ಕಾಯಿಲೆಯೊಂದು ದರ್ಶನ ಅದು ಅಂತರಂಗದ ಪಯಣ

– ಹರೀಶ್‌ ಕೇರ.

ಈ ಕಾಯಿಲೆಯೆಂಬ ದಾರಿಯಲ್ಲಿ ನಮಗಿಂತ ಮೊದಲು ಇನ್ನೂ ಬೇಕಾದಷ್ಟು ಮಂದಿ ಹಾದು ಹೋಗಿದ್ದಾರೆ ಎಂಬುದು ನಮಗೆ ಗೊತ್ತಿರುತ್ತದೆ. ಆದರೆ ಆ ಕಾಯಿಲೆಯ ಹಾದಿಯನ್ನು ನಾವೇ ನಡೆಯುತ್ತಿರುವಾಗ ಮಾತ್ರ ಅದು ನಮ್ಮದೇ ಆಗಿರುತ್ತದೆ. ಆಗ ಅವರಾರ‍ಯರ ಯಾತನೆ, ಒಂಟಿತನ ಇತ್ಯಾದಿಗಳೂ ನಮ್ಮ ನೆರವಿಗೆ ಬರುವುದಿಲ್ಲ- ಎಂದು ಬರೆಯುತ್ತಾಳೆ ವರ್ಜೀನಿಯಾ ವೂಲ್ಫ್‌. ಹತ್ತೊಂಬತ್ತನೇ ಶತಮಾನದ ಮೊದಲರ್ಧದಲ್ಲಿ ಬದುಕಿದ್ದ ಬ್ರಿಟನ್‌ನ ಲೇಖಕಿ. ಈಕೆ ಕಾದಂಬರಿಗಾರ್ತಿಯಾಗಿದ್ದಂತೆ ಮೊದಮೊದಲ ಸ್ತ್ರೀವಾದಿ ಚಿಂತಕಿಯೂ ಆಗಿದ್ದಳು. ‘ಆನ್‌ ಬೀಯಿಂಗ್‌ ಇಲ್‌’ (ಕಾಯಿಲೆ ಬೀಳುವುದರ ಕುರಿತು) ಎಂಬ ಈಕೆಯ ಸುದೀರ್ಘ ಪ್ರಬಂಧ ತುಂಬ ವಿಶಿಷ್ಟ. ಮನುಷ್ಯನ ಕಾಯಿಲೆಪೀಡಿತ ಸ್ಥಿತಿಯಲ್ಲಿ ಆತ ನಡೆಸುವ ಅಂತರಂಗದ ಪಯಣ ಹಾಗೂ ಸಮಾಜದ ಎದುರು ತನ್ನನ್ನು ಆತ ನೋಡಿಕೊಳ್ಳುವ ಬಗೆಯನ್ನು ಆಕೆ ಇದರಲ್ಲಿ ಬಗೆದಿದ್ದಾಳೆ.
‘ಕಾಯಿಲೆ’- ಎಂಬುದು ‘ಸಾವು’ ಎಂಬುದರ ನಂತರ ಮನುಷ್ಯನನ್ನು ಬಹಳ ಕಾಡಿದ ಪದ ಇರಬಹುದು. ಕಾಯಿಲೆಗಳನ್ನು ಗೆದ್ದರೆ ಸಾವನ್ನು ಗೆದ್ದಂತೆ ಎಂದು ಮನುಷ್ಯ ಭಾವಿಸುತ್ತ ಬಂದಿರುವುದಕ್ಕೆ ನಮ್ಮಲ್ಲಿ ದಾಖಲೆಗಳಿವೆ. ಒಂದು ಕಾಲದಲ್ಲಿ ಮಾರಣಾಂತಿಕ ಎಂದು ಆತ ಭಾವಿಸುತ್ತ ಇದ್ದ ಕಾಯಿಲೆಗಳಿಗೆಲ್ಲ ಮದ್ದು ಕಂಡುಹಿಡಿದ ಬಳಿಕ ಒಂದು ಮಟ್ಟಿಗೆ ಸಾವನ್ನು ಗೆದ್ದೆನೆಂದೇ ತಿಳಿದಿದ್ದ- ಏಡ್ಸ್‌, ಪ್ಲೇಗ್‌, ಕ್ಷಯ, ಮಲೇರಿಯಾ, ನ್ಯುಮೋನಿಯಾ ಇತ್ಯಾದಿ. ಕ್ಯಾನ್ಸರ್‌ ಮನುಷ್ಯನನ್ನು ಅರ್ಧಂಬರ್ಧ ಸೋಲಿಸಿ ಗೆಲ್ಲಿಸಿತು. ಕೋವಿಡ್‌ ಇನ್ನೂ ಆಟವಾಡಿಸುತ್ತಾ ಇದೆ. ಕಾಯಿಲೆಗೆ ಔಷಧ ಅಥವಾ ಲಸಿಕೆ ಕಂಡುಹಿಡಿದ ಕೂಡಲೇ ಅದನ್ನು ಪೂರ್ತಿ ಗೆದ್ದಂತಾಗುವುದಿಲ್ಲ. ಅದು ಕಾಡಿ ಬಿಟ್ಟ ವ್ಯಕ್ತಿಗಳು ನಮ್ಮ ನಿಮ್ಮ ನಡುವೆ ಇದ್ದೇ ಇರುತ್ತಾರೆ. ಕಾಯಿಲೆಪೀಡಿತ ದಿನಗಳ ಅನುಭವದ ಬಗ್ಗೆ ಅವರು ಮಾತಾಡುತ್ತಾ ಅದನ್ನು ಜೀವಂತವಾಗಿ ಇಡಬಹುದು. ಅಥವಾ ಆ ಸೋಂಕು ಉಳಿಸಿಹೋದ ಸಾಮಾಜಿಕ- ಆರ್ಥಿಕ- ಜೀನ್‌ ಬದಲಾವಣೆಯ ಗಾಯಗಳು ನಮ್ಮಲ್ಲಿ ಉಳಿದೇ ಇರಬಹುದು. ಪ್ರತಿಯೊಂದು ರೋಗವೂ ಮನುಕುಲದ ಮೇಲೆ ತನ್ನ ಗುರುತು ಬಿಟ್ಟಿರುತ್ತದೆ. ಹಾಗೇ ಪ್ರತಿಯೊಬ್ಬ ಮನುಷ್ಯನೂ ತನ್ನ ಮೈಮೇಲೆ ಒಂದಲ್ಲ ಒಂದು ರೀತಿಯ ರೋಗದ ಯಾತನೆಯ ಮಚ್ಚೆಯನ್ನು ಹೊತ್ತೇ ಇರುತ್ತಾನೆ.
ಪ್ರತಿಯೊಬ್ಬ ಮನುಷ್ಯನೂ ಒಂದು ಸಾಮಾನ್ಯ ಎಳೆಯಿಂದ ಬಂಧಿತನಾಗಿರುತ್ತಾನೆ; ಅದೇ ಅಗತ್ಯಗಳು, ಅದೇ ಭಯಗಳು ಎಲ್ಲರನ್ನೂ ಕಾಡುತ್ತಿರುತ್ತವೆ; ನಮ್ಮ ಅನುಭವಗಳು ಎಷ್ಟೇ ವಿಚಿತ್ರವಾಗಿದ್ದರೂ ಈ ಹಿಂದೆ ಯಾರೋ ಅದನ್ನು ಅನುಭವಿಸಿಯೇ ಇರುತ್ತಾರೆ; ಮುಂದೆಯೂ ಅನುಭವಿಸಲಿದ್ದಾರೆ; ನಾವೆಲ್ಲ ಒಂದೇ- ಎನ್ನುವ ಭಾವನೆಗಳೆಲ್ಲಾ ಭ್ರಮೆ ಎನ್ನುವುದು ಕಾಯಿಲೆ ಬಿದ್ದಾಗ ನಮಗೆ ಅರಿವಾಗುತ್ತದೆ. ನಾವು ಇನ್ನೊಬ್ಬರ ಆತ್ಮವನ್ನು ಅರಿತುಕೊಳ್ಳುವುದು ಇರಲಿ, ನಮ್ಮ ಆತ್ಮವನ್ನೇ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುವುದು ಗೊತ್ತಾಗುತ್ತದೆ. ಎಲ್ಲೆಡೆಯೂ ಮನುಷ್ಯರು ಕೈ ಕೈ ಹಿಡಿದು ನಡೆದಿಲ್ಲ. ಯಾರೂ ನಡೆಯದ ನಿಗೂಢ ಅರಣ್ಯಗಳು ಇವೆ; ಹಕ್ಕಿ ಹಾಡಿನ ಸದ್ದಿರದ ಹಿಮನೆಲಗಳಿವೆ. ಅಲ್ಲೆಲ್ಲ ನಾವು ಒಂಟಿಯಾಗಿಯೇ ಓಡಾಡಬೇಕು. ಹಾಗಿರುವುದೇ ಲೇಸು. ಯಾವಾಗಲೂ ಸಹಾನುಭೂತಿ ಪಡೆಯುವುದು, ಯಾವಾಗಲೂ ಜೊತೆಗಿರುವುದು ಅಸಹನೀಯ ಎಂದು ಬರೆಯುತ್ತಾಳೆ ವೂಲ್ಫ್‌.
