ಕೊರೊನಾ ವೈರಸ್(ಕೋವಿಡ್ 19) ಸೃಷ್ಟಿಸಿರುವ ತಲ್ಲಣಕ್ಕೆ ಇಡೀ ಜಗತ್ತೇ ಸ್ತಬ್ಧವಾಗಿದೆ. ಚೀನಾ, ಅಮೆರಿಕ, ಇಟಲಿ, ಜರ್ಮನಿ ಹಾಗೂ ಸ್ಪೇನ್‌ನಂಥ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೋವಿಡ್ 19 ಎದುರಿಸಲಾಗಿದೇ ಮಕಾಡೆ ಮಲಗಿವೆ. ಈ ದೇಶಗಳಲ್ಲಿ ಸೋಂಕಿಗೆ ಒಳಗಾಗುವವರು ಮತ್ತು ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಲಕ್ಷ ಮತ್ತು ಸಾವಿರ ಲೆಕ್ಕದಲ್ಲಿದೆ. ಆದರೆ, ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತದಲ್ಲಿ ಈ ಕೊರೊನಾ ಉಪಟಳವನ್ನು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಗ್ಗೂಡಿ ಹೋರಾಡುತ್ತಿದ್ದು, ಅದರ ಫಲ ಈಗ ನಿಚ್ಚಳವಾಗುತ್ತಿದೆ. ಲಾಕ್‌ಡೌನ್ ಹೆಚ್ಚು ಪರಿಣಾಮಕಾರಿಯಾಗುತ್ತಿದೆ ಎಂಬುದು ತಜ್ಞರ ಅಭಿಪ್ರಾಯ.
ಜಗತ್ತಿನಲ್ಲೇ ಅತಿ ಹೆಚ್ಚು ಸೋಂಕಿತವಾಗಿರುವ ಐದು ರಾಷ್ಟ್ರಗಳು ಅಂದರೆ, ಅಮೆರಿಕ, ಸ್ಪೇನ್, ಇಟಲಿ, ಫ್ರಾನ್ಸ್ ಮತ್ತು ಜರ್ಮನಿಗಳಿಗೆ ಹೋಲಿಸಿದರೆ, ಸೋಂಕು ಪ್ರಮಾಣ ಭಾರತದಲ್ಲಿ ನಿಧಾನವಾಗಿ ಕಡಿಮೆಯಾಗುತ್ತಿದೆ. ಆದರೆ, ಮರಣ ದರದಲ್ಲಿ ಮಾತ್ರ ಅಂಥ ವ್ಯತ್ಯಾಸ ಕಂಡು ಬರುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಈ ಪಶ್ಚಿಮ ರಾಷ್ಟ್ರಗಳಿಗೆ ಹೋಲಿಸಿದರೆ, ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಕೂಡ ಗಣನೀಯವಾಗಿ ಹೆಚ್ಚಿದೆ!
ಅತಿ ಹೆಚ್ಚು ಸೋಂಕಿತ ರಾಷ್ಟ್ರಗಳಲ್ಲಿ ಸಾವಿನ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಕಡಿಮೆಯಾಗುತ್ತಿಲ್ಲ. ಆದರೆ, ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ. ಇದೇ ವೇಳೆ, ಸೋಂಕಿನಿಂದ ಸಾವಿನ ಪ್ರಮಾಣವನ್ನು ಒಟ್ಟಾರೆ ಸೋಂಕಿನ ತೀವ್ರತೆಯನ್ನು ಸೂಚಿಸಲು ಬಳಸಲಾಗುತ್ತದೆ. ಸೋಂಕಿನ ಭವಿಷ್ಯದ ಸ್ಥಿತಿ, ಹೊಸ ಚಿಕಿತ್ಸಕ ವಿಧಾನಗಳನ್ನು ಶೋಧಿಸಲು ಇದು ನೆರವು ನೀಡುತ್ತದೆ.
ಭಾರತದಲ್ಲಿ ಗಣನೀಯ ಗುಣಮುಖ
ಕೋವಿಡ್ 19 ತೀವ್ರತೆಯನ್ನು ಅಳೆಯಲು ಬಳಸಲಾಗುವ ಇನ್ನೊಂದು ಮಾನದಂಡವೇ, ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣ. ಕ್ಲೋಸ್ಡ್ ಕೇಸಸ್(ಅಂದರೆ, ರೋಗಿ ಗುಣಮುಖನಾಗಿರಬೇಕು ಅಥವಾ ಸಾವಿಗೀಡಾಗಿರಬೇಕು)ಗಳಲ್ಲಿ ಈ ಮಾನದಂಡ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತದೆ. ಇದು ಸಕ್ರಿಯ(ಆಕ್ಟಿವ್ ಕೇಸಸ್) ಪ್ರಕಣಗಳನ್ನು ಒಳಗೊಳ್ಳುವುದಿಲ್ಲ. ಆದರೆ, ಮರಣ ಪ್ರಮಾಣದ ಭಾಗವಾಗಿರುತ್ತದೆ. ಭಾರತದಲ್ಲಿ ಪ್ರತಿ 10 ಕ್ಲೋಸ್ಡ್ ಕೇಸ್‌ಗಳ ಪೈಕಿ 8 ಜನರು ಗುಣಮುಖರಾಗಿರುತ್ತಾರೆ. ಉಳಿದವರಿಬ್ಬರು ಸಾವನ್ನಪ್ಪಿರುತ್ತಾರೆ. ಭಾರತದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.83.6ರಷ್ಟಿದ್ದು, ಇದು ಜಾಗತಿಕ ಸರಾಸರಿಯಾದ ಶೇ.79.1ಕ್ಕಿಂತಲೂ ಹೆಚ್ಚಿದೆ.
ಗುಜರಾತ್‌ನಲ್ಲಿ ಹೆಚ್ಚುತ್ತಿರುವ ಪ್ರಕರಣಗಳು
ಕೇರಳದಲ್ಲಿ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದ್ದರೆ ಗುಜರಾತ್‌ನಲ್ಲಿ ಶೇ.18.3ರ ದರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿವೆ. ಇದು ದೇಶದ ಎಲ್ಲ ರಾಜ್ಯಗಳಲ್ಲೇ ಅತಿ ಹೆಚ್ಚಿನ ಪ್ರಮಾಣವಾಗಿದೆ. ಗುಜರಾತ್ ಮಾತ್ರವಲ್ಲದೇ, ಮಧ್ಯ ಪ್ರದೇಶ(ಶೇ.12.8), ಉತ್ತರ ಪ್ರದೇಶ(ಶೇ.12.2), ಪಶ್ಚಿಮ ಬಂಗಾಳ(ಶೇ.12.1) ಮತ್ತು ಮಹಾರಾಷ್ಟ್ರ(ಶೇ.11.3)ದಲ್ಲೂ ಶರವೇಗದಲ್ಲಿ ಏರಿಕೆಯಾಗುತ್ತಿವೆ.
ರಾಷ್ಟ್ರೀಯ ಸರಾಸರಿಗಿಂತ ಕರ್ನಾಟಕದಲ್ಲಿ ಮರಣ ದರ ಹೆಚ್ಚು
ದೇಶದಲ್ಲಿ ಒಟ್ಟಾರೆ ಮರಣ ಪ್ರಮಾಣ ಹೆಚ್ಚಾಗುತ್ತಿರುವುದು ಕಂಡು ಬಂದ ಬೆನ್ನಲ್ಲೇ ಕರ್ನಾಟಕದಲ್ಲೂ ಮರಣ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಿದೆ!. ಮಂಗಳವಾರ ಹೊತ್ತಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 418ಕ್ಕೇರಿಕೆಯಾಗಿದ್ದು, 17 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಂಕಿನಿಂದ ಸತ್ತವರ ಸಾವಿನ ಸಂಖ್ಯೆ ದ್ವಿಗುಣವಾಗುತ್ತಿದೆ. ಇದರೊಂದಿಗೆ ಕರ್ನಾಟಕದ ಸಾವಿನ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಾಗಿದೆ.
ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ.4ಕ್ಕಿಂತಲೂ ಹೆಚ್ಚಾಗಿದ್ದು, ರಾಷ್ಟ್ರೀಯ ಸರಾಸರಿ ಶೇ.3.2ರಷ್ಟಿದೆ. ಹಾಗೆ ನೋಡಿದರೆ, ದೇಶದಲ್ಲೇ ಮೊದಲು ಕೊರೊನಾ ಸಾವು ಸಂಭವಿಸಿದ್ದು ರಾಜ್ಯದಲ್ಲೇ ಎಂಬುದನ್ನು ಗಮನಿಸಬೇಕು. ಕಲಬುರಗಿಯಲ್ಲಿ ಸೋಂಕಿತ ವ್ಯಕ್ತಿ ಸಾವಿಗೀಡಾಗಿದ್ದರು. ಆ ಬಳಿಕವಷ್ಟೇ ದೇಶದಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಹೆಚ್ಚೆಚ್ಚು ಮುಂಜಾಗ್ರತೆಗಳನ್ನು ಕೈಗೊಳ್ಳುವ ಪ್ರಕ್ರಿಯೆಗೆ ಚಾಲನೆ ದೊರೆಯಲಾರಂಭಿಸಿತು. ಏ.13ರವರೆಗೆ 232 ಸೋಂಕಿತರ ಪೈಕಿ ಆರು ಮಂದಿ ಮೃತಪಟ್ಟಿದ್ದರು. ಈ ಮೂಲಕ ಶೇ.2.6ರ ಮರಣ ಪ್ರಮಾಣವನ್ನು ಕಾಯ್ದುಕೊಂಡಿತ್ತು. ಆದರೆ ಆ ಬಳಿಕ ಮುಂದಿನ 10 ದಿನಗಳಲ್ಲಿ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಶೇ.68ರಷ್ಟು ಹೆಚ್ಚಾಗಿದ್ದು, ಸಾವಿನ ಪ್ರಮಾಣದಲ್ಲೂ ಏರಿಕೆ ಕಂಡು ಬಂದಿದೆ. ಕರ್ನಾಟಕದಲ್ಲಿ ಮೃತಪಟ್ಟವರ ಪೈಕಿ 60 ವರ್ಷಕ್ಕೂ ಮೇಲ್ಪಟ್ಟವರೇ ಹೆಚ್ಚಾಗಿದ್ದಾರೆ. ಅಲ್ಲದೇ ಹೆಚ್ಚಿನವರು ಹೃದಯ ವೈಲ್ಯ ಹಾಗೂ ಉಸಿರಾಟದ ತೊಂದರೆಯನ್ನು ಎದುರಿಸಿದ್ದರು ಎನ್ನಲಾಗಿದೆ.
ಕೇರಳ ಅತ್ಯುತ್ತಮ
ಕೋವಿಡ್ 19 ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣದಲ್ಲಿ ಇಡೀ ಜಗತ್ತಿನಲ್ಲೇ ಭಾರತದ ಸ್ಥಿತಿ ಅತ್ಯುತ್ತಮವಾಗಿದೆ. ಹಾಗೆಯೇ, ಭಾರತದಲ್ಲಿ ಕೇರಳ ನಂ.1 ಸ್ಥಾನದಲ್ಲಿದೆ. ಕೇರಳದಲ್ಲಿ ಮರಣ ಪ್ರಮಾಣ ಶೇ.1.1ರಷ್ಟಿದ್ದು, ಇದು ಇಡೀ ಜಗತ್ತಿನಲ್ಲೇ ಅತ್ಯುತ್ತಮ ಮರಣ ದರವಿದೆ ಎನ್ನುತ್ತದೆ ವರದಿಗಳು.
ರಾಜಸ್ಥಾನ, ದಿಲ್ಲಿಯಲ್ಲಿ ಕಡಿಮೆ
ಕಳೆದ ಏಳು ದಿನಗಳಲ್ಲಿ ರಾಜಸ್ಥಾನ, ದಿಲ್ಲಿ, ಬಿಹಾರ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಸೋಂಕಿತರ ಪ್ರಮಾಣ ತಗುತ್ತಿರುವುದು ಕಂಡು ಬರುತ್ತಿದೆ. ಈಗಾಗಲೇ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಾಗಿದೆ. ಈ ರಾಜ್ಯಗಳಲ್ಲಿ ಸೋಂಕಿತರ ಪ್ರಮಾಣ ಮಟ್ಟಸವಾಗುವ ಹಂತದಲ್ಲಿದೆ. ರಾಜಸ್ಥಾನದಲ್ಲಿ ಶೇ.8.9ರ ದರದಲ್ಲಿ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದ್ದರೆ, ದಿಲ್ಲಿಯಲ್ಲಿ ಶೇ.7.9, ಕರ್ನಾಟಕ ಶೇ.6.7, ಆಂಧ್ರ ಶೇ.5.9, ತೆಲಂಗಾಣ ಶೇ.5.7, ಬಿಹಾರ ಶೇ.5.5 ಮತ್ತು ಜಮ್ಮು ಹಾಗೂ ಕಾಶ್ಮೀರದಲ್ಲಿ ಶೇ.5.2ರಷ್ಟಿದೆ.
ಅರ್ಧ ಭಾರತ ಸೇಫ್
ಸುಮಾರು 130 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತದ ಅರ್ಧದಷ್ಟು ಭಾಗದಲ್ಲಿ ಇನ್ನೂ ಕೊರೊನಾ ವೈರಸ್ ಸೋಂಕು ಹರಡಿಲ್ಲ ಎನ್ನುತ್ತವೆ ವರದಿಗಳು. ದೇಶದಲ್ಲಿರುವ ಒಟ್ಟು 736 ಜಿಲ್ಲೆಗಳ ಪೈಕಿ 325 ಜಿಲ್ಲೆಗಳಲ್ಲಿ ಇದುವರೆಗೆ ಕೋವಿಡ್ 19 ಸೋಂಕು ಹರಡಿಲ್ಲ. ಅಂದರೆ, ದೇಶದ ಶೇ. 46ರಷ್ಟು ಭಾಗವು ಈಗಲೂ ವೈರಸ್ ಮುಕ್ತ.