ಸಿಎಂ ನಡೆ ಕಂಡಾಗ ನೆನಪಾದದ್ದು ಲೋಹಿಯಾ ಮಾತು

ಕರ್ನಾಟಕ ಲೋಕಾಯುಕ್ತಕ್ಕೆ ಕೊನೇ ಮೊಳೆ ಹೊಡೆಯಲು ಸರ್ಕಾರ ಅಣಿಯಾಗುತ್ತಿರುವ ಈ ಸನ್ನಿವೇಶದಲ್ಲಿ ಸಮಾಜವಾದಿ ಚಿಂತಕ ಲೋಹಿಯಾ ಜೀವನದ  ಒಂದು ಪ್ರಸಂಗ ಮುನ್ನೆಲೆಗೆ ಬಂದು ಬಹಳಷ್ಟು ಕಾಡಿತು. ಆ ನಂತರ ಡಿನೋಟಿಫಿಕೇಶನ್, ಎಸಿಬಿ ಇತ್ಯಾದಿ ಇತ್ಯಾದಿ ಸಂಗತಿಗಳು ಹಾದುಹೋದವು…

    ಸಿಎಂ ಸಿದ್ದರಾಮಯ್ಯ ಸಮಾಜವಾದಿಯೋ, ಲೋಹಿಯಾವಾದಿಯೋ, ಇಲ್ಲ ಮಜಾವಾದಿಯೋ?- ಒಂದು ತಿಂಗಳ ಹಿಂದೆ ಈ ವಿಚಾರವಾಗಿ ಜೋರಾಗಿಯೇ ಚರ್ಚೆ ನಡೆದಿದ್ದು ಎಲ್ಲರಿಗೂ ಗೊತ್ತೇ ಇದೆ. ಅದು ಈಗ ಅಪ್ರಸ್ತುತ ಚರ್ಚೆ ಎಂಬುದು ನನಗೆ ಚೆನ್ನಾಗಿಯೇ ಗೊತ್ತಿದೆ. ಆದರೂ ‘ಊದುವ ಶಂಖವನ್ನು ಊದಬೇಕು’ ಅನ್ನುತ್ತಾರಲ್ಲ, ಹಾಗೆ ಒಂದು ಐತಿಹಾಸಿಕ ಸಂದರ್ಭವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ತವಕ ನನ್ನದು.

