ಲಾಮಾ-ಚೌಎನ್ ಲೇ ಚಕಮಕಿ

• ನಿರಂಜನ
ಸಂಗ್ರಹ ನಿರೂಪಣೆ: ಸುಧೀಂದ್ರ ಹಾಲ್ದೊಡ್ಡೇರಿ. 

ಸುದೀರ್ಘ ಚೀನಾ ಯಾತ್ರೆಯ ನಂತರವೂ ದಲಾಯಿ ಲಾಮರ ‘ಮೆದುಳು’ ಸ್ವಚ್ಛವಾಗದ ಕಾರಣ, ಟಿಬೆಟ್‌ನಲ್ಲಿ ಠಿಕಾಣಿ ಹೂಡಿದ್ದ ಚೀನೀ ಸೇನಾನಿ ಹೆಚ್ಚು ತಡಮಾಡದೆ ಕಾರ್ಯೋನ್ಮುಖನಾದ. ಪೀಕಿಂಗಿನ ಆಜ್ಞೆಯಂತೆ, ಟಿಬೆಟನ್ನು ಮೂರು ಆಡಳಿತ ಭಾಗಗಳಾಗಿ ಆತ ವಿಂಗಡಿಸಿದ. ಒಂದಕ್ಕೆ ಪಂಚೆನ್ ಲಾಮರನ್ನೂ ಇನ್ನೊಂದಕ್ಕೆ ತನ್ನನ್ನೂ ಲ್ಹಾಸಾ ರಾಜಧಾನಿಯಾಗಿರುವ ಮೂರನೆಯ ಭಾಗಕ್ಕೆ ದಲಾಯಿ ಲಾಮರನ್ನೂ ಆಡಳಿತಗಾರರೆಂದು ನೇಮಿಸಿದ. ಟಿಬೆಟ್‌ನ ರೈತರನ್ನು ಒಲಿಸಿಕೊಳ್ಳುವುದಕ್ಕಾಗಿ ಭೂಸುಧಾರಣೆಯನ್ನೂ ಮಠಗಳಿಂದಲೂ ಭೂಮಾಲಿಕರಿಂದಲೂ ಕಸಿದುಕೊಂಡ ದನಕರುಗಳನ್ನು ಒಟ್ಟುಗೂಡಿಸಿ ಸಾಮುದಾಯಿಕ ವ್ಯವಸಾಯ ಕ್ರಮ ಜೀವನಕ್ರಮಗಳನ್ನೂ ಆರಂಭಿಸಿದ.
ಜನಸಂಖ್ಯೆ ವಿರಳವಾದ ವಿಸ್ತಾರವಾದ ಭೂಭಾಗ ಟಿಬೆಟ್. ಇತ್ತ ಚೀನದಲ್ಲಾದರೋ ಜನಸಂಖ್ಯೆಯ ಒತ್ತಡ. ಪೀಕಿಂಗ್‌ನ  ಆಜ್ಞೆಯಂತೆ ಸಹಸ್ರಾರು ಚೀನೀ ಕುಟುಂಬಗಳು ಟಿಬೆಟಿಗೆ ವಲಸೆ ಹೋದುವು. ಅಲ್ಲಿ ಅವರು ಬೇರೂರಲು ಅನುಕೂಲಗಳನ್ನು ಕಲ್ಪಿಸಲಾಯಿತು. ಬಲಾತ್ಕಾರದಿಂದ ಟಿಬೆಟಿನ ಸಾಮಾಜಿಕ ಜೀವನವನ್ನು ಬದಲಾಯಿಸುವ ಪ್ರಯತ್ನ ತೀವ್ರಗತಿಯಿಂದ ನಡೆಯಿತು. ಇದರ ವಿರದ್ಧ ಟಿಬೆಟಿನ ಜನತೆ ಬಂಡಾಯವೆದ್ದರು. ಖಂಪಾಗಳ ಅಶ್ವಪಡೆ ಬಿರುಗಾಳಿಯಂತೆ ಟಿಬೆಟಿನ ಉದ್ದಗಲಕ್ಕೆ ಬೀಸಿತು. ‘ಸೇನಾನಿ ಶಿವ’ ಎಂಬ ಗುಪ್ತನಾಮ ಧರಿಸಿ ಬಂಡಾಯದ ದಂಡನಾಯಕ, ಟಿಬೆಟಿನಲ್ಲೆಲ್ಲಾ ಸ್ವಾತಂತ್ರ್ಯ ಹೋರಾಟದ ಕುಡಿಗಳನ್ನು ಹಚ್ಚಿದ. ಆ ಹೊಗೆಯಿಂದ ಚೀನೀ ಪರಕೀಯರ ಉಸಿರು ಕಟ್ಟಿತು.
ಚೀನೀ ಆಕ್ರಮಣಕಾರರಿಗಿದಿರು ಟಿಬೆಟ್ಟಿನ ಜನತೆ ಬಂಡಾಯ ಆರಂಭಿಸಿದಾಗ, ಗುಪ್ತವಾಗಿ ಊರಿಂದ ಊರಿಗೆ ಒಯ್ಯಲಾದ ಕರಪತ್ರದಲ್ಲಿ ಹೀಗೆ ಬರೆಯಲಾಗಿತ್ತು. ‘‘ಟಿಬೆಟಿನ ಸ್ವತಂತ್ರ ಇರುವಿಕೆಗೆ ಈಗ ಸಂಚಕಾರ ಬಂದಿದೆ. ನಮ್ಮ ಮಾತೃಭೂಮಿಯನ್ನು ಆಕ್ರಮಿಸಿರುವ ಚೀನೀಯರನ್ನು ಯಾರೂ ನಂಬಬೇಡಿ. ನಮಗೆ ಸಹಾಯ ಮಾಡುತ್ತಿರುವವರಂತೆ ಅವರು ನಟಿಸುತ್ತಿದ್ದಾರೆ. ವಾಸ್ತವವಾಗಿ, ಚೀನವನ್ನಾಳುತ್ತಿರುವ ಭೀಕರ ಮರ್ದನ ಯಂತ್ರಕ್ಕೆ ನಮ್ಮನ್ನು ಗುರಿ ಮಾಡಬೇಕೆಂಬುದೇ ಅವರ ಅಪೇಕ್ಷೆ. ನಮ್ಮ ಬಗ್ಗೆ ತಮಗಿಷ್ಟ ಬಂದದ್ದನ್ನೆಲ್ಲ ಹೇಳುತ್ತ ಎಲ್ಲೆಡೆಗಳಲ್ಲೂ ಅವರು ಸುಳ್ಳನ್ನು ಹರಡುತ್ತಿದ್ದಾರೆ. ಟಿಬೆಟಿನ ಬಹುಸಂಖ್ಯಾತ ಜನರು ತಮಗೆ ಬೆಂಬಲವಾಗಿದ್ದಾರೆಂದು ಅವರು ಹೇಳುತ್ತಾರೆ. ಆದರೆ, ಮಾತನಾಡಲು ಜನರಿಗೆ ಅವರು ಅವಕಾಶ ಕೊಡುವುದಿಲ್ಲ. ನಮ್ಮ ರಾಷ್ಟ್ರದ ಚಾರಿತ್ರಿಕ ಪರಂಪರೆಗಳ ಬಗ್ಗೆ ಬಹುಸಂಖ್ಯಾತ ಟಿಬೆಟಿಯನ್ನರ ನಿಷ್ಠೆ ಅಚಲವಾಗಿದೆಯೆಂಬುದೇ ಸತ್ಯ ಸಂಗತಿ. ಈಗ ನಾವು ದೃಢವಾಗಿರಬೇಕು. ಇಲ್ಲದೇ ಹೋದರೆ, ಭವಿಷ್ಯತ್ಕಾಲ ಈಗಿನದಕ್ಕಿಂತಲೂ ಕಷ್ಟಕರವಾಗುವುದು. ಆದರೆ, ಎಚ್ಚರಿಕೆ. ಜನರ ಸಾಮೂಹಿಕ ವಧೆ ಮಾಡಲು ಅವರಲ್ಲಿ ಬಂದೂಕುಗಳಿವೆ, ವಿಮಾನಗಳಿವೆ. ಯಾವ ಅಳುಕೂ ಇಲ್ಲದೆ ಅಂಥ ಅಕೃತ್ಯವನ್ನು ಮಾಡಲೂ ಅವರು ಹೇಸುವುದಿಲ್ಲ. ತಪ್ಪದೆ ಅವರನ್ನು ಪ್ರತಿಭಟಿಸಿ – ಆದರೆ ಎಚ್ಚರದಿಂದ ಪ್ರತಿಭಟಿಸಿ!’’
ಅದು 1956ನೆಯ ಇಸವಿ. ಭಾರತದಲ್ಲಿ ಭಗವಾನ್ ಬುದ್ಧನ 2500 ವರ್ಷಗಳ ವರ್ಧಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಏರ್ಪಾಟುಗಳು ನಡೆದಿದ್ದವು. ಆ ಸಮಾರಂಭಕ್ಕೆ ಬರಬೇಕೆಂದು ಭಾರತ ಸರಕಾರವು ದಲಾಯಿ ಲಾಮರಿಗೆ ಆಮಂತ್ರಣ ಕಳುಹಿಸಿಕೊಟ್ಟಿತು. ಭಾರತಕ್ಕೆ ಹೋಗಲು ದಲಾಯಿ ಲಾಮಾ ನಿರ್ಧರಿಸಿದರು. ಆದರೆ ಚೌ ಎನ್-ಲೇ ಅವರು ಆಮಂತ್ರಣವನ್ನು ಸ್ವೀಕರಿಸಕೂಡದೆಂದು ದಲಾಯಿ ಲಾಮಾರಿಗೆ ಪೀಕಿಂಗಿನಿಂದ ಆದೇಶವಿತ್ತರು. ಅದೊಂದು ಧಾರ್ಮಿಕ ಕಾರ್ಯ, ತಾವು ಹೋಗುವುದೇ ನಿಶ್ಚಿತ ಎಂದರು ದಲಾಯಿ ಲಾಮಾ. ಚೌ ಎನ್-ಲೇ ಬಹಿರಂಗ ಘರ್ಷಣೆಯಿಂದಾಗಬಹುದಾದ ಲಾಭ- ನಷ್ಟಗಳನ್ನು ತೂಗಿ ನೋಡಿ, ‘‘ಹೋಗಿಬನ್ನಿ’’ ಎಂದರು. ಜತೆಯಲ್ಲಿ ಪಂಚೆನ್ ಲಾಮಾರನ್ನೂ ಭಾರತಕ್ಕೆ ಕಳುಹಿಕೊಟ್ಟರು.
ದಲಾಯಿ ಲಾಮಾ ಭಾರತಕ್ಕೆ ಬಂದರು. ಕಮ್ಯೂನಿಸ್ಟ್ ಚೀನದ ಹೊರತಾಗಿ ಬಾಹ್ಯ ಜಗತ್ತಿನ ಬೇರೆ ಯಾವ ರಾಷ್ಟ್ರವನ್ನೂ ಆವರೆಗಿನ ತನಕ ಅವರು ಕಂಡವರಲ್ಲ. ಕಗ್ಗಾಡಿನ ನೀತಿಯನ್ನು ಅನುಸರಿಸದೆಯೇ ಪ್ರಜಾಪ್ರಭುತ್ವ ಪದ್ಧತಿಯಲ್ಲೇ ಒಂದು ರಾಷ್ಟ್ರ ಅಭಿವೃದ್ಧಿ ಹೊಂದುವುದು ಸಾಧ್ಯವೆಂಬುದಕ್ಕೆ ಭಾರತ ನಿದರ್ಶನವಾಗಿತ್ತು. ಬುದ್ಧನಿಗೆ ಜನ್ಮವಿತ್ತ ದೇಶದಲ್ಲಿ ಸರಾಗವಾಗಿ ಉಸಿರಾಡುತ್ತಾ ದಲಾಯಿ ಲಾಮಾ ಸಂಚಾರ ಮಾಡಿದರು.
ಆ ವೇಳೆಗೆ ಚೌ ಎನ್-ಲೇ ಕೂಡಾ ಭಾರತ ಪ್ರವಾಸಕ್ಕೆಂದು ಬಂದರು! ವಿಮಾನ ನಿಲ್ದಾಣದಲ್ಲಿ ಜವಾಹರಲಾಲರ ಜೊತೆ ದಲಾಯಿ ಲಾಮರೂ ಇದ್ದುದನ್ನು ಕಂಡು, ‘‘ಇಲ್ಲಿಯ ತನಕ ತಾವು ಬಂದು ನನ್ನನ್ನು ಸ್ವಾಗತಿಸಿದ್ದಕ್ಕೆ ಉಪಕೃತ,’’ ಎಂದರು. ಹಾಗೆಯೇ ದಲಾಯಿ ಲಾಮಾರನ್ನು ಪಕ್ಕಕ್ಕೆ ಕರೆದು ಪಿಸುಮಾತಿನಲ್ಲಿ, ‘‘ಈ ದೇಶದಲ್ಲಿ ರಾಜಕೀಯ ವಿಷಯವಾಗಿ ನೀವೇನೂ ಮಾತಾಡಬಾರದು. ಆ ಕೆಲಸ ನಾನು ಮಾಡುವೆ,’’ ಎಂದರು. ಅದಕ್ಕೆ ದಲಾಯಿ ಲಾಮಾ ಸಮ್ಮತಿಸಲಿಲ್ಲ. ‘‘ಅದು ಹೇಗೆ ಸಾಧ್ಯ? ಟಿಬೆಟ್ಟಿನಲ್ಲಿ ಧಾರ್ಮಿಕ-ರಾಜಕೀಯ ವಿಷಯಗಳೆರಡಕ್ಕೂ ಒಬ್ಬರೇ ಮುಖ್ಯಸ್ಥರು. ಅದು ನಾನು,’’ ಎಂದರು.
ಅದಕ್ಕೆ ಚೌ ಎನ್-ಲೇ, ‘‘ಅದು ಹಿಂದಿನ ಮಾತಾಯಿತು. ಈಗ ನಾನು ಹೇಳಿದಂತೆ ನೀವು ಕೇಳತಕ್ಕದ್ದು,’’ ಎಂದರು. ‘‘ಭಡವಾ, ಭಾರತದಲ್ಲಿದೇನೆ ಅಂತ ಎಷ್ಟು ಧೈರ್ಯ ನಿನಗೆ,’’ – ಎಂಬ ಮಾತನ್ನು ಪ್ರಾಯಶಃ ಮನಸ್ಸಿನೊಳಗೇ ಚೌ ಎನ್-ಲೇ ಆಡಿಕೊಂಡಿರಬೇಕು. ಚೌ ಎನ್-ಲೇ ಅವರು ಈ ದೇಶದಲ್ಲಿ ನೋಡಬೇಕಾದ್ದನ್ನು ನೋಡಿ, ಹಾರ ತುರಾಯಿಗಳನ್ನು ಹಾಕಿಸಿಕೊಂಡು, ಕೈಜೋಡಿಸಿ ‘ನಮಸ್ತೆ’ ಮಾಡಿ, ಜನರ ಜತೆ ತಾನೂ ‘ಭಾಯಿ ಭಾಯಿ’ ಎಂದು ಘೋಷಿಸಿ, ಪೂರ್ವನಿಶ್ಚಿತ ಅವಧಿಗಿಂತಲೂ ಮೊದಲೇ ಪ್ರವಾಸವನ್ನು ಚುಟುಕುಗೊಳಿಸಿ ಚೀನಕ್ಕೆ ಹಿಂತಿರುಗಲು ಸಿದ್ಧರಾದರು. ಹೊರಡುವ ಮುನ್ನ ಜವಾಹರರೊಡನೆ ಅವರೆಂದರು: ‘‘ಟಿಬೆಟ್ಟಿನ ವಿಷಯದಲ್ಲಿ ನಮ್ಮ ನೀತಿಯ ಬಗ್ಗೆ ನೀವು ಆತಂಕಗೊಳ್ಳಬೇಕಾದ್ದೇ ಇಲ್ಲ. ಚೀನಾದಲ್ಲಿ ಬೇರೆ ಯಾವ ಪ್ರಾಂತಕ್ಕೂ ಇಲ್ಲದ ಸ್ವಾಯತ್ತತೆಯನ್ನು ಟಿಬೆಟಿಯನ್ನರಿಗೆ ನಾವು ಕೊಟ್ಟಿದ್ದೇವೆ. ಟಿಬೆಟ್ ಮತ್ತು ಚೀನಾಗಳ ನಡುವೆ ಆಗಿರುವ ಹದಿನೇಳು ಅಂಶಗಳ ಒಡಂಬಡಿಕೆಯನ್ನು ನಾವು ಅಕ್ಷರಶಃ ಪಾಲಿಸುತ್ತಿದ್ದೇವೆ.’’ ನಂತರ ದಲಾಯಿ ಲಾಮಾರನ್ನು ಕರೆದು, ‘‘ನೀವು ತಕ್ಷಣವೇ ಟಿಬೆಟ್‌ಗೆ ವಾಪಸಾಗಬೇಕು,’’ ಎಂದರು.
ತಾಯ್ನಾಡಿನಲ್ಲಿ ತಮ್ಮ ಜನರು ಜೀವನಮರಣ ಹೋರಾಟ ನಡೆಸುತ್ತಿರುವಾಗ ತಾವು ಅವರ ಮಧ್ಯೆ ಇರಬೇಕೆಂಬ ಪ್ರಜ್ಞೆ ಒಂದೆಡೆ; ಹೋದರೆ ಅಲ್ಲಿ ತಮ್ಮನ್ನು ಚೀನೀಯರು ಸೆರೆಹಿಡಿಯಬಹುದು, ಭಾರತದಲ್ಲೇ ಉಳಿದರೆ ಟಿಬೆಟ್ಟಿನ ಸ್ವಾತಂತ್ರ್ಯಕ್ಕಾಗಿ ಲೋಕಾಭಿಪ್ರಾಯವನ್ನು ತಾವು ರೂಪಿಸಬಹುದು ಎಂಬ ಆಸೆ ಇನ್ನೊಂದೆಡೆ, ದಲಾಯಿ ಲಾಮರ ಮನಸ್ಸು ತುಯ್ದಾಡಿತು. ಲ್ಹಾಸಾಗೆ ನೀವು ಮರಳುವುದೇ ಮೇಲು ಎಂದು ಭಾರತದ ಪ್ರಧಾನಿಯೇ ಸೂಚಿಸಿದರು. ಪಂಚಶೀಲ ಸೂತ್ರದ ಆಧಾರದ ಮೇಲೆ ಚೀನಾ-ಭಾರತ ಮೈತ್ರಿ ಬಲವಾಗಿರುತ್ತದೆಂಬ ನಂಬಿಕೆಯಿಂದ ಆ ಸೂತ್ರವನ್ನು ವಿಫಲಗೊಳಿಸುವಂತಹ ಯಾವ ಕಾರ್ಯ ಮಾಡುವುದಕ್ಕೂ ಭಾರತ ಸಿದ್ಧವಿರಲಿಲ್ಲ. ಟಿಬೆಟ್ಟಿನ ವಿಷಯದಲ್ಲಿ ಚೀನಾ ಕರುಣೆಯಿಂದ ವರ್ತಿಸೀತು, ಅಲ್ಲಿಮತ್ತೆ ಶಾಂತಿ ನೆಲೆಸೀತು ಎಂಬುದೇ ಆಗಲೂ ಭಾರತದ ನಂಬುಗೆಯಾಗಿತ್ತು.
(ನಾಳೆ: ದಲಾಯಿಲಾಮಾ ಪರಾರಿ)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top