ಹೊಸದಿಲ್ಲಿ: ವಿಶ್ವಾದ್ಯಂತ ತಲ್ಲಣ ಮೂಡಿಸಿ ಇದುವರೆಗೆ 1.61 ಲಕ್ಷ ಜನರನ್ನು ಬಲಿ ಪಡೆದಿರುವ ಮಹಾಮಾರಿ ಕೊರೊನಾ ವೈರಾಣು ಮಾನವ ನಿರ್ಮಿತ ಎಂದು ನೊಬೆಲ್ ಪುರಸ್ಕೃತ ಫ್ರಾನ್ಸ್‌ನ ವೈದ್ಯಕೀಯ ತಜ್ಞ ಡಾ. ಲಕ್ ಮಾಂಟೆಗ್ನೈರ್ ಆರೋಪಿಸಿದ್ದಾರೆ.
ಕೊರೊನಾದಲ್ಲಿರುವ ವೈರಾಣು ಕಣಗಳ ಅಧ್ಯಯನ ನಡೆಸಿರುವ ಅವರು, ವುಹಾನ್‌ನಲ್ಲಿನ ‘ನ್ಯಾಷನಲ್ ಬಯೋಸೇಫ್ಟಿ’ ಪ್ರಯೋಗಾಲಯದಲ್ಲಿಯೇ ಕೊರೊನಾ ವೈರಾಣು ಸೃಷ್ಟಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಕೊರೊನಾ ವೈರಾಣು ರಚನೆಯನ್ನು ಗಮನಿಸಿದರೆ ಅದರಲ್ಲಿ ಎಚ್‌ಐವಿ ಮತ್ತು ಮಲೇರಿಯಾ ಕ್ರಿಮಿಯ ರಚನೆಗಳು ಹಾಗೂ ಕೆಲವು ಸೂಕ್ಷ್ಮಾಣು ಅಂಶಗಳು ಕೂಡ ಇವೆ. ಅಲ್ಲದೆ ಕೊರೊನಾ ವೈರಾಣು ರಚನೆ ಗಮನಿಸಿದರೆ ಅದರು ನೈಸರ್ಗಿಕವಾಗಿ ಉತ್ಪತ್ತಿಯಾಗಿರಲು ಸಾಧ್ಯವೇ ಇಲ್ಲ,” ಎಂದು ಲಕ್ ಖಚಿತ ಅಭಿಪ್ರಾಯ ಮಂಡಿಸಿದ್ದಾರೆ. ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಕೊರೊನಾ ವೈರಾಣು ಚೀನಾ ನಿರ್ಮಿತ ಜೈವಿಕ ಬಾಂಬ್ ಎಂದು ಸತತವಾಗಿ ಆರೋಪಿಸುತ್ತಲೇ ಇದ್ದಾರೆ. ಅವರ ಆಪಾದನೆಗೆ ಆರೋಪಿಸುತ್ತಿರುವ ಹಿನ್ನೆಲೆಯಲ್ಲಿಯೇ ಮಾಂಟೆಗ್ನೈರ್ ಹೇಳಿಕೆ ಪುಷ್ಟಿ ನೀಡಿದೆ.
…..
ಯಾವುದೇ ವೈರಾಣವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವೇ ಇಲ್ಲ. ಅದರಲ್ಲಿಯೂ ಕೊರೊನಾ ವೈರಾಣು ಮಾನವ ನಿರ್ಮಿತ ಎಂಬುದನ್ನು ಸಾಬೀತುಪಡಿಸುವ ಯಾವ ಪುರಾವಗಳೂ ಇಲ್ಲ.
– ಯುಹಾನ್ ಜಿಮಿಂಗ್, ವುಹಾನ್ ವೈರಾಲಜಿ ಸಂಸ್ಥೆ ಲ್ಯಾಬ್ ನಿರ್ದೇಶಕ
……
ಚೀನಾಗೆ ತಕ್ಕ ಶಾಸ್ತಿ ಎಂದ ಅಮೆರಿಕ
ಚೀನಾ ನೀಡುತ್ತಿರುವ ಮೃತರ ಸಂಖ್ಯೆ ನಿಜವಾದದ್ದಲ್ಲ. ಅಮೆರಿಕ, ಯುರೋಪ್‌ಗಿಂತ ದುಪ್ಪಟ್ಟು, ಮೂರುಪಟ್ಟು ಮಂದಿ ಚೀನಾದಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ. ಕೆಲವೇ ದಿನಗಳಲ್ಲಿ ಈ ವಿವರ ಬಹಿರಂಗಪಡಿಸುತ್ತೇನೆ. ಪ್ರಯೋಗಾಲಯದಲ್ಲೇ ಕೊರೊನಾ ಸೋಂಕು ಸೃಷ್ಟಿಯಾಗಿದೆ ಎಂಬುದು ದೃಢಪಟ್ಟರೆ ಚೀನಾಕ್ಕೆ ತಕ್ಕ ಶಾಸ್ತಿ ಖಚಿತ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ.