ಬೆಟ್ಟ ಅಗೆದು ಇಲಿ ಹಿಡಿಯುವ ಕೆಲಸ ಮಾಡಿದರೇ ನಟವರ್…

ಇರಾಕ್ ಜತೆ ಬಿಜಿನೆಸ್ ನಂಟು ಹೊಂದಿದ್ದ ಅಂದಾಲಿಬ್ ಸೆಹಗಲ್ ದೋಸ್ತಿಯ ಕಾರಣಕ್ಕೆ ನಟವರ್ ಪುತ್ರ ಮೇಲಿಂದಮೇಲೆ ಅಲ್ಲಿಗೆ ಹೋಗುತ್ತಿದ್ದರು. ಆದರೆ ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಪದೇಪದೆ ಇರಾಕ್‍ಗೆ ಯಾಕೆ ಹೋಗುತ್ತಿದ್ದರು ಎಂಬುದಕ್ಕೆ ಎಲ್ಲೂ ವಿವರಣೆ ಸಿಗುವುದಿಲ್ಲ.

1045270

ಕಿಲಾಡಿ ಕನ್ವರ್ ನಟವರ್ ಸಿಂಗ್ ಯಾರಿಗೆ ಥ್ಯಾಂಕ್ಸ್ ಹೇಳಬೇಕು? ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೋ ಇಲ್ಲ `Oil For Food’ ಹಗರಣದ ಹೂರಣವನ್ನು ಹೊರಹಾಕಿದ ಅಮೆರಿಕದ ಮಾಜಿ ಟ್ರೆಷರಿ ಮುಖ್ಯಸ್ಥ ಪೌಲ್ ವೋಲ್ಕರ್‍ಗೋ? ನಟವರ್ ಸಿಂಗ್ ಆತ್ಮಕಥೆ `ONE LIFE IS NOT ENOUGH’ ಎಂಬ ಮಣಭಾರ ಪುಸ್ತಕದ ಕೊನೇ ಪುಟ ತಿರುವಿಹಾಕುವ ಹೊತ್ತಿಗೆ ಇಂಥದ್ದೊಂದು ಪ್ರಶ್ನೆ ಸಹಜವಾಗಿ ಆವರಿಸಿಕೊಳ್ಳುತ್ತದೆ. ನೆಹರು, ಇಂದಿರಾ, ರಾಜೀವ್ ತದನಂತರ ಸೋನಿಯಾ ಗಾಂಧಿಯವರೆಗೆ ನೆಹರು-ಗಾಂಧಿ ಮನೆತನದ ಪಡಚಾಕರಿ ಮಾಡುತ್ತಲೇ ಬಹುಪಾಲು ಆಯಸ್ಸು ಕಳೆದ ನಟವರ್ ಸಿಂಗ್ ಅದೇಕೆ ಈಗ ಇದ್ದಕ್ಕಿದ್ದ ಹಾಗೆ ಸೋನಿಯಾ ವಿರುದ್ಧ ತಿರುಗಿಬಿದ್ದಿದ್ದಾರೆ ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆ. ಉತ್ತರ ಬೇಕಿದ್ದರೆ ನಟವರ್ ಸಿಂಗ್ ಪುಸ್ತಕ ಬರೆಯಲು ಪಟ್ಟಷ್ಟು ಕಷ್ಟಪಡಬೇಕಿಲ್ಲ. ಅವರ ಆತ್ಮಕಥೆಯ Just last one chapter is enough.

ನಟವರ್ ಆತ್ಮಚರಿತ್ರೆ ಮುದ್ರಣಕ್ಕೆ ಹೋಗುವ ಪೂರ್ವದಲ್ಲೇ ಸಾಕಷ್ಟು ಸದ್ದುಮಾಡಿತು. 2004ರಲ್ಲಿ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ದಕ್ಕಿದರೂ ಸಹ ಸೋನಿಯಾ ಪ್ರಧಾನಿ ಪಟ್ಟ ಏರಲು ಒಲ್ಲೆ ಎನ್ನಲು ಮಗ ರಾಹುಲ್ ಕಾರಣ. ಅಜ್ಜಿ ಇಂದಿರಾ, ಅಪ್ಪ ರಾಜೀವರ ಹಾಗೆ ಪ್ರಾಣಕಳೆದುಕೊಳ್ಳಬೇಕಾಗುತ್ತದೆ ಎಂಬ ಭೀತಿಯಿಂದ ಅಮ್ಮ ಪ್ರಧಾನಿಯಾಗುವುದನ್ನು ರಾಹುಲ್ ತಡೆದರು ಎಂಬ ಗುಟ್ಟನ್ನು ನಟವರ್ ರಟ್ಟುಮಾಡಿದ್ದಾರೆ ಎಂಬುದೇ ದೊಡ್ಡ ಸುದ್ದಿ ಆಯಿತು. ಅದರ ಜತೆಗೆ ಪುಸ್ತಕದಲ್ಲಿ ಇನ್ನೇನೇನು ಬರೆದುಬಿಟ್ಟಿದ್ದಾರೇನೋ ಎಂದು ಇಡೀ ಕಾಂಗ್ರೆಸ್‍ನಲ್ಲಿ ಭಯಂಕರ ಆತಂಕ ಸೃಷ್ಟಿಯಾಗಿತ್ತು. ವಾಸ್ತವದಲ್ಲಿ ಸೋನಿಯಾ ತ್ಯಾಗಚರಿತ್ರೆ ಕುರಿತು ನಟವರ್ ಬರೆದದ್ದು ಒಂದೇ ಒಂದು ಪ್ಯಾರಾ. ಅದರಲ್ಲೂ ಅಂಥ ರೋಚಕತೆಯೇನೂ ಇಲ್ಲ. ಆ ಸಾಲುಗಳನ್ನು ಓದುವಾಗ, ಕಾಂಗ್ರೆಸ್ ಚುಕ್ಕಾಣಿ ಹಿಡಿಯಲು ಮುಂದಾದವರು ಪ್ರಧಾನಿ ಪದವಿ ಒಪ್ಪಲಾರರೇ ಎಂಬ ಮತ್ತೊಂದು ಅನುಮಾನ ಹುಟ್ಟಿಕೊಳ್ಳುತ್ತದೆಯೇ ಹೊರತು ಇರುವ ಗೊಂದಲ ಪರಿಹಾರ ಆಗುವುದಿಲ್ಲ. ಇರಲಿ.. ಉಳಿದಂತೆ ನಟವರ್‍ರ ರಾಜಸ್ಥಾನದ ಭರತ್‍ಪುರದಲ್ಲಿನ ಬಾಲ್ಯ, ಯೌವನದಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರಿ ವಿವಿಧ ದೇಶಗಳ ರಾಯಭಾರ ಕಚೇರಿಗಳಲ್ಲಿನ ನೌಕರಿ ಇವ್ಯಾವವೂ ಹೆಚ್ಚು ಗಮನ ಸೆಳೆಯುವುದಿಲ್ಲ. ಹಾಗಾದರೆ ಈ ಇಳಿವಯಸ್ಸಿನಲ್ಲಿ ನಟವರ್ ಈ ಪುಸ್ತಕ ಬರೆಯುವ ಕಸರತ್ತನ್ನೇಕೆ ಮಾಡಿದರು? ಅದೇ ಇಲ್ಲಿರುವ ಪ್ರಮುಖ ವಿಚಾರ.

ನಟವರ್ ತಮ್ಮ ಚಾಲಾಕಿತನದಿಂದಲೇ ಜೀವನದಲ್ಲಿ ಎಲ್ಲವನ್ನೂ ಪಡೆದವರು. ಪಟಿಯಾಲಾ ಮಹಾರಾಜರ ಪುತ್ರಿ ಹೆಮ್‍ಳನ್ನು ಪ್ರೀತಿಸಿ ಮದುವೆಯಾಗಿದ್ದರಿಂದ ಹಿಡಿದು ಇಂದಿರಾ, ರಾಜೀವ್ ಮತ್ತು ಸೋನಿಯಾವರೆಗೆ ಎಲ್ಲರ ಆಪ್ತತೆಯನ್ನು ನಟವರ್ ಗಳಿಸಿದ್ದು ತಮ್ಮ ಚಾಕಚಕ್ಯತೆಯಿಂದಲೇ. ಅಂಥ ಒಂದೆರಡು ಸಂದರ್ಭಗಳನ್ನು ಇಲ್ಲಿ ಹೇಳುವುದು ಉಚಿತವಾಗಬಹುದು. 1967ರ ಒಂದು ಘಟನೆ. ಅಂದಿನ ವಿದೇಶಾಂಗ ಖಾತೆ ಸಹಾಯಕ ಸಚಿವ ದಿನೇಶ್ ಸಿಂಗ್ ರಾತ್ರಿ ಭೋಜನಕೂಟ ಏರ್ಪಡಿಸಿದ್ದರು. ಅದೇ ಖಾತೆಯಲ್ಲಿ ಅಧಿಕಾರಿಯಾಗಿದ್ದ ನಟವರ್ ಕೂಡ ಆಹ್ವಾನಿತರಾಗಿದ್ದರು. ಔತಣಕೂಟದಲ್ಲಿ ದಿನೇಶ್ ಸಿಂಗ್‍ರು ನಟವರ್‍ಗೆ ಹೆಮ್‍ರನ್ನು ಪರಿಚಯಿಸಿದರು. ಒಂದೇ ನೋಟದಲ್ಲಿ ನಟವರ್ ರಾಜಪುತ್ರಿಯ ಮನಸನ್ನು ಕದ್ದುಬಿಟ್ಟರು. ಮುಂದೆ ಒಂದು ತಿಂಗಳಲ್ಲಿ ರಾಜನ ವಿರೋಧವನ್ನೂ ಲೆಕ್ಕಿಸದೆ ನಟವರ್ ಹೆಮ್‍ಳನ್ನು ವರಿಸಿಬಿಟ್ಟರು.

ನಟವರ್ ಇಂದಿರಾಗೆ ಆಪ್ತರಾದದ್ದೂ ಅಷ್ಟೇ ಕುತೂಹಲಕರ. ನಟವರ್ ನ್ಯೂಯಾರ್ಕ್‍ನ ಭಾರತೀಯ ದೂತಾವಾಸದ ಸೇವೆಯಲ್ಲಿದ್ದರು. ಆ ವೇಳೆ ಪ್ರಧಾನಿ ಇಂದಿರಾ ಗಾಂಧಿ ಮೊದಲಬಾರಿಗೆ ಅಮೆರಿಕ ಪ್ರವಾಸ ಹಮ್ಮಿಕೊಂಡಿದ್ದರು. ಅದೇ ಸಮಯಕ್ಕೆ ಸರಿಯಾಗಿ ನಟವರ್ ದೆಹಲಿಗೆ ವರ್ಗವಾಗಿದ್ದರು. ಆದರೆ ಏರ್ ಇಂಡಿಯಾ ನೌಕರರು ಮುಷ್ಕರ ಶುರುಮಾಡಿದ್ದರಿಂದ ವಿಮಾನ ಸೇವೆ ರದ್ದಾಗಿತ್ತು. ಹೀಗಾಗಿ ನಟವರ್ `ನಾನೂ ನಿಮ್ಮೊಂದಿಗೆ ದೆಹಲಿಗೆ ಬರಲೇ’ ಎಂದು ಕೇಳಿ ಹಿಂದಿರುಗುವಾಗ ಇಂದಿರಾ ಜತೆಗೂಡಿದರು. ನಟವರ್ ಎಂಥಾ ಜಾದೂ ಮಾಡಿರಬಹುದು ನೋಡಿ. ದೆಹಲಿಯ ವಿದೇಶಾಂಗ ಇಲಾಖೆಯ ವಿಶ್ವಸಂಸ್ಥೆ ವಿಭಾಗಕ್ಕೆ ವರ್ಗಾವಣೆಗೊಂಡಿದ್ದ ನಟವರ್ ಒಂದೇ ವಾರದಲ್ಲಿ ಪ್ರಧಾನಿ ಕಚೇರಿಗೆ ಜಿಗಿದುಬಿಟ್ಟರು. ಮುಂದಿನದ್ದೆಲ್ಲ ಗೊತ್ತೇ ಇದೆ. ಅಲ್ಲಿಯವರೆಗೆ ಇಂದಿರಾಗೆ ಆಪ್ತರಾಗಿದ್ದ ದಿನೇಶ್ ಸಿಂಗ್, ರೋಮೇಶ್ ಥಾಪರ್, ರಜನಿ ಪಟೇಲ್, ಐ.ಕೆ.