ಕೋವಿಡ್‌ ಎದುರಿಸಲು ಬೇಕು ಬಲವಾದ ಕಾನೂನು – ಅರುಣ್‌ ಶಾಮ್‌

ಚೀನಾ ವೈರಸ್ ಎಂದೇ ಕರೆಸಿಕೊಳ್ಳುವ ಕೋವಿಡ್-19 ಜಗತ್ತಿನಾದ್ಯಂತ ವ್ಯಾಪಿಸುತ್ತಿದೆ. ಹಿಂದೆಂದೂ ಕಂಡರಿಯದ ಸಾವು-ನೋವು, ಕಷ್ಟ-ನಷ್ಟ ಎದುರಾಗಿದೆ. ಪರಿಸ್ಥಿತಿಯನ್ನು ನಿಭಾಯಿಸುವುದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಜಗತ್ತಿನ ಎಲ್ಲಾ ವೈದ್ಯಕೀಯ ಹಾಗೂ ವೈರಾಣು ತಜ್ಞರು, ವಿಜ್ಞಾನಿಗಳು ಬಹಳಷ್ಟು ತಲೆಕೆಡಿಸಿಕೊಂಡು ಈ ಸಮಸ್ಯೆಯ ಪರಿಹಾರಕ್ಕೆ ಮಾರ್ಗೋಪಾಯ ಕಂಡುಹಿಡಿಯುವಲ್ಲಿ ನಿರತರಾಗಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ನಿರೀಕ್ಷೆಗೂ ಮೀರಿ ಎದುರಿಸುತ್ತಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಸಕಾಲಿಕ ಹಾಗೂ ಸಮರ್ಪಕ ನಿರ್ಧಾರಗಳನ್ನು ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಒಟ್ಟಾರೆಯಾಗಿ ಹೇಳುವುದಾದರೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜೊತೆಗೆ ಸ್ಥಳೀಯ ಆಡಳಿತ ವ್ಯವಸ್ಥೆಗಳು ಹಗಲು ರಾತ್ರಿ ಶ್ರಮಿಸುತ್ತಾ ಇವೆ. ನಮ್ಮ ನೆಲದ ಸಂವಿಧಾನ, ಕಾನೂನು ಇವುಗಳು ಈ ಸಂದರ್ಭಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು ನಡೆಸಿಲ್ಲವಾದರೂ ಒಂದಷ್ಟು ಈಗಿರುವ ಕಾನೂನಿನ ಚೌಕಟ್ಟಿನಲ್ಲಿಯೇ ಸರಕಾರಗಳು ಕೆಲಸ ಮಾಡಬೇಕಾಗಿದೆ.

ಸ್ವಾತಂತ್ರ್ಯಪೂರ್ವದಲ್ಲಿ ಸುಮಾರು 1897ರ ಹೊತ್ತಿಗೇ ಬ್ರಿಟಿಷ್ ಆಳ್ವಿಕೆ ಕಾಲದಲ್ಲೇ ಆಗ ಚಾಲ್ತಿಯಲ್ಲಿದ್ದ ಮಾರಕ ಕಾಯಿಲೆಗಳ ನಿವಾರಣೆಗಾಗಿ ಜಾರಿಗೆ ತಂದ Epidemic Diseases Act 1897 ಇನ್ನೂ ಚಾಲ್ತಿಯಲ್ಲಿದೆ. ನಮ್ಮದೇ ಆದ ಸಂವಿಧಾನ ಬಂದರೂ ಕೂಡ ಈ ಬಗ್ಗೆ ಹೊಸ ಕಾನೂನು ಏನೂ ಬರಲಿಲ್ಲ. ಬಹಳ ಮಹತ್ವದ್ದಲ್ಲವಾದರೂ ಕೆಲವೊಂದು ಸಣ್ಣ-ಪುಟ್ಟ ಬದಲಾವಣೆಗಳನ್ನು ಸುಮಾರು 1955-1968 ರ ತನಕ ಮಾಡಿದ್ದು ಬಿಟ್ಟರೆ ಈ ಕಾನೂನನ್ನು ಬಹಳ ಬಳಸಿದ ಸಂದರ್ಭಗಳೇ ಇಲ್ಲವೇನೋ? ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ದೇಶದಲ್ಲಿ ಎದುರಾಗಿರುವ ಈ ಸಂಕಷ್ಟದ ಕಾಲಘಟ್ಟದಲ್ಲಿ ಇರುವ ಕಾನೂನಿನ ಕಿರು ವಿಶ್ಲೇಷಣೆಯ ಅವಶ್ಯಕತೆ ಇದೆ.

