ಕೈ ಬಲವರ್ಧನೆ ಪ್ರತಿಜ್ಞೆ

– ಕೇಡರ್ ಬೇಸ್ ಆಗಿ ಪಕ್ಷ ಕಟ್ಟಿ ಬಿಜೆಪಿಗೆ ಸಡ್ಡು ಹೊಡೆಯುವ ಪಣ
– ಕೆಪಿಸಿಸಿ ಸಾರಥಿಯಾಗಿ ಡಿಕೆಶಿ | ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ವೇದಿಕೆ.

ವಿಕ ಸುದ್ದಿಲೋಕ ಬೆಂಗಳೂರು.
ಕಾರ್ಯಕರ್ತರನ್ನೇ ಆಧಾರವಾಗಿಟ್ಟುಕೊಂಡು ಪಕ್ಷ ಕಟ್ಟುವ ಪ್ರತಿಜ್ಞೆಯೊಂದಿಗೆ ಡಿ.ಕೆ. ಶಿವಕುಮಾರ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೇರಿಸುವ ಅವರ ಪಣಕ್ಕೆ ಇಡೀ ಕಾಂಗ್ರೆಸ್ ಪಕ್ಷ ಒಮ್ಮತದ ಬೆಂಬಲದ ಭರವಸೆ ನೀಡಿದೆ.
ಕೆಪಿಸಿಸಿ ನೂತನ ಕಚೇರಿಯಲ್ಲಿ ಗುರುವಾರ ಡಿ.ಕೆ.ಶಿವಕುಮಾರ್ ಮತ್ತು ಮೂವರು ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ ಮತ್ತು ಸಲೀಂ ಅಹಮದ್ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮ ವಿಶಿಷ್ಟವಾಗಿ ನಡೆಯಿತು. ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರೆಲ್ಲರು ಭಾಗವಹಿಸಿದ್ದ ಸರಳ ಕಾರ್ಯಕ್ರಮ ಡಿಜಿಟಲ್ ತಂತ್ರಜ್ಞಾನದ ಮೂಲಕ ಇಡೀ ರಾಜ್ಯದ ಮೂಲೆಮೂಲೆಗಳನ್ನು ತಲುಪಿತು. ಕೊರೊನಾ ಕಾಲದಲ್ಲಿ ಪಕ್ಷ ಮತ್ತು ಕಾರ್ಯಕರ್ತರನ್ನು ಬೆಸೆಯುವ ಈ ತಂತ್ರ ಕಾಂಗ್ರೆಸ್‌ನ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ರಾಜ್ಯಾಕಾರ ಕಳೆದುಕೊಂಡ ಹಾಗೂ ಲೋಕಸಭಾ ಚುನಾವಣೆಯ ಬಳಿಕ ಉತ್ಸಾಹವಿಲ್ಲದೆ ಸೊರಗಿದ್ದ ಕಾಂಗ್ರೆಸ್‌ಗೆ ಈ ಕಾರ್ಯಕ್ರಮ ಹೊಸ ಚೈತನ್ಯ ತುಂಬಿತು. ಪಕ್ಷದ ಎಲ್ಲ ನಾಯಕರು ಬಣ, ಪ್ರತಿಷ್ಠೆಗಳನ್ನು ಮರೆತು ಒಂದಾಗಿದ್ದು ಗಮನ ಸೆಳೆಯಿತು.

ಉತ್ತಮ ಸಂದೇಶ
ಹೊಸ ಸಾರಥಿಗಳ ಘೋಷಣೆಯಾದ ಮೂರೂವರೆ ತಿಂಗಳ ಬಳಿಕ ಪ್ರತಿಜ್ಞಾ ವಿಧಿ ನಡೆದರೂ ಉತ್ಸಾಹ ತಗ್ಗಲಿಲ್ಲ. ನಾಯಕರ ಮುನಿಸು, ಕಾರ್ಯಕರ್ತರಲ್ಲಿ ಗೊಂದಲ ಕಾಣಲಿಲ್ಲ. ದೀಪ ಬೆಳಗಿಸಿ ವಂದೇ ಮಾತರಂ ಹಾಡಿ, ಸಂವಿಧಾನದ ಪೂರ್ವ ಪೀಠಿಕೆ ವಾಚನದ ಮೂಲಕ ವ್ಯವಸ್ಥಿತ ರೀತಿಯಲ್ಲಿ ಕಾರ್ಯಕ್ರಮ ನಡೆಸಿ, ಕಾರ್ಯಕರ್ತರಿಗೆ ಉತ್ತಮ ಸಂದೇಶ ನೀಡಲಾಯಿತು. ಸಾರಥಿಯಾಗಿ ಅಧಿಕಾರ ವಹಿಸಿಕೊಳ್ಳುವ ಮಹೂರ್ತಕ್ಕೆ ಸರಿಯಾಗಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಭರವಸೆ ತುಂಬಿದ್ದು ವಿಶೇಷವಾಗಿತ್ತು. ವೇದಿಕೆಯಲ್ಲೇ ರಾಷ್ಟ್ರೀಯ ನಾಯಕರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ತಾವು ಕಟ್ಟಕಡೆಯ ಕಾರ್ಯಕರ್ತನಿಂದ ಎಐಸಿಸಿ ವರಿಷ್ಠರ ವರೆಗೆ ಸಂಪರ್ಕ ಇರಿಸಿಕೊಂಡಿರುವ ಅಪ್ಪಟ ಕಾಂಗ್ರೆಸ್ಸಿಗ ಎಂಬುದನ್ನು ದೃಢೀಕರಿಸಿದರು. ನಾಯಕರ ಭಾಷಣವೂ ಕಾರ್ಯಕರ್ತರಿಗೆ ಉತ್ತಮ ಸಂದೇಶ ನೀಡಿತು. ಪರಸ್ಪರ ಹೊಗಳಿಕೆ ಇಲ್ಲವೇ ಪರೋಕ್ಷ ತೆಗಳಿಕೆ, ತಪ್ಪು, ಒಪ್ಪುಗಳ ವಿನಿಮಯದಂತಹ ಕಾಂಗ್ರೆಸ್ ಪಕ್ಷದ ಸಾಮಾನ್ಯ ವೇದಿಕೆ ಕಾರ್ಯಕ್ರಮಗಳಿಗಿಂತ ಇದು ಭಿನ್ನವಾಗಿತ್ತು. ರಾಜಕೀಯ ಎದುರಾಳಿ ಬಿಜೆಪಿ ವಿರುದ್ಧ ಅಬ್ಬರಿಸಿದ ನಾಯಕರು, ಶತ್ರುವಿನ ವಿರುದ್ಧ ಹೋರಾಟಕ್ಕಾಗಿ ತಮ್ಮೊಳಗಿನ ಭಿನ್ನಾಭಿಪ್ರಾಯ ಮರೆಯುವ ಮಾತನಾಡಿದರು.

ಪಕ್ಷವನ್ನು ಅಧಿಕಾರದಲ್ಲಿ ಪ್ರತಿಷ್ಠಾಪಿಸುವ ಗುರಿಗಾಗಿ ಕಾಂಗ್ರೆಸ್ ಪಾಲಿಗೆ ವಿಧಾನಸೌಧದ ಮೆಟ್ಟಿಲಿನ ಚಪ್ಪಡಿ ಕಲ್ಲಾಗುವೆ. ನನಗೆ ಗುಂಪು, ಜಾತಿ, ಧರ್ಮದ ಭೇದವಿಲ್ಲ. ಪಕ್ಷದ ಅಧ್ಯಕ್ಷ ಸ್ಥಾನದ ಭ್ರಮೆ ಇಲ್ಲ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಪಕ್ಷ ದ ಪೂಜೆ ಮುಂದುವರಿಸುವೆ.
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

30 ಲಕ್ಷ ಜನ ವೀಕ್ಷಣೆ
ಪ್ರತಿಜ್ಞಾ ಕಾರ್ಯಕ್ರಮವನ್ನು ಕನಿಷ್ಠ 30 ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್ ತಿಳಿಸಿದ್ದಾರೆ. 7,800 ಕಡೆಗಳಲ್ಲಿ ಡಿಜಿಟಲ್ ಲೈವ್ ನಡೆದಿದೆ. 14,700 ಮಂದಿ ಜೂಮ್‌ನಲ್ಲಿ ಲಾಗಿನ್ ಆಗಿದ್ದರು. ಫೇಸ್‌ಬುಕ್‌ ಲೈವ್, ಟ್ವಿಟರ್, ಟಿವಿ ಪ್ರಸಾರವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಬೆಂಗಳೂರು ನಗರವೊಂದರಲ್ಲೇ 5 ಲಕ್ಷ ಮಂದಿ ಕಾರ್ಯಕ್ರಮ ನೋಡಿದ್ದಾರೆ.

ಶಿವಕುಮಾರ್ ಬಲ
– ಬಿಜೆಪಿ ಮಾದರಿಯಲ್ಲಿ ಕೇಡರ್ ಬೇಸ್ ಆಗಿ ಪಕ್ಷ ಕಟ್ಟಲು ಮುಂದಾಗಿರುವುದು ಕಾಂಗ್ರೆಸ್‌ಗೆ ಶುಭ ಸೂಚನೆ
– ಆಕ್ರಮಣಕಾರಿ ನಾಯಕನಾಗಿರುವುದರಿಂದ ಅಧಿಕಾರಾರೂಢ ಬಿಜೆಪಿಗೆ ಪೈಪೋಟಿ ಎದುರಾಗಬಹುದು
– ಹೈಕಮಾಂಡ್‌ನಿಂದ ಪೂರ್ಣ ಬೆಂಬಲ ಇರುವುದರಿಂದ ಯಾವುದೇ ಸುಧಾರಣಾವಾದಿ ಚಿಂತನೆ ಜಾರಿಗೆ ತರಬಹುದು.
– ಆಡಳಿತದಲ್ಲಿ ಹಲವು ಗೊಂದಲ, ಕೊರೊನಾ ಸಂಕಟ, ಹಣದ ಸಮಸ್ಯೆ ಇರುವುದರಿಂದ ಡಿಕೆಶಿಯನ್ನು ಎದುರಿಸುವುದು ಸ್ವಲ್ಪ ಕಷ್ಟ

ಡಿಕೆಶಿಗಿರುವ ಕಷ್ಟ
– ಕಾಂಗ್ರೆಸ್ ನಾಯಕರನ್ನು ಸರಿದೂಗಿಸಿಕೊಂಡು ಹೋಗುವುದು ಸುಲಭದ ಕಾರ್ಯವಲ್ಲ
– ಡಿಕೆಶಿ ಹಲವು ಕಾನೂನು ತಡೆಗಳನ್ನು ಎದುರಿಸುತ್ತಿರುವುದು ವೇಗಕ್ಕೆ ಹಿನ್ನಡೆಯಾಗಬಹುದು
– ಹೆಚ್ಚಿನ ನಾಯಕರು ಡಿಕೆಶಿ ಆಧಿಪತ್ಯದಡಿ ಕೆಲಸ ಮಾಡಲು ಹಿಂದೇಟು ಹಾಕಬಹುದು
– ತಳಮಟ್ಟದಿಂದ ಪಕ್ಷ ಕಟ್ಟುವ ಕೆಲಸವನ್ನು ಡಿ ಕೆ ಶಿವಕುಮಾರ್ ಏಕಾಂಗಿಯಾಗಿ ಮಾಡಬೇಕಾದೀತು

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top