– ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆ ರಾಜಧಾನಿಯತ್ತ ಕಾರ್ಮಿಕರ ಪಯಣ – ಹಳ್ಳಿಗಳಲ್ಲಿ ಉದ್ಯೋಗ ಖಾತ್ರಿ ಇಲ್ಲ | ನಗರದಲ್ಲಿ ಹೋಟೆಲ್, ರಿಯಾಲ್ಟಿ ಚುರುಕು.
ವಿಕ ಬ್ಯೂರೊ ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳಿಗೆ ತೆರಳಿದ್ದ ಕಾರ್ಮಿಕರು ಕಳೆದ ಕೆಲವು ದಿನಗಳಿಂದ ಮತ್ತೆ ರಾಜಧಾನಿಯತ್ತ ಮುಖ ಮಾಡುತ್ತಿರುವ ಸೂಚನೆ ಕಂಡುಬರುತ್ತಿದೆ. ಬೆಂಗಳೂರಿನಲ್ಲಿ ಜೂ.1ರಿಂದ ಹೋಟೆಲ್‌ಗಳು ತೆರೆದುಕೊಳ್ಳಲಿದ್ದು, ಕಟ್ಟಡ ನಿರ್ಮಾಣ ಸೇರಿದಂತೆ ಆರ್ಥಿಕ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಈ ವಲಯದಲ್ಲಿ ತೊಡಗಿಸಿಕೊಂಡಿದ್ದವರಲ್ಲಿ ಹೆಚ್ಚಿನವರು ಇದೀಗ ಮರಳಿ ಬರಲು ಆರಂಭಿಸಿದ್ದಾರೆ. ಕೊರೊನಾ ಭೀತಿಯಿಂದ ಇವರೆಲ್ಲರೂ ತಮ್ಮ ಊರುಗಳಿಗೆ ತೆರಳಿದ್ದರು. ಆದರೆ, ಅಲ್ಲಿಯ ದುಡಿಮೆ ಕುಟುಂಬ ಹೊರೆಯಲು ಸಾಕಾಗುವುದಿಲ್ಲ ಎಂಬ ವಾಸ್ತವ ಕೆಲವೇ ದಿನಗಳಲ್ಲಿ ಅರಿವಾಗಿತ್ತು. ಈ ನಡುವೆ, ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರ ಬೇಡಿಕೆ ಇರುವ ಉದ್ಯಮಗಳ ಮುಕ್ತ ಕಾರ್ಯಾಚರಣೆ ಆರಂಭವಾಗಿರುವುದರಿಂದ ಅವರಿಗೆ ಮತ್ತೆ ಬೆಂಗಳೂರಿನತ್ತ ಹೊರಟಿದ್ದಾರೆ ಎನ್ನಲಾಗಿದೆ. ಕೆಲವು ಪ್ರಕರಣಗಳಲ್ಲಿ ಬೆಂಗಳೂರಿನಿಂದಲೇ ಉದ್ಯೋಗದಾತರು ಕಾರ್ಮಿಕರನ್ನು ವಾಪಸ್ ಕರೆಸಿಕೊಳ್ಳುತ್ತಿದ್ದಾರೆ ಕೂಡ. ಅತಿ ಹೆಚ್ಚು ಕಾರ್ಮಿಕರಿರುವ ಕಲಬುರಗಿ ಜಿಲ್ಲೆಯಿಂದ ನಿತ್ಯ 1500ರಿಂದ 2000 ಕಾರ್ಮಿಕರು ಬೆಂಗೂರಿನತ್ತ ಸಾಗುತ್ತಿದ್ದಾರೆ. ಸುಮಾರು 20 ಬಸ್‌ಗಳು ಅಲ್ಲಿಂದ ಪ್ರತಿ ದಿನ ಹೊರಡುತ್ತಿವೆ. ಕೊಪ್ಪಳ ಜಿಲ್ಲೆಯ ಕುಷ್ಟಗಿಯಿಂದ ದಿನಕ್ಕೆ 2 ಬಸ್ ಸೇರಿದಂತೆ ಬಳ್ಳಾರಿಯಿಂದ 8 ಬಸ್‌ಗಳು ಬೆಂಗಳೂರಿಗೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿವೆ.
