ದಿಕ್ಕೆಟ್ಟ ವ್ಯವಸ್ಥೆಯಲ್ಲಿ ಒಬ್ಬ ಸರ್ವಾಧಿಕಾರಿ ಸಾಕೇ?

ಯಾವುದರ ಮೇಲೂ ಲಂಗುಲಗಾಮಿಲ್ಲ ಎಂದು ಟೀಕಿಸುವ ನಾವು, ಹಳಿತಪ್ಪಿ ಯಾವುದೋ ಕಾಲವಾಗಿರುವ ವ್ಯವಸ್ಥೆಯನ್ನು ಸರಿದಾರಿಗೆ ತರುವಾಗ ಕೆಲ ನಿಷ್ಠುರ ನಡೆ ಅನಿವಾರ್ಯ ಎಂಬುದನ್ನು ಯಾಕೆ ಅರ್ಥಮಾಡಿಕೊಳ್ಳುವುದಿಲ್ಲ?

dv-sadananda-gowda

ಆಗಸ್ಟ್ 15ರ ಸ್ವಾತಂತ್ರೃ ದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಸುದೀರ್ಘ ಭಾಷಣವನ್ನು ದೇಶದ ಕೋಟ್ಯಂತರ ಜನರು ಟಿವಿಗಳಲ್ಲಿ ನೋಡಿದ್ದಾರೆ. ಇಡೀ ಭಾಷಣದಲ್ಲಿ ಎಲ್ಲಕ್ಕಿಂತ ಹೆಚ್ಚು ಇಷ್ಟವಾದ ಸಂಗತಿ- ದೇಶದ ಎಲ್ಲ ಅಪ್ಪ ಅಮ್ಮಂದಿರಿಗೆ ಮೋದಿ ಹೇಳಿದ ಕಿವಿಮಾತು. ಅದನ್ನು ಈಗಲೂ ಮೆಲುಕು ಹಾಕುವವರಿದ್ದಾರೆ. ಅತ್ಯಾಚಾರ ಪ್ರಕರಣಗಳು ಆತಂಕ ಹುಟ್ಟಿಸಿರುವ ಕಾರಣ ಪ್ರಧಾನಿ ಆ ಮಾತನ್ನಾಡಿದ್ದರು. “ಎಲ್ಲಿ ಹೋಗಿದ್ದೆ, ಯಾಕಿಷ್ಟು ತಡವಾಗಿ ಬಂದೆ, ಇಷ್ಟು ಹೊತ್ತಿನವರೆಗೆ ಹೊರಗೆ ಏನು ಕೆಲಸ ಇತ್ತು ನಿನಗೆ ಅಂತೆಲ್ಲ ಹೆಣ್ಣುಮಗಳಿಗೆ ಕೇಳುವ ಪ್ರಶ್ನೆಯನ್ನೇ ಬೆಳೆದು ನಿಂತ ನಿಮ್ಮ ಮಗನಿಗೂ ಕೇಳಿ, ಶಿಸ್ತಿನ ವಿಷಯದಲ್ಲಿ ಹೆಣ್ಣು ಗಂಡೆಂಬ ಭೇದ ಬೇಡ” ಅಂತ ಅವರು ಹೇಳಿದ್ದರು. ರೈಲ್ವೆ ಸಚಿವ ಸದಾನಂದ ಗೌಡರ ಪುತ್ರನ ರಾದ್ಧಾಂತ ನೋಡಿದ ಮೇಲೆ ಮೋದಿ ಹೇಳಿದ ಮಾತು ಎಲ್ಲರಿಗೂ ಇನ್ನೂ ಚೆನ್ನಾಗಿ ಮನವರಿಕೆ ಆಗಿರಲು ಸಾಕು.

ಪ್ರಶ್ನೆ ಏನೆಂದರೆ, ದೇಶದ ಜನರಿಗೆ ಬುದ್ಧಿಹೇಳುವ ಮೋದಿ ತಮ್ಮ ಮನೆಯನ್ನು ಹೇಗೆ ನೋಡಿಕೊಳ್ಳುತ್ತಿದ್ದಾರಪ್ಪ ಅನ್ನುವುದು. ತಮ್ಮ ಮನೆ ಅಂದರೆ ಬೇರೇನೂ ಅಲ್ಲ. ಬಿಜೆಪಿ ಸರ್ಕಾರ. ಮಂತ್ರಿಮಂಡಲದ ಸಹೋದ್ಯೋಗಿಗಳು, ಕೇಂದ್ರ ಸರ್ಕಾರದ ಅಧಿಕಾರಿಗಳು. ಮೋದಿ ಸಂಸಾರ ಅಂದರೆ ಇಷ್ಟೆ. ಆ ಕುರಿತು ಕುತೂಹಲ ಇರುವವರಿಗಾಗಿ ಇಲ್ಲೊಂದಿಷ್ಟು ಕುತೂಹಲಕರ ಮಾಹಿತಿಗಳಿವೆ.

ಪ್ರಧಾನಿ ಮೋದಿ ಆಡಳಿತ ವ್ಯವಸ್ಥೆಯನ್ನು ಹೇಗೆ ಹದ್ದುಬಸ್ತಿನಲ್ಲಿಡುತ್ತಿದ್ದಾರೆ ಎಂಬುದರ ಕುರಿತು ದೆಹಲಿ ರಾಜಕೀಯದ ಪಡಸಾಲೆಯಲ್ಲಿ ದಿನಕ್ಕೊಂದು ಮಾತು ಕೇಳಿಬರುತ್ತಿದೆ. ದೇಶದ ಪ್ರಮುಖ ಮಾಧ್ಯಮಗಳಲ್ಲೂ ಆ ಬಗ್ಗೆ ಅಲ್ಲಷ್ಟು ಇಲ್ಲಷ್ಟು ವರದಿಯಾಗುತ್ತಿದೆ.

ದಿನಕಳೆದ ಹಾಗೆ ಕೆಲ ಕೇಂದ್ರ ಮಂತ್ರಿಗಳು ಕೂತಲ್ಲಿ ನಿಂತಲ್ಲಿ ಮೋದಿಯನ್ನು ನೆನೆಸಿಕೊಂಡು ಬೆವರುತ್ತಿದ್ದಾರಂತೆ. ತಾವೆಲ್ಲಿದ್ದೇವೆ, ಏನು ಮಾಡುತ್ತಿದ್ದೇವೆಂಬುದನ್ನು  ಬಿಗ್ ಬಾಸ್ ಟ್ರಾೃಕ್ ಮಾಡುತ್ತಿದ್ದಾರೆ ಅಂತ ಭಯ ಬೀಳುತ್ತಿದ್ದಾರಂತೆ. ಇದಕ್ಕೆ ನಿದರ್ಶನವೆಂಬಂತೆ ಇತ್ತೀಚೆಗಿನ ಒಂದಷ್ಟು ಘಟನೆಗಳು ಹೀಗಿವೆ:

ಗೃಹಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಸ್ವಕ್ಷೇತ್ರದಲ್ಲಿ ಏರ್ಪಾಟಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಲು ಗೌಹಾತಿಗೆ ಹೊರಟರು. ಅಲ್ಲಿನ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಪ್ರಧಾನಿ ಕಚೇರಿಯಿಂದ ಮೊಬೈಲ್ ರಿಂಗಣಿಸುತ್ತಿತ್ತು. `ರಿಜಿಜು ಅವರೇ, ಹೆಡ್‍ಕ್ವಾರ್ಟರ್ ಬಿಟ್ಟು ತೆರಳುವ ಮುನ್ನ ಪ್ರಧಾನಿ ಕಾರ್ಯಾಲಯಕ್ಕೆ ತಿಳಿಸುವ ಪರಿಪಾಠ ಇಟ್ಟುಕೊಳ್ಳಿ’ ಅಂತ ಪಿಎಂಒದ ಅಧಿಕಾರಿಯೊಬ್ಬರು ನಯವಾಗಿ ಹೇಳಿ ಫೋನ್ ಕೆಳಗಿಟ್ಟರಂತೆ.

ಪ್ರಕಾಶ್ ಜಾವ್ಡೇಕರ್ ಜೀನ್ಸ್‍ಪ್ಯಾಂಟ್ ಪ್ರಸಂಗ ಬಹುತೇಕ ಎಲ್ಲರಿಗೂ ಗೊತ್ತಿದೆ. ವಿದೇಶದಲ್ಲಿ ನಿಗದಿಯಾಗಿದ್ದ ಸಮಾವೇಶದಲ್ಲಿ ಪಾಲ್ಗೊಳ್ಳಲು ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಜಾವ್ಡೇಕರ್‍ಗೆ ಪ್ರಧಾನಿ ಕಾರ್ಯಾಲಯದಿಂದ ಫೋನ್ ಮಾಡಿ, `ನೀವು ಮಂತ್ರಿಯಾಗಿದ್ದೀರಿ, ಅದಕ್ಕೆ ತಕ್ಕಂತೆ ವೇಷಭೂಷಣ ಇರಲಿ’ ಅಂತ ಸೂಚಿಸಿದರು. ಮರುಮಾತನಾಡದೆ ಬಟ್ಟೆ ಬದಲಿಸಿಕೊಂಡೇ ಜಾವ್ಡೇಕರ್ ವಿಮಾನ ಹತ್ತಿದರು.

ಪೆಟ್ರೋಲಿಯಮ್ ಖಾತೆ ರಾಜ್ಯ ಸಚಿವ ಧರ್ಮೇಂದ್ರ ಪ್ರಧಾನ್ ಗೊತ್ತಲ್ಲ. ಅವರು ದೆಹಲಿಯ ತಾಜ್ ಹೋಟೆಲ್‍ನಲ್ಲಿ ಪ್ರಮುಖ ಉದ್ಯಮಿಯೊಬ್ಬರ ಜತೆ ಇತ್ತೀಚೆಗೆ ಬೆಳಗಿನ ಉಪಾಹಾರದ ಸಭೆ ಸೇರಿದ್ದರು. ಅಷ್ಟೊತ್ತಿಗಾಗಲೇ ಅದು ಪ್ರಧಾನಿ ಕಾರ್ಯಾಲಯಕ್ಕೆ ಗೊತ್ತಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಪ್ರಧಾನ್‍ಗೆ ಪ್ರಧಾನಿ ಕಾರ್ಯಾಲಯದಿಂದ ಫೋನ್ ಬಂತು. ಫೋನ್ ಕೈಗೆತ್ತಿಕೊಂಡ ಪ್ರಧಾನ್ ಎದುರಿಗೆ ಕುಳಿತಿದ್ದ ಉದ್ಯಮಿಯ ಬಳಿ ಜಸ್ಟ್ ಸಾರಿ ಕೇಳಿ ಅಲ್ಲಿಂದ ಹೊರಟೇಬಿಟ್ಟರಂತೆ.

ಕಲ್ಲಿದ್ದಲು ಖಾತೆ ಸಹಾಯಕ ಸಚಿವ ಪಿಯೂಷ್ ಗೋಯೆಲ್‍ರದ್ದು ಮತ್ತೊಂದು ರೀತಿಯ ಪ್ರಸಂಗ. ಮಗಳನ್ನು ಭೇಟಿ ಮಾಡುವ ನೆಪದಲ್ಲಿ ವಿದೇಶಕ್ಕೆ ಹಾರಲು ಗೋಯೆಲ್ ತಯಾರಾಗಿ ನಿಂತಿದ್ದರಂತೆ. ಇನ್ನೇನು ವಿದೇಶ ಪ್ರವಾಸ ಹೊರಡುವ ಹಿಂದಿನ ದಿನ ಪ್ರಧಾನಿ ಕಚೇರಿಯಿಂದ ಫೋನ್ ಕರೆ ಬಂತು. `ನೀವು ವಿದೇಶ ಪ್ರವಾಸ ರದ್ದುಮಾಡುವುದು ಒಳ್ಳೆಯದು. ಅದಿಲ್ಲ ಅಂದರೆ ನಿಮ್ಮ ರಜಾ ಚೀಟಿಯ ಜತೆಗೆ ರಾಜೀನಾಮೆ ಪತ್ರವನ್ನೂ ಸೇರಿಸಿ ಕೊಟ್ಟು ಹೋಗಿ’ ಎಂಬ ಮಾತನ್ನು ನಯವಾಗಿ ಹೇಳಿದರಂತೆ. ಪಿಯೂಷ್ ಗೋಯೆಲ್ ವಿದೇಶ ಪ್ರವಾಸ ರದ್ದುಮಾಡಬೇಕಾಯಿತು.

ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ಬಂದ ಮೊದಲ ವಿದೇಶಿ ಅತಿಥಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ. ಸಂಪ್ರದಾಯದಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‍ರು ಅವರನ್ನು ಸ್ವಾಗತಿಸಿದರು. ಛಾಯಾಗ್ರಾಹಕರು ಎಷ್ಟೇ ಒತ್ತಾಯಿಸಿದರೂ ವಾಂಗ್ ಯಿ ಮತ್ತು ಪ್ರಧಾನಿ ಮೋದಿ ಮುಖಾಮುಖಿಯಾಗಿ ಫೋಟೋಕ್ಕೆ ಪೋಸ್ ಕೊಡುವವರೆಗೆ ಫೋಟೋ ತೆಗೆಸಿಕೊಳ್ಳಲು ಸುಷ್ಮಾ ಸುತರಾಂ ಒಪ್ಪಲಿಲ್ಲ. ಅದೇ ರೀತಿ ಸಂದರ್ಶನ ಕೊಡುವಂತೆ ವಿದೇಶಿ ಪತ್ರಕರ್ತರು ಎಷ್ಟೇ ದುಂಬಾಲುಬಿದ್ದರೂ ಸುಷ್ಮಾ ಒಪ್ಪಲಿಲ್ಲ. `ಪ್ರಧಾನಿ ಕಾರ್ಯಾಲಯದಿಂದ ಅನುಮತಿ ತನ್ನಿ ಆಮೇಲೆ ನೋಡೋಣ’ ಅಂತ ಸುಷ್ಮಾ ಪತ್ರಕರ್ತರನ್ನು ಸಾಗಹಾಕಿದರಂತೆ.

ಎಲ್ಲಕ್ಕಿಂತ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ಗೃಹ ಸಚಿವ ರಾಜನಾಥ್ ಸಿಂಗ್ ಮಗ ಪಂಕಜ್ ಸಿಂಗ್‍ಗೆ ನೋಯ್ಡಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ನಿರಾಕರಿಸಿದ ಪ್ರಕರಣ. ನೋಯ್ಡಾದ ಶಾಸಕ ಡಾ.ಮಹೇಶ್ ಶರ್ಮಾ ಗೌತಮಬುದ್ಧ ನಗರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರಿಂದ ಅಲ್ಲೀಗ ಉಪಚುನಾವಣೆ ನಡೆಯುತ್ತಿದೆ. ಉತ್ತರಪ್ರದೇಶ ಬಿಜೆಪಿ ಘಟಕದ ಕಾರ್ಯದರ್ಶಿ ಮತ್ತು ದೇಶದ ಗೃಹ ಸಚಿವ, ಮೋದಿ ಸರ್ಕಾರದಲ್ಲಿ ನಂಬರ್-2 ಎಂದೇ ಗುರುತಿಸಿಕೊಂಡಿರುವ ರಾಜನಾಥ್ ಸಿಂಗ್ ಪುತ್ರ ಪಂಕಜ್ ನೋಯ್ಡಾದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅಷ್ಟೊತ್ತಿಗಾಗಲೇ ಪಂಕಜ್ ಒಂದು ಎಡವಟ್ಟು ಮಾಡಿಕೊಂಡಿದ್ದರು. ದೆಹಲಿಯ ಕೆಲ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಆಯಕಟ್ಟಿನ ಜಾಗ ಕೊಡಿಸುವ ಸಂಬಂಧ ಪಂಕಜ್ ಹಣ ಪಡೆದಿದ್ದರು ಎಂಬ ಮಾಹಿತಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾಗೆ ತಲುಪಿತ್ತು. ಒಂದು ಕ್ಷಣವೂ ತಡಮಾಡದೆ ಪಂಕಜ್‍ರನ್ನು ಮನೆಗೆ ಕರೆಸಿಕೊಂಡ ಮೋದಿ `ನಾ ಮೈ ಖಾತಾ ಹೂಂ, ನಾ ಖಾನೇ ದೂಂಗಾ’ ಎಂದು ಹೇಳಿ, ಯಾರಿಂದ ಎಷ್ಟು ಹಣಪಡೆದಿದ್ದೀರೋ ಅಷ್ಟನ್ನೂ ವಾಪಾಸ್ ಕೊಟ್ಟುಬಿಡಿ ಅಂತ ಹೇಳಿಬಿಟ್ಟರು ಅನ್ನುವುದು ಸುದ್ದಿ. ಅದೇ ಕಾರಣಕ್ಕೆ ಪಂಕಜ್ ಸಿಂಗ್‍ಗೆ ಉಪಚುನಾವಣೆ ಟಿಕೆಟ್ ಕೈತಪ್ಪಿತು ಅಂತ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.

ಹಾಗೆ ನೋಡಿದರೆ ಆಡಳಿತವನ್ನು ಬಿಗಿ ಹಿಡಿತಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಅಧಿಕಾರ ವಹಿಸಿಕೊಂಡ ಮರುಕ್ಷಣದಲ್ಲೇ ಮೋದಿ ಶುರುಮಾಡಿದರು. ಅದರ ಮೊದಲ ಹೆಜ್ಜೆಯಾಗಿ ಜೂನ್ ಮೊದಲ ವಾರದಲ್ಲಿ ಕೇಂದ್ರದ ಎಲ್ಲ ಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳ ಕಚೇರಿ ಹಾಗೂ ಮನೆಗಳಿಗೆ ಹೊಸದಾಗಿ ಫೋನುಗಳನ್ನು ಹಾಕಿಸಲಾಯಿತು. ನಾಲ್ಕಂಕಿಯ ಈ ವೈರ್ ಫೋನ್‍ಗಳನ್ನು ಒದಗಿಸಿದ್ದು ಟೆಲಿಫೋನ್ ಇಲಾಖೆಯಲ್ಲ, ಗೃಹ ಸಚಿವಾಲಯ. ಒಂದು ಟರ್ಮಿನಲ್‍ಗೆ ಒಂದೇ ಒಂದು ಉಪಕರಣವನ್ನು ಜೋಡಿಸಲಾಗಿರುತ್ತದೆ. ಅದರ ಸೆಂಟ್ರಲ್ ಎಕ್ಸ್‍ಚೇಂಜ್ ಇರುವುದು ರಾಷ್ಟ್ರಪತಿ ಭವನದ ಕ್ಯಾಬಿನೆಟ್ ಸೆಕ್ರೆಟರಿಯೆಟ್‍ನಲ್ಲಿ. ಹೀಗಾಗಿ ಪ್ರಧಾನಿ ಕಾರ್ಯಾಲಯದ ಕಣ್ತಪ್ಪಿಸಿ ಯಾರಾದರೂ ವ್ಯವಹಾರ ಮಾಡುವುದಾಗಲಿ ಅಥವಾ ಹೊರಗಿನವರು ಆಂತರಿಕ ವ್ಯವಹಾರದ ಗುಟ್ಟನ್ನು ತಿಳಿದುಕೊಳ್ಳುವುದಾಗಲಿ ಸಾಧ್ಯವೇ ಇಲ್ಲ.

ವಿಶೇಷ ಅಂದರೆ ಪ್ರತಿನಿತ್ಯ ಬೆಳಗ್ಗೆ 8-30ಕ್ಕೆ ಸರಿಯಾಗಿ ಸಂಸತ್ತಿನ ಸೌತ್ ಬ್ಲಾಕ್‍ನಲ್ಲಿರುವ ಪ್ರಧಾನಿ ಕಚೇರಿ ಅಥವಾ ರೇಸ್‍ಕೋರ್ಸ್ ರಸ್ತೆಯ ಗೃಹ ಕಚೇರಿಯಲ್ಲಿ ಮೋದಿ ಹಾಜರಿರುತ್ತಾರೆ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಕಚೇರಿಗೆ ಕರಾರುವಾಕ್ಕಾಗಿ ಬರುತ್ತಿದ್ದರು. ಆದರೆ ಪ್ರಧಾನಿ ಬರುವ ಹೊತ್ತಿಗೆ ಅವರ ಆಪ್ತ ಸಿಬ್ಬಂದಿಯನ್ನು ಬಿಟ್ಟರೆ ಬೇರೆ ಯಾರೂ ಇರುತ್ತಿರಲಿಲ್ಲ. ಈಗ ಹಾಗಲ್ಲ, ಮೋದಿ ಕಚೇರಿಗೆ ಬರುವುಕ್ಕೂ ಮೊದಲೇ ಉನ್ನತ ಅಧಿಕಾರಿಗಳೂ ಸೇರಿ ಕಚೇರಿಯಲ್ಲಿ ನೂರಕ್ಕೆ ನೂರರಷ್ಟು ಹಾಜರಿ ಇರುತ್ತದೆ ಎಂಬುದು ಹಿರಿಯ ಅಧಿಕಾರಿಗಳು ಹೇಳುವ ಮಾತು.

ದಿನವೂ ಬೆಳಗ್ಗೆ ಪ್ರಧಾನಿ ಕಾರ್ಯಾಲಯದಿಂದ ಸಚಿವಾಲಯದ ಹಿರಿಯ ಅಧಿಕಾರಿಗಳ ಲ್ಯಾಂಡ್‍ಲೈನ್‍ಗೆ ಫೋನ್ ಬರುವುದು ಮಾಮೂಲು. ಒಂದು ವೇಳೆ ಅಧಿಕಾರಿಯ ಬದಲು ಅವರ ಆಪ್ತ ಸಹಾಯಕರು ಫೋನ್ ಕೈಗೆತ್ತಿಕೊಂಡರೆ ಇಂಥ ನಿರ್ದಿಷ್ಟ ನಂಬರಿಗೆ ತಿರುಗಿ ಕಾಲ್ ಮಾಡಿ ಅಂತ ಹೇಳಲಾಗುತ್ತದೆ. ಎಲ್ಲ ಅಧಿಕಾರಿಗಳೂ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗುವಂತೆ ನೋಡಿಕೊಳ್ಳುವುದು ಈ ಫೋನ್ ಕರೆಯ ತಂತ್ರಗಾರಿಕೆ ಎನ್ನಲಾಗುತ್ತಿದೆ.

ಈ ಕುರಿತು ಸ್ವತಃ ಮೋದಿ ಕೆಲ ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ. `ದೇಶದ ಜನರು ನನ್ನ ಮೇಲೆ ಅಪಾರ ಜವಾಬ್ದಾರಿ ಕೊಟ್ಟಿದ್ದಾರೆ, ಅಧಿಕಾರವನ್ನಲ್ಲ. ಹೀಗಾಗಿ ನನ್ನ ಮೇಲಿನ ಜವಾಬ್ದ್ದಾರಿಯನ್ನು ಮಂತ್ರಿಗಳಿಗೆ, ಅಧಿಕಾರಿಗಳಿಗೆ ಅವರವರ ಶಕ್ತ್ಯಾನುಸಾರ ಹಂಚಿಕೆ ಮಾಡಿದ್ದೇನೆ. ಜವಾಬ್ದಾರಿ ವಹಿಸಿಕೊಂಡವರು ಸರಿಯಾಗಿ ನಿರ್ವಹಣೆ ಮಾಡುತ್ತಿದ್ದಾರೋ ಇಲ್ಲವೋ ಎಂದು ನಿಗಾ ಇಡುವುದು ನನ್ನ ಕರ್ತವ್ಯ. ಅಧಿಕಾರಕ್ಕಿಂತ ಜವಾಬ್ದಾರಿ ಮುಖ್ಯ ಎನಿಸಿದಾಗ ಅಪವಾದಕ್ಕೆ ಕಡಿಮೆ ಅವಕಾಶವಿರುತ್ತದೆ ಎಂಬುದು ನನ್ನ ನಂಬಿಕೆ. ಅದಕ್ಕಿಂತ ಹೆಚ್ಚೇನೂ ಇಲ್ಲ. ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ’ ಅಂದಿದ್ದಾರಂತೆ.

