ಇನ್ನು ಲಸಿಕೆ ರಾಜಕೀಯದ ಪರ್ವ

ಕೋವಿಡ್‌-19ಗೆ ಲಸಿಕೆಯ ಅಂತಿಮ ಹಂತದ ಪ್ರಯೋಗಗಳು ಮೂರು ಕಡೆ ನಡೆಯುತ್ತಿದ್ದು, ಕಂಪನಿಗಳು ದೊಡ್ಡ ಪ್ರಮಾಣದ ಉತ್ಪಾದನೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಲಸಿಕೆ ಸಿದ್ಧಗೊಂಡ ಬಳಿಕ ಏನೇನಾಗಲಿದೆ? ಮೊದಲು ಅದನ್ನು ಯಾರು ಪಡೆಯಲಿದ್ದಾರೆ?

ಎರಡನೇ ಹಂತ ಸಫಲ
ಜನವರಿಯಲ್ಲಿ ಕೊರೊನಾ ವೈರಸ್‌ ಜಗತ್ತಿಡೀ ವ್ಯಾಪಿಸಲು ಆರಂಭಿಸಿದಾಗಲೇ ಅದಕ್ಕೊಂದು ಲಸಿಕೆ ಕಂಡುಹಿಡಿಯಬೇಕು ಎಂಬ ಹಾಹಾಕಾರ ಎಲ್ಲೆಡೆ ಎದ್ದಿತ್ತು. ಚೀನಾ ಹಾಗೂ ಬ್ರಿಟನ್‌ಗಳು ಈ ಬಗ್ಗೆ ಮೊದಲು ಎಚ್ಚೆತ್ತುಕೊಂಡು ವ್ಯಾಕ್ಸೀನ್‌ ಟ್ರಯಲ್‌ ಆರಂಂಭಿಸಿದ್ದವು. ನಂತರ ಇದಕ್ಕೆ ಅಮೆರಿಕ, ರಷ್ಯ, ಭಾರತ ಸೇರಿಕೊಂಡವು. ಇದೀಗ ಮೂರು ಕಡೆ ಲಸಿಕೆಯ ಪ್ರಯೋಗದ ಎರಡನೇ ಹಂತ (ಮಾನವರ ಮೇಲಿನ ಪ್ರಯೋಗ) ಸಫಲಗೊಂಡಿದೆ- ಆಕ್ಸ್‌ಫರ್ಡ್‌, ಚೀನಾ ಮತ್ತು ರಷ್ಯ. ಈ ಯಶಸ್ಸಿನೊಂದಿಗೆ ಮುಂದಿನ- ತಯಾರಿಕೆ, ಬೆಲೆ, ಹಂಚುವಿಕೆಯ ಕುರಿತು ಚಿಂತನೆ ಶುರುವಾಗಿದೆ.

ಆಕ್ಸ್‌ಫರ್ಡ್‌ ಜೊತೆಗೆ ಭಾರತ
ಬ್ರಿಟನ್‌ನ ಆಕ್ಸ್‌ಫರ್ಡ್‌ ಯೂನಿವರ್ಸಿಟಿಯ ವಿಜ್ಞಾನಿಗಳ ತಂಡ ಹಾಗೂ ಬ್ರಿಟಿಷ್‌- ಸ್ವೀಡಿಶ್‌ ಔಷಧ ಕಂಪನಿ ಅಸ್ಟ್ರಾಜೆನೆಕಾ ಜಂಟಿಯಾಗಿ ಒಂದು ಲಸಿಕೆಯನ್ನು ಸಿದ್ಧಪಡಿಸಿವೆ. ಈ ಸಂಸ್ಥೆಯೊಂದಿಗೆ ಭಾರತೀಯ ಮೂಲದ ಸೇರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯ ಕೂಡ ಸೇರಿಕೊಂಡಿದೆ. ಈ ಲಸಿಕೆಯ ಮೂರೇ ಹಂತದ ಪ್ರಯೋಗ ಈಗಗಲೇ ಬ್ರೆಜಿಲ್‌ನಲ್ಲಿ ಸುಮಾರು 4000 ಮಂದಿಯ ಮೇಲೆ ನಡೆದಿದೆ. ಧನಾತ್ಮಕ ಫಲಿತಾಂಶ ಬಂದಿದ್ದು, ಸುರಕ್ಷಿತ ಎಂದು ಖಾತ್ರಿಯಾಗಿದೆ. ಇಷ್ಟರಲ್ಲೇ ಭಾರತದಲ್ಲೂ ಇದರ ಮಾನವ ಟ್ರಯಲ್‌ ಆರಂಭವಾಗಲಿದೆ. ಭಾರತದಲ್ಲಿ ಇದನ್ನು ಸೇರಂ ಕಂಪನಿ ‘ಕೋವಿಶೀಲ್ಡ್‌’ ಎಂಬ ಹೆಸರಿನಿಂದ ಉತ್ಪಾದಿಸಲಿದ್ದು, ಸೆಪ್ಟೆಂಬರ್‌ ವೇಳೆಗೆ ಉತ್ಪಾದನೆ ಆರಂಭಿಸಲಿದೆ. ಈ ವರ್ಷ ಸುಮಾರು 30-40 ಲಕ್ಷ ಲಸಿಕೆ ತಯಾರಿಸುವುದಾಗಿ ಕಂಪನಿಯ ಸಿಇಒ ಹೇಳಿಕೊಂಡಿದ್ದಾರೆ. ಭಾರತದಲ್ಲಿ ಸುಮಾರು 5000 ಮಂದಿಯ ಮೇಲೆ ಎರಡು ತಿಂಗಳ ಕಾಲ ಹ್ಯೂಮನ್‌ ಟ್ರಯಲ್‌ ನಡೆಯಲಿದ್ದು, ಇದರ ನಂತರ ಒಪ್ಪಿಗೆ ಪಡೆದುಕೊಂಡು ಡಿಸೆಂಬರ್‌ ವೇಳೆಗೆ 1 ಕೋಟಿಯಷ್ಟು ಲಸಿಕೆ ಉತ್ಪಾದಿಸಲಾಗುತ್ತದೆ ಎಂದು ಅರು ಹೇಳಿದ್ದಾರೆ. ಈಗಾಗಲೇ ಸೇರಂ, 20 ಲಕ್ಷದಷ್ಟು ಲಸಿಕೆ ಸಿದ್ಧಪಡಿಸಿ ಇಟ್ಟುಕೊಂಡಿದೆ.

ಬೆಲೆ ಎಷ್ಟಿರಬಹುದು?
ಸೇರಂ ಇನ್‌ಸ್ಟಿಟ್ಯೂಟ್‌ ಉತ್ಪಾದಿಸಲಿರುವ ಲಸಿಕೆಯ ಬೆಲೆ ರೂ.1000ದ ಒಳಗೇ ಇರಬಹುದು ಎಂದು ಕಂಪನಿಯ ಸಿಇಒ ಹೇಳಿದ್ದಾರೆ. ಆದರೆ ಬಹುಶಃ ಯಾರೂ ಈ ಲಸಿಕೆಯನ್ನು ಖರೀದಿಸಬೇಕಾಗಲಿಕ್ಕಿಲ್ಲ; ಸರಕಾರವೇ ಒಟ್ಟಾಗಿ ಇದನ್ನು ಖರೀದಿಸಿ ಎಲ್ಲರಿಗೂ ನೀಡಲಿದೆ ಎಂದೂ ಅವರು ಹೇಳಿದ್ದಾರೆ.

ಬ್ರೆಜಿಲ್‌ ಪ್ರಯೋಗ ರಂಗ
ಕೋವಿಡ್‌ ಸೋಂಕಿನ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯಲ್ಲಿ ಎರಡನೇ ಸ್ಥಾನಕ್ಕೆ ಬಂದು ನಿಂತಿರುವ ಬ್ರೆಜಿಲ್‌, ಹಲವು ಲಸಿಕೆಗಳ ಮಾನವ ಪ್ರಯೋಗಕ್ಕೆ ತನ್ನ ನೆಲದಲ್ಲಿ ಅವಕಾಶ ನೀಡಿದೆ. ಒಂದು, ಆಕ್ಸ್‌ಫರ್ಡ್‌- ಅಸ್ಟ್ರಾಜೆನೆಕಾ ಲಸಿಕೆ; ಇನ್ನೊಂದು, ಚೀನಾದ ಸಿನೋವಾಕ್‌ ಕಂಪನಿಯ ಲಸಿಕೆ. ಕೋವಿಡ್‌ನ ಸಾಕಷ್ಟು ವೈವಿಧ್ಯಮಯ ಗುಣಲಕ್ಷಣಗಳನ್ನು ತೋರಿಸಿರುವ ಈ ದೇಶದಲ್ಲಿ, ಹತ್ತುಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ಪ್ರಯೋಗಕ್ಕೆ ಈಗಾಗಲೇ ಒಳಗಾಗಿದ್ದಾರೆ. ಈ ಲಸಿಕೆ ಪ್ರಯೋಗ ಯಶಸ್ವಿಯಾದರೆ ಅದರ ತಂತ್ರಜ್ಞಾನವನ್ನೂ ಬ್ರೆಜಿಲ್‌ ಪಡೆಯುವ ಒಪ್ಪಂದ ಮಾಡಿಕೊಂಡಿದ್ದು, ತಾನೇ ಲಸಿಕೆ ಸಿದ್ಧಪಡಿಸಿಕೊಳ್ಳಲಿದೆ. ಈಗಾಗಲೇ ಹಳದಿಜ್ವರದ ಲಸಿಕೆ ಅಲ್ಲಿ ತಯಾರಾಗುತ್ತಿದೆ.

ರಷ್ಯದಲ್ಲಿ ಮೂರನೇ ಹಂತ
ರಷ್ಯದ ಸರಕಾರಿ ಸ್ವಾಮ್ಯದ ಗಮಲೇಯಾ ಇನ್‌ಸ್ಟಿಟ್ಯೂಟ್‌ ಹಾಗೂ ಅಲ್ಲಿನ ಮಿಲಿಟರಿ ಸೇರಿಕೊಂಡು ಸಿದ್ಧಪಡಿಸುತ್ತಿರುವ ಲಸಿಕೆ ಅಂತಿಮ ಹಂತದಲ್ಲಿದೆ. ಮಿಲಿಟರಿಯಲ್ಲಿ ಮೊದಲಿಗೆ ಸುಮಾರು 5000 ಮಂದಿ ಸ್ವಯಂಸೇವಕರ ಮೇಲೆ ಈ ಲಸಿಕೆ ಪ್ರಯೋಗ ಮಾಡಲಾಗಿದೆ. ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಂಡ ಬಳಿಕ ಸಮಾಜದ ಹಲವು ಗಣ್ಯರ ಮೇಲೆ ಇದನ್ನು ಪ್ರಯೋಗಿಸಲಾಗಿದೆ.

ಚೀನಾದಲ್ಲಿ ಮಾನವ ಪ್ರಯೋಗ
ಚೀನಾದ ಜೀವತಂತ್ರಜ್ಞಾನ ಸಂಸ್ಥೆ ಕ್ಯಾನ್‌ಸಿನೊ ಬಯಾಲಜಿಕ್ಸ್‌ ಹಾಗೂ ಪೀಪಲ್ಸ್‌ ಲಿಬರೇಶನ್‌ ಆರ್ಮಿ ಸೇರಿಕೊಂಡು, ಜಗತ್ತಿನ ಮೊತ್ತ ಮೊದಲ ಹ್ಯೂಮನ್‌ ಟ್ರಯಲ್‌ ಆರಂಭಿಸಿದ್ದವು. ಇದನ್ನು ಎಡಿ5-ಎನ್‌ಸಿಒವಿ ಎಂದು ಕರೆಯಲಾಗಿದೆ. ಇದೂ ತೀವ್ರ ವೇಗದಲ್ಲಿ ಮುಂಚೂಣಿಯಲ್ಲಿ ನಡೆಯುತ್ತಿದೆ. ಇದು ಹಾನಿರಹಿತ ಅಡಿನೊವೈರಸ್‌ ಎಂಬ ವೈರಸ್ಸನ್ನು ಬಳಸಿ, ನೊವೆಲ್‌ ಕೊರೊನಾ ವೈರಸ್‌ ಮೇಲ್ಮೈಯಲ್ಲಿರುವ ಮುಳ್ಳಿನಂಥ ರಚನೆಗಳ (ಸ್ಪೈಕ್ಸ್‌) ಡಿಎನ್‌ಎಗಳನ್ನು ದೇಹಕ್ಕೆ ಸೇರಿಸುವ ಪ್ರಕ್ರಿಯೆ. ದೇಹದೊಳಗೆ ಇವು ಪ್ರತಿರೋಧ ಶಕ್ತಿಯನ್ನು ಪ್ರಚೋದಿಸಿ, ಕೊರೊನಾ ವೈರಸನ್ನು ಎದುರಿಸಬಲ್ಲ ಪ್ರತಿಕಾಯಗಳನ್ನು ಸೃಷ್ಟಿಸುತ್ತವೆ.