ಜವಾಹರಲಾಲ್ ನೆಹರು ದೇಶದ ಪ್ರಧಾನಿಯಾಗಿದ್ದಾಗ ನಡೆದ ಒಂದು ಘಟನೆ. ಅವರ ತಂದೆ ಮೋತಿಲಾಲ್ ನೆಹರು ಆ ಕಾಲಕ್ಕೆ ಆಗರ್ಭ ಶ್ರೀಮಂತರಾಗಿದ್ದವರು. ಬ್ಯಾರಿಸ್ಟರ್ ಪದವಿ ಪಡೆದಿದ್ದವರು. ಸುಪ್ರಸಿದ್ಧ ವಕೀಲರು ಬೇರೆ. ಅಂಥವರ ಪುತ್ರ ನೆಹರು ಎಂದಮೇಲೆ ಅವರ ದೌಲತ್ತು ಕೇಳಬೇಕೆ? ಅವರು ಓದಿದ್ದು, ಬೆಳೆದದ್ದು ಎಲ್ಲವೂ ವಿದೇಶದಲ್ಲಿ. ಅವರ ಮೇಲೆ ಇಂಗ್ಲೆಂಡ್ ಸಂಸ್ಕೃತಿಯ ಪ್ರಭಾವ ಗಾಢವಾಗಿಯೇ ಇತ್ತು. ಹೀಗಾಗಿ ನೆಹರು ಉಡುಗೆ ತೊಡುಗೆ, ಭಾಷೆ, ಭಾವನೆ ಎಲ್ಲದರಲ್ಲೂ ಇಂಗ್ಲೆಂಡಿನ ಛಾಪು ಇದ್ದೇ ಇತ್ತು. ಆ ದೃಷ್ಟಿಯಿಂದ ನೋಡಿದರೆ ನೆಹರು ಗಾಂಧಿ ಪ್ರೀತಿಗೆ ಪಾತ್ರರಾದದ್ದೇ ತೀರಾ ವಿಚಿತ್ರ ಬೆಳವಣಿಗೆ. ಒಂದು ವೇಳೆ ಗಾಂಧಿ ಒಲವು ಗಳಿಸಿಕೊಳ್ಳಲಾಗದಿದ್ದಿದ್ದರೆ ನೆಹರು ಪ್ರಧಾನಿ ಆಗುವುದೇ ಅಸಾಧ್ಯದ ಮಾತಾಗಿತ್ತು ಎಂಬ ಬಲವಾದ ವಾದವೂ ಇದೆ. ನೆಹರು ಗಾಂಧಿಯ ಪ್ರೀತಿ-ವಿಶ್ವಾಸ ಗಳಿಸದೇ ಹೋಗಿದ್ದರೆ ಅವರಿಗೆ ಸಮರ್ಥ ಪರ್ಯಾಯವಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ದೇಶದ ಮೊದಲ ಪ್ರಧಾನಿ ಆಗುತ್ತಿದ್ದರು ಎಂಬುದು ಈಗಲೂ ಚರ್ಚೆಯಲ್ಲಿರಲು ಆ ವಾದವೇ ಕಾರಣ. ನೆಹರು ಪ್ರಧಾನಿ ಪಟ್ಟವೇರುವುದಕ್ಕೂ ಮುನ್ನ ಪಟೇಲ್ ಮತ್ತು ಗಾಂಧಿ ನಡುವೆ ನಡೆದ ಮಾತುಕತೆ ಆ ಅಭಿಪ್ರಾಯವನ್ನು ಪುಷ್ಟೀಕರಿಸುತ್ತದೆ. ಆದು ಬೇರೆಯದೇ ವಿಷಯ. ಆ ವಿಚಾರವನ್ನು ಮತ್ತೊಮ್ಮೆ ನೋಡೋಣ.

ಈಗ ಹೇಳಲು ಹೊರಟಿರುವುದು ಪ್ರಧಾನಿ ನೆಹರು ಅವರ ದಿನಚರಿ, ಪ್ರಧಾನಿಯಾಗಿದ್ದಾಗ ಅವರು ಮಾಡುತ್ತಿದ್ದ ಖರ್ಚುವೆಚ್ಚಗಳ ಕುರಿತಾದ ವಿಚಾರವನ್ನು ಮಾತ್ರ. ಹುಟ್ಟಾ ಶ್ರೀಮಂತರಾಗಿದ್ದ ನೆಹRam_Manohar_Lohiaರು ದೇಶದ ಪ್ರಧಾನಿಯಾಗಿ ಜನರ ತೆರಿಗೆ ಹಣವನ್ನು ವಿನಿಯೋಗ ಮಾಡುತ್ತಿದ್ದ ರೀತಿಯ ಬಗ್ಗೆ ಹಿರಿಯ ಸಮಾಜವಾದಿ ಚಿಂತಕ ರಾಮಮನೋಹರ ಲೋಹಿಯಾ ಅವರು ಒಂದು ಕಣ್ಣಿಟ್ಟಿದ್ದರು. ಆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಮಾಡಬೇಕೆಂದು ಲೋಹಿಯಾ ಹರಸಾಹಸಪಟ್ಟರೂ ನೆಹರು ಪ್ರಭಾವ ಅದಕ್ಕೆ ಅವಕಾಶವನ್ನೇ ಕೊಟ್ಟಿರಲಿಲ್ಲ
. ಹೀಗಾಗಿ ಪ್ರಧಾನಿಯ ದೈನಂದಿನ ಖರ್ಚು ವೆಚ್ಚಗಳ ಕುರಿತು ಲೋಹಿಯಾ ಅವರು 1962ರ ಆಗಸ್ಟ್ 2ರಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ದೇಶದ ಪ್ರಧಾನಿ ದಿನಕ್ಕೆ 25 ಸಾವಿರ ರೂಪಾಯಿಗಳಷ್ಟು ದೊಡ್ಡ ಮೊತ್ತವನ್ನು ಸಾರ್ವಜನಿಕ ಬೊಕ್ಕಸದಿಂದ ಖರ್ಚು ಮಾಡುತ್ತಾರೆ ಎಂಬುದು ಲೋಹಿಯಾ ಆಕ್ಷೇಪಕ್ಕೆ ಕಾರಣವಾಗಿತ್ತು. ಅವರ ಪತ್ರಿಕಾ ಹೇಳಿಕೆಯ ಒಂದು ಅಂಶ ಬಹಳ ಕುತೂಹಲಕರವಾಗಿತ್ತು. ಅದೇನೆಂದರೆ ಆಗ ಭಾರತದಂತಹ ಬಡ ದೇಶದ ಪ್ರಧಾನಿಯ ದಿನದ ವೈಯಕ್ತಿಕ ವೆಚ್ಚ ಆ ಕಾಲಕ್ಕೆ ಬ್ರಿಟನ್ನಿನ ರಾಣಿಯ ಒಂದು ದಿನದ ಖರ್ಚಿಗೆ ಸಮನಾಗಿತ್ತು ಎಂಬುದು. ದೇಶಕ್ಕೆ ಆಗಷ್ಟೇ ಸ್ವಾತಂತ್ರ್ಯ ಲಭಿಸಿತ್ತು. ದೇಶ ವಿಭಜನೆ ಆದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಭಾರತ ಕೊಡಬೇಕಾಗಿ ಬಂದ ನಗದು ಹಂಚಿಕೆ ಮಾಡಿದ ಹೊರೆ ಬೇರೆ ಇತ್ತು. ಸಾಲದ್ದಕ್ಕೆ ದೇಶದ ಆರ್ಥಿಕ ಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲ. ದೇಶಕ್ಕೆ ಸಾಕಾಗುವಷ್ಟು ಆಹಾರ ಧಾನ್ಯದ ಉತ್ಪಾದನೆ ಕೂಡ ಆಗುತ್ತಿರಲಿಲ್ಲ. ಅಂತಹ ಸನ್ನಿವೇಶದಲ್ಲಿ ಪ್ರಧಾನಿ ಅಷ್ಟು ದುಬಾರಿ ಜೀವನ ನಡೆಸುವುದು ಯಾವ ಕಾರಣಕ್ಕೂ ಸರಿಯಲ್ಲ ಎಂಬುದು ಲೋಹಿಯಾರ ವಿರೋಧ, ಟೀಕೆಯ ತಿರುಳಾಗಿತ್ತು.

