ಎರಡು ವರ್ಷಗಳ ಅಲ್ಪಾವಧಿಯಲ್ಲಿ ಕೇಜ್ರಿವಾಲ್ ಮಾಡಿದ ಕ್ರಾಂತಿಗೆ ಶಬ್ಬಾಸ್ ಅನ್ನಲೇಬೇಕು. ಜನರ ಪ್ರೀತಿ ಗಳಿಸಲು ಅವರು ಪಟ್ಟ ಪರಿಶ್ರಮ, ತೋರಿದ ತಂತ್ರಗಾರಿಕೆ ಮತ್ತು ಜಾಣ್ಮೆಗೆ ಎಲ್ಲರೂ ತಲೆದೂಗಲೇಬೇಕು. ಆದರೆ ಒಂದು ಸರ್ಕಾರವಾಗಿ ಯಶಸ್ಸು ಗಳಿಸಲು ಅವಷ್ಟೇ ಇದ್ದರೆ ಸಾಕೇ?
ದೆಹಲಿಯ ಜನರು ನಿಜಕ್ಕೂ ಪುಣ್ಯವಂತರು ಅಂತ ಹೇಳೋಣವೇ? ತಲೆಯ ಮೇಲೊಂದು ಸೂರು, ನಲ್ಲಿಯಲ್ಲಿ ನೀರು, ಮನೆತುಂಬ ಇರುವ ಬಲ್ಬುಗಳಲ್ಲಿ ಬೆಳಕು, ಓದುವ ಮಕ್ಕಳಿಗೆ ಸ್ಕೂಲು, ಕಾಲೇಜುಗಳಲ್ಲಿ ಉಚಿತ ಶಿಕ್ಷಣ… ಹಲವು ಸವಲತ್ತುಗಳು ಉಚಿತ. ಇನ್ನು ಕೆಲವು ಸೇವೆಗಳಿಗೆ ಅರ್ಧಕ್ಕರ್ಧ ದರ ಕಡಿಮೆ ತೆರುವುದು ಖಚಿತ. ಸುಖೀರಾಜ್ಯಕ್ಕೆ ಮತ್ತಿನ್ನೇನು ಬೇಕು ಹೇಳಿ? ಅದೇನು ಕಾಕತಾಳೀಯವೋ ಗೊತ್ತಿಲ್ಲ. ಕರ್ನಾಟಕದಲ್ಲಿ ಬಡಬಗ್ಗರ ಮೊಗದಲ್ಲಿ ಮಂದಹಾಸ ಮೂಡಿಸಿದ್ದ ಅನ್ನಭಾಗ್ಯ ಯೋಜನೆ ಸೊರಗುವ ಹೊತ್ತಿಗೆ ಸರಿಯಾಗಿ ದೆಹಲಿಯ ಜನತೆಯ ಪಾಲಿಗೆ ಬಯಸಿದ್ದೆಲ್ಲವೂ ಹಾಗೇ ಸುಮ್ಮನೆ ಸಿಕ್ಕಿಬಿಡುವ ಭರವಸೆಯೊಂದು ಧಿಗ್ಗನೆ ಎದ್ದು ಕುಳಿತುಕೊಂಡುಬಿಟ್ಟಿದೆ.
ಇದೆಲ್ಲವೂ ದೆಹಲಿ ಚುನಾವಣೆಯ ಮಹಿಮೆ ಎಂದು ಖಡಾಖಂಡಿತವಾಗಿ ಹೇಳಬಹುದು. ದೆಹಲಿಯಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಆಮ್ ಆದ್ಮಿ ಪಕ್ಷ (ಎಎಪಿ) ಮೇಲೆ ಹೇಳಿದ ಭರವಸೆಗಳನ್ನು ಸುಮ್ಮನೆ ನೀಡಿಲ್ಲ. ಹಾಗೆ ಮಾಡುವುದಕ್ಕೂ ಮೊದಲು ಆ ಪಕ್ಷದ ಪ್ರಮುಖರು ದೆಹಲಿಯ ಗಲ್ಲಿಗಳಲ್ಲಿ ಜನಸಭೆಗಳನ್ನು ನಡೆಸಿ ಬೇಡಿಕೆಗಳ ಪಟ್ಟಿಗಳನ್ನು ತಯಾರಿಸಿದ್ದಾರೆ. ದುಂಡುಮೇಜಿನ ಸಭೆಗಳನ್ನು ನಡೆಸಿ ವಿಷಯ ಪರಿಣತರಿಂದ ಮಾಹಿತಿ ಕಲೆ ಹಾಕಿದ್ದಾರೆ, ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಅವುಗಳ ಆಧಾರದಲ್ಲಿ ಸಿದ್ಧವಾದದ್ದು ಎಪ್ಪತ್ತು ಅಂಶಗಳ ಎಎಪಿ ಚುನಾವಣಾ ಪ್ರಣಾಳಿಕೆ. ಆ ಪಕ್ಷದ ಘೋಷಣೆ ಮತ್ತು ಅರವಿಂದ ಕೇಜ್ರಿವಾಲರ ಸರಳ ವ್ಯಕ್ತಿತ್ವಕ್ಕೆ ಮಾರುಹೋದ ದೆಹಲಿ ಮತದಾರರು ನಿಜಕ್ಕೂ ಅಭೂತಪೂರ್ವ ಬೆಂಬಲವನ್ನೇ ನೀಡಿ ಹರಸಿದ್ದಾರೆ. ಇನ್ನೇನಿದ್ದರೂ ಕೊಟ್ಟ ಭರವಸೆಗಳನ್ನು ಒಂದೊಂದಾಗಿ ಈಡೇರಿಸುತ್ತ ಮುನ್ನಡೆದರಾಯಿತು.
ಅದೆಲ್ಲ ಸರಿ. ಎಎಪಿ ನೀಡಿದ ಚುನಾವಣಾ ಪ್ರಣಾಳಿಕೆಗೆ ಅನುಗುಣವಾಗಿ ದೆಹಲಿ ಸರ್ಕಾರ ಯಾವ ಬಾಬ್ತಿಗೆ ಎಷ್ಟು ಹಣಕಾಸು ವಿನಿಯೋಗ ಮಾಡಬೇಕಾಗುತ್ತದೆ ಎಂಬುದರ ಅಂದಾಜುಪಟ್ಟಿಯನ್ನು ದೆಹಲಿ ಪ್ರಾದೇಶಿಕ ಯೋಜನಾ ಮಂಡಳಿ ತಯಾರಿಸಿದೆ. ಅದನ್ನು ನೋಡುತ್ತ ಹೋದರೆ ಒಂದೆಡೆ ಖುಷಿ, ಮತ್ತೊಂದೆಡೆ ಆತಂಕ ಕಾಡಲು ಶುರುವಾಗುತ್ತದೆ. ಏಕೆ? ಮುಂದೆ ಓದಿ..
ಮುಖ್ಯವಾಗಿ ದೆಹಲಿ ಜನತೆಗೆ ಅಗ್ಗದ ದರದಲ್ಲಿ ವಿದ್ಯುತ್ ನೀಡುವ ಭರವಸೆ, ಈಗಿರುವ ಖಾಲಿ ಕೊಳಾಯಿಗಳಲ್ಲಿ ಉಚಿತ ಕುಡಿಯುವ ನೀರು ನೀಡುವ ವರಸೆ, ಮನೆಯಿಲ್ಲದವರಿಗೆ ಮನೆ, ಶಿಕ್ಷಣದಿಂದ ವಂಚಿತರಿಗೆ ಶಿಕ್ಷಣ, ಅನಾರೋಗ್ಯ ಪೀಡಿತರಿಗೆ ಪುಕ್ಕಟೆ ಆರೋಗ್ಯ ಭಾಗ್ಯ, ಸೂರಿಲ್ಲದವರಿಗೆ ಸೂರು ಭಾಗ್ಯ ಕರುಣಿಸುವ ಆಶ್ವಾಸನೆಗಳೇ ಈಗ ನಡೆದ ಚುನಾವಣೆಯಲ್ಲಿ ಮೋಡಿ ಮಾಡಿದವು ಎಂಬುದರಲ್ಲಿ ಯಾವ ಅನುಮಾನವೂ ಬೇಡ. ಹೀಗಾಗಿ ಹೊಸ ಸರ್ಕಾರ ಇವಿಷ್ಟು ಯೋಜನೆಗಳ ಜಾರಿಗೆ ಮೊದಲ ಮಣೆ ಹಾಕಬೇಕು. ಇಲ್ಲಿಯವರೆಗೆ ದೆಹಲಿಯಲ್ಲಿ ಯುನಿಟ್ ವಿದ್ಯುತ್‍ಗೆ ಮೂರು ರೂಪಾಯಿ ದರ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ಒಂದು ಯುನಿಟ್ ವಿದ್ಯುತ್ತಿಗೆ ಕೇವಲ ಒಂದು ರೂಪಾಯಿ ಇಪ್ಪತ್ತು ಪೈಸೆ ನೀಡಿದರಾಯಿತು. ಅರ್ಧಕ್ಕರ್ಧ ಕಡಿಮೆ. ಇದೊಂದೇ ಯೋಜನೆಗೆ ಸರ್ಕಾರ ವಾರ್ಷಿಕ ಮುನ್ನೂರ ಅರವತ್ತು ಕೋಟಿ ರೂಪಾಯಿಗಳನ್ನು ಎತ್ತಿಡಬೇಕು.
ಆ ನಂತರದ್ದು ಉಚಿತ ಕುಡಿಯುವ ನೀರು ಮತ್ತು ಸುಗಮ ಒಳಚರಂಡಿ ಯೋಜನೆಯ ಸಾಕಾರ. ಪ್ರತಿ ಮನೆಗೆ ತಿಂಗಳಿಗೆ ಇಪ್ಪತ್ತು ಸಾವಿರ ಲೀಟರು ಉಚಿತ ಕುಡಿಯುವ ನೀರು ಒದಗಿಸುವ ಯೋಜನೆಗೆ ವಾರ್ಷಿಕವಾಗಿ ಆರು ಸಾವಿರ ಕೋಟಿ ರೂಪಾಯಿ. ಮೂರನೆಯದ್ದು ಉದ್ಯೋಗ ಸೃಷ್ಟಿ ಮತ್ತು ವೃದ್ಧಾಪ್ಯ ವೇತನ ನೀಡುವ ವಿಚಾರ. ಅದಕ್ಕೆ ಒಂಭತ್ತು ಸಾವಿರ ಕೋಟಿ ರೂಪಾಯಿ ಬೇಕಾಗಬಹುದೆಂದು ಅಂದಾಜಿಸಲಾಗಿದೆ. ನಂತರದ್ದು ಯುವಕರ ಕೈಗೆ ಉದ್ಯೋಗ ಮತ್ತು ವಾರ್ಷಿಕ ಐದು ಲಕ್ಷ ಯುವಕರಿಗೆ ಉದ್ಯೋಗ ತರಬೇತಿ ನೀಡುವ ಮತ್ತು ಗುತ್ತಿಗೆ ನೌಕರರನ್ನು ಕಾಯಂ ಮಾಡುವ ವಿಚಾರ. ಅದಕ್ಕೆ ಅಂದಾಜು ಏಳು ಸಾವಿರ ಕೋಟಿ ರೂಪಾಯಿ ಬೇಕಾಗಬಹುದೆಂಬ ಲೆಕ್ಕಾಚಾರ ಹಾಕಲಾಗಿದೆ.
ಉಚಿತ ಆರೋಗ್ಯ ಸೇವೆ, ಶಾಲೆ ಮತ್ತು ಕಾಲೇಜು ಶಿಕ್ಷಣಕ್ಕೆ ಒಟ್ಟು ಸುಮಾರು ಮೂವತ್ತೇಳು ಸಾವಿರ ಕೋಟಿ ರೂಪಾಯಿ ತೆಗೆದಿರಿಸಬೇಕಾದ್ದು ಅತ್ಯಗತ್ಯ. ಈ ಬಾಬ್ತಿನಲ್ಲಿ ಸರ್ಕಾರಿ ಶಾಲೆಗಳ ನವೀಕರಣ, ಐನೂರು ಹೊಸ ಶಾಲೆಗಳ ನಿರ್ಮಾಣ, ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕ ಭರಿಸುವ ಯೋಜನೆ, ಒಂಬೈನೂರು ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯುವುದು, ಆಸ್ಪತ್ರೆಗಳಲ್ಲಿ ಮೂವತ್ತು ಸಾವಿರ ಹಾಸಿಗೆಗಳ ಸೇವೆಯನ್ನು ಒದಗಿಸುವುದು ಮತ್ತು ಇನ್ನೂ ಹಲವು ಯೋಜನೆಗಳು ಸೇರಿವೆ. ದೆಹಲಿಯಲ್ಲಿ ಈಗಿರುವ ಬಸ್ಸುಗಳಲ್ಲಿ ಓಡಾಡುವುದು ಕಷ್ಟ. ಹೀಗಾಗಿ ಸುಗಮ ಸಾರಿಗೆ ಸಂಪರ್ಕ ವ್ಯವಸ್ಥೆಗೆ ಮೂರೂವರೆ ಸಾವಿರ ಕೋಟಿ ರೂಪಾಯಿ ಬೇಕು. ಆ ಪೈಕಿ ಐನೂರು ಹೊಸ ಬಸ್ಸುಗಳನ್ನು ತಕ್ಷಣ ಖರೀದಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಹೇಳಿರುವಂತೆ ಸಾರ್ವಜನಿಕ ಸುರಕ್ಷೆಯ ದೃಷ್ಟಿಯಿಂದ ದೆಹಲಿ ಬೀದಿಗಳಲ್ಲಿ ಆರು ಸಾವಿರ ಸಿಸಿಟಿವಿಗಳ ಅಳವಡಿಕೆಗೆ ಒಂಬೈನೂರು ಕೋಟಿ. ಉಚಿತ ಸಾರ್ವಜನಿಕ ಟಾಯ್ಲೆಟ್ ನಿರ್ಮಾಣಕ್ಕೆ ಆರುನೂರಾ ಐವತ್ತು ಕೋಟಿ. ಘನ ತ್ಯಾಜ್ಯ ನಿರ್ವಹಣೆಗೆ ಸಾವಿರದ ಇನ್ನೂರು ಕೋಟಿ ರೂಪಾಯಿ ಬೇಕು.
ಇವಿಷ್ಟೇ ಅಲ್ಲ. ಅದಕ್ಕೆ ಹೊರತಾಗಿ ಇನ್ನೂ ಕೆಲ ಘೋಷಣೆಗಳಿವೆ. ಉದಾಹರಣೆಗೆ 47 ತ್ವರಿತಗತಿ ನ್ಯಾಯಾಲಯಗಳ ಸ್ಥಾಪನೆ ಮಾಡುವ ವಿಚಾರ. ನ್ಯಾಯಾಲಯಗಳ ನಿರ್ಮಾಣ, ಸಿಬ್ಬಂದಿ ಸಂಬಳ ಸಾರಿಗೆ ಇವಕ್ಕೆಲ್ಲ ಇನ್ನಷ್ಟು ಹಣ ತೆಗೆದಿರಿಸಬೇಕು. ಈ ಎಲ್ಲ ಯೋಜನೆಗಳಿಗೆ ಸೇರಿ ಮುಂದಿನ ಐದು ವರ್ಷಗಳವರೆಗೆ ವಾರ್ಷಿಕ ತಲಾ ಹದಿಮೂರು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹೊರೆಯನ್ನು ಭರಿಸಲು ಅಣಿಯಾಗುವುದು ಅನಿವಾರ್ಯ. ಇವಿಷ್ಟು ಲೆಕ್ಕಕ್ಕೆ ಸಿಗುವ ಪ್ರಮುಖ ಖರ್ಚಿನ ಬಾಬ್ತುಗಳು. ಸರ್ಕಾರಿ ವ್ಯವಸ್ಥೆಯಲ್ಲಿ ಅಂದಾಜಿಗೆ ಸಿಗದ ಖರ್ಚುವೆಚ್ಚದ ಪಾಲು ಅಷ್ಟೇ ದೊಡ್ಡ ಪ್ರಮಾಣದಲ್ಲಿರುತ್ತದೆ. ಅದನ್ನು ಸದ್ಯಕ್ಕೆ ಲೆಕ್ಕಹಾಕುವ ಗೋಜಿಗೆ ಹೋಗಿಲ್ಲ. ಲೆಕ್ಕಪಕ್ಕ ಎಲ್ಲಾ ಹೇಗೂ ಇರಲಿ. ಎಲ್ಲವೂ ಕೇಜ್ರಿವಾಲ್ ಅಂದುಕೊಂಡಂತೆ ಆಗಿಬಿಟ್ಟರೆ ಎಷ್ಟು ಸೊಗಸು, ಅದೆಷ್ಟು ಸುಂದರ ಅಲ್ಲವೇ? ಆಗುವುದಾದರೆ ಆಗಲಿ ಬಿಡಿ.
ಆದರೆ ವಾಸ್ತವ ಏನು? 2013-14ನೇ ಸಾಲಿನಲ್ಲಿ ದೆಹಲಿಯ ವಾರ್ಷಿಕ ಬಜೆಟ್ ಗಾತ್ರ ಎಷ್ಟು ಗೊತ್ತೇ? 36,600 ಕೋಟಿ ರೂಪಾಯಿ ಮಾತ್ರ. ಅಬ್ಬಬ್ಬಾ ಅಂದರೆ ಈ ಸಾರಿ ಇನ್ನೊಂದು ಇನ್ನೂರು ಕೋಟಿ ರೂ. ಗಾತ್ರ ಹಿಗ್ಗಬಹುದು. ದೆಹಲಿ ರಾಜ್ಯದ ವಾರ್ಷಿಕ ಬಜೆಟ್ಟಿನ ಅರ್ಧಕ್ಕಿಂತ ಹೆಚ್ಚು ಮೊತ್ತವನ್ನು ಅಲ್ಲಿನ ಸರ್ಕಾರ ಸರ್ಕಾರಿ ನೌಕರರ ವೇತನ ಮತ್ತು ನೌಕರರ ಕಲ್ಯಾಣಕ್ಕೇ ವೆಚ್ಚ ಮಾಡುತ್ತಿದೆ. ಹಾಗಾದರೆ ಬಾಕಿ ಎಲ್ಲ ಯೋಜನೆಗಳಿಗೆ ಹೊಸ ಮುಖ್ಯಮಂತ್ರಿಗಳು ಅದೆಲ್ಲಿಂದ ಹಣ ತರುತ್ತಾರೆ? ಅದೇ ಮುಂದಿರುವ ಕುತೂಹಲ. ಸಂಕಲ್ಪಶಕ್ತಿ ಇದ್ದರೆ ಯಾವುದೂ ಕಷ್ಟವಲ್ಲ ಅಂತ ಹೇಳುತ್ತಾರಲ್ಲ. ನಾವೂ ಹಾಗೇ ಅಂದುಕೊಳ್ಳೋಣ. ಹಾಗಾದರೆ ಹದಿನಾರು ವರ್ಷ ದೆಹಲಿ ಆಳಿದ ಶೀಲಾ ದೀಕ್ಷಿತ್ ಮತ್ತು ಇತರರೆಲ್ಲ ಏನೂ ಗೊತ್ತಿಲ್ಲದ ಪೆದ್ದುಮಣಿಗಳು ಅಂತ ಅನ್ನಬಹುದೇ…
ಸ್ವಲ್ಪ ಇತಿಹಾಸದ ಕಡೆಗೊಮ್ಮೆ ತಿರುಗಿ ನೋಡೋಣ. 1980-90ರ ದಶಕದಲ್ಲಿ ಬಹುತೇಕ ಎಲ್ಲ ರಾಜ್ಯಗಳ ವಿದ್ಯುತ್ ನಿಗಮಗಳು ದಿವಾಳಿ ಅಂಚಿಗೆ ಬಂದಿದ್ದವು. ಅದಕ್ಕೆ ವಿದ್ಯುತ್ ದರ ನಿಗದಿ ಮತ್ತು ಸಬ್ಸಿಡಿ ನೀಡುವ ವಿಷಯದಲ್ಲಿ ಆಯಾ ರಾಜ್ಯ ಸರ್ಕಾರಗಳ ಹಸ್ತಕ್ಷೇಪ ಮತ್ತು ತಪ್ಪು ನೀತಿಗಳೇ ಮುಖ್ಯ ಕಾರಣಗಳಾಗಿದ್ದವು ಎಂದು ತಜ್ಞರು ಹೇಳಿದ್ದಾರೆ. ಅದರ ಪರಿಣಾಮ ಇಡೀ ದೇಶಕ್ಕೇ ಗಾಡಾಂಧಕಾರ ಆವರಿಸುವ ಭೀತಿ ಎದುರಾದಾಗ 1998ರಲ್ಲಿ ವಿದ್ಯುತ್ ನಿಯಂತ್ರಣ ಪ್ರಾಧಿಕಾರ ಕಾಯ್ದೆ ಮತ್ತು 2003ನೇ ಇಸವಿಯಲ್ಲಿ ವಿದ್ಯುತ್ ಕಾಯಿದೆ ಜಾರಿಗೆ ತಂದು ರಾಜ್ಯಗಳ ವಿದ್ಯುತ್ ನಿಗಮಗಳಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಿ ವಿದ್ಯುತ್ ನಿಗಮಗಳನ್ನು ಬಚಾವು ಮಾಡಲಾಯಿತು. ಹೀಗಾಗಿ, ದೆಹಲಿ ವಿದ್ಯುತ್ ನಿಗಮಕ್ಕೆ ಮತ್ತೆ ಎಂಭತ್ತು ತೊಂಭತ್ತರ ದಶಕದ ಸಂಕಷ್ಟ ಬಾರದಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳಬೇಕಷ್ಟೆ.
ಆಯಿತು. ಒಮ್ಮೆ ಎಲ್ಲವನ್ನೂ ಉಚಿತವಾಗಿ ಕೊಡುವ ರುಚಿ ತೋರಿಸಿದರೆ ಮತ್ತೆ ಇನ್ಯಾವತ್ತೋ ಅದನ್ನು ವಾಪಾಸು ತೆಗೆದುಕೊಳ್ಳಲು ಸಾಧ್ಯವೇ? ಇವರು ಎದ್ದು ಹೋಗಿ, ಬೇರೆಯವರು ಬಂದರೂ ಹಾಗೆ ಮಾಡುವುದು ಕಷ್ಟ. ಇಪ್ಪತ್ತು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಕೃಷಿ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿ ಮಾಡಲಾಯಿತು. ಈಗ ಸರ್ಕಾರ ಹೇಗೆ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿದೆ ಎಂದರೆ, ನಿಜಕ್ಕೂ ಕೃಷಿ ಪಂಪ್‍ಸೆಟ್‍ಗಳಿಗೆ ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಬಳಕೆಯಾಗುತ್ತಿದೆ ಎಂಬ ಅಂದಾಜನ್ನೂ ಮಾಡಲಾಗುತ್ತಿಲ್ಲ. ಕೇವಲ ವಿದ್ಯುತ್ ಬಳಕೆ ಪ್ರಮಾಣ ಅಂದಾಜು ಮಾಡುವುದಕ್ಕೋಸ್ಕರ ಮೀಟರು ಅಳವಡಿಸುತ್ತೇವೆಂದು ಸರ್ಕಾರ ಹೇಳಿದರೂ ರೈತರು ಅದಕ್ಕೆ ಒಪ್ಪುತ್ತಿಲ್ಲ. ದೆಹಲಿಯಲ್ಲೂ ಇದೇ ಸ್ಥಿತಿ ಬರುವುದಿಲ್ಲ ಎಂದು ಹೇಳುವುದು ಹೇಗೆ?
ಈ ಯಾತ್ರೆ ಎಲ್ಲಿಂದ ಎಲ್ಲಿಗೆ ಬಂದು ತಲುಪಿದೆ ನೋಡಿ. ಶುರುವಾಗಿದ್ದು ಜನಲೋಕಪಾಲ ಹೋರಾಟ. ತಲುಪಿದ್ದು ದೆಹಲಿ ರಾಜಕೀಯ ಅಧಿಕಾರದ ಗದ್ದುಗೆಗೆ. ಹಾಗಾದರೆ ಭ್ರಷ್ಟಾಚಾರ ನಿರ್ಮೂಲನೆ ಹೋರಾಟಕ್ಕೂ ಈ ರೀತಿ ಸುಲಭದಲ್ಲಿ ಜನಪ್ರಿಯತೆ ತಂದುಕೊಡಬಲ್ಲ ಯೋಜನೆಗಳನ್ನು ಘೋಷಣೆ ಮಾಡಿ ರಾಜಕೀಯ ಅಧಿಕಾರ ಹಿಡಿಯುವುದಕ್ಕೂ ಎಲ್ಲಿಯ ಸಂಬಂಧ?
