ದೇಸಿ ಆ್ಯಪ್‌ಗಳಲ್ಲಿ ಸಂಚಲನ

– ಚೀನಾ ಬ್ಯಾನ್‌ ವರದಾನ | ಪರ್ಯಾಯ ಆ್ಯಪ್‌ಗೆ ಹೆಚ್ಚಿದ ಬೇಡಿಕೆ.

ಹೊಸದಿಲ್ಲಿ: ಟಿಕ್‌ಟಾಕ್‌, ಹೆಲೋ ಸೇರಿದಂತೆ ಚೀನಾ ಮೂಲದ 59 ಮೊಬೈಲ್‌ ಆ್ಯಪ್‌ಗಳ ನಿಷೇಧದಿಂದ ಭಾರತದ ಸ್ಟಾರ್ಟ್‌ಅಪ್‌ಗಳಿಗೆ ಉತ್ತಮ ಅವಕಾಶಗಳ ಬಾಗಿಲು ತೆರೆದಂತಾಗಿದೆ. ಚೀನಾ ಅಪ್ಲಿಕೇಷನ್‌ಗಳಿಗೆ ಪ್ರತಿಯಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಸ್ವದೇಶಿ ಆ್ಯಪ್‌ಗಳಿಗೆ ಭಾರಿ ಬೇಡಿಕೆ ಬಂದಿದೆ. ಚಿಂಗಾರಿ, ಬೊಲೊ ಇಂಡ್ಯಾ, ಸ್ವೂಪ್‌ ಇತ್ಯಾದಿಗಳು ಗ್ರಾಹಕರನ್ನು ಸೆಳೆಯಲು ಕಸರತ್ತು ತೀವ್ರಗೊಳಿಸಿವೆ. ಟಿಕ್‌-ಟಾಕ್ ಬ್ಯಾನ್‌ ಆದ ಮರುದಿನವೇ ಭಾರತದಲ್ಲಿ ‘ಚಿಂಗಾರಿ’ ಆ್ಯಪ್‌ ಡೌನ್‌ಲೋಡ್‌ ಸಂಖ್ಯೆ ಗಂಟೆಗೆ ಸುಮಾರು 1 ಲಕ್ಷ ತಲುಪಿದೆ. ಒಂದು ಗಂಟೆಯಲ್ಲಿವೀಕ್ಷಿಸುವ ವಿಡಿಯೋಗಳ ಸಂಖ್ಯೆ 30 ಲಕ್ಷ ದಾಟಿದೆ. ಮುಂದಿನ ದಿನಗಳಲ್ಲಿದೇಸಿ ಆ್ಯಪ್‌ ಬಳಕೆದಾರರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಈ ಮಧ್ಯೆ, ಟಿಕ್‌ ಟಾಕ್‌ ಸೆಲೆಬ್ರಿಟಿಗಳಿಗೆ, ಕಲಾವಿದರಿಗೆ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಲು ಮುಕ್ತ ಆಹ್ವಾನ ನೀಡುವುದಾಗಿ ಬೊಲೊ ಇಂಡ್ಯಾದ ಸಿಇಒ ವರುಣ್‌ ಸಕ್ಸೇನಾ ತಿಳಿಸಿದ್ದಾರೆ.

ಲಕ್ಷಾಂತರ ಮಂದಿ ಟಿಕ್‌ ಟಾಕ್‌ ಬದಲಿಗೆ ಬೋಲೊ ಇಂಡ್ಯಾ ಆ್ಯಪ್‌ ಸಹ ಡೌನ್ಲೋಡ್‌ ಮಾಡಿಕೊಂಡಿದ್ದಾರೆ. ಪ್ರತಿ ದಿನ ಡೌನ್‌ ಲೋಡ್‌ ಹೆಚ್ಚುತ್ತಲೇ ಇದ್ದು, ಗ್ರಾಹಕರ ಸಂಖ್ಯೆ ಕಳೆದೊಂದು ವರ್ಷದಲ್ಲಿ4.85 ಲಕ್ಷ ಕ್ಕೆ ಏರಿದೆ. ಮೊಬೈಲ್‌ ಅಪ್ಲಿಕೇಷನ್‌ಗಳು ಕೇವಲ ಮನರಂಜನೆಗೆ, ಸಂವಹನಕ್ಕೆ ಮಾತ್ರವಲ್ಲದೆ, ನಾನಾ ಬಿಲ್‌ಗಳ ಪಾವತಿ, ಆನ್‌ಲೈನ್‌ ತರಗತಿ, ಮೀಟಿಂಗ್‌ ಇತ್ಯಾದಿಗಳಿಗೂ ಉಪಯುಕ್ತ. ಹೀಗಾಗಿ ಮುಂಬರುವ ದಿನಗಳಲ್ಲಿ ದೇಶದಲ್ಲಿ ಡಿಜಿಟಲ್‌ ಕ್ರಾಂತಿ ಸಂಭವಿಸಲಿದೆ ಎಂದು ಪೇಟಿಎಂ ಸಿಇಒ ಮತ್ತು ಸ್ಥಾಪಕ ವಿಜಯ್‌ ಶೇರ್ಖ ಶರ್ಮಾ ತಿಳಿಸಿದ್ದಾರೆ. ದೇಶದ ಭದ್ರತೆಯ ದೃಷ್ಟಿಯಿಂದ ಸರಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಇದು ಆತ್ಮನಿರ್ಭರ ಆ್ಯಪ್‌ ಇಕೊ ಸಿಸ್ಟಮ್‌ ಅನ್ನು ರೂಪಿಸಲಿದೆ ಎಂದು ಶರ್ಮಾ ಬಣ್ಣಿಸಿದ್ದಾರೆ.

ನಾಸ್ಕಾಮ್‌ ಸ್ವಾಗತ

ಐಟಿ ವಲಯವನ್ನು ಪ್ರತಿನಿಧಿಸುವ ಸಂಸ್ಥೆಯಾದ ನಾಸ್ಕಾಮ್ನ ಅಧ್ಯಕ್ಷೆ ದೇಬ್ಜಾನಿ ಘೋಷ್‌ ಅವರು ಸರಕಾರದ ನಿರ್ಧಾರವನ್ನು ಸ್ವಾಗತಿಸಿದ್ದು, ಸ್ಟಾರ್ಟಪ್ಗಳಿಗೆ ಹೊಸ ಸಂಶೋಧನೆಯ ಆಟವನ್ನು ಆಡಲು ಇದಕ್ಕಿಂತ ಸೂಕ್ತ ಸಂದರ್ಭ ಇನ್ನೊಂದಿಲ್ಲ. ಈ ನಡೆಯಿಂದ ಡಿಜಿಟಲ್ ಕ್ಷೇತ್ರದಲ್ಲಿಸಂಶೋಧನೆ, ನೀತಿ, ಹೂಡಿಕೆ, ವಿಶ್ವಾಸ, ರಾಷ್ಟ್ರೀಯ ಭದ್ರತೆಯ ಸಂಯೋಜನೆಯಾದಂತಾಗಿದೆ’’ ಎಂದು ಟ್ವೀಟ್‌ ಮಾಡಿದ್ದಾರೆ.

ಟಿಕ್‌-ಟಾಕ್‌ ಸ್ತಬ್ಧ

ಸರಕಾರದ ನಿಷೇಧ ಆದೇಶದ ಬೆನ್ನಲ್ಲೇ ಭಾರತದಲ್ಲಿ ಟಿಕ್‌-ಟಾಕ್‌ ಆ್ಯಪ್‌ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಆ್ಯಪ್‌ ಸ್ಟೋರ್‌ನಲ್ಲೂ ಡೀಲಿಸ್ಟ್‌ ಮಾಡಲಾಗಿದೆ. ಸರಕಾರದ ಜತೆ ಸಮಾಲೋಚನೆ ನಡೆಸುವ ಇಂಗಿತವನ್ನು ಸಂಸ್ಥೆ ವ್ಯಕ್ತಪಡಿಸಿದೆ.

ಭಾರತದ ಕಂಪನಿಗಳಿಗೆ ಲಾಭವೇನು?

– ಚೀನಾಕ್ಕೆ ಪರ್ಯಾಯ ಆ್ಯಪ್‌ ಅಭಿವೃದ್ಧಿಗೆ ಅವಕಾಶ

– ಚೀನಾ ಆ್ಯಪ್‌ ಬಳಸುತ್ತಿದ್ದ ಗ್ರಾಹಕರ ಆಕರ್ಷಣೆ

– ಚೀನಾ ವಿರೋಧಿ ಅಲೆಯ ಸದುಪಯೋಗ

ಸವಾಲೇನು?

– ಗುಣಮಟ್ಟ ಇದ್ದರೆ ಮಾತ್ರ ಸಫಲ

– ಇತರೆ ರಾಷ್ಟ್ರಗಳ ಆ್ಯಪ್‌ಗಳ ಜತೆ ಪೈಪೋಟಿ

– ಹೂಡಿಕೆದಾರರ ಆಕರ್ಷಣೆ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top