ಕಾಯಿಲೆಯ ಯಾತನೆಯನ್ನು ಸರಿಯಾಗಿ ವರ್ಣಿಸುವುದಕ್ಕೆ ಬೇಕಾದ ಪದಗಳನ್ನು ನಮ್ಮ ಭಾಷೆ ಇನ್ನೂ ಬೆಳೆಸಿಕೊಂಡಿಲ್ಲ. ಹ್ಯಾಮ್ಲೆಟ್‌ ಅಥವಾ ಕಿಂಗ್‌ ಲಿಯರ್‌ನ ದುರಂತವನ್ನು ಕವಿಗಳು ವರ್ಣಿಸಿರಬಹುದು. ಆದರೆ ತೀವ್ರವಾಗಿ ಕಾಡುವ ತಲೆನೋವು, ಚಳಿನಡುಕ, ನೂರನಾಲ್ಕು ಡಿಗ್ರಿ ಜ್ವರ- ಇದನ್ನೆಲ್ಲ ಹೇಗೆ ಬಣ್ಣಿಸುತ್ತೀರಿ. ಅದಕ್ಕೆಲ್ಲ ಹೆಚ್ಚು ಆದಿಮವಾದ ಬಿಚ್ಚು ಪದಗಳೇ ಬೇಕು. ಹಾಗೇ ಮಾನಸಿಕವಾಗಿ ನಾವು ಮಾನವತೆಯ- ನಾಗರಿಕತೆಯ ತೊಟ್ಟಿಲಲ್ಲಿ ಇದ್ದೇವೆ ಎಂದೆಲ್ಲ ಭಾವಿಸಿಕೊಂಡಿದ್ದೇವೆ. ಆದರೆ ಕಾಯಿಲೆ ನಮ್ಮ ಅಸ್ತಿತ್ವದ, ನಾವು ಸಮಾಜಕ್ಕೆ ಸೇರಿದವರೆಂಬ ಭಾವನೆಯನ್ನೇ ನಿರಾಕರಿಸುತ್ತದೆ. ಇದು ಭಯಂಕರವಾದುದು ಎನ್ನುತ್ತಾಳೆ ಆಕೆ.
ಕಾಯಿಲೆ ಎಷ್ಟು ಸಾಮಾನ್ಯದ್ದೇ ಆಗಿರಲಿ, ಅದು ನಮ್ಮಲ್ಲಿ ಎಂಥದೇ ಆಧ್ಯಾತ್ಮಿಕ ಬದಲಾವಣೆಯನ್ನೇ ತರಲಿ, ಎಷ್ಟೇ ಪರಮಾದ್ಭುತ ಬದಲಾವಣೆಯನ್ನೇ ತರಲಿ, ಅದು ನಮ್ಮನ್ನು ಅಂತರಂಗದ ಅಪರಿಚಿತ ತಾಣಗಳಲ್ಲಿ ಅಲೆದಾಡಿಸುತ್ತದೆ. ಆಗ ನಾವು ಸಾಹಿತ್ಯದಲ್ಲಿ ಪ್ರೀತಿ, ಯುದ್ಧ ಅಥವಾ ಮತ್ಸರದಷ್ಟು ಸ್ಥಾನವನ್ನು ಕಾಯಿಲೆಯ ಯಾತನೆ ಪಡೆದಿಲ್ಲ ಎಂಬುದನ್ನು ಕಾಣುತ್ತೇವೆ. ಸಾಹಿತ್ಯ ಯಾವತ್ತೂ ಮನಸ್ಸಿನತ್ತ ತನ್ನ ಗಮನ ನೆಟ್ಟಿದೆ. ದೇಹವೆಂಬುದು ಅದರ ಪಾಲಿಗೆ ಮನಸ್ಸನ್ನು ಹೊತ್ತ ಖಾಲಿ ಗಾಜಿನ ಬುರುಡೆ ಅಷ್ಟೇ. ದೊಡ್ಡ ದೊಡ್ಡ ತತ್ವಜ್ಞಾನಿಗಳು, ಕವಿಗಳು ಯಾವತ್ತೂ ಮನುಷ್ಯನ ಮನಸ್ಸು ಮತ್ತು ಅದು ನಾಗರಿಕತೆಯನ್ನು ರೂಪಿಸಿದ ಕತೆಯನ್ನು ಬರೆಯುತ್ತಾರೆ. ಆದರೆ ಜ್ವರದ ಎದುರು ಅಸಹಾಯಕನಾಗಿ ಏಕಾಂಗಿಯಾದ ಮನುಷ್ಯನ ಖಾಲಿತನವನ್ನು ಅವರು ಬಗೆಯುವುದೇ ಇಲ್ಲ ಎಂದು ವೂಲ್ಫ್‌ ಆರೋಪಿಸುತ್ತಾಳೆ.
ಕೊರೊನಾ ಸೋಂಕು ತಂದಿಟ್ಟಿರುವ ನೋವಿನ ದಿನಗಳಲ್ಲಿ ನಾವು ವೂಲ್ಫ್‌ ಕಂಡ ಕಾಯಿಲೆಯಂತೆ ಬೇರೆಯದೇ ಒಂದು ಪ್ರಬಂಧವನ್ನು ಈ ಕಾಯಿಲೆಯ ಯಾತನೆಯ ಬಗ್ಗೆ ಬರೆಯಬೇಕಾಗಿದೆ. ಅದು ಬರೀ ದೇಹವನ್ನು ಪೀಡಿಸುತ್ತಿಲ್ಲ; ಬರಿಯ ರೋಗಿಯನ್ನಾಗಲೀ, ಆತನ ಕುಟುಂಬದವರನ್ನಷ್ಟೇ ಆಗಲಿ ಕಾಡಿಸುತ್ತಿಲ್ಲ; ಇಡೀ ಸಮಾಜವನ್ನೇ ನೋವಿನ ಇಕ್ಕುಳದಲ್ಲಿ ಹಿಡಿದು ತಿರುಪುತ್ತಿದೆ. ಆದರೆ ಸಮಾಜದ ನೋವಿನಂತೆ ವ್ಯಕ್ತಿಯ ನೋವು ಕೂಡ ನಿಜವೇ ಆಗಿದೆ. ಬೇರೆ ಯಾವುದೇ ರೋಗಿಯ ಜೊತೆಗೆ ಅವನ ಬಂಧುಗಳು ಆರೈಕೆ ಮಾಡಲು ಜೊತೆಗಿರಬಹುದು; ಆದರೆ ಕೋವಿಡ್‌ ಸೋಂಕಿಗೆ ತುತ್ತಾದ ವ್ಯಕ್ತಿಯ ಜೊತೆಗೆ ಅವನ ಬಂಧುಗಳು ಕೂಡ ಇರುವಂತಿಲ್ಲ. ಆತ ಕಣ್ಣು ಬಿಟ್ಟರೆ ಅಪರಿಚಿತ ಮುಖಗಳನ್ನಷ್ಟೇ ಕಾಣಬೇಕು. ಅಲ್ಲಿಗೆ ಅವನ/ಳ ಒಂಟಿತನ ಇನ್ನಷ್ಟು ಆಳವಾಗುತ್ತದೆ. ಕೋವಿಡ್‌ನಿಂದ ಸತ್ತರಂತೂ ಮಣ್ಣು ಮಾಡುವ ಕ್ರಿಯೆಗೂ ಕುಟುಂಬದವರಿಗೆ ಅವಕಾಶವಿಲ್ಲ. ಅಲ್ಲಿಗೆ ಕಾಯಿಲೆಪೀಡಿತನ ಸಾವು ಕೂಡ ಅನಾಥ.
ಆದರೆ ಇದರ ಜೊತೆಗೇ ಸುಂದರವಾದ ಮತ್ತು ಹೆಚ್ಚು ಧ್ಯಾನಶೀಲವಾದ ಇನ್ನೊಂದು ಬಗೆಯನ್ನೂ ಕಾಯಿಲೆ ಉಂಟುಮಾಡುತ್ತದೆ- ನಮ್ಮ ಜೀವನ ಮತ್ತು ಸಾಮಾಜಿಕ ಒತ್ತಡಗಳಿಂದಾಗಿ ನಾವು ಮರೆತ ನಮ್ಮ ದೇಹದ ಕುರಿತ ಅತಿ ಸಣ್ಣ ವಿವರಗಳಿಗೂ ತೆರೆದುಕೊಳ್ಳುತ್ತ ಜೀವಂತವಾಗಿ ಸ್ಪಂದಿಸುತ್ತ ಹೋಗುತ್ತೇವೆ. ಜ್ವರ ಬಂದು ಬಿಟ್ಟ ಗಳಿಗೆಯನ್ನೇ ಗಮನಿಸಿ- ನಾಲಿಗೆಯ ರುಚಿ ಮರಳುವ ಕ್ಷಣಕ್ಕಾಗಿ ನಾವು ಕಾತರಿಸುತ್ತೇವೆ. ಬಿಸಿಲಿನಲ್ಲಿ ನಿಲ್ಲುವಂತೆ ಚರ್ಮ ಹೇಳುತ್ತಿರುತ್ತದೆ. ನಮ್ಮ ದೇಹದ ಕಣ್ಣಿಗೇ ಕಾಣದ ಒಂದು ಜೀವಕೋಶ ಕೂಡ ನಮ್ಮನ್ನು ಕಾಪಾಡಬಹುದು ಅಥವಾ ನಾಶ ಮಾಡಬಹುದು ಎಂಬ ಅರಿವಿನಲ್ಲಿ ನಾವು ಹೊಸದಾಗುತ್ತ ಹೋಗುತ್ತೇವೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top