ಪ್ರಮಾದಗಳ ಸುಳಿಯಲ್ಲಿ ಕಾಂಗ್ರೆಸ್

– ಇಂದಿರಾ-ನೆಹರು ಕುಟುಂಬದ ಪ್ರಭುತ್ವವನ್ನು ಧಿಕ್ಕರಿಸುವ ಧೈರ್ಯ ಮೂಡಿದಾಗ ಮಾತ್ರ ಕಾಂಗ್ರೆಸಿಗೆ ಭವಿಷ್ಯ.

– ಮಹದೇವ್ ಪ್ರಕಾಶ್.
ಎಪ್ಪತ್ತರ ದಶಕದಲ್ಲಿಅ ಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದೇವಕಾಂತ ಬರುವಾ, ‘ಕಾಂಗ್ರೆಸ್ ಎಂದರೆ ಇಂದಿರಾ, ಇಂದಿರಾ ಎಂದರೆ ಕಾಂಗ್ರೆಸ್’ ಎಂದಿದ್ದರು. ಇಂತಹ ಭಟ್ಟಂಗಿಗಳ ಉದ್ಘೋಷಗಳು ನಿರಂತರವಾಗಿ ಮುಂದುವರಿದ ಕಾರಣ ಕಾಂಗ್ರೆಸಿನಲ್ಲಿ ವಂಶ ಪಾರಂಪರ್ಯ ಆಡಳಿತ ಬಲವಾಗಿ ಬೇರೂರಿತು. ದೇವಕಾಂತ ಬರುವಾ ಅವರಂತಹ ಭಟ್ಟಂಗಿಗಳು ಕಾಂಗ್ರೆಸ್ ಎಂದರೆ ರಾಹುಲ್ ಗಾಂಧಿ, ರಾಹುಲ್ ಗಾಂಧಿ ಎಂದರೆ ಕಾಂಗ್ರೆಸ್ ಎಂದು ಈಗಲೂ ಜಪ ಮಾಡುತ್ತಿದ್ದಾರೆ. ಅಂತಹವರಿಗೆ ಅಂಕುಶ ಹಾಕುವವರು ಯಾರೂ ಇಲ್ಲ. ಇಂತಹವರಿಂದಲೇ ಕಾಂಗ್ರೆಸ್ ನೀತಿ ನಿರೂಪಣಾ ವೇದಿಕೆಗಳು ತುಂಬಿ ತುಳುಕಾಡುತ್ತಿವೆ. ಯಾರಿಗೆ ಅಧಿಕಾರ ಕೊಡಬೇಕು, ಯಾರಿಗೆ ಅಧಿಕಾರ ಕೊಡಬಾರದು ಎನ್ನುವುದನ್ನು ನಿರ್ಧರಿಸುವವರು ಇವರೇ. ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ, ರಾಜಾಸ್ಥಾನದಲ್ಲಿ ಸಚಿನ್ ಪೈಲೆಟ್ ಬಂಡಾಯ ಹೂಡಿ ಕಾಂಗ್ರೆಸಿನ ಅಂತಃಶಕ್ತಿಯನ್ನು ಅಲುಗಾಡಿಸಿದ್ದಾರೆ. ಅದನ್ನೂ ಕಾಂಗ್ರೆಸಿನ ಯುವರಾಜ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಎಷ್ಟೇ ಯುವ ನಾಯಕರು ಪಕ್ಷ ತೊರೆದು ಹೋದರೂ ಕಾಂಗ್ರೆಸಿಗೆ ನಷ್ಟವಾಗುವುದಿಲ್ಲ. ಹೊಸ ತಲೆಮಾರಿನ ನಾಯಕರು ಬೆಳೆಯಲು ಅವಕಾಶ ಆಗುತ್ತದೆ ಎನ್ನುವುದು ನೆಹರು-ಇಂದಿರಾ ಕುಟುಂಬದ ವಾರಸುದಾರ ರಾಹುಲ್ ಸಮರ್ಥನೆ.
ಇಂಥ ಉದ್ಧಟ ಸಮರ್ಥನೆಗಳಿಂದಲೇ ಕಾಂಗ್ರೆಸ್ ವೈಫಲ್ಯದ ಹಾದಿ ಹಿಡಿದಿದೆ. ನೂರಮೂವತ್ತು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಅನೇಕ ಸ್ಥಿತ್ಯಂತರಗಳನ್ನು ಕಂಡು, ಕಟ್ಟಕಡೆಗೆ ನೆಹರು-ಇಂದಿರಾ ಗಾಂಧಿ ಕುಟುಂಬದ ಪಕ್ಷ ವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್ ಆಡಳಿತ ಶ್ರೇಣಿಯಲ್ಲಿ ಭಟ್ಟಂಗಿಗಳಿಗೆ ಮಾನ-ಸಮ್ಮಾನ. ಪ್ರತಿಯೊಂದು ರಾಜ್ಯದಲ್ಲಿ ಪಕ್ಷವನ್ನು ಶಕ್ತಿಯುತವಾಗಿ ಸಂಘಟಿಸುವ ಪ್ರಬಲ ಪ್ರಾದೇಶಿಕ ನಾಯಕರನ್ನು ಮೂಲೆಗುಂಪು ಮಾಡುವ ಪ್ರವೃತ್ತಿ ಇದೆ. ಇದಕ್ಕೆ ಇತಿಹಾಸದ ಸಾಕ್ಷಿಯೂ ಇದೆ. ಮರಾಠ ನಾಯಕ ಶರದ್ ಪವಾರ್ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ಕಂಡ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರು. ಪ್ರಧಾನಿ ಹುದ್ದೆಗೇರುವ ಎಲ್ಲಾ ಅರ್ಹತೆಯೂ ಅವರಿಗಿತ್ತು. ಆದರೆ ನಂಬರ್-24 ಅಕ್ಬರ್ ರಸ್ತೆಯ ಸಾಮ್ರಾಟರು, ಶರದ್ ಪವಾರ್ ಅವರನ್ನು ಅತ್ಯಂತ ಯೋಜಿತ ರೀತಿಯಲ್ಲಿ ಅವಮಾನಿಸತೊಡಗಿದರು. ಇದರ ಪರಿಣಾಮವಾಗಿಯೇ ಜನ್ಮ ತಾಳಿದ್ದು ನ್ಯಾಷನಲಿಸ್ವ್ ಕಾಂಗ್ರೆಸ್ ಪಾರ್ಟಿ. ಕಾಂಗ್ರೆಸಿಗೆ ಗುಡ್ ಬೈ ಹೇಳಿದ ಶರದ್ ಪವಾರ್ ಎನ್ಸಿಪಿ ಕಟ್ಟಿ ಕಾಂಗ್ರೆಸ್ ಪಕ್ಷ ಕ್ಕೆ ಸೆಡ್ಡು ಹೊಡೆದರು. ಸದ್ಯ ಮಹಾರಾಷ್ಟ್ರದಲ್ಲಿ ಎನ್ಸಿಪಿ ಜೊತೆಗೆ ಸಖ್ಯವಿಲ್ಲದೆ ಕಾಂಗ್ರೆಸಿಗೆ ಒಂದೇ ಒಂದು ಹೆಜ್ಜೆಯಿಡಲು ಸಾಧ್ಯವಿಲ್ಲ. ಶರದ್ ಪವಾರ್, ಕಾಂಗ್ರೆಸ್ ಜೊತೆಗೇ ಇದ್ದಿದ್ದರೆ, ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ತಲೆ ಎತ್ತಲು ಸಾಧ್ಯವೇ ಆಗುತ್ತಿರಲಿಲ್ಲ. ಈಗಲೂ ಅಷ್ಟೆ ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್ಸಿಪಿ ಜೊತೆ ಅಧಿಕಾರ ಅನುಭವಿಸುತ್ತಿದ್ದರೆ, ಅದಕ್ಕೆ ಶರದ್ ಪವಾರ್ ಅವರ ಸಮರ್ಥ ನಾಯಕತ್ವ ಮತ್ತು ರಾಜಕೀಯ ನೈಪುಣ್ಯವೇ ಕಾರಣ.