ಭಾರತದ ಸಂವಿಧಾನ:
ಸಂವಿಧಾನ ಜಾರಿಗೆ ಬಂದ ನಂತರ ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಹಕ್ಕುಗಳನ್ನು ಹಾಗೂ ಕರ್ತವ್ಯಗಳನ್ನು ನಿಗದಿ ಮಾಡಲಾಯಿತು. ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದಾಗ ನ್ಯಾಯಾಲಯದ ಮೊರೆ ಹೋಗುವ ಅವಕಾಶವನ್ನು ಸಂವಿಧಾನದಲ್ಲೇ ಕಲ್ಪಿಸಲಾಯಿತು. ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಘಟನಾ ಸ್ವಾತಂತ್ರ್ಯ, ವೃತ್ತಿ-ವ್ಯವಹಾರದ, ಉದ್ಯೋಗದ ಸ್ವಾತಂತ್ರ್ಯ, ಬದುಕುವ ಸ್ವಾತಂತ್ರ್ಯ ಮತ್ತು ರಕ್ಷಣೆ ಇವೆಲ್ಲವೂ ದೊರೆತರೂ ಕೂಡ ಇದನ್ನು ನಿಯಂತ್ರಿಸಲು ಸರಕಾರಕ್ಕೆ ಕೆಲವೊಂದು ಸಂದರ್ಭಗಳನ್ನು ಕೂಡಾ ಮಾಡಿಕೊಡಲಾಗಿದೆ. ಸಂವಿಧಾನದತ್ತವಾದ ಎಲ್ಲಾ ಸ್ವಾತಂತ್ರ್ಯಗಳು ನೈತಿಕತೆ ಮತ್ತು ಸಾರ್ವಜನಿಕ ಶಾಂತಿ-ಸೌಹಾರ್ದತೆಯ ಚೌಕಟ್ಟಿನಲ್ಲಿರಬೇಕು. ಈ ನಿಟ್ಟಿನಲ್ಲಿ ಸರಕಾರಗಳು ಸ್ವಾತಂತ್ರ್ಯವನ್ನು ನಿಯಂತ್ರಿಸಲು ಕೂಡಾ ಅವಕಾಶವಿದೆ. ಹಾಗಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ ಸರ್ಕಾರ ಲಾಕ್‌ಡೌನ್ ಮಾಡುವ ಅಧಿಕಾರವನ್ನೂ ಇತರೇ ಕಾನೂನುಗಳ ಸಹಯೋಗದೊಂದಿಗೆ ಬಳಸಿಕೊಳ್ಳುತ್ತಿದೆ. ಕೇಂದ್ರ, ರಾಜ್ಯ ಸರಕಾರ ತಮ್ಮ ಆಡಳಿತಕ್ಕೆ ಅನುಕೂಲವಾದಂತಹ ಕಾನೂನುಗಳನ್ನು ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮಾತ್ರವಲ್ಲದೇ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಆಡಳಿತ ಎಂಬ ಪ್ರತ್ಯೇಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಸಾಂಕ್ರಾಮಿಕ ಕಾಯಿಲೆಗಳ ಕಾಯಿದೆ- 1897:
ಬ್ರಿಟಿಷರ ಆಡಳಿತ ಅವಧಿಯಲ್ಲಿ ಜಾರಿಗೆ ತಂದ ಈ ಕಾನೂನಿನ ಪ್ರಕಾರ ಯಾವುದೇ ರೀತಿಯ ಪಿಡುಗು, ಮಹಾಮಾರಿ ಬಂದ ಸಂದರ್ಭದಲ್ಲಿ ಕೇಂದ್ರಕ್ಕೆ ವಿಶೇಷ ಅಧಿಕಾರವನ್ನು ಕೊಡಲಾಗಿದೆ. ಮಾತ್ರವಲ್ಲ ಕಾಲಾನುಕ್ರಮದಲ್ಲಿ 1968ರತನಕ ಹಲವಾರು ತಿದ್ದುಪಡಿಗಳು ಬಂದಿದ್ದು ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಪರಿಸ್ಥಿತಿಯನ್ನು ಹತೋಟಿಗೆ ತಂದುಕೊಳ್ಳಲು ಬೇಕಾದ ಎಲ್ಲಾ ರೀತಿಯ ಅಧಿಕಾರವನ್ನು ಕೊಡಲಾಗಿದೆ ಮತ್ತು ಈ ಕಾಯ್ದೆಯಡಿಯಲ್ಲಿ ತೆಗೆದುಕೊಂಡಂತಹ ಯಾವುದೇ ನಿರ್ಧಾರಗಳನ್ನು ಅಥವಾ ಹೆಜ್ಜೆಗಳನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿರುವುದಿಲ್ಲ ಎಂದು ಈ ಕಾಯ್ದೆಯಲ್ಲೇ ಹೇಳಲಾಗಿದೆ. ಈ ಕಾಯ್ದೆಯ ಪ್ರಕಾರ ತೆಗೆದುಕೊಂಡ ನಿರ್ಧಾರ ಅಥವಾ ಆದೇಶಗಳನ್ನು ಪಾಲಿಸದೇ ಇದ್ದಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 188ರ ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು ಉಲ್ಲೇಖಿಸಲ್ಪಟ್ಟಿದೆ. ಈ ಕಾಯ್ದೆ ಪ್ರಕಾರವೇ ಕೋವಿಡ್-19 ವೈರಸ್ ಬಗ್ಗೆ ನಮ್ಮ ದೇಶದಲ್ಲಿ ಕೇಂದ್ರ ಸರಕಾರ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು, ಅದೇ ಪ್ರಕಾರ ರಾಜ್ಯ ಸರಕಾರಗಳು ಕೂಡಾ ಅದನ್ನು ಪಾಲಿಸುತ್ತಾ ಬಂದಿವೆ. ಒಂದು ಬಾರಿ ಕಾಯ್ದೆಯ ಪ್ರಕಾರ ಕೇಂದ್ರ ಅಧಿಕೃತ ಘೋಷಣೆ ಮಾಡಿರುವುದರಿಂದ ಎಲ್ಲಾ ರಾಜ್ಯ ಸರಕಾರಗಳಿಗೂ, ಸ್ಥಳೀಯ ಆಡಳಿತ ವ್ಯವಸ್ಥೆಗಳಿಗೂ ತಮ್ಮದೇ ಆದ ಜವಾಬ್ದಾರಿ ಹಾಗೂ ಅಧಿಕಾರ ನೀಡಲಾಗಿದೆ.

ವಿಪತ್ತು ನಿರ್ವಹಣಾ ಕಾಯಿದೆ- 2005:
ಈ ಕಾಯ್ದೆ ಸ್ವಾತಂತ್ರ್ಯ ನಂತರದ ಕಾಯ್ದೆ ಆಗಿರುವುದರಿಂದ ಹಲವಾರು ಸುಧಾರಣೆಗಳನ್ನು ಮತ್ತು ಇಂದಿನ ಪರಿಸ್ಥಿತಿಗೆ ಅನುಕೂಲಕರವಾದ ಹಲವು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಮಾತ್ರವಲ್ಲ ಈ ಬಗ್ಗೆ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಪ್ರಾಧಿಕಾರವನ್ನು ಕೂಡಾ ನೇಮಕ ಮಾಡಲಾಗಿದೆ. ಒಂದು ಬಾರಿ ಈ ಕಾಯ್ದೆಯಡಿಯಲ್ಲಿ ಘೋಷಣೆ ಮಾಡಲ್ಪಟ್ಟರೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಬೇಕಾದಂತಹ ಹಲವಾರು ವ್ಯವಸ್ಥೆಗಳನ್ನು ಮಾಡಲು ಬೇಕಾದ ಅಧಿಕಾರ ಹಾಗೂ ವಿಶೇಷ ಹಣಕಾಸಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿಷಮ ಪರಿಸ್ಥಿತಿಗಳನ್ನು ನಿಭಾಯಿಸಲು ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗಿದೆ. ಈ ಕಾಯ್ದೆಯ ಘೋಷಣೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಸುಳ್ಳು ವದಂತಿಗಳನ್ನು ಹಬ್ಬಿಸುವುದು, ಸುಳ್ಳು ಕ್ಲೇಮುಗಳನ್ನು ಮಾಡುವುದು, ಸರ್ಕಾರಿ ಅಧಿಕಾರಿಗಳೊಂದಿಗೆ ಸಹಕರಿಸದೇ ಇರುವುದು ಎಲ್ಲವೂ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲ್ಪಡುತ್ತದೆ. ಆದರೂ ಕೂಡಾ ಹಲವಾರು ತಾಂತ್ರಿಕ ನ್ಯೂನತೆಗಳನ್ನು ಈ ಕಾಯ್ದೆ ಹೊಂದಿದೆ.