ಇದೆಲ್ಲದರ ಒಟ್ಟಾರೆ ಪರಿಣಾಮ ಏನಾಗಿದೆ ಅಂದರೆ ಸರ್ಕಾರದ ಕಾರ್ಯಶೈಲಿ ಮಾತ್ರವಲ್ಲ, ಸಚಿವಾಲಯದ ಕಾರಿಡಾರ್‍ಗಳೂ ಸ್ವಚ್ಛವಾಗಿವೆ. ಧೂಳು ತಿನ್ನುತ್ತ ಆಳೆತ್ತರ ಬೆಳೆದಿದ್ದ ಫೈಲ್‍ಗಳ ರಾಶಿ ಕರಗುತ್ತಿದೆ. ಮುರುಕು ಅಲ್ಮೇರಾ, ಹರುಕು ಕುರ್ಚಿಗಳು ದುರ್ಬೀನು ಹಾಕಿ ಹುಡುಕಿದರೂ ಸಿಗುತ್ತಿಲ್ಲ. ಐದು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಬೇರುಬಿಟ್ಟಿದ್ದ ಅಧಿಕಾರಿಗಳು ಜಾಗ ಬಿಟ್ಟು ಕದಲಿದ್ದಾರೆ. ಇದೆಲ್ಲ ಒಳ್ಳೆಯದೇ ಅಲ್ಲವೇ?

ಎಲ್ಲದಕ್ಕಿಂತ ಮುಖ್ಯವಾಗಿ, ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಮಂತ್ರಿಗಳಿಗಿಂತ ಹೆಚ್ಚಾಗಿ ಹೇಗೆ ಅಧಿಕಾರಿಗಳನ್ನು ಅವಲಂಬಿಸಿದ್ದರೋ ಅದೇ ಕಾರ್ಯವೈಖರಿಯನ್ನು ಮೋದಿ ಈಗಲೂ ಮುಂದುವರೆಸಿದ್ದಾರೆಂಬುದು ಒಂದು ಅಭಿಪ್ರಾಯ. ಅದಕ್ಕೆ ಕಾರಣ ಹೊಸದಾಗಿ ಇಲಾಖೆಗೆ ಬರುವ ಮಂತ್ರಿಗಳಿಗಿಂತ ಅಧಿಕಾರಿಗಳು ಹೆಚ್ಚು ವಿಷಯ ಪರಿಣತಿ ಹೊಂದಿರುತ್ತಾರೆಂಬ ನಂಬಿಕೆ. ಜನಸಂಪರ್ಕಕ್ಕೂ ಅಷ್ಟೇ, ಮಾಧ್ಯಮಗಳಿಗಿಂತ ಹೆಚ್ಚಾಗಿ ಮೊಬೈಲ್ ಎಸ್ಸೆಮ್ಮೆಸ್, ಟ್ವಿಟರ್‍ನಂತಹ ಸಾಮಾಜಿಕ ಜಾಲತಾಣ ಹಾಗೂ ದೂರದರ್ಶನ ಟಿವಿ ವಾಹಿನಿಯನ್ನೇ ಹೊಸ ಪ್ರಧಾನಿ ಅವಲಂಬಿಸುತ್ತಿದ್ದಾರೆ. ಇತ್ತೀಚಿನ ಸ್ವಾತಂತ್ರೃದಿನಾಚರಣೆ ವೇಳೆ 9.6 ಕೋಟಿ ಜನರಿಗೆ ಪ್ರಧಾನಿ ಕಾರ್ಯಾಲಯದಿಂದ ಎಸ್ಸೆಮ್ಮೆಸ್ ಶುಭಾಶಯ ಕಳಿಸಲಾಗಿದೆ. ಸಶಸ್ತ್ರಪಡೆಯ ಯೋಧರು ಮತ್ತು ಅರೆಸೇನಾ ಪಡೆಯ ಸುಮಾರು ಐವತ್ತು ಸಾವಿರ ಸಿಬ್ಬಂದಿಗೆ ಪ್ರಧಾನಿ ವೈಯಕ್ತಿಕ ಶುಭಾಶಯ ಕಳಿಸಿದ್ದಾರೆ. ಇನ್ನೂ ಒಂದು ವಿಶೇಷ ಅಂದರೆ ಪ್ರಮುಖ ಬ್ಯಾಂಕ್ ಅಧಿಕಾರಿಗಳಿಗೆ ಪ್ರಧಾನಿ ಸ್ವಾತಂತ್ರೃ ದಿನದಂದು ವೈಯಕ್ತಿಕ ಶುಭಾಶಯ ಕಳಿಸಿದರು. ಅದರ ಹಿಂದೆ `ಪ್ರಧಾನಮಂತ್ರಿ ಜನಧನ’ ಯೋಜನೆಯನ್ನು ಯಶಸ್ವಿಗೊಳಿಸುವ ದೂರದೃಷ್ಟಿ ಇತ್ತು. ಅದರ ಪರಿಣಾಮವನ್ನು ನಾವು ಈಗ ಕಾಣುತ್ತಿದ್ದೇವೆ. ಯೋಜನೆ ಘೋಷಣೆ ಮಾಡಿ ಒಂದು ತಿಂಗಳು ಆಗುವುದಕ್ಕೂ ಮೊದಲೇ ಮೂರು ಕೋಟಿಗೂ ಹೆಚ್ಚು ಫಲಾನುಭವಿಗಳು ಜನಧನ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಇದನ್ನು ನೋಡಿದ ಮೇಲೂ, ದೇಶದ ಪ್ರತಿಯೊಬ್ಬ ಪ್ರಜೆಯೂ ಬ್ಯಾಂಕ್ ಖಾತೆ ಹೊಂದಬೇಕೆಂಬ ಉದ್ದೇಶ ಈಡೇರುವುದು ಕಷ್ಟ ಅಂತೀರಾ?