ರಾಜಧಾನಿಯೇ ಆಧಾರ: ದಾವಣಗೆರೆ ಜಿಲ್ಲೆಯ ಮಾಯಕೊಂಡ, ಚನ್ನಗಿರಿ, ಜಗಳೂರು ತಾಲೂಕಿನ ಕೆಲ ಭಾಗದಲ್ಲಿ ಬೆಂಗಳೂರು ಇತರೆಡೆ ಉದ್ಯೋಗ ಕಂಡು ಕೊಂಡಿದ್ದರು. ಇದರಲ್ಲಿ ಕೆಲ ಕೌಶಲ್ಯ ಕಾರ್ಮಿಕರಿದ್ದು ಇಂತವರು ಮತ್ತೆ ಬೆಂಗಳೂರಿಗೆ ವಾಪಸಾಗುತ್ತಿದ್ಧಾರೆ. ದಾವಣಗೆರೆಯಿಂದ ಬೆಂಗಳೂರಿಗೆ ಗುರುವಾರದವರೆಗೂ 6,625 ಮಂದಿ ಪ್ರಯಾಣ ಮಾಡಿದ್ದಾರೆ. ಈ ಪೈಕಿ ಕಾರ್ಮಿಕರೇ ಹೆಚ್ಚಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಹಾಗೂ ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿ, ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿ ಭಾಗದ ಹೆಚ್ಚಿನವರು ದಿನೇ ದಿನೆ ರಾಜಧಾನಿಯತ್ತ ಮುಖ ಮಾಡುತ್ತಿದ್ದಾರೆ.
ನಿತ್ಯ 1000 ಮಂದಿ ಕಟ್ಟಡ ಕಾರ್ಮಿಕರು ಮಾತ್ರವಲ್ಲದೆ ಖಾಸಗಿ ನೌಕರರು, ಕಾರ್ಖಾನೆಗಳ ನೌಕರರು ಹಾಗೂ ಇನ್ನಿತರ ಉದ್ಯೋಗಿಗಳು ಸೇರಿ ನಿತ್ಯ 1000 ಮಂದಿ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದಾರೆ. ನಿತ್ಯ 30 ಕೆಎಸ್ಆರ್‌ಟಿಸಿ ಬಸ್‌ಗಳು ಬೆಂಗಳೂರಿಗೆ ತೆರಳುತ್ತಿವೆ. ಇನ್ನು ಮಂಡ್ಯ ಜಿಲ್ಲೆಯಿಂದಲೂ ಐಟಿಬಿಟಿ ಕಂಪೆನಿ, ಕಚೇರಿ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿದ್ದ ಕಾರ್ಮಿಕರು ಬೆಂಗಳೂರಿಗೆ ವಾಪಸ್ ಹೋಗುತ್ತಿದ್ದಾರೆ.
ಇವರಿಗೆ ಗೋವಾ, ಮಹಾರಾಷ್ಟ್ರ ಮೆಚ್ಚು: ಬಾಗಲಕೋಟೆ, ವಿಜಯಪುರ, ಕೊಪ್ಪಳ, ರಾಯಚೂರು ಮತ್ತು ಬೆಳಗಾವಿ ಜಿಲ್ಲೆಯ ಬಹಳಷ್ಟು ಕಾರ್ಮಿಕರು ಬೆಂಗಳೂರಿಗಿಂತ ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಹೆಚ್ಚು ವಲಸೆ ಹೋಗುತ್ತಾರೆ. ಇದೀಗ ಈ ರಾಜ್ಯಗಳಿಂದಲೇ ಸಾಕಷ್ಟು ಜನರು ವಾಪಸ್ ಕೂಡ ಬಂದಿದ್ದಾರೆ. ಬಹುಶಃ ಕೊರೊನಾ ಆರ್ಭಟ ನಿಂತ ತಕ್ಷ ಣ ಅವರೆಲ್ಲರೂ ಮತ್ತೆ ವಾಪಸ್ ಹೋಗುವ ಸಾಧ್ಯತೆಗಳು ದಟ್ಟವಾಗಿವೆ.
ಹೊಟೇಲ್‌ಗೆ ಬೇಡಿಕೆ: ಬೆಂಗಳೂರಿನ ಹೊಟೇಲ್ ಉದ್ಯಮದಲ್ಲಿ ಮಾಲೀಕರಾಗಿ ಮತ್ತು ಹೋಟೆಲ್ ಕಾರ್ಮಿಕರಾಗಿ ಉಡುಪಿ ಜಿಲ್ಲೆಯವರದೇ ದೊಡ್ಡ ಪಾಲು. ಜೂನ್ 1ರಂದು ಹೋಟೆಲ್ ಆರಂಭವಾದರೆ ಅವರಲ್ಲಿ ಹೆಚ್ಚಿನ ಮಂದಿ ಮರಳಿ ಬೆಂಗಳೂರಿಗೆ ಬರುತ್ತಿದ್ದಾರೆ.
ಬೆಂಗಳೂರೇ ಯಾಕೆ ಬೇಕು?- ರಾಜಧಾನಿಯಲ್ಲಿ ವರ್ಷ ಪೂರ್ತಿ ಉದ್ಯೋಗ ದೊರೆಯುತ್ತದೆ- ಕಟ್ಟಡ ನಿರ್ಮಾಣ ಕಾರ್ಯ ನಿರಂತರ. ಹೆಚ್ಚಿನ ಮಾನವ ಸಂಪನ್ಮೂಲ ಬೇಡುತ್ತದೆ.- ಹೊಟೇಲ್ ಉದ್ಯಮವೂ ಕಾರ್ಮಿಕರಿಗೆ ಆಶ್ರಯ ನೀಡುತ್ತದೆ.- ಬೃಹತ್ ಕೈಗಾರಿಕೆಗಳು ಬೆಂಗಳೂರಲ್ಲೇ ಹೆಚ್ಚಿರುವುದು.- ಹೆಚ್ಚು ಉದ್ಯೋಗ ಕಲ್ಪಿಸುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಯಥೇಚ್ಛ- ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದಲ್ಲೂಹೆಚ್ಚಿನ ಉದ್ಯೋಗ ಅವಕಾಶ- ಆಟೊ, ಟ್ಯಾಕ್ಸಿ, ಓಲಾ, ಉಬರ್‌ನಂಥ ಸಾರಿಗೆ ಕ್ಷೇತ್ರದಲ್ಲೂ ಉದ್ಯೋಗ ಅವಕಾಶ
ಹಳ್ಳಿಗಳಲ್ಲೇನು ಕಷ್ಟ?- ಬಹಳಷ್ಟು ಜನರಿಗೆ ಹಳ್ಳಿಗಳಲ್ಲಿ ಕೃಷಿಗೆ ಜಮೀನು ಇರುವುದಿಲ್ಲ. – ಒಂದೊಮ್ಮೆ ಜಮೀನು ಇದ್ದರೂ ಕೃಷಿ ಲಾಭದಾಯಕವಾಗಿಲ್ಲ. – ಹತ್ತಿರದ ಪಟ್ಟಣ, ಜಿಲ್ಲಾ ಕೇಂದ್ರಗಳಲ್ಲಿ ಎಲ್ಲರಿಗೂ ಉದ್ಯೋಗ ದೊರೆಯುವುದಿಲ್ಲ. – ಒಂದೊಮ್ಮೆ ಹತ್ತಿರದ ನಗರಗಳಲ್ಲಿ ಉದ್ಯೋಗ ದೊರೆತರೂ ವೇತನ ಸಾಕಾಗುವುದಿಲ್ಲ- ಕುಟುಂಬ ಸಲಹಲು ರಾಜಧಾನಿ ಬೆಂಗಳೂರು ಬಹಳಷ್ಟು ಜನರಿಗೆ ಅನಿವಾರ್ಯ.- ಗ್ರಾಮೀಣ ಪರಿಸರದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕೊರತೆ- ದುಡಿಯುವ ಕೈಗಳಿಗೆ ಯಾವ ಉದ್ಯೋಗವೂ ದೊರೆಯುವುದಿಲ್ಲ
ಜೂನ್ 1ರಿಂದ ಹೋಟೆಲ್‌ಗಲು ಆರಂಭಗೊಳ್ಳುವುದರಿಂದ ನಮಗೆ ಶೇ.50ರಷ್ಟು ಕಾರ್ಮಿಕರ ಕೊರತೆ ಎದುರಾಗಲಿದೆ. ಬೆಂಗಳೂರಿನಲ್ಲಿ 20 ಸಾವಿರಕ್ಕೂ ಹೆಚ್ಚಿನ ಹೋಟೆಲ್‌ಗಳು ಇದ್ದು, ಇಲ್ಲಿ ಕೆಲಸ ಮಾಡುತ್ತಿರುವರ ಪೈಕಿ ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದ ಶೇ.10-15ರಷ್ಟು ಕಾರ್ಮಿಕರು ಇದ್ದಾರೆ. -ಚಂದ್ರಶೇಖರ ಹೆಬ್ಬಾರ್ ಅಧ್ಯಕ್ಷರು, ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘ.