ಬೆಂಗಳೂರು ಹೈ ಅಲರ್ಟ್

6 ಕಡೆ ಸೀಲ್ಡೌನ್ | ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ.

ವಿಕ ಸುದ್ದಿಲೋಕ ಬೆಂಗಳೂರು.
ಕೋವಿಡ್ ನಿಯಂತ್ರಣ ಸಂಬಂಧದಲ್ಲಿ ಬಿಬಿಎಂಪಿ ಪ್ರಮಾದವೆಸಗಿದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ಬೆಂಗಳೂರಿನ ಕೆಆರ್ ಮಾರ್ಕೆಟ್, ವಿವಿ ಪುರ, ಸಿದ್ದಾಪುರ, ಕಲಾಸಿಪಾಳ್ಯ, ಚಾಮರಾಜಪೇಟೆ, ಚಿಕ್ಕಪೇಟೆ ಸೇರಿದಂತೆ ಕೊರೊನಾ ವಿಪರೀತವಾಗಿ ಪ್ರಸರಣವಾಗುತ್ತಿರುವ ಪ್ರದೇಶದಲ್ಲಿ ಸೀಲ್‌ಡೌನ್‌ ಮಾಡಲು ಆದೇಶಿಸಿದೆ. ಹಾಗೆಯೇ ಕೊರೊನಾ ವ್ಯಾಪಿಸುತ್ತಿರುವ ಕಡೆ ಲಾಕ್‌ಡೌನ್‌ ಕ್ರಮ ಅನುಸರಿಸಲು ಸೂಚಿಸಲಾಗಿದೆ.
ಬೆಂಗಳೂರಿನಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಸಂಪುಟದ ಸದಸ್ಯರು ಹಾಗೂ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಕೈಗೊಂಡ ನಿರ್ಧಾರ ಬೆಂಗಳೂರಿಗೆ ಸೀಮಿತವಾಗಿದ್ದರೂ ರಾಜ್ಯಾದ್ಯಂತ ಸೋಂಕು ಹರಡುತ್ತಿರುವ ಬಗ್ಗೆಯೂ ಪ್ರಸ್ತಾಪವಾಗಿದೆ. ಹಾಗಾಗಿ ಅಂಥ ಜಿಲ್ಲೆಗಳಲ್ಲೂ ನಿಗಾ ವಹಿಸಲು ಸಿಎಂ ಸೂಚಿಸಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಿರುವ ಕಡೆ ಸೀಲ್‌ಡೌನ್‌ ಹಾಗೂ ಲಾಕ್‌ಡೌನ್‌ ಸಂಬಂಧ ಸರಕಾರದಿಂದ ಪರಿಷ್ಕೃತ ಮಾರ್ಗಸೂಚಿ ನಿರೀಕ್ಷಿಸಲಾಗಿದೆ.

ಚೆನ್ನಾಗಿ ನೋಡಿಕೊಳ್ಳಿ
ಬೆಡ್ ಇಲ್ಲವೆಂಬ ನೆಪ ಹೇಳಿ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದಿರುವುದು, ರೋಗಿಗಳಿಗೆ ಸರಿಯಾಗಿ ಊಟ ನೀಡದಿರುವ ಬಗ್ಗೆ ದೂರು ಬರುತ್ತಿದೆ. ಈ ಸಮಸ್ಯೆಗೆ ತಕ್ಷ ಣ ಪರಿಹಾರ ಕಂಡುಕೊಳ್ಳಬೇಕು. ಕೋವಿಡ್ ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆ ನೀಡಿ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇದಕ್ಕೆ ಹಣ ಖರ್ಚಾಗುತ್ತದೆ ಎಂಬ ಚಿಂತೆ ಮಾಡಬಾರದು ಎಂದು ಸಿಎಂ ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ.
ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ಕಮಿಷನರ್ ಭಾಸ್ಕರ ರಾವ್, ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್‌ ಮತ್ತಿತರರು ಭಾಗಿಯಾಗಿದ್ದರು.

ಪ್ರಮುಖ ನಿರ್ಧಾರಗಳು
– ಮುಂದಿನ 15 ದಿನ ಅತ್ಯಂತ ಮಹತ್ವದ್ದಾಗಿದ್ದು, ಸೋಂಕು ನಿಯಂತ್ರಣಕ್ಕೆ ಕಟ್ಟೆಚ್ಚರ ವಹಿಸುವುದು.
– ಬೆಂಗಳೂರು ಸೇರಿ ಇತರ ಜಿಲ್ಲೆಗಳಲ್ಲಿ ಪ್ರಕರಣ ಹೆಚ್ಚಾಗಿ ಪತ್ತೆಯಾಗಿರುವ ಕಡೆ ಕಟ್ಟು ನಿಟ್ಟು ಸೀಲ್‌ಡೌನ್‌.
– ಬೆಂಗಳೂರಿನ ಕೆ ಆರ್ ಮಾರ್ಕೆಟ್ ಸೇರಿ ಅತಿ ಹೆಚ್ಚು ಪ್ರಕರಣವಿರುವ ಪ್ರದೇಶ ಮತ್ತು ಸುತ್ತಮುತ್ತಲ ಬೀದಿ ಸೀಲ್‌ಡೌನ್‌.
– ಸರಕಾರ ನಿಗದಿ ಮಾಡಿದ ದರದಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಕ್ರಮ ವಹಿಸುವುದು.
– ಬೆಂಗಳೂರಿನ ಪ್ರತಿ ವಾರ್ಡ್ ನಲ್ಲಿ ಫೀವರ್ ಕ್ಲಿನಿಕ್ ಆರಂಭಿಸುವುದು.
– ಸಾಂಸ್ಥಿಕ ಕ್ವಾರಂಟೈನ್ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ಸಮರ್ಪಕ ಮೂಲಸೌಕರ್ಯ ಕಲ್ಪಿಸುವುದು.
– ಬೆಂಗಳೂರಿನ ಆರ್ಥಿಕ ಚಟುವಟಿಕೆಗೆ ಧಕ್ಕೆಯಾಗದಂತೆ ಕೋವಿಡ್ ನಿಯಂತ್ರಿಸುವುದು.
– ಕ್ವಾರಂಟೈನ್ ಉಲ್ಲಂಘನೆ ಮತ್ತು ಸೋಂಕಿತರ ಪ್ರಕರಣ ಪತ್ತೆಗೆ ಬೂತ್ ಮಟ್ಟದ ಅಧಿಕಾರಿಗಳು, ಸ್ವಯಂ ಸೇವಕರ ತಂಡ
– ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ಬಗ್ಗೆ ವಾರ್ ರೂಮ್‌ನಲ್ಲಿ ಮಾಹಿತಿ. ಸೋಂಕಿತರಿಗೆ ತಕ್ಷ ಣವೇ ಚಿಕಿತ್ಸೆಯ ವ್ಯವಸ್ಥೆ.

ಕ್ವಾರಂಟೈನ್ ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್
ಕ್ವಾರಂಟೈನ್ ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ. ಟ್ರ್ಯಾಕಿಂಗ್ ಆಗುತ್ತದೆ ಎಂಬ ಕಾರಣದಿಂದ ಮೊಬೈಲ್ ಅನ್ನು ಮನೆಯಲ್ಲೇ ಬಿಟ್ಟು ಬೀದಿ ಸುತ್ತುತ್ತಿರುವವರ ಬಗ್ಗೆಯೂ ದೂರು ಬಂದಿದೆ. ಇದು ಸೇರಿದಂತೆ ಕ್ವಾರಂಟೈನ್ ಉಲ್ಲಂಘಿಸುವ ಯಾರೇ ಇದ್ದರೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಸಭೆ ಬಳಿಕ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಆಸ್ಪತ್ರೆಗೆ ಸೇರಿಸಿ ಎಂದು ಬೇಡಬೇಕು!
– ಬಿಬಿಎಂಪಿ-ಟೆಸ್ಟಿಂಗ್ ಕೇಂದ್ರ-ಆಸ್ಪತ್ರೆಗಳ ನಡುವೆ ಸಂವಹನವೇ ಇಲ್ಲ

ವಿಕ ಸುದ್ದಿಲೋಕ ಬೆಂಗಳೂರು
ಕೊರೊನಾ ಸೋಂಕು ದೃಢಪಟ್ಟರೆ ವರದಿ ರೋಗಿಗೆ ತಿಳಿಯುವ ಮೊದಲೇ ಅಧಿಕಾರಿಗಳ ದಂಡು ಮನೆಯ ಮುಂದೆ ಜಮಾಯಿಸುತ್ತದೆ, ಪೊಲೀಸರು ಸೀಲ್‌ಡೌನ್‌ ಮಾಡುತ್ತಾರೆ ಎಂಬ ಮಾತಿತ್ತು. ಆರಂಭಿಕ ಕೆಲವು ಪ್ರಕರಣಗಳಲ್ಲಿ ಹೀಗೆ ಆಗಿದ್ದು ಹೌದು. ಆದರೆ, ಈಗ ಪಾಸಿಟೀವ್ ವರದಿಯನ್ನು ಹಿಡಿದುಕೊಂಡು ಸೋಂಕಿತರೇ ದಯವಿಟ್ಟು ನಮ್ಮನ್ನು ಆಸ್ಪತ್ರೆಗೆ ಸೇರಿಸಿ ಎಂದು ಕಂಡವರ ಮುಂದೆ ಬೇಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ 2000 ಕೇಸುಗಳಿರುವಾಗಲೇ ಹೀಗಾದರೆ ಮುಂದಿನ ಸ್ಥಿತಿ ಹೇಗಿರಬಹುದು?
ಹಿಂದೆ ಬಿಬಿಎಂಪಿಯು ಲ್ಯಾಬ್‌ಗಳಿಂದ ವರದಿ ಪಡೆದು ತಕ್ಷಣವೇ ಕಾರ್ಯಾಚರಣೆ ಶುರು ಮಾಡುತ್ತಿತ್ತು. ಆದರೆ, ಈಗ 24 ಗಂಟೆ ಕಾದರೂ ಆಂಬ್ಯುಲೆನ್ಸ್ ಬರುತ್ತಿಲ್ಲ ಎಂಬ ಆಪಾದನೆ ಇದೆ. ಬೆಂಗಳೂರಿನ ವ್ಯಕ್ತಿಯೊಬ್ಬರು ಖಾಸಗಿ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿಸಿಕೊಂಡು ವರದಿ ಪಾಸಿಟೀವ್ ಬಂದಿತ್ತು. ಆದರೆ, ಮುಂದಿನ 24 ಗಂಟೆಗಳ ಕಾಲ ಅವರು ಮನೆಯ ಕೋಣೆಯಲ್ಲೇ ಆತಂಕದಿಂದ ಬಂದಿಯಾಗಬೇಕಾಯಿತು. 67 ವರ್ಷದ ವೃದ್ಧರೊಬ್ಬರನ್ನು ಖಾಸಗಿ ಆಸ್ಪತ್ರೆ ಪಾಸಿಟೀವ್ ವರದಿ ಕೊಟ್ಟು ಮನೆಗೆ ಕಳುಹಿಸಿತ್ತು.
ಇದು ಬೆಂಗಳೂರಿನಲ್ಲಿ ಟೆಸ್ಟಿಂಗ್ ಸೆಂಟರ್, ಆಸ್ಪತ್ರೆಗಳು ಮತ್ತು ಬಿಬಿಎಂಪಿ ನಡುವೆ ಸಂವಹನದ ಕೊರತೆ ಇರುವುದನ್ನು ಎತ್ತಿ ತೋರಿಸಿದೆ. ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಖಾಲಿ ಇದೆ? ರೋಗಿಗಳನ್ನು ಎಲ್ಲಿಗೆ ಸೇರಿಸಬಹುದು ಎನ್ನುವ ಬಗ್ಗೆಯೂ ದಾಖಲೆ ಇಲ್ಲ. ಹೀಗಾಗಿ ಸೋಂಕಿತರನ್ನು ಒಂದು ಆಸ್ಪತ್ರೆಯಿಂದ ಇನ್ನೊಂದಕ್ಕೆ ಅಲೆದಾಡಿಸಲಾಗುತ್ತಿದೆ. ಭಾನುವಾರ ರಾತ್ರಿ ಸೋಂಕಿತರೊಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಯಿತು. ಸ್ವಲ್ಪ ಹೊತ್ತಿನಲ್ಲಿ ‘‘ಇಲ್ಲಿ ತೀವ್ರ ಸಮಸ್ಯೆ ಇರುವವರಿಗೆ ಮಾತ್ರ ಅವಕಾಶ. ಅಂಥ ಒಬ್ಬ ರೋಗಿ ಬಂದಿದ್ದಾರೆ. ನೀವು ಬೇರೆ ಆಸ್ಪತ್ರೆಗೆ ಹೋಗಿ,’’ ಎಂದರು. ಅಲ್ಲಿಂದ ಅವರನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ಒಯ್ಯಲಾಯಿತು. ಅಲ್ಲಿ ಬೆಡ್ ಇಲ್ಲದ್ದರಿಂದ ಕೊನೆಗೆ ರಾಜಾಜಿನಗರದ ಇಎಸ್ಐ ಆಸ್ಪತ್ರೆಗೆ ದಾಖಲಿಸಲಾಯಿತು.
ರಾಜ್ಯ ಆರೋಗ್ಯ ಇಲಾಖೆಯು ಕೋವಿಡ್-19 ರೋಗಿಗಳಾಗಿ ವಿಕ್ಟೋರಿಯಾ, ಬೌರಿಂಗ್, ಸಿ.ವಿ. ರಾಮನ್, ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ 1000 ಹಾಸಿಗೆಗಳ ವ್ಯವಸ್ಥೆ ಮಾಡಿರುವುದಾಗಿ ಹೇಳುತ್ತಲೇ ಇದೆ. ಆದರೆ, ವಾಸ್ತವವಾಗಿ ಅಷ್ಟು ಹಾಸಿಗೆಗಳೇ ಇಲ್ಲ!

ವೈದ್ಯರು, ಸಿಬ್ಬಂದಿ ಸಂಖ್ಯೆ ಹೆಚ್ಚಿಸಿಲ್ಲ
ರಾಜಧಾನಿಯಲ್ಲಿ ಮೊದಲ ಸೋಂಕು ಆದಾಗ ಎಷ್ಟು ವೈದ್ಯರು, ಶುಶ್ರೂಷಕರು ಮತ್ತು ಇತರೆ ಸಿಬ್ಬಂದಿ ಇದ್ದರೋ ಈಗಲೂ ಅಷ್ಟೇ ಮಂದಿ ಇದ್ದಾರೆ! ದಿನವೊಂದಕ್ಕೆ 200ರಷ್ಟು ಮಂದಿಗೆ ಸೋಂಕು ತಗುಲಿದರೂ ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ ಒದಗಿಸಿಲ್ಲ. ‘‘ರೋಗಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲು ಆ್ಯಂಬುಲೆನ್ಸ್‌ಗಳನ್ನೇ ನೀಡಿಲ್ಲ. ವೈದ್ಯಕೀಯ ಸಿಬ್ಬಂದಿಯ ಕೊರತೆಯೂ ಇದೆ. ಒಂದು ಆ್ಯಂಬುಲೆನ್ಸ್‌ನಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಿ, ವಾಪಸ್ ಆಗಲು ಮೂರ್ನಾಲ್ಕು ತಾಸು ಸಮಯ ಹಿಡಿಯುತ್ತಿದೆ. ಆಸ್ಪತ್ರೆ ಅಧಿಕಾರಿಗಳು ಕೂಡ ಸಿಬ್ಬಂದಿ ಇಲ್ಲ, ಆಮ್ಲಜನಕವಿಲ್ಲ, ಹಾಸಿಗೆ ಇಲ್ಲವೆಂಬ ಸಬೂಬು ಹೇಳುತ್ತಾರೆ. ಶವ ಸಾಗಣೆಗೆ ವಾಹನಗಳೂ ಇಲ್ಲ. ಪರಿಣಾಮ, ಮೃತರ ಪ್ರಮಾಣ ಹೆಚ್ಚುತ್ತಿದೆ,’’ ಎನ್ನುತ್ತಾರೆ ಒಬ್ಬ ಬಿಬಿಎಂಪಿ ಅಧಿಕಾರಿ.

– 20 ಸಾವಿರ ಹಾಸಿಗೆಗೆ ವ್ಯವಸ್ಥೆ –
– ವಿಕ್ಟೋರಿಯಾ, ಬೌರಿಂಗ್ ಮತ್ತಿತರ ಆಸ್ಪತ್ರೆಗಳಲ್ಲಿ 1000 ಹಾಸಿಗೆ
– 16 ಕೋವಿಡ್ ಆಸ್ಪತ್ರೆಗಳಲ್ಲಿ 1330 ಹಾಸಿಗೆ
– ಹಜ್ ಭವನದಲ್ಲಿ 400
– ಕಂಠೀರವ ಕ್ರೀಡಾಂಗಣದಲ್ಲಿ 400-500
– ಕೋರಮಂಗಲ ಕ್ರೀಡಾಂಗಣ 400
– ಆರ್ಟ್ ಆಫ್ ಲಿವಿಂಗ್ ಆಸ್ಪತ್ರೆ 400
– ಉಳಿದಂತೆ ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ, ಅರಮನೆ ಮೈದಾನದ ಕಲ್ಯಾಣ ಮಂಟಪಗಳಲ್ಲೂ ತಾತ್ಕಾಲಿಕ ಆಸ್ಪತ್ರೆಗಳ ನಿರ್ಮಾಣವಾಗಲಿದೆ.

ಸೋಂಕಿತರ ಪತ್ತೆ ಕೈಬಿಟ್ಟ ಪಾಲಿಕೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ನಿತ್ಯ ಶತಕ ದಾಟುತ್ತಿರುವ ಮಧ್ಯೆಯೇ ರೋಗಿಗಳ ಸಂಪರ್ಕಿತರನ್ನು ಪತ್ತೆ ಹಚ್ಚುವ ಕಾರ್ಯವನ್ನು ಕೈಬಿಡಲಾಗುತ್ತಿದೆ. ಪ್ರಸ್ತುತ ಕುಟುಂಬ ಸದಸ್ಯರನ್ನಷ್ಟೇ ಕ್ವಾರಂಟೈನ್ ಮಾಡಲಾಗುತ್ತಿದೆ. ಈ ಮೊದಲು ಸೋಂಕಿತರು ಪತ್ತೆಯಾದ ಕೂಡಲೇ ಹಿಂದಿನ 14 ದಿನಗಳಲ್ಲಿ ರೋಗಿಯ ಪ್ರಯಾಣ ಇತಿಹಾಸ, ಈ ಅವಧಿಯಲ್ಲಿ ಅವರ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಗುರುತಿಸಿ ಇನ್ಸ್‌ಟಿಟ್ಯೂಷನಲ್ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿತ್ತು. ಅದಕ್ಕೆಲ್ಲಾ ತಿಲಾಂಜಲಿ ನೀಡಲಾಗಿದೆ. ಪ್ರಕರಣಗಳ ಏರಿಕೆಯಿಂದಾಗಿ ಸಂಪರ್ಕಿತರ ಪತ್ತೆ ಕಾರ್ಯದಿಂದ ಪಾಲಿಕೆ ಹಿಂದೆ ಸರಿದಿದೆ. ಸಿಬ್ಬಂದಿ ಕೊರತೆ, ಕ್ವಾರಂಟೈನ್ ಕೇಂದ್ರದಲ್ಲಿ ಸ್ಥಳಾವಕಾಶವಿಲ್ಲದಿರುವುದು ಇದಕ್ಕೆ ಕಾರಣವಾಗಿದೆ.

ಆ್ಯಂಬುಲೆನ್ಸ್ ಕೊರತೆ
198 ವಾರ್ಡ್‌ಗಳಿರುವ ಪಾಲಿಕೆಯಲ್ಲಿ ಒಂದೇ ಒಂದು ಆ್ಯಂಬುಲೆನ್ಸ್‌ಗಳಿಲ್ಲ. 15 ಆ್ಯಂಬುಲೆನ್ಸ್ ಗಳನ್ನಷ್ಟೇ ಖಾಸಗಿ ಏಜೆನ್ಸಿಗಳಿಂದ ಪಡೆಯಲಾಗಿದೆ. 78 ಆರೋಗ್ಯ ಕವಚ ಆಂಬ್ಯುಲೆನ್ಸ್ ಗಳಿವೆಯಾದರೂ ಸೂಕ್ತ ಸಮಯದಲ್ಲಿ ಸಿಗುತ್ತಿಲ್ಲ. ಅದರಲ್ಲೂ ಸೋಂಕಿತರು ಮನೆಯಲ್ಲಿ ಅಥವಾ ಹೊರಗೆ ಮೃತಪಟ್ಟರೆ ಚಿತಾಗಾರಕ್ಕೆ ಕೊಂಡೊಯ್ಯಲು ಪ್ರತ್ಯೇಕ ಆ್ಯಂಬುಲೆನ್ಸ್ ಗಳಿಲ್ಲ. ಮೃತದೇಹವನ್ನು ಆ್ಯಂಬುಲೆನ್ಸ್‌ಗೆ, ಬಳಿಕ ವಿದ್ಯುತ್ ಚಿತಾಗಾರ ಇಲ್ಲವೇ ಸ್ಮಶಾನಕ್ಕೆ ಸಾಗಿಸಲು ಸಿಬ್ಬಂದಿ ವ್ಯವಸ್ಥೆ ಇಲ್ಲ.

ಸೋಂಕಿತರೇ ಕರೆಯಬೇಕು!
ಆ್ಯಂಬುಲೆನ್ಸ್‌ಗಳನ್ನು ಸೋಂಕಿತರೇ ಕರೆಸಿಕೊಳ್ಳಬೇಕು. ಹಾಗೆ ಕರೆಸಿಕೊಂಡಾಗ ಆಸ್ಪತ್ರೆಯಲ್ಲಿ ಬೆಡ್ ಇದೆಯಾ ಎಂದು ಸೋಂಕಿತರೇ ದೃಢಪಡಿಸಿಕೊಳ್ಳಬೇಕು! ಆಸ್ಪತ್ರೆಗಳಲ್ಲಿ ವಿಚಾರಿಸಿದರೆ ಬೆಡ್ ಭರ್ತಿ ಎಂಬ ಉತ್ತರ ಬರುತ್ತದೆ! ಇದರಿಂದ ಸೋಂಕಿತರು ಮತ್ತು ಕುಟುಂಬ ಸದಸ್ಯರು ಅನುಭವಿಸುತ್ತಿರುವ ನೋವು ಹೇಳತೀರದಾಗಿದೆ. ರೋಗಿಗಳನ್ನು ತಕ್ಷಣ ಕರೆದೊಯ್ಯುವಂತೆ ಅಕ್ಕಪಕ್ಕದ ನಿವಾಸಿಗಳ ಗಲಾಟೆ ಬೇರೆ.

ರಾಂಡಮ್ ಟೆಸ್ಟ್‌ಗೆ ಸಲಹೆ
ಬೆಂಗಳೂರು: ರಾಜಧಾನಿಗೆ ಕೊರೊನಾ ಸೋಂಕು ಕಾಲಿಟ್ಟು ನೂರು ದಿನಗಳು ಕಳೆದಿವೆ. ಈ ಹಂತದಲ್ಲಿ ಸೋಂಕು ಸಮುದಾಯಕ್ಕೆ ಹರಡಿರುವುದು ಸ್ಪಷ್ಟವಾಗಿದೆ.
‘‘ಈಗ ನಾವು ಸಮುದಾಯಕ್ಕೆ ಸೋಂಕು ಹರಡಿದ ಹಂತದಲ್ಲಿದ್ದೇವೆ. ಈ ಸಮಯದಲ್ಲಿ ಹೆಚ್ಚು ತೊಂದರೆಗಾಗುವವರನ್ನು ರಾರಯಂಡಮ್ ತಪಾಸಣೆಗೆ ಒಳಪಡಿಸಬೇಕಿದೆ,’’ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
ಪ್ರಸಕ್ತ ಸಂಪರ್ಕರಹಿತರಲ್ಲಿ ಸೋಂಕು ಹೆಚ್ಚುತ್ತಿರುವುದು ಅದು ಸಮುದಾಯಕ್ಕೆ ಹರಡಿರುವುದಕ್ಕೆ ಸಾಕ್ಷಿಯಾಗಿದ್ದು, ಹೀಗೆ ಹರಡಿದರೆ ಅದನ್ನು ನಿಯಂತ್ರಣಕ್ಕೆ ತರುವುದು ಕಷ್ಟ ಎಂಬ ಅಭಿಪ್ರಾಯವಿದೆ. ರಾಜ್ಯದಲ್ಲಿ 72 ಪ್ರಯೋಗಾಲಯಗಳಿದ್ದರೂ ಪ್ರತಿ ದಿನ 8 ರಿಂದ 9 ಸಾವಿರ ಗಂಟಲ ದ್ರವ ಮಾದರಿಯ ಪರೀಕ್ಷೆ ನಡೆಯುತ್ತಿದೆ. ಜೂ.21 ರಂದು ಮಾತ್ರ 12 ಸಾವಿರ ಪರೀಕ್ಷೆ ಮಾಡಲಾಗಿದೆ. ನಿತ್ಯ ಇದಕ್ಕಿಂತ ಹೆಚ್ಚಿನ ಪರೀಕ್ಷೆಗಳನ್ನು ನಡೆಸಬೇಕಿದೆ. ಹೆಚ್ಚು ಲ್ಯಾಬ್‌ಗಳು ಇರುವುದರಿಂದ ಪೊಲೀಸ್, ಬಸ್ ಚಾಲಕರು, ರೈಲ್ವೆ ಸಿಬ್ಬಂದಿ, ಸೇಲ್ಸ್ ಮನ್, ಆಟೊರಿಕ್ಷಾ ಚಾಲಕರನ್ನು ಪರೀಕ್ಷೆಗೊಳಪಡಿಸಬೇಕಿದೆ. ಈ ಜನರು ಹೆಚ್ಚು ಓಡಾಡುತ್ತಾರೆ. ಇವರನ್ನು ಪರೀಕ್ಷಿಸುವುದು ಅಗತ್ಯ,’’ ಎಂದು ಸಲಹೆ ನೀಡಿದ್ದಾರೆ ಡಾ. ಮಂಜುನಾಥ್.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top