ಇನ್ನು ಪಶ್ಚಿಮ ಬಂಗಾಳದಲ್ಲಿಯೂ ಕಾಂಗ್ರೆಸ್ ಸ್ಥಿತಿಗತಿ ಭಿನ್ನವಾಗಿ ಇಲ್ಲ. ಆಕ್ರಮಣಕಾರಿ ವ್ಯಕ್ತಿತ್ವದ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಪಕ್ಷ ಕ್ಕೆ ಪ್ರಬಲ ಶಕ್ತಿ ಆಗಿದ್ದರು. ಆದರೆ ನಂಬರ್-24 ಅಕ್ಬರ್ ರಸ್ತೆಯಲ್ಲಿನ ಕೈ- ಕಮಾಂಡ್ ವೀರರಿಗೆ ನದಿರು ಹೊಡೆಯದೆ ನಂಬರ್-10 ಜನಪಥ್ ರಸ್ತೆಯ ದರ್ಶನವೇ ಸಿಗುವುದಿಲ್ಲ. ಮಮತಾ ಬ್ಯಾನರ್ಜಿ ಇಂಥ ಕೈ-ಕಮಾಂಡ್ ವೀರರ ವಿರುದ್ಧ ಸೆಡ್ಡು ಹೊಡೆದರು. ಕೈಯನ್ನು ಧಿಕ್ಕರಿಸಿ ತೃಣಮೂಲ ಅರ್ಥಾತ್ ಜನತಾ ಕಮಾಂಡ್ ಶಕ್ತಿ ಪ್ರದರ್ಶನಕ್ಕೆ ಮುಂದಾದರು. ಪಶ್ಚಿಮ ಬಂಗಾಳದಲ್ಲಿ ಮಾಕ್ರ್ಸಿಸ್ಟ್ ಕಮ್ಯುನಿಸ್ವ್ ಪಕ್ಷ ಪ್ರಶ್ನಾತೀತವಾಗಿತ್ತು. 1972ರಿಂದ 1977ರವರೆಗೆ ಕಾಂಗ್ರೆಸ್ ಪಕ್ಷ ದ ಸಿದ್ಧಾರ್ಥ ಶಂಕರ್ ರಾಯ್ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದರು. ಅವರ ನಂತರ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ನೆಲೆ ಕಂಡುಕೊಳ್ಳುವುದೇ ಸಾಧ್ಯವಾಗಲಿಲ್ಲ. ತುರ್ತುಪರಿಸ್ಥಿತಿಯ ನಂತರ ಎಲ್ಲಾ ರಾಜ್ಯಗಳಲ್ಲಿಯೂ ಪರಾಭವಗೊಂಡಂತೆ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿಯೂ ಅವಮಾನಕರ ಸೋಲು ಅನುಭವಿಸಿತ್ತು. ತದನಂತರ ಮಾಕ್ರ್ಸಿಸ್ಟ್ ಕಮ್ಯುನಿಸ್ವ್ ಪಕ್ಷ ದ ನೇತೃತ್ವದ ಎಡರಂಗ, ನಿರಂತರ ಏಳು ಅವಧಿಗೆ ಪಶ್ಚಿಮ ಬಂಗಾಳದ ಅಧಿಕಾರ ಸೂತ್ರ ಹಿಡಿಯಿತು. ಐದು ಅವಧಿಗೆ ಜ್ಯೋತಿಬಸು ಮುಖ್ಯಮಂತ್ರಿ ಆಗಿದ್ದರೆ, ಎರಡು ಅವಧಿಗೆ ಬುದ್ಧದೇವ ಭಟ್ಟಾಚಾರ್ಯ ಮುಖ್ಯಮಂತ್ರಿಯಾದರು. ಮೂವತ್ತೈದು ವರ್ಷ ಕಾಲ ಪಶ್ಚಿಮ ಬಂಗಾಳ ಎನ್ನುವ ರಾಜ್ಯವೊಂದಿದೆ ಎನ್ನುವುದನ್ನು ಕಾಂಗ್ರೆಸ್ ಚಕ್ರಾಧಿಪತ್ಯವನ್ನಾಳಿದ ಇಂದಿರಾ-ರಾಜೀವ್ ಮತ್ತು ಸೋನಿಯಾ ಗಾಂಧಿ ಮರೆತೇ ಬಿಟ್ಟಿದ್ದರು. ಇಂಥ ಪರಿಸ್ಥಿತಿಯಲ್ಲಿ ಎಡರಂಗದ ಆಡಳಿತಕ್ಕೆ ಸವಾಲೊಡ್ಡಿದವರು ಮಮತಾ ಬ್ಯಾನರ್ಜಿ. ಅತ್ಯಂತ ಕಿರಿಯ ವಯಸ್ಸಿನಲ್ಲಿ ಲೋಕಸಭೆಗೆ ಆಯ್ಕೆಗೊಂಡ ಮಮತಾ ತಮ್ಮ ಪ್ರಥಮ ಚುನಾವಣೆಯಲ್ಲಿಯೇ ದಾಖಲೆ ನಿರ್ಮಾಣ ಮಾಡಿದರು. ಮಾಕ್ರ್ಸಿಸ್ಟ್ ಕಮ್ಯುನಿಸ್ವ್ ಪಕ್ಷ ದ ಪ್ರಭಾವಿ ನಾಯಕರಲ್ಲಿಒಬ್ಬರಾಗಿದ್ದ ಸೋಮನಾಥ್ ಚಟರ್ಜಿಯವರನ್ನು ಜಾಧವ್ಪುರ್ ಕ್ಷೇತ್ರದಿಂದ ಪರಾಭವಗೊಳಿಸಿ giant killer ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನಂತರದ ದಶಕಗಳಲ್ಲಿ ಕಾಂಗ್ರೆಸ್ ರಾಜಕಾರಣದಲ್ಲಿ ಅತ್ಯಂತ ಪ್ರಭಾವಿ ನಾಯಕಿಯಾಗಿ ಬೆಳೆದರು. ಕಿರಿಯ ವಯಸ್ಸಿನಲ್ಲಿಯೇ ಕೇಂದ್ರ ಸಂಪುಟದಲ್ಲಿ ಪ್ರಭಾವಿ ಸಚಿವೆ ಆಗಿದ್ದರು. ವಾಜಪೇಯಿ ಸರಕಾರದಲ್ಲಿ ಕೇಂದ್ರ ರೈಲ್ವೇ ಸಚಿವೆಯಾಗಿದ್ದರು. 1997ರಲ್ಲಿ ಕಾಂಗ್ರೆಸಿನ ಹೈಕಮಾಂಡ್ ಸಂಸ್ಕೃತಿಯನ್ನು ಪ್ರತಿರೋಧಿಸಿ ಬೇರು ಮಟ್ಟದ ಕಾರ್ಯಕರ್ತರ ಶಕ್ತಿಯನ್ನಾಧರಿಸಿ ತೃಣಮೂಲ ಕಾಂಗ್ರೆಸ್ ಸ್ಥಾಪಿಸಿದರು. ಬೇರು ಮಟ್ಟದ ಕಾರ್ಯಕರ್ತರ ಪಡೆಯನ್ನು ಹೊಂದಿದ್ದ ಎಡರಂಗಕ್ಕೆ ಪರ್ಯಾಯವಾಗಿ ಪಕ್ಷವನ್ನು ಕಟ್ಟಿದರು. ಅಂತಿಮವಾಗಿ 2011ರಲ್ಲಿ ಕಮ್ಯುನಿಸ್ವ್ ಪಕ್ಷದ ನೇತೃತ್ವದ ಆಡಳಿತಕ್ಕೆ ಇತಿಶ್ರೀ ಹಾಡಿ ಮುಖ್ಯಮಂತ್ರಿ ಗಾದಿಗೇರಿದರು. ಒಂದು ವೇಳೆ ಕಾಂಗ್ರೆಸ್ ಹೈ-ಕಮಾಂಡ್ ಮಮತಾ ಬ್ಯಾನರ್ಜಿಯವರಿಗೆ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಸಂಘಟಿಸುವ ಪೂರ್ಣ ಜವಾಬ್ದಾರಿ ವಹಿಸಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದರೆ, ಕಾಂಗ್ರೆಸ್ ಅಲ್ಲಿ ಹೇಳಹೆಸರಿಲ್ಲದಂತೆ ಮೂಲೆಗುಂಪಾಗುತ್ತಿರಲಿಲ್ಲ.
