ಸಾವಿನ ಅರಿವಿಲ್ಲದೆ ಏಳು ಅಜ್ಜಾ ಎಂದು ಗೋಗರೆದ ಬಾಲಕ

ಕಾಶ್ಮೀರ ಕಣಿವೆಯಲ್ಲಿ ಉಗ್ರ ದಾಳಿಯ ಕ್ರೂರ ಮುಖ: ಮೊಮ್ಮಗನ ಕಣ್ಣೆದುರೇ ತಾತ ಗುಂಡಿಗೆ ಬಲಿ.

ಹೊಸದಿಲ್ಲಿ: ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ತಾತನ ಶವದ ಮೇಲೆ ಬಿದ್ದು, ಅವರನ್ನು ಎಬ್ಬಿಸಲು ಮೂರು ವರ್ಷದ ಬಾಲಕನೊಬ್ಬ ಪ್ರಯತ್ನಿಸುತ್ತಿರುವ ಹೃದಯ ವಿದ್ರಾವಕ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಅಜ್ಜ ಮೃತಪಟ್ಟಿದ್ದಾರೆ, ಇನ್ನು ಏಳುವುದಿಲ್ಲ ಎಂಬ ವಾಸ್ತವವನ್ನು ಅರಿಯದ ಬಾಲಕ ಮೃತ ದೇಹದ ಮೇಲೆ ಕುಳಿತು ಅವರನ್ನು ಎಚ್ಚರಿಸಲು ಪ್ರಯತ್ನಿಸುವ ಸನ್ನಿವೇಶವು ಮನಕಲಕುವಂತಿದೆ.
ಜಮ್ಮು-ಕಾಶ್ಮೀರದ ಸೊಪೊರದಲ್ಲಿ ಬುಧವಾರ ಉಗ್ರರು ಹಾಗೂ ರಕ್ಷಣಾಪಡೆಯ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯ ನಂತರ ಆ ಪ್ರದೇಶದಲ್ಲಿ ಕಂಡು ಬಂದ ದೃಶ್ಯವಿದು.
ಘಟನೆಯಲ್ಲಿ ಮಗುವು ಪವಾಡಸದೃಶ ರೀತಿಯಲ್ಲಿ ಪಾರಾಗಿದೆ. ತಾತನ ಮೃತದೇಹದ ಬಳಿ ಕುಳಿತಿದ್ದ ಮಗುವನ್ನು ಕಂಡ ಭದ್ರತಾ ಪಡೆ ಯೋಧರೊಬ್ಬರು ಬಾಲಕನನ್ನು ತನ್ನತ್ತ ಬರುವಂತೆ ಕೈ ಸನ್ನೆ ಮಾಡುತ್ತಿರುವ ದೃಶ್ಯವೂ ವಿಡಿಯೊದಲ್ಲಿ ದಾಖಲಾಗಿದೆ.
ಮಗುವನ್ನು ರಕ್ಷಿಸಿ, ತಮ್ಮ ವಾಹನದಲ್ಲಿ ಕೂರಿಸಿದ ಪೊಲೀಸರು ಆತನನ್ನು ಸಮಾಧಾನಪಡಿಸಲು ಚಾಕಲೇಟ್‌ ಹಾಗೂ ಬಿಸ್ಕೆಟ್‌ ನೀಡಿದರು. ಆ ಸಂದರ್ಭದಲ್ಲಿ ಬಾಲಕ, ನಾನು ಮನೆಗೆ ಹೋಗಬೇಕು ಎಂದು ಹೇಳುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ.
ಬಳಿಕ ಪೊಲೀಸರು ಈ ಸುದ್ದಿಯನ್ನು ಟ್ವಿಟರ್‌ ಮೂಲಕ ಪ್ರಕಟಿಸಿದ್ದು, ಭದ್ರತಾ ಸಿಬ್ಬಂದಿಯೊಬ್ಬರು ಮಗುವನ್ನು ಸುರಕ್ಷಿತ ಸ್ಥಳಕ್ಕೆ ಎತ್ತಿಕೊಂಡು ಹೋಗುತ್ತಿರುವ ಫೋಟೊವನ್ನೂ ಅದರಲ್ಲಿ ಶೇರ್‌ ಮಾಡಿದ್ದಾರೆ.
