ಭಾರತದಲ್ಲಿ ಭಾಷೆಗಳ ಅವಸಾನ ನಿಧಾನ, ಏಕೆಂದರೆ…

ಒಂದುವೇಳೆ ಪೂಜೆ ಮತ್ತು ಪ್ರಾರ್ಥನೆಯನ್ನೂ ಇಂಗ್ಲಿಷ್‍ನಲ್ಲಿ ಮಾಡುವವರ ಸಂಖ್ಯೆ ಹೆಚ್ಚುತ್ತಾ ಹೋದರೆ ಆಫ್ರಿಕಾ ಖಂಡದ ದೇಶಗಳಲ್ಲಾದಂತೆ ಭಾರತದಲ್ಲೂ ಸ್ಥಳೀಯ ಭಾಷೆಗಳು ನಾಶಹೊಂದುವುದರಲ್ಲಿ ಅನುಮಾನ ಬೇಡ!

ಕನ್ನಡ ಭಾಷೆ ಈಗ ಎದುರಿಸುತ್ತಿರುವ ಸಂಕಷ್ಟ, ಸವಾಲುಗಳಿಗೆ ಸಂಬಂಧಿಸಿ ನಾವು ಕೇವಲ ಕರ್ನಾಟಕವನ್ನಷ್ಟೇ ದೃಷ್ಟಿಯಲ್ಲಿರಿಸಿಕೊಂಡು ಆಲೋಚನೆ ಮಾಡಿದರೆ ಸಾಕೇ?

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸ್ಥಳೀಯ ಭಾಷೆಗಳ ಅವಸಾನ ಎಂಬುದು ಈಗ ಜಾಗತಿಕ ಸಮಸ್ಯೆ. ಈ ಮಾತು ಸರಿಯಾಗಿ ಅರ್ಥವಾಗಬೇಕಾದರೆ ನಾವು ಯೂರೋಪ್, ಆಫ್ರಿಕಾ ಖಂಡದ ದೇಶಗಳ ಜೊತೆಗೆ ಏಷ್ಯಾದ ಕೆಲ ದೇಶಗಳ ಸ್ಥಳೀಯ ಭಾಷೆಗಳ ಅವಸಾನದ ಇತಿಹಾಸದ ಕಡೆಗೂ ಒಮ್ಮೆ ದೃಷ್ಟಿ ಹಾಯಿಸುವುದು ಸೂಕ್ತ ಎಂಬುದು ನನ್ನ ಭಾವನೆ.

ಒಂದನೇ ಸಹಸ್ರಮಾನದ ಹೊತ್ತಿಗೆ ಯೂರೋಪ್ ಖಂಡದ ದೇಶಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಗಳ ಅವಸಾನ ಶುರುವಾಯಿತು. ಮೂಲದಲ್ಲಿ ಯೂರೋಪ್ ದೇಶಗಳಲ್ಲಿ ಸಾವಿರಕ್ಕೂ ಹೆಚ್ಚು ಸ್ಥಳೀಯ ಭಾಷೆಗಳಿದ್ದವು. ಈಗ ಸರ್ಕಾರಿ ದಾಖಲೆಗಳಲ್ಲಿ ಹೆಚ್ಚೆಂದರೆ 150 ಭಾಷೆಗಳು ಉಳಿದುಕೊಂಡಿರಬಹುದು. ಆ ಪೈಕಿ ಕೇವಲ 23 ಭಾಷೆಗಳಿಗೆ ಈಗ ಐರೋಪ್ಯ ಒಕ್ಕೂಟದಿಂದ ಅಧಿಕೃತ ಮಾನ್ಯತೆ ಸಿಕ್ಕಿದೆ. ಅಷ್ಟಾದರೂ ಆ ಭಾಷೆಗಳನ್ನು ಮಾತನಾಡುವವರು ಸಿಗುವುದು ಅತ್ಯಂತ ವಿರಳ. ಈ ಮಾತನ್ನು ಐರೋಪ್ಯ ಒಕ್ಕೂಟದಲ್ಲಿನ ಜರ್ಮನ್ ಅಲ್ಪಸಂಖ್ಯಾತ ಭಾಷೆಗಳ ಸಮಿತಿ ಅಧ್ಯಕ್ಷ ಕಾರ್ಲ್ ಶ್ರಾಮ್ ಅವರು ಹೇಳಿದ್ದಾರೆ. ಐರ್ಲೆಂಡ್ ದೇಶದಲ್ಲಿ ಐರಿಷ್ ಭಾಷೆ ಈಗ ಇತಿಹಾಸ. ಅಲ್ಲಷ್ಟೇ ಅಲ್ಲ ಬ್ರಿಟನ್‍ನಲ್ಲಿ ಮೂಲ ಭಾಷೆ ಇಂಗ್ಲಿಷ್ ಆಗಿರಲಿಲ್ಲ. ಸ್ಪೇನ್, ಬ್ರುಸೆಲ್ಸ್, ಜರ್ಮನಿ, ಪ್ಯಾರಿಸ್ ಇತ್ಯಾದಿ ದೇಶಗಳದ್ದೂ ಇದೇ ಕತೆ.

ಇಂಗ್ಲಿಷ್ ಭಾಷೆಯ ಆಗಮನದಿಂದ ಹೆಚ್ಚು ಹಾನಿ ಅನುಭವಿಸಿದ್ದು ಆಫ್ರಿಕಾ ಖಂಡದ ದೇಶಗಳು. ಅಲ್ಲಿನ ಬಹುತೇಕ ಎಲ್ಲ ದೇಶಗಳಲ್ಲಿ ಮೂಲ ಭಾಷೆ ಈಗ ಅಬ್ಬೇಪಾರಿ. ಆಫ್ರಿಕಾ ಖಂಡದ ವ್ಯಾಪ್ತಿಗೆ ಬರುವ ಸುಮಾರು ಐವತ್ತಾರು ದೇಶಗಳಲ್ಲಿ ಅಲ್ಜೀರಿಯಾದಿಂದ ಹಿಡಿದು ಉಗಾಂಡಾ, ಝಾಂಬಿಯಾ, ಜಿಂಬಾಬ್ವೆವರೆಗೆ ಇಪ್ಪತ್ತೆರಡು ದೇಶಗಳಲ್ಲಿ ಈಗ ಇಂಗ್ಲಿಷೇ ಪ್ರಧಾನ ಭಾಷೆ. ಉಳಿದ ಅನೇಕ ದೇಶಗಳಲ್ಲಿ ಫ್ರೆಂಚ್, ಅರೇಬಿಕ್, ಸ್ಪಾೃನಿಷ್, ಪೋರ್ಚುಗೀಸ್, ಗೀಸ್ ಭಾಷೆಗಳ ಪಾರಮ್ಯ ಇದೆಯಾದರೂ, ಇಂಗ್ಲಿಷ್ ಈಗ ಅವುಗಳ ಮೇಲೆ ವೇಗವಾಗಿ ಪ್ರಭುತ್ವ ಸಾಧಿಸುತ್ತಿದೆ. ಆಫ್ರಿಕಾ ಖಂಡದ ಸಹಸ್ರಾರು ಮೂಲ ಭಾಷೆಗಳನ್ನು ಬದಿಗೆ ಸರಿಸಿ ಅವುಗಳ ಸ್ಥಾನದಲ್ಲಿ ಇಂಗ್ಲಿಷ್, ಫ್ರೆಂಚ್, ಸ್ಪ್ಯಾನಿಷ್‌, ಪೋರ್ಚುಗೀಸ್‌ ಭಾಷೆಗಳು ಪ್ರಭುತ್ವ ಸ್ಥಾಪಿಸಲು ಆ ಭಾಷೆಗಳ ವಸಾಹತು ಆಡಳಿತಗಾರರ ಸಹಾಯ-ಸಹಕಾರ ಮತ್ತು ಪ್ರಭಾವ ಕಾರಣ ಎಂಬುದನ್ನು ಗಮನಿಸಬೇಕು. ಒಟ್ಟಿನಲ್ಲಿ ಆಫ್ರಿಕಾದ ಮೂಲ ಭಾಷೆಗಳು ನಾಶವಾದವು. ಕಳೆದ ಇನ್ನೂರು ವರ್ಷಗಳ ಅವಧಿಯಲ್ಲಿ ಇಷ್ಟೆಲ್ಲ ಏರುಪೇರಾಯಿತು. ಮುಂದೆ ಸಂಪೂರ್ಣ ಇಂಗ್ಲಿಷ್‍ಮಯವಾಗಲು ಇನ್ನು ಹೆಚ್ಚೆಂದರೆ ಐವತ್ತು ವರ್ಷಗಳು ಸಾಕು ಎಂದು ಭಾಷಾ ಅಧ್ಯಯನಕಾರರು ಅಭಿಪ್ರಾಯಪಡುತ್ತಾರೆ.

ಈ ವಿಷಯದಲ್ಲಿ ಏಪ್ಯಾ ಖಂಡದ ದೇಶಗಳ ಸ್ಥಿತಿಯೂ ಭಿನ್ನವಾಗಿಲ್ಲ. ಶ್ರೀಲಂಕಾದಂತಹ ದೇಶದಲ್ಲಿ ಭಾಷೆ ಮತ್ತು ಭಾಷೆಯ ಮೂಲಕ ಆದ ಸಾಂಸ್ಕೃತಿಕ ಆಕ್ರಮಣದ ಹಾವಳಿ ಇನ್ನೂ ಜೋರು. ಯೂರೋಪ್, ಆಫ್ರಿಕಾ ಖಂಡ ಮತ್ತು ಏಷ್ಯಾದ ಇತರ ರಾಷ್ಟ್ರಗಳಲ್ಲಿ ಆದ ಇಂಗ್ಲಿಷ್ ಮತ್ತು ಇತರ ಕೆಲ ವಸಾಹತುಶಾಹಿ ಭಾಷೆಗಳ ಆಕ್ರಮಣಕ್ಕೆ ಹೋಲಿಸಿದರೆ, ಸ್ಥಳೀಯ ಭಾಷೆಗಳ ಮೇಲೆ ಇಂಗ್ಲಿಷ್ ಮತ್ತು ಆ ಭಾಷೆಯ ಮೂಲಕ ಬಂದ ಸಂಸ್ಕೃತಿಯ ಪ್ರಭಾವ-ಪರಿಣಾಮ ಭಾರತದಲ್ಲೇ ಕಡಿಮೆ ಎಂದು ಹೇಳಲಾಗುತ್ತದೆ.

ಇಲ್ಲಿನ ಭಾಷಾ ವೈವಿಧ್ಯ, ಭಾಷೆಗಳ ನಡುವಿನ ಕೊಡುಕೊಳ್ಳುವ ಸಂಬಂಧ ಮತ್ತು ಅನ್ಯೋನ್ಯತೆಯೇ ಇದಕ್ಕೆ ಕಾರಣ ಎಂದು ಬರೋಡಾದ ಸಯ್ಯಾಜಿರಾವ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಭಾರತದ ಜನಭಾಷಾ ಸಮೀಕ್ಷೆಯ ಉಸ್ತುವಾರಿ ಆಗಿದ್ದ ಗಣೇಶ್ ದೇವಿ ಅವರು ಹೇಳುತ್ತಾರೆ. ಉದಾಹರಣೆಗೆ ಭಾರತದಲ್ಲಿ ಅದೆಷ್ಟೇ ಸ್ಥಳೀಯ ಭಾಷೆಗಳಿದ್ದರೂ ಸಹ ಅವು ಸಂಸ್ಕೃತ, ಪರ್ಷಿಯನ್ ಮತ್ತು ಅರೇಬಿಕ್ ಭಾಷೆಗಳ ನಡುವೆ ಸೌಹಾರ್ದಯುತ ಸಂಬಂಧವನ್ನು ಹೊಂದಿವೆ. ಭಾಷೆ ಭಾಷೆಗಳ ನಡುವಿನ ಅನ್ಯೋನ್ಯತೆಯ ಮೂಲಕವೇ ಸ್ಥಳೀಯ ಭಾಷೆಗಳು ಸಂಪದ್ಭರಿತವಾಗಿವೆ ಮತ್ತು ಗಟ್ಟಿಯಾಗಿ ತಳವೂರಿ ನಿಂತುಕೊಂಡಿವೆ. ಈ ಅನುಭವದ ಕಾರಣದಿಂದಲೇ ದೇಶಿ ಭಾಷೆಗಳು ಇಂಗ್ಲಿಷ್ ಆಗಮನದ ಸಂದರ್ಭದಲ್ಲೂ ಅಲ್ಲೋಲಕಲ್ಲೋಲವಾಗದೆ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿವೆ. ಭಾರತೀಯ ಭಾಷೆಗಳ ಈ ಗಟ್ಟಿತನವನ್ನು ಇಂಗ್ಲಿಷ್ ವಸಾಹತುಗಾರರು ಮತ್ತು ಕ್ರೈಸ್ತ ಮಿಷನರಿಗಳು ಬಹಳ ಬೇಗನೇ ಅರ್ಥಮಾಡಿಕೊಂಡಿದ್ದರು. ಆ ಕಾರಣದಿಂದಾಗಿಯೇ ಕಿಟ್ಟೆಲ್‍ರಂಥ ಕ್ರೈಸ್ತಧರ್ಮ ಪ್ರಚಾರಕರು ಕನ್ನಡ ಭಾಷೆಯಲ್ಲಿ ಕೃಷಿ ಮಾಡುವ, ದೇಶಭಾಷೆಗಳನ್ನು ಕರತಗ ಮಾಡಿಕೊಳ್ಳುವ ಪ್ರಯತ್ನವನ್ನು ವ್ಯವಸ್ಥಿತವಾಗಿ ಮತ್ತು ಶ್ರದ್ಧೆಯಿಂದ ಮಾಡಿದರು. ಕಿಟ್ಟೆಲ್ ಮಾತ್ರವಲ್ಲ, ತಮಿಳು, ತೆಲುಗು, ಮಲೆಯಾಳಿ ಇತ್ಯಾದಿ ಎಲ್ಲ ದೇಶಿ ಭಾಷೆಗಳಲ್ಲಿಯೂ ಇಂಥದೇ ಪರಿಶ್ರಮವನ್ನು ಧರ್ಮಪ್ರಚಾರಕರು ಹಾಕಿದರು. ಈಗ ಕನ್ನಡ, ತಮಿಳು, ತೆಲುಗು, ಮಲೆಯಾಳಿ ಭಾಷಿಕ ಚರ್ಚುಗಳ ಸ್ಥಾಪನೆ ಮತ್ತು ಸ್ಥಳೀಯ ಭಾಷೆಗಳಲ್ಲಿ ಹಿಡಿತ ಹೊಂದಿರುವವರೇ ಪಾದ್ರಿಗಳಾಗಬೇಕೆಂಬ ಚರ್ಚೆಗೆ ಈ ಭಾಷಾ ಮಾಧ್ಯಮದ ಮಾರ್ಗಶೋಧನೆಯೇ ಕಾರಣ.

ಇದನ್ನೇ ಭಾಷಾ ಇತಿಹಾಸದ ತಜ್ಞ ಗಣೇಶ್ ದೇವಿ ಅವರು ಇನ್ನೊಂದು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ದೇಶಭಾಷೆಗಳು ನಾಶವಾಗುತ್ತಿರುವ ವಿಷಯದಲ್ಲಿ ಭಾರತದಲ್ಲಿರುವಂತೆಯೇ ಜಗತ್ತಿನ ನೂರಾರು ದೇಶಗಳಲ್ಲಿ ಆತಂಕ ಇದ್ದೇ ಇದೆ. ಅದರಲ್ಲೂ ಕಳೆದ ಇನ್ನೂರು ವರ್ಷಗಳಲ್ಲಿ ಎಲ್ಲೆಲ್ಲಿ ಇಂಗ್ಲಿಷ್ ಭಾಷೆ ದಾಳಿ ಇಟ್ಟಿದೆಯೋ ಅಲ್ಲೆಲ್ಲ ದೇಶಭಾಷೆಗಳು ಸಮೂಲ ನಾಶಹೊಂದುತ್ತಿವೆ ಎಂಬ ಬೊಬ್ಬೆ ಇದ್ದದ್ದೇ. ಆದರೆ ಪ್ರಪಂಚದ ಬೇರೆ ದೇಶಗಳಲ್ಲಿ ಮಾಡಿದಂತೆ ಭಾರತದ ಭಾಷೆಗಳನ್ನು ಅಷ್ಟು ಸುಲಭದಲ್ಲಿ ಆಪೋಶನ ತೆಗೆದುಕೊಳ್ಳಲು ಇಂಗ್ಲಿಷ್‍ಗೆ ಸಾಧ್ಯವಾಗಿಲ್ಲ. ಅದಕ್ಕೆ ಮುಖ್ಯ ಕಾರಣ ಇಲ್ಲಿನ ಜನರ ನರನಾಡಿಗಳಲ್ಲಿ, ಮನಸ್ಸಿನಲ್ಲಿ ಆಳಕ್ಕೆ ಬೇರುಬಿಟ್ಟಿರುವ ಸಂಸ್ಕೃತ ಮತ್ತು ಪರ್ಷಿಯನ್ ಭಾಷೆಗಳ ಪ್ರಭಾವ. ಮುಖ್ಯವಾಗಿ ಈ ಎರಡು ಭಾಷೆಗಳ ಜೊತೆಗಿನ ಒಡನಾಟದ ಅನುಭವ ಕೂಡ ಇಂಗ್ಲಿಷ್ ಸಂದರ್ಭದಲ್ಲಿ ರಕ್ಷಣಾತ್ಮಕ ಹೆಜ್ಜೆ ಇಡುವಂತೆ ಮಾಡಿತು. ದೇಶಿ ಭಾಷೆಗಳು ಆಮದು ಭಾಷೆಗಳ ಜೊತೆಗೆ ಎಷ್ಟು ಬೆರೆಯಬೇಕು, ಹೇಗೆ ನಿಭಾಯಿಸಬೇಕೆಂಬ ಕಲೆ ಇಲ್ಲಿನ ದೇಶಿ ಭಾಷಿಕರಲ್ಲಿ ರಕ್ತಗತವಾಗಿ ಬೆಳೆದು ಬಂದಿದೆ ಎಂದು ಗಣೇಶ್ ದೇವಿ ಹೇಳುತ್ತಾರೆ.

ಎಲ್ಲಕ್ಕಿಂತ ಮುಖ್ಯವಾಗಿ ದೇಶಿ ಭಾಷೆಗಳ ಅಳಿವು ಉಳಿವಿನ ತರ್ಕಕ್ಕೆ ಸಂಬಂಧಿಸಿ ಅವರು ಇನ್ನೊಂದು ವಾದವನ್ನು ಮುಂದಿಡುತ್ತಾರೆ. ತುಸು ಆಲೋಚಿಸಿದರೆ ಅವರ ಮಾತು ಎಲ್ಲರಿಗೂ ಮನವರಿಕೆಯಾಗುತ್ತದೆ. ಅದೇನೆಂದರೆ- ಇಂಗ್ಲಿಷನ್ನು ಪ್ರಥಮ ಭಾಷೆಯಾಗಿ ಅಧ್ಯಯನ ಮಾಡುವ ಭಾರತೀಯರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇರಬಹುದು. ಆದರೆ ಇಂಗ್ಲಿಷ್‍ನಲ್ಲೇ ಪೂಜೆ, ಪ್ರಾರ್ಥನೆ ಮಾಡುವ ಭಾರತೀಯರ ಪ್ರಮಾಣ ಕಡಿಮೆ. ಸಂಗೀತ, ನೃತ್ಯದ ವಿಷಯದಲ್ಲೂ ಈ ಮಾತು ಅನ್ವಯ. ಹೀಗಾಗಿ ಇಂಗ್ಲಿಷ್ ಪ್ರಭಾವಕ್ಕೆ ಸಿಲುಕಿ ದೇಶ ಭಾಷೆಗಳು ಅವಸಾನ ಹೊಂದುವ ವೇಗ ನಿಧಾನವಾಗಿದೆ. ಒಂದುವೇಳೆ ಪೂಜೆ ಮತ್ತು ಪ್ರಾರ್ಥನೆಯನ್ನೂ ಇಂಗ್ಲಿಷ್‍ನಲ್ಲಿ ಮಾಡುವವರ ಸಂಖ್ಯೆ ಹೆಚ್ಚುತ್ತಾ ಹೋದರೆ ಆಫ್ರಿಕಾ ಖಂಡದ ದೇಶಗಳಂತೆ ಭಾರತದಲ್ಲೂ ಸ್ಥಳೀಯ ಭಾಷೆಗಳು ನಾಶಹೊಂದುತ್ತವೆ ಎಂದು ದೇವಿ ಅಭಿಪ್ರಾಯಪಡುತ್ತಾರೆ.

ಕನ್ನಡವೇ ಇರಲಿ, ಮರಾಠಿಯೇ ಇರಲಿ, ಭಾರತದ ಸಂದರ್ಭದಲ್ಲಿ ನಾವು ಭಾಷೆಯ ಅವಸಾನ ಅಥವಾ ಉಳಿವಿನ ಕುರಿತು ಮಾತ್ರ ಚಿಂತಿಸದೆ, ಅದರಾಚೆ ಭಾಷೆಗಳು ಮೈಗೂಡಿಸಿಕೊಂಡಿರುವ ಸಾಂಸ್ಕøತಿಕ ವೈವಿಧ್ಯವೂ ನಾಶವಾಗುತ್ತದೆ ಎಂದು ಆಲೋಚಿಸುವುದು ಒಳಿತು. ಮುಖ್ಯವಾಗಿ ಕನ್ನಡದ ಕುರಿತು ಮಾತ್ರ ಮಾತನಾಡುವುದರಿಂದ ಕನ್ನಡ ಉಳಿಯಲಾರದು. ಕೇವಲ ಹಿಂದಿ, ಮರಾಠಿ ಅಥವಾ ಇಂಗ್ಲಿಷ್ ಭಾಷೆಯನ್ನು ವಿರೋಧಿಸುವುದರಿಂದಲೂ ಕನ್ನಡ ಉಳಿಯಲಾರದು. ಅದರ ಬದಲು ಒಟ್ಟಾರೆಯಾಗಿ ದೇಶಭಾಷೆಗಳ ಸಾಂಸ್ಕೃತಿಕ ವೈವಿಧ್ಯವನ್ನು ರಕ್ಷಿಸುವ ದೃಷ್ಟಿಯಿಂದ ಚಿಂತನೆ ನಡೆಸುವುದು ಹೆಚ್ಚು ಸೂಕ್ತ.

ಯಾಕೆ ಈ ಅಭಿಪ್ರಾಯವೆಂದರೆ, ಉತ್ತರ ಭಾರತದಲ್ಲಿ ಪ್ರಾಬಲ್ಯ ಹೊಂದಿರುವ ಹಿಂದಿ ಭಾಷೆ 126 ಉಪಭಾಷೆಗಳ ಬಲವಾದ ಹಂದರವನ್ನು ಹೊಂದಿದೆ. ಅದೇ ಕಾರಣಕ್ಕೆ ಹಿಂದಿಯ ಮೇಲೆ ಇಂದಿಗೂ ಇಂಗ್ಲಿಷ್ ಭಾಷೆಯ ಪರಿಣಾಮ ಅತಿ ಕಡಿಮೆ. ಅದೇ ರೀತಿ ಸಂಸ್ಕೃತ ಭಾಷೆ ಕೂಡ. ಬಹುತೇಕ ಭಾರತೀಯ ಭಾಷೆಗಳ ಮೇಲೆ ಸಂಸ್ಕೃತದ ನೇರ ಅಥವಾ ಪರೋಕ್ಷ ಸಂಬಂಧ, ಕೊಡುಕೊಳ್ಳುವಿಕೆ ಇದ್ದರೂ ಸಹ ಕೆಲವರು, ಸಂಸ್ಕೃತದಿಂದಲೇ ಪ್ರಾದೇಶಿಕ ಭಾಷೆಗಳು ನಾಶವಾಗಿವೆ; ಕನ್ನಡದಂತಹ ಪ್ರಾದೇಶಿಕ ಭಾಷೆಗಳು ಸಂಸ್ಕೃತದ ಹಂಗಿನಿಂದ ಹೊರಬರಬೇಕೆಂಬ ಅನರ್ಥವಾದವನ್ನು ಮುಂದಿಡುತ್ತಿದ್ದಾರೆ. ಹಿಂದಿಯಂತಹ ಬಲಾಢ್ಯ ಭಾಷೆಯ ವಿರುದ್ಧವೂ ವಿರೋಧದ ಖಡ್ಗವನ್ನು ಝಳಪಿಸುತ್ತಾರೆ.

ಇತ್ತೀಚೆಗೆ ರಾಜ್ಯಪಾಲ ವಿ.ಆರ್.ವಾಲಾ ಅವರು ವಿಧಾನಮಂಡಲ ಜಂಟಿ ಅಧಿವೇಶನವನ್ನುದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡುತ್ತಾರೆಂಬುದು ಕೆಲವರ ವಿರೋಧಕ್ಕೆ ಕಾರಣವಾಗಿ ವಿವಾದದ ಕಿಡಿಯನ್ನು ಹೊತ್ತಿಸಿತು. ಅಂಥವರು ಒಮ್ಮೆ ಇತಿಹಾಸದ ಕಡೆ ತಿರುಗಿ ನೋಡುವುದು ಒಳಿತು. ರಾಜ್ಯದ ಈವರೆಗಿನ ರಾಜ್ಯಪಾಲರ ಪೈಕಿ ಮೊದಲನೆಯವರಾದ ಕನ್ನಡಿಗ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಹೊರತುಪಡಿಸಿ, ಬಾಕಿ 18 ಮಂದಿ ರಾಜ್ಯಪಾಲರು ವಿಧಾನಮಂಡಲ ಅಧಿವೇಶನದಲ್ಲಿ ಇಂಗ್ಲಿಷಿನಲ್ಲಿ ಭಾಷಣ ಮಾಡಿದ್ದರು. ಯಾರೊಬ್ಬರೂ ಆ ಬಗ್ಗೆ ಚಕಾರ ಎತ್ತಿರಲಿಲ್ಲ. ಆದರೆ ಈ ಬಾರಿ ವಿ.ಆರ್. ವಾಲಾ ಹಿಂದಿಯಲ್ಲಿ ಭಾಷಣ ಮಾಡುತ್ತಾರೆಂಬುದು ಹಲವರ ಕೆಂಗಣ್ಣಿಗೆ ಕಾರಣವಾಯಿತು. ಇಂಥ ಆಲೋಚನಾಕ್ರಮ ಸರಿಯಲ್ಲ.

ಈ ವಿಷಯದಲ್ಲಿ ನಮಗೊಂದು ಸ್ಪಷ್ಟ ಕಲ್ಪನೆ ಮತ್ತು ತೀರ್ಮಾನ ಬೇಕು. ಕನ್ನಡವೂ ಸೇರಿ ದೇಶೀ ಭಾಷೆಗಳ ರಕ್ಷಣೆ ಆಗಬೇಕಾದರೆ ಇಂಗ್ಲಿಷ್ ಭಾಷೆಯ ವ್ಯಾಪಕ ಕಲಿಕೆಗೆ ಅವಕಾಶ ಸೃಷ್ಟಿಸಬೇಕು. ಆಗ ಇಂಗ್ಲಿಷ್ ಕುರಿತಾದ ಭಯ ಮತ್ತು ಕುತೂಹಲ ಎರಡೂ ದೂರಾಗುತ್ತದೆ. ಅದರ ಜೊತೆಗೆ ಮಾತೃಭಾಷೆಯ ಕುರಿತಾದ ಜಾಗೃತಿಯನ್ನೂ ಅದೇ ಪ್ರಮಾಣದಲ್ಲಿ ಮಾಡಬೇಕು. ಈ ವಿಷಯದಲ್ಲಿ ದೇಶಭಾಷೆಗಳೆಲ್ಲ ಒಂದಾಗಿ ಪ್ರಾದೇಶಿಕ ಭಾಷೆ, ಸಂಸ್ಕøತಿ ರಕ್ಷಣೆಗೆ ಅಗತ್ಯವಾದ ಭಾಷಾ ನೀತಿ ರೂಪಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು.

ಒಂದು ಸ್ಪಷ್ಟ ನೀತಿ ಮತ್ತು ಭಾಷೆಯ ಕುರಿತಾದ ಪ್ರೀತಿ ಇವೆರಡರ ಅಭಾವದ ನಡುವೆ ಭಾಷಾ ರಕ್ಷಣೆಯ ಮಾತು ಬರೀ ಲೊಳಲೊಟ್ಟೆಯಾದೀತು.

ಕೊನೆಯದಾಗಿ ಒಂದಷ್ಟು ಉದಾಹರಣೆ. ಸ್ವಭಾಷಾ ಪ್ರೇಮವೊಂದಿದ್ದರೆ ಭಾಷಾ ರಕ್ಷಣೆ ಕಷ್ಟದ ಮಾತಲ್ಲ ಎಂಬುದಕ್ಕೆ ಕರ್ನಾಟಕದಲ್ಲಿ ಬ್ಯಾರಿ, ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಭೋಜಪುರಿ, ಮೇಘಾಲಯದಲ್ಲಿ ಖಾಸ್ಸಿ, ಮಿಜೋರಾಂನಲ್ಲಿ ಮಿಜೋ, ಉತ್ತರಾಖಂಡದಲ್ಲಿ ಕುಮೋನಿ, ಗುಜರಾತದಲ್ಲಿ ಕುಟ್ಚಿ, ರಾಜಸ್ತಾನದಲ್ಲಿ ಮೇವಾತಿ ಭಾಷೆಗಳು ಇನ್ನೂ ಬೆಳೆಯುತ್ತಲೇ ಇರುವುದು ನಮಗೊಂದು ನಿದರ್ಶನವಾಗಬಹುದು. ಆ ಭಾಷೆಗಳನ್ನಾಡುವ ಜನರ ಕಟ್ಟರ್ ಅಭಿಮಾನ ಅದಕ್ಕೆ ಕಾರಣವಲ್ಲದೆ ಬೇರೇನೂ ಅಲ್ಲ. ಅಷ್ಟು ದೂರದ ಉದಾಹರಣೆಯೇಕೆ, ನಮ್ಮ ಕರಾವಳಿ ಪ್ರದೇಶದಲ್ಲಿ ಜೀವಂತಿಕೆಯಿಂದ ನಳನಳಿಸುವ, ಲಿಪಿಯೇ ಇಲ್ಲದ ಕೊಂಕಣಿ ಭಾಷೆ ಹಚ್ಚಹಸಿರಾಗಿರಲು ಕೊಂಕಣಿಗರ ಭಾಷಾಪ್ರೇಮವಲ್ಲದೇ ಬೇರೆ ಏನಾದರೂ ಕಾರಣವುಂಟೇನು? ಮನಸ್ಸಿದ್ದರೆ ಮಾರ್ಗವುಂಟು. ಭಾಷಾ ಕಂಟಕಕ್ಕೆ ಪರಿಹಾರವೂ ಉಂಟು. ಆಲೋಚನೆ ಮಾಡುವ ಮನಸ್ಸುಗಳು ಬೇಕಷ್ಟೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top