– ಲಾಕ್ ಸಡಿಲಿಕೆಯಿಂದ ಜಿಲ್ಲಾಡಳಿತಗಳಿಗೆ ಎದುರಾಗಿದೆ ಅಗ್ನಿ ಪರೀಕ್ಷೆ
– ರಾಜ್ಯ, ಅಂತರ್ಜಿಲ್ಲಾ ಗಡಿ ಪ್ರವೇಶದ ಮೇಲೆ ಕಣ್ಣಿಡದಿದ್ರೆ ಡೇಂಜರ್
ವಿಕ ಬ್ಯೂರೊ ಬೆಂಗಳೂರು:
ಹಸಿರು ಮತ್ತು ಕಿತ್ತಳೆ ವಲಯದಲ್ಲಿ ಮೇ 4ರಿಂದ ಜನ ಮತ್ತು ವಾಹನ ಸಂಚಾರ ನಿರ್ಬಂಧ ಸಡಿಲಗೊಳ್ಳುವುದರಿಂದ ಜನರು ಸ್ವಲ್ಪ ನಿರಾಳರಾಗಬಹುದು. ಆದರೆ, ಇದರೊಂದಿಗೆ ಅಂತಾರಾಜ್ಯ ಮತ್ತು ಅಂತರ್ಜಿಲ್ಲಾ ಸಂಚಾರಕ್ಕೂ ಅವಕಾಶ ಸಿಗುವುದರಿಂದ ಸ್ವಲ್ಪವೇ ಮೈಮರೆತರೂ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ.
ಲಾಕ್‌ಡೌನ್‌ನ ಕಠಿಣ ನಿರ್ಬಂಧಗಳಿದ್ದ ಸಮಯದಲ್ಲೇ ಮಂಡ್ಯ ಜಿಲ್ಲೆಯೊಂದಕ್ಕೇ ಮಹಾರಾಷ್ಟ್ರದಿಂದ ಸಾವಿರಗಟ್ಟಲೆ ಜನರು ಯಾವುದೇ ಗಡಿಯಲ್ಲಿ ಸಿಕ್ಕಿ ಹಾಕಿಕೊಳ್ಳದೆ ಬಂದು ತಲುಪಿದ್ದಾರೆ ಎಂದು ಹೇಳಲಾಗುತ್ತಿದೆ. ಆಂಬ್ಯುಲೆನ್ಸ್‌ನಲ್ಲಿ ಬಂದ ರೋಗಾಣು ಮಂಡ್ಯದ ನೆಮ್ಮದಿಯನ್ನೇ ಕದಡಿದೆ. ಇದು ರಾಜ್ಯದ ಗಡಿಗಳಲ್ಲಿ ಯಾವ ಪ್ರಮಾಣದ ಕಟ್ಟೆಚ್ಚರ ಇದೆ ಎಂಬುದಕ್ಕೆ ನಿದರ್ಶನ. ಹೀಗಿರುವಾಗ ನಿರ್ಬಂಧಗಳು ಸಡಿಲಗೊಂಡಾಗ ಹೇಗಿರಬಹುದು ಎನ್ನುವುದನ್ನು ಊಹಿಸುವುದೂ ಕಷ್ಟ. ಸ್ವಲ್ಪವೇ ನಿರ್ಲಕ್ಷ್ಯ ತೋರಿದರೂ ಗಡಿಗಳ ಮೂಲಕ ಕೊರೊನಾ ‘ಆಸ್ಫೋಟ’ಗೊಳ್ಳಬಹುದು.
ಈ ಸಂಭಾವ್ಯ ‘ಆಸ್ಫೋಟ’ವನ್ನು ತಪ್ಪಿಸಬೇಕಿದ್ದರೆ ರಾಜ್ಯ ಮತ್ತು ಅಂತರ್ ಜಿಲ್ಲಾ ಗಡಿಗಳನ್ನು ಕಟ್ಟುನಿಟ್ಟಾಗಿ ಬಂದೋಬಸ್ತ್ ಮಾಡುವುದೊಂದೇ ಪರಿಹಾರ. ಆದರೆ, 40 ದಿನಗಳ ಒಟ್ಟು ಚಿತ್ರಣವನ್ನು ಗಮನಿಸಿದರೆ ಇದು ಸಂಪೂರ್ಣವಾಗಿ ಯಶಸ್ಸು ಕಾಣುವ ಯಾವ ಲಕ್ಷ ಣಗಳೂ ಇಲ್ಲ. ಕಟ್ಟುನಿಟ್ಟಾದ ಲಾಕ್‌ಡೌನ್ ಸಂದರ್ಭದಲ್ಲೇ ಜನರು ‘ರಂಗೋಲಿ ಕೆಳಗೆ ತೂರುವ’ ಚಾಕಚಕ್ಯತೆಯನ್ನು ಪ್ರದರ್ಶಿಸಿದ್ದಾರೆ. ಈಗ ಅದು ಇನ್ನಷ್ಟು ಹೆಚ್ಚಾಗುವ ಅಪಾಯವಿದೆ. ಹೀಗಾಗಿ, 40 ದಿನಗಳ ಕಾಲ ನಡೆಸಿದ ‘ಲಾಕ್‌ಡೌನ್ ತಪಸ್ಸು’ ವ್ಯರ್ಥವಾಗುವ ಅಪಾಯವಿದೆ.
ರಾಜ್ಯಗಳ ನಡುವೆ ಮಾತ್ರವಲ್ಲ ಜಿಲ್ಲೆಗಳ ಗಡಿಗಳಲ್ಲೂ ಸಾಕಷ್ಟು ಎಚ್ಚರಿಕೆ ವಹಿಸಲಾಗಿಲ್ಲ. ಪಾಸ್ ಇದ್ದರೆ ಯಾರನ್ನು ಬೇಕಾದರೂ ಬಿಡುವಷ್ಟು ಉದಾರವಾಗಿದೆ. ಇದರಿಂದ ಹಸಿರು ಮತ್ತು ಕಿತ್ತಳೆ ಹಾಗೂ ರೆಡ್ ಝೋನ್ ಸಂಘರ್ಷಗಳು ಎದುರಾಗಲಿವೆ. ಒಂದು ಹೊಸ ಪ್ರಕರಣ ದಾಖಲಾದರೂ ಹಸಿರು ವಲಯ ವಿಶೇಷ ಸ್ಥಾನಮಾನ ಕಳೆದುಕೊಳ್ಳಲಿದೆ.
ಪಾಸ್ ಇದ್ರೆ ಫುಲ್ ಓಪನ್
ಕೊಪ್ಪಳದ ಗಡಿ ಹಂಚಿಕೊಂಡಿರುವ ರಾಯಚೂರು ಹೊರತುಪಡಿಸಿ ಬಳ್ಳಾರಿ, ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ ಕೊರೊನಾ ಇದೆ. ಇಲ್ಲಿ ಗಡಿ ಭಾಗದಲ್ಲಿ ಸ್ಕ್ರೀನಿಂಗ್ ಸರಿಯಾಗಿ ಆಗುತ್ತಿಲ್ಲ. ಪಾಸ್ ನೋಡಿ ಬಿಡಲಾಗುತ್ತಿದೆ. ಬಳ್ಳಾರಿ ಜಿಲ್ಲೆಗೆ ಆಂಧ್ರದಿಂದ ಬರುವ ತೆರಳುವ ಸರಕು ವಾಹನಗಳಿಗೆ ಕೇವಲ ದಾಖಲೆ ಪರಿಶೀಲಿಸಲಾಗುತ್ತಿದೆ. ಸೋಂಕು ಹರಡದಂತೆ ತಡೆಯಲು ಯಾವುದೇ ವ್ಯವಸ್ಥೆ ಇಲ್ಲ. ಲಾಕ್‌ಡೌನ್ ಸಡಿಲು ಆಗುವ ಮುನ್ಸೂಚನೆ ಸಿಗುತ್ತಿದ್ದಂತೆ ಎಲ್ಲೆಡೆ ಜನರು ರಸ್ತೆಗಿಳಿಯುವ ಧಾವಂತ ತೋರಿದ್ದಾರೆ. ಬೆಂಗಳೂರಿನ ರೆಡ್ ಝೋನ್‌ಗಳಲ್ಲೂ ಇದು ವ್ಯಾಪಕವಾಗಿದೆ. ವಾಹನಗಳ ಭರಾಟೆಯೂ ಹೆಚ್ಚಿದೆ. ಆದರೆ, ಗುಪ್ತಗಾಮಿನಿ ವೈರಸ್‌ನ್ನ ಕಡೆಗಣಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ತುಮಕೂರು ಜಿಲ್ಲೆಯಲ್ಲಿ ಚೆಕ್‌ಪೋಸ್ಟ್‌ಗಳ ಕಣ್ತಪ್ಪಿಸಿ ರೈತರ ಜಮೀನು, ಹೊಲ, ಗದ್ದೆಗಳ ಮೂಲಕ, ಅಡ್ಡದಾರಿಯಲ್ಲಿ ನುಸುಳುವವರ ಸಂಖ್ಯೆ ದ್ವಿಗುಣಗೊಳ್ಳುವ ಆತಂಕವಿದೆ. ಬೆಂಗಳೂರು ಗ್ರಾಮಂತರ ಜಿಲ್ಲೆಯ ಕೆಲವೆಡೆ ಕಾಟಾಚಾರಕ್ಕೆ ತಪಾಸಣೆ ನಡೆಯುತ್ತಿದೆ.
ಸ್ಕ್ರೀನಿಂಗ್ ಇಲ್ಲೆಂಬ ದೂರು
ದಾವಣಗೆರೆಯ ಮೆಕ್ಕೆಜೋಳ, ಭತ್ತ ಇಲ್ಲಿಂದ ತಮಿಳುನಾಡು
ಸೇರಿ ಹೊರ ಜಿಲ್ಲೆ, ರಾಜ್ಯಗಳಿಗೆ ಹೋಗುತ್ತದೆ. ಚೆಕ್ ಪೋಸ್ಟ್‌ಗಳಲ್ಲಿ ಸರಿಯಾದ ಸ್ಕ್ರೀನಿಂಗ್ ಆಗುವುದಿಲ್ಲ ಎಂಬ ದೂರಿತ್ತು. ಈಗ ಪರಿಸ್ಥಿತಿ ಸುಧಾರಿಸಿದೆ. ಹಾಗೆಯೇ ದಾವಣಗೆರೆಯಲ್ಲಿ ಹೆಚ್ಚುತ್ತಿರುವ ಪಾಸಿಟಿವ್ ಪ್ರಕರಣಗಳು ಚಿತ್ರದುರ್ಗ ಜಿಲ್ಲೆಗೆ ಹೆಚ್ಚಿನ ಆತಂಕ ತಂದೊಡ್ಡಿದೆ. ಗಡಿಯಲ್ಲಿ ಕಟ್ಟುನಿಟ್ಟಿ ತಪಾಸಣೆ ಇದೆಯಾದರೂ, ಪೊಲೀಸರನ್ನು ಕಣ್ತಪ್ಪಿಸಿ ಜನರ ಸಂಚಾರವಿದೆ.
ಹಳ್ಳಿ ತಲುಪಿದ ಕೂಡಲೆ ಕ್ವಾರಂಟೈನ್
ಕಲಬುರಗಿ ಜಿಲ್ಲೆಯಿಂದ ಮುಂಬಯಿ, ಪುಣೆಗೆ 1,60,000 ಕೂಲಿಕಾರರು ಗುಳೆ ಹೋಗಿದ್ದರೆ, 40 ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ಬೆಂಗಳೂರಿಗೆ ಗುಳೆ ಹೋಗಿದ್ದಾರೆ. ಈ ಎಲ್ಲ ಕಾರ್ಮಿಕರು ಕಾಲ್ನಡಿಗೆಯಲ್ಲೇ ತಮ್ಮ ಹಳ್ಳಿ ಮತ್ತು ತಾಂಡಾಗಳನ್ನು ಸೇರಿಕೊಂಡಿದ್ದಾರೆ. ಜೊತೆಗೆ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. ಗಮನಿಸಬೇಕಾದ ಸಂಗತಿ ಏನೆಂದರೆ, ಇವರಿಗಾರಿಗೂ ಅಂತಾ ರಾಜ್ಯ ಮತ್ತು ಜಿಲ್ಲಾ ಗಡಿಯಲ್ಲಿ ತಪಾಸಣೆಯನ್ನೇ ಮಾಡಿಲ್ಲ!
2000 ಕಾರ್ಮಿಕರು ವಾಪಸ್
ಕಿತ್ತಳೆ ಪಟ್ಟಿ ಸೇರಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ರಾಜಸ್ತಾನಕ್ಕೆ ಟ್ರಕ್‌ಗಳಲ್ಲಿ 200 ಕಾರ್ಮಿಕರನ್ನು ಸಾಗಿಸುವ ಪ್ರಯತ್ನವನ್ನು ಅಧಿಕಾರಿಗಳು ವಿಫಲಗೊಳಿಸಿದ್ದರು. ಹೀಗೆ ಈವರೆಗೆ ಅಂದಾಜು 2 ಸಾವಿರ ಜನರನ್ನು ವಾಪಸ್ ಕಳುಹಿಸಲಾಗಿದೆ. ಆದರೆ ಗಡಿಯೊಳಗೆ ಪ್ರವೇಶಿಸುವ ವಾಹನಗಳನ್ನು ಸ್ಯಾನಿಟೈಸ್ ಮಾಡಲು ಸಾಧ್ಯವಾಗುತ್ತಿಲ್ಲ. ಮಹಾರಾಷ್ಟ್ರದ ಗಡಿ ಹಂಚಿಕೊಡಿರುವ ವಿಜಯಪುರ ಜಿಲ್ಲೆಯಲ್ಲಿ ಸಡಲಿಕೆ ಬಳಿಕ ಸಂಚಾರ ಹೆಚ್ಚಾಗುವುದರಿಂದ ಅಪಾಯ ಎದುರಾಗಬಹುದು.
ಹೆಚ್ಚು ನಿಗಾ ವಹಿಸಬೇಕಿರುವ ಜಿಲ್ಲೆಗಳು
ಉತ್ತರ ಕನ್ನಡ, ಬೆಳಗಾವಿ, ಚಿಕ್ಕಬಳ್ಳಾಪುರ, ತುಮಕೂರು, ಕಲಬುರಗಿ, ಶಿವಮೊಗ್ಗ, ಮಂಡ್ಯ, ಮೈಸೂರು, ಬೆಂಗಳೂರು ನಗರ, ವಿಜಯಪುರ ಮತ್ತು ಕೊಪ್ಪಳ.
ಮಹಾ ಪ್ರವೇಶದ ಅಪಾಯ
ಕೆಂಪು ಝೋನ್‌ನಲ್ಲಿರುವ ಬೆಳಗಾವಿ ಜಿಲ್ಲೆ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಗಡಿಯನ್ನು ಹಂಚಿಕೊಂಡಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರ ಸಂಖ್ಯೆ ಹೆಚ್ಚು. ಹಸಿರು ಪಟ್ಟಿಯಲ್ಲಿರುವ ಗೋವಾ ಮಾತ್ರ ಗಡಿಯಲ್ಲಿ ಭಾರಿ ಕಟ್ಟೆಚ್ಚರ ವಹಿಸಿದೆ. ಅದೇ ರೀತಿಯ ಕಟ್ಟುನಿಟ್ಟು ನಮ್ಮಲ್ಲಿ ಕಂಡು ಬರುತ್ತಿಲ್ಲ. ಕಾರವಾರ, ನಿಪ್ಪಾಣಿ, ಚಿಕ್ಕೋಡಿ ಗಡಿಯಲ್ಲಿ ಕೆಲವರು ನಿತ್ಯವೂ ಮಹಾರಾಷ್ಟ್ರದ ಗಡಿ ಪ್ರದೇಶದ ಊರುಗಳಿಗೆ ಕೆಲಸಕ್ಕೆ ಹೋಗಿ ಬರುತ್ತಿದ್ದಾರೆ. ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದ ಅನೇಕ ಕುಟುಂಬಗಳು ತವರಿಗೆ ಬಂದಿವೆ. ಇನ್ನೂ ಹಲವರು ಬರುವ ಸಿದ್ಧತೆಯಲ್ಲಿದ್ದಾರೆ. ಪೊಲೀಸರ ಕಣ್ಣು ತಪ್ಪಿಸಿ ಇದೆಲ್ಲ ನಡೆಯುತ್ತಿದೆ.
ಗಂಭೀರತೆ ಮಾಯ
ಗ್ರೀನ್ ಝೋನ್‌ನಲ್ಲಿರುವ ಶಿವಮೊಗ್ಗ ಜಿಲ್ಲೆಯಲ್ಲಿ ತಪಾಸಣೆಯ ಗಂಭೀರತೆ ಕಾಣಸುತ್ತಿಲ್ಲ. ಕೆಲವು ಕಡೆ ಸ್ಯಾನಿಟೈಸ್ ಕೂಡ ಮಾಡುತ್ತಿಲ್ಲ. ಆದರೆ, ದಾವಣಗೆರೆಯಿಂದ ಬರುವ ವಾಹನಗಳ ಮೇಲೆ ವಿಶೇಷ ನಿಗಾ ಇಡಲಾಗಿದೆ. ವಾಹನ ಸವಾರರಿಗೆ ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ಮಾಡುವುದು ಬಿಟ್ಟರೆ ಇನ್ನೇನೂ ವಿಶೇಷ ಕ್ರಮ ವಹಿಸುತ್ತಿಲ್ಲ. ವಾಹನಗಳಲ್ಲಿ ಕಾರ್ಮಿಕರನ್ನು ಸದ್ದಿಲ್ಲದೇ ಕರೆದುಕೊಂಡು ಹೋಗಲಾಗುತ್ತಿದೆ.
ಒಳದಾರಿಗಳದ್ದೇ ಸವಾಲು
ಅತಿ ಹೆಚ್ಚು ಸೋಂಕಿತರನ್ನು ಹೊಂದಿದ್ದ ಮೈಸೂರು ಜಿಲ್ಲೆಯಲ್ಲಿ ಈಗ ಪರಿಸ್ಥಿತಿ ಸುಧಾರಿಸುತ್ತಿದೆ. ಆದರೆ ಮಂಡ್ಯದಿಂದ ಜನರು ಆಗಮಿಸುವ ಆತಂಕವಿದ್ದು, ಮೈಸೂರು-ಮಂಡ್ಯ ಹೆದ್ದಾರಿಯಲ್ಲಿ ತಪಾಸಣೆ ಕಟ್ಟುನಿಟ್ಟುಗೊಳಿಸಲಾಗಿದೆ. ಆದರೆ, ಒಳದಾರಿಗಳೂ ಬೇಕಾದಷ್ಟಿವೆ.
ಗಡಿಗಳಲ್ಲಿ ಏನೇನು ಮಾಡಬೇಕು?
– ಅಂತರ್ ಜಿಲ್ಲಾ, ಅಂತಾರಾಜ್ಯ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ
– ಚೆಕ್‌ಪೋಸ್ಟ್‌ಗಳ ಸುತ್ತಮುತ್ತ ಇರುವ ಕಾಲು ದಾರಿಗಳು ಬಂದ್
– ಚೆಕ್‌ಪೋಸ್ಟ್‌ಗಳಲ್ಲಿ ಕಡ್ಡಾಯವಾಗಿ ಆರೋಗ್ಯ ತಪಾಸಣೆ
– ವಾಹನ ಸಮೇತ ಸ್ಯಾನಿಟೈಸ್ ಮಾಡುವ ವ್ಯವಸ್ಥೆ ಜಾರಿ
– ಅಗತ್ಯವಸ್ತುಗಳ ವಾಹನಗಳಲ್ಲಿ ಬರುವವರಿಗೆ ಕಡ್ಡಾಯ ಸ್ಕ್ರೀನಿಂಗ್
– ಗಡಿಗಳಲ್ಲಿ ಹೆಚ್ಚಿನ ಪೊಲೀಸ್ ಜೊತೆಗೆ ಹೆಚ್ಚಿನ ಆರೋಗ್ಯ ಸಿಬ್ಬಂದಿ
– ತವರು ಜಿಲ್ಲೆಗಳಿಗೆ ಹೊರಟ ಕಾರ್ಮಿಕರ ಕಡ್ಡಾಯ ತಪಾಸಣೆ
– ಕೊರೊನಾ ಹೆಚ್ಚಿರುವ ಹೊರ ರಾಜ್ಯಗಳಿಂದ ಪ್ರವೇಶ ನಿಷೇಧ.
– ಕಿತ್ತಳೆಯಿಂದ ಗ್ರೀನ್ ಝೋನ್‌ಗೆ ಬರುವವರ ಮೇಲೆ ನಿಗಾ ಅಗತ್ಯ.
ಜನರ ಕಾಳಜಿ ಏನಿರಬೇಕು?
– ಹೊರಗೆ ಬರುವಾಗ ಮಾಸ್ಕ್ ಕಡ್ಡಾಯವಾಗಿ ಧರಿಸಿ, ಸಾಮಾಜಿಕ ಅಂತರ ಪಾಲಿಸುವುದು
– ಅನಗತ್ಯವಾಗಿ ಮನೆಯಿಂದ ಯಾರೂ ಹೊರಬರಬೇಡಿ.
– ಮಕ್ಕಳು ಮತ್ತು ಹಿರಿಯರು ಮನೆಯೊಳಗೇ ಇದ್ದರೆ ಸೇಫ್
– ಹೊರಗೆ ತಿರುಗಾಡಿದವರು ಶುಚಿಯಾಗಿಯೇ ಮನೆ ಪ್ರವೇಶಿಸಿ
– ತೀರಾ ಅಗತ್ಯವಿಲ್ಲದೆ ಹೋದರೆ ವಾಹನ ಬಳಕೆ ಬೇಡ
– ಹೊರ ಜಿಲ್ಲೆ, ಹೊರ ರಾಜ್ಯ ಪ್ರಯಾಣ ಸದ್ಯಕ್ಕೆ ಬೇಡವೇ ಬೇಡ
ಅಂತಾರಾಜ್ಯ ಗಡಿಗಳಲ್ಲಿ ಸರಕು, ತುರ್ತು ಸಾಮಗ್ರಿ ಸಾಗಾಣಿಕೆಗೆ ಅವಕಾಶವಿರುವುದರಿಂದ ಅಧಿಕೃತ ಪಾಸ್‌ವುಳ್ಳ ಲಾರಿ/ಟ್ರಕ್‌ಗಳನ್ನು ಬಿಡುತ್ತಿದ್ದೇವೆ. ಗಡಿ ಭಾಗದಲ್ಲಿ ಚಾಲಕ, ಕ್ಲೀನರ್‌ಗೆ ಸ್ಕ್ರೀನಿಂಗ್ ಮಾಡಿದ ಬಳಿಕವೇ ಒಳ ಪ್ರವೇಶ. ಉಳಿದಂತೆ ಸಂಪೂರ್ಣ ನಿರ್ಬಂಧ. ವಲಸೆ ಕಾರ್ಮಿಕರು ಇಲ್ಲಿಂದ ತೆರಳುವ ಮುನ್ನ ಇಲ್ಲವೇ ನೆರೆ ರಾಜ್ಯಗಳಿಂದ ಆಗಮಿಸುವ ಮುನ್ನ ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಯಾವುದೇ ಆರೋಗ್ಯ ಸಮಸ್ಯೆ ಇಲ್ಲವೆಂಬುದು ಖಚಿತವಾದ ಬಳಿಕವಷ್ಟೇ ಆಯಾ ರಾಜ್ಯಗಳು ಅವರ ಪ್ರಯಾಣಕ್ಕೆ ಅನುಮತಿ ಕೊಡುವ ವ್ಯವಸ್ಥೆ ಇದೆ. ಎಲ್ಲಿಯೂ ಯಾವುದರಲ್ಲಿಯೂ ರಾಜೀ ಇಲ್ಲ.
-ಬಸವರಾಜ ಬೊಮ್ಮಾಯಿ ಗೃಹ ಸಚಿವ