ಶ್ರೀನಗರ ನಿವಾಸಿ, ಗುತ್ತಿಗೆದಾರರಾಗಿರುವ ಬಷೀರ್‌ ಖಾನ್‌ (65) ತಾವು ಕೈಗೊಂಡಿದ್ದ ಕಾಮಗಾರಿಯ ಪ್ರಗತಿ ಪರಿಶೀಲನೆಗೆ ಮೊಮ್ಮಗ ಅಯಾದ್‌ ಜತೆಯಲ್ಲಿ ಹಂದ್ವಾರಾಕ್ಕೆ ಹೋಗುತ್ತಿದ್ದಾಗ ಈ ದಾಳಿ ನಡೆದಿದೆ.
ಸೊಪೊರದ ಮಸೀದಿಯೊಂದರಲ್ಲಿ ಅಡಗಿದ್ದ ಉಗ್ರರು ಸಿಆರ್‌ಪಿಎಫ್‌ ಬಸ್‌ ಅನ್ನು ಗುರಿಯಾಗಿಸಿ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿಆರ್‌ಪಿಎಫ್‌ ಸಿಬ್ಬಂದಿಯೂ ಪ್ರತಿದಾಳಿ ನಡೆಸಿದ್ದಾರೆ. ಈ ವೇಳೆ ರಸ್ತೆಯಲ್ಲಿ ಹಲವು ವಾಹನಗಳು ಸಂಚರಿಸುತ್ತಿದ್ದವು. ಕಾರುಗಳಲ್ಲಿದ್ದ ಪ್ರಯಾಣಿಕರು ಇಳಿದು ಸುರಕ್ಷಿತ ಸ್ಥಳಗಳಿಗೆ ಓಡಲು ಯತ್ನಿಸಿದರು. ಈ ವೇಳೆ ಬಷೀರ್‌ ಖಾನ್‌ ಸಹ ಇಳಿದು ತಮ್ಮ ಮೊಮ್ಮಗನ ರಕ್ಷಣೆಗೆ ಮುಂದಾದರು. ಅವರಿಗೆ ದುರದೃಷ್ಟವಶಾತ್‌ ಗುಂಡು ತಗುಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಆದರೆ, ‘‘ತಂದೆಯನ್ನು ತಮ್ಮ ವಾಹನದಿಂದ ಹೊರಗೆ ಎಳೆದು ಗುಂಡಿಟ್ಟು ಹತ್ಯೆ ಮಾಡಲಾಗಿದೆ,’’ ಎಂದು ಬಷೀರ್‌ ಖಾನ್‌ ಅವರ ಪುತ್ರ ಆರೋಪಿಸಿದ್ದಾರೆ. ಆದರೆ, ಪೊಲೀಸರ ಗುಂಡೇಟಿಗೆ ಅವರು ಬಲಿಯಾಗಿದ್ದಾರೆ ಎಂಬ ಆರೋಪವನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.

ಯೋಧ ಹುತಾತ್ಮ
ಗುಂಡಿನ ಚಕಮಕಿಯಲ್ಲಿ ಸಿಆರ್‌ಪಿಎಫ್‌ ಪೇದೆಯೊಬ್ಬರು ಹುತಾತ್ಮರಾಗಿದ್ದಾರೆ. ಮೃತರನ್ನು ದಿಲೀಪ್‌ ಚಾಂದ್‌ ವರ್ಮಾ ಎಂದು ಗುರುತಿಸಲಾಗಿದೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ದಿಲೀಪ್‌ ಆಸ್ಪತ್ರೆಗೆ ಸಾಗಿಸುವ ಹೊತ್ತಿಗೆ ಕೊನೆಯುಸಿರೆಳೆದಿದ್ದಾರೆ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top