ಸಂತರ ಮುಖದಲ್ಲಿ ದಿವ್ಯಾನುಭೂತಿ

– ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ.
ಭವ್ಯ ಶ್ರೀ ರಾಮ ಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯುತ್ತಿದ್ದಾಗ ನನ್ನೊಳಗಿನ ತನ್ಮಯತೆಯ ಜತೆಗೇ ಸುತ್ತಲಿನವರನ್ನೂ ಗಮನಿಸುತ್ತಿದ್ದೆ. ಸಾಮಾನ್ಯ ಪೂಜೆಯ ಸಂದರ್ಭದಲ್ಲೇ ನಾವೆಲ್ಲ ಧ್ಯಾನಸ್ಥ ಸ್ಥಿತಿಗೆ ಹೋಗುತ್ತೇವೆ. ಅಲ್ಲಿದ್ದವರಲ್ಲಿ ಹೆಚ್ಚಿನವರು ತಮ್ಮ ಇಡೀ ಬದುಕನ್ನು ರಾಮನಿಗಾಗಿ ಮುಡಿಪಿಟ್ಟವರು. ಅವನ ಸ್ಮರಣೆಯ ಜತೆಗೆ ಹೋರಾಟದಲ್ಲಿ ಕಳೆದವರು. ಅವರ ಡಿಎನ್ಎಯಲ್ಲೇ ರಾಮ ಸೇರಿ ಹೋಗಿದ್ದ. ಶಿಲಾನ್ಯಾಸದ ಸಂದರ್ಭದಲ್ಲಿ ಅವರೆಲ್ಲ ದಿವ್ಯಾನುಭೂತಿಯನ್ನು ಅನುಭವಿಸುತ್ತಿರುವುದನ್ನು ಕಂಡೆ. ಇಡೀ ವಾತಾವರಣವೇ ಸಾರ್ಥಕ ಭಾವದಿಂದ ತುಂಬಿ ಹೋಗಿತ್ತು.
ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನ ಬಂದಾಗ ನನಗೆ ಸಹಜವಾಗಿ ಸಂತಸವಾಗಿತ್ತು. ಎಲ್ಲ ರೀತಿಯ ಧಾರ್ಮಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿರುವ ಕಾರಣಕ್ಕಾಗಿ ಸಿಕ್ಕಿದ ಅವಕಾಶ ಇದೆಂದು ಖುಷಿಯಿಂದ ಸ್ವೀಕರಿಸಿದೆ. ಪ್ರತಿಯೊಬ್ಬರೂ ಕೂಡಾ ಹುಟ್ಟಿದಾರಭ್ಯದಿಂದ ಕೇಳುತ್ತಿರುವ ರಾಮ ಮಂದಿರ, ಅದು ಸಾಕಾರಗೊಳ್ಳುವ ಕ್ಷಣಕ್ಕೆ ಸಾಕ್ಷಿಯಾಗುವುದಕ್ಕಾಗಿ ಅಯೋಧ್ಯೆಗೆ ಬಂದು ನಿಂತಾಗ ‘ಶತಮಾನಗಳಿಂದ ಭಯ, ಆತಂಕದಿಂದಲೇ ಬೆಳೆದ ಅಯೋಧ್ಯೆಗೆ ಇನ್ನಾದರೂ ಮುಕ್ತಿ ದೊರೆಯಲಿದೆ,’ ಎಂದು ಸಂತಸವಾಯಿತು.
ರಾಮಲಲ್ಲಾನನ್ನು ಅತ್ಯಂತ ಹತ್ತಿರದಿಂದ ನೋಡಿ ಸ್ಪರ್ಶಿಸಿ ಪೂಜೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಅಂದುಕೊಳ್ಳುತ್ತೇನೆ. ರಾಮ ಲಲ್ಲಾ ಈಗ ಇರುವ ಜಾಗದಿಂದ ಸುಮಾರು 100-200 ಮೀಟರ್ ದೂರದಲ್ಲಿ ಈ ಶಿಲಾನ್ಯಾಸ ನಡೆದಿದೆ. ರಾಮ ಹುಟ್ಟಿದ ಜಾಗದಲ್ಲೇ ಈಗ ಶಿಲಾನ್ಯಾಸ ನಡೆದಿದೆಯಂತೆ. ನಾವು ಕುಳಿತ ಜಾಗದಿಂದ ಸುಮಾರು 100 ಅಡಿ ದೂರದಲ್ಲಿ ಶಿಲಾನ್ಯಾಸದ ವಿಧಿ ವಿಧಾನಗಳು ನಡೆದವು. ಆದರೆ, ನಾವು ಅದನ್ನು ಕಣ್ತುಂಬಿಕೊಂಡಿದ್ದು ದೊಡ್ಡ ತೆರೆಗಳ ಮೇಲೆ. ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದ ಮಣ್ಣಿನ ಮಗ ಅಂಜನೇಯ ಸ್ವಾಮಿಯನ್ನು ಪೂಜಿಸಿದ ಬಳಿಕ ಶಿಲಾನ್ಯಾಸ ಸ್ಥಳಕ್ಕೆ ಬಂದಿದ್ದರು. ವಿಧಿ ವಿಧಾನಗಳ ಕೊನೆಯಲ್ಲಿ ಕ್ಷೇತ್ರಪಾಲಕ ಕಾಲಭೈರವೇಶ್ವರನ ಪೂಜೆ ನಡೆಯಿತು. ಶಿಲಾನ್ಯಾಸ ನಡೆದ ಜಾಗದ ಪಕ್ಕದಲ್ಲೇ ಇದ್ದ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ದೇಶಾದ್ಯಂತದಿಂದ ಬಂದ 175 ಪ್ರತಿನಿಧಿಗಳು ಇದಕ್ಕೆ ಪ್ರತ್ಯಕ್ಷದರ್ಶಿಗಳು.
ಇಷ್ಟೆಲ್ಲದರ ನಡುವೆ, ಶ್ರೀರಾಮನಿಗೆ ಒಂದು ಭವ್ಯವಾದ ಮಂದಿರ ಯಾಕೆ ಬೇಕು ಎಂದು ಕೇಳಿದರೆ ಹಲವಾರು ಕಾರಣಗಳನ್ನು ಕೊಡಬಹುದು. ಧರ್ಮ ಮತ್ತು ಬದುಕು ಒಂದೇ ಆಗಿರುವ ಅಪರೂಪದ ವ್ಯಕ್ತಿತ್ವ ಶ್ರೀರಾಮನದು. ‘ರಾಮೋ ವಿಗ್ರಹವಾನ್ ಧರ್ಮಃ’ ಅಂತ ಒಂದು ಮಾತಿದೆ. ಧರ್ಮಕ್ಕೆ ಏನೆಲ್ಲ ಪ್ರಧಾನ ಅಂಶಗಳು, ತತ್ವಗಳು, ವ್ಯಾಖ್ಯಾನಗಳು ಇವೆಯೋ ಅವೆಲ್ಲದರ ಮೂರ್ತಿವೆತ್ತ ರೂಪ ಅವನು. ಧರ್ಮಕ್ಕೆ ಒಂದು ರೂಪ ಕೊಟ್ಟರೆ ಹೇಗಿರುತ್ತದೆ ಎಂದರೆ ರಾಮನ ಹಾಗಿರುತ್ತದೆ. ಅಣ್ಣನಾಗಿ, ಗಂಡನಾಗಿ, ಮಗನಾಗಿ, ರಾಜನಾಗಿ ನಡೆದುಕೊಳ್ಳುವುದು ಮಾತ್ರವಲ್ಲ, ಹಿಂದುಳಿದವರು, ಶ್ರಮಿಕರು ಎಲ್ಲರನ್ನೂ ಪ್ರೀತಿಸುತ್ತಿದ್ದ ರೀತಿ ಒಂದು ಮಾದರಿ. ಅಂಥವರು ನಮಗೆ ಆದರ್ಶವಾಗಬೇಕು. ಮಂದಿರ ನಿರ್ಮಾಣದಿಂದ ಅದಕ್ಕೆ ಪೂರಕವಾದ ಮೂರ್ತ ರೂಪವೊಂದು ಸಿಗುತ್ತದೆ.
ಇನ್ನು ಅಧ್ಯಾತ್ಮಿಕ ಬದುಕು ಎನ್ನುವುದು ಕೇವಲ ಮಾತಿಗೆ ಮಾತ್ರ, ಬದುಕಲು ಅಲ್ಲ ಎನ್ನುವಂತಿದೆ. ಆದರೆ, ಅಧ್ಯಾತ್ಮಿಕವಾಗಿಯೂ ಬದುಕಬಹುದು ಎನ್ನುವುದು ರಾಮನಿಂದ ಗೊತ್ತಾಗುತ್ತದೆ. ರಾಮನನ್ನು ನಾವು ವಿಷ್ಣುವಿನ ಅವತಾರವೆದು ಭಾವಿಸಿದರೂ ಅವನು ಮನುಷ್ಯನಾಗಿ ಬಾಳಿ ತೋರಿಸಿದ್ದೇ ಹೆಚ್ಚು. ರಾವಣನ ವಧೆಯೂ ಸೇರಿದಂತೆ ಯಾವ ಕಾಲದಲ್ಲೂ ರಾಮ ತನ್ನ ದೈವತ್ವವನ್ನು ಪ್ರಕಟಿಸಲಿಲ್ಲ. ಮಾನವ ಮಿತಿಯಲ್ಲೇ ಬದುಕಿ ಆದರ್ಶನಾದವನು. ಆದರ್ಶದ ಕಲ್ಪನೆಗಳನ್ನು ನಮ್ಮ ನಮ್ಮ ಪ್ರಜ್ಞೆಗಳ ಮಟ್ಟಕ್ಕೆ ಇಳಿಸುತ್ತಿರುವ ಈ ಕಾಲಘಟ್ಟದಲ್ಲಿ ರಾಮನ ಉದಾತ್ತ ಬದುಕು ಸದಾ ಕಣ್ಣ ಮುಂದಿರಬೇಕು. ಆ ಕಾರಣಕ್ಕಾಗಿ ಮಂದಿರದ ಅಗತ್ಯವಿದೆ.

ರಾಮ ಜನ್ಮಭೂಮಿಯಲ್ಲಿದೆ ಸಾವಿರ ಸಾಕ್ಷ್ಯ

– ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಚಿತ್ರದುರ್ಗ.
ನಾನು ಅಯೋಧ್ಯೆಗೆ ಬಂದಿರುವುದು ಇದೇ ಮೊದಲು. ರಾಮಾಯಣದ ಕತೆಗಳಲ್ಲಿ ಈ ಹೆಸರುಗಳನ್ನು ಕೇಳಿದ್ದೆ, ಕಲ್ಪನೆ ಮಾಡಿಕೊಂಡಿದ್ದೆ. ಆದರೆ, ಶ್ರೀ ರಾಮ ಮಂದಿರದ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸುತ್ತೇನೆ ಎಂದು ಕನಸಿನಲ್ಲೂ ಭಾವಿಸಿರಲಿಲ್ಲ. ಸಾಮಾನ್ಯ ಪರಿಸ್ಥಿತಿಯಲ್ಲಿ ಕಾರ್ಯಕ್ರಮ ನಡೆದಿದ್ದರೆ ಸಾವಿರಾರು ಮಂದಿ ಭಾಗವಹಿಸುತ್ತಿದ್ದರು. ಆದರೆ, ಈಗ ಇಡೀ ದೇಶದಲ್ಲಿ ಆಹ್ವಾನಿತರಾಗಿರುವ 175 ಮಂದಿಯಲ್ಲಿ ನನಗೊಂದು ಅವಕಾಶ ಸಿಕ್ಕಿರುವುದರಿಂದ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಬದುಕು ಸಾರ್ಥಕವೆನಿಸುತ್ತಿದೆ. ಒಂದೊಮ್ಮೆ ಬಾರದೆ ಇರುತ್ತಿದ್ದರೆ ದಿವ್ಯವಾದ ಕ್ಷಣವೊಂದು ಮಿಸ್ ಆಗುತ್ತಿತ್ತು. ನಾವು ಬೆಳಗ್ಗೆ 10.30ರ ಹೊತ್ತಿಗೆ ಕಾರ್ಯಕ್ರಮ ಸ್ಥಳಕ್ಕೆ ತಲುಪಿದ್ದೆವು. ಅಲ್ಲಿದ್ದ ನೂರಾರು ಸಂತರನ್ನು ನೋಡಿ ಕಣ್ತುಂಬಿಕೊಂಡೆ. ಅತ್ಯಂತ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಯಿತು.
ಮೂಕ ವಿಸ್ಮಿತೆನಾದೆ: ಮಂಗಳವಾರ ರಾತ್ರಿ ಇಲ್ಲಿ ಬಂದಿಳಿಯುತ್ತಿದ್ದಂತೆಯೇ ನಾನು ಮೂಕ ವಿಸ್ಮಿತನಾದೆ. ಬಾಲಿವುಡ್, ಹಾಲಿವುಡ್‌ನಲ್ಲಿ ವೈಭವೋಪೇತ ಸೆಟ್ಟಿಂಗ್ ಹಾಕ್ತಾರೆ ಅಂತ ನಾವು ಕೇಳಿದ್ದೀವಲ್ಲ ಅಂಥ ಅದ್ದೂರಿ ಸೆಟ್‌ಗಳಿಗಿಂತಲೂ ಅದೆಷ್ಟೋ ಪಟ್ಟು ಮಿಗಿಲೆನಿಸುವ ಸೌಂದರ್ಯದಿಂದ ಲಕಲಕಿಸುತ್ತಿತ್ತು ಅಯೋಧ್ಯೆ ನಗರಿ. ಅದರಲ್ಲೂ ಸರಯೂ ನದಿಯಂತೂ ಈ ಬೆಳಕಿನಿಂದ ಹೊಳೆಯುತ್ತಿರುವುದನ್ನು ನೋಡಲು ಕಣ್ಣೆರಡು ಸಾಲದು.
ರಾಮನನ್ನು ಹತ್ತಿರದಿಂದ ಕಂಡೆ: ಇದುವರೆಗೂ ತಂತಿ ಬೇಲಿಯ ನಡುವೆ ಇದ್ದ ರಾಮ ಲಲ್ಲಾನಿಗೆ ಮುಕ್ತಿ ಸಿಕ್ಕಿದ ಬಳಿಕ ಅಲಂಕೃತ ರಾಮನನ್ನು ಅತ್ಯಂತ ಹತ್ತಿರದಿಂದ ಕಣ್ತುಂಬಿಕೊಳ್ಳುವ ಭಾಗ್ಯ ನಮ್ಮದಾಯಿತು. ಬುಧವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ದರ್ಶನಕ್ಕೆ ಬರುತ್ತಾರೆ ಎಂಬ ಕಾರಣಕ್ಕೆ ಅಲ್ಲಿನ ಬೇಲಿಗಳನ್ನು ತೆಗೆದು ಅಲಂಕಾರ ಮಾಡಲಾಗಿತ್ತು. ನಮಗೂ ದರ್ಶನಕ್ಕೆ ಅವಕಾಶ ಸಿಕ್ಕಿದ್ದು ಧನ್ಯತೆಯ ಅನುಭವ.
ಸಾಕ್ಷ್ಯಗಳು ಸಾವಿರ ಇವೆ: ಶಿಲಾನ್ಯಾಸ ಕಾರ್ಯಕ್ರಮ ಮುಗಿಸಿದ ಬಳಿಕ ನಾನು ಅಯೋಧ್ಯೆಯನ್ನು ಕಣ್ತುಂಬಿಕೊಳ್ಳಬೇಕು ಎಂಬ ಕಾರಣಕ್ಕೆ ಕಾಲ್ನಡಿಗೆಯಲ್ಲೇ ಹೊರಟೆ. ಈಗಾಗಲೇ 10 ಕಿ.ಮೀ. ನಡೆದಿರಬಹುದು. (ವಿಕ ಜತೆ ಮಾತನಾಡುವ ಹೊತ್ತಿಗೆ). ಇಲ್ಲಿನ ಭವ್ಯತೆ, ದೇಗುಲಗಳ ಸೌಂದರ್ಯ, ಪ್ರಾಣಿಗಳು ಮತ್ತು ಜನರ ಒಡನಾಟಗಳನ್ನು ನೋಡುತ್ತಿದ್ದೇನೆ. ಎಲ್ಲರಿಗೂ ಗೊತ್ತಿರುವ ಹನುಮಾನ್ ಗಢಿ ದೇವಸ್ಥಾನಕ್ಕೆ ಹೋಗಿದ್ದೆ. ಅಲ್ಲಿನ ಪರಿಸರದಲ್ಲಿ ನೂರಾರು ಕೋತಿಗಳು ಅತ್ತಿಂದಿತ್ತ ಓಡಾಡುತ್ತಿವೆ. ಯಾರಿಗೂ ತೊಂದರೆ ಮಾಡದೆ ಜನ ಜೀವನದೊಂದಿಗೆ ಬೆರೆತಿವೆ. ಹನುಮನ ಸೇವೆಗಾಗಿಯೇ ಇವು ಇಲ್ಲಿವೆ ಎಂಬ ಮಾತು ನಿಜವೆನಿಸುತ್ತಿದೆ.
