ರೈತರಿಗೆ ಬಂಪರ್ ಕೊಡುಗೆ

– 14 ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆ | ರೈತರ ಲಾಭ 50% ಹೆಚ್ಚಳಕ್ಕೆ ಕ್ರಮ.

– ಸಣ್ಣ ಕೈಗಾರಿಕೆಗೆ ಮತ್ತಷ್ಟು ನೆರವಿನ ಪ್ಯಾಕೇಜ್ | ಬೀದಿ ವ್ಯಾಪಾರಿಗಳಿಗೆ ಸುಲಭ ಸಾಲ.

– 50%-83%: ವಿವಿಧ ಬೆಳೆಗಳಿಗೆ ಹೆಚ್ಚಿಸಲಾದ ಎಂಎಸ್‌ಪಿ ಪ್ರಮಾಣ.

– 2020- 21: ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಅನ್ವಯವಾಗುವ ಅವಧಿ.

– 35 ಲಕ್ಷ ಹೆಕ್ಟೇರ್ ಈಗಾಗಲೇ ಭತ್ತ ನಾಟಿ ಆರಂಭವಾಗಿರುವ ಕೃಷಿ ಭೂಮಿ.

ಹೊಸದಿಲ್ಲಿ: ಲಾಕ್‌ಡೌನ್‌, ಬೆಲೆ ಕುಸಿತ, ಆದಾಯ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ದೇಶದ ರೈತರಿಗೆ ಒಮ್ಮೆಲೆ ಡಬಲ್ ಖುಷಿ ಸಿಕ್ಕಿದೆ. ಒಂದೆಡೆ ಕೃಷಿ ಚಟುವಟಿಕೆ ಆರಂಭಕ್ಕೆ ಮುಂಗಾರು ಮಳೆ ಸಿಂಚನ ಮುನ್ನುಡಿ ಬರೆದಿದೆ. ಮತ್ತೊಂದೆಡೆ ಕೇಂದ್ರ ಸರಕಾರ ಮುಂಗಾರು ಬೆಳೆಗಳಿಗೆ ಭರ್ಜರಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಿಸುವ ಮೂಲಕ ರೈತರ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಂಡಿದೆ. ಭತ್ತ, ರಾಗಿ, ಜೋಳ, ದ್ವಿದಳ ಧಾನ್ಯಗಳು ಸೇರಿದಂತೆ ಒಟ್ಟು 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಶೇ. 50ರಿಂದ ಶೇ.84ರವರೆಗೂ ಹೆಚ್ಚಳ ಮಾಡಲಾಗಿದೆ.‘ಕೃಷಿ ವೆಚ್ಚ ಮತ್ತು ಬೆಲೆ ಆಯೋಗ’ದ ವರದಿ ಆಧರಿಸಿ ಉತ್ಪಾದನಾ ವೆಚ್ಚಕ್ಕಿಂತಲೂ 1.5 ಪಟ್ಟು ಅಧಿಕ ಮಟ್ಟದಲ್ಲಿ ಬೆಂಬಲ ಬೆಲೆಯನ್ನು ನಿಗದಿಗೊಳಿಸಲಾಗಿದೆ. ‘ಎನ್‌ಡಿಎ 2.0’ ಸರಕಾರ ಒಂದು ವರ್ಷ ಪೂರೈಸಿದ ಬಳಿಕ ಸೋಮವಾರ ನಡೆದ ಮೊದಲ ಸಂಪುಟ ಸಭೆಯಲ್ಲಿಈ ಸಂಬಂಧ ಪ್ರಸ್ತಾಪಗಳಿಗೆ ಅನುಮೋದನೆ ದೊರೆತಿದೆ.  ಅಲ್ಲದೆ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ನೆರವಾಗುವ ಹಲವು ನಿರ್ಣಯಗಳಿಗೂ ಸಂಪುಟ ಸಭೆ ಹಸಿರು ನಿಶಾನೆ ತೋರಿದೆ. ಜೊತೆಗೆ ಬೀದಿ ಬದಿ ವ್ಯಾಪಾರಿಗಳ ಸಂಕಷ್ಟಕ್ಕೂ ಸರಕಾರ ಸ್ಪಂದಿಸಿದೆ. ಅವರಿಗೆ ಸುಲಭ ಸಾಲ ನೀಡಲು ‘ಪಿಎಂ ಸ್ವಾನಿಧಿ’ ಹೆಸರಿನ ಹೊಸ ಯೋಜನೆಯನ್ನು ಆರಂಭಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಈ ಯೋಜನೆ ಜಾರಿಗೊಳ್ಳಲಿದೆ. 
ಸಾಲ ಮರುಪಾವತಿ ಗಡುವು ವಿಸ್ತರಣೆ ಬ್ಯಾಂಕ್‌ಗಳಿಂದ ಪಡೆದ 3 ಲಕ್ಷ ರೂ.ವರೆಗಿನ ಅಲ್ಪಾವಧಿ ಕೃಷಿ ಸಾಲ ಮರುಪಾವತಿಯ ಗಡುವನ್ನು ಆಗಸ್ಟ್ 31, 2020ರವರೆಗೂ ವಿಸ್ತರಿಸಲಾಗಿದೆ. ಈ ಗಡುವಿನೊಳಗೆ ಮರುಪಾವತಿ ಮಾಡಿದರೆ ಬಡ್ಡಿ ರಿಯಾಯಿತಿ ದೊರೆಯಲಿದೆ.
ಎಂಎಸ್ಎಂಇ ವ್ಯಾಖ್ಯಾನ ಬದಲು ಆತ್ಮನಿರ್ಭರ ಪ್ಯಾಕೇಜ್‌ನ ಭಾಗವಾಗಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳ (ಎಂಎಸ್ಎಂಇ) ವ್ಯಾಖ್ಯಾನವನ್ನು ಪರಿಷ್ಕರಿಸುವ ಪ್ರಸ್ತಾವನೆಗೆ ಸಂಪುಟದ ಅನುಮೋದನೆ ದೊರೆತಿದೆ. ಇನ್ನು ಮುಂದೆ 1 ಕೋಟಿ ಹೂಡಿಕೆ 5 ಕೋಟಿ ರೂ. ವಹಿವಾಟು ಹೊಂದಿರುವ ಸಂಸ್ಥೆಗಳನ್ನು ಅತಿಸಣ್ಣ ಉದ್ಯಮಗಳೆಂದು, 10 ಕೋಟಿ ರೂ. ಹೂಡಿಕೆ, 50 ಕೋಟಿ ವಹಿವಾಟು ಹೊಂದಿರುವ ಸಂಸ್ಥೆಗಳನ್ನು ಸಣ್ಣ ಉದ್ಯಮಗಳು ಹಾಗೂ 50 ಕೋಟಿ ಹೂಡಿಕೆ, 250 ಕೋಟಿ ವಹಿವಾಟು ಹೊಂದಿರುವ ಸಂಸ್ಥೆಗಳನ್ನು ಮಧ್ಯಮ ಗಾತ್ರದ ಉದ್ಯಮಗಳೆಂದು ಪರಿಗಣಿಸಲಾಗುವುದು. ಇದರಿಂದ 6 ಕೋಟಿ ಉದ್ಯಮಗಳು 11 ಕೋಟಿ ಉದ್ಯೋಗಿಗಳಿಗೆ ನೆರವಾಗಲಿದೆ ಎಂದು ಸರಕಾರ ಹೇಳಿದೆ. 
ಸಣ್ಣ ಉದ್ಯಮಗಳಿಗೆ ಇನ್ನೂ 70,000 ಕೋಟಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ‘ಎಂಎಸ್ಎಂಇ’ಗಳಿಗೆ ಚೈತನ್ಯ ತುಂಬಲು ಹೆಚ್ಚುವರಿಯಾಗಿ 70,000 ಕೋಟಿ ರೂ. ಆರ್ಥಿಕ ನೆರವನ್ನು ಸಂಪುಟ ಸಭೆ ಅನುಮೋದಿಸಿದೆ. ಈ ಪೈಕಿ 50,000 ಕೋಟಿ ರೂ.ಗಳನ್ನು ಕಂಪನಿಗಳಲ್ಲಿ ಷೇರುಗಳ ಖರೀದಿ ಮೂಲಕ ಸರಕಾರ ಒದಗಿಸಲಿದೆ. ಉಳಿದ 20 ಸಾವಿರ ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ನೀಡಲು ನಿರ್ಧರಿಸಲಾಗಿದೆ.
ಬೀದಿ ವ್ಯಾಪಾರಿಗಳಿಗೆ ಪಿಎಂ ಸ್ವಾನಿಧಿ ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂ. ಸಾಲ ಯೋಜನೆಯನ್ನು ಸರಕಾರ ಪ್ರಕಟಿಸಿದೆ. ‘ಪ್ರಧಾನ ಮಂತ್ರಿ ಸ್ಟ್ರೀಟ್ ವೆಂಡರ್ಸ್ ಆತ್ಮನಿರ್ಭರ್ ನಿಧಿ’(ಪಿಎಂ ಸ್ವಾನಿಧಿ) ಹೆಸರಿನ ಈ ಯೋಜನೆಯಿಂದ 50 ಲಕ್ಷ ಬೀದಿ ಬದಿ ಕಾರ್ಮಿಕರಿಗೆ ನೆರವು ನೀಡಲು ಉದ್ದೇಶಿಸಲಾಗಿದೆ.
ಚಾಂಪಿಯನ್ ವೇದಿಕೆಗೆ ಚಾಲನೆ ಸಣ್ಣ ಉದ್ಯಮಗಳಿಗೆ ತಾಂತ್ರಿಕ ಬೆಂಬಲ ನೀಡುವ ಉದ್ದೇಶದಿಂದ ‘ಚಾಂಪಿಯನ್ಸ್’ ಹೆಸರಿನ ನೂತನ ವೇದಿಕೆಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಸಣ್ಣ ಉದ್ಯಮಗಳು ಕುಂದುಕೊರತೆ ನಿವಾರಣೆ, ಹೊಸ ಅವಕಾಶಗಳ ಶೋಧ, ಉದ್ಯಮಶೀಲತೆಗೆ ಉತ್ತೇಜನಕ್ಕೆ ಇದರ ಉದ್ದೇಶ.
ಯಾವುದಕ್ಕೆ ಎಷ್ಟು? (ರೂ.ಗಳಲ್ಲಿ)

ಬೆಳೆ – ಹೆಚ್ಚಳ – ಪರಿಷ್ಕೃತ ಬೆಲೆ ರೂ.ಗಳಲ್ಲಿ ಕ್ವಿಂಟಾಲ್‌ಗೆ

ಭತ್ತ  –  53  –    1,868,

ರಾಗಿ – 145  –   3,295,

ಜೋಳ – 70  – 2,620

ಸಜ್ಜೆ  – 640  – 2,640

ಮೆಕ್ಕೆ ಜೋಳ –  90  –  1,850

ಉದ್ದು  – 300  –  6,000

ತೊಗರಿ – 200  – 6,000

ಹಲಸಂದಿ – 146 –  7,196

ಸೋಯಾಬೀನ್ –  170  – 3,880

ಸೂರ್ಯಕಾಂತಿ – 235  – 5,885

ಕಡಲೆಕಾಯಿ  – 185  – 5275

ಎಳ್ಳು  – 370  – 6,855

ಹುಚ್ಚೆಳ್ಳು –  775  – 6,695

ಹತ್ತಿ  – 260  – 5,515

ನಾನಾ ವಲಯಗಳಲ್ಲಿ ಹೂಡಿಕೆ ಸ್ನೇಹಿ ವಾತಾವರಣವನ್ನು ಸೃಷ್ಟಿಸಲು ಮೋದಿ ಸರಕಾರ ಸುಧಾರಣೆಯ ಕ್ರಮಗಳನ್ನು ಕೈಗೊಂಡಿದೆ.  ಕಲ್ಲಿದ್ದಲು, ಗಣಿ, ಎಲೆಕ್ಟ್ರಾನಿಕ್ಸ್, ಔಷಧ ವಲಯದಲ್ಲಿ ಶೇ.100 ಎಫ್‌ಡಿಐಗೆ ಅನುಮತಿ ನೀಡಿದೆ. ಇದೀಗ ಎಂಎಸ್ಎಂಇ ವಲಯಕ್ಕೂ ಉತ್ತೇಜನ ನೀಡಿದೆ. – ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top