ಹ್ಯಾಕಿಂಗ್‌ ಮಾಡುತ್ತಿದೆಯೇ ಚೀನಾ?
ಈ ನಡುವೆ, ಚೀನಾದ ಕೆಲವು ಹ್ಯಾಕರ್‌ಗಳು ಅಮೆರಿಕ, ಬ್ರಿಟನ್‌ ಸೇರಿದಂತೆ ಹಲವು ಪ್ರಮುಖ ದೇಶಗಳ ಲಸಿಕೆ ತಂತ್ರಜ್ಞಾನವನ್ನು ನಾಶ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಲಸಿಕೆ ಸಿದ್ಧಪಡಿಸುವ ತಂತ್ರಜ್ಞಾನವನ್ನು ಕದಿಯುತ್ತಿದ್ದಾರೆ ಎಂದು ಅಮೆರಿಕ ಆರೋಪಿಸಿದೆ. ಈ ಹ್ಯಾಕರ್‌ಗಳ ಹೆಸರನ್ನೂ ಅಮೆರಿಕ ಬಹಿರಂಗಪಡಿಸಿದ್ದು, ಇವರು ಚೀನಾದ ಸೈನ್ಯದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದೂ ಆರೋಪಿಸಿದೆ.

ಯಾರು ಮೊದಲು ಪಡೆಯುತ್ತಾರೆ?
ಕೋವಿಡ್‌ ಲಸಿಕೆ ಮೊದಲು ದೊರೆಯಬೇಕಾದ್ದು ಯಾರಿಗೆ ಎಂಬ ಬಗ್ಗೆ ಚಿಂತನೆ ನಡೆದಿದೆ. ನಿಸ್ಸಂಶಯವಾಗಿ, ಮೊದಲ ಸುತ್ತಿನಲ್ಲಿ, ಕೋವಿಡ್‌ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್‌ಗಳು, ಆರೋಗ್ಯ ಸೇವಾ ಕಾರ್ಯಕರ್ತರು, ಪೊಲೀಸರು, ಅಗ್ನಿಶಾಮಕ ಕಾರ್ಯಕರ್ತರು, ಮಿಲಿಟರಿ, ಶಿಕ್ಷಕರು ಹಾಗೂ ಇತರ ಅಗತ್ಯ ಸೇವೆಗಳವರಿಗೆ ಲಸಿಕೆ ದೊರೆಯಬೇಕು. ನಂತರ ಕೋವಿಡ್‌ ಕಾಯಿಲೆ ವಿಷಮಿಸುವ ಭಯದಲ್ಲಿರುವ ವೃದ್ಧರಿಗೆ ಹಾಗೂ ಪೂರ್ವಕಾಯಿಲೆಗಳಿರುವವರಿಗೆ ದೊರೆಯಬೇಕು ಎಂದು ತಜ್ಞರು ಸೂಚಿಸಿದ್ದಾರೆ. ಆದರೆ ಲಸಿಕೆ ಸಿದ್ಧವಾಗುವ ದೇಶದ ಜನತೆಯೇ ಮೊದಲ ಆದ್ಯತೆ ಪಡೆಯಲಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ.

