ಹೊಸದಿಲ್ಲಿ: ಬಡ ಕುಟುಂಬಗಳ ಆರೋಗ್ಯ ರಕ್ಷಣೆಯ ಮಹಾತ್ವಾಕಾಂಕ್ಷೆಯೊಂದಿಗೆ 2018ರಲ್ಲಿಶುರುವಾದ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯಡಿ ಚಿಕಿತ್ಸೆ ಪಡೆದ ಫಲಾನುಭವಿಗಳ ಸಂಖ್ಯೆ 1 ಕೋಟಿಯ ಮೈಲುಗಲ್ಲುದಾಟಿದೆ. 53 ಕೋಟಿ ಜನರು ಆಯುಷ್ಮಾನ್ ಕಾರ್ಡ್ ಪಡೆದುಕೊಂಡಿದ್ದಾರೆ.
ದೇಶದ 21,565 ಆಸ್ಪತ್ರೆಗಳಲ್ಲಿಈ ಯೋಜನೆಯಡಿ ಉಚಿತ ಆರೋಗ್ಯ ಸೇವೆ ಪಡೆದ ಫಲಾನುಭವಿಗಳ ಸಂಖ್ಯೆ ಒಂದು ಕೋಟಿ ದಾಟುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯವನ್ನು ಟ್ವಿಟರ್ ಮೂಲಕ ಪ್ರಕಟಿಸಿ ಜನರ ಆರೋಗ್ಯ ರಕ್ಷಣೆ ಬಗ್ಗೆ ಸರಕಾರಕ್ಕಿರುವ ಆದ್ಯತೆಯನ್ನು ಇದು ತೋರಿಸುತ್ತದೆ ಎಂದು ಹೇಳಿದರು. ‘‘ಈ ಯೋಜನೆಯಡಿ ಫಲಾನುಭವಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ವೈದ್ಯರು, ದಾದಿಯರು ಹಾಗೂ ಆರೋಗ್ಯ ಕಾರ್ಯಕರ್ತರ ಸೇವೆ ಅನುಪಮವಾದುದು. ದೇಶದ ಯಾವುದೇ ಭಾಗದಲ್ಲೂ ಆಯುಷ್ಮಾನ್ ಕಾರ್ಡ್ ಮೂಲಕ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಪಡೆಯಲು ಇರುವ ಅನುಕೂಲವೇ ಇದರ ಯಶಸ್ಸಿಗೆ ಕಾರಣವಾಗಿದೆ. ಇದು ಜನತೆಯ ಅದರಲ್ಲೂ ಬಡವರ ವಿಶ್ವಾಸ ಗೆದ್ದಿದೆ,’’ ಎಂದು ಹೇಳಿದರು.
ವಿಡಿಯೊ ಸಂವಾದ
ಒಂದು ಕೋಟಿಯ ಕೊನೆಯ ಚಿಕಿತ್ಸಾ ಫಲಾನುಭವಿ ಮೇಘಾಲಯದ ಪೂಜಾ ಥಾಪರ್ ಅವರ ಜತೆ ಪ್ರಧಾನಿ ವಿಡಿಯೊ ಸಂವಾದ ನಡೆಸಿ ಅವರ ಅನುಭವಗಳ ಮಾಹಿತಿ ಪಡೆದುಕೊಂಡರು. ಯೋಧನ ಪತ್ನಿಯಾಗಿರುವ ಪೂಜಾ ಅವರು ಆರೋಗ್ಯ ಸಮಸ್ಯೆ ಹಿನ್ನೆಲೆ ಶಿಲ್ಲಾಂಗ್‌ನ ಆಸ್ಪತ್ರೆಗೆ ಇತ್ತೀಚೆಗೆ ದಾಖಲಾಗಿ ಆಯುಷ್ಮಾನ್ ನಡಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಲಾಕ್‌ಡೌನ್ ನಿಮಿತ್ತ ಪತಿ ಮಣಿಪುರದಲ್ಲಿಯೇ ಸಿಲುಕಿದ್ದರು. ಆಸ್ಪತ್ರೆಯಲ್ಲಿದ್ದ ವೇಳೆ ಇಬ್ಬರು ಮಕ್ಕಳಿಗೆ ನೆರೆಹೊರೆಯವರೇ ಆಸರೆಯಾಗಿದ್ದರು. ಪೂಜಾ ತಮ್ಮ ಈ ಅನುಭವ ಪ್ರಧಾನಿ ಜತೆ ಹಂಚಿಕೊಂಡರು.
ಇಂದು ಆರೋಗ್ಯ ಧಾರಾ ವೆಬಿನಾರ್
ಮೇ 21ರಂದು ಆರೋಗ್ಯ ಧಾರಾ ವೆಬಿನಾರ್ ಸಿರೀಸ್ಅನ್ನು ಸರಕಾರ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಹರ್ಷವರ್ಧನ್ ಅವರು ವಾಟ್ಸ್ಆ್ಯಪ್‌ನಲ್ಲಿ ‘ಆಸ್ಕ್ ಆಯುಷ್ಮಾನ್’ ಎಂಬ ಹೆಸರಿನ ಚಾಟ್ ಚಾಟ್ಗೆ ಚಾಲನೆ ನೀಡಲಿದ್ದು ಇದರಿಂದ ಇ-ಕಾರ್ಡ್, ಸಮೀಪದ ಆಸ್ಪತ್ರೆ ವಿವರ, ಫೀಡ್ ಬ್ಯಾಕ್ ಶೇರ್ ಮಾಡುವುದು ಇತ್ಯಾದಿ ಮಾಹಿತಿ ವಿನಿಮಯಕ್ಕೆ ಅನುಕೂಲವಾಗಲಿದೆ.
13,412 ಕೋಟಿ ರೂ. – ಆಯುಷ್ಮಾನ್ ಕಾರ್ಡ್‌ನಡಿ 1 ಕೋಟಿ ಫಲಾನುಭವಿಗಳು ಪಡೆದುಕೊಂಡ ಚಿಕಿತ್ಸೆಗೆ ಸರಕಾರ ಭರಿಸಿದ ವೆಚ್ಚ.
ಕೊರೊನಾ ಸೋಂಕಿತರಿಗೆ ಅನುಕೂಲ
ಕೊರೊನಾ ಸೋಂಕಿತರಿಗೆ ಈ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆ. ಇದರಡಿ 3000ಕ್ಕೂ ಹೆಚ್ಚು ಜನ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರೆ, 2,132ಕ್ಕೂ ಹೆಚ್ಚು ಸೋಂಕಿತರಿಗೆ ಇದರಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಹೇಳಿದೆ.