– ಕೋವಿಡ್‌ಗೆ ಬಲಿಯಾದವರ ಅಂತ್ಯಕ್ರಿಯೆಗೆ ಕೊಡಗಿನಲ್ಲಿ ಸ್ವಯಂಸೇವಕರ ಟೀಮ್ ರೆಡಿ
– ಕೊಡಗು ಜಿಲ್ಲಾಡಳಿತದಿಂದ ತರಬೇತಿ.
ಸುನಿಲ್ ಪೊನ್ನೇಟಿ, ಮಡಿಕೇರಿ.
ಕೊರೊನಾ ಶಂಕೆ ಕಂಡುಬಂದರೂ ಸಾಕು ಅಂತಹವರನ್ನು ಅಸ್ಪೃಶ್ಯರಂತೆ ನೋಡಲಾಗುತ್ತದೆ. ಸೋಂಕಿನಿಂದ ಮೃತಪಟ್ಟರಂತೂ ಸಂಬಂಧಿಗಳೇ ಅಂತ್ಯಸಂಸ್ಕಾರದಿಂದ ದೂರ ಸರಿಯುವ ಸುದ್ದಿಗಳು ಸಾಮಾನ್ಯವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಕೊರೊನಾದಿಂದ ಮೃತಪಟ್ಟವರಿಗೆ ಗೌರವಯುತವಾಗಿ ಮೋಕ್ಷ ಕೊಡಲು ಸ್ವಯಂ ಸೇವಕರ ತಂಡಗಳು ಜಿಲ್ಲೆಯಲ್ಲಿ ಸಿದ್ಧವಾಗಿದೆ. ಇವರಿಗೆ ಜಿಲ್ಲಾಡಳಿತವೇ ತರಬೇತಿ ನೀಡಿದೆ. ಶನಿವಾರ ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟ ಕುಶಾಲನಗರದ ದಂಡಿನಪೇಟೆಯ 58 ವರ್ಷದ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಭಾನುವಾರ ಇಲ್ಲಿನ ರಾಣಿಪೇಟೆಯಲ್ಲಿರುವ ಸ್ಮಶಾನದಲ್ಲಿ ನಡೆಸಲಾಯಿತು. ಈ ಕಾರ್ಯವನ್ನು ಎಸ್‌ಡಿಪಿಐನ ಸ್ವಯಂಸೇವಕರ ತಂಡ ವಿಬದ್ಧವಾಗಿ ನಡೆಸಿತು. ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ವಿವಿಧ ಜನಾಂಗಗಳ ಪ್ರಮುಖರ ಜೊತೆಗೆ ಇತ್ತೀಚೆಗೆ ಜಿಲ್ಲಾಡಳಿತ ನಡೆಸಿದ್ದ ಸಭೆಯಲ್ಲೂ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಸ್ವಯಂಸೇವಕರು ಬರುವುದರಿಂದ ಅನನುಕೂಲ ಆಗುತ್ತದೆ. ಹಾಗಾಗಿ ಮೊದಲೇ ಹೆಸರು ನೋಂದಾಯಿಸಿಕೊಂಡು ಸೂಕ್ತ ತರಬೇತಿ ಪಡೆದುಕೊಳ್ಳುವ ಅಗತ್ಯತೆಯನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿಕೊಂಡಿದ್ದರು. ಈ ಬೆನ್ನಲ್ಲೇ ಎಸ್‌ಡಿಪಿಐನ 30 ಮಂದಿ, ವಿಶ್ವ ಹಿಂದೂ ಪರಿಷತ್, ಬಜರಂಗದಳದ 45 ಯುವಕರು, ಸೇವಾಭಾರತಿಯ ಸ್ವಯಂಸೇವಕರು ಹಾಗೂ ಕ್ರಿಶ್ಚಿಯನ್ ಸಮುದಾಯದ ಸ್ವಯಂಸೇವಕರು ಮುಂದೆ ಬಂದರು. ಅಂತ್ಯಸಂಸ್ಕಾರದ ಉದ್ದೇಶಕ್ಕಾಗಿ ಮೂರೂ ತಾಲೂಕುಗಳಲ್ಲೂ ಸ್ಮಶಾನ ಜಾಗ ಮೀಸಲಿಡಲಾಗಿದೆ. ಆಯಾಯ ಪ್ರದೇಶ ಮತ್ತು ಧರ್ಮಕ್ಕನುಗುಣವಾಗಿ ಸ್ವಯಂಸೇವಕರನ್ನೂ ನೇಮಿಸಿಕೊಳ್ಳಲಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಪಿಪಿಇ ಕಿಟ್‌ಗಳನ್ನೂ ಕೊಡಲಾಗುತ್ತದೆ. ಈ ಉದ್ದೇಶಕ್ಕಾಗಿಯೇ ವಿಶೇಷ ಅಧಿಕಾರಿಗಳನ್ನೂ ಜಿಲ್ಲಾಡಳಿತದ ವತಿಯಿಂದ ನಿಯೋಜಿಸಲಾಗಿದೆ.
ಸ್ವಯಂಸೇವಕರ ಹೆಸರು ನೋಂದಣಿ, ತರಬೇತಿ ಜವಾಬ್ದಾರಿಯನ್ನು ಎಸಿ ಮತ್ತು ಡಿವೈಎಸ್‌ಪಿ ಗಳಿಗೆ ನೀಡಲಾಗಿದೆ. – ಅನೀಸ್ ಕಣ್ಮಣಿ ಜಾಯ್, ಕೊಡಗು ಜಿಲ್ಲಾಧಿಕಾರಿ
ಇದೊಂದು ಸಮಾಜದ ಋಣ ತೀರಿಸುವ ಕೆಲಸ ಎಂದು ಭಾವಿಸುವೆ. ಜಿಲ್ಲಾಡಳಿತದ ತರಬೇತಿ ಪಡೆದುಕೊಂಡೇ ಕಾರ್ಯನಿರ್ವಹಿಸುತ್ತೇವೆ. -ಅನೀಸ್, ಭಜರಂಗದಳದ ಗೋ ರಕ್ಷಣಾ ಜಿಲ್ಲಾ ಪ್ರಮುಖ್
—
ಶವ ಸಂಸ್ಕಾರಕ್ಕೆ ಹೆಗಲು ಕೊಟ್ಟ ಆಪತ್ಬಾಂಧವ ಆಸಿಫ್
– ಮುಹಮ್ಮದ್ ಆರಿಫ್, ಮಂಗಳೂರು.
ಅವರು ವಯೋಸಹಜ ಕಾಯಿಲೆಯಿಂದ ಮೃತಪಟ್ಟರು. ಬಂಧು ಬಳಗ ಕಳೇಬರದತ್ತ ಸುಳಿಯಲಿಲ್ಲ. ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ನಾಲ್ಕು ದಿನವಾದರೂ ಶವ ಇದ್ದಂತೇ ಇತ್ತು ಕೊನೆಗೆ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಅಂತಿಮ ಸಂಸ್ಕಾರ ನೆರವೇರಿಸುವುದಕ್ಕೆ ಸಕಲ ಸಹಾಯ ನೀಡಿದರು. ಮಾನವೀಯತೆ ಗೆಲುವು ಸಾಧಿಸಿತು.
ಚಂದ್ರಹಾಸ ಕುಲಾಲ್ ಎಂಬುವವರು 15 ವರ್ಷಗಳ ಹಿಂದೆ ಮನೆ ಬಿಟ್ಟು ಬೀದಿ ಬೀದಿ ಸುತ್ತುತ್ತಿದ್ದರು. ಕೆಲ ದಿನಗಳ ಹಿಂದೆ ಮೃತಪಟ್ಟರು. ಬಂಟ್ವಾಳದಲ್ಲಿದ್ದ ವಾರಸುದಾರರಿಗೆ ಮರಣ ವಾರ್ತೆ ತಿಳಿಸಲಾಯಿತು. ಉಹೂಂ ಅವರ್ಯಾರೂ ಬರಲಿಲ್ಲ. ಕೊನೆಗೆ ಕುಲಾಲ್ ಅವರ ಸಹೋದರ ಮುಂದೆ ಬಂದರು. ಆದರೆ ಅವರಿಗೆ ಹೆಗಲು ಕೊಡುವವರು ಯಾರು?
ಅವರು ಮೂಲ್ಕಿಯ ಮೈಮುನಾ ಫೌಂಡೇಶನ್‌ನ ‘ಆಪತ್ಬಾಂಧವ’ ಮೊಹಮ್ಮದ್ ಆಸಿಫ್ ಅವರನ್ನು ಸಂಪರ್ಕಿಸಿ, ಅಂತಿಮ ಸಂಸ್ಕಾರ ಮಾಡಲು ನೆರವಾಗಲು ಕೋರಿದರು. ತಕ್ಷಣ ಸ್ಪಂದಿಸಿದ ಆಸಿಫ್, ತಮ್ಮ ಅಶ್ರಮದ ಕಾರ್ನಾಡ್ ವಿಶ್ವನಾಥ ಪೂಜಾರಿ ಮತ್ತು ಆಶ್ರಮದ ಅತಿಥಿ ಅಭಯ ಹಾಗೂ ದಿನೇಶ್ ಅವರ ಜತೆ ಸೇರಿ, ಮೂಲ್ಕಿ ಹಿಂದು ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರದ ಸಿದ್ಧತೆ ಮಾಡಿದರು. ಮೂಲ್ಕಿ ಪುರಸಭೆಯ ನೀರು ಪೂರೈಕೆದಾರ ಕಿಶೋರ್ ಶೆಟ್ಟಿ, ಆಪದ್ಬಾಂಧವ ಸಂಸ್ಥೆಯ ಸಂಶೀರ್ ದಾಮಸ್ಕಟ್ಟೆ, ನಗರ ಸೇವಕ ಪುತ್ತುಬಾವ ಸಹಕರಿಸಿದರು. ಹಿಂದು ಧರ್ಮ ಶಾಸ್ತ್ರದಂತೆ ಅಂತಿಮ ಸಂಸ್ಕಾರ ಮಾಡಲಾಯಿತು.
ಯಾರಿದು ಮೊಹಮ್ಮದ್ ಆಸಿಫ್?
ಇವರು ಎಂಟು ವರ್ಷಗಳಿಂದ ‘ಆಪತ್ಬಾಂಧವ’ ಹೆಸರಿನ ಆ್ಯಂಬುಲೆನ್ಸ್ ಇಟ್ಟುಕೊಂಡಿದ್ದಾರೆ. ಪಡುಬಿದ್ರಿ, ಹೆಜಮಾಡಿ, ಮೂಲ್ಕಿ ಪರಿಸರದಲ್ಲಿ ಅಪಘಾತವಾದರೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಾರೆ; ಯಾರಾದರೂ ಮೃತಪಟ್ಟರೆ ಶವಗಳನ್ನು ಮನೆಗೆ ಸಾಗಿಸುತ್ತಾರೆ. ಮೂಲ್ಕಿಯಲ್ಲಿರುವ ಚಿತಾಗಾರಕ್ಕೆ 800ಕ್ಕಿಂತ ಹೆಚ್ಚು ಮೃತದೇಹಗಳನ್ನು ಸಾಗಿಸಿದ್ದಾರೆ.
150 ರಷ್ಟು ಅನಾಥರನ್ನು ನಾನಾ ಆಶ್ರಮಗಳಿಗೆ ಬಿಟ್ಟಿದ್ದಾರೆ. ಕೆಲವು ಆಶ್ರಮಗಳು ಅನಾಥರನ್ನು ತೆಗೆದುಕೊಳ್ಳದೆ, ಮತ್ತೆ ದಾರಿಯಲ್ಲಿ ಬಿಟ್ಟಿದ್ದರಿಂದ ಬೇಸತ್ತು, ಎರಡು ವರ್ಷಗಳ ಹಿಂದೆ ಕಾರ್ನಾಡು ಬಳಿ ಮೈಮುನಾ ಫೌಂಡೇಶನ್ ಆಪತ್ಬಾಂಧವ ಮಾನಸಿಕ ಚಿಕಿತ್ಸಾ ಪುನರ್ವಸತಿ ಕೇಂದ್ರ ಸ್ಥಾಪಿಸಿದ್ದಾರೆ. 30 ಮಂದಿಗೆ ಆಶ್ರಯ ಕಲ್ಪಿಸಿದ್ದಾರೆ. ಕೆಲ ದಾನಿಗಳಿಂದ ಈ ಸೇವಾ ಕೈಂಕರ್ಯವನ್ನು ಆಸಿಫ್ ನಡೆಸುತ್ತಿದ್ದಾರೆ.
15 ವರ್ಷದ ಹಿಂದೆ ಅಣ್ಣ ಮನೆ ಬಿಟ್ಟಿದ್ದರು.
ಮನೆಗೆ ಸೇರಿಸುವ ಪ್ರಯತ್ನ ಮಾಡಿದರೂ ಆಗಿರಲಿಲ್ಲ. ಮೊನ್ನೆ ತೀರಿಕೊಂಡ ಬಗ್ಗೆ ಮಾಹಿತಿ ಸಿಕ್ಕಿತು. ಕೊರೊನಾ ಭಯದಿಂದ ಅಂತಿಮ ಸಂಸ್ಕಾರ ನಡೆಸಲು ಕುಟುಂಬಸ್ಥರು ಮುಂದೆ ಬಂದಿಲ್ಲ. ಆಸಿಫ್ ಅವರನ್ನು ಸಂಪರ್ಕಿಸಿದಾಗ, ಅವರು ತಕ್ಷಣ ಸ್ಪಂದಿಸಿ, ಅಂತಿಮ ಸಂಸ್ಕಾರಕ್ಕೆ ನೆರವಾದರು. ಅವರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ.
-ಮೃತ ವ್ಯಕ್ತಿಯ ಸಹೋದರ