ಕೋವಿಡ್‌ ಟೆಸ್ಟ್‌ ಕಡ್ಡಾಯವಲ್ಲ – ರೋಗದ ತೀವ್ರತೆ ಅನುಸರಿಸಿ ಚಿಕಿತ್ಸೆ ದೊರೆಯಲಿ

ಕಾರವಾರದಲ್ಲಿ ವೃದ್ಧರೊಬ್ಬರು ಹೃದಯಾಘಾತದಿಂದ ಆಸ್ಪತ್ರೆಗೆ ತೆರಳಿದಾಗ, ಕೋವಿಡ್‌ ಟೆಸ್ಟ್‌ನ ನೆಪ ಒಡ್ಡಿ ಚಿಕಿತ್ಸೆ ನಿರಾಕರಿಸಿದ, ಆಸ್ಪತ್ರೆಗಳಿಗೆ ಅಲೆದಾಡಿದ ಹಾಗೂ ಅವರು ಇದರಿಂದಾಗಿ ಉಂಟಾದ ವಿಳಂಬದಿಂದ ಮೃತಪಟ್ಟ ಘಟನೆ ವರದಿಯಾಗಿದೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಇಂಥ ಹಲವಾರು ಘಟನೆಗಳು ನಡೆದಿದ್ದವು. ಹೆಚ್ಚಾಗಿ ಖಾಸಗಿ ಅಸ್ಪತ್ರೆಗಳವರು, ಗಂಭೀರ ಆರೋಗ್ಯ ಸ್ಥಿತಿಯಿಟ್ಟುಕೊಂಡು ಬರುತ್ತಿದ್ದ ರೋಗಿಗಳನ್ನು ಕೋವಿಡ್‌ ಟೆಸ್ಟ್‌ ಮಾಡಿಸಿಕೊಂಡು ಬನ್ನಿ ಎಂಬ ನೆಪ ನೀಡಿ ಮರಳಿ ಕಳುಹಿಸುತ್ತಿದ್ದರು ಹಾಗೂ ಅಂಥ ರೋಗಿಗಳು ದಾರಿಮಧ್ಯೆ ಅಸುನೀಗಿದ ಪ್ರಕರಣಗಳು ನಡೆದಿದ್ದವು. ಇದನ್ನು ಅನುಸರಿಸಿ ಸರಕಾರ ಕಠಿಣ ಕ್ರಮವನ್ನೇ ತೆಗೆದುಕೊಂಡು, ಹಲವಾರು ಖಾಸಗಿ ಆಸ್ಪತ್ರೆಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿದೆ; ಕೆಲವು ಆಸ್ಪತ್ರೆಗಳ ಪರವಾನಗಿ ರದ್ದುಪಡಿಸಲು ಮುಂದಾಗಿದೆ. ಆದರೆ ಇಂಥ ಸನ್ನಿವೇಶಗಳು ಈಗ ಜಿಲ್ಲೆಗಳಿಂದ ವರದಿಯಾಗುತ್ತಿವೆ. ಜಿಲ್ಲಾಡಳಿತಗಳು ಕೂಡ ಈ ಬಗ್ಗೆ ಕಠಿಣ ನಿಲುವು ತಾಳಬೇಕಾದ ಜರೂರತ್ತು ಕಂಡುಬಂದಿದೆ.
ಈಗ ಮಳೆಗಾಲ ಹಾಗೂ ಚಳಿಗಾಲ ಇಷ್ಟರಲ್ಲೇ ಆಗಮಿಸುತ್ತಿದೆ. ಚಳಿಗಾಲದಲ್ಲಿ ದೈಹಿಕ ವ್ಯಾಯಾಮ, ಚಟುವಟಿಕೆಗಳು ಕುಂದುವುದರಿಂದ, ಹೃದಯಾಘಾತ ಪ್ರಕರಣಗಳು ಹೆಚ್ಚು. ಹಾಗೆಯೇ ರಾಜಧಾನಿಯಲ್ಲಿ, ಶೀತ ವಾತಾವರಣದಿಂದಾಗಿ ಉಸಿರಾಟದ ಸಮಸ್ಯೆಗಳು ಇರುವವರಿಗೆ ಅದು ಉಲ್ಬಣಗೊಳ್ಳುತ್ತದೆ. ಕೆಲವೊಮ್ಮೆ ಕಡಿಮೆ ರೋಗನಿರೋಧಕ ಶಕ್ತಿ ಇರುವವರಲ್ಲಿ ಶೀತ ಜ್ವರಗಳು ನ್ಯುಮೋನಿಯಾಕ್ಕೆ ಕೂಡ ತಿರುಗುವುದುಂಟು. ಇವೆಲ್ಲಕ್ಕೂ ತಕ್ಷಣವೇ ಚಿಕಿತ್ಸೆ ದೊರೆಯಬೇಕಾದದ್ದು ಅನಿವಾರ್ಯ. ಆದರೆ, ಚಿಕಿತ್ಸೆಯ ಹೊಣೆಯಿಂದ ತಪ್ಪಿಸಿಕೊಳ್ಳಲು ವೈದ್ಯರಿಗೂ ಆಸ್ಪತ್ರೆಗಳವರಿಗೂ ಸುಲಭವಾಗಿ ದೊರೆಯುತ್ತಿರುವ ನೆಪ ಎಂದರೆ ಕೋವಿಡ್‌ ಟೆಸ್ಟ್‌ನದ್ದು. ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಬನ್ನಿ, ಇಲ್ಲವಾದರೆ ಚಿಕಿತ್ಸೆ ಇಲ್ಲ ಎಂಬುದೇ ಇವರ ಮೊದಲ ಮಾತು. ಯಾವುದೇ ಚಿಕಿತ್ಸೆಗೂ ಕೋವಿಡ್‌ ಪರೀಕ್ಷೆ ಕಡ್ಡಾಯ ಎಂಬ ಭಾವನೆಯನ್ನೂ ಬಿತ್ತಲಾಗುತ್ತಿದೆ. ಆದರೆ ಇದು ನಿಜವಲ್ಲ. ಗಂಭೀರ ಪರಿಸ್ಥಿತಿಯಲ್ಲಿ ಬಂದ ರೋಗಿಗಳಿಗೆ, ಗರ್ಭಿಣಿಯರಿಗೆ ಚಿಕಿತ್ಸೆ ಮೊದಲು; ಕೋವಿಡ್‌ ಪರೀಕ್ಷೆ ಅನಂತರ ಎಂದು ಸರಕಾರ ಮತ್ತೆ ಮತ್ತೆ ಸ್ಪಷ್ಟಪಡಿಸಿದೆ. ಈ ಬಗ್ಗೆ ಇನ್ನಷ್ಟು ಅರಿವು ಮೂಡಿಸುವ ಅಗತ್ಯವಿದೆ.
ರಾಜ್ಯದಲ್ಲಿ ಕೋವಿಡ್‌ ಹಿಡಿತ ತಪ್ಪಿ ಹಬ್ಬುತ್ತಿರುವುದರಿಂದಾಗಿ, ಕೋವಿಡ್‌ ಟೆಸ್ಟ್‌ಗಳು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವ ಅಗತ್ಯವಂತೂ ಇದೆ. ಕೋವಿಡ್‌ ಪರೀಕ್ಷೆ ಕೇಂದ್ರಗಳು ಹಾಗೂ ಸಿಬ್ಬಂದಿಯ ಸಂಖ್ಯೆ ಹೆಚ್ಚಬೇಕು. ಯಾಕೆಂದರೆ ಪರೀಕ್ಷೆ ಮಾಡಿಸಿದ ಫಲಿತಾಂಶ ದೊರೆಯುವುದು ಕನಿಷ್ಠ ಇಪ್ಪತ್ನಾಲ್ಕು ಗಂಟೆಗಳ ಬಳಿಕ. ಕೆಲವೊಮ್ಮೆ ಎರಡು ದಿನ ಆಗುವುದೂ ಇದೆ. ಉಸಿರಾಟದ ಸಮಸ್ಯೆ, ಹೃದಯ ರೋಗ ಇದ್ದವರಲ್ಲಿ ಈ ವಿಳಂಬ ಮಾರಕ. ಕೆಲವೇ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಪರೀಕ್ಷೆಗೆ ಅವಕಾಶ ಒದಗಿಸಲಾಗಿದೆ. ಇದನ್ನು ಎಲ್ಲ ಅಸ್ಪತ್ರೆಗಳಿಗೆ ವಿಸ್ತರಿಸುವುದರಿಂದ ಅನಗತ್ಯ ಅಲೆದಾಟ ತಪ್ಪಿಸಬಹುದು. ರಾರ‍ಯಪಿಡ್‌ ಕಿಟ್‌ ಪರೀಕ್ಷೆಗಳು ಲಭ್ಯವಿವೆ; ಇದರ ಫಲಿತಾಂಶ ಅರ್ಧ ಗಂಟೆಯಲ್ಲೇ ಸಿಗುತ್ತದಾದರೂ ಇದರ ಲಭ್ಯತೆ ಸೀಮಿತ. ಟೆಸ್ಟ್‌ ಕಿಟ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿ ಎಲ್ಲೆಡೆ ಒದಗಿಸಿ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುವುದರಿಂದ ಸೋಂಕು ಇನ್ನಷ್ಟು ಹರಡದಂತೆ ತಡೆಯಬಹುದು. ಸೋಂಕು ತಡೆಯಲು ದಾರಿಯೆಂದರೆ ‘ಟೆಸ್ಟ್‌, ಮೋರ್‌ ಟೆಸ್ಟ್‌’ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತಲೇ ಇದೆ. ಬಿಬಿಎಂಪಿ ಆ ಬಗ್ಗೆ ಕ್ರಮ ಕೈಗೊಂಡಿದ್ದು ರಾರ‍ಯಂಡಮ್‌ ಟೆಸ್ಟ್‌ಗಳನ್ನೂ ನಡೆಸುತ್ತಿದೆ. ಅದರೆ ಆರೋಗ್ಯ ಸಮಸ್ಯೆಗಳಿದ್ದು ಬಂದವರಿಗೆ ತಕ್ಷಣವೇ ಸ್ಥಳದಲ್ಲೇ ಕೋವಿಡ್‌ ಪರೀಕ್ಷೆ ನಡೆಸಿ ಫಲಿತಾಂಶ ದೊರೆಯುವ ವ್ಯವಸ್ಥೆ ಆದರೆ ಅನ್ಯಾಯವಾಗಿ ಜೀವಹಾನಿ ಆಗುವುದನ್ನು ತಪ್ಪಿಸಬಹುದು. ಖಾಸಗಿ ಆಸ್ಪತ್ರೆ ಹಾಗು ಸರಕಾರಿ ಆಸ್ಪತ್ರೆಗಳ ವೈದ್ಯರು ಕೂಡ ಕೋವಿಡ್‌ ಪರೀಕ್ಷೆಗಾಗಿ ಹಠ ಹಿಡಿಯದೆ, ಮೊದಲು ಮಾಡುತ್ತಿದ್ದಂತೆಯೇ, ರೋಗದ ತೀವ್ರತೆಗನುಗುಣವಾಗಿ ಚಿಕಿತ್ಸೆ ನೀಡುವುದನ್ನು ರೂಢಿಸಿಕೊಳ್ಳಬೇಕು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top