ಸಾಗರದ ಅಲೆಗಳಂತೆ ಮುತ್ತಿಕೊಂಡ ಕರಸೇವಕರು

– ಎಸ್. ಪ್ರಕಾಶ್.
ಡಿಸೆಂಬರ್ 6, 1992ರ ವಿವಾದಿತ ಕಟ್ಟಡದ ಧ್ವಂಸದ ಘಟನೆಗೆ ನಾನು ಪ್ರತ್ಯಕ್ಷ ಸಾಕ್ಷಿಯಾಗಿದ್ದೆ.  ಆ ನೆನಪು ಸದಾ ಹಸಿರು; ರೋಮಾಂಚನಕಾರಿ.
ಕರ್ನಾಟಕದಲ್ಲಿ ಅಯೋಧ್ಯೆ ಹೋರಾಟದ ಪ್ರಭಾವ ದಟ್ಟವಾಗಿತ್ತು. ನಿತ್ಯ ಬೆಂಗಳೂರಿನಿಂದ ಕರ್ನಾಟಕ ಎಕ್ಸ್‌ಪ್ರೆಸ್‌ನಲ್ಲಿ ತಂಡ ತಂಡವಾಗಿ ಉತ್ಸಾಹಿ ರಾಮಭಕ್ತರು ಅಯೋಧ್ಯೆಯತ್ತ ಹೊರಡುತ್ತಿದ್ದರು. ಕರಸೇವಕರನ್ನು ಬೀಳ್ಕೊಡಲು ನಿಲ್ದಾಣಕ್ಕೆ ಹೋಗುತ್ತಿದ್ದ ನಾವು ಅಲ್ಲಿನ ವಾತಾವರಣದಿಂದ ಉತ್ತೇಜಿತರಾಗಿ ಕರಸೇವೆಯಲ್ಲಿ ಭಾಗಿಯಾಗಲು ನಾನು, ಎನ್.ಎಸ್. ಗೋಪಾಲ್, ಅವರ ಇಬ್ಬರು ತಮ್ಮಂದಿರು, ಅವರ ಪತ್ನಿ, ಮಗಳು ಹೊರಟೆವು. ಅಲಹಾಬಾದಿನಿಂದ ಡಿ.2ರ ರಾತ್ರಿ ಅಯೋಧ್ಯೆಗೆ ತೆರಳಲು ನಮಗೆ ಬಸ್ ವ್ಯವಸ್ಥೆಯಾಗಿತ್ತು. ರಾತ್ರಿ 1.30ಕ್ಕೆ ನಾವು ಅಯೋಧ್ಯೆಯನ್ನು ತಲುಪಿದಾಗ ಕರ್ನಾಟಕದಿಂದ ಬಂದ ಕರಸೇವಕರಿಗೆ ಉಳಿಯಲು ಮಾಡಿದ್ದ ವಸತಿಯಲ್ಲಿ ನಮಗೆ ಜಾಗ ದೊರೆಯಿತು. ಗುಜರಾತಿನ ವಸತಿಯಲ್ಲಿ ಇರಬೇಕಾಯಿತು. ನಾನಾ ರಾಜ್ಯಗಳಿಂದ ಬರುತ್ತಿದ್ದ ಕರಸೇವಕರಿಗಾಗಿ ಪ್ರತ್ಯೇಕ ವಸತಿ ಮತ್ತು ಊಟದ ವ್ಯವಸ್ಥೆಯಾಗಿತ್ತು. ಪ್ರತಿ ರಾಜ್ಯದಿಂದಲೂ ಅಡುಗೆ ಮಾಡಲು ದಿನಸಿ ಸರಬರಾಜು ತರಲು ಕಾರ್ಯಕರ್ತರು ವಾರ ಮುಂಚಿತವಾಗಿ ತಲುಪಿದ್ದರು.
ಡಿ.3ರ ಮಧ್ಯಾಹ್ನ ಶ್ರೀರಾಮ ಜನ್ಮಭೂಮಿಗೆ ತೆರಳಿ ರಾಮಲಲ್ಲಾನ ದರ್ಶನ ಮಾಡಿದೆವು. ಆ ದರ್ಶನ ವಿವಾದಿತ ಕಟ್ಟಡದಲ್ಲಿ ಕೊನೆಯದಾಗಿರುತ್ತದೆ ಎಂಬ ಸುಳಿವು ನಮಗ್ಯಾರಿಗೂ ಇರಲಿಲ್ಲ. 1990ರ ಕರಸೇವೆಯ ತರುವಾಯ ಕಟ್ಟಡ ಸುತ್ತ ಕಬ್ಬಿಣದ ಬೇಲಿ ಅಳವಡಿಸಿದ್ದರು. ಕಟ್ಟಡದ ಮುಂಭಾಗದಲ್ಲಿದ್ದ 64 ಎಕರೆ ಪ್ರದೇಶದ 150 ಚದರಡಿ ಜಾಗದಲ್ಲಿ ಕರಸೇವೆ ಮಾಡಲು ಸ್ಥಳ ನಿಗದಿಯಾಗಿತ್ತು ಡಿಸೆಂಬರ್ ತಿಂಗಳಾದರೂ ಚಳಿ ಇರಲಿಲ್ಲ. ಕರಸೇವೆಯ ಸ್ವರೂಪ ಮತ್ತು ನಮ್ಮ ಪಾತ್ರದ ಬಗ್ಗೆ ಡಿ.4ರಂದು ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಡಿ.5ರ ಬೆಳಗ್ಗೆ 9 ಗಂಟೆಗೆ ಕರಸೇವೆ ಮಾಡಲು ನಿಶ್ಚಯಿಸಿರುವ ಜಾಗಕ್ಕೆ ರಾಜ್ಯವಾರು ತೆರಳಿ ಸರಯೂ ನದಿಯಿಂದ ತಂದಿರುವ ಮಣ್ಣನ್ನು ಸರತಿಯಲ್ಲಿ ಹೋಗಿ ಹಾಕಬೇಕು ಎಂದು ತಿಳಿಸಿದರು. ಅದನ್ನು ಕೇಳಿ ನಮಗೆಲ್ಲಾ ಆದ ನಿರಾಶೆ ಅಷ್ಟಿಷ್ಟಲ್ಲ. ನೂರಾರು ಕರಸೇವಕರು ಕೆಂಡಾಮಂಡಲವಾಗಿದ್ದರು. ಇದನ್ನು ಮಾಡಲು ನಾವು ಅಷ್ಟು ದೂರದಿಂದ ಬರಬೇಕಿತ್ತಾ ಎಂಬ ಸಿಟ್ಟು. ಆದರೆ ಶಿಸ್ತಿನಿಂದ ಸೂಚನೆ ಪಾಲಿಸಿ ಎಲ್ಲರೂ ನದಿಯ ತಟಕ್ಕೆ ಹೋಗಿ ಮರಳು ಸಂಗ್ರಹಿಸಿ ತಂದು ಇಟ್ಟುಕೊಂಡೆವು. ಮಧ್ಯಾಹ್ನ, ಕರಸೇವೆ ಸ್ಥಳದ ರಕ್ಷಣಾ ವ್ಯವಸ್ಥೆಯ ಜವಾಬ್ದಾರಿ ನಮಗೆ ಹೊರಿಸಿದರು. ನಮ್ಮ ತಂಡದ ಮೂವರನ್ನು ಕರಸೇವೆ ಮಾಡಲು ನಿಶ್ಚಯಿಸಿದ್ದ 150 ಚದರ ಅಡಿ ಜಾಗದಲ್ಲಿ ಸಂಘದ ನಿಕ್ಕರ್ ಧರಿಸಿ ನಿಲ್ಲಬೇಕು ಎಂದು ಸೂಚಿಸಿದಾಗ ಮೈಜುಂ ಎಂದಿತು. ಒಂದು ಕಡೆ ಅಷ್ಟು ಸಮೀಪ ಇರುವ ಅವಕಾಶದ ಆನಂದ; ಇನ್ನೊಂದೆಡೆ ಪರಿಸ್ಥಿತಿ ಕೈ ಮೀರಿದರೆ ಆಗುವ ಅನಾಹುತದ ಆತಂಕ.
ಡಿ.6ರಂದು ಅಯೋಧ್ಯೆಯಲ್ಲಿ ಇನ್ನು ಜಾಗ ಇಲ್ಲ ಎಂದು ಬೋರ್ಡ್ ಹಾಕುವಷ್ಟು ಜನ ಸೇರಿದರು. ವಿವಾದಿತ ಕಟ್ಟಡದ ಸಮೀಪದಲ್ಲಿದ್ದ ಎಲ್ಲಾ ಕಟ್ಟಡಗಳ ಮೇಲೆ ಜನ ನಿಂತಿದ್ದರು. ರಾಮಭಕ್ತರು ಇಡೀ ಅಯೋಧ್ಯೆಯನ್ನು ವಶಕ್ಕೆ ಪಡೆದ ರೀತಿ ಇತ್ತು. ನಮ್ಮ ಮುಖ್ಯಸ್ಥರಾಗಿದ್ದ ಬೆಂಗಳೂರಿನ ವಿ. ಮಂಜುನಾಥರ ನಿರ್ದೇಶನದಂತೆ ಬೆಳಗ್ಗೆ 8 ಗಂಟೆಗೆ ಕರಸೇವೆ ಮಾಡಲು ನಿಶ್ಚಯಿಸಿದ್ದ ಜಾಗದಲ್ಲಿ ಬಂದು ನಿಂತೆವು. ಆ ಜಾಗದಿಂದ ಅನತಿ ದೂರದಲ್ಲಿ ನಾಯಕರುಗಳ ಮಾತಿಗೆ ವೇದಿಕೆ ಮತ್ತು ಧ್ವನಿವರ್ಧಕ ವ್ಯವಸ್ಥೆ ಸಿದ್ಧವಾಗಿತ್ತು. ಅಲ್ಲಿನ ವಾತಾವರಣ ಗಟ್ಟಿ ಹೃದಯದವರಿಗೆ ಮಾತ್ರ ಎಂಬುದರಲ್ಲಿ ಅನುಮಾನವಿರಲಿಲ್ಲ.
ಹನುಮನ ವೇಷಧಾರಿ ಯುವಕನೊಬ್ಬ ಮೊದಲು ಬ್ಯಾರಿಕೇಡ್ ಒಳಗೆ ನುಗ್ಗಿದ. ಅವನನ್ನು ಹಿಂಬಾಲಿಸಿ ಒಬ್ಬೊಬ್ಬರೇ ಒಳಗೆ ಬಂದು ಕೂತು ಘೋಷಣೆ ಕೂಗಲು ಆರಂಭಿಸಿದರು. ಅವರೆಲ್ಲರನ್ನು ಹೊರ ಹಾಕಲು ಮುಂದಾದಾಗ ಸುತ್ತಲು ನೆರೆದಿದ್ದ ಕರಸೇವಕರು ಗಟ್ಟಿಯಾಗಿ ಕೂಗುತ್ತಾ ಅವರಿಗೆ ಬೆಂಬಲವಾಗಿ ನಿಂತರು. ಕ್ಷಣಾರ್ಧದಲ್ಲಿ 150 ಚದರಡಿ ಜಾಗವನ್ನು ಆಕ್ರಮಿಸಿಕೊಂಡರು. ನಾವು ಸುಮ್ಮನೆ ನಿಂತೆವು. ಇಡೀ ಪ್ರಕರಣಕ್ಕೆ ತಿರುವು ಬಂದಿದ್ದು ಸುಮಾರು 50 ಯುವಕರು ಹಣೆಗೆ ಹಳದಿ ಪಟ್ಟಿ ಕಟ್ಟಿಕೊಂಡು ಬ್ಯಾರಿಕೇಡ್ ಒಳಗೆ ಬಂದು, ಅಲ್ಲಿ ಕೂತಿದ್ದ ಕರಸೇವಕರನ್ನು ಹೊರಹಾಕಲು ಆರಂಭಿಸಿದಾಗ. ಇದು ಕರಸೇವಕರನ್ನು ಕೆರಳಿ ಕೆಂಡವಾಗುವಂತೆ ಮಾಡಿತು. ಒಮ್ಮೆಗೆ ಸಾವಿರಾರು ಜನ ಬ್ಯಾರಿಕೇಡ್ ಒಳಗೆ ನುಗ್ಗಿದಾಗ ನಿಯಂತ್ರಣ ಸಂಪೂರ್ಣ ಕಳೆದುಹೋಯಿತು. ವೇದಿಕೆಯಲ್ಲಿ ಲಾಲ್‌ ಕೃಷ್ಣ ಆಡ್ವಾಣಿ, ಮುರಳಿ ಮನೋಹರ ಜೋಶಿ, ಅಶೋಕ್ ಸಿಂಘಾಲ್, ಉಮಾಭಾರತಿ, ಸಾಧ್ವಿ ರಿತಂಬರ ಕರಸೇವಕರಿಗೆ ಶಾಂತಿ ಕಾಪಾಡಲು ವಿನಂತಿ ಮಾಡುತ್ತಿದ್ದರು. ಜನರ ಘೋಷಣೆ ನಡುವೆ ಯಾರ ಕಿವಿಗೂ ಅದು ಕೇಳಲೇ ಇಲ್ಲ. ನೋಡುತ್ತಿದ್ದಂತೆ ವಿವಾದಿತ ಕಟ್ಟಡದ ಮೂರು ಗುಮ್ಮಟಗಳ ಮೇಲೆ ಮಹಿಳೆಯರ ತಂಡಗಳು ಬಂದು ಗುಮ್ಮಟ ಒಡೆಯುವುದಕ್ಕೆ ಆರಂಭಿಸಿದವು. ಹೀಗೆ ವಿವಾದಿತ ಕಟ್ಟಡಕ್ಕೆ ಮೊದಲ ಕೊಡಲಿ ಪೆಟ್ಟು ಮಹಿಳೆಯರಿಂದ ಬಿದ್ದಿದ್ದು ವಿಶೇಷ.
ಆ ಮಹಿಳಾ ತಂಡಕ್ಕೆ ಸಹಾಯ ಮಾಡಲು ಒಮ್ಮಿಂದೊಮ್ಮೆಗೆ ಕರಸೇವಕರು ವಿವಾದಿತ ಕಟ್ಟಡದ ಕಡೆ ಆವೇಶಭರಿತರಾಗಿ ನುಗ್ಗಿದರು. ಅವರ ಆವೇಶಕ್ಕೆ ಬೆಚ್ಚಿದ ಪೊಲೀಸರು ತಡೆಯುವ ಯಾವುದೇ ಪ್ರಯತ್ನ ಮಾಡದೆ ಸುಮ್ಮನಾದರು. ನೋಡನೋಡುತ್ತಿದ್ದಂತೆ ಕರಸೇವೆಯ ಸ್ವರೂಪವೇ ಬದಲಾಗಿ ವಿವಾದಿತ ಕಟ್ಟಡ ನೆಲಸಮವಾಗತೊಡಗಿತು. ನೂರಾರು ಜನ, ವರದಿ ಮಾಡಲು ಬಂದಿದ್ದ ವರದಿಗಾರರು ಛಾಯಾಗ್ರಾಹಕರ ಮೇಲೂ ಮುಗಿಬಿದ್ದರು. ಜಯನಗರದ ಶಾಸಕರಾಗಿದ್ದ ಬಿ.ಎನ್. ವಿಜಯಕುಮಾರ್ ಅವರಿಗೆ ಪತ್ರಕರ್ತರ ಪಾಸ್ ನೀಡಿದ್ದರು. ಜನ ಅವರನ್ನೂ ಬಿಡಲಿಲ್ಲ. ಅವರ ಪಾಸ್ ಕಿತ್ತುಕೊಂಡು ಅವರ ಮೇಲೂ ಹಲ್ಲೆಗೆ ಮುಂದಾದರು. ಅವರು ಅಲ್ಲಿಂದ ತಪ್ಪಿಸಿಕೊಂಡದ್ದೇ ಪವಾಡ. ಕಟ್ಟಡದ ಒಂದೊಂದೇ ಗುಮ್ಮಟ ನೆಲಕಚ್ಚಲು ಆರಂಭವಾಯಿತು. ಸಂಜೆ 6 ಗಂಟೆಗೆ ಎಲ್ಲಾ ಗುಮ್ಮಟಗಳು ನೆಲಸಮವಾಯಿತು.
ರಾತ್ರಿ ಸಭೆ ಸೇರಿದ್ದ ವಿಹಿಂಪ ಮಾರ್ಗದರ್ಶಕ ಮಂಡಳಿ ಸಭೆಯ ನಿರ್ಣಯದಂತೆ ತಕ್ಷಣ ರಾಮಲಲ್ಲಾ ಮೂರ್ತಿಯನ್ನು ಮೂಲಸ್ಥಾನದಲ್ಲಿ ಪ್ರತಿಷ್ಠಾಪಿಸಬೇಕೆಂದಾಯಿತು. ಹೀಗಾಗಿ ಮರುದಿನ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲಾಯಿತು. ಸಾವಿರಾರು ರಾಮಭಕ್ತರು ಕೆಲವೇ ಗಂಟೆಗಳಲ್ಲಿ ಬರಿಗೈಯಲ್ಲಿ ಎಲ್ಲ ಅವಶೇಷಗಳನ್ನು ಸಾಗಿಸಿ ತಾತ್ಕಾಲಿಕ ಮಂದಿರ ಕಟ್ಟಲು ಸಜ್ಜು ಮಾಡಿದರು. ಸ್ವತಃ ಸಿವಿಲ್ ಎಂಜಿನಿಯರ್ ಆಗಿದ್ದ ಬಿ.ಎನ್.ವಿಜಯಕುಮಾರ್ ಅವರು ಮಂದಿರದ ತಳಪಾಯ ಹಾಕಲು ಹಾಕಲು ಸೂಕ್ತ ನಿರ್ದೇಶನ ಮಾಡಿದರು. ಶ್ರೀರಾಮನ ದರ್ಶನ ಪಡೆಯಲು ಎಲ್ಲರಿಗೂ ಅವಕಾಶ ನೀಡಲಾಯಿತು.
ಉತ್ತರಪ್ರದೇಶ ರಾಷ್ಟ್ರಪತಿ ಆಡಳಿತಕ್ಕೆ ಒಳಪಡಿಸಲಾಯಿತು. ಡಿ.7ರ ಸಂಜೆ ಕರಸೇವಕರೆಲ್ಲ ಜಾಗ ತೆರವು ಮಾಡುವಂತೆ ಸ್ಪಷ್ಟವಾದ ಸೂಚನೆ ಬಂತು. ಮರುದಿನ ಮುಂಜಾನೆ 4 ಗಂಟೆಗೆ ಆರ್‌ಎಎಫ್ ಕರಸೇವಾ ನಗರವನ್ನು ಪ್ರವೇಶಿಸಿ ಒಂದೊಂದೆ ಶಿಬಿರವನ್ನು ವಶಕ್ಕೆ ಪಡೆಯಲು ಆರಂಭಿಸಿತು. ನಮ್ಮ ಲಗೇಜ್ ತೆಗೆದುಕೊಂಡು ಮೌನವಾಗಿ ರೈಲು ನಿಲ್ದಾಣದ ಕಡೆ ಹೆಜ್ಜೆ ಹಾಕತೊಡಗಿದೆವು.

(ಲೇಖಕರು ಬಿಜೆಪಿಯ ಮಾಜಿ ವಕ್ತಾರರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top