ಕೋವ್ಯಾಕ್ಸ್‌
ವಿಶ್ವ ಆರೋಗ್ಯ ಸಂಸ್ಥೆ, ಜಾಗತಿಕ ಲಸಿಕೆ ಒಕ್ಕೂಟ (ಗವಿ) ಹಾಗೂ ಬಿಲ್‌ ಮತ್ತು ಮೆಲಿಂಡಾ ಗೇಟ್ಸ್‌ ಫೌಂಡೇಶನ್‌ಗಳು ಸೇರಿಕೊಂಡು ಕೋವಿಡ್‌-19 ಲಸಿಕೆ ಜಾಗತಿಕ ಲಭ್ಯತೆ (ಕೋವ್ಯಾಕ್ಸ್‌) ಎಂಬ ವೇದಿಕೆಯೊಂದನ್ನು ರಚಿಸಿಕೊಂಡಿವೆ. ಲಸಿಕೆ ಅತ್ಯಂತ ಬಡ ದೇಶದ ಜನತೆಯೂ ಸೇರಿದಂತೆ ಎಲ್ಲರಿಗೂ ಲಭ್ಯವಾಗಬೇಕು ಎಂಬುದು ಈ ವೇದಿಕೆಯ ಕಾಳಜಿ. ಯಾವುದೇ ದೇಶದಲ್ಲಿ ವ್ಯಾಕ್ಸೀನ್‌ ತಯಾರಾದರೂ ಅದನ್ನು ಕೇವಲ ಆ ದೇಶದ ಸೊತ್ತೆಂದು ಪರಿಗಣಿಸಿದೆ, ಇಡೀ ಜಗತ್ತಿನ ಸ್ವತ್ತು ಎಂದು ಪರಿಗಣಿಸಬೇಕು; ಎಲ್ಲ ದೇಶಗಳಿಗೂ ಅದು ದೊರೆಯುವಂತೆ ಸುಲಭ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಇವರ ವಾದ. ಜಗತ್ತಿನ ಎಲ್ಲ ಆರೋಗ್ಯಸೇವಾ ಕಾರ್ಯಕರ್ತರು ಹಾಗೂ ಸೋಂಕಿಗೆ ಸುಲಭ ತುತ್ತಾಗುವವರಿಗೆ ಲಸಿಕೆಯನ್ನು ಮೊದಲು ಒದಗಿಸಬೇಕು ಎಂಬ ಮಾರ್ಗಸೂಚಿಯನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ.

ಯಾವಾಗ ಎಲ್ಲರಿಗೆ ದೊರೆಯುತ್ತದೆ?
ಈ ಜಗತ್ತಿನಲ್ಲಿ ಸುಮಾರು 800 ಕೋಟಿ ಜನರಿದ್ದಾರೆ. ವಿಜ್ಞಾನಿಗಳು ಈಗಾಗಲೇ ತಿಳಿಸಿರುವಂತೆ, ಕೋವಿಡ್‌ ಇಮ್ಯುನಿಟಿ ಬಹುಕಾಲ ಮನುಷ್ಯನ ದೇಹದಲ್ಲಿ ಉಳಿಯುವುದಿಲ್ಲ. ಹೀಗಾಗಿ ಲಸಿಕೆಯನ್ನು ಪ್ರತಿಯೊಬ್ಬರಿಗೂ ಎರಡು ಅಥವಾ ಮೂರು ಡೋಸ್‌ ನೀಡಬೇಕಾದೀತು. ಅಂದರೆ 800 ಕೋಟಿಯ ಮೂರು ಪಟ್ಟು. ಅಷ್ಟೊಂದು ಸಂಖ್ಯೆಯ ಲಸಿಕೆಗು ತಯಾರಾಗಲು ವರುಷಗಟ್ಟಲೆ ಬೇಕು. ಇದರಲ್ಲೂ ಶ್ರೀಮಂತ ದೇಶಗಳು, ಅದರಲ್ಲೂ ಶ್ರೀಮಂತರು ಮೊದಲ ಪಾಲನ್ನು ಪಡೆಯುತ್ತಾರೆ. ಹೀಗಾಗಿ ಕಟ್ಟಕಡೆಯ ಮನುಷ್ಯನಿಗೂ ಅದು ತಲುಪಬೇಕಿದ್ದರೆ ವರ್ಷಗಳೇ ಬೇಕಾದೀತು.

ಕಾಸು ಯಾರು ಕೊಡುತ್ತಾರೆ?
ಈಗಾಗಲೇ ದೊಡ್ಡ ದೊಡ್ಡ ಔಷಧ ಕಂಪನಿಗಳು ಬಿಲಿಯಗಟ್ಟಲೆ ಹಣವನ್ನು ಈ ಸಂಶೋಧನೆ ಹಾಗೂ ಉತ್ಪಾದನೆಯಲ್ಲಿ ತೊಡಗಿಸಿವೆ. ಇದಕ್ಕೆ ಪ್ರತಿಫಲವನ್ನು ಅವು ಅಪೇಕ್ಷಿಸುವುದು ಸಹಜ. ಈ ಖರ್ಚನ್ನು ಸರಕಾರಗಳೇ ಕೊಡುತ್ತವೆಯೋ, ಅಥವಾ ಜನರಿಂದ ಸೆಳೆಯಲಾಗುತ್ತದೋ- ಇತ್ಯರ್ಥವಾಗಬೇಕಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top