– ರಾಮಸ್ವಾಮಿ ಹುಲಕೋಡು.
ಇತ್ತೀಚೆಗಷ್ಟೇ ಬೆಂಗಳೂರಿನ ಸಂಸ್ಥೆಯೊಂದು ದೇಶದಲ್ಲಿಯೇ ಮೊತ್ತಮೊದಲ ಆಯುರ್ವೇದದ ಟೆಲಿಮೆಡಿಸಿನ್ ಸರ್ವಿಸ್ ಆರಂಭಿಸಿದೆ. ಜರ್ಮನಿ, ರಷ್ಯಾ, ಅಮೆರಿಕ, ಉತ್ತರ ಐರೋಪ್ಯ ರಾಷ್ಟ್ರಗಳಿಂದ ಒಂದರ ಹಿಂದೊಂದರಂತೆ ಕರೆಗಳು ಬರುತ್ತಿದ್ದು, ಆಯುರ್ವೇದ ಚಿಕಿತ್ಸಾ ಪದ್ಧತಿಯ ಬಗ್ಗೆ ತಿಳಿದುಕೊಳ್ಳುವುದರ ಜತೆಗೆ, ಕೆಲವರು ಚಿಕಿತ್ಸೆಯನ್ನೂ ಪಡೆಯಲಾರಂಭಿಸಿದ್ದಾರೆ. ಆನ್‌ಲೈನ್‌ನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿಗಳಿಗೆ ಬೇಡಿಕೆ ದುಪ್ಪಟ್ಟು ಹೆಚ್ಚಾಗಿದೆ. ಮಾರುಕಟ್ಟೆ ಇನ್ನಷ್ಟು ವಿಸ್ತರಿಸುವ ಸಾಧ್ಯತೆಗಳಿವೆ ಎನ್ನುತ್ತಾರೆ ಕೆಲವು ಆನ್‌ಲೈನ್ ಔಷಧ ಮಾರಾಟ ಕಂಪನಿಗಳ ವಕ್ತಾರರು. ಕೊರೊನಾ ಕಾಣಿಸಿಕೊಂಡ ನಂತರ ಜಗತ್ತಿನಾದ್ಯಂತ ಆಯುರ್ವೇದದ ಕುರಿತು ಸಾಕಷ್ಟು ಚರ್ಚೆ ನಡೆದಿದೆ. ಎಷ್ಟರ ಮಟ್ಟಿಗೆ ಎಂದರೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಬ್ರಿಟನ್ ರಾಜಕುಮಾರ ಚಾರ್ಲ್ಸ್ ಅವರಿಗೆ ಆಯುರ್ವೇದದ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಸುಳ್ಳು ಸುದ್ದಿ ಹರಡಲೂ ಕಾರಣವಾಗಿತ್ತು!
ಆಯುರ್ವೇದದಲ್ಲಿ ವೈರಾಣು
ಮನುಷ್ಯನಿಗೆ ಬರುವ ರೋಗಗಳಿಗೆ ಮೂರು ಮುಖ್ಯ ಕಾರಣಗಳ ಪೈಕಿ ಕ್ರಿಮಿಜನ್ಯ ಕೂಡ ಒಂದು. ಕ್ರಿಮಿಗಳಲ್ಲಿ ಎರಡು ವಿಧ. ಒಂದು ಬರಿಗಣ್ಣಿಗೆ ಕಾಣಬಹುದಾದ ದೃಷ್ಟಾತ್ಹಾ ಮತ್ತು ಕಾಣದೇ ಇರುವ ಅದೃಷ್ಠಾತ್ಹಾ. ಆಯುರ್ವೇದಲ್ಲಿ ಈ ಬಗ್ಗೆ ಸಾಕಷ್ಟು ವಿವರಗಳಿವೆ. ಚರಕ ಸಂಹಿತೆಯ ‘ನಿದಾನ ಸ್ಥಾನ’ದಲ್ಲಿ ‘ಜನಪದೋಧ್ವಂಸನೀಯ’ ವ್ಯಾಧಿಗಳ ವಿವರ ನೀಡಲಾಗಿದೆ. ಅಂದರೆ ಕೊರೊನಾ ದಂತೆಯೇ ಒಬ್ಬರಿಂದ ಮತ್ತೊಬ್ಬರಿಗೆ ಹರಡಿ ಸಮುದಾಯಕ್ಕೆ ಹರಡುವ ರೋಗಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಸುಶ್ರುತ ಸಂಹಿತೆಯಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ವಿಧಾನಗಳನ್ನು ತಿಳಿಸಲಾಗಿದೆ. ಆಯುರ್ವೇದದ ಮೂಲ ಉದ್ದೇಶಗಳಲ್ಲಿ ಒಂದು ‘ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಂ’ ಅಂದರೆ ಆರೋಗ್ಯವಂತರ ಆರೋಗ್ಯವನ್ನು ಕಾಪಾಡುವುದು. ರೋಗ ಬಂದ ಮೇಲೆ ಎಚ್ಚರಾಗುವುದಕ್ಕಿಂತ ರೋಗ ಬಾರದಂತೆ ತಡೆಯಬೇಕು ಎನ್ನುತ್ತದೆ ಆಯುರ್ವೇದ.
ಪ್ರಧಾನಿ ಮೋದಿ ಬೆಂಬಲ
ಲಾಕ್‌ಡೌನ್ ಜಾರಿ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುರ್ವೇದದಲ್ಲಿ ಹೇಳಿರುವ ಕ್ರಮಗಳನ್ನು ಅನುಸರಿಸುವಂತೆ ಕರೆ ನೀಡಿದ್ದರು. ಕಳೆದ ಮನ್ ಕೀ ಬಾತ್‌ನಲ್ಲಿ ಈ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡ ಅವರು, ಯೋಗದ ಮಾದರಿಯಲ್ಲೇ ಮುಂದಿನ ದಿನಗಳಲ್ಲಿ ಜಗತ್ತು ಆಯುರ್ವೇದದ ಉಪಯೋಗಗಳನ್ನೂ ಅರ್ಥಮಾಡಿಕೊಳ್ಳಲಿದೆ ಎಂದಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಜನರು ಆಯುರ್ವೇದ ಮತ್ತು ಯೋಗದ ಮಹತ್ವವನ್ನು ಅರಿಯುವುದಕ್ಕೆ ವಿಶೇಷ ಗಮನ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಯುರ್ವೇದದಲ್ಲಿ ಹೇಳಿರುವ ಕ್ರಮಗಳ ಕುರಿತು ಚರ್ಚೆ ನಡೆಯುತ್ತಿದೆ ಎಂಬುದರ ಕುರಿತು ಗಮನ ಸೆಳೆದ ಅವರು, ಆಯುರ್ವೇದಲ್ಲಿ ಹೇಳಿರುವ ಕ್ರಮಗಳ ವೈಜ್ಞಾನಿಕ ಮಾಹಿತಿಯನ್ನು ಜಗತ್ತಿಗೆ ಸಾರುವ ಮೂಲಕ ನಮ್ಮ ಯುವಜನರು ಇದರ ಮಹತ್ವವನ್ನು ಎಲ್ಲರಿಗೂ ಅರ್ಥಮಾಡಿಸಬೇಕಾಗಿದೆ ಎಂದಿದ್ದರು. ಕೊರೊನಾ ಹರಡುವಿಯನ್ನು ತಡೆಯಲು ಆಯುಷ್ ಇಲಾಖೆ ನೀಡಿರುವ ಸೂಚನೆಗಳನ್ನು ಅನುಸರಿಸುವಂತೆ ಕೂಡ ಕರೆ ನೀಡಿದ್ದರು.
ಕೊರೊನಾ ಕಾಣಿಸಿಕೊಂಡ ನಂತರ ಆಯುಷ್ ಔಷಧಗಳ ತಯಾರಕರೊಂದಿಗೆ ಮತ್ತು ವೈದ್ಯರೊಂದಿಗೆ ವಿಡಿಯೋ ಕಾನ್ಪರೆನ್ಸ್‌ನಲ್ಲಿ ಚರ್ಚೆ ನಡೆಸಿರುವ ಪ್ರಧಾನಿ, ಭಾರತೀಯ ಪಾರಂಪರಿಕ ವೈದ್ಯ ಪದ್ಧತಿಯಲ್ಲಿನ ಕ್ರಮಗಳು ಸೋಂಕು ನಿವಾರಣೆಗೆ ತುಂಬಾ ಪರಿಣಾಮಕಾರಿಯಾಗಿದೆ. ಇದಕ್ಕೆ ಜಾಗತಿಕ ಮಟ್ಟದ ಪ್ರಚಾರ ಕಲ್ಪಿಸಲು ಇದು ಸಕಾಲ ಕೂಡ ಹೌದು. ಇದಕ್ಕಾಗಿ ಆಯುಷ್ ವಿಜ್ಞಾನಿಗಳು, ಐಸಿಎಂಆರ್ ಸಿಎಸ್ಐಆರ್ ಮತ್ತು ಇತರೆ ಸಂಶೋಧನಾ ಸಂಸ್ಥೆಗಳು ಒಗ್ಗೂಡಿ ಪುರಾವೆ ಆಧರಿಸಿದ ಸಂಶೋಧನೆ ನಡೆಸಬೇಕಿದೆ ಎಂದು ಸೂಚಿಸಿದ್ದರು. ಅಗತ್ಯ ಬಿದ್ದರೆ ಕೊರೊನಾ ನಿಯಂತ್ರಣಕ್ಕೆ ಆಯುಷ್ನ ಖಾಸಗಿ ವೈದ್ಯರ ನೆರವು ಪಡೆಯುವುದಾಗಿಯೂ ಹೇಳಿದ್ದರು. ಮೋದಿ ಅಧಿಕಾರ ವಹಿಸಿಕೊಂಡ ನಂತರ ಆಯುಷ್ ಇಲಾಖೆಗೆ ಹೊಸ ರೂಪ ನೀಡಿದ್ದು, 2017ರಲ್ಲಿ ‘ಅಖಿಲ ಭಾರತ ಆಯುರ್ವೇದ ಸಂಸ್ಥೆ’ಯನ್ನೂ ಹುಟ್ಟುಹಾಕಿದ್ದಾರೆ.
ಎಲ್ಲರ ಚಿತ್ತ ಭಾರತದತ್ತ
ಬೇರೆ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಕೊರೊನಾ ಸೋಂಕು ಮಂದಗತಿಯಲ್ಲಿ ಹರಡುತ್ತಿದೆ. ಸಾವಿನ ಪ್ರಮಾಣವೂ ತೀರಾ ಕಡಿಮೆ. ಪ್ರಪಂಚದ ಜನಸಂಖ್ಯೆಯಲ್ಲಿ ಶೇ. 18 ಮಂದಿ ಭಾರತದಲ್ಲಿಯೇ ಇದ್ದರೂ, ಜಗತ್ತಿನ ಸೋಂಕಿತರಲ್ಲಿ ಭಾರತೀಯರ ಪಾಲು ಶೇ.1 ಮಾತ್ರ. ಇದು ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡಲು ಕಾರಣವಾಗಿದೆ.
ಇಲ್ಲಿಯ ಜೀವನಶೈಲಿ, ಆಹಾರ ಪದ್ಧತಿ ಮತ್ತು ಸಾಂಪ್ರದಾಯಿಕ ಚಿಕಿತ್ಸಾ ವಿಧಾನ ಸಹಜವಾಗಿಯೇ ಎಲ್ಲರಲ್ಲಿಯೂ ಕುತೂಹಲ ಮೂಡಿಸಿದ್ದು, ಆಯುರ್ವೇದದ ಬಗ್ಗೆ ಆಸಕ್ತಿ ಮೂಡಲು ಕಾರಣವಾಗಿದೆ. ಭಾರತವೆಂದರೆ ಮೂಗು ಮುರಿಯುತ್ತಿದ್ದ ಪಾಶ್ಚಿಮಾತ್ಯ ದೇಶಗಳ ಮಾಧ್ಯಮಗಳು ಆಯುರ್ವೇದ ಹೇಳುವ ಕಷಾಯ ಮತ್ತು ಸಾಂಬಾರ ಪದಾರ್ಥಗಳಲ್ಲಿರುವ ಔಷಧಿಯ ಗುಣಗಳ ಬಗ್ಗೆ ಲೇಖನ ಪ್ರಕಟಿಸಲಾರಂಭಿಸಿವೆ. ಏಪ್ರಿಲ್ ಮೊದಲ ವಾರದಲ್ಲಿ ಬಿಬಿಸಿ ‘ಅರಿಶಿನ ಮತ್ತಿತರ ಸಾಂಬಾರ ಪದಾರ್ಥಗಳ ಸೇವನೆಯಿಂದ ಲಾಭವಿದೆಯೇ?’ ಎಂಬ ಲೇಖನ ಪ್ರಕಟಿಸಿ, ಔಷಧ-ಗುಣಗಳ ಬಗ್ಗೆ ವಿವರಿಸಿತ್ತು!