ಭ್ರಷ್ಟಾಚಾರಕ್ಕೆ `ಲಂಚಕ್ಕೆ ನಿರ್ಬಂಧ’ ಎಂದು ಮಾತ್ರ ಅರ್ಥವಿಲ್ಲ. ಭ್ರಷ್ಟ ಅಂದರೆ ಬಿದ್ದುಹೋಗುವುದು ಎಂದರ್ಥ. ನೈತಿಕತೆಯ ಮಾನದಂಡದೆದುರು ಯಾವುದೆಲ್ಲ ಕೆಳಗೆ ಬೀಳುತ್ತದೆಯೋ ಅಂಥ ಎಲ್ಲ ಆಚಾರಗಳನ್ನು ಭ್ರಷ್ಟ ಅಂತಲೇ ವ್ಯಾಖ್ಯಾನ ಮಾಡಲಾಗಿದೆ. ಸುಳ್ಳು ಹೇಳುವುದು, ಹುಸಿ ಭರವಸೆಗಳನ್ನು ಕೊಡುವುದು, ಆತ್ಮವಂಚನೆ ಮಾಡಿಕೊಳ್ಳುವುದು, ಕಾರ್ಯಸಾಧ್ಯವಲ್ಲದ್ದರ ಕುರಿತು ಆಸೆ ಹುಟ್ಟಿಸುವುದು ಇವೆಲ್ಲವೂ ಭ್ರಷ್ಟಾಚಾರದ ವ್ಯಾಪ್ತಿಯಲ್ಲೇ ಬರುವಂಥವು. ಎಲ್ಲದಕ್ಕಿಂತ ಮುಖ್ಯವಾಗಿ ಕೈ ಭ್ರಷ್ಟವಾದರೆ ಸ್ವಚ್ಛಗೊಳಿಸಬಹುದು. ಮನಸ್ಸೇ ಭ್ರಷ್ಟವಾಗಿಬಿಟ್ಟರೆ ಏನು ಮಾಡುವುದು? ಹಾಗಾಗುವುದು ಎಲ್ಲದಕ್ಕಿಂತ ಹೆಚ್ಚು ಅಪಾಯ. ಕ್ರಾಂತಿಯ ಬೆನ್ನತ್ತಿ ಸವಾರಿ ಮಾಡಲು ಹೊರಟವರು ಎಚ್ಚರಿಕೆಯಿಂದ ಮುಂದಡಿ ಇಟ್ಟರೆ ಚೆನ್ನ.
ಈ ಹಿನ್ನೆಲೆಯಲ್ಲಿ ರಾಜಕೀಯ ಕ್ರಾಂತಿಯ ಇತಿಹಾಸವನ್ನು, ಅಗ್ಗದ ಭರವಸೆಗಳ ಪರಿಣಾಮವನ್ನು ಅವಲೋಕಿಸಬೇಕಲ್ಲವೇ? ಆ ಬಗ್ಗೆ ಆಲೋಚಿಸಬೇಕಲ್ಲವೇ? ಏಕಾಏಕಿ ಒಬ್ಬ ನಾಯಕ ಅವತರಿಸಿಬಿಡಲು ಇದೇನು ದ್ವಾಪರಯುಗವೇ? ರಾತ್ರೋರಾತ್ರಿ ಆಗುವ ಕ್ರಾಂತಿಗಳು ಶಾಶ್ವತ ಎನ್ನಲಾದೀತೇ? ಯೋಚನೆ ಮಾಡುತ್ತ ಹೋದರೆ ಹೇಳಲು ಸಾಕಷ್ಟು ವಿಷಯ ಮತ್ತು ವಿಚಾರಗಳಿವೆ. ಅದನ್ನೆಲ್ಲ ಮುಂದಿನ ವಾರ ನೋಡೋಣ.