ಆಂಧ್ರಪ್ರದೇಶದಲ್ಲಿಡಾ.ರಾಜಶೇಖರ ರೆಡ್ಡಿ ಕಾಂಗ್ರೆಸಿನ ಪ್ರಶ್ನಾತೀತ ನಾಯಕರಾಗಿದ್ದರು. ವಿಮಾನಾಪಘಾತದಲ್ಲಿ ರೆಡ್ಡಿ ಅಕಾಲ ಮರಣಕ್ಕೆ ಗುರಿಯಾದ ನಂತರ ಕಾಂಗ್ರೆಸ್ ತನ್ನ ತಾಳಕ್ಕೆ ಕುಣಿಯುವವರಿಗೆ ಮುಖ್ಯಮಂತ್ರಿ ಹುದ್ದೆ ನೀಡಿತು. ರಾಜಶೇಖರ ರೆಡ್ಡಿ ಪುತ್ರ ಜಗಮೋಹನ ರೆಡ್ಡಿಯವರ ವಿರುದ್ಧ ಆರ್ಥಿಕ ಅಪರಾಧದ ಮೊಕದ್ದಮೆಗಳನ್ನು ಹೂಡಲಾಯಿತು. ಅಂತಿಮವಾಗಿ ಜಗಮೋಹನ ರೆಡ್ಡಿ ಕಾಂಗ್ರೆಸ್ ಕೈ-ಕಮಾಂಡ್ ವಿರುದ್ಧ ಬಂಡಾಯ ಹೂಡಿ ವೈಎಸ್ಆರ್ ಕಾಂಗ್ರೆಸ್ ಪಕ್ಷ ಸ್ಥಾಪಿಸಿದರು. ಈಗ ಆಂಧ್ರದಲ್ಲಿ ಕಾಂಗ್ರೆಸ್ಗೆ ಅಸ್ತಿತ್ವವೇ ಇಲ್ಲ. ಕಾಂಗ್ರೆಸ್ ಯಾವ ರೀತಿ ಪ್ರಾದೇಶಿಕ ಯುವನಾಯಕರನ್ನು ತುಳಿಯುತ್ತಾ ಬಂದಿದೆ ಎನ್ನುವುದಕ್ಕೆ ಅಸ್ಸಾಂ ಮತ್ತೊಂದು ನಿದರ್ಶನ. ತರುಣ್ ಗೋಗೋಯ್ ಮೂರು ಬಾರಿ ಪಕ್ಷ ದಿಂದ ಮುಖ್ಯಮಂತ್ರಿ ಆಗಿದ್ದರು. ಗೋಗೋಯ್ ಸಂಪುಟದಲ್ಲಿ ಪ್ರಭಾವಶಾಲಿ ಸಚಿವರಾಗಿದ್ದ ಹೇಮಂತ್ ಬಿಶ್ವಾಸ್ ಶರ್ಮ ಮತ್ತು ಗೋಗೋಯ್ ನಡುವೆ ಭಿನ್ನಮತವೇರ್ಪಟ್ಟಿತ್ತು. ಅಂತಹ ಸಂದರ್ಭದಲ್ಲಿ ಕಾಂಗ್ರೆಸ್ ರಾಹುಲ್ ಗಾಂಧಿ, ಶರ್ಮಾ ಅಹವಾಲುಗಳನ್ನು ಕೇಳಲೂ ಅವಕಾಶ ನೀಡಲಿಲ್ಲ. ಬೇಸತ್ತ ಶರ್ಮಾ ಕಾಂಗ್ರೆಸಿಗೆ ಗುಡ್ ಬೈ ಹೇಳಿದರು. ಇದರ ಪರಿಣಾಮ 2001ರಿಂದ 2016ರವರೆಗೆ ನಿರಂತರ ಮೂರು ಬಾರಿ ಅಸ್ಸಾಂನ ಅಧಿಕಾರ ಸೂತ್ರ ಹಿಡಿದಿದ್ದ ಕಾಂಗ್ರೆಸ್ ಸೋಲನ್ನಪ್ಪಿತ್ತು. 