ಚಿಂತನಶಕ್ತಿಗೆ ಮಾತೃಭಾಷೆಯೇ ಭದ್ರಬುನಾದಿ

ಲೇಖಕನು ಬರೆಯುವ ಒಂದೊಂದು ಶಬ್ದವೂ ಶತಮಾನಗಳ ಸಾಂಸ್ಕೃತಿಕ ಇತಿಹಾಸವನ್ನು ಹೀರಿ ಬೆಳೆದಿರುತ್ತದೆ; ಆಡುಮಾತು ಮತ್ತು ಜಾನಪದ ಸಾಹಿತ್ಯಗಳಿಂದ ಅರ್ಥ ಮತ್ತು ಧ್ವನಿ ಸಮೃದ್ಧಿಯನ್ನು ಗಳಿಸಿ ಕೊಂಡಿರುತ್ತದೆ. ಆದ್ದರಿಂದ ಆ ಭಾಷೆಯಲ್ಲಿ ಮಾತ್ರ ಆ ಜೀವನವನ್ನು ಸಮರ್ಥವಾಗಿ ಅಭಿವ್ಯಕ್ತಪಡಿಸಲು ಸಾಧ್ಯ.

SL Bhairappa– ಡಾ. ಎಸ್. ಎಲ್. ಭೈರಪ್ಪ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುವ ಜನಸಂದಣಿಯನ್ನು ನೋಡುವಾಗ ಕನ್ನಡದ ಭವಿಷ್ಯದ ಬಗೆಗೆ ಭರವಸೆ ಬೆಳೆಯುತ್ತದೆ. ಆದರೆ ಕನ್ನಡದ ಅಡಿಪಾಯವು ಒಳಗಿಂದ ಒಳಗೆ ಕುಸಿಯುತ್ತಿರುವುದರ ಲೆಕ್ಕಾಚಾರ ಹಾಕಿದಾಗ ಈ ಸಮ್ಮೇಳನದ ಸಂಭ್ರಮದ ಆಯುಷ್ಯವು ಇನ್ನು ಇಪ್ಪತ್ತೈದು-ಮೂವತ್ತು ವರ್ಷಗಳಲ್ಲಿ ತೀರುತ್ತದೆ; ಇನ್ನು ಇಪ್ಪತ್ತೈದು-ಮೂವತ್ತು ವರ್ಷಗಳ ನಂತರ ಕನ್ನಡದಲ್ಲಿ ಬರೆಯುವ ಪ್ರತಿಭೆಯು ಉಳಿಯುವುದೂ ಇಲ್ಲ, ಬೆಳೆಯುವುದೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇಂಗ್ಲಿಷ್ ಮಾಧ್ಯಮಶಾಲೆಗಳು ಮೊದಲು ನಗರಗಳನ್ನು ಆಕ್ರಮಿಸಿದವು; ಅನಂತರ ಪಟ್ಟಣಗಳನ್ನು ತುಂಬಿಕೊಂಡವು, ಪಟ್ಟಣಗಳ ಇಂಗ್ಲಿಷ್ ಮಾಧ್ಯಮ ಶಾಲೆಗಳು ಹಳ್ಳಿಗಳಿಂದಲೂ ಮಕ್ಕಳನ್ನು ತುಂಬಿಕೊಂಡು ಬರುವ ಬಸ್ಸುಗಳನ್ನು ಏರ್ಪಡಿಸಿಕೊಂಡವು. ಈಗ ಹಳ್ಳಿಗಳಲ್ಲೂ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿವೆ. ನಗರಗಳ, ಪಟ್ಟಣಗಳ ಮಕ್ಕಳಂತೆ ಇಂಗ್ಲಿಷ್ ಮಾಧ್ಯಮಶಾಲೆಗಳಲ್ಲಿ ಓದದಿದ್ದರೆ ತಮ್ಮ ಮಕ್ಕಳಿಗೂ ಭವಿಷ್ಯವಿಲ್ಲವೆಂದು ಹಳ್ಳಿಯ ತಂದೆತಾಯಿಯರು ನಂಬಿಬಿಟ್ಟಿದ್ದಾರೆ. ಇಂಗ್ಲಿಷ್ ಶಾಲೆಗಳನ್ನು ಸರಕಿನಂತೆ ನಡೆಸುವ ವ್ಯಾಪಾರಿಗಳು ವರ್ಷ ವರ್ಷಕ್ಕೂ ಈ ನಂಬಿಕೆಯನ್ನು ಗಟ್ಟಿಗೊಳಿಸುತ್ತಿದ್ದಾರೆ. ರಾಜಕಾರಣಿಗಳು, ಎಂ.ಪಿ., ಎಂ.ಎಲ್.ಎ.ಗಳು ಹಾಲಿ ಮತ್ತು ಮಾಜಿ ಮಂತ್ರಿಗಳೂ ಈ ವ್ಯಾಪಾರದ ಪಾಲುದಾರರಾಗಿದ್ದಾರೆ. ನಗರ, ಪಟ್ಟಣಗಳ ಮಕ್ಕಳಿಗಿರುವ ಭವಿಷ್ಯವನ್ನು ಹಳ್ಳಿಯ ಮಕ್ಕಳಿಗೆ ಯಾಕೆ ವಂಚಿಸಬೇಕು?- ಎಂಬ ವಾದವನ್ನು ರಾಜಕಾರಣಿಗಳೇ ಡಂಗುರ ಹೊಡೆಯುತ್ತಿದ್ದಾರೆ.

ಪ್ರಾಥಮಿಕ ಹಂತದಿಂದಲೂ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ಇಂದಿನ ಅನೇಕ ಯುವಕ ಯುವತಿಯರು ನನ್ನನ್ನು `ಅಂಕಲ್, ನಿಮ್ಮ ಯಾವ ಯಾವ ಕಾದಂಬರಿಗಳು ಇಂಗ್ಲಿಷಿಗೆ ಟ್ರಾನ್ಸ್‍ಲೇಟ್ ಆಗಿವೆ? ಅವುಗಳ ಹೆಸರೇನು? ಎಲ್ಲಿ ಸಿಗುತ್ತವೆ, ಹೇಳಿ? ನಮಗೆ ಓದುವ ಆಸೆಯಿದೆ’ ಎಂದು ಕೇಳುತ್ತಿದ್ದಾರೆ. ಏಕೆಂದರೆ ಅವರಿಗೆ ಕನ್ನಡ ಓದಲು ಬರುವುದಿಲ್ಲ. ಓದುವ ಲಿಪಿ ಗೊತ್ತಾದರೂ ಭಾಷೆ ತಿಳಿಯುವುದಿಲ್ಲ. ಸಾಹಿತ್ಯವನ್ನು ಓದುವ ಆಸಕ್ತಿಯುಳ್ಳವರು ತಮಗೆ ಅಭ್ಯಾಸವಿರುವ ಹ್ಯಾರಿ ಪಾಟರ್‍ನಂಥ ಕಥೆಗಳನ್ನು ಓದಿ ಆಸೆಯನ್ನು ಪೂರೈಸಿಕೊಳ್ಳುತ್ತಾರೆ. ಇಂಥ ಮಕ್ಕಳಲ್ಲಿ ಕೆಲವರಿಗೆ ಸೃಜನಶೀಲಶಕ್ತಿ ಇದ್ದರೆ ಅವರು ಇಂಗ್ಲಿಷಿನಲ್ಲಿ ಬರೆದು ತಮ್ಮ ಚಪಲ ತೀರಿಸಿಕೊಳ್ಳಬೇಕು. ಭಾರತದ ವಿದ್ಯಾವಂತ ಜನರ ಮನಸ್ಸಿನ ಮೇಲೆ ಇಂಗ್ಲಿಷಿನ ಸವಾರಿ ಇನ್ನೂರು ವರ್ಷಗಳಿಗೂ ಮಿಕ್ಕು ನಡೆದರೂ ಅದು ನಮ್ಮ ಭಾವನೆ ಮತ್ತು ಸಂಸ್ಕøತಿಯನ್ನು ವ್ಯಕ್ತಪಡಿಸುವ, ಗಂಭೀರ ಆಲೋಚನೆಯ ಪರಿಕಲ್ಪನೆಗಳನ್ನು ಸೃಷ್ಟಿಸುವ ಭಾಷೆಯಾಗಿಲ್ಲ. ಹೀಗಾಗಿ ಇಂಗ್ಲಿಷಿನಲ್ಲಿ ಬರೆಯುವ ಯಾವ ಭಾರತೀಯ ಲೇಖಕನೂ ಪ್ರಥಮದರ್ಜೆಯ ಕೃತಿಗಳನ್ನು ಸೃಷ್ಟಿಸಿಲ್ಲ. ಕೆಲವು ಭಾರತೀಯ ಇಂಗ್ಲಿಷ್ ಲೇಖಕರು ಪಶ್ಚಿಮ ಓದುಗರ ಮಾರುಕಟ್ಟೆಯಲ್ಲಿ ಕೆಲವುಮಟ್ಟಿಗೆ ವಿಜಯಶಾಲಿಗಳಾಗಿರಬಹುದು. ಆದರೆ ಓದುಗರು ಈ ಕೃತಿಗಳನ್ನು ಸಮಾಜ ವಿಜ್ಞಾನದ ಕುತೂಹಲದಿಂದ ಓದುತ್ತಾರೆಯೇ ಅಥವಾ ಶುದ್ಧಸಾಹಿತ್ಯದ ಅನುಭವಕ್ಕಾಗಿ ಓದುತ್ತಾರೆಯೇ ಎಂಬುದಕ್ಕೆ ಸಮರ್ಪಕ ಉತ್ತರವಿಲ್ಲ. ಇಂಥ ಲೇಖಕರು ವಿಧಿ ಇಲ್ಲದೆ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಓದಿ ಅನಂತರ ಇಂಗ್ಲೆಂಡ್, ಅಮೆರಿಕಗಳಲ್ಲಿ ತರಬೇತಿ ಪಡೆದು ಅನಂತರ ಆ ದೇಶಗಳಲ್ಲಿಯೇ ನೆಲೆಸಿ ಅಲ್ಲಿಯ ನಡುಗಿಸುವ ಚಳಿಗಾಲದಲ್ಲಿ ಒಂದೆರಡು ತಿಂಗಳು ಭಾರತಕ್ಕೆ ಬಂದು ತಮ್ಮ ಹೊಸ ಕಾದಂಬರಿಯ ವಸ್ತುವನ್ನು ಹುಡುಕಿಕೊಳ್ಳುವಂಥವರು. ಲೇಖಕನು ಬರೆಯುವ ಒಂದೊಂದು ಶಬ್ದವೂ ಶತಮಾನಗಳ ಸಾಂಸ್ಕøತಿಕ ಇತಿಹಾಸವನ್ನು ಹೀರಿ ಬೆಳೆದಿರುತ್ತದೆ; ಆಡುಮಾತು ಮತ್ತು ಜಾನಪದ ಸಾಹಿತ್ಯಗಳಿಂದ ಅರ್ಥ ಮತ್ತು ಧ್ವನಿ ಸಮೃದ್ಧಿಯನ್ನು ಗಳಿಸಿ ಕೊಂಡಿರುತ್ತದೆ. ಆದ್ದರಿಂದ ಆ ಭಾಷೆಯಲ್ಲಿ ಮಾತ್ರ ಆ ಜೀವನವನ್ನು ಸಮರ್ಥವಾಗಿ ಅಭಿವ್ಯಕ್ತಪಡಿಸಲು ಸಾಧ್ಯ. ಇಂಗ್ಲಿಷ್‍ಶಬ್ದ, ಆಡುಮಾತು, ನುಡಿಗಟ್ಟುಗಳು ಆ ಸಂಸ್ಕøತಿ ಮತ್ತು ಇತಿಹಾಸಗಳಲ್ಲಿ ಮೂಡಿಬೆಳೆದವುಗಳು. ಆ ದೇಶಗಳಲ್ಲಿ ಹುಟ್ಟಿ ಬೆಳೆದು ಶಿಕ್ಷಣಪಡೆದ ಮಕ್ಕಳಿಗೆ ಮಾತ್ರ ಅವು ಸಹಜವಾಗಿ ಕರಗತವಾಗಿರುತ್ತವೆ. ಅದೇ ರೀತಿ ನಮ್ಮ ಭಾಷೆಯೂ. ಅನುವಾದಕ್ರಿಯೆಯಲ್ಲಿ ಬರುವ ತೊಡಕುಗಳನ್ನು ವಿಶ್ಲೇಷಿಸಿದಾಗ ಈ ಸಮಸ್ಯೆ ಹೆಚ್ಚು ಸ್ಫುಟವಾಗುತ್ತದೆ. ಭಾರತದ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸುವುದು ಹೆಚ್ಚು ಕಷ್ಟವಲ್ಲ. ಆದರೆ ಭಾರತದ ಯಾವುದೇ ಭಾಷೆಯಿಂದ ಇಂಗ್ಲಿಷ್‍ಗೆ ಅನುವಾದಿಸುವುದು ಕಠಿಣವಾದ ಕಾರ್ಯ. ಇನ್ನೂರು ವರ್ಷಗಳಿಂದ ಇಂಗ್ಲಿಷ್ ಪತ್ರಿಕೆಗಳನ್ನು ಓದಿ, ಇಂಗ್ಲಿಷಿನಲ್ಲಿ ಅರ್ಜಿ ಬರೆಯುವ ಅಭ್ಯಾಸವಿದ್ದರೂ ಯಾಕೆ ಹೀಗೆ? ಇಂಗ್ಲಿಷ್ ನಮ್ಮ ಸಂಸ್ಕøತಿಯ ಭಾಷೆಯಲ್ಲ. ಹಾಗೆಯೇ ನಮ್ಮ ಜನಸಂಖ್ಯೆಗೆ ಹೋಲಿಸಿಕೊಂಡರೆ ನಮ್ಮಲ್ಲಿ ಸೃಷ್ಟಿಯಾಗಿರುವ ವಿಜ್ಞಾನಿಗಳ ಸಂಖ್ಯೆಯೂ ತೀರ ಅಲ್ಪ. ಮಾತೃಭಾಷೆಯಲ್ಲಿ ನಮ್ಮ ಚಿಂತನಾಶಕ್ತಿ, ಆಲೋಚನಾಲಹರಿ ಬೆಳೆಯುವಷ್ಟು ಸಹಜವಾಗಿ ಬೇರೆ ಭಾಷೆಯಲ್ಲಿ ಬೆಳೆಯುವುದಿಲ್ಲ. ಈ ಮೂಲಭೂತ ಮನೋವೈಜ್ಞಾನಿಕ ಸತ್ಯವನ್ನಾಧರಿಸಿಯೇ ಪ್ರಪಂಚದ ದೊಡ್ಡ ದೊಡ್ಡ ಶಿಕ್ಷಣತಜ್ಞರು ಮಾತೃಭಾಷೆಯಲ್ಲೇ ಮಕ್ಕಳ ಶಿಕ್ಷಣವಾಗಬೇಕೆಂದು ಪ್ರತಿಪಾದಿಸಿದರು. ಗಾಂಧೀಜಿಯು ಅದನ್ನೇ ಒತ್ತಿ ಹೇಳಿದರು. ಭಾರತ ಸರ್ಕಾರವು ಆಗಾಗ್ಗೆ ರಚಿಸಿದ ರಾಧಾಕೃಷ್ಣನ್ ಆಯೋಗ, ಕೊಠಾರಿ ಆಯೋಗ, ಲಕ್ಷ್ಮಣಸ್ವಾಮಿ ಮೊದಲಿಯಾರ್ ಆಯೋಗ, ಜಾಕೀರ್ ಹುಸೇನ್ ಆಯೋಗ ಮೊದಲಾದ ಆಯೋಗಗಳೆಲ್ಲ ಇದನ್ನೇ ಎತ್ತಿಹೇಳಿದವು.

ಹೀಗಿದ್ದೂ ಇಂಗ್ಲಿಷ್ ಮಾಧ್ಯಮ ಶಾಲೆಗಳ ಪ್ರತಿಷ್ಠೆ ಮತ್ತು ಆಕರ್ಷಣೆಗಳು ಹೆಚ್ಚಿದ ಹಿನ್ನೆಲೆ ಏನು? ಒಂದು ರಾಜ್ಯದಿಂದ ಬೇರೆ ರಾಜ್ಯಗಳಿಗೆ ವರ್ಗವಾಗುವ ಅಖಿಲ ಭಾರತ ಸೇವೆಯ ಅಧಿಕಾರಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಇಂಥ ಅಧಿಕಾರಿಗಳು ಕೇಂದ್ರೀಯ ಶಾಲೆಯ ಕಲ್ಪನೆಯನ್ನು ಹುಟ್ಟುಹಾಕಿದರು. ದೇಶದ ಆಡಳಿತ ಭಾಷೆಯಲ್ಲಿ ಪ್ರಧಾನವಾದ ಇಂಗ್ಲಿಷ್ ಪ್ರಾಥಮಿಕ ಹಂತದಿಂದಲೇ ಶಿಕ್ಷಣ ಮಾಧ್ಯಮವಾಗಬೇಕೆಂಬುದು ಈ ಕಲ್ಪನೆಯ ಬಹುಮುಖ್ಯ ಅಂಶವಾಗಿತ್ತು. ಇಂಗ್ಲಿಷ್ ನ್ಯಾನಿಯಿಂದ ಆರಂಭಿಸಿ ಇಂಗ್ಲೆಂಡಿನಲ್ಲಿಯೇ ಶಾಲಾ ಶಿಕ್ಷಣವನ್ನೂ ಪಡೆದು ಅಲ್ಲಿಯೇ ಕಾಲೇಜು ಸೇರಿದ ಪ್ರಧಾನಮಂತ್ರಿ ನೆಹರೂ ಅವರಿಗೆ ಈ ಕಲ್ಪನೆಯು ಆಪ್ಯಾಯಮಾನವಾಯಿತು. ಈ ವ್ಯವಸ್ಥೆಯಲ್ಲಿ ಮಕ್ಕಳು ಕಲಿಯಬೇಕಾದ ಒಂದು ಭಾರತೀಯ ಭಾಷೆಯಾಗಿ ಹಿಂದಿಯನ್ನು ಹೊಗಿಸಿದರು. ಅಧಿಕಾರಶಾಹಿಗಳ ಮಕ್ಕಳು ಅಧಿಕಾರಶಾಹಿಯೊಳಕ್ಕೆ ನುಸುಳಲು, ಉನ್ನತವ್ಯಾಸಂಗಕ್ಕೆ ಇಂಗ್ಲೆಂಡ್, ಅಮೆರಿಕಗಳಿಗೆ ಹೋಗಲು ಇದು ಸುಲಭದ ಹಾದಿಯಾಯಿತು. ಕೇಂದ್ರ ಸರ್ಕಾರದ್ದೇ ಆದುದರಿಂದ ಕೇಂದ್ರೀಯ ಶಾಲೆಗಳಿಗೆ ಸಮೃದ್ಧವಾದ ಅನುದಾನ ದೊರೆಯತೊಡಗಿ ಅವುಗಳ ಸಂಪನ್ಮೂಲವೂ ಉನ್ನತ ಮಟ್ಟದ್ದಾಯಿತು. ರಾಷ್ಟ್ರದ ನಾಲ್ಕು ಭಾಗಗಳಲ್ಲಿ ಸ್ಥಾಪಿತವಾದ NCERT (National Council for Educational Research and Training)ಗೆ ಸೇರಿದ ನಾಲ್ಕು ಪ್ರಾದೇಶಿಕ ಶಿಕ್ಷಣ ಕಾಲೇಜುಗಳ ಅಧೀನದಲ್ಲಿ ಒಂದೊಂದು ಪ್ರಾಯೋಗಿಕ ಶಾಲೆಗಳನ್ನು ಸ್ಥಾಪಿಸಿದರು. ಮೈಸೂರಿನಲ್ಲಿರುವ ಅಂಥ ಪ್ರಾಯೋಗಿಕ ಶಾಲೆಯ ಉದಾಹರಣೆಯನ್ನು ಇಲ್ಲಿ ಕೊಡುತ್ತೇನೆ. ಅದು ಅಖಿಲಭಾರತ ವ್ಯಾಪ್ತಿಯ ಶಿಕ್ಷಣ ಕಾಲೇಜಿನ ಪ್ರಾಯೋಗಿಕ ಶಾಲೆಯಾದ್ದರಿಂದ ಅದರ ಶಿಕ್ಷಣ ಮಾಧ್ಯಮವು ಇಂಗ್ಲಿಷೇ ಆಗಿ ಅದರ ಪ್ರವೇಶಕ್ಕೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವರ್ಗವಾಗುವ ಅಧಿಕಾರಿಗಳ ಮಕ್ಕಳಿಗೆ ಆದ್ಯತೆ ಕೊಟ್ಟರು. ಮೈಸೂರು ವಿಶ್ವವಿದ್ಯಾಲಯದ ಒತ್ತಾಯದ ಮೇರೆಗೆ ಈ ಪಠ್ಯಪುಸ್ತಕಗಳ ಕನ್ನಡ ಆವೃತ್ತಿಯನ್ನು ಸಿದ್ಧಪಡಿಸಿಕೊಡುವ ಪ್ರಯತ್ನ ನಡೆಯಿತಾದರೂ ಆ ಶಾಲೆಯಲ್ಲಿ ಕನ್ನಡ ತರಗತಿಗಳ ಆರಂಭಕ್ಕೆ NCERTಯು ಉತ್ಸಾಹ ತೋರದೆ ಇದ್ದುದರಿಂದ ಆ ಪ್ರಯತ್ನ ಸಫಲವಾಗಲಿಲ್ಲ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವರ್ಗವಾಗಲಿ, ಆಗದಿರಲಿ, ಎಲ್ಲ ಕೇಂದ್ರ ಸರ್ಕಾರದ ನೌಕರರ ಮಕ್ಕಳಿಗೂ ಪ್ರವೇಶವನ್ನು ವಿಸ್ತರಿಸಿದರು. ಮುಂದಿನ ಹಂತದಲ್ಲಿ ಎಂದೂ ವರ್ಗವಾಗದಿರುವ ನಾಲ್ಕನೆ ವರ್ಗದ ನೌಕರರು, ತಮ್ಮ ಮಕ್ಕಳಿಗೂ ಪ್ರವೇಶ ಬೇಕೆಂದು ಚಳವಳಿ ಮಾಡಿದರು. ರಾಜಕೀಯ ಒತ್ತಡದಿಂದ NCERTಯು ಈ ಚಳವಳಿಗೆ ಬಗ್ಗಿತು. ಕ್ರಮೇಣವಾಗಿ ಕೇಂದ್ರ ಸರ್ಕಾರಕ್ಕೆ ಯಾವ ರೀತಿಯಲ್ಲೂ ಸಂಬಂಧವಿಲ್ಲದ ಆದರೆ ರಾಜಕೀಯವಾಗಿ ಪ್ರಭಾವವುಳ್ಳವರ ಮಕ್ಕಳಿಗೂ ಪ್ರವೇಶ ದೊರೆಯಿತು. ಹೀಗೆ ಇಂಗ್ಲಿಷ್ ಮಾಧ್ಯಮ ಶಾಲೆಗಳ ಪ್ರತಿಷ್ಠೆ ಮೇಲೇರಿದಂತೆ ಖಾಸಗಿ ಶಾಲೆಗಳು ರಾಜ್ಯ ಶಿಕ್ಷಣ ಇಲಾಖೆಯ ಪಠ್ಯಕ್ರಮದ ಬದಲಿಗೆ ಕೇಂದ್ರೀಯ ಶಾಲೆಗಳ ಪಠ್ಯಕ್ರಮವನ್ನು ಅಳವಡಿಸಿಕೊಂಡು ಪ್ರಚಾರ ಮಾಡಿ ತಮ್ಮ ವ್ಯಾಪಾರದ ಮೌಲ್ಯವನ್ನು ಹೆಚ್ಚಿಸಿಕೊಳ್ಳತೊಡಗಿದವು. ಕೇಂದ್ರ ಸರ್ಕಾರದ ಯು ಇಡೀ ದೇಶಕ್ಕೆ ಮಾದರಿಯಾಗುವಂಥ ಪಠ್ಯಪುಸ್ತಕಗಳನ್ನು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಸಮರ್ಥರೆನ್ನಿಸಿಕೊಂಡ ವಿದ್ವಾಂಸರಿಂದ ಬರೆಸಿ ಪ್ರಚುರಗೊಳಿಸಿತು. ಈ ಪುಸ್ತಕಗಳನ್ನೆಲ್ಲ ವಿದ್ವಾಂಸರು ಬರೆದದ್ದು ಇಂಗ್ಲಿಷಿನಲ್ಲಿ. ಅವುಗಳನ್ನು ಕೇಂದ್ರೀಯ ಶಾಲೆಗಳು ಮತ್ತು ಖಾಸಗಿ ಆಂಗ್ಲಮಾಧ್ಯಮ ಶಾಲೆಗಳು ತದ್ವತ್ ದತ್ತು ಸ್ವೀಕಾರ ಮಾಡಿಕೊಂಡವು. ಶಿಕ್ಷಣವು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿದ್ದರೂ ರಾಜ್ಯ ಸರ್ಕಾರಗಳು ಈ ಪಠ್ಯಪುಸ್ತಕಗಳನ್ನು ಕೇಂದ್ರದ ಒತ್ತಡ ಮತ್ತು ತನ್ನದೇ ಸಮರ್ಥ ಪುಸ್ತಕಗಳನ್ನು ರಚಿಸಿಕೊಳ್ಳದ ಆಲಸಿಕೆಯಿಂದ ಅಳವಡಿಸಿಕೊಂಡವು. ಅವುಗಳನ್ನು ರಾಜ್ಯಭಾಷೆಗೆ ಸಮರ್ಪಕವಾಗಿ ಸಕಾಲದಲ್ಲಿ ಅನುವಾದ ಮಾಡಿಸಿ ಮಕ್ಕಳಿಗೆ ದೊರೆಯುವ ಸಂಖ್ಯೆಯಲ್ಲಿ ಮುದ್ರಿಸಲಿಲ್ಲ. ಪರಿಣಾಮವಾಗಿ ಮೂಲ ಇಂಗ್ಲಿಷ್ ಪಠ್ಯಪುಸ್ತಕಗಳಿಗೇ ಶರಣುಹೋಗುವ ಪರಿಸ್ಥಿತಿಯುಂಟಾಗಿ ಇಂಗ್ಲಿಷ್ ಮಾಧ್ಯಮಶಾಲೆಗಳ ಪ್ರತಿಷ್ಠೆ ಇನ್ನಷ್ಟು ಮೇಲೆ ಏರಿತು. ಪಠ್ಯಪುಸ್ತಕಗಳು ಮಾತ್ರವಲ್ಲ, ಹೆಚ್ಚುವರಿ ಓದಿಗೆ ಬೇಕಾದ ಪುಸ್ತಕಗಳನ್ನೂ ರಾಜ್ಯಸರ್ಕಾರವು ಸೃಷ್ಟಿಸಲಿಲ್ಲ.

ಖಾಸಗಿ ಉದ್ಯಮಗಳಂತೆ ಖಾಸಗಿ ಶಾಲೆಗಳೂ ತಮ್ಮ ಕೈಕೆಳಗಿನ ಸಂಬಳಗಾರರಿಂದ ಕಟ್ಟುನಿಟ್ಟಾಗಿ ಕೆಲಸ ತೆಗೆಯುತ್ತವೆ. ತಮ್ಮ ಶಾಲೆಯು ಗಳಿಸಿದ ರ್ಯಾಂಕುಗಳು, ಪ್ರಥಮದರ್ಜೆಗಳು, ಶೇಕಡಾವಾರು ತೇರ್ಗಡೆಗಳನ್ನು ಜಾಹೀರುಮಾಡಿ ತಮ್ಮ ಪ್ರವೇಶಾತಿಗೆ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಆ ಮೂಲಕ ತಮ್ಮ ಶಾಲೆಯ ವಸೂಲಾತಿಯನ್ನು ಏರಿಸಿಕೊಂಡು ಹೆಚ್ಚು ಹೆಚ್ಚು ಲಾಭ ಮಾಡಿಕೊಳ್ಳುತ್ತವೆ. ಸರ್ಕಾರೀ ಶಾಲೆಗಳಲ್ಲಿ ಈ ರೀತಿಯ ಸ್ಪರ್ಧೆಯಾಗಲೀ ಉಪಾಧ್ಯಾಯರು ಕೆಲಸ ಮಾಡಬೇಕೆಂಬ ಒತ್ತಡವಾಗಲೀ ಇಲ್ಲ. ಬಹುತೇಕ ಶಾಲೆಗಳಲ್ಲಿ ಬೇಕಾದ ಮೂಲಭೂತ ಸೌಕರ್ಯಗಳೂ ಇಲ್ಲ. ಸರ್ಕಾರದ ಉಪಾಧ್ಯಾಯರು ಬಹುತೇಕ ಅಷ್ಟು ಚುರುಕಾಗಿಯೂ ಇರುವುದಿಲ್ಲ. ಗ್ರಾಮಾಂತರ ಶಾಲೆಗಳ ಉಪಾಧ್ಯಾಯರು ಸಕಾಲದಲ್ಲಿ ತರಗತಿಗೆ ಬರುವುದೇ ಇಲ್ಲ. ಇವೆಲ್ಲ ಸೇರಿ ತಂದೆತಾಯಿಯರಿಗೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೇ ಸೇರಿಸುವ ಸೆಳೆತ ಹೆಚ್ಚಾಗುತ್ತದೆ. ವಿದ್ಯೆಯ ವ್ಯಾಪಾರದಲ್ಲಿ ಖಾಸಗಿ ಶಾಲೆ ಎಂದರೆ ಇಂಗ್ಲಿಷ್ ಮಾಧ್ಯಮದ ಶಾಲೆ ಎಂದೇ ಅರ್ಥಮಾಡಿಕೊಳ್ಳಬೇಕು. ಲಾಭದ ದೃಷ್ಟಿ ಇಲ್ಲದೆಯೂ ಭಾರತೀಯ ಮೌಲ್ಯಗಳಿಗೆ ಒತ್ತು ನೀಡುವ ಕೆಲವು ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುವ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ನಡೆಸುತ್ತಿವೆ. ಆದರೆ ಇಂಥ ಸಂಸ್ಥೆಗಳನ್ನು ಸ್ಥಾಪಿಸುವವರ, ನಡೆಸುವವರ ಒಂದು ಕಾಲು ಭಾರತದಲ್ಲಿದ್ದು ಇನ್ನೊಂದು ಕಾಲು ಅಮೆರಿಕದಲ್ಲಿದೆ. ಇವರು ಇಂಗ್ಲಿಷ್ ಮೂಲಕವೇ ಭಾರತೀಯತೆಯನ್ನು ತಲುಪಬಹುದೆಂಬ ನಂಬಿಕೆಯವರು. ಇವರಿಗೆ ಅಕಾಡೆಮಿಕ್ ವಲಯದಲ್ಲಿ ಗೌರವವೂ ಇರುವುದರಿಂದ ತಮ್ಮ ದಾರಿಗೆ ವಿದ್ಯಾವಂತರ ಮನಸ್ಸನ್ನು ಸುಲಭವಾಗಿ ಎಳೆದುಕೊಳ್ಳುತ್ತಾರೆ.

ಆಂಗ್ಲ ಮಾಧ್ಯಮವನ್ನು ಎತ್ತಿಹಿಡಿಯುವ ಖಾಸಗಿ ಶಾಲೆಗಳ ಹೋಲಿಕೆಯಲ್ಲಿ ಸರ್ಕಾರಿ ಶಾಲೆಗಳಿಗಿರುವ ಊನಗಳು ಸರ್ಕಾರ ನಡೆಸುವವರಿಗೆ ಗೊತ್ತಿಲ್ಲದೆ ಇಲ್ಲ. ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಮೇಲೆತ್ತಲು ಬೇಕಾದ ಪ್ರಾಮಾಣಿಕತೆ ಸರ್ಕಾರ ನಡೆಸುವವರಿಗೆ ಇಲ್ಲ. ಸಮರ್ಥರು ಮತ್ತು ಸ್ವತಃ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳುವ ಮನೋಧರ್ಮದವರನ್ನು ಮಾತ್ರ ಉಪಾಧ್ಯಾಯವೃತ್ತಿಗೆ ಆರಿಸುವ ಪ್ರಾಮಾಣಿಕತೆ ರಾಜಕೀಯದವರಿಗೆ ಇಲ್ಲವಾಗಿದೆ. ಆಂಗ್ಲ ಮಾಧ್ಯಮಶಾಲೆಯ ಧಂಧೆಯನ್ನು ಎಷ್ಟೋ ರಾಜಕೀಯ ವ್ಯಕ್ತಿಗಳೇ, ಮಂತ್ರಿಸ್ಥಾನಗಳಲ್ಲಿದ್ದವರೇ, ಇರುವವರೇ ತಮ್ಮ ಹೆಸರಿನಲ್ಲಿ, ಬೇನಾಮಿ ಹೆಸರಿನಲ್ಲಿ ನಡೆಸುತ್ತಿದ್ದಾರೆ. ಅವರನ್ನು ನೇರವಾಗಿ ಸೆಣೆಸಿದಾಗ ಅವರು ನ್ಯಾಯಾಲಯಕ್ಕೆ ಹೋಗಿ ತಮ್ಮ ಮಕ್ಕಳ ಶಿಕ್ಷಣವನ್ನು ನಿರ್ಧರಿಸುವ ಹಕ್ಕನ್ನು ತಂದೆತಾಯಿಯರಿಂದ ಕಿತ್ತುಕೊಳ್ಳುವುದು ಸಾಧ್ಯವಿಲ್ಲ ಎಂಬ ವಾದವನ್ನು ಹೂಡಿ ತೀರ್ಪನ್ನು ಪಡೆದಿದ್ದಾರೆ. ನ್ಯಾಯಾಲಯದ ತೀರ್ಪನ್ನು ಬಳಸಿ ಸಾಗುವ ಎರಡು ಮಾರ್ಗಗಳು ನನಗೆ ಕಾಣಿಸುತ್ತವೆ.

1. ನಾಲ್ಕು ವರ್ಷದ ಹಿಂದೆ ನನಗೆ ಸರಸ್ವತೀ ಸಮ್ಮಾನ ಬಂದಾಗ ಸದಾನಂದ ಗೌಡರ ಸರ್ಕಾರವು ಸನ್ಮಾನವನ್ನೇರ್ಪಡಿಸಿ ಐದು ಲಕ್ಷ ರೂಪಾಯಿಗಳ ಗೌರವ ಹಮ್ಮಿಣಿಯನ್ನು ಅರ್ಪಿಸಿತು. ನಾನು ಅದನ್ನು ಸರ್ಕಾರಕ್ಕೆ ಹಿಂತಿರುಗಿಸಿ `ಇದನ್ನು ಶೇಕಡಾ 9ರಷ್ಟು ಬಡ್ಡಿಗೆ ಬ್ಯಾಂಕಿನಲ್ಲಿ ಇಡುಗಂಟಾಗಿ ಇಟ್ಟು ಅದರಲ್ಲಿ ಬರುವ 45 ಸಾವಿರ ಬಡ್ಡಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಉತ್ತಮ ಅಂಕಗಳನ್ನು ಗಳಿಸಿದ 15 ವಿದ್ಯಾರ್ಥಿಗಳಿಗೆ ತಲಾ ತಿಂಗಳಿಗೆ ಇನ್ನೂರ ಐವತ್ತು ರೂಪಾಯಿಯಂತೆ ಹನ್ನೆರಡು ತಿಂಗಳೂ ಕೊಟ್ಟರೆ ಒಬ್ಬೊಬ್ಬನಿ(ಳಿ)ಗೂ ಮೂರು ಸಾವಿರವಾಗುತ್ತದೆ. ಇದು ಪ್ರೋತ್ಸಾಹಧನ. ನಾನು ಈ ಹಮ್ಮಿಣಿಯನ್ನು ಹಿಂತಿರುಗಿಸಿರುವುದು ಕೇವಲ ಸಾಂಕೇತಿಕ. ಸರ್ಕಾರವು ಇದೇ ಲೆಕ್ಕದಲ್ಲಿ ಪ್ರೋತ್ಸಾಹಧನವನ್ನು ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಕೊಟ್ಟರೆ ಕೇವಲ ಮೂರು ಕೋಟಿಯಾಗುತ್ತದೆ. ಮುಖ್ಯಮಂತ್ರಿಗಳು ಮನಸ್ಸು ಮಾಡಬೇಕು’ ಎಂದೆ. ಸದಾನಂದ ಗೌಡರು ತಕ್ಷಣ ಎದ್ದುನಿಂತು `ಈ ವರ್ಷದಿಂದಲೇ ಜಾರಿಗೆ ಬರುವಂತೆ ಪ್ರತಿವರ್ಷವೂ ಮೂರು ಕೋಟಿ ರೂಪಾಯಿಯನ್ನು ಮಂಜೂರು ಮಾಡಿದ್ದೇನೆ’ ಎಂದರು. ಅಷ್ಟು ಮಾತ್ರವಲ್ಲ, ವಿದ್ಯಾಮಂತ್ರಿಗಳಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಈ ಯೋಜನೆಯ ಬಗ್ಗೆ ಇನ್ನಷ್ಟು ವಿವರವಾಗಿ ಚರ್ಚಿಸಲು ನಾನು ಬೆಂಗಳೂರಿನಲ್ಲಿ ಉಳಿದಿದ್ದ ಮನೆಗೆ ಮರು ಬೆಳಗ್ಗೆಯೇ ಕಳಿಸಿದರು. ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಅಂಕಿ ಅಂಶಗಳೊಡನೆ ಬಂದ ಕಾಗೇರಿಯವರೊಡನೆ ನಾನು `ಈ ಲೆಕ್ಕದಲ್ಲಿ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಕೊಟ್ಟರೆ ವಾರ್ಷಿಕ ಮೂವತ್ತು ಕೋಟಿ ಖರ್ಚಾಗುತ್ತದೆ. ಐದುಲಕ್ಷ ವಿದ್ಯಾರ್ಥಿಗಳಿಗಾದರೆ ನೂರ ಐವತ್ತು ಕೋಟಿಯಾಗುತ್ತದೆ. ಸರ್ಕಾರಕ್ಕೆ ಇದೇನೂ ದೊಡ್ಡ ಮೊತ್ತವಲ್ಲ. ಹೀಗೆ ಸ್ವಲ್ಪಮಟ್ಟಿಗಾದರೂ ಇಂಗ್ಲಿಷ್ ಮಾಧ್ಯಮದ ಹುಚ್ಚು ಆಕರ್ಷಣೆಯನ್ನು ತಡೆಯಬಹುದು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ವಿದ್ಯಾ ಇಲಾಖೆ ಪಕ್ಷಪಾತಮಾಡುತ್ತಿದೆ ಎಂದು ಯಾರಾದರೂ ತರಲೆ ಎತ್ತಿದರೆ ಈ ಯೋಜನೆಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೂಲಕವಾಗಿಯೋ ಸಾಹಿತ್ಯ ಪರಿಷತ್ತಿನ ಮೂಲಕವಾಗಿಯೋ ಅನುಷ್ಠಾನಕ್ಕೆ ತರಬಹುದು’ ಎಂದೆ. ಕಾಗೇರಿಯವರು ಉತ್ಸಾಹದಿಂದ ಒಪ್ಪಿ `ಇದನ್ನು ಮುಖ್ಯಮಂತ್ರಿ ಸದಾನಂದ ಗೌಡರು ಒಪ್ಪುತ್ತಾರೆ. ನನಗೆ ಭರವಸೆ ಇದೆ’ ಎಂದು ಹೇಳಿದರು. ಆದರೆ ಬೇರೆ ರಾಜಕೀಯ ಕಾರಣಗಳಿಂದ ಸದಾನಂದ ಗೌಡರ ಸರ್ಕಾರ ಬಿದ್ದುಹೋಯಿತು. ಅಲ್ಪಾಯುವಾದ ಜಗದೀಶ ಶೆಟ್ಟರ್ ಸರ್ಕಾರ ಬೇರೆ ಜಂಜಡಗಳಲ್ಲಿ ಮುಳುಗಿತು. ಅನಂತರ ಚುನಾವಣೆಯಾಗಿ ಬೇರೆ ಪಕ್ಷ ಅಧಿಕಾರಕ್ಕೆ ಬಂತು. ನಾನು ಸೂಚಿಸಿದ ಯೋಜನೆ ಸತ್ತುಹೋಯಿತು. ಹಿಂತಿರುಗಿಸಿದ ಐದು ಲಕ್ಷ ಏನಾಯಿತೋ ಗೊತ್ತಿಲ್ಲ.

ನ್ಯಾಯಾಲಯದ ತೀರ್ಪಿನಿಂದ ಉಂಟಾಗಿರುವ ಅಡ್ಡಿಯನ್ನು ತಡೆಯಲು ಇದೊಂದು ಮಾರ್ಗ ಎಂಬುದನ್ನು ಸೂಚಿಸಲು ಈ ಘಟನೆಯನ್ನು ಇಲ್ಲಿ ನೆನಪಿಸಿದ್ದೇನೆ.

(ಲೇಖಕರು ಪ್ರಸಿದ್ಧ ಸಾಹಿತಿಗಳು)

 

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top