾರುಗಳು ರೋಮಾಂಚನಗೊಳಿಸುತ್ತವೆ. ನಮ್ಮಲ್ಲಿರುವ ಬಸ್‍ಸ್ಟಾೃಂಡುಗಳ ಸಂಖ್ಯೆಯನ್ನು ನಾಚಿಸುವ ರೀತಿಯಲ್ಲಿ ವಿಮಾನ ನಿಲ್ದಾಣಗಳಿವೆ. ಅಗಾಧ ಶ್ರೀಮಂತಿಕೆಯಿದೆ. ಆದರೆ ಈ ದೌಲತ್ತು, ಸವಲತ್ತು, ಸುಖ, ನೆಮ್ಮದಿಯೆಲ್ಲ ಅಮೆರಿಕದಲ್ಲಿ ನೆಲೆಸಿರುವ ಬಹುಸಂಖ್ಯಾತ ಜನರಿಗೆ ಲಭ್ಯವೇ ಎಂಬುದು ಮೂಲಭೂತವಾದ ಪ್ರಶ್ನೆ.
ಒಂದು ವಿಷಯ ಗೊತ್ತಿರಲಿ. ಸಂಪತ್ತಿನ ಅಸಮಾನ ಹಂಚಿಕೆ ಅಮೆರಿಕ ಈಗ ಎದುರಿಸುತ್ತಿರುವ ಸಮಸ್ಯೆಗಳಿಗೆಲ್ಲ ಮೂಲ. ಪರಿಣಾಮವಾಗಿ ಶ್ರೀಮಂತಿಕೆ ಜತೆಗೆ ಅಲ್ಲಿ ಅಭಾವ, ಬಡತನಗಳ ತಾಂಡವವೂ ಇದೆ. ಕಾರಣ ಇಷ್ಟೆ, ಅಮೆರಿಕದಲ್ಲಿ ಡಾಲರು ಲೆಕ್ಕದಲ್ಲಿ ಗಳಿಸುವವರು ಜೀವನಕ್ಕಾಗಿ ಅದೇ ಲೆಕ್ಕದಲ್ಲಿ ಕಳೆಯುವುದೂ ಅನಿವಾರ್ಯ. ಕೊನೆಯಲ್ಲಿ ಗಳಿಸಿದ್ದೆಷ್ಟು, ಕಳೆದದ್ದೆಷ್ಟು ಎಂಬುದೊಂದೇ ಉಳಿದುಕೊಳ್ಳುವ ಪ್ರಶ್ನೆ. ಇದು ಸುಂದರ ಕನಸು ಕಂಡು ಅಮೆರಿಕಕ್ಕೆ ಹಾರಿದವರ ನೈಜ ಅನುಭವ. ಇಷ್ಟೇ ಸಾಲದೆಂಬಂತೆ ಸತತ ಆರ್ಥಿಕ ಕುಸಿತದಿಂದ ಹೊರಬರಲು ಅಮೆರಿಕಕ್ಕೆ ಇನ್ನೂ ಸಾಧ್ಯವಾಗುತ್ತಿಲ್ಲ. ಸದ್ಯೋಭವಿಷ್ಯದಲ್ಲಿ ಅದು ಆರ್ಥಿಕ ಸಂಕಷ್ಟದಿಂದ ಹೊರಬರುವ ಲಕ್ಷಣವೂ ಕಾಣಿಸುತ್ತಿಲ್ಲ. ಅದಕ್ಕೆ ಅಮೆರಿಕ ತನ್ನ ಸುತ್ತ ಹೆಣೆದುಕೊಂಡಿರುವ ಆರ್ಥಿಕ, ಸಾಮಾಜಿಕ ಬಲೆ ಒಂದು ಕಾರಣವಾದರೆ, ಹತ್ತು ಹಲವು ಪ್ರಮುಖ ವಿಚಾರಗಳಲ್ಲಿ ಸರ್ಕಾರ ಮತ್ತು ಸಮಾಜ ಎರಡೂ ಗೊಂದಲ, ದ್ವಂದ್ವಗಳಲ್ಲಿ ಸಿಲುಕಿ ಪೇಚಾಡುತ್ತಿರುವುದು ಪ್ರಮುಖವಾದ ಕಾರಣ.

