ದಿನ ಕಳೆದಂತೆ ಕೊರೊನಾ ಸೋಂಕಿನ ಬಗ್ಗೆ ಹೊಸ ಹೊಸ ಮಾಹಿತಿಗಳು ದೊರೆಯುತ್ತಿವೆ. ದೊರೆಯುತ್ತಿರುವ ಅಂಕಿ- ಅಂಶ, ಮಾಹಿತಿಗಳನ್ನು ಬಗೆದು ನೋಡಿದರೆ ನಾವು ಇದುವರೆಗೆ ಕೋವಿಡ್ ಬಗ್ಗೆ ನಂಬಿಕೊಂಡು ಬಂದಿರುವ ಹಲವು ಸಂಗತಿಗಳನ್ನೇ ನಿರಾಕರಿಸಬಹುದಾದ ಹಾಗಿದೆ. ಉದಾಹರಣೆಗೆ, ಕೋವಿಡ್ ಪಾಸಿಟಿವ್ ಬಂದ ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕು ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ಈಗ ನಮ್ಮ ರಾಜ್ಯ ಸರಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಕೂಡ, ಲಕ್ಷಣಗಳಿಲ್ಲದ ಸೋಂಕಿತರು ಅಷ್ಟೇನೂ ಅಪಾಯದ ಅಂಚಿನಲ್ಲಿರುವವರಲ್ಲ, ಹಾಗಾಗಿ ಅವರು ಮನೆ ಕ್ವಾರಂಟೈನ್‌ನಲ್ಲಿದ್ದರೆ ಸಾಕು ಎಂದು ಹೇಳಿದೆ. ಹೀಗೆ ಲೋಕದೆಲ್ಲೆಡೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತ ಹೋದಂತೆ ನಾವು ರೂಢಿಸಿಕೊಂಡು ಬಂದ ನಿಯಮಾವಳಿಗಳಲ್ಲೂ ಸಡಿಲವಾಗುತ್ತಿದೆ; ಅದು ನಾವೆಲ್ಲರೂ ಎದುರಿಸಬಹುದಾದ ಸೋಂಕು ಎಂಬುದು ದೃಢಪಡುತ್ತಿದೆ.
ಹಾಗೆಯೇ ಅದು, ನಾವೆಲ್ಲರೂ ಎದುರಿಸಲೇಬೇಕಾದ ಸೋಂಕು ಎಂಬುದು ಕೂಡ ನಿಜ. ಯಾಕೆಂದರೆ ಲಸಿಕೆ ಬರುವವರೆಗೆ ಸೋಂಕಿನ ಮೂಲಕ, ಲಸಿಕೆ ಬಂದ ಬಳಿಕ ಅದರಲ್ಲಿರುವ ದುರ್ಬಲ ವೈರಸ್‌ನ ಮೂಲಕ ನಾವು ಈ ವೈರಾಣುವಿಗೆ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಹೀಗಾಗಿ ಈ ಮನುಕುಲದ ಪ್ರತಿಯೊಬ್ಬನೂ ಈ ವೈರಾಣುವಿಗೆ ಒಂದಲ್ಲ ಒಂದು ರೀತಿಯಲ್ಲಿ ಮುಖಾಮುಖಿಯಾಗಲೇಬೇಕು. ಅದೇ ರೀತಿ, ಕೋವಿಡ್ ಸೋಂಕಿತರಲ್ಲಿ ಮೃತರ ಪ್ರಮಾಣ ಆರೋಗ್ಯ ವ್ಯವಸ್ಥೆ ಬಿಗಿಯಾಗಿರುವ ದಕ್ಷಿಣ ಕೊರಿಯಾ ಮುಂತಾದ ಕಡೆ ಶೇ.1ರಷ್ಟೂ ಇಲ್ಲ. ವೃದ್ಧರು ಹಾಗೂ ಪೂರ್ವಕಾಯಿಲೆಗಳಿಂದ ಪೀಡಿತರಾಗಿದ್ದವರು ಹೆಚ್ಚು ಇದ್ದ ಇಟಲಿಯಲ್ಲಿ ಶೇ.10ಕ್ಕಿಂತ ಹೆಚ್ಚಿತ್ತು. ಹೀಗಾಗಿ ಕೋವಿಡ್ ಸಾವುಗಳ ಹೊಣೆ ಕೋವಿಡ್‌ನದ್ದಲ್ಲ, ಆರೋಗ್ಯ ವ್ಯವಸ್ಥೆಯದ್ದು ಮತ್ತು ಪೂರ್ವಕಾಯಿಲೆಗಳದ್ದು.
ಕೊರೊನಾ ಬಗ್ಗೆ ಇಂಥ ಸಕಾರಾತ್ಮಕ ಹಾಗೂ ನಿಜವಾದ ಅರಿವು ಮೂಡಿಸುವ ಮಾಹಿತಿಗಳು ಇಂದು ಬೇಕಾಗಿವೆ. ವಿಜಯ ಕರ್ನಾಟಕ ಇದನ್ನು ಮೊದಲಿನಿಂದ ಮಾಡುತ್ತ ಬಂದಿದ್ದು, ನಿನ್ನೆ ಪ್ರಕಟಿಸಲಾದ ಕೋವಿಡ್ ಮರಣದ ಪ್ರಮಾಣದ ಕುರಿತ ವರದಿಗೆ ಜನಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಸರಿಯಾದ ಜ್ಞಾನವೇ ಒಂದು ಆಯುಧ. ಕೋವಿಡ್ ಬಗ್ಗೆ ಸಮರ್ಪಕವಾದ, ವೈಜ್ಞಾನಿಕವಾದ ಅರಿವನ್ನು ಸಮಾಜದಲ್ಲಿ ಹೆಚ್ಚಿಸುವ ಪ್ರಯತ್ನಗಳೂ ಮೊದಲಿನಿಂದಲೂ ನಡೆದಿದ್ದರೆ ಜನ ಈಗ ಇಷ್ಟೊಂದು ಭಯಭೀತರಾಗಿ ವರ್ತಿಸಬೇಕಾದ ಪ್ರಮೇಯವೇ ಇರಲಿಲ್ಲ. ಈ ಭೀತಿ ಆತಂಕಗಳಿಂದಾಗಿಯೇ- ಸೋಂಕಿತರನ್ನು ಆಸ್ಪತ್ರೆಗೊಯ್ಯಲು ಅಂಜುವುದು, ಸೇವೆಗೆ ವೈದ್ಯರು ಹಿಂದೇಟು ಹಾಕುವುದು, ಉಸಿರಾಟದ ತೊಂದರೆ ಎಂದು ಬಂದವರಿಗೂ ತುರ್ತು ಚಿಕಿತ್ಸೆ ನೀಡಲು ನಿರಾಕರಿಸುವುದು, ಯಾವುದೇ ಕಾಯಿಲೆಯ ಚಿಕಿತ್ಸೆಗೂ ಮೊದಲು ಕೋವಿಡ್ ಪರೀಕ್ಷೆ ಮಾಡಿಸಿ ಎಂದು ಬಲವಂತ ಮಾಡುವುದು, ಮೃತರ ಶವಸಂಸ್ಕಾರಕ್ಕೆ ಅವಕಾಶ ನೀಡದಿರುವುದು- ಮುಂತಾದ ಘಟನೆಗಳು ನಡೆಯುತ್ತಿವೆ.
ಸರಕಾರ ಇತರ ಯಾವುದೇ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಕೊರೊನಾದ ಚಿಂತೆಯಲ್ಲೇ ಕಾಲ ಕಳೆಯಬೇಕಾಗಿ ಬಂದಿರುವುದು ಕೂಡ ಇದರ ಇನ್ನೊಂದು ಮುಖ ಅಷ್ಟೇ. ಸೋಂಕು ಹೆಚ್ಚಾದ ಕೂಡಲೇ ಲಾಕ್‌ಡೌನ್ ಮಾಡುವುದು, ಕಡಿಮೆ ಅನಿಸಿದಾಗ ತೆಗೆಯುವುದು ಕೂಡ ಅದನ್ನು ವೈಜ್ಞಾನಿಕವಾಗಿ ನಿಭಾಯಿಸಲಾಗದ ನಮ್ಮ ಅಸಮರ್ಥತೆಯನ್ನೇ ಸಾಬೀತುಪಡಿಸುತ್ತದೆ. ಕೋವಿಡ್‌ನಿಂದ ತೀವ್ರ ಸಮಸ್ಯೆಗೀಡಾಗುವ ವಲಯ ಯಾವುದು ಎಂದು ಗುರುತಿಸಿಕೊಂಡು ಅಲ್ಲಿ ಹೆಚ್ಚಿನ ಸುರಕ್ಷತಾ ಕ್ರಮ ಹಾಗೂ ಮಾನವೀಯ ಆರೋಗ್ಯ ಸೇವೆಯನ್ನು ಖಾತರಿಪಡಿಸದೆ ಇದ್ಯಾವುದೂ ಸರಿಹೋಗದು. ಪದೇ ಪದೆ ಲಾಕ್‌ಡೌನ್‌ಗಳು ನಮ್ಮ ಅರ್ಥ ವ್ಯವಸ್ಥೆಯಲ್ಲಿ ಇನ್ನಷ್ಟು ರಂಧ್ರಗಳನ್ನು ಕೊರೆದು, ಕೋವಿಡ್‌ಗಿಂತಲೂ ಹೆಚ್ಚು ಜನ ಹಸಿವು ಮತ್ತು ನಿರುದ್ಯೋಗದಿಂದ ಸಾಯುವಂತೆ ಮಾಡುತ್ತವೆ. ಕೋವಿಡ್‌ನೊಂದಿಗಿನ ಸಹಜ ಬದುಕನ್ನೂ ಇನ್ನಷ್ಟು ದೂರ ದೂರ ಸರಿಸುತ್ತವೆ.