ವಿಕ ಸುದ್ದಿಲೋಕ ಬೆಳಗಾವಿ:
ಮಾಸ್ಕ್ ಧರಿಸಿಲ್ಲ ಎನ್ನುವ ಕಾರಣಕ್ಕೆ ಜಟಾಪಟಿ ನಡೆದು ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ಕಮಾಂಡೊ ಸಚಿನ್ ಸಾವಂತ್ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಜನರ ಆಕ್ರೋಶ ರಾಜ್ಯ ಸರಕಾರದ ವಿರುದ್ಧ ತಿರುಗಿದೆ. ಪೊಲೀಸರು ಸಚಿನ್ ಅವರ ಹಿಂಭಾಗಕ್ಕೆ ರಕ್ತ ಹೆಪ್ಪುಗಟ್ಟುವಂತೆ ಹೊಡೆದಿದ್ದಾರೆ ಎನ್ನುವ ಫೋಟೊ ವೈರಲ್ ಆಗಿದೆ. ಜತೆಗೆ ಮಹಿಳಾ ಸಿಬ್ಬಂದಿ ಸೇರಿ 15 ಪೊಲೀಸರು ಮನಬಂದಂತೆ ಥಳಿಸಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಯೋಧನನ್ನು ಪೊಲೀಸರು ಅಮಾನುಷವಾಗಿ ಥಳಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೊಗಳು ಹರಿದಾಡುತ್ತಿದೆ. ಅದು ದೇಶಾದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಟ್ವಿಟರ್‌ನಲ್ಲಿ #ResignHMBommai ಹ್ಯಾಷ್‌ಟ್ಯಾಗ್‌ನೊಂದಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಗೆ ಒತ್ತಾಯಿಸಲಾಗಿದೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆ ತೀವ್ರ ಮುಜುಗರಕ್ಕೊಳಗಾಗಿದೆ. ಚಿಕ್ಕೋಡಿ ತಾಲೂಕು ಸದಲಗಾ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಕುಂಬಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಬೆಂಗಳೂರಿನಲ್ಲಿ ಯುವತಿಯರು ಲಾಕ್‌ಡೌನ್ ಉಲ್ಲಂಘಿಸಿ ಪೊಲೀಸರಿಗೆ ಲೇವಡಿ ಮಾಡಿ ಎಸ್ಕೇಪ್ ಆಗಿದ್ದಾರೆ. ಅಂಥವರನ್ನು ಬಂಧಿಸಿ ಪೌರುಷ ತೋರಿಸುವುದನ್ನು ಬಿಟ್ಟು ಕ್ಷುಲ್ಲಕ ಕಾರಣಕ್ಕಾಗಿ ಯೋಧನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಸಾರ್ವಜನಿಕರು ಕ್ರೋಧ ವ್ಯಕ್ತಪಡಿಸಿದ್ದಾರೆ.
ಪೊಲೀಸರ ವಿರುದ್ಧ ದೂರು: ಇನ್ನೊಂದೆಡೆ ಸಿಆರ್‌ಪಿಎಫ್ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸರ ವಿರುದ್ಧ ದೂರು ದಾಖಲಿಸಲು ನಿರ್ಧರಿಸಿದೆ. ‘‘ಮೇಲಧಿಕಾರಿಗಳಿಗೆ ವರದಿ ಮಾಡಲಾಗಿದೆ. ಯೋಧನ ಮೇಲೆ ಪೊಲೀಸರು ನಡೆಸಿದ ಕೃತ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು’’, ಎಂದು ಸಿಆರ್‌ಪಿಎಫ್ ಕಮಾಂಡರ್ ಒಬ್ಬರು ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದ್ದಾರೆ.
‘‘ಯೋಧನನ್ನು ಠಾಣೆಗೆ ಕರೆತಂದಿದ್ದ ಪೊಲೀಸರು ಜೈಲಿಗೆ ಕಳುಹಿಸುವ ಮೊದಲೇ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಕೊಲೆ ಆರೋಪಿಗಳನ್ನು ಬಂಧಿಸುವ ರೀತಿಯಲ್ಲಿ ಕೈಗೆ ಕೋಳ ಹಾಕಿದ್ದರು. ಒಬ್ಬ ಯೋಧನನ್ನು ಈ ರೀತಿ ನಡೆಸಿಕೊಂಡಿರುವುದು ಅಕ್ಷಮ್ಯ. ಮನೆಯ ಬಾಗಿಲಲ್ಲಿದ್ದರೂ ಮಾಸ್ಕ್ ಧರಿಸಬೇಕು ಎನ್ನುವುದು ಮೂರ್ಖತನ. ಯೋಧ ಯಾವ ತಪ್ಪೂ ಮಾಡಿಲ್ಲ. ಹಾಗಾಗಿ ಪೊಲೀಸರ ವಿರುದ್ಧವೂ ದೂರು ಕೊಡುತ್ತಿದ್ದೇವೆ,’’ ಎಂದು ಸಿಆರ್‌ಪಿಎಫ್ ಹಿರಿಯ ಅಧಿಕಾರಿ ತಿಳಿಸಿದರು.