ಹಲವಾರು ವಿಷಯಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಎಂದೂ ಮುಗಿಯದ ತಿಕ್ಕಾಟವಿದೆ. ಉದಾಹರಣೆಗೆ ಅಮೆರಿಕವನ್ನು ಹೈರಾಣ ಮಾಡುತ್ತಿರುವ ಮಾದಕವಸ್ತು ಕಳ್ಳಸಾಗಣೆ ಮತ್ತು ಬಳಕೆ ವಿಷಯಕ್ಕೆ ಬರೋಣ. ಅಮೆರಿಕದ ಪಾಲಿಗೆ ಅದೊಂದು ದೊಡ್ಡ ತಲೆನೋವು. ಅಲ್ಲಿ ಮಾದಕ ಪದಾರ್ಥ ಕಳ್ಳಸಾಗಣೆ ಮತ್ತು ಬಳಕೆ ಪ್ರಮಾಣ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ. ನ್ಯಾಷನಲ್ ಡ್ರಗ್ ಕಂಟ್ರೋಲ್ ಪಾಲಿಸಿ ಸಂಸ್ಥೆ ನಡೆಸಿದ ಸರ್ವೆ ಪ್ರಕಾರ 2013ರ ಒಂದೇ ವರ್ಷದಲ್ಲಿ ನೂರು ಬಿಲಿಯನ್ ಮೌಲ್ಯದ ಕೊಕೇನ್, ಹೆರಾಯಿನ್ ಮುಂತಾದ ಮಾರಕ ಮಾದಕ ಪದಾರ್ಥಗಳು ಅಮೆರಿಕದಲ್ಲಿ ಕಳ್ಳಸಾಗಣೆಗೊಂಡು ಬಳಕೆಯಾಗಿವೆ. ಅಲ್ಲಿನ ಶಾಲೆ ಕಾಲೇಜುಗಳಲ್ಲಿ ಓದುತ್ತಿರುವ ಹದಿಹರೆಯದ ವಿದ್ಯಾರ್ಥಿಗಳೇ ಇಂಥ ಮಾದಕ ಪದಾರ್ಥಗಳ ದೊಡ್ಡಪ್ರಮಾಣದ ಗ್ರಾಹಕರು ಎಂಬ ಕಳವಳಕಾರಿ ಸಂಗತಿಯನ್ನೂ ಆ ಸಮೀಕ್ಷೆ ಬಹಿರಂಗಪಡಿಸಿದೆ. ಅಂಕೆ ಮೀರುತ್ತಿರುವ ಮಾದಕ ಪದಾರ್ಥ ಬಳಕೆ ತಡೆಯಲು ಅಮೆರಿಕ ಸರ್ಕಾರ ‘War On Drug’ ಎಂಬ ಘೋಷಣೆ ಮಾಡಿದೆ ನಿಜ. ಇಂಥದ್ದರ ನಡುವೆಯೇ, ಮರಿಜುವಾನಾದಂತಹ ಅಪಾಯಕಾರಿ ಮಾದಕ ಪದಾರ್ಥ ಬಳಕೆಯನ್ನು ಕಾಯ್ದೆಬದ್ಧಗೊಳಿಸುವ ಕುರಿತು ರಾಜಕೀಯ ಲಾಬಿ ಬಲಗೊಳ್ಳುತ್ತಿದೆ. ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಸೆನೆಟ್ ಚುನಾವಣೆಯಲ್ಲಿ ಅಕ್ರಮ ವಲಸೆಯನ್ನು ಸಕ್ರಮ ಮಾಡಬೇಕೇ ಬೇಡವೇ ಎಂಬುದರ ಜತೆಗೆ ಮರಿಜುವಾನಾ ಬಳಕೆಯನ್ನು ಕಾಯ್ದೆಬದ್ಧಗೊಳಿಸಬೇಕು/ಬೇಡ ಎಂಬುದರ ಚರ್ಚೆಯೂ ಪ್ರಮುಖವಾಗಿ ಗಮನ ಸೆಳೆಯಿತು.

ಇದೊಂದೇ ಅಲ್ಲ, ಇಡೀ ಜಗತ್ತಿಗೆ ಕಂಟಕವಾಗಿ ಪರಿಣಮಿಸಿರುವ ಭಯೋತ್ಪಾದನೆ ದಮನದ ವಿಚಾರದಲ್ಲೂ ಅಮೆರಿಕದ ಸಮಾಜ ಮತ್ತು ರಾಜಕೀಯ ವಲಯದಲ್ಲಿ ಭಾರಿ ಕಂದಕವಿದೆ. ಅಮೆರಿಕವು ಇರಾಕ್, ಇರಾನ್ ಮತ್ತು ಅಫ್ಘಾನಿಸ್ತಾನದ ಯುದ್ಧದಲ್ಲಿ ನೇರವಾಗಿ ಪಾಲ್ಗೊಂಡದ್ದು ಸರಿಯಲ್ಲ. ಇರಾಕ್‍ನಲ್ಲಿ ಐಎಸ್‍ಐಎಸ್ ಉಗ್ರರ ದಮನಕ್ಕೆ ಅಧ್ಯಕ್ಷ ಒಬಾಮಾ ಸೇನೆಯನ್ನು ಕಳಿಸುತ್ತಿರುವುದು ತಪ್ಪು ಎಂಬ ಅಭಿಪ್ರಾಯದವರು ದೊಡ್ಡ ಪ್ರಮಾಣದಲ್ಲಿದ್ದರೆ, ಐಎಸ್‍ಐಎಸ್ ಉಗ್ರರ ದಮನ ಮತ್ತು ಮುಸ್ಲಿಂ ಮೂಲಭೂತವಾದಿ ಉಗ್ರರನ್ನು ಹತ್ತಿಕ್ಕುವ ವಿಷಯದಲ್ಲಿ ಒಬಾಮಾ ಸರ್ಕಾರ ಅರೆಮನಸ್ಸಿನಿಂದ ಕೆಲಸ ಮಾಡುತ್ತಿದೆ ಎಂದು ಅತೃಪ್ತಿ ಹೊಂದಿರುವ ಮತ್ತೊಂದು ವರ್ಗವೂ ಅಷ್ಟೇ ದೊಡ್ಡ ಪ್ರಮಾಣದಲ್ಲಿದೆ.

ಈ ಅಭಿಪ್ರಾಯಕ್ಕೆ ಪೂರಕವಾದ ಅಂಶವೊಂದಿದೆ. 2001ರ ಸೆಪ್ಟೆಂಬರ್ 11ರಂದು ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಅಲ್‍ಕಾಯಿದಾ ಉಗ್ರರು ದಾಳಿ ಮಾಡಿದ ನಂತರ `War on Terror’ ಎಂದು ಅಬ್ಬರಿಸಿ ಬೊಬ್ಬಿರಿದು ಒಸಾಮಾ ಬಿನ್ ಲಾಡೆನ್‍ನನ್ನು ಹೊಸಕಿ ಹಾಕಿದ ಅಮೆರಿಕ ಸರ್ಕಾರದ ಪರಾಕ್ರಮವನ್ನು ಎಲ್ಲರೂ ಕಂಡಿದ್ದಾರೆ. ಆದರೆ ಭಯೋತ್ಪಾದಕರ ದಾಳಿಯಿಂದ ಕುಸಿದ ವಿಶ್ವ ವಾಣಿಜ್ಯ ಕೇಂದ್ರದ ಜಾಗದಲ್ಲಿ ಅದಕ್ಕಿಂತ ಭವ್ಯವಾದ 9/11 ಸ್ಮಾರಕ ನಿರ್ಮಾಣಕ್ಕೆ ಅಮೆರಿಕ ಸರ್ಕಾರ ಬಿಡಿಗಾಸನ್ನೂ ಕೊಡಲು ಮನಸ್ಸು ಮಾಡಲಿಲ್ಲ. ಹೀಗಾಗಿ 9/11 ಮ್ಯೂಸಿಯಂ ಫೌಂಡೇಷನ್ ಎಂಬ ಸಂಸ್ಥೆ ಸಾರ್ವಜನಿಕ ವಂತಿಗೆ ಸಂಗ್ರಹಿಸಿ ಸ್ಮಾರಕ ನಿರ್ಮಾಣಕ್ಕೆ ಮುಂದಾಯಿತು. ಇಸ್ರೇಲ್-ಅಮೆರಿಕನ್ ವಾಸ್ತುಶಿಲ್ಪಿ ಮೈಕೆಲ್ ಅರಾದ್ ಮತ್ತು ಮೂವರು ಹೆಸರಾಂತ ಇಂಜಿನಿಯರುಗಳು ಸೇರಿ ಆಕಾಶದೆತ್ತರದ ಸ್ಮಾರಕ ನಿರ್ಮಾಣ ಕಾರ್ಯವನ್ನು ಪೂರ್ತಿಗೊಳಿಸಿದರು. ಯಾಕೆ ಹೀಗೆ ಅಂತ ಕೇಳಿದ್ದಕ್ಕೆ, ಒಸಾಮಾನ ಸಮುದಾಯಕ್ಕೆ ಸೇರಿದ ಅಮೆರಿಕನ್ನರಿಗೆ ಬೇಸರವಾಗಬಾರದು, ಹೊರ ಜಗತ್ತಿನಲ್ಲಿ ಅಮೆರಿಕದ ವಿರುದ್ಧ ದ್ವೇಷ, ಹಗೆ ಬೆಳೆಯಬಾರದು ಎಂಬ ಕಾರಣಕ್ಕೆ ಸರ್ಕಾರ ಇಂಥ ನಿರ್ಧಾರ ತಾಳಿದೆ ಎಂಬ ವಿವರಣೆ ಸಿಕ್ಕಿತು. ಅರೇ ಇಸ್ಕಿ…ಉಗ್ರವಾದದ ವಿಷಯದಲ್ಲಿ ನಮ್ಮ ದೇಶದ ಸೆಕ್ಯುಲರ್ ರಾಜಕಾರಣಿಗಳ ವಾದಕ್ಕೂ, ಅಮೆರಿಕ ಸರ್ಕಾರದ ನಿಲುವಿಗೂ ಎಷ್ಟೊಂದು ಸಾಮ್ಯತೆ ಇದೆಯಲ್ಲ ಅಂತ ಒಂದು ಕ್ಷಣ ಅನ್ನಿಸಿತು. ಹಾಗಿದ್ದರೆ ಅಮೆರಿಕ ಸರ್ಕಾರದ ಈ ನಿಲುವು ಸರೀನಾ?

ಅರವತ್ತರ ದಶಕದಿಂದಲೇ ಅಮೆರಿಕದಲ್ಲಿ ಸಮಾನ ವೇತನ ಕಾಯ್ದೆ ಜಾರಿಯಲ್ಲಿದ್ದರೂ, ಅಲ್ಲಿ ಇನ್ನೂ ಪುರುಷ ಮತ್ತು ಮಹಿಳೆಯರ ನಡುವಿನ ವೇತನ ತಾರತಮ್ಯದ ದುಗುಡ ದೂರವಾಗಿಲ್ಲ. ಈಗಲೂ ಅದು ಚುನಾವಣಾ ರಾಜಕೀಯದ ಅಜೆಂಡಾ. ಗೇ ಸೆಕ್ಸ್, ಗೇ ಮ್ಯಾರೇಜ್ ಕಾಯ್ದೆಬದ್ಧಗೊಳಿಸಬೇಕೇ ಬೇಡವೇ ಎಂಬ ವಿಷಯದಲ್ಲಿ ಅಲ್ಲಿರುವಷ್ಟು ಗೊಂದಲ ಜಗತ್ತಿನ ಬೇರೆಲ್ಲೂ ಇರಲಾರದು. ಇವೆಲ್ಲ ಒಂದು ಭಾಗ. ಈ ಎಲ್ಲ ವಿಷಯಗಳಲ್ಲಿ ಭಾರತೀಯರಾದ ನಾವೇ ವಾಸಿ. ಆದರೆ ಒಂದು ಮಾತು ನೆನಪಿಟ್ಟುಕೊಳ್ಳಲೇಬೇಕು. ಆಡಳಿತದಲ್ಲಿ ಪಾರದರ್ಶಕತೆ, ದೇಶದ ಸ್ವಾಭಿಮಾನ ಕಾಪಾಡಿಕೊಳ್ಳುವ ಕುರಿತು ಅಮೆರಿಕನ್ನರಲ್ಲಿರುವ ಚಡಪಡಿಕೆ, ಮಾಡುವ ಕೆಲಸದಲ್ಲಿ ಅಚ್ಚುಕಟ್ಟುತನ, ದಕ್ಷತೆ, ಪರ್ಫೆಕ್ಷನ್, ಅವರಲ್ಲಿರುವ ದೂರದೃಷ್ಟಿ, ಸ್ವಾತಂತ್ರೃದ ಕುರಿತು ಇರುವ ಗೌರವ ಇತ್ಯಾದಿಗಳ ವಿಷಯದಲ್ಲಿ ನಾವು ಕಲಿಯುವುದು ಬಹಳಷ್ಟಿದೆ. ಅದನ್ನೆಲ್ಲ ಮುಂದಿನ ವಾರ ನೋಡೋಣ…

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top