ಚೀನಾಗೆ ನೇರ ವಾರ್ನಿಂಗ್

– ಲಡಾಖ್ ಮುಂಚೂಣಿ ಸೇನಾ ನೆಲೆಗೆ ಮೋದಿ ಭೇಟಿ | ಸೈನಿಕರಿಗೆ ಹುರುಪು

– ಆಕ್ರಮಣದ ಬುದ್ಧಿ ಬಿಡದಿದ್ದರೆ ಸರ್ವನಾಶವಾಗ್ತೀರಿ: ಮೋದಿ ಕಟು ಎಚ್ಚರಿಕೆ.

ಲೆಹ್/ಹೊಸದಿಲ್ಲಿ: ಪೂರ್ವ ಲಡಾಖ್ ಸಂಘರ್ಷದ ಬಳಿಕ ಭಾರತದಿಂದ ಒಂದರ ನಂತರ ಒಂದು ಪೆಟ್ಟು ತಿನ್ನುತ್ತಿರುವ ಚೀನಾಗೆ ಶುಕ್ರವಾರ ಮತ್ತೊಂದು ಆಘಾತ ತಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪೂರ್ವ ಲಡಾಖ್‌ನ ಲೆಹ್‌ನಲ್ಲಿರುವ ಮುಂಚೂಣಿ ಸೇನಾ ನೆಲೆಗೆ ದಿಢೀರ್ ಭೇಟಿ ನೀಡುವ ಮೂಲಕ ನೆರೆ ರಾಷ್ಟ್ರಕ್ಕೆ ನೇರ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಚೀನಾ ಜತೆ ಗಡಿ ಹಂಚಿಕೊಂಡಿರುವ ಲಡಾಖ್ ವಲಯದ ಪರ್ವತ ಪ್ರದೇಶವಾದ ನಿಮುವಿನಲ್ಲಿ ಸೇನಾ ಸನ್ನದ್ಧತೆಯನ್ನು ಪರಿಶೀಲಿಸಿದ ಅವರು, ಭಾರತದ ಭೂಭಾಗದ ಮೇಲೆ ಹೊಂಚು ಹಾಕಿರುವ ಚೀನಾಕ್ಕೆ ‘ಆಕ್ರಮಣಕಾರಿ’ ಬುದ್ಧಿ ಬಿಡದಿದ್ದರೆ ‘ಸರ್ವನಾಶ’ದ ಎಚ್ಚರಿಕೆ ನೀಡಿದರು. ಯೋಧರನ್ನು ಉದ್ದೇಶಿಸಿ 26 ನಿಮಿಷಗಳ ಕಾಲ ಮಾತಧಿನಾಡಿದ ಅವರು, ಒಂದೆಡೆ ಸೈನಿಕರ ಧೈರ್ಯ ಸಾಹಸಗಳನ್ನು ಬಣ್ಣಿಸುತ್ತಾ ಅವರನ್ನು ಹುರಿದುಂಬಿಸುತ್ತಲೇ ಪರೋಕ್ಷವಾಗಿ ಡ್ರ್ಯಾಗನ್ ರಾಷ್ಟ್ರಕ್ಕೆ ಕಠಿಣ ಸಂದೇಶ ರವಾನಿಸಿದರು. ‘‘ಜಗತ್ತಿನಲ್ಲಿ ವಿಸ್ತರಣಾವಾದಿಗಳ ಕಾಲ ಮುಗಿದಿದೆ. ವಿಸ್ತರಣಾವಾದಿಗಳು ನಾಶವಾಗುತ್ತಾರೆ, ಇಲ್ಲವೇ ಅನಿವಾರ್ಯವಾಗಿ ಬಾಲ ಮುದುರಿಕೊಂಡು ಓಡಿ ಹೋಗುತ್ತಾರೆ. ಇತಿಹಾಸವೇ ಇದನ್ನು ಸಾರಿ ಹೇಳಿದೆ. ಇದು ಪ್ರಗತಿಯ ಯುಗ. ಪ್ರಗತಿ ಸಾಧಿಸಿದರೆ ಮಾತ್ರ ಎಲ್ಲಾ ದೇಶಗಳಿಗೂ ಭವಿಷ್ಯ. ವಿಸ್ತರಣೆಯ ಯುಗದಲ್ಲಿ ಮಾನವೀಯತೆ ಸಾಕಷ್ಟು ಸಂಕಷ್ಟ್ಟಗಳನ್ನು ಅನುಭವಿಸಿತ್ತು. ಆದರೆ, ಈಗ ಆ ಪರಿಸ್ಥಿತಿ ಇಲ್ಲ,’’ ಎಂದರು. ‘‘ಪ್ರತಿಯೊಂದು ಸಂಕಷ್ಟದ ಬಳಿಕವೂ ಭಾರತ ಬಲಿಷ್ಠವಾಗಿ ಹೊರಹೊಮ್ಮಿದೆ. ದುರ್ಬಲರು ಶಾಂತಿ ಪ್ರಕ್ರಿಯೆ ಆರಂಭಿಸಲು ಸಾಧ್ಯವಿಲ್ಲ. ಶಾಂತಿ ಸ್ಥಾಪಿಸಲು ಧೈರ್ಯವೂ ಅಗತ್ಯ. ವಿಶ್ವ ಯುದ್ಧಗಳಿರಲಿ ಅಥವಾ ಶಾಂತಿ ಇರಲಿ; ಅಗತ್ಯ ಎದುರಾದಾಗ ನಮ್ಮ ಧೈರ್ಯವು ಶಾಂತಿ ಸ್ಥಾಪನೆಯಲ್ಲಿ ಜಯ ಸಾಧಿಸಿದ್ದನ್ನು ಇಡೀ ಜಗತ್ತು ನೋಡಿದೆ,’’ ಎಂದು ಭಾರತದ ಶಕ್ತಿ ಸಾಮರ್ಥ್ಯವನ್ನು ಅವರು ಬಣ್ಣಿಸಿದರು. ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದ ಮೋದಿ ಅವರು, ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳಿಗೆ ಸಾಂತ್ವನ ಹೇಳಿದರು. 
– ಗಲ್ವಾನ್ ಸಂಘರ್ಷದ ಬಳಿಕ ವಿವಾದಿತ ಗಡಿಗೆ ಪ್ರಧಾನಿ ಚೊಚ್ಚಲ ಭೇಟಿ

– ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಕೊನೆ ಕ್ಷಣದಲ್ಲಿ ರದ್ದು

– ಸಶಸ್ತ್ರ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಭೂಸೇನಾ ಮುಖ್ಯಸ್ಥ ನರವಣೆ ಸಾಥ್

– ಸಮುದ್ರ ಮಟ್ಟದಿಂದ 11,000 ಅಡಿ ಎತ್ತರದಲ್ಲಿರುವ ನಿಮು ಪ್ರದೇಶದಲ್ಲಿ ಭೇಟಿ

ಮೋದಿ ಲಡಾಖ್ ಭೇಟಿಯಿಂದ ಯೋಧರ ಆತ್ಮಸ್ಥೈರ್ಯ ಹೆಚ್ಚಿದೆ.-ರಾಜನಾಥ್ ಸಿಂಗ್ , ರಕ್ಷಣಾ ಸಚಿವ.

– ಯೋಧರೆ…ಭಾರತ ಮಾತೆಯ ವಿರೋಧಿಗಳಿಗೆ ನಿಮ್ಮ ತಾಕತ್ತು, ಕೋಪದ ದರ್ಶನವಾಗಿದೆ

– ನಿಮ್ಮ ಶೌರ್ಯ, ಸಾಹಸ ಪ್ರದರ್ಶನದಿಂದ ಭಾರತದ ತಾಕತ್ತು ಏನೆಂಬುದು ಇಡೀ ವಿಶ್ವಕ್ಕೆ ಗೊತ್ತಾಗಿದೆ

– ನಿಮ್ಮ ಯಶೋಗಾಥೆ ದೇಶದಲ್ಲಿಮನೆ ಮನೆ ಮಾತಾಗಿ ಎಲ್ಲೆಡೆ ಪ್ರತಿಧ್ವನಿಸುತ್ತಿದೆ

 – ಸೈನಿಕರು ತಾಯ್ನಾಡಿನ ಗುರಾಣಿ, ನಿಮ್ಮ ಧೈರ್ಯ ಈಗ ನೀವೆಲ್ಲರೂ ನಿಂತಿರುವ ಎತ್ತರಕ್ಕಿಂತ ಹೆಚ್ಚು

– ನಿಮ್ಮ ತೋಳುಗಳು ನಿಮ್ಮನ್ನು ಸುತ್ತುವರಿದಿರುವ ಪರ್ವತಗಳಷ್ಟೇ ಬಲಿಷ್ಠ

– ನಿಮ್ಮ ಆತ್ಮವಿಶ್ವಾಸ, ನಿರ್ಣಯ ಮತ್ತು ನಂಬಿಕೆ ಇಲ್ಲಿನ ಶಿಖರಗಳಂತೆ ಸುಸ್ಥಿರ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top