2016ರ ಚುನಾವಣೆಯಲ್ಲಿ ಬಿಜೆಪಿ ದಾಖಲೆಯ ಗೆಲುವು ಸಾಧಿಸಿತ್ತು. ಅಸ್ಸಾಂ ಸಂಪುಟದಲ್ಲಿ ಶರ್ಮಾ ಅವರಿಗೆ ಮೂರ್ನಾಲ್ಕು ಪ್ರಭಾವಿ ಖಾತೆಗಳ ಜವಾಬ್ದಾರಿ ವಹಿಸಲಾಯಿತು. ಜೊತೆಗೆ ಅವರನ್ನು ನಾರ್ತ್-ಈಸ್ವ್ ಡೆಮೊಕ್ರಟಿಕ್ ಅಲಯೆಸ್ಸ್ನ ಸಂಚಾಲಕರನ್ನಾಗಿ ನೇಮಿಸಿ, ಈಶಾನ್ಯ ರಾಜ್ಯಗಳಲ್ಲಿ ಭಾಜಪ ಸಂಘಟಿಸುವ ಹೊಣೆಗಾರಿಕೆ ವಹಿಸಲಾಯಿತು. ಶರ್ಮಾ ಅವರನ್ನು ಕಳೆದುಕೊಂಡ ಕಾಂಗ್ರೆಸ್, ಮಧ್ಯಪ್ರದೇಶದಲ್ಲಿಯೂ ಅಂತಹುದೇ ಅಪರಿಪಕ್ವ ನಿರ್ಧಾರ ಕೈಗೊಂಡಿತು. ಹೊಸ ತಲೆಮಾರಿನ ಪ್ರತಿನಿಧಿಯಂತಿದ್ದ ಜ್ಯೋತಿರಾದಿತ್ಯ ಸಿಂಧ್ಯಾ ಅವರ ಭಾವನೆಗಳ ಜೊತೆ ಕಾಂಗ್ರೆಸ್ ಪ್ರಾಮಾಣಿಕವಾಗಿ ಸ್ಪಂದಿಸಿದ್ದರೆ, ಮಧ್ಯಪ್ರದೇಶದಲ್ಲಿ ಅಧಿಕಾರ ಕಳೆದುಕೊಳ್ಳುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ. ಸದ್ಯ ರಾಜಸ್ಥಾನದಲ್ಲಿ ಮತ್ತೊಬ್ಬ ಹೊಸ ತಲೆಮಾರಿನ ನಾಯಕನನ್ನು ಮೂಲೆಗುಂಪು ಮಾಡುವ ಹೊಣೆಗೇಡಿ ಕೆಲಸವನ್ನು ಕಾಂಗ್ರೆಸ್ ನಾಯಕತ್ವ ಮಾಡುತ್ತಿದೆ. ಬಹುಮತ ಉಳಿಸಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಬಹುದು. ಆದರೆ ಕಾಂಗ್ರೆಸ್ ಹಡಗಿನಲ್ಲಿ ಭಿನ್ನಮತದ ರಂಧ್ರಗಳು ಮೂಡಿದೆ, ಅದು ದೊಡ್ಡದಾಗಲು ಹೆಚ್ಚು ದಿನ ಬೇಕಾಗುವುದಿಲ್ಲ. ರಾಜಸ್ಥಾನವೂ ಮಧ್ಯಪ್ರದೇಶದ ಹಾದಿಯಲ್ಲಿ ಸಾಗಿದರೆ ಅಚ್ಚರಿಪಡಬೇಕಿಲ್ಲ.
ಕಾಂಗ್ರೆಸ್ ಸ್ವಯಂಕೃತ ಅಪರಾಧಗಳಿಂದ ದುರ್ಬಲವಾಗುತ್ತಿದ್ದರೆ, ಅದೇ ವೇಳೆ, ಎರಡನೇ ತಲೆಮಾರಿನ ನಾಯಕತ್ವ ಬೆಳೆಸುತ್ತಿರುವ ಬಿಜೆಪಿ ಶಕ್ತಿ ಹೆಚ್ಚಿಸಿಕೊಳ್ಳುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಮತ್ತು  ಲಾಲ್‌ ಕೃಷ್ಣ ಆಡ್ವಾಣಿಯವರ ನಾಯಕತ್ವದ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್‌, ಪ್ರಮೋದ್ ಮಹಾಜನ್, ವೆಂಕಯ್ಯ ನಾಯ್ಡು, ರಾಜ್‌ನಾಥ್‌ ಸಿಂಗ್, ನರೇಂದ್ರ ಮೋದಿ, ಬಿ.ಎಸ್.ಯಡಿಯೂರಪ್ಪ, ಅರುಣ್ ಜೇಟ್ಲಿ, ಅನಂತಕುಮಾರ್, ಹೀಗೆ ಎರಡನೇ ಹಂತದ ನಾಯಕರ ದೊಡ್ಡ ಪಡೆಯೇ ಇತ್ತು. ಕ್ರಿಯಾಶೀಲ ನಾಯಕತ್ವದಿಂದ ಮೋದಿಯವರು ಎರಡನೇ ಬಾರಿಗೂ ಪ್ರಧಾನಿ ಹುದ್ದೆಗೇರಿದರು. ಅವರ ಆಡಳಿತಾವಧಿಯಲ್ಲಿಯೂ ಭಾಜಪ ಎರಡನೇ ಹಂತದ ನಾಯಕರ ಪಡೆಯನ್ನೇ ಸೃಷ್ಟಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಭಾಜಪ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಇವರು ಎರಡನೇ ಹಂತದ ನಾಯಕಗಣ. ಮೋದಿ ನಂತರ ಯಾರು ಎಂದು ಯೋಚಿಸದ ರೀತಿ ಭಾಜಪ ಕಾರ್ಯತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷ ದಲ್ಲಿ ಇಂದಿರಾ-ನೆಹರು ಮನೆತನದವರ ಆಡಳಿತ ಪ್ರಭುತ್ವ ಸಾಧಿಸಿರುವುದರಿಂದ ಅಲ್ಲಿಇನ್ನೊಬ್ಬ ಪ್ರಭಾವಶಾಲಿ ನಾಯಕ ಬೆಳೆಯಲು ಸಾಧ್ಯವಿಲ್ಲ. ಇಂದಿರಾ-ನೆಹರು ಸಂತತಿಯ ಕುಡಿಗಳಿಗೆ ಪ್ರತಿಸ್ಪರ್ಧಿಯಾಗಿ ಯಾವುದೇ ಇನ್ನೊಬ್ಬ ನಾಯಕ ಬೆಳೆಯುವ ಸಾಮರ್ಥ್ಯ ತೋರಿದರೆ ಅಂತಹವರನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕುವ ಸಂಸ್ಕೃತಿ ಕಾಂಗ್ರೆಸ್ಸಿನಲ್ಲಿದೆ. ಇಂದಿರಾ-ನೆಹರು ಸಂತತಿಯ ಪ್ರಭುತ್ವವನ್ನು ಧಿಕ್ಕರಿಸುವ ಧೈರ್ಯ ಯಾವಾಗ ಕಾಂಗ್ರೆಸಿಗರಲ್ಲಿಮೂಡುವುದೋ ಆಗ ಮಾತ್ರ ಕಾಂಗ್ರೆಸ್ಸಿಗೆ ಭವಿಷ್ಯ.

(ಲೇಖಕರು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top