ಆದರೆ, ಘಟನೆ ಕುರಿತು ಸಚಿನ್ ಅವರ ಕುಟುಂಬಸ್ಥರು ಯಾರೊಂದಿಗೂ ಅನಿಸಿಕೆ ಹಂಚಿಕೊಂಡಿಲ್ಲ. ಮೊಬೈಲ್‌ಗಳನ್ನೂ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ. ‘‘ಸದ್ಯ ಸಚಿನ್ ಖಾನಾಪುರದ ಸಿಆರ್‌ಪಿಎಫ್ ಕೋಬ್ರಾ ತರಬೇತಿ ಕೇಂದ್ರದಲ್ಲಿ ಇದ್ದಾರೆ. ಸದ್ಯ ಅವರ ಆರೋಗ್ಯ ಸರಿಯಾಗಿದೆ’’, ಎಂದು ಸಿಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಯೋಧರಿಗೂ ಜವಾಬ್ದಾರಿ ಇರುತ್ತದೆ. ಸಚಿನ್ ಒಬ್ಬ ಯೋಧ ಎನ್ನುವುದನ್ನೂ ನೋಡದೆ ಅಮಾನುಷವಾಗಿ ಹಿಂಸೆ ನೀಡಿದ್ದಾರೆ. ಬಂಧಿಸುವಾಗಲೂ ಅವರ ಜತೆ ಅನುಚಿತವಾಗಿ ವರ್ತಿಸಿದ್ದಾರೆ.
– ಸಿಆರ್‌ಪಿಎಫ್ ಡೆಪ್ಯುಟಿ ಕಮಾಂಡರ್
ಯೋಧನ ಮೈಮೇಲೆ ಬಾಸುಂಡೆ ಬಿದ್ದಿರುವ ಘಟನೆಗೆ ಸಂಬಂಧಿಸಿದಂತೆ ಸದಲಗಾ ಪೊಲೀಸ್ ಠಾಣೆ ಪಿಎಸ್ಐಯನ್ನು ಅಮಾನತು ಮಾಡಲಾಗಿದೆ. ತನಿಖೆ ಮುಂದುವರಿಸಲಾಗಿದೆ.
– ಲಕ್ಷ್ಮಣ ನಿಂಬರಗಿ ಎಸ್‌ಪಿ ಬೆಳಗಾವಿ
ಸ್ವಯಂ ಪಿಐಎಲ್‌ಗೆ ಮನವಿ
ಬೆಂಗಳೂರು: ಯೋಧನ ಮೇಲೆ ಹಲ್ಲೆಮತ್ತು ಕಾಲಿಗೆ ಸರಪಳಿ ಹಾಕಿ ಹಿಂಸೆ ನೀಡಿದ ಪ್ರಕರಣದ ಕುರಿತು ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಳ್ಳಬೇಕೆಂದು ವಕೀಲ ಜಿ.ಆರ್.ಮೋಹನ್ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ‘‘ಯೋಧ ಸಚಿನ್ ವಿರುದ್ಧ ಐಪಿಸಿ ಸೆಕ್ಷನ್ 323 ಮತ್ತು 345 ಅಡಿಯಲ್ಲಿ ಎಫ್ಐಆರ್ ದಾಖಲಿಸಿರುವುದನ್ನು ಪ್ರಶ್ನೆ ಮಾಡುತ್ತಿಲ್ಲ. ಆದರೆ, ಪೊಲೀಸರು ಯೋಧನನ್ನು ನಡೆಸಿಕೊಂಡಿರುವ ರೀತಿಯ ಬಗ್ಗೆ ಆಕ್ಷೇಪಿಸಲಾಗುತ್ತಿದೆ,’’ ಎಂದಿದ್ದಾರೆ.
ಪ್ರಕರಣ ವಾಪಸ್?:
ಈ ನಡುವೆ, ಪ್ರಕರಣವನ್ನು ಸರಕಾರ ವಾಪಸ್ ಪಡೆಯುವ ಸಾಧ್ಯತೆ ಇದೆ. ಇದನ್ನು ಸೌಹಾರ್ದಯುತವಾಗಿ ಮುಕ್ತಾಯಗೊಳಿಸುವಂತೆ ಸಿಆರ್‌ಪಿಎಫ್ ಡಿಜಿಪಿ ಮಹೇಶ್ವರಿ ಮನವಿ ಮಾಡಿದ್ದಾರೆ.