‘ಯುರೋಪಿಯನ್ ಅಕಾಡೆಮಿ ಆಫ್ ಆಯುರ್ವೇದ’ದ ಪ್ರಕಾರ ಐರೋಪ್ಯ ರಾಷ್ಟ್ರಗಳಲ್ಲಿ ಇತ್ತೀಚಿನ ವರ್ಷದಲ್ಲಿ ಆಯುರ್ವೇದದ ಬಗ್ಗೆ ಆಸಕ್ತಿ ಹೆಚ್ಚಿದ್ದು, ಆಧುನಿಕ ವೈದ್ಯ ಪದ್ಧತಿಯ ಜತೆಗೆ ಆಯುರ್ವೇದವನ್ನೂ ಅಳವಡಿಸಿಕೊಳ್ಳಲು ಜನತೆ ಉತ್ಸುಕರಾಗಿದ್ದಾರೆ. ಅಲ್ಲಿನಡೆದ ಹಲವಾರು ಸಮೀಕ್ಷೆಗಳು ಇದನ್ನು ಸ್ಪಷ್ಟಪಡಿಸಿವೆ.
ಕೊರೊನಾ-ಆಯುರ್ವೇದ
ಕೊರೊನಾ ವೈರಸ್ ಸೋಂಕಿಗೆ ಆಯುರ್ವೇದದಲ್ಲಿ ಮದ್ದಿಲ್ಲ. ಈ ಬಗ್ಗೆ ಪ್ರಚಾರ ನಡೆಸುವುದು ತಪ್ಪು ಎಂದು ಈಗಾಗಲೇ ಆಯುಷ್ ಇಲಾಖೆ ಪ್ರಕಟಣೆ ಹೊರಡಿಸಿ ಎಚ್ಚರಿಸಿದೆ. ಆದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳುವುದರ ಮೂಲಕ ಕೊರೊನಾ ವೈರಸ್ ದಾಳಿಯನ್ನು ಸಮರ್ಥವಾಗಿ ಎದುರಿಸಬಹುದಾಗಿದೆ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಹೀಗಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಯುರ್ವೇದಲ್ಲಿ ಹೇಳಿರುವ ಕ್ರಮಗಳನ್ನು ಮತ್ತು ಔಷಧಗಳ ಕುರಿತು ಈಗ ಪ್ರಚಾರ ಮಾಡಲಾಗುತ್ತಿದೆ. ಗುಜರಾತ್ ಮತ್ತು ಕೇರಳ ಸರಕಾರಗಳು ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿವೆ.
ಗುಜರಾತ್‌ನಲ್ಲಿ ಚಿಕಿತ್ಸೆಗೆ ಬಳಕೆ
ಅಹಮದಾಬಾದ್‌ನಲ್ಲಿ ಶೇ.75 ರಷ್ಟು ಸೋಂಕಿನ ಲಕ್ಷಣಗಳಿರುವ ರೋಗಿಗಳಿಗೆ ಪ್ರಾಯೋಗಿಕವಾಗಿ ಆಯುರ್ವೇದದ ಔಷಧಗಳನ್ನು ನೀಡಲಾಗುತ್ತಿದೆ. ಔಷಧ ಪಡೆದ ರೋಗಿಗಳು ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯದ ಆಯುಷ್ ಇಲಾಖೆ ತಿಳಿಸಿದೆ. ಕ್ವಾರಂಟೈನ್‌ನಲ್ಲಿದ್ದ ಸುಮಾರು 8 ಸಾವಿರ ಮಂದಿಗೆ ಆಯುರ್ವೇದದ ಔಷಧ ನೀಡಲಾಗಿತ್ತು. ರಾಜ್ಯದ ಜನರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು 1.26 ಕೋಟಿ ಜನರಿಗೆ ಔಷಧಿ ವಿತರಿಸಲಾಗಿದೆ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಯಂತಿ ರವಿ ತಿಳಿಸಿದ್ದಾರೆ.
