ಆನ್‌ಲೈನ್ ವಂಚನೆಗೆ ಬಲಿಯಾಗದಿರಿ – ವಿದೇಶಿ ಆ್ಯಪ್‌ಗಳನ್ನು ಬಳಸುವಾಗ ಎಚ್ಚರವಿರಬೇಕು

ಒಂದು ಕಡೆ ಹೊರಗೆ ಬಂದರೆ ಕೊರೊನಾ ವೈರಸ್‌ನ ಭಯ. ಇನ್ನೊಂದು ಮನೆಯೊಳಗೇ ಇದ್ದರೂ ಆನ್‌ಲೈನ್‌ನಲ್ಲಿ ವಂಚಕರ ಸುಲಿಗೆಗೆ ತುತ್ತಾಗುವ ಆತಂಕ. ಇದು ಪ್ರಜೆಗಳ ಸದ್ಯದ ಸ್ಥಿತಿ! ಚೀನಾ ಮೂಲದ ‘ಜೂಮ್’ ಎಂಬ ಆ್ಯಪ್ ಅನ್ನು ಬಳಸುವವರು ಅದನ್ನು ಕೈಬಿಡುವುದು ಅಥವಾ ಹುಷಾರಾಗಿರುವುದು ಅಗತ್ಯ ಎಂದು ಕೇಂದ್ರ ಸರಕಾರ ಸೂಚಿಸಿದೆ. ಜೂಮ್‌ನ ಹಲವು ಭಾರತೀಯ ಬಳಕೆದಾರರ ಪಾಸ್‌ವರ್ಡ್‌ಗಳು ಹ್ಯಾಕ್ ಆಗಿರುವುದು ಹಾಗೂ ಕಾನ್ಫರೆನ್ಸ್ ಕರೆಯ ನಡುವೆ ಹ್ಯಾಕ್ ಆಗಿರುವುದು ಕಂಡುಬಂದ ನಂತರ ಸರಕಾರದ ಈ ಸೂಚನೆ ಬಂದಿದೆ. ಜೂಮ್‌ನ ಹೆಚ್ಚಿನ ಸರ್ವರ್‌ಗಳು ಚೀನಾದಿಂದ ಕಾರ್ಯಾಚರಿಸುತ್ತಿವೆ. ಜೂಮ್ ವಿಡಿಯೋ ಕಾನ್ಫರೆನ್ಸ್ ಆ್ಯಪ್ ಆಗಿದ್ದು, ಲಾಕ್‌ಡೌನ್‌ನ ಅವಧಿಯಲ್ಲಿ ಭಾರತದಲ್ಲಿ ಇದರ ಬಳಕೆ ಹೆಚ್ಚಿತ್ತು. ಇನ್ನೊಂದು ಆ್ಯಪ್ ಟಿಕ್‌ಟಾಕ್ ಬಗ್ಗೆ ಕೂಡ ಇದೇ ಆತಂಕ ವ್ಯಕ್ತವಾಗಿದೆ. ಜೂಮ್‌ನ ವಿಶ್ವಾಸಾರ್ಹತೆಯಲ್ಲಿ ಕುಂದು ಕಂಡುಬಂದ ಹಿನ್ನೆಲೆಯಲ್ಲಿ ಗೂಗಲ್ ಕಂಪನಿ ತನ್ನ ಎಲ ಉದ್ಯೋಗಿಗಳ ಸಿಸ್ಟಮ್‌ಗಳಿಂದ ಇದನ್ನು ತೆಗೆಸಿಹಾಕಿತ್ತು. ಜರ್ಮನಿ, ಸಿಂಗಾಪುರ, ತೈವಾನ್‌ಗಳಲ್ಲಿ ಈ ಆ್ಯಪ್ ನಿಷೇಧಿಸಲಾಗಿದೆ. ಜೂಮ್ ಆ್ಯಪ್ ಬಳಕೆದಾರರು ಈ ತಕ್ಷಣ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಅತ್ಯಗತ್ಯ.
ಇದರ ಜೊತೆಗೇ ಕಂಡುಬಂದಿರುವ ಇನ್ನೊಂದು ಆತಂಕವೆಂದರೆ, ಕೇಂದ್ರ ಸರಕಾರದ ಫಲಾನುಭವಿ ಯೋಜನೆಗಳ ಹೆಸರು ಹೇಳಿ ಆನ್‌ಲೈನ್‌ನಲ್ಲಿ ನಿಮ್ಮ ಹಣ ಎಗರಿಸುವ ಸ್ಥಳೀಯ ಜಾಲ. ಕೊರೊನಾ ಲಾಕ್‌ಡೌನ್ ನಡುವೆ ಈ ಸೈಬರ್ ಖದೀಮರು ಸಕ್ರಿಯರಾಗಿದ್ದು, ಮನೆಗೆ ಮದ್ಯ ಪೂರೈಸುವ, ನಿಮ್ಮ ಬ್ಯಾಂಕ್ ಖಾತೆಗೆ ಕೇಂದ್ರ ಸರಕಾರದ ನೆರವಿನ ಹಣ ಹಾಕುವ, ಇಎಂಐ ಅವಧಿ ವಿಸ್ತರಣೆ ಪ್ರಕ್ರಿಯೆ, ಸಾಲಕ್ಕೆ ವಿನಾಯಿತಿ, ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳನ್ನು ಸಕ್ರಿಯಗೊಳಿಸುವ ನೆವ ನೀಡಿ ನಂಬಿಸಿ ಸಾರ್ವಜನಿಕರ ಖಾತೆಗೆ ಕನ್ನ ಹಾಕಿ ಲಕ್ಷಾಂತರ ರೂ. ದೋಚುತ್ತಿದ್ದಾರೆ. ಇಂಥ ಹಲವು ದೂರುಗಳು ಈಗಾಗಲೇ ದಾಖಲಾಗಿವೆ. ಎಲ್ಲದರಲ್ಲೂ ಸಮಾನವಾಗಿರುವ ಅಂಶವೆಂದರೆ ಲಾಕ್‌ಡೌನ್ ಪರಿಣಾಮ ಕೆಲಸವಿಲ್ಲದೆ ಖಾಲಿ ಕುಳಿತಿರುವವರು ತಿಳಿವಿನ ಕೊರತೆಯಿಂದ ಇಂಥ ವಂಚನೆಗಳಿಗೆ ಬಲಿಯಾಗುತ್ತಿರುವುದು. ಲಾಕ್‌ಡೌನ್ ಸಮಯವೆಂದು ಆನ್‌ಲೈನ್ ಬಳಕೆ ಎಲ್ಲೆಡೆ ಹೆಚ್ಚಾಗಿದೆ. ಇದೇ ಸಮಯವನ್ನೇ ಖದೀಮರು ಬಳಸಿಕೊಳ್ಳುತ್ತಿದ್ದಾರೆ.
ಇಂಥ ವಂಚನೆಗಳನ್ನು ಸೈಬರ್ ಕಾನೂನಿನಿಂದ ತಡೆಗಟ್ಟಲು ಸಾಧ್ಯವಿಲ್ಲ. ಆದ್ದರಿಂದ ಇಲ್ಲಿ ಪ್ರಜೆಗಳೇ ತಮ್ಮ ಹಣಕಾಸಿನ ಸುರಕ್ಷತೆಯನ್ನು ತಾವೇ ಮಾಡಿಕೊಳ್ಳಬೇಕಾದ್ದು ಅಗತ್ಯ. ಜೂಮ್‌ನಂಥ ಚೀನಾ ಮೂಲದ ಆ್ಯಪ್‌ಗಳು ವಿಶ್ವಾಸಾರ್ಹತೆ ಕಳೆದುಕೊಂಡಿರುವುದರಿಂದ, ಅವುಗಳ ಸಹವಾಸ ಮಾಡದಿರುವುದು ಒಳ್ಳೆಯದು. ಜೂಮ್‌ನಂಥ ಕೆಲವು ಆ್ಯಪ್‌ಗಳು ನಿಮ್ಮ ಬಳಿ ಇನ್‌ಸ್ಟಾಲ್ ಮಾಡುವಾಗಲೇ ಅತಿ ಖಾಸಗಿಯಾದ ವಿವರಗಳಿಗೆ ಪರವಾನಗಿ ಕೇಳುತ್ತವೆ. ಇವು ದುರುಪಯೋಗಿ ಆಗುವ ಸಾಧ್ಯತೆ ಇರುವುದರಿಂದ ಇಂಥವನ್ನು ದೂರವಿಡುವುದು ಎಲ್ಲ ದೃಷ್ಟಿಯಿಂದಲೂ ಲೇಸು. ಇನ್ನು ನಿಮ್ಮ ಹಣಕಾಸು ಅಥವಾ ಸರಕಾರಿ ಸವಲತ್ತುಗಳ ವಿಚಾರದಲ್ಲಿ ಬ್ಯಾಂಕ್ ಅಥವಾ ಸರಕಾರಿ ಇಲಾಖೆಯೊಂದಿಗೆ ನೇರ ಸಂಪರ್ಕ ಒಳ್ಳೆಯದು. ಬ್ಯಾಂಕ್ ಅಧಿಕಾರಿ ಹೆಸರಿನಲ್ಲಿ ಯಾವುದೇ ಮಾಹಿತಿ ಕೇಳಿದರೂ ಹಂಚಿಕೊಳ್ಳದಿರುವುದು, ಆನ್‌ಲೈನ್ ಖರೀದಿ, ಗೂಗಲ್‌ನಲ್ಲಿ ವಿವಿಧ ಸೇವೆಗಳ ಕುರಿತು ಸರ್ಚ್ ಮಾಡುವ ವೇಳೆ ಎಚ್ಚರ ವಹಿಸುವುದು, ಅಪರಿಚಿತರು ಲಿಂಕ್, ಎಸ್‌ಎಂಎಸ್ ಕಳುಹಿಸಿ ಮಾಹಿತಿ ಕೇಳಿದರೆ ನೀಡದಿರುವುದು, ಇಮೇಲ್ ಅಥವಾ ಮೊಬೈಲ್‌ಗೆ ಬರುವ ಲಿಂಕ್ ಕ್ಲಿಕ್ ಮಾಡದಿರುವುದು, ಅನಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡದಿರುವುದು, ಪೋನ್ ಹಾಗೂ ಇಮೇಲ್ ಮೂಲಕ ಬ್ಯಾಂಕ್ ಖಾತೆ, ಪಿನ್ ವಿವರ ಯಾವುದೇ ಕಾರಣಕ್ಕೂ ಹಂಚಿಕೊಳ್ಳದಿರುವುದು ಸುರಕ್ಷತಾ ಕ್ರಮಗಳಾಗಿವೆ. ನೀವು ಕಷ್ಟಪಟ್ಟು ದುಡಿದ ಹಣ ನಿಮ್ಮಲ್ಲೇ ಇರಲಿ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top