ಮುಖ್ಯವಾಗಿ ಮುಂದಿನ ಹತ್ತು ವರ್ಷಗಳ ಕಾಲ ಯಾವುದೇ ವಿವಾದಾತ್ಮಕ ವಿಷಯವನ್ನೂ ಪ್ರಧಾನಿ ಸ್ಪರ್ಶ ಮಾಡಲಿಕ್ಕಿಲ್ಲ ಅಂತ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಅದು ನಿಜವೇ ಆಗಿದ್ದರೆ ಒಳ್ಳೆಯದು ತಾನೆ?

ಅಧಿಕಾರದ ಸ್ಥಾನ ಅಲಂಕರಿಸುವುದೇ ದುಡ್ಡು ಮಾಡುವುದಕ್ಕೆ, ಸ್ವಜನ ಪಕ್ಷಪಾತಕ್ಕೆ ಎಂಬಂತಾಗಿರುವಾಗ, ಸಿಬಿಐನಂತಹ ಉನ್ನತ ತನಿಖಾ ಸಂಸ್ಥೆಯಿಂದ ಹಿಡಿದು, ನ್ಯಾಯಾಂಗ, ಕಾರ್ಯಾಂಗ, ಮಠಮಾನ್ಯಗಳವರೆಗೆ ಕಳಂಕ ಮೆತ್ತಿಕೊಳ್ಳುತ್ತಿರುವಾಗ ಪ್ರಧಾನಿ ಸರ್ವಾಧಿಕಾರಿಯಾಗುತ್ತಿದ್ದಾರೆ, ಮಂತ್ರಿಗಳ ಸ್ವಾತಂತ್ರೃವನ್ನೂ ಕಸಿದುಕೊಳ್ಳುತ್ತಿದ್ದಾರೆಂಬ ಸ್ಥಾಪಿತ ಅಭಿಪ್ರಾಯಗಳನ್ನು ಬದಲಿಸಿಕೊಳ್ಳುವ ಬಗ್ಗೆ ಆಲೋಚನೆ ಮಾಡುವುದು ಒಳ್ಳೆಯದಲ್ಲವೇ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top