ಕೇರಳದಲ್ಲಿ ಕ್ಲಿನಿಕ್
ಪ್ರಪಂಚದಲ್ಲಿಯೇ ಆಯುರ್ವೇದ ಚಿಕಿತ್ಸೆಗೆ ಹೆಸರು ಮಾಡಿರುವ ಕೇರಳ ಕೊರೊನಾ ನಿಯಂತ್ರಿಸುವಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಸಮರ್ಥವಾಗಿ ಬಳಸಿಕೊಂಡಿದೆ. ಆಯುರ್ವೇದ ಮೆಡಿಕಲ್ ಅಸೋಸಿಯೇಷನ್ ಆಫ್ ಇಂಡಿಯಾ, ಕೇರಳದಲ್ಲಿ ಇಮ್ಯುನಿಟಿ ಹೆಚ್ಚಿಸುವ ಕ್ಲಿನಿಕ್‌ಗಳನ್ನು ರಾಜ್ಯದಾದ್ಯಂತ ಆರಂಭಿಸುತ್ತಿದೆ. ಇಲ್ಲಿ ಚಿಕಿತ್ಸೆ ಉಚಿತ. ಸುಮಾರು 6 ಸಾವಿರ ಆಯುರ್ವೇದ ಔಷಧ ಮಳಿಗೆ, 1500 ಕ್ಲಿನಿಕ್‌ಗಳ ಸಹಾಯ ಪಡೆದುಕೊಂಡು ಈ ಯೋಜನೆ ಜಾರಿಗೆ ತರಲಾಗುತ್ತಿದೆ. ಪ್ರತಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಆಸ್ಪತ್ರೆಗಳಲ್ಲಿ ‘ಆಯುರ್ ರಕ್ಷಾ’ ಎಂಬ ಕ್ಲಿನಿಕ್‌ಗಳನ್ನು ಆರಂಭಿಸಲಿದೆ. ರಾಜ್ಯದಲ್ಲಿನ ಮೂರು ಆಯುರ್ವೇದ ಕಾಲೇಜುಗಳನ್ನು ರೆಸ್ಪಾನ್ಸ್ ಸೆಲ್‌ಗಳಾಗಿ ಪರಿವರ್ತಿಸಲಾಗಿದ್ದು, ನಾಲ್ಕು ಹಂತದಲ್ಲಿ ಆಯುರ್ವೇದ ಚಿಕಿತ್ಸೆ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ.
ರಾಜ್ಯದಲ್ಲಿ ಮೀನ-ಮೇಷ
ಕರ್ನಾಟಕ ರಾಜ್ಯ ಸರಕಾರ ಆಯುರ್ವೇದ ಔಷಧಿ ಬಳಸುವ ನಿಟ್ಟಿನಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದಷ್ಟೇ ಮುಖ್ಯಮಂತ್ರಿ ಹೇಳಿದ್ದಾರೆ.
ಚೀನಾದಲ್ಲಿ ಯಶಸ್ವಿ?
ಚೀನಾದಲ್ಲಿ ಸಾಂಪ್ರದಾಯಿಕ ಔಷಧ ಬಳಕೆಯ ಮೂಲಕ ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ರೋಗ ಹರಡದಂತೆ ನೋಡಿಕೊಳ್ಳಲಾಗಿದೆ ಎಂದು ವರದಿಗಳಿವೆ. ಸೋಂಕಿನ ತೀವ್ರತೆ ಕಡಿಮೆ ಇರುವವವ ಪ್ರಮಾಣವನ್ನು ಈ ಔಷಧಿ ಶೇ. 27.4ರಷ್ಟು ಹೆಚ್ಚಿಸಿದೆ ಎಂದು ಅಧ್ಯಯನಗಳು ಹೇಳುತ್ತಿವೆ.
ಚೀನಾದ ಈ ಯಶಸ್ಸಿನಿಂದ ಭಾರತ ಕೂಡ ಪಾಠ ಕಲಿಯಬಹುದು. ಏಕೆಂದರೆ ಅಲ್ಲಿಯ ಸಾಂಪ್ರದಾಯಿಕ ಔಷಧ ಪದ್ಧತಿಗೂ ನಮ್ಮ ಆಯುರ್ವೇದಕ್ಕೂ ಸಾಕಷ್ಟು ಸಾಮ್ಯತೆ ಇದೆ. ಅಲ್ಲಿ ಉಸಿರಾಟದ ತೊಂದರೆ ಇದ್ದವರಿಗೆ ನೀಡಲಾಗುವ ಔಷಧಿಗಳಲ್ಲಿ ಎಫೆಡ್ರಾ ಎಂಬ ಜಾತಿಯ ಕುರುಚಲು ಗಿಡದಿಂದ ತಯಾರಿಸಿದ ಔಷಧಿಯೂ ಒಂದು. ಇದು ನಮ್ಮ ಆಯುರ್ವೇದದ ‘ಸೋಮ ಕಲ್ಪ’ವನ್ನೇ ಹೋಲುತ್ತದೆ. ಅಂತೆಯೇ ‘ಮು ಝಿಯಾಂಗ್’ ಎಂಬ ಔಷಧಿ ನಮ್ಮ ಯುನಾನಿಯ ‘ಕುಶ್ತಾ’ದಂತೆ. ಅತಿಮಧುರ ಅಥವಾ ಜೇಷ್ಠಮಧುವಿನ ಗಿಡದ ಬೇರಿನಿಂದ ಇಲ್ಲಿನಂತೆಯೇ ಅಲ್ಲಿಯೂ ಔಷಧಿ ತಯಾರಿಸಲಾಗುತ್ತದೆ.
ಆಯುರ್ವೇದದಂತೆ ಚೀನಾದ ಸಾಂಪ್ರದಾಯಿಕ ಔಷಧಿಗಳೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಎಷ್ಟು ಪರಿಣಾಮಕಾರಿ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಆದರೆ ಅಲ್ಲಿಯ ಸರಕಾರ ಮಾತ್ರ ಈ ಔಷಧಗಳ ಬಳಕೆಗೆ ಪೋತ್ಸಾಹ ನೀಡುತ್ತಿದೆ.
ವಿಸ್ತಾರಗೊಳ್ಳುತ್ತಿದೆ ವ್ಯಾಪಾರ
ಪುಣೆಯ ಇಂಡಸ್ಟ್ರಿ ರಿಸರ್ಚ್ ಸಂಸ್ಥೆಯ ವರದಿ ಪ್ರಕಾರ ಸದ್ಯ ಆಯುರ್ವೇದದ ಜಾಗತಿಕ ಮಾರುಕಟ್ಟೆ ಗಾತ್ರ 6.5 ಶತಕೋಟಿ ಡಾಲರ್. ಕೊರೊನಾ ವೈರಸ್ ಕಾಣಿಸಿಕೊಳ್ಳುವುದಕ್ಕೂ ಮೊದಲು ಅಧ್ಯಯನ ನಡೆಸಿದ ವಿವಿಧ ಸಂಸ್ಥೆಗಳ ವರದಿಗಳು ಒಟ್ಟಾರೆಯಾಗಿ 2026ರ ವೇಳೆಗೆ ಈ ಮಾರುಕಟ್ಟೆಯ ಗಾತ್ರ 14ರಿಂದ 16 ಶತಕೋಟಿ ಡಾಲರ್‌ಗೆ ವಿಸ್ತರಿಸಬಹುದು ಎಂದು ಹೇಳಿದ್ದವು. ವಾರ್ಷಿಕ ಶೇ.12ರಿಂದ 14ರಷ್ಟು ಬೆಳವಣಿಗೆ ನಿರೀಕ್ಷಿಸಲಾಗುತ್ತಿತ್ತು. ಆದರೆ ವೈರಸ್ ಹಬ್ಬಿದ ನಂತರ ಈ ಬೆಳವಣಿಗೆ ಪ್ರಮಾಣ ಶೇ.16ಕ್ಕಿಂತಲೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಭಾರತದಲ್ಲಿಯೂ ಆಯುರ್ವೇದದ ಮಾರುಕಟ್ಟೆ ಬಲಗೊಳ್ಳುತ್ತಿದ್ದು, ಮೂರು ವರ್ಷಗಳ ಹಿಂದೆ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ನಡೆಸಿದ ಸಮೀಕ್ಷೆಯೊಂದರ ಪ್ರಕಾರ ದೇಶದ ಶೇ.77 ಕುಟುಂಬಗಳು ಆಯುರ್ವೇದ ಉತ್ಪನ್ನಗಳನ್ನು ಬಳಸುತ್ತಿವೆ. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದು (2015ರಲ್ಲಿಶೇ.69ರಷ್ಟಿದ್ದಿದ್ದು 2017ರಲ್ಲಿಶೇ.77ಕ್ಕೇರಿತ್ತು), ದೇಶದ ಪ್ರಮುಖ ಆಯುರ್ವೇದ ಕಂಪನಿ ಪತಂಜಲಿ ಆಯುರ್ವೇದ ಲಿಮಿಟೆಡ್ ಕಳೆದ ಸಾಲಿನಲ್ಲಿ 25 ಸಾವಿರ ಕೋಟಿ ವ್ಯವಹಾರ ನಡೆಸಿದೆ.