ಗುಜ್ರಾಲ್ ಮುಂತಾದವರನ್ನೆಲ್ಲ ಬದಿಗೆ ಸರಿಸಿ ನಟವರ್ ಇಂದಿರಾರ ಕಣ್ಣು, ಕಿವಿ, ಬುದ್ಧಿ ಎಲ್ಲವೂ ಆದರು. ನಂತರ ರಾಜೀವ್‍ಗೂ ಅಷ್ಟೇ ಆಪ್ತರಾದರು. ಸೋನಿಯಾರನ್ನು ರಾಜಕೀಯದ ಮುಖ್ಯಭೂಮಿಕೆಗೆ ತರುವುದರಲ್ಲೂ ಅವರ ಪಾತ್ರ ದೊಡ್ಡದು. ರಾಹುಲ್, ಪ್ರಿಯಾಂಕರನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಆಡಿಸಿ ಬೆಳೆಸಿದ್ದು ಇದೇ ನಟವರ್. 1991ರ ಮೇ 21ರಂದು ರಾಜೀವ್ ಹತ್ಯೆಯಾದ ನಂತರ ಸೋನಿಯಾಗೆ ನಟವರ್ ಸಿಂಗ್ ಅವರೇ ಭರವಸೆಯಾಗಿದ್ದರು. ಮೇ 24ರಂದು ದೆಹಲಿಯಲ್ಲಿ ನಡೆದ ರಾಜೀವ್ ಅಂತ್ಯಕ್ರಿಯೆಯಲ್ಲಿ ಹತ್ತಾರು ದೇಶಗಳ ಪ್ರಮುಖರು ಭಾಗವಹಿಸಿದ್ದರು. ಆ ಪೈಕಿ ಪಾಕಿಸ್ತಾನದ ಪ್ರಧಾನಿ ಬೆನಜೀರ್ ಭುಟ್ಟೋ ಕೂಡ ಒಬ್ಬರು. ಭುಟ್ಟೋ ಸೋನಿಯಾ ಮನೆಗೆ ಹೋಗಿ `ನೀವಿನ್ನು ರಾಜಕೀಯಕ್ಕೆ ಬರಬೇಡಿ’ ಎಂದು ಕಿವಿಮಾತು ಹೇಳಿದ್ದರು. ಆಗ ಬದಿಯಲ್ಲೇ ಇದ್ದ ನಟವರ್ ಸಿಡಿಮಿಡಿಗೊಂಡು ‘She had not followed what she had preaches, you have stepped in to the shoes of your father. The Gandhis have a tradition and legacy serving India’ (ಬೆನಜೀರ್ ನಿಮಗೇನು ಉಪದೇಶ ಮಾಡುತ್ತಿದ್ದಾರೋ ಅದನ್ನು ಅವರೇ ತಮ್ಮ ಜೀವನದಲ್ಲಿ ಪಾಲಿಸಿಲ್ಲ. ನಿಮ್ಮ ತಂದೆಯ ದುರಂತ ಸಾವಿನ ನಂತರ ನೀವು ಅವರ ಹಾದಿ ತುಳಿದಿರಿ. ಗಾಂಧಿ ಕುಟುಂಬವು ಭಾರತಸೇವೆಯ ಪರಂಪರೆಯನ್ನು ಹೊಂದಿದೆ) ಅಂತ ಹೇಳಿ ಭುಟ್ಟೋಗೆ ಮರುಮಾತಾಡಲು ಬಿಡಲಿಲ್ಲ. ಅಷ್ಟು ಮಾತ್ರವಲ್ಲ, ನರಸಿಂಹ ರಾವ್, ಸೀತಾರಾಮ ಕೇಸರಿ ಇವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ದಿನವೂ ಸೋನಿಯಾ ಮನೆಗೆ ಹೋಗಿ ಸಲಹೆ ಕೊಡುತ್ತಿದ್ದ ನಟವರ್ ಸಿಂಗ್, 1998ರ ಮಾರ್ಚ್ 14ರಂದು ದೆಹಲಿ ಸಿರಿಕೋಟೆಯಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ಸೋನಿಯಾರನ್ನು ಪಕ್ಷದ ಮುಖ್ಯಭೂಮಿಕೆಗೆ ತರುವವರೆಗೆ ಹಿಡಿದ ಹಟ ಬಿಡಲಿಲ್ಲ.

ಆತ್ಮಸಾಕ್ಷಿಗೆ ವಿರುದ್ಧವಾಗಿ ನಟವರ್ ಹೇಗೆಲ್ಲ ಕೆಲಸ ಮಾಡಿದ್ದರೆಂಬುದಕ್ಕೆ ಒಂದು ಉದಾಹರಣೆಯಿದೆ. ಎಂಭತ್ತರ ದಶಕದಲ್ಲಿ ಪ್ರಧಾನಿ ಇಂದಿರಾ ಅಣುಪರೀಕ್ಷೆಗೆ ಮನಸ್ಸು ಮಾಡಿದ್ದರು. ಆದರೆ ಇದರಿಂದ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆಂಬ ಕಿವಿಮಾತನ್ನು ನಟವರ್ ಇಂದಿರಾಗೆ ಹೇಳಿದ್ದರು. ನಟವರ್ ಹೇಳಿದ ಹಾಗೆ, ಅಣುಪರೀಕ್ಷೆ ನಡೆಸದಂತೆ ಅಮೆರಿಕ ಒತ್ತಡ ತಂದಿತು. ಹಾಗಾದರೆ ನಟವರ್ ಮನದಲ್ಲಿದ್ದ ಆಲೋಚನೆ ಅಮೆರಿಕ ಸರ್ಕಾರದವರೆಗೆ ಹೇಗೆ ಹೋಯಿತು? ಆಲೋಚಿಸಬೇಕಾದ ವಿಷಯ ತಾನೇ?

1998ರ ಮೇ 11ಮತ್ತು 13ರಂದು ರಾಜಸ್ಥಾನದ ಪೋಖ್ರಾನ್‍ನಲ್ಲಿ ಭಾರತ ಯಶಸ್ವಿ ಅಣುಪರೀಕ್ಷೆ ನಡೆಸಿತು. ಆಗ ಅಮೆರಿಕ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹತ್ತಾರು ದೇಶಗಳು ಭಾರತದ ಮೇಲೆ ನಿರ್ಬಂಧ ಹೇರಿದವು. ಅಣ್ವಸ್ತ್ರ ಪರೀಕ್ಷೆಯಂಥ ಮಹತ್ವದ ಸಂದರ್ಭದಲ್ಲಿ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಅಂತ ಕಾಂಗ್ರೆಸ್ ತಕರಾರು ತೆಗೆಯಿತು. ಜತೆಗೆ, ಈ ವಿಚಾರದಲ್ಲಿ ಸರ್ಕಾರದ ನಿರ್ಧಾರ ಬೆಂಬಲಿಸಬೇಕೇ ಬೇಡವೇ ಎಂಬ ಸಂದಿಗ್ಧಕ್ಕೂ ಸಿಲುಕಿದ್ದ ಕಾಂಗ್ರೆಸ್, ಕೊನೆಗೆ ಯಶಸ್ವಿ ಅಣುಪರೀಕ್ಷೆಗಾಗಿ ವಾಜಪೇಯಿ ಸರ್ಕಾರದ ಬೆನ್ನು ತಟ್ಟದೆ ವಿಜ್ಞಾನಿಗಳನ್ನು ಮಾತ್ರ ಅಭಿನಂದಿಸಲು ತೀರ್ಮಾನಿಸಿತು. ಕಾಂಗ್ರೆಸ್‍ಗೆ ಈ ಎರಡೂ ಐಡಿಯಾ ಕೊಟ್ಟದ್ದು ಇದೇ ನಟವರ್ ಸಿಂಗ್.

ಸೋನಿಯಾಗೆ ಆ ಪರಿ ಆಪ್ತರಾಗಿದ್ದ ನಟವರ್ ಶಾಶ್ವತವಾಗಿ ಸಂಬಂಧ ಕಡಿದುಕೊಳ್ಳುವಂತಾಗಲು ಕಾರಣವಾದರೂ ಏನು? ಅದು ಬೇರಾವುದೂ ಅಲ್ಲ, ಇರಾಕ್‍ನ ಸರ್ವಾಧಿಕಾರಿ ಸದ್ದಾಂ ಹುಸೇನ್ ಜತೆ ಮಾಡಿಕೊಂಡ ‘Oil for Food’ ಡೀಲು. ಅದೇ ನಟವರ್ ಪುಸ್ತಕದ ತಿರುಳು ಕೂಡ.

ಸದ್ದಾಂ ಹುಸೇನ್ 1990ರ ಆಗಸ್ಟ್ 2ರಂದು ಕುವೈತ್ ಮೇಲೆ ಯುದ್ಧ ಘೋಷಿಸಿದ. ಅದಕ್ಕೆ ಪ್ರತಿಯಾಗಿ ಅಮೆರಿಕ ನೇತೃತ್ವದಲ್ಲಿ 34 ದೇಶಗಳು ಕುವೈತ್ ಪರವಾಗಿ ಮಿಲಿಟರಿ ಕಾರ್ಯಾಚರಣೆಗಿಳಿದು ಇರಾಕನ್ನು ಹಿಮ್ಮೆಟ್ಟಿಸಿದವು. ಆದರೂ ವಿಶ್ವಸಂಸ್ಥೆ ಭದ್ರತಾ ಮಂಡಳಿ ಇರಾಕ್ ಮೇಲಿನ ನಿರ್ಬಂಧ ಸಡಿಲಿಸದೆ, ಅದರ ಬದಲು 1996ರಲ್ಲಿ ಇರಾಕ್ ನೆರವಿಗೆ `ಆಹಾರಕ್ಕಾಗಿ ತೈಲ’ ಕಾರ್ಯಕ್ರಮ ಘೋಷಿಸಿತು. ಆ ಪ್ರಕಾರ, ಇರಾಕ್ ವಿಶ್ವಸಂಸ್ಥೆಯ ಕಣ್ಗಾವಲಿನಲ್ಲೇ ಹೊರ ದೇಶಗಳಿಗೆ ತೈಲ ಸರಬರಾಜು ಮಾಡಬೇಕಿತ್ತು. ಈ ನಡುವೆ 2003ರ ಮಾರ್ಚ್ 20ರಂದು ಸಮೂಹನಾಶಕ ಶಸ್ತ್ರಾಸ್ತ್ರಗಳ ಪತ್ತೆಗೋಸ್ಕರ ಅಮೆರಿಕ ಪಡೆಗಳು ಇರಾಕ್ ಮೇಲೆ ಮುಗಿಬಿದ್ದವು. ಸದ್ದಾಂ ಹುಸೇನ್‍ನನ್ನು ಅಧಿಕಾರದಿಂದ ಕೆಳಗಿಳಿಸಿದ್ದು ಮಾತ್ರವಲ್ಲ, ಆತನನ್ನು ಬೀದಿಬದಿಯ ಕರೆಂಟ್ ಕಂಬಕ್ಕೆ ನೇಣಿಗೆ ಹಾಕಿದರು. ಶಸ್ತ್ರಾಸ್ತ್ರ ಹುಡುಕಲು ಹೋದ ಅಮೆರಿಕ ಪಡೆಗಳಿಗೆ `ಆಹಾರಕ್ಕಾಗಿ ತೈಲ’ ಯೋಜನೆಯಲ್ಲಿ ಅಪಾರ ಪ್ರಮಾಣದ ಭ್ರಷ್ಟಾಚಾರ ನಡೆದಿರುವುದಕ್ಕೆ ದಾಖಲೆ ಸಿಕ್ಕಿತು. ಹಗರಣದ ತನಿಖೆಗೆ ಅಮೆರಿಕ ಸೆನೆಟ್ ಅಲ್ಲಿನ ರಿಸರ್ವ್ ಬ್ಯಾಂಕಿನ ಮುಖ್ಯಸ್ಥ ಪೌಲ್ ವೋಲ್ಕರ್ ನೇತೃತ್ವದಲ್ಲಿ ಸಮಿತಿ ನೇಮಿಸಿತು. ಹದಿನೆಂಟು ತಿಂಗಳು ಕಾಲ ಮಾಹಿತಿ ಕಲೆಹಾಕಿದ ವೋಲ್ಕರ್ 2005ರ ಅಕ್ಟೋಬರ್ 27ರಂದು ವರದಿ ನೀಡಿದರು.

ಆ ವರದಿಯಲ್ಲಿ, ಇರಾಕ್ ಸರ್ವಾಧಿಕಾರಿಯಿಂದ ಲಂಚ ತಿಂದವರ ಪಟ್ಟಿಯಲ್ಲಿ ಹತ್ತಾರು ದೇಶಗಳ ರಾಜಕೀಯ ಪ್ರಮುಖರು, ಪ್ರಭಾವಿಗಳು ಮತ್ತು ಪ್ರಮುಖ ಸಂಸ್ಥೆಗಳ ಹೆಸರಿತ್ತು. ಅದರಲ್ಲಿ ವಿಶ್ವಸಂಸ್ಥೆಯ ಅಧ್ಯಕ್ಷ ಕೋಫಿ ಅನ್ನಾನ್, ಅನ್ನಾನ್ ಪುತ್ರ ಕೋಜೋ, ಕಾಶ್ಮೀರದ ಪ್ಯಾಂಥರ್ಸ್ ಪಕ್ಷದ ಭೀಮ್ ಸಿಂಗ್, ಕಾಂಗ್ರೆಸ್ ಪಕ್ಷ (ಸಾಂಸ್ಥಿಕ ದೇಣಿಗೆ), ವಿದೇಶಾಂಗ ಸಚಿವ ನಟವರ್ ಸಿಂಗ್, ನಟವರ್ ಪುತ್ರ ಜಗತ್ ಸಿಂಗ್ ಹೆಸರೂ ಸೇರಿ 270 ಮಂದಿ ಫಲಾನುಭವಿಗಳ ದೊಡ್ಡ ಪಟ್ಟಿಯೇ ಇತ್ತು. ವಿಚಿತ್ರ ನೋಡಿ. ಫಲಾನುಭವಿಗಳ ಪಟ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ಹೆಸರೂ ಇತ್ತಾದರೂ ತಲೆದಂಡ ಕೊಡಬೇಕಾಗಿ ಬಂದದ್ದು ನಟವರ್ ಸಿಂಗ್ ಮಾತ್ರ. ಇರಾಕ್‍ನೊಂದಿಗೆ ಉದ್ಯಮ ಸಂಬಂಧ ಹೊಂದಿದ್ದ ಅಂದಾಲಿಬ್ ಸೆಹಗಲ್ ದೋಸ್ತಿಯ ಕಾರಣಕ್ಕೆ ಜಗತ್ ಸಿಂಗ್ ಮೇಲಿಂದ ಮೇಲೆ ಇರಾಕ್‍ಗೆ ಪ್ರವಾಸ ಮಾಡಿದ್ದರು. ಆದರೆ ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಪದೇಪದೆ ಯಾಕೆ ಇರಾಕ್‍ಗೆ ಹೋಗುತ್ತಿದ್ದರು ಎಂಬುದಕ್ಕೆ ಎಲ್ಲೂ ವಿವರಣೆ ಸಿಗುವುದಿಲ್ಲ.

ಹಗರಣದ ಪೆಟ್ಟಿಗೆಗೆ ಕೊನೇ ಮೊಳೆ ಹೊಡೆಯುವ ಸಲುವಾಗಿ 2005ರ ನವೆಂಬರ್‍ನಲ್ಲಿ ವೋಲ್ಕರ್ ಕಮಿಟಿ ಎದುರು ವಿಶ್ವಸಂಸ್ಥೆಯ ಮಾಜಿ ಉಪಕಾರ್ಯದರ್ಶಿ ವೀರೇಂದ್ರ ದಯಾಳ್ ಭಾರತದ ಪ್ರತಿನಿಧಿಯಾಗಿ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಎದುರಿಸಿದ ದಯಾಳ್ ಅಲ್ಲಿಂದ ಸಾಕಷ್ಟು ಮಹತ್ವದ ದಾಖಲೆಗಳನ್ನು ತಂದು ಜಾರಿ ನಿರ್ದೇಶನಾಲಯ (Enforcement Directorate-ED)ಕ್ಕೆ ಒಪ್ಪಿಸಿದ್ದರು. ಮತ್ತೊಂದೆಡೆ `ಆಹಾರಕ್ಕಾಗಿ ತೈಲ’ ಹಗರಣದಲ್ಲಿ ಭಾರತದ ಮೇಲಿನ ಆರೋಪಕ್ಕೆ ಸಂಬಂಧಿಸಿ ತನಿಖೆಗೆ ಜಸ್ಟಿಸ್ ಪಾಠಕ್ ತನಿಖಾ ಸಮಿತಿ ನೇಮಕವಾಗುತ್ತದೆ. ಆದರೆ ವೀರೇಂದ್ರ ದಯಾಳ್ ಸಂಗ್ರಹಿಸಿದ ಮಾಹಿತಿಯಾಗಲಿ, ಪಾಠಕ್ ಕಮಿಟಿ ವರದಿಯಾಗಲಿ ಇಂದಿಗೂ ಕೂಡ ಯಾರಿಗೂ ಲಭ್ಯವಿಲ್ಲ. ಈ ಎಲ್ಲ ಕಾರಣಗಳಿಗಾಗಿ ನಟವರ್ ಸಿಂಗ್ ಆತ್ಮಕಥೆಯಲ್ಲಿ ಕುತೂಹಲಕರವಾದದ್ದು ವೋಲ್ಕರ್ ವರದಿ ಆಧರಿಸಿದ ಕೊನೇ ಅಧ್ಯಾಯವೊಂದೇ. ಹಾಗಾದರೆ ಕಾಂಗ್ರೆಸ್ ಪಕ್ಷಕ್ಕಾದ ಲಾಭದ ಹೊರತಾಗಿ ನಟವರ್ ಮಾಡಿಕೊಂಡ ವೈಯಕ್ತಿಕ ಪ್ರಯೋಜನವನ್ನು ಬಚ್ಚಿಟ್ಟಿದ್ದು ಮುಳುವಾಯಿತೇ? ವೋಲ್ಕರ್ ವರದಿ ಕಳಂಕ ತೊಳೆದುಕೊಳ್ಳಲು ನಟವರ್ ಈಗ ಹರಸಾಹಸ ಮಾಡುತ್ತಿದ್ದಾರೆಯೇ? ತಮ್ಮನ್ನು ಯಃಕಶ್ಚಿತ್ ಆಗಿ ಬಳಸಿ ಬಿಸಾಡಿದವರ ಮೇಲೆ ಸೇಡುತೀರಿಸಿಕೊಳ್ಳುವ ಪ್ರಯತ್ನಕ್ಕೆ ನಟವರ್ ತಡವಾಗಿ ಕೈಹಾಕಿದರೇ? ಆತ್ಮಕಥೆಯ ಮೂಲಕ ಪುತ್ರ ಜಗತ್ ಸಿಂಗ್ ರಾಜಕೀಯ ಭವಿಷ್ಯವನ್ನು ಅರಸುತ್ತಿದ್ದಾರೆಯೇ? ನಿಜಕ್ಕೂ ನಟವರ್ ಬಹಳಷ್ಟು ವಿಷಯಗಳನ್ನು ಮುಚ್ಚಿಟ್ಟಿದ್ದಾರೆಂಬ ಅನುಮಾನ ಕಾಡತೊಡಗುತ್ತದೆ. Really one book is not enough!

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top