ರಸ್ತೆಯಲ್ಲಿ ನಡೆಯುತ್ತಿರುವಾಗ ಎರಡೂ ಕಡೆಗಳಲ್ಲಿ ಅದೆಷ್ಟೋ ಭವ್ಯವಾದ ಕಟ್ಟಡಗಳು ಕಣ್ಣಿಗೆ ಕಟ್ಟುತ್ತಿವೆ. ರಾಜಮಹಲ್, ದಶರಥ ಮಹಲ್, ಅದೆಷ್ಟೋ ಕೋಟೆಗಳನ್ನು ನಾನೇ ನೋಡಿದೆ. ರಾಮ ಅಯೋಧ್ಯೆಯಲ್ಲಿ ಹುಟ್ಟಿದ ಎನ್ನುವುದಕ್ಕೆ ಕೆಲವರು ಸಾಕ್ಷ್ಯ ಕೇಳುತ್ತಾರಲ್ಲಾ, ರಾಮಾಯಣದ ಬಗ್ಗೆ ಸಾಕ್ಷ್ಯ ಕೇಳುತ್ತಾರಲ್ಲಾ? ಒಮ್ಮೆ ಅಯೋಧ್ಯೆಯ ಬೀದಿ ಸುತ್ತಿದರೆ ಸಾಕು ಆ ಗತ ವೈಭವಕ್ಕೆ ನೂರಾರು ಸಾಕ್ಷ್ಯಗಳನ್ನು ನೀಡಬಹುದು.
ಅಯೋಧ್ಯೆಯಲ್ಲಿ ಕಳೆದೆರಡು ದಿನಗಳಿಂದ ಶಿಲಾನ್ಯಾಸಕ್ಕೆ ಸಂಬಂಧಿಸಿದವರನ್ನು ಬಿಟ್ಟು ಬೇರೆಯವರಿಗೆ ಅವಕಾಶ ನೀಡಿರಲಿಲ್ಲ. ಆದರೆ, ಕಾರ್ಯಕ್ರಮ ಮುಗಿದು ಸುಮಾರು ಒಂದು ಗಂಟೆಯ ಬಳಿಕ ಅಯೋಧ್ಯೆ ನಿಧಾನವಾಗಿ ತೆರೆದುಕೊಂಡಿತು. ಜನ ತುಂಬ ಖುಷಿಯಲ್ಲಿದ್ದಂತೆ ಕಂಡಿತು. ಮೂರು ವರ್ಷಗಳ ಬಳಿಕ ಇಲ್ಲಿ ಭವ್ಯ ರಾಮ ಮಂದಿರ ತಲೆ ಎತ್ತಿದರೆ ಅಯೋಧ್ಯೆಯ ಈ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ದೊರೆಯಲಿದೆ. ಅಯೋಧ್ಯೆ ಜಗದ್ವಿಖ್ಯಾತಿ ಪಡೆಯುವುದು ಖಚಿತ.
ಅಂತಹುದೊಂದು ವಿಖ್ಯಾತಿಗೆ ಮುನ್ನುಡಿ ಬರೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಧನ್ಯನಾಗಿದ್ದೇನೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top