ಭಾರತೀಯ ದಂಡ ಸಂಹಿತೆ:
ಭಾರತೀಯ ದಂಡ ಸಂಹಿತೆಯ ಕಲಂ 269, 270, 271ರ ಪ್ರಕಾರ ಮಹಾ ಸಾಂಕ್ರಾಮಿಕ ಅಥವಾ ಅಂಟುರೋಗವನ್ನು ಹರಡುವುದು ಶಿಕ್ಷಾರ್ಹ ಅಪರಾಧ ಮತ್ತು Quarantine Rule ಉಲ್ಲಂಘನೆ ಕೂಡಾ ಅಪರಾಧ. ಆದರೆ ಈ ಮೂರೂ ಕಲಂಗಳಲ್ಲಿ ಶಿಕ್ಷೆಯ ಪ್ರಮಾಣ 2 ವರ್ಷಕ್ಕಿಂತ ಕಡಿಮೆ ಇದೆ. ಇನ್ನು ದುರುದ್ದೇಶದಿಂದ ಅಥವಾ ನಿರ್ಲಕ್ಷ್ಯದ ನಡವಳಿಕೆಯಿಂದ ಸಾಂಕ್ರಾಮಿಕ ಅಥವಾ ಅಂಟುರೋಗವನ್ನು ಹರಡುವುದನ್ನು ದಂಡ ಸಂಹಿತೆಯ ಕಲಂ 307, 302, 304ರ ಪ್ರಕಾರ ವಿವಿಧ ಪ್ರಕರಣ ಎಂದು ಪರಿಗಣಿಸಲು ಅವಕಾಶವಿದೆಯಾದರೂ ಇದು ದೇಶದ ಸಾಮಾನ್ಯ ಕಾನೂನಿನ ಅಡಿಯಲ್ಲಿ ಬರುವಂತಹ ಶಿಕ್ಷೆಗಳಾಗುತ್ತದೆ ಮಾತ್ರವಲ್ಲ ನ್ಯಾಯಾಲಯದಲ್ಲಿ ಇವುಗಳನ್ನು ಸಾಬೀತುಪಡಿಸಲು ಬೇಕಾದ ಮಾನದಂಡಗಳು ಕಠಿಣವಾದ್ದರಿಂದ ಸರಕಾರ ಮುಜುಗರಕ್ಕೊಳಗಾಗಬೇಕಾದ ಸನ್ನಿವೇಶಗಳುಂಟಾಗಬಹುದು.

ಸ್ಥಳೀಯ ಕಾನೂನುಗಳು:
ಪೌರಾಡಳಿತ, ನಗರ ಸಭೆಗಳು, ಪಂಚಾಯತ್ ಕಾಯ್ದೆಗಳಲ್ಲಿ ಕೂಡಾ ಕೆಲವೊಂದು ವಿಶೇಷ ಅಧಿಕಾರವನ್ನು ಮಹಾನಗರಪಾಲಿಕೆ, ನಗರ ಸಭೆಗಳು, ಪುರಸಭೆಗಳು, ಪಟ್ಟಣ ಪಂಚಾಯತ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಹೀಗೆ ವಿವಿಧ ಮಟ್ಟದಲ್ಲಿ ಸ್ಥಳೀಯ ಕಾನೂನಿನ ಮುಖಾಂತರ ಸಾಂಕ್ರಾಮಿಕ ಅಥವಾ ಅಂಟುರೋಗ ಪರಿಸ್ಥಿತಿಗಳನ್ನು ನಿಭಾಯಿಸಲು ಕೆಲವೊಂದು ವಿಶೇಷ ಅಧಿಕಾರಗಳನ್ನು ಕೊಡಲಾಗಿದೆ. ಆದರೆ ಇವೆಲ್ಲವೂ ಕೂಡ ಸಾಮಾನ್ಯ ರೂಪದಲ್ಲಿದ್ದು, ಈಗ ಬಂದಿರುವಂತಹ ವಿಷಮ ಪರಿಸ್ಥಿತಿಗೆ ತಕ್ಕುದಾಗಿಲ್ಲ ಮತ್ತು ಸೂಕ್ತ ಮಾರ್ಪಾಟುಗಳ ಅವಶ್ಯಕತೆ ಇದೆ. ಆದರೂ ಕೂಡ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಸ್ಥಳೀಯ ಆಡಳಿತ ಸಾರ್ವಜನಿಕ ಹಿತದೃಷ್ಟಿಯಿಂದ ಒಂದಷ್ಟು ಕ್ರಮ ಕೈಗೊಳ್ಳಲು ಅವಕಾಶವಂತೂ ಇದೆ.

ಕೇರಳ ರಾಜ್ಯದಲ್ಲಿ ಸುಗ್ರೀವಾಜ್ಞೆ – 2020:
ಕೇರಳದಲ್ಲಿ ವಿಧಾನ ಸಭಾ ಅಧಿವೇಶನ ಸದ್ಯಕ್ಕೆ ನಡೆಯುತ್ತಿಲ್ಲದೇ ಇರುವುದರಿಂದ ಸರಕಾರವು ಮಾರ್ಚ್ 26 ರಂದು ಸುಗ್ರೀವಾಜ್ಞೆ ಹೊರಡಿಸಿ The Kerala Epidemic Diseases Ordinance-2020ನ್ನು ಜಾರಿಗೆ ತಂದಿದೆ. ಕೇಂದ್ರ ಸರಕಾರ ಕೋವಿಡ್-19ರ ಬಗ್ಗೆ ನೀಡಿದ ನಿರ್ದೇಶನ ಹಾಗೂ ಕೈಗೊಂಡ ಮಾರ್ಗ ಸೂಚಿಗಳನ್ನು ಕ್ರೋಡೀಕರಿಸಿ ಸುಗ್ರೀವಾಜ್ಞೆಯನ್ನೇನೋ ಹೊರಡಿಸಿದ್ದೇನೋ ಸ್ವಾಗತಾರ್ಹ. ಆದರೆ, ಈ ಸುಗ್ರೀವಾಜ್ಞೆಯನ್ನು ಇನ್ನೂ ಸಮರ್ಪಕವಾಗಿ ಮಾಡಬೇಕಾಗಿತ್ತು ಎಂಬುದು ಹಲವರ ಅಭಿಪ್ರಾಯ. ಈ ಕಾಯ್ದೆಯ ಅಡಿಯಲ್ಲಿ ಸಾಂಕ್ರಾಮಿಕ ರೋಗದ ಬಗ್ಗೆ ನೀಡಿದ ನಿರ್ದೇಶನದ ಆದೇಶಗಳನ್ನು ಪಾಲಿಸದೇ ಇದ್ದರೆ ಎರಡು ವರ್ಷಗಳ ತನಕ ಜೈಲು ಶಿಕ್ಷೆ ಮತ್ತು ಹತ್ತು ಸಾವಿರದ ತನಕ ದಂಡ ವಿಧಿಸತಕ್ಕಂತಹ ಶಿಕ್ಷಾರ್ಹ ಅಪರಾಧ ಎಂದು ಹೇಳಲಾಗಿದೆ. ಈ ಶಿಕ್ಷೆಯ ಪ್ರಮಾಣ ಗರಿಷ್ಠ ಏಳು ವರ್ಷ ಇರಬೇಕಾಗಿತ್ತು ಎಂಬುದು ಒಂದು ಕಡೆಯಾದರೆ, ಈ ಅಪರಾಧಗಳು ಸುಲಭವಾಗಿ ಜಾಮೀನು ಪಡೆಯಬಹುದಾದ ಆರೋಪಗಳ ಸಾಲಿಗೆ ಸೇರಿಸಲಾಗಿದೆ ಎಂಬುದು ಇನ್ನೊಂದು ಕಡೆ. ಹಾಗಾಗಿ ಇಂತಹ ಪ್ರಕರಣಗಳನ್ನು ಜಾಮೀನುರಹಿತ ಅಥವಾ ಜಾಮೀನು ಸಿಗದಂತಹ ಪ್ರಕರಣಗಳ ಸಾಲಿಗೆ ಸೇರಿಸುವುದು ಅಗತ್ಯ. ದುರುದ್ದೇಶದಿಂದ ಸಾಂಕ್ರಾಮಿಕ ರೋಗವನ್ನು ಹರಡುವ ಪ್ರಯತ್ನ ಮತ್ತು ಹರಡುವುದು ಕೂಡಾ ಕಾನೂನು ಬಾಹಿರ ಹಾಗೂ ಕನಿಷ್ಠ ಹತ್ತು ವರ್ಷಗಳ ಸಜೆ ಹಾಗೂ ದಂಡ ವಿಧಿಸಬಹುದಾದ ಅಪರಾಧ ಎಂದು ಮಾಡಬೇಕಾಗಿತ್ತು. ಜೊತೆಗೆ ಈ ಕಾಯ್ದೆಯಡಿಯಲ್ಲಿ ನೀಡಿದ ಆದೇಶ, ನಿರ್ದೇಶನಗಳನ್ನು ಪಾಲಿಸದ ಸರಕಾರಿ ನೌಕರರನ್ನು ಕೂಡಾ ಶಿಕ್ಷಿಸುವ ಅಧಿಕಾರ ನೀಡಬೇಕಾಗಿತ್ತು.

ಕರ್ನಾಟಕ ಕೋವಿಡ್-19 ನಿಯಮಾವಳಿ:
ಕರ್ನಾಟಕ ಸಾಂಕ್ರಾಮಿಕ ಕಾಯಿಲೆ ಕಾನೂನು-1897ರ ಪ್ರಕಾರ ಕರ್ನಾಟಕ ಸರಕಾರವು ಮಾ.11ರಂದು ಕೋವಿಡ್-19ಗೆ ಸಂಬಂಧಪಟ್ಟಂತೆ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು, ಈ ರೀತಿಯಾಗಿ ನಿಯಮಾವಳಿಗಳನ್ನು ಮಾಡಿದ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು ಮತ್ತು ತನ್ನ ಎಲ್ಲಾ ಮುಂದಿನ ನಿರ್ಧಾರಗಳನ್ನು ಈ ನಿಯಮಾವಳಿಗಳ ಉಲ್ಲೇಖದೊಂದಿಗೆ ಮಾಡುತ್ತಾ ಬಂದಿದೆ. ಈ ನಿಯಮಾವಳಿಗಳು ಸರಕಾರದ ವ್ಯವಸ್ಥೆಯನ್ನು ನಿರ್ವಹಿಸುವ ಬಗ್ಗೆ ಒಂದಷ್ಟು ಅಧಿಕಾರವನ್ನು ಪ್ರದತ್ತ ಮಾಡಿದೆ ಎಂದು ಹೇಳಲಾದರೂ ಕೂಡಾ ಒಂದು ಸ್ವತಂತ್ರ ಕಾನೂನಿನ ಮಾನ್ಯತೆಯ ಕೊರತೆ ಎದ್ದು ಕಾಣುತ್ತಿದೆ. ಈ ನಿಯಮಾವಳಿಗಳು ಸರಕಾರಿ ಆದೇಶದ ರೂಪದಲ್ಲಿದ್ದು, ಎಲ್ಲರಿಗೂ ಅನ್ವಯವಾಗುವುದೇನೋ ಸತ್ಯ. ಕೇರಳ ಸರಕಾರದ ಮಾದರಿಯಲ್ಲೇ ಇಂತಹ ವಿಷಮ ಪರಿಸ್ಥಿತಿಯನ್ನು ನಿರ್ವಹಿಸಲು ಅನುಕೂಲವಾಗುವಂತೆ ಕಾನೂನು ಅಥವಾ ಸುಗ್ರೀವಾಜ್ಞೆ ಮುಖಾಂತರ ಕಾನೂನನ್ನು ಸದೃಢಗೊಳಿಸುವ ಸಂದರ್ಭ ಎದುರಾಗಿದೆ. ಅದೇನೇ ಇರಲಿ ಇಂತಹ ಒಂದು ಕಿರು ಪ್ರಯತ್ನವನ್ನಾದರೂ ಕೇರಳ ರಾಜ್ಯ ಸರಕಾರ ಮಾಡಿದೆ ಎಂಬುದು ಇಲ್ಲಿ ಪ್ರಮುಖವಾದ ವಿಷಯ. ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಕಾನೂನು ರೂಪಿಸಲು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸಂವಿಧಾನ ಪ್ರದತ್ತವಾದ ಅಧಿಕಾರವಿದೆ. ಇಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಬೇಕಾದ ಸಮರ್ಪಕವಾದ ಕಾನೂನು ಎಲ್ಲಾ ರಾಜ್ಯ ಹಾಗೂ ಕೇಂದ್ರ ಸರಕಾರ ಕೂಡಲೇ ಜಾರಿಗೆ ತರುವುದು ಅತ್ಯಂತ ಸೂಕ್ತ. ಅಂಟುರೋಗದ ಮಹಾಮಾರಿಯಿಂದ ಉಂಟಾಗಬಹುದಾದ ಸಮಸ್ಯೆಗಳು, ಸವಾಲುಗಳು ನಮ್ಮ ಕಣ್ಣ ಮುಂದೆಯೇ ಇದೆ. ಸರಕಾರ ಇಷ್ಟು ವಿನಮ್ರವಾಗಿ ವಿನಂತಿ ಮಾಡಿದರೂ, ಕಟ್ಟುನಿಟ್ಟಾದ ಕ್ರಮ ಕೈಗೊಂಡರೂ ಜನರು ಗೊತ್ತಿದ್ದೋ, ಗೊತ್ತಿಲ್ಲದೆಯೋ ರೋಗವನ್ನು ಹತೋಟಿಗೆ ತರಲು ಅಸಹಕಾರ ನೀಡುತ್ತಿರುವುದು ನಮ್ಮ ಕಣ್ಣ ಮುಂದಿದೆ. ಇಂತಹ ಸಾಂಕ್ರಾಮಿಕ ಅಂಟುರೋಗವನ್ನು ಜೈವಿಕ ಅಸ್ತ್ರವನ್ನಾಗಿ ಬಳಸಿಕೊಂಡು ಆಧುನಿಕ ಭಯೋತ್ಪಾದಕ ಕೃತ್ಯ ಎಸಗುವ ಸಾಧ್ಯತೆಗಳೇ ಹೆಚ್ಚಾಗಿರುವ ಈ ಕಾಲಘಟ್ಟದಲ್ಲಿ, ಆಂತರಿಕ ರಕ್ಷಣೆ ಹಾಗೂ ಭದ್ರತೆ ದೃಷ್ಟಿಯಿಂದ ರಾಷ್ಟ್ರೀಯ ಸುರಕ್ಷತೆಯ ಧ್ಯೇಯ ಸಾಧಿಸುವ ಸಲುವಾಗಿ ಸಮರ್ಪಕ ಕಾನೂನುಗಳು ಬರುವ ನಿಟ್ಟಿನಲ್ಲಿ ಸರಕಾರಗಳು ಕೂಡಲೇ ಕಾರ್ಯಪ್ರವೃತ್ತರಾಗುವುದು ಅತ್ಯವಶ್ಯಕ.

(ಲೇಖಕರು ನ್ಯಾಯವಾದಿ, ರಾಷ್ಟ್ರೀಯ ಕಾನೂನು ಶಾಲೆಯ ಆಡಳಿತ ಮಂಡಳಿ ಸದಸ್ಯರು )

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top