ಆ ಪತ್ರಿಕಾ ಹೇಳಿಕೆಯಲ್ಲಿ ಲೋಹಿಯಾ ಇನ್ನೊಂದು ಬೇಸರವನ್ನು ತೋಡಿಕೊಂಡಿದ್ದರು. ಪ್ರಧಾನಿಯ ದೈನಂದಿನ ಖರ್ಚುವೆಚ್ಚ ವಿವರ ನೀಡಲು ಸರ್ಕಾರದ ವ್ಯವಸ್ಥೆ ಎಷ್ಟು ಕಾಟ ಕೊಟ್ಟಿತು ಹಾಗೂ ಪ್ರಯಾಸಪಟ್ಟು ಪಡೆದುಕೊಂಡ ಮಾಹಿತಿಯನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕೆಂದರೆ ಅದಕ್ಕೂ ಅವಕಾಶ ನೀಡಲಿಲ್ಲ ಎಂದಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ, ಸಾಕಷ್ಟು ಪೀಡಿಸಿದಾಗ ದೇಶದ ಪ್ರಧಾನಿಯ ದಿನದ ಖರ್ಚುವೆಚ್ಚ 25 ಸಾವಿರ ರೂಪಾಯಿ ಎಂಬ ಲೆಕ್ಕಾಚಾರವನ್ನು ಸರ್ಕಾರ ನೀಡಿದೆ. ಆದರೆ ಅದು ನಿಜವಾದ ಲೆಕ್ಕವಲ್ಲ. ಅಸಲಿ ಲೆಕ್ಕ ಬೇರೆಯೇ ಇದೆ ಎಂದು ಲೋಹಿಯಾ ತಕರಾರು ತೆಗೆದಿದ್ದರು. ಉದಾಹರಣೆಗೆ- ವಾಸ್ತವದಲ್ಲಿ ವಿಮಾನ ಪ್ರಯಾಣಕ್ಕೆ ನೂರು ರೂಪಾಯಿ ಖರ್ಚಾದರೆ ಪ್ರಧಾನಿ ಕಾರ್ಯಾಲಯದ ಲೆಕ್ಕದಲ್ಲಿ ಅದನ್ನು ಹತ್ತು ರೂಪಾಯಿ ಎಂದು ನಮೂದಿಸಲಾಗಿದೆ. ಪ್ರಧಾನಿ ಮನೆಯ ಅಡುಗೆಮನೆ ಖರ್ಚು 15 ಸಾವಿರ ರೂ. ಆಗಿದ್ದರೆ ಅದನ್ನು 5 ಸಾವಿರ ರೂ. ಎಂದು ಲೆಕ್ಕಹಾಕಲಾಗಿದೆ. ವಾಸ್ತವದ ನೆಲೆಯಲ್ಲಿ ಲೆಕ್ಕ ಹಾಕಿದರೆ ಅದು ಮೂರು ಪಟ್ಟು ಹೆಚ್ಚಾಗುತ್ತದೆ ಎಂದು ಲೋಹಿಯಾ ತಮ್ಮದೇ ಲೆಕ್ಕಾಚಾರವನ್ನು ಜನತೆಯ ಮುಂದಿಟ್ಟಿದ್ದರು. ‘ದೇಶದ ಈಗಿನ ಪರಿಸ್ಥಿತಿಯಲ್ಲಿ ವೈಯಕ್ತಿಕವಾಗಿ ಯಾವುದೇ ವ್ಯಕ್ತಿ ಅದೆಷ್ಟೇ ಶ್ರೀಮಂತನಿದ್ದರೂ ಸಾರ್ವಜನಿಕ ಹಿತ ಗಮನಿಸಿ ಹಿತಮಿತವಾಗಿ ಖರ್ಚು ಮಾಡುವುದು ಸರಿಯಾದ ಕ್ರಮ. ಈ ಮಾತು ನೆಹರು ಅವರಿಗೂ ಅನ್ವಯಿಸುತ್ತದೆ. ನೆಹರು ಬಂಗಾರದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡೇ ಹುಟ್ಟಿರಬಹುದು. ಆದರೆ ತಾನು ಆರ್ಥಿಕವಾಗಿ ಕಷ್ಟದಲ್ಲಿರುವ ದೇಶದ ಪ್ರಧಾನಿಯಾಗಿದ್ದೇನೆಂಬುದು ಸದಾ ಅವರ ಮನಸ್ಸಿನಲ್ಲಿ ಇರಬೇಕಿತ್ತು’ ಎಂದು ಲೋಹಿಯಾ ಬೇಸರದಿಂದ ಹೇಳಿಕೊಂಡಿದ್ದರು. ಈ ಮಾತು ಆಗ ಮಾತ್ರವಲ್ಲ, ಸಾರ್ವಜನಿಕ ಜೀವನದಲ್ಲಿರುವವರು ಈಗಲೂ ಅನ್ವಯ ಮಾಡಿಕೊಳ್ಳುವಂಥದ್ದು.

ಲೋಹಿಯಾ ಇಂಗಿತವನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಲೋಹಿಯಾ ವಾದದ ಪ್ರತಿಪಾದನೆ ಮಾಡುವ ಸಿಎಂ ಸಿದ್ದರಾಮಯ್ಯ ಅವರು ಒಮ್ಮೆ ಈ ಸಂದರ್ಭವನ್ನು ಮೆಲುಕು ಹಾಕಿದರೆ ಉತ್ತಮ. ಅದೂ ಸಂಬಂಧ ಸೂತ್ರ ಇಲ್ಲದೆ ಯಾರೋ ದುಬಾರಿ ಕಾಣಿಕೆ ನೀಡುತ್ತಾರೆ ಎನ್ನುವಾಗಲಾದರೂ ಇಂಥ ಸಂದರ್ಭ ಸನ್ನಿವೇಶಗಳನ್ನೊಮ್ಮೆ ನೆನಪು ಮಾಡಿಕೊಂಡರೆ ಒಳ್ಳೆಯದಿತ್ತು ಅನ್ನಿಸುತ್ತದೆ.

jpgದುಬಾರಿ ವಾಚು ತಂದ ಪೇಚಿನ ಪ್ರಸಂಗವನ್ನು ಪಕ್ಕಕ್ಕಿಡೋಣ. ಒಂದು ವರ್ಷದ ಹಿಂದೆ ಸಾಕಷ್ಟು ಚರ್ಚೆಗೆ ಗ್ರಾಸವಾದ ಅರ್ಕಾವತಿ ಡಿನೋಟಿಫಿಕೇಶನ್ ಅಕ್ರಮ ಆರೋಪದ ಪ್ರಕರಣವನ್ನೇ ತೆಗೆದುಕೊಳ್ಳಿ. ರಾಜ್ಯದಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದದ್ದು ಗಣಿ ಹಗರಣ ಮತ್ತು ಅಕ್ರಮ ಡಿನೋಟಿಫಿಕೇಶನ್ ಹಗರಣದ ವಿರುದ್ಧ ತೊಡೆ ತಟ್ಟಿದ ಕಾರಣಕ್ಕೆ. ಆ ಎರಡೂ ಹಗರಣಗಳ ಗದ್ದಲದಿಂದ ರಾಜ್ಯದ ಮತದಾರರು ಬೇಸತ್ತು ಹೋಗಿದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಾಪನೆ ಆಯಿತು ಎಂಬುದು ಹಗಲಿನಷ್ಟೇ ಸತ್ಯ. ಆದರೆ ಅದೇ ಅರ್ಕಾವತಿ ಡಿನೋಟಿಫಿಕೇಶನ್ ಹಗರಣದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ತನಿಖೆಯ ಮೂಲಕ ತಾನು ಶುಭ್ರ ಎಂಬುದನ್ನು ಸಾಬೀತು ಮಾಡುವ ಬದಲು ಬಿಎಂಟಿಎ- ತನಿಖಾ ಸಂಸ್ಥೆ ಮತ್ತು ಹಳೇ ಪ್ರಕರಣಗಳನ್ನು ಮೇಲಕ್ಕೆತ್ತಬೇಕಾಗುತ್ತದೆ ಎಂಬ ಹಗ್ಗದ ಹಾವನ್ನು ಮುಂದೆಬಿಟ್ಟು ಪ್ರತಿಪಕ್ಷಗಳ ಬಾಯಿ ಬಂದ್ ಮಾಡಿಸಿದರು.

ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದ್ದು ಆ ರೀತಿಯಾದರೆ ಈಗ ಜಾರಿಗೆ ತರಲು ಹೊರಟಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅದರದ್ದೇ ಮುಂದುವರಿದ ಭಾಗ ಎಂಬುದು ಕಾನೂನು ತಜ್ಞರು ವ್ಯಕ್ತಪಡಿಸುತ್ತಿರುವ ಅಭಿಪ್ರಾಯ. ಲೋಕಾಯುಕ್ತ ಸಂಸ್ಥೆಯನ್ನೇ ನಿವಾಳಿಸಿಬಿಟ್ಟರೆ ಮುಂದೆ ನಿಶ್ಚಿಂತರಾಗಿರಬಹುದು ಎಂಬ ಸರಳ ಲೆಕ್ಕಾಚಾರ ಎಸಿಬಿ ರಚನೆ ಹಿಂದಿನ ಮರ್ಮ ಎಂಬುದು ಎಂಥವರಿಗೂ ಅರ್ಥವಾಗುತ್ತದೆ. ಭ್ರಷ್ಟಾಚಾರ ನಿಗ್ರಹದ ಬಗ್ಗೆ ಅಷ್ಟೊಂದು ಕಾಳಜಿ ಇದ್ದದ್ದೇ ಆದರೆ ಲೋಕಾಯಕ್ತವನ್ನೇ ಬಲಪಡಿಸಲು ಈ ಮೊದಲೇ ಕ್ರಮ ತೆಗೆದುಕೊಳ್ಳಬಹುದಿತ್ತು. ಅದಕ್ಕೆ ಮೂರು ವರ್ಷ ಕಾಲ ಕಾಯುವ ಅಗತ್ಯವಾದರೂ ಏನಿತ್ತು? ಕರ್ನಾಟಕ ಲೋಕಾಯುಕ್ತ ಹಲ್ಲಿಲ್ಲದ ಹಾವಾಗಿದೆ. ಅದಕ್ಕೆ ವಿಚಾರಣೆ ನಡೆಸುವ ಮತ್ತು ಅದಕ್ಕೆ ಪೂರಕವಾಗಿ ಶಿಕ್ಷೆ ನೀಡುವ ಅಧಿಕಾರ ನೀಡಬೇಕೆಂಬ ಒತ್ತಾಯ ಅದು ಸ್ಥಾಪನೆ ಆದ ಮಾರನೇ ದಿನದಿಂದಲೇ ಕೇಳಿಬರುತ್ತಿದೆ. ಲೋಕಾಯುಕ್ತವನ್ನು ಲೋಕಪಾಲ ಕಾಯ್ದೆ ಮಾದರಿಯಲ್ಲಿ ಬಲಗೊಳಿಸಬೇಕೆಂಬುದು ಗೊತ್ತಿಲ್ಲದ ವಿಚಾರವೇ? ಹೋಗಲಿ, ಲೋಕಾಯಕ್ತ ನ್ಯಾ.ಭಾಸ್ಕರ ರಾವ್ ಅವರ ಮೇಲೆ ಗುರುತರ ಆರೋಪ ಕೇಳಿ ಬಂದಾಗ ಅವರನ್ನು ಅದೇ ಕುರ್ಚಿಯಲ್ಲಿ ಭದ್ರಮಾಡಲು ಯತ್ನಿಸುವ ಬದಲು ಅವರನ್ನು ಪದಚ್ಯುತಗೊಳಿಸಿ ಲೋಕಾಯುಕ್ತ ಬಲಪಡಿಸಲು ದಿಟ್ಟ ಹೆಜ್ಜೆ ಇಡಬಹುದಿತ್ತು. ಹಾಗೆ ಮಾಡುವ ಬದಲು ಯಾವುದೇ ಬಲವಾದ ಕಾರಣವಿಲ್ಲದೆ ಸರ್ಕಾರ ಉಪಲೋಕಾಯಕ್ತ ನ್ಯಾ.ಸುಭಾಷ್ ಅಡಿ ಅವರನ್ನು ಪದಚ್ಯುತಗೊಳಿಸುವ ಪ್ರಕ್ರಿಯೆಗೆ ಕೈ ಹಾಕಿದ್ದು ಯಾವ ಪುರುಷಾರ್ಥಕ್ಕೆ? ಆ ಯತ್ನವೂ ಕೈಗೂಡುವ ಪೂರ್ಣ ವಿಶ್ವಾಸ ಉಂಟಾಗದಿದ್ದಾಗ ಹೊಳೆದದ್ದು ಈ ಎಸಿಬಿ ಎಂಬ ಉಗ್ರಾಸ…!

ವಾಸ್ತವದಲ್ಲಿ ಸೊರಗಿ ಸೋತುಹೋಗಿರುವ ವಿರೋಧ ಪಕ್ಷಗಳಿಗೆ ಸರ್ಕಾರದ ವಿರುದ್ಧ ಹೋರಾಡಲು ಮತ್ತೆ ಚೈತನ್ಯ ಗಳಿಸಿಕೊಳ್ಳಲು ಈ ಎಸಿಬಿ ವಿಷಯ ಪ್ರಮುಖ ಅಸ ಮತ್ತು ಶಸ ಆಗಬಹುದಿತ್ತು. ದುರಂತ ಎಂದರೆ ಎಸಿಬಿ ರಚನೆ ಸಂದರ್ಭದಲ್ಲೂ ಅಧಿಕೃತ ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ಗಳದ್ದು ‘ನಾಮ್‌ಕೆವಾಸ್ತೆ’ ವಿರೋಧವೆಂಬ ಪ್ರಹಸನ ಮಾತ್ರ. ಎಸಿಬಿ ರಚನೆ ಜೊತೆಗೆ ಲೋಕಾಯುಕ್ತ ಬಲಪಡಿಸುವುದಕ್ಕೂ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಸರ್ಕಾರ ನೀಡಿತು. ಅದಕ್ಕೆ ವಿಪಕ್ಷಗಳು ಅಹುದಹುದು ಎಂಬಂತೆ ತಲೆ ಅಲ್ಲಾಡಿಸಿ ಸುಮ್ಮನಾದವು. ಇದೆಂಥಾ ಬೃಹನ್ನಾಟಕದ ಪರಿ ಅಂತೀರಿ.

ಇದೆಲ್ಲದರ ಒಟ್ಟಾರೆ ತಾತ್ಪರ್ಯ ಏನು ಅಂದರೆ ‘ನೀರಿಗಿಂತ ರಕ್ತ ದಪ್ಪ’ ಅನ್ನುವುದು ಹಳೇ ಗಾದೆಮಾತಾದರೆ ‘ರಾಜಕೀಯದಲ್ಲಿ ಈಗ ಎಲ್ಲರೂ ಒಂದೇ’ ಎನ್ನುವ ಹೊಸ ನಾಣ್ಣುಡಿಯನ್ನು ಹೊಸೆಯಬೇಕಾಗುತ್ತದೆ ಅಷ್ಟೆ!

ಇಲ್ಲಿ ಎಲ್ಲಕ್ಕಿಂತ ಮುಖ್ಯವಾಗುವುದು ಕಾಲಾನುಕ್ರಮದಲ್ಲಿ ಸಿದ್ಧಾಂತಗಳು ಹೇಗೆ ಸವಕಲಾಗುತ್ತವೆ, ತತ್ತ್ವ, ನಂಬಿಕೆಗಳೆಲ್ಲ ಹೇಗೆ ಬುಡಬುಡಿಕೆಗಳಾಗುತ್ತವೆ ಎಂಬುದು.

ಸಿದ್ದರಾಮಯ್ಯ ಸರ್ಕಾರ ಲೋಕಾಯುಕ್ತಕ್ಕೆ ಕೊನೇ ಮೊಳೆ ಹೊಡೆಯುವ ಮೊದಲು ಮತ್ತೊಮ್ಮೆ ಮಗದೊಮ್ಮೆ ಆಲೋಚನೆ ಮಾಡಲಿ. 1984ರಲ್ಲಿ ಕರ್ನಾಟಕದಲ್ಲಿ ಹೆಗಡೆ ಸರ್ಕಾರ, ಮೊದಲ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದಾಗ ಚೊಚ್ಚಲ ಪ್ರಸವದಂತೆ ಪಟ್ಟ ಸಂಭ್ರಮವನ್ನೊಮ್ಮೆ ಮೆಲುಕು ಹಾಕಬೇಕಲ್ಲವೇ? ಕರ್ನಾಟಕ ಲೋಕಾಯಕ್ತ ರಚನೆ ಇಡೀ ದೇಶಕ್ಕೆ ಹೆಮ್ಮೆ ಮತ್ತು ಮಾದರಿ ಆಯಿತು. ಆ ನಂತರ ಇತರ ಕೆಲ ರಾಜ್ಯಗಳಲ್ಲೂ ಲೋಕಾಯಕ್ತ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಅದೇ ಲೋಕಾಯುಕ್ತ ಪ್ರಬಲ ಲೋಕಪಾಲ ರಚನೆ ಒತ್ತಾಯ ಜೀವ ತಳೆಯಲು ಪ್ರೇರಣೆಯಾಯಿತು.

ಹಾಗಾದರೆ ಭವಿಷ್ಯದ ಭರವಸೆ ಹೊಂದಿದ ನಾವು ಯಾವ ಹಾದಿಯಲ್ಲಿ ಸಾಗಬೇಕು? ಸಿಎಂ ಸಿದ್ದರಾಮಯ್ಯ ಇಡುತ್ತಿರುವ ಇಂಥ ಹೆಜ್ಜೆಗಳು ಖಂಡಿತಕ್ಕೂ ಆದರ್ಶ ಆಗಲಾರವು. ಯೋಚನೆ ಮಾಡಿ ಮುಂದಡಿ ಇಡಲಿ ಅಲ್ಲವೇ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top