ಚೀನಾ ಕಾಯಿದೆಗೆ ಊಹೂಂ ಅನ್ನುತ್ತಿದೆ ಹಾಂಕಾಂಗ್

ಹಾಂಕಾಂಗ್‌ನ ಸ್ವಾಯತ್ತತೆಯನ್ನು ಸಂಪೂರ್ಣ ನಿರಾಕರಿಸಿ, ತನ್ನ ಸರ್ವಾಧಿಪತ್ಯವನ್ನು ಅಲ್ಲಿ ಸ್ಥಾಪಿಸಲು ಚೀನಾ ಮುಂದಾಗಿದೆ. ಇದು ಹಾಂಕಾಂಗ್‌ನಲ್ಲಿ ಇನ್ನೊಂದು ಸುತ್ತಿನ ಪ್ರತಿರೋಧದ ಅಲೆ ಹಾಗೂ ಅಮೆರಿಕದೊಂದಿಗಿನ ಸಂಬಂಧದಲ್ಲಿ ಮತ್ತಷ್ಟು ಬಿರುಕು ಮೂಡಿಸಲಿದೆ.
ಕಾಯಿದೆಯಲ್ಲಿ ಏನಿದೆ?
ಹೊಸ ಕಾಯಿದೆಯ ಬಗ್ಗೆ ಚೀನಾ ಹೇಳುವ ಪ್ರಕಾರ ಅದು ‘ಒಂದೇ ದೇಶ, ಎರಡು ಆಡಳಿತ’ ಪದ್ಧತಿಯನ್ನು ಬಲಪಡಿಸಲಿದೆ. ಆದರೆ ಇದು ಸಾಧ್ಯವಿಲ್ಲ. ಯಾಕೆಂದರೆ, ಹೊಸ ಕಾಯಿದೆಯಲ್ಲಿ ಹಾಂಕಾಂಗ್ ಎಲ್ಲ ನಿರ್ಣಯಗಳಿಗೂ ಚೀನಾದ ಸರಕಾರಕ್ಕೆ ಕಾಯಬೇಕಾಗಿದೆ. ಹೊಸ ಕಾಯಿದೆಯ ಪ್ರಕಾರ ದೇಶದ ಸ್ವಾಯತ್ತತೆಗಾಗಿ ಒತ್ತಾಯಿಸುವುದು, ಚೀನಾದ ಅಧಿಕಾರವನ್ನು ಪ್ರಶ್ನಿಸುವುದು, ಭಯೋತ್ಪಾದನೆ ಹಾಗೂ ವಿದೇಶಿ ಕೈವಾಡಗಳು ದೇಶದ್ರೋಹ ಎನಿಸಲಿವೆ. ಚೀನಾದ ಪ್ರಭುತ್ವವನ್ನು ಪ್ರಶ್ನಿನಿಸುವ ಎಲ್ಲ ಬಗೆಯ ಚಟುವಟಿಕೆಗಳು ಈ ಕಾಯಿದೆಯಡಿ ಬರಲಿದ್ದು, ಜೀವಾವಧಿ ಶಿಕ್ಷೆಯಿಂದ ಮರಣದಂಡನೆಯವರೆಗೆ ಕಠಿಣ ಶಿಕ್ಷೆಗೆ ಅರ್ಹವೆನಿಸಲಿವೆ. ಅಂದರೆ ಹಾಂಕಾಂಗ್‌ನ ಸ್ವಾಯತ್ತತೆ ಪ್ರತಿಪಾದಿಸುವ ಚಳವಳಿಗಳನ್ನು ಈ ಕಾಯಿದೆಯಡಿ ಚೀನಾ ಹತ್ತಿಕ್ಕಲಿದೆ.

ಇತರ ದೇಶಗಳಿಗೇನು ಸಮಸ್ಯೆ?
ತಂತ್ರಜ್ಞಾನದಲ್ಲಿ ಮುಂದುವರಿದಿರುವ ಹಾಂಕಾಂಗ್ ಚೀನಾದ ಆಡಳಿತದಡಿಯಲ್ಲಿದ್ದರೂ ಇದುವರೆಗೆ ಸ್ವಾಯತ್ತತೆ ಅನುಭವಿಸುತ್ತಿತ್ತು. ಇತರ ದೇಶಗಳು ಅದರ ಜೊತೆಗೆ ನೇರವಾಗಿ ವ್ಯವಹಾರ ನಡೆಸಬಹುದಿತ್ತು. ಹೊಸ ಕಾಯಿದೆಯ ಪ್ರಕಾರ, ಯಾವುದೇ ಬೇರೆ ದೇಶದೊಂದಿಗೆ ವ್ಯವಹರಿಸಲು ಇನ್ನು ಮುಂದೆ ಚೀನಾದ ಅಪ್ಪಣೆ ಪಡೆಯಬೇಕು. ಬಹುತೇಕ ಎಲ್ಲ ದೇಶಗಳು ಹಾಂಕಾಂಗ್ ಜತೆಗೆ ತಂತ್ರಜ್ಞಾನದ ವ್ಯವಹಾರ ಹೊಂದಿವೆ.

ಹಾಂಕಾಂಗ್‌ನ ರಕ್ತಸಿಕ್ತ ಚರಿತ್ರೆ
ಹಾಂಕಾಂಗ್ ಮೂಲತಃ ಚೀನಾದ ಜೊತೆಗೆ ಒಂದು ಕಡೆಯಲ್ಲಿ ಕೂಡಿಕೊಂಡಿರುವ ಪರ್ಯಾಯ ದ್ವೀಪ. 19ನೇ ಶತಮಾನದಲ್ಲಿ ಬ್ರಿಟನ್ ಹಾಗೂ ಚೀನಾದ ಕಿಂಗ್ ರಾಜಮನೆತನದ ನಡುವೆ ಸರಣಿ ಯುದ್ಧಗಳು ನಡೆಯುತ್ತಿದ್ದವು (ಇವು ಓಪಿಯಮ್ ವಾರ್ ಎಂದೇ ಖ್ಯಾತ). 1842ರಲ್ಲಿ ಬ್ರಿಟನ್ ಜಯ ಗಳಿಸಿದಾಗ, ಚೀನಾದ ರಾಜಮನೆತನ ಈ ದ್ವೀಪವನ್ನು ಬ್ರಿಟನ್‌ಗೆ ನೀಡಿತು. ಅಂದಿನಿಂದ ಇದು ಬ್ರಿಟನ್‌ನ ವಸಾಹತು ಆಯಿತು. 2ನೇ ಮಹಾಯುದ್ಧದ ಸಂದರ್ಭದಲ್ಲಿ ಈ ದ್ವೀಪವನ್ನು ಜಪಾನ್ ವಶಪಡಿಸಿಕೊಂಡಿತು. ಯುದ್ಧ ಮುಗಿದ ಬಳಿಕ ಬ್ರಿಟಷ್ ಅಧಿಪತ್ಯ ಅಲ್ಲಿಗೆ ಮರಳಿತು. ನಂತರದ ದಶಕಗಳಲ್ಲಿ ಕೊರಿಯಾ ಯುದ್ಧ ಹಾಗೂ ಚೀನಾದ ಕಮ್ಯುನಿಸ್ಟ್ ಕ್ರಾಂತಿಯ ಪರಿಣಾಮ ಇಲ್ಲಿಗೆ ಚೀನಾದಿಂದ ಭಾರಿ ಪ್ರಮಾಣದಲ್ಲಿ ವಲಸೆ ಸಂಭವಿಸಿತು. 50ರ ದಶಕದಲ್ಲಿ ಈ ದ್ವೀಪ ಉದ್ಯಮ ಹಾಗೂ ನಿರ್ಮಾಣದ ತಾಣಗಿ ಬೆಳೆಯಿತು.

ಅಮೆರಿಕ ಏನು ಮಾಡಲಿದೆ?
ಚೀನಾದ ಹೊಸ ಕಾಯಿದೆ ಹೇರುವುದು ಖಚಿತವಾಗುತ್ತಿದ್ದಂತೆ, ಹಾಂಕಾಂಗ್‌ಗೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಅಮೆರಿಕ ರದ್ದುಪಡಿಸಿದೆ. ಈ ಸ್ಥಾನಮಾನದ ಮೂಲಕ, ವಾಣಿಜ್ಯ ವ್ಯವಹಾರದಲ್ಲಿ ಹಾಂಕಾಂಗ್ ಕೆಲವು ವಿಶೇಷ ಸೌಲಭ್ಯ ಹಾಗೂ ವಿನಾಯಿತಿಗಳನ್ನು ಪಡೆಯುತ್ತಿತ್ತು. ಅವು ಇಲ್ಲವಾಗಲಿವೆ. ಆಧುನಿಕ ಮಾರುಕಟ್ಟೆಯಾಗಿರುವ ಹಾಂಕಾಂಗ್‌ನಲ್ಲಿ ಅಮೆರಿಕದ ಸುಮಾರು 1300 ದೊಡ್ಡ ಕಂಪನಿಗಳ ಕಚೇರಿಗಳಿವೆ. ಸುಮಾರು 1 ಲಕ್ಷ ಮಂದಿ ಇಲ್ಲಿ ದುಡಿಯುತ್ತಿದ್ದಾರೆ. ಅನಿವಾರ್ಯವಾದರೆ ಈ ಶಾಖೆಗಳನ್ನು ಮುಚ್ಚಿಬಿಡುವುದಾಗಿ ಅಮೆರಿಕ ಹೇಳಿದೆ. ಹಾಂಕಾಂಗ್ ಇದುವರೆಗೆ ಚೀನಾದ ಪ್ರಜೆಗಳಿಗೆ ಅಮೆರಿಕದ ಗೇಟ್ವೇ ಆಗಿತ್ತು.

ಕಿಚ್ಚೆಬ್ಬಿಸಿದ ಗಡೀಪಾರು ಕಾಯಿದೆ
ಕಳೆದ ವರ್ಷ ಏಪ್ರಿಲ್‌ನಲ್ಲಿ, ಹಾಂಕಾಂಗ್‌ನಲ್ಲಿ ‘ಗಡೀಪಾರು ಕಾಯಿದೆ’ಯನ್ನು ತರಲು ಚೀನಾ ಮುಂದಾಗಿತ್ತು. ಇದರ ಉದ್ದೇಶ, ಕ್ರಿಮಿನಲ್‌ಗಳನ್ನು ಮತ್ತು ಶಂಕಿತ ಕ್ರಿಮಿನಲ್‌ಗಳನ್ನು ಹಾಂಕಾಂಗ್‌ನಿಂದ ಚೀನಾಕ್ಕೆ ಗಡೀಪಾರು ಮಾಡಬಲ್ಲ ಅಧಿಕಾರವನ್ನು ನೀಡುವುದಾಗಿತ್ತು. ಆದರೆ ಇದರಿಂದ ಹಾಂಕಾಂಗ್‌ನ ಸ್ವಾಯತ್ತ ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಭಾವಿಸಿದ ಸಾವಿರಾರು ಮಂದಿ, ಈ ಕಾಯಿದೆಯ ವಿರುದ್ಧ ಚಳವಳಿಗೆ ಮುಂದಾದರು. ತಿಂಗಳುಗಳು ಕಳೆದಂತೆ ಈ ಚಳವಳಿಗಳು ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದವು. ಹತ್ತಾರು ಮಂದಿ ಇದಕ್ಕೆ ಬಲಿಯಾದರು. ವಾಸ್ತವವಾಗಿ ಚೀನಾದ ಕಣ್ಣು ಇದ್ದುದು, ಹಾಂಕಾಂಗ್‌ನ  ಸ್ವಾತಂತ್ರ್ಯ ಹೋರಾಟಗಾರರ ಮೇಲೆ. ಈ ಕಾಯಿದೆಯ ಮೂಲಕ ಇವರನ್ನು ಮಟ್ಟ ಹಾಕಬಹುದು ಎಂದು ಚೀನಾ ಭಾವಿಸಿತ್ತು. ಕೊನೆಗೆ ಪ್ರತಿಭಟನೆಗಳು ದೊಡ್ಡ ಸ್ವರೂಪಕ್ಕೆ ತಿರುಗಿದಾಗ, ಸೆಪ್ಟೆಂಬರ್‌ನಲ್ಲಿ ಅದನ್ನು ಹಿಂದೆಗೆದುಕೊಳ್ಳಲಾಯಿತು. ನಂತರ ನಡೆದ ಚುನಾವಣೆಯಲ್ಲಿ ಹಾಂಕಾಂಗ್ ಸಂಸತ್ತಿಗೆ ಚೀನಾ ವಿರೋಧಿ ಸ್ಪರ್ಧಿಗಳು ಬಹುಮತದಿಂದ ಆರಿಸಿಬಂದರು.

ಈ ದೇಶಕ್ಕೆ ಮುಂದೇನು ಕಾದಿದೆ?
ಚೀನಾ ತನ್ನ ಪಟ್ಟು ಬಿಡುವ ಆಸಾಮಿ ಅಲ್ಲ. ತನಗೆ ಏನೇನೂ ಸಂಬಂಧವಿಲ್ಲದ ಟಿಬೆಟ್ ದೇಶವನ್ನೇ ಒಳನುಗ್ಗಿ ಆಕ್ರಮಿಸಿದ ದೇಶವದು. ಸುತ್ತಮುತ್ತಲಿನ ಸಣ್ಣಪುಟ್ಟ ಸ್ವಾಯತ್ತ ದೇಶಗಳನ್ನೆಲ್ಲ ಅದು ಈಗಾಗಲೇ ಮುಕ್ಕಿ ಮುಗಿಸಿದೆ. ಹಾಂಕಾಂಗ್‌ಗೂ ಇದೇ ಗತಿ ಕಾದಿದ್ದರೆ ಆಶ್ಚರ್ಯವಿಲ್ಲ. 2047ರವರೆಗೆ ಅದು ಬ್ರಿಟನ್ ಜೊತೆ ಮಾಡಿಕೊಂಡ ಒಪ್ಪಂದವನ್ನು ಪಾಲಿಸಬೇಕು. ಅದರ ನಂತರ ಹಾಂಕಾಂಗ್‌ನ ಕತೆ ಏನು ಎಂಬುದು ಸ್ಪಷ್ಟವಿಲ್ಲ. ಆದರೆ ಚೀನಾದ ಆತುರ ನೋಡಿದರೆ, ಅದಕ್ಕೂ ಎಷ್ಟೋ ಮೊದಲೇ ತನ್ನ ಸರ್ವಾಧಿಕಾರವನ್ನು ಸ್ವಾಯತ್ತ ಪ್ರಾಂತ್ಯದ ಮೇಲೆ ಚಾಚಲು ಅದು ಸಿದ್ಧವಾಗಿರುವಂತೆ ಕಾಣುತ್ತದೆ. ಪ್ರಜಾಪ್ರಭುತ್ವ ಹೋರಾಟಗಳನ್ನು ಚೀನಾ ಕ್ರೂರವಾಗಿ ದಮನಿಸಿದೆ. 1989ರಲ್ಲಿ ರಾಜಧಾನಿ ಬೀಜಿಂಗ್‌ನಲ್ಲಿ ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ಪರ ಹೋರಾಟ ನಡೆಸಿದಾಗ, ಟ್ಯಾಂಕ್‌ಗಳನ್ನು ತಂದು ಸಾವಿರಾರು ವಿದ್ಯಾರ್ಥಿಗಳನ್ನು ಒರೆಸಿಹಾಕಿತ್ತು. ಆದರೆ, ‘‘ಪ್ರತ್ಯೇಕತಾವಾದಿ ಧ್ವನಿಗಳನ್ನು ಒರೆಸಿಹಾಕುತ್ತೇವೆ,’’ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಆಗಲೇ ಗುಡುಗಿದ್ದಾರೆ.

ಎರಡಲಗಿನ ಆಡಳಿತ ವ್ಯವಸ್ಥೆ
1997ರಲ್ಲಿ ಹಾಂಕಾಂಗನ್ನು ಚೀನಾಕ್ಕೆ ಬ್ರಿಟನ್ ಒಪ್ಪಿಸುವಾಗ, ಚೀನಾದ ಜೊತೆಗೆ ಒಂದು ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಅದನ್ನು ‘ಬೇಸಿಕ್ ಲಾ’ ಎನ್ನಲಾಗುತ್ತದೆ. ಇದನ್ನೇ ಹಾಂಕಾಂಗ್‌ನ  ‘ಮಿನಿ ಸಂವಿಧಾನ’ ಎಂದೂ ಹೇಳಲಾಗುತ್ತದೆ. ಅದರ ಪ್ರಕಾರ, 2047ರವರೆಗೆ ಹಾಂಕಾಂಗ್ ಸ್ವಾಯತ್ತ ಸ್ಥಾನಮಾನ ಇರಬೇಕು. ಅದರದೇ ಆದ ನ್ಯಾಯಾಂಗ ವ್ಯವಸ್ಥೆ, ಕಾನೂನು ಆಡಳಿತ, ಅದರದೇ ಸಂಸತ್ತು ಹಾಗೂ ವಾಕ್ ಸ್ವಾತಂತ್ರ್ಯ ಎಲ್ಲ ಇವೆ. ಪಟ್ಟಣದ ಆಡಳಿತ ಸಂಸತ್ತು ಹಾಗೂ ಅದರ ಪರಮಾಧಿಕಾರಿಯಾದ ಚೀಫ್ ಎಕ್ಸಿಕ್ಯೂಟಿವ್ ಕೈಯಲ್ಲಿರುತ್ತದೆ. ಆದರೆ ಈ ಚೀಫ್ ಎಕ್ಸಿಕ್ಯೂಟಿವ್ ಚೀನಾ ಸರಕಾರದ ಕೈಗೊಂಬೆಯಾಗಿರುತ್ತಾನೆ. ಹಾಂಕಾಂಗ್‌ನ ರಕ್ಷಣೆ, ವಿದೇಶಾಂಗ ವ್ಯವಹಾರಗಳನ್ನು ಚೀನಾ ನೋಡಿಕೊಳ್ಳುತ್ತದೆ. ಚೀನಾದ 5000 ಸೈನಿಕರು ಯಾವಾಗಲೂ ಹಾಂಕಾಂಗ್‌ನಲ್ಲಿ ಇದ್ದು, ಯಾವುದೇ ಕ್ಷಣದಲ್ಲಿ ಚೀನಾ ವಿಧಿಸಬಲ್ಲ ತುರ್ತುಪರಿಸ್ಥಿತಿಯಲ್ಲಿ ಪಟ್ಟಣದ ಅಧಿಕಾರ ಕೈಗೆತ್ತಿಕೊಳ್ಳುತ್ತಾರೆ.
ಹಾಂಕಾಂಗ್ ಎಲ್ಲಿದೆ? ಎಷ್ಟಿದೆ?
ಚೀನಾದ ದಕ್ಷಿಣ ಕರಾವಳಿಯಲ್ಲಿದೆ ಹಾಂಕಾಂಗ್ ಪಟ್ಟಣ.
ಇದರ ವಿಸ್ತಾರ – 2755ಚದರ ಕಿಲೋಮೀಟರ್
ಜನಸಂಖ್ಯೆ – 75 ಲಕ್ಷ
ಇಲ್ಲಿನ ಕರೆನ್ಸಿ – ಹಾಂಕಾಂಗ್ ಡಾಲರ್
(1 ಹಾಂಕಾಂಗ್ ಡಾಲರ